‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ…
ವಿ. ಎಲ್. ನರಸಿಂಹಮೂರ್ತಿ
ಅಧಿಕಾರ ರಾಜಕಾರಣದಲ್ಲಿ ದಲಿತರ ಭಾಗವಹಿಸುವಿಕೆಯಿಂದ ಪ್ರಬಲ ಜಾತಿಗಳ ಅಸ್ತಿತ್ವ ಹೇಗೆ ಅಲುಗಾಡುತ್ತದೆ ಮತ್ತು ‘ರಾಜಕೀಯ ಕಾರಣ’ಗಳಿಂದಾಗಿ ತಮ್ಮ ಅಸ್ತಿತ್ವದ ಅಲುಗಾಡುವ ಸಂದರ್ಭ ಸೃಷ್ಟಿಯಾದಾಗ ಪ್ರಬಲ ಜಾತಿಗಳು ಹೇಗೆ ದಲಿತರನ್ನು ದಮನ ಮಾಡಲು ಪ್ರಯತ್ನಿಸುತ್ತವೆ ಎನ್ನುವುದನ್ನು ಮಾರಿ ಸೆಲ್ವರಾಜ್ ನಿರ್ದೇಶನದ ‘ಮಾಮಣ್ಣನ್’ ಸಿನಿಮಾ ಚರ್ಚಿಸುತ್ತದೆ.
Dalit Assertion ಅನ್ನು ಕಥಾವಸ್ತುವಾಗಿಟ್ಟುಕೊಂಡಿರುವ ಮಾರಿ ಸೆಲ್ವರಾಜ್‌ರ ‘ಮಾಮಣ್ಣನ್’ ಸಿನಿಮಾದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ದಲಿತ ರಾಜಕಾರಣಿ ನಡೆಸುವ ಹೋರಾಟದ ಜೊತೆಗೆ ದಲಿತರ ಹಿತಕಾಯುವುದಕ್ಕೆ ಬದ್ಧವಾಗಿರುವ ‘ಸಾಮಾಜಿಕ ನ್ಯಾಯ’ದ ಪಕ್ಷವನ್ನು ಎತ್ತಿಹಿಡಿಯುವ ಅಂಶವೂ ಸಿನಿಮಾದಲ್ಲಿದೆ. ನಿರ್ದೇಶಕರು ಪರೋಕ್ಷವಾಗಿ ದ್ರಾವಿಡ ಪಕ್ಷವನ್ನು ತಂದಿರಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ.
ಬ್ರಾಹ್ಮಣ ವಿರೋಧ, ದ್ರಾವಿಡ ಅಸ್ಮಿತೆ ಮತ್ತು ತಮಿಳು ರಾಷ್ಟ್ರೀಯತೆಯ ಕಾರಣಕ್ಕೆ ತಮಿಳುನಾಡನ್ನು ದಕ್ಷಿಣದ ಭಾರತದ Progressive state ಎಂದು ಪರಿಗಣಿಸಲಾಗಿದೆ. ಆದರೆ ಶೂದ್ರ ರಾಜಕಾರಣಕ್ಕೆ ಪ್ರಸಿದ್ಧಿ ಪಡೆದಿರುವ ಈ Progressive stateನ ಒಳಗಡೆ ಇರುವ ಜಾತಿ ಪದ್ಧತಿಯ ವಿಕಾರ ರೂಪಗಳನ್ನು ಹಲವು ಜನ ವಿದ್ವಾಂಸರು ತಮ್ಮ ಅಕಡೆಮಿಕ್ ಸಂಶೋಧನೆಗಳಲ್ಲಿ, ಪರ್ತಕರ್ತರು ತಮ್ಮ ವರದಿಗಳಲ್ಲಿ, ಮಾನವ ಹಕ್ಕುಗಳ ಹೋರಾಟಗಾರರು ತಮ್ಮ ಸತ್ಯಶೋಧನಾ ವರದಿಗಳಲ್ಲಿ, ಸಿನಿಮಾ ನಿರ್ದೇಶಕರು ಜನಪ್ರಿಯ ಸಂಸ್ಕೃತಿಯಲ್ಲಿ ಬಯಲು ಮಾಡುತ್ತಲೆ ಇದ್ದಾರೆ.
ಮಾರಿ ಸೆಲ್ವರಾಜ್ ತಮ್ಮ ಹಿಂದಿನ ಸಿನಿಮಾ ‘ಕರ್ಣನ್’ನಲ್ಲಿ ಜಾತಿ ದೌರ್ಜನ್ಯದ ನೈಜ ಘಟನೆಯನ್ನಾಧರಿಸಿದ ಕಥನವನ್ನು ಕಟ್ಟಿಕೊಟ್ಟಿದ್ದರು. ಈಗ ‘ಮಾಮಣ್ಣನ್’ನಲ್ಲಿ ಸಾಮಾಜಿಕ ಹಂದರದ ಆಚೆಗೆ ಕೈ ಹಾಕಿ ಅಧಿಕಾರ ರಾಜಕಾರಣದಲ್ಲಿ ಜಾತಿ ವಹಿಸುವ ಪಾತ್ರದ ಕುರಿತ ಕಥನ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಈ ಟಿಪ್ಪಣಿ ‘ಮಾಮಣ್ಣನ್’ ಸಿನಿಮಾ ಬಿಡುಗಡೆಯಾಗಿರುವ ನೆಪದಲ್ಲಿ ತಮಿಳುನಾಡಿನಲ್ಲಿ ನಡೆದ ಇಂತದ್ದೆ ನೈಜ ಘಟನೆಯನ್ನು ಕುರಿತದ್ದದಾಗಿದೆ. ‘ಮಾಮಣ್ಣನ್’ ಸಿನಿಮಾದ ದಲಿತ ನಾಯಕ ಗೆದ್ದರೆ ಮೆಲವೆಳವು ಗ್ರಾಮದ ನಾಯಕ ಹತ್ಯೆಗೊಳಗಾಗುತ್ತಾನೆ. ಬೇಕಾದರೆ ಇದನ್ನು ಇನ್ನೊಂದು ‘ದಲಿತ್ ಫೈಲ್ಸ್’ ಅಂತಲೂ ಕರೆಯಬಹುದು.
ಲೋಕಸಭೆ ಮತ್ತು ವಿಧಾನಸಭೆಗೆ ರಾಜಕೀಯ ಮೀಸಲಾತಿ ಇದ್ದರೂ ಅದು ಜಾತಿವ್ಯವಸ್ಥೆಯಲ್ಲಿ ಮೇಲ್ಜಾತಿಗಳ ಅಸ್ತಿತ್ವವನ್ನು ಅಷ್ಟಾಗಿ ಅಲುಗಾಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಯಾವಾಗ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದು ಸ್ಥಳೀಯ ಸಂಸ್ಥೆಗಳಲ್ಲಿ ದಲಿತರು ನೇರವಾಗಿ ಅಧಿಕಾರ ರಾಜಕಾರಣ ಹಿಡಿಯಲು ಶುರು ಮಾಡಿದರೊ ಆಗ ಫ್ಯೂಡಲ್ ಜಾತಿಗಳು ವಿಚಲಿತವಾಗುವುದಕ್ಕೆ ಶುರುಮಾಡಿದವು. ತಮ್ಮ ಬಳಿ ಜೀತಗಾರರಾಗಿ, ಕೂಲಿಕಾರ್ಮಿಕರಾಗಿ, ಸಾಂಪ್ರದಾಯಿಕ ಕುಲಕಸುಬುಗಳನ್ನು ಮಾಡಿಕೊಂಡು Subservient ಆಗಿ ಬದುಕುತ್ತಿದ್ದ ಅಸ್ಪೃಶ್ಯ ಸಮುದಾಯಗಳ ಜನ ತಮಗೆ ಸರಿಸಮಾನರಾಗಿ ರಾಜಕೀಯ ಅಧಿಕಾರಕ್ಕೆ ಬರುವುದು ಮೇಲುಜಾತಿಗಳಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಅಲ್ಲದೆ ಗ್ರಾಮದ ಹಂತದಲ್ಲಿ ಪಂಚಾಯತಿಗಳ ಅಡಿಯಲ್ಲಿ ಬರುತ್ತಿದ್ದ ಕೆರೆ-ಕಾಲುವೆಗಳು, ಗೋಮಾಳಗಳು, ಅರಣ್ಯಪ್ರದೇಶಗಳ ಮೇಲೆ ಹಿಡಿತ ಸಾಧಿಸಿಕೊಂಡು ಬಂದಿದ್ದ ಭೂಮಾಲೀಕ ಜಾತಿಗಳು ಈಗ ತಮ್ಮ ಪ್ರಾಬಲ್ಯವನ್ನು ಬಿಟ್ಟುಕೊಡಬೇಕಾದ ಸಂದರ್ಭ ಸೃಷ್ಟಿಯಾಗತೊಡಗಿತು. ಇದು ದಲಿತರ ಬಗ್ಗೆ ಅಸಹನೆಯನ್ನು ಇನ್ನಷ್ಟು ಹೆಚ್ಚಿಸಿ ಹಿಂಸೆಯನ್ನು ಎಸಗಲು ಪ್ರಚೋದನೆ ನೀಡತೊಡಗಿತು.
ಗ್ರಾಮಪಂಚಾಯಿತಿ ಚುನಾವಣೆ ಕಾರಣಕ್ಕಾಗಿಯೇ 1997ರಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಒಂದು ದಲಿತ ಹತ್ಯಾಕಾಂಡ ನಡೆಯಿತು. ಮಧುರೈ ಜಿಲ್ಲೆಯ ಮೆಲವಳವು ಎಂಬ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ ಕಾರಣಕ್ಕೆ ಅಲ್ಲಿ ಪ್ರಬಲ ಶೂದ್ರ ಜಾತಿಯಾದ ತೇವರ್ ಸಮುದಾಯ ಮತ್ತು ದಲಿತರ ನಡುವೆ ಘರ್ಷಣೆ ಶುರುವಾಯಿತು.
ಸ್ಥಳೀಯ ಸಂಸ್ಥೆಗಳಲ್ಲಿ ದಲಿತರಿಗೆ ಮೀಸಲಾತಿ ಇದ್ದರೂ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ನಡೆದುಕೊಳ್ಳುವ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಮೂಲಕ ಪರೋಕ್ಷವಾಗಿ ಅಧಿಕಾರ ನಡೆಸುವ ಪರಿಪಾಠವನ್ನು ಭೂಮಾಲೀಕ ಜಾತಿಗಳು ಅನುಸರಿಸಿಕೊಂಡೆ ಬರುತ್ತಿವೆ. ಹಾಗಾಗಿಯೇ ದಲಿತ ಸಮುದಾಯದಿಂದ ಬರುವ assertive ನಾಯಕತ್ವವನ್ನು ಅಧಿಕಾರ ರಾಜಕಾರಣ ಸಹಿಸುವುದಿಲ್ಲ. Submissive ಆಗಿರುವ ದಲಿತರು ಮಾತ್ರ ಮೇಲ್ಜಾತಿಗಳಿಗೆ ಇಷ್ಟವಾಗುತ್ತಾರೆ.
ಮೆಲವಳವು ಗ್ರಾಮಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ತೇವರ್ ಸಮುದಾಯದ ಮುಖಂಡರು ತಮ್ಮ ಮಾತು ಕೇಳುವ ದಲಿತನನ್ನು ಅಧ್ಯಕ್ಷನನ್ನಾಗಿಸಲು ಬಯಸಿದ್ದರು. ಹಾಗಾಗಿ ಬೇರೆ ಯಾರೂ ಚುನಾವಣೆಗೆ ಸ್ಪರ್ಧಿಸದಂತೆ ಬೆದರಿಕೆ ಹಾಕಿದ್ದರು. ಆರಂಭದಲ್ಲಿ ದಲಿತ ಸಮುದಾಯದವರು ಮೇಲ್ಜಾತಿಗಳ ಭಯದಿಂದ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮುಂದಾಗಲಿಲ್ಲ. ಹಲವು ದಿನಗಳ ನಂತರ ಮೇಲ್ಜಾತಿಗಳನ್ನು ಎದುರುಹಾಕಿಕೊಳ್ಳಬೇಕಾದರೂ ಧೈರ್ಯಮಾಡಿ ಕೆ. ಮುರುಗೇಶ ಎನ್ನುವ 35ವರ್ಷದ ವ್ಯಕ್ತಿ ಮತ್ತು ಆತನ ಸಹಚರರು ಚುನಾವಣೆಗೆ ನಿಲ್ಲುತ್ತಾರೆ.
ತಮ್ಮ ಅಭ್ಯರ್ಥಿಗಳ ವಿರುದ್ಧ ಚುನಾವಣೆಗೆ ನಿಂತಿದ್ದಕ್ಕೆ ಕ್ರೋಧಕೊಂಡ ತೇವರ್‌ಗಳು ಮೊದಲ ಸಲ ಚುನಾವಣೆ ನಡೆಯದಂತೆ ತಡೆಯುತ್ತಾರೆ, ಎರಡನೆಯ ಸಲ ಚುನಾವಣೆ ನಡೆದರೂ ಚುನಾವಣೆಯ ದಿನ ಮತಗಟ್ಟೆಗೆ ನುಗ್ಗಿ ದಾಂಧಲೆ ಎಬ್ಬಸಿ ದಲಿತರ ಮೇಲೆ ಹಲ್ಲೆ ನಡೆಸುತ್ತಾರೆ ಮತ್ತು ಮತಪೆಟ್ಟಿಗೆಯನ್ನು ಹೊತ್ತೊಯ್ದು ಬಾವಿಗೆಸೆಯುತ್ತಾರೆ. ಕೊನೆಗೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಬಂದೊಬಸ್ತಿನಲ್ಲಿ ಚುನಾವಣೆ ನಡೆಸಬೇಕಾಗುತ್ತದೆ. ತೇವರ್ ಸಮುದಾಯದ ವಿರೋಧದ ನಡುವೆಯೂ ಮುರುಗೇಶ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಮೀಸಲಾತಿಯ ಕಾರಣಕ್ಕೆ ಗ್ರಾಮಪಂಚಾಯಿತಿಯ ಅಧ್ಯಕ್ಷರಾಗುತ್ತಾರೆ.
ತಮ್ಮ ಮಾತನ್ನು ಮೀರಿ ಚುನಾವಣೆಗೆ ನಿಂತು ಗೆದ್ದಿದ್ದಲ್ಲದೆ ಅದ್ಯಕ್ಷನಾಗಿ ಆಯ್ಕೆಯಾದ ಮುರುಗೇಶ ತಮ್ಮ ಕರ್ತವ್ಯವನ್ನು ನಿರ್ವಹಿಸಲು ತೇವರ್‌ಗಳು ಅವಕಾಶ ಕೊಡುವುದಿಲ್ಲ. ಚುನಾಯಿತ ಅದ್ಯಕ್ಷ ಮುರುಗೇಶ್ ಪಂಚಾಯಿತಿ ಕಟ್ಟಡದಲ್ಲಿರುವ ತಮ್ಮ ಕೊಠಡಿಗೆ ಕಾಲಿಡುವುದಕ್ಕೂ ಬಿಡುವುದಿಲ್ಲ. ಜೊತೆಗೆ ನಿರಂತರವಾಗಿ ಪ್ರಾಣ ಬೆದರಿಕೆ ಹಾಕುತ್ತಲೆ ಇರುತ್ತಾರೆ.
ಇನ್ನು ಊರಿನಲ್ಲಿ ದಲಿತರನ್ನು ಬಹಿಷ್ಕಾರ ಹಾಕಿ, ದೌರ್ಜನ್ಯ ಎಸಗಲಾಗುತ್ತದೆ. ಇದು ರಾಜ್ಯ ಮಟ್ಟದಲ್ಲಿ ಸುದ್ದಿಯಾದಾಗ ಸ್ವತಃ ಆಗಿನ ಮುಖ್ಯಮಂತ್ರಿ ಎಮ್. ಕರುಣಾನಿಧಿ ಈ ಘಟನೆಗೆ ಪ್ರತಿಕ್ರಿಯಿಸಿ ಮುರುಗೇಶ್‌ಗೆ ಪೋಲಿಸ್ ರಕ್ಷಣೆ ನೀಡಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಾರೆ.
ಇದಾದ ಆರು ತಿಂಗಳ ನಂತರ ಜೂನ್ 30ರಂದು ತೇವರ್ ಸಮುದಾಯಕ್ಕೆ ಸೇರಿದ ಗ್ರಾಮ ಪಂಚಾಯಿತಿಯ ಮಾಜಿ ಅದ್ಯಕ್ಷ ತನ್ನ ಜಾತಿಯ ನಲವತ್ತು ಜನರೊಂದಿಗೆ ಸೇರಿ ನಡೆಸಿದ ಈ ಹತ್ಯಾಕಾಂಡದಲ್ಲಿ ಮುರುಗೇಶ್‌ನ ರುಂಡ ಕತ್ತರಿಸಿ ಬಿಸಾಡಲಾಗುತ್ತದೆ. ಹತ್ಯಾಕಾಂಡದ ನಂತರ ದಲಿತ ಪರಯ್ಯಾಗಳ ಕೇರಿಗೆ ಬೆಂಕಿ ಇಟ್ಟು ಸುಡಲಾಗುತ್ತದೆ.
ಯಥಾಪ್ರಕಾರ ನಲವತ್ತೊಂದು ಜನರ ಮೇಲೆ ಪ್ರಕರಣ ದಾಖಲಾಗುತ್ತದೆ. ಆದರೆ ಹಲ್ಲೆಯ ಸಂದರ್ಭದಲ್ಲಿ ಹಲ್ಲೆಗೊಳಗಾಗಿ ಬದುಕುಳಿದ ದಲಿತ Eyewitness ಇದ್ದಾಗಿಯೂ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಬೇಕಾಗಿದ್ದವರು ತಪ್ಪಿಸಿಕೊಳ್ಳುತ್ತಾರೆ. ಈ ಹತ್ಯಾಕಾಂಡ ಪ್ರಕರಣದಲ್ಲಿ ಕಾನೂನು ಹೋರಾಟ ಮಾಡುವಾಗಲೂ ಮೇಲ್ಜಾತಿಗಳು ಮತ್ತು ಪ್ರಭುತ್ವ ದಲಿತರ ಮೇಲೆ ಹಲಬಗೆಯಲ್ಲಿ ದೌರ್ಜನ್ಯ ನಡೆಸಿ ಪ್ರಕರಣದಲ್ಲಿ ನ್ಯಾಯ ದೊರಕದಂತೆ ಮಾಡಲು ಪ್ರಯತ್ನಿಸುತ್ತವೆ. ಹಾಗೂ ಹೀಗೂ ವಿಚಾರಣೆ ಶುರುವಾಗಿ ಶಿಕ್ಷೆಯಾಗುವಷ್ಟರಲ್ಲಿ ಪ್ರಕರಣದ ಒಬ್ಬ ಆರೋಪಿ ಮೃತ ಪಟ್ಟರೆ ಮಿಕ್ಕ ಹದಿನೇಳು ಆರೋಪಿಗಳಿಗೆ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಯಾಗುತ್ತದೆ.
ಮುಂದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮೂಲಕ ಆರಿಸಿ ಬಂದಾಗಲೂ ಜಾತಿಯ ಕಾರಣಕ್ಕೆ ಕೊಲ್ಲಲ್ಪಟ್ಟ ದಲಿತ ಸಮುದಾಯಕ್ಕೆ ನ್ಯಾಯಕೊಡಿಸಬೇಕಾದ ಪ್ರಭುತ್ವಗಳು ಮುಂದೆ ನಿಂತು ಆರೋಪಿಗಳನ್ನು ಬಿಡುಗಡೆ ಮಾಡಿದವು. ಶೂದ್ರ ರಾಜಕಾರಣದ ಬಗ್ಗೆ ಮಾತನಾಡುವ ದ್ರಾವಿಡ ಪಕ್ಷಗಳಲ್ಲಿ ಒಂದಾದ ಡಿಎಂಕೆ ಅಧಿಕಾರದಲ್ಲಿದ್ದಾಗ 2009ರಲ್ಲಿ ಡಿಎಂಕೆಯ ಸಂಸ್ಥಾಪಕ ಅಣ್ಣಾದೊರೈಯವರ ಜನ್ಮಶತಮಾನೋತ್ಸವದ ಪ್ರಯುಕ್ತ ಹತ್ಯಾಕಾಂಡದ ಆರೋಪಿಗಳಲ್ಲಿ ಮೂರು ಜನರನ್ನು ಬಿಡುಗಡೆ ಮಾಡಿದರೆ, 2019ರಲ್ಲಿ ಎಐಎಡಿಎಂಕೆ ಪಕ್ಷ ಅಧಿಕಾರದಲ್ಲಿದ್ದಾಗ ತನ್ನ ಸಂಸ್ಥಾಪಕ ಎಂಜಿಎರ್ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಉಳಿದ ಹದಿಮೂರು ಜನ ಆರೋಪಿಗಳನ್ನು ಬಿಡುಗಡೆ ಮಾಡುತ್ತದೆ.
ದಲಿತರನ್ನು ಮೇಲುಜಾತಿಗಳ ದೌರ್ಜನ್ಯದಿಂದ ಕಾಪಾಡಬೇಕಾದ ಸರ್ಕಾರಗಳು ದಕ್ಷಿಣ ತಮಿಳುನಾಡಿನ ಪ್ರಬಲ ಜಾತಿಗಳಲ್ಲೊಂದಾಗಿರುವ ತೇವರ್ ಸಮುದಾಯವನ್ನು ಮೆಚ್ಚಿಸಲು ಹಾಡುಹಗಲೇ ನಡುರಸ್ತೆಯಲ್ಲಿ ಹತ್ಯೆಮಾಡಿದ ಆರೋಪಿಗಳನ್ನು ‘ಸನ್ನಡತೆ’ಯ ಆಧಾರದ ಮೇಲೆ ಬಿಡುಗಡೆಗೊಳಿಸುವ ಮೂಲಕ ತಾವು ಬಾಯಲ್ಲಿ ಸಮಾನತೆ, ‘ಸಾಮಾಜಿಕ ನ್ಯಾಯ’ದ ಬಗ್ಗೆ ಮಾತಾಡಿ ವಾಸ್ತವದಲ್ಲಿ ಮೇಲುಜಾತಿಗಳ ಹಿತಕಾಯುವ ಕೆಲಸ ಮಾಡುತ್ತೇವೆ ಎನ್ನುವುದನ್ನು ಸಾಬೀತು ಮಾಡಿದವು.
ತಮಿಳುನಾಡಿನ ಚರಿತ್ರೆಯ ತುಂಬಾ ಇಂತಹ ದೌರ್ಜನ್ಯದ ಪ್ರಕರಣಗಳು ತುಂಬಿದ್ದಾಗಲೂ ಅದನ್ನು ದ್ರಾವಿಡ ಸಂಸ್ಕೃತಿಯ ಹೆಸರಿನಲ್ಲಿ ಮೆರೆಸುವುದು ನಡೆಯುತ್ತಲೆ ಇದೆ. ಒಂದು ಕಡೆ ವೈದಿಕ ವಿರೋಧದ ಮಾತಾಡುತ್ತಲೇ ಇನ್ನೊಂದು ಕಡೆ ಜಾತಿ ವ್ಯವಸ್ಥೆಯನ್ನು ಪರೋಕ್ಷವಾಗಿ ಬೆಂಬಲಿಸಿಕೊಂಡು ತಳಸಮುದಾಯಗಳನ್ನು ತುಳಿಯುತ್ತಿರುವುದು ನಡೆಯುತ್ತಲೇ ಇದೆ. ಇದೇ ದ್ರಾವಿಡ ರಾಜಕಾರಣದ ನಾಡಿನ ದೊಡ್ಡ contradiction.
ವೈದಿಕ ವಿರೋಧದ ಮಾತಾಡುವ ಶೂದ್ರ ಜಾತಿಗಳ ಪ್ರಕಾರ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುವುದು ಎಂದರೆ ಬ್ರಾಹ್ಮಣ ವಿರೋಧ ಅಷ್ಟೇ. ಆದರೆ ಸಾಮಾಜಿಕ ವ್ಯವಸ್ಥೆಯಲ್ಲಿ ತಮಗಿಂತ ಕೆಳಗಿರುವ ಅಸ್ಪೃಶ್ಯ ಮತ್ತು ಇತರ ಸಮುದಾಯಗಳ ವಿಷಯದಲ್ಲಿ ಮಾತ್ರ ಜಾತಿವಿಕಾರವನ್ನು ಕಾರಿಕೊಳ್ಳುತ್ತಲೇ ಇರುತ್ತವೆ.
ಅಂದಹಾಗೆ ಮೆಲವಲವು ಹತ್ಯಾಕಾಂಡವಾಗಿ ನೆನ್ನೆಗೆ 26 ವರ್ಷ.
……………………………..
~ ವಿ. ಎಲ್. ನರಸಿಂಹಮೂರ್ತಿ
ಚಿಂತಕರು , ನ್ಯಾಷನಲ್ ಕಾಲೇಜು ಅಧ್ಯಾಪಕರು.