“ಹಿಂದುತ್ವ ಅಥವಾ ಹಿಂದ್ ಸ್ವರಾಜ್” ಸಾವರ್ಕರ್ ಮುಂದುವರಿದ ಭಾಗವಾಗಿ ಯು.ಆರ್.ಅನಂತಮೂರ್ತಿ
ಹಾರೋಹಳ್ಳಿ ರವೀಂದ್ರ
ಕನ್ನಡ ಸಾಹಿತ್ಯದ ಹೆಸರಾಂತ ಬರಹಗಾರರಾದ ಯು.ಆರ್.ಅನಂತಮೂರ್ತಿ ಅವರ ಕೊನೆಯ ಕೃತಿಯಾದ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಕೃತಿಯು ಪ್ರಸ್ತುತದಲ್ಲಿ ಬೇರೆಯದೇ ನೆಲೆಯಲ್ಲಿ ಬಂದು ನಿಲ್ಲುತ್ತದೆ. ಇದನ್ನು ವಿಮರ್ಶಾ ಹಾದಿಯಲ್ಲಿ ತೆಗೆದುಕೊಂಡು ನಡೆಯುತ್ತಿದ್ದರೆ, ಅವರು ನಡೆದುಕೊಂಡ ರೀತಿಗೂ, ಸಾಹಿತ್ಯಕ್ಕೂ ಒಂದು ಕನ್ನಡಿಯಂತಿದೆ.
ಅನಂತಮೂರ್ತಿ ಅವರು ಬದುಕಿದ್ದಾಗ ಮೋದಿಯನ್ನು ಇಗ್ಗಾ ಮೊಗ್ಗ ಟಾರ್ಗೆಟ್ ಮಾಡಿ ಉಗಿದವರು ‘ಮಾನ ಮರ್ಯಾದೆ ಬಿಟ್ಟವರು ದೇವರ ತರಹ’ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ನರೇಂದ್ರ ಮೋದಿಯನ್ನು ದೇವರು ಎಂದು ಒಪ್ಪಿಕೊಳ್ಳುವ ಮೂಲಕ ಇತ್ತ ಭದ್ರವಾಗಿ ಟೀಕಿಸಲು ಆಗದೆ ಅತ್ತ ಒಪ್ಪಿಕೊಳ್ಳಲು ಆಗದ ಅತಂತ್ರ ಸ್ಥಿತಿಗೆ ತಮ್ಮನ್ನು ತಾವೆ ತೆರೆದುಕೊಳ್ಳುತ್ತಾರೆ.
ನರೇಂದ್ರ ಮೋದಿ ಅವರು ಪ್ರಸ್ತುತದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಆದ್ಯತೆ ನೀಡುತ್ತಿದ್ದಾರೆ. ಜೊತೆಗೆ ಇತರೆ ಬೇರೆ ಬೇರೆ ದೇಶಗಳಿಗೂ ಬಂಡವಾಳ ಹೂಡುವುದಕ್ಕೆ ಕೈ ಬೀಸಿ ಕರೆಯುತ್ತಿದ್ದಾರೆ. ಇದರಿಂದ ಇಲ್ಲಿನ ರೈತಾಪಿ ವರ್ಗಕ್ಕೆ ಬಹುದೊಡ್ಡ ಹೊಡೆತವೆ ಬೀಳಬಹುದು, ಯಾಕೆಂದರೆ ಕಾರ್ಪೋರೇಟ್ ತನ್ನ ಉಳಿವಿಗಾಗಿ ಯಾರನ್ನು ಬೇಕಾದರು ಕೊಲ್ಲುವುದರಲ್ಲಿ ಸಂದೇಹವಿಲ್ಲ. ತಮ್ಮ ಕೃತಿಯಲ್ಲಿ ಅನಂತ ಮೂರ್ತಿ ಅವರು ಹೇಳುತ್ತಿರುವುದು ಅದನ್ನೆ, ಕಾರ್ಪೋರೇಟ್ ಮಾಲೀಕರು ಮಾಡುವ ಬೇಟೆಯನ್ನು ನಾವೀಗ ಗ್ಲೋಬಲೈಜೇ಼ಸನ್ಸ್ ಎಂದು ಕರೆಯುತ್ತೇವೆ ಎಂದು ಹೇಳುವ ಮೂಲಕ ಈ ದೇಶದ ಕೋಟಿ ರೈತಾಪಿ ವರ್ಗಕ್ಕೆ ಹಾಗುತ್ತಿರುವ ಅನಾನುಕೂಲವನ್ನು ನೇರವಾಗಿಯೆ ಟ್ರೆಸ್ ಮಾಡುತ್ತಾರೆ. ದೇಶಿಯ ಉತ್ಪಾದನೆ ರೈತರ ಭೂ ಒಡೆತನದ ಬಗ್ಗೆ ಯೋಚಿಸುವ ಅನಂತಮೂರ್ತಿ ಅವರನ್ನು ಪ್ರಶಂಸಿಲೇಬೇಕು. ಆದರೆ ಗಾಂಧಿವಾದದ ಮತ್ತೊಂದು ರೂಪ ಎಂದು ಹೇಳದೆ ಇರಲಾಗದು.
ಯು.ಆರ್. ಅನಂತಮೂರ್ತಿ ಅವರು ಗಾಂಧೀಜಿಯವರ ಕನಸಿನ ಕೂಸು, ಅವರ ಸಿದ್ದಾಂತಗಳನ್ನು ಅಚ್ಚುಕಟ್ಟಾಗಿ ಕಾಯ್ದುಕೊಂಡು ಅಂದಿನಿಂದಲೂ ಇಂದಿನವರೆವಿಗೂ ಬಂದಿದ್ದಾರೆ. ಯಾಕೆಂದರೆ ಗಾಂಧಿವಾದ ಮತ್ತು ಅಂಬೇಡ್ಕರ್ ವಾದ ಪರಸ್ಪರ ವಿರುದ್ದ ಧಿಕ್ಕಿನಲ್ಲಿ ಚಲಿಸಿದ ವಾದಗಳು, ಇವೆರಡರಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು? ಯಾವುದನ್ನು ಬಿಡಬೇಕು? ಎಂಬ ಗೊಂದಲದಲ್ಲಿದ್ದಾಗ ಬಹುಶಃ ಬ್ರಾಹ್ಮಣವಾದಕ್ಕೆ ಸಿಲುಕಿ ಗಾಂಧಿವಾದವನ್ನು ಒಪ್ಪಿಕೊಂಡಿದ್ದಾರೆ. “ಹಿಂದೆ ನಮ್ಮಲ್ಲಿ ಬಡವರು ಓದಿ ಮುಂದೆ ಬಂದದ್ದು ವಾರಾನ್ನದ ಭಿಕ್ಷೆಯಿಂದ: ಲಿಂಗಾಯತ ಮಠಗಳು ನಡೆಸುವ ದಾಸೋಹದಿಂದ, ಈಚೆಗೆ ಪ್ರಜಾ ತಾಂತ್ರಿಕ ಧಾರಾಳದ ಮೀಸಲಾತಿಯಿಂದ” (ಪು.ಸಂ ೧೪). ಬಹಳ ಹಿಂದೆ ಬ್ರಾಹ್ಮಣರಲ್ಲಿ ವಾರನ್ನ ನಡೆಯುತಿತ್ತು, ಆ ಸಮುದಾಯದಲ್ಲಿ ಯಾರೋ ಒಬ್ಬ ತುಂಬ ಬಡ ವಿದ್ಯಾರ್ಥಿಯೊಬ್ಬನಿದ್ದರೆ, ಪ್ರತಿಯೊಂದು ಮನೆಯು ಒಂದೊಂದು ದಿನ ಊಟ ಹಾಕುತ್ತಿದ್ದರು. ಆ ಮೂಲಕ ಆತನನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಲಿಷ್ಠವಾಗಿ ಮಾಡುವ ಒಂದು ಮಾನವೀಯತೆಯನ್ನು ಭಿಕ್ಷೆ ಎಂದು ಹೇಳುತಿದ್ದಿರಿ. ಆಗಲಿ ಹಾಗೆಯೆ ಅಂದುಕೊಳ್ಳೂಣ, ಇದರ ಮುಂದುವರೆದ ಭಾಗವಾಗಿ ಲಿಂಗಾಯತ ಮಠಗಳು ದಾಸೋಹ ಪ್ರಾರಂಭಿಸಿವೆ. ಇಂದಿಗೂ ಕೂಡ ಮಲೈ ಮಹದೇಶ್ವರ ಬೆಟ್ಟ ಮತ್ತು ಸುತ್ತೂರು ಮಠಗಳಲ್ಲಿ ನಡೆಯುತ್ತಲೇ ಇವೆ. ಅದು ಒಂದು ಕಡೆ ಭಿಕ್ಷೆ ಆಗಿರಬಹುದು ಅಥವಾ ಸಮುದಾಯವನ್ನು ಕಾಯ್ದುಕೊಳ್ಳುವ ಪರಿಯು ಇರಬಹುದು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರ್ಥಿಕವಾಗಿ, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮತ್ತು ರಾಜಕೀಯವಾಗಿ ಮೇಲೆತ್ತಲು ಹಿಂದುಳಿದ ವರ್ಗ, ಎಸ್.ಸಿ, ಎಸ್.ಟಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ಮೀಸಲಾತಿಯನ್ನು ವಾರನ್ನದ ಭಿಕ್ಷೆಗೆ ಹೋಲಿಸಿ ನೋಡುವ ದೋರಣೆ ಇದೆಯಲ್ಲ, ಅದು ಪರೋಕ್ಷವಾಗಿ ನೀವು ಮೀಸಲಾತಿ ವಿರುದ್ದ ಮಾತನಾಡುತ್ತಿದ್ದೀರಿ ಎಂಬುದನ್ನು ಸಾಬೀತು ಪಡಿಸುತ್ತದೆ. ಮೀಸಲಾತಿ ಎನ್ನುವುದು ಸಾಮಾಜಿಕ ನ್ಯಾಯವೇ ಹೊರತು ಭಿಕ್ಷೆಯಲ್ಲ. ಅದನ್ನು ಭಿಕ್ಷೆ ಎಂದು ಹೇಳುವುದು ಬ್ರಾಹ್ಮಣ್ಯದ ಮೆದುಳು ಮಾತ್ರ. ಗಾಂಧಿವಾದವು ಪ್ರತ್ಯೇಕ ಚುನಾಯಕಗಳಿಂದ ಹಿಂದೂ ಧರ್ಮ ಹೊಡೆದು ಹೋಳಾಗುತ್ತದೆ ಎಂದು ಹೇಳಿದರೆ, ನೀವು ಅದರ ಮುಂದುವರಿದ ಭಾಗವಾಗಿ ಮೀಸಲಾತಿ ಎಂಬುದು ಧಾರಾಳ ಭಿಕ್ಷೆ ಎಂದು ಹೇಳುತ್ತಿದ್ದಿರಿ, ಅಂದು ಅವರು, ಇಂದು ನೀವು ಅಷ್ಟೆ?
ಈ ದೇಶದ ಸಂಪತ್ತು ಕೆಲವೇ ಜನರ ಕೈ ತಲುಪಿ ಬಹುಸಂಖ್ಯಾತ ಜನರು ಸಾಮಾನ್ಯರಲ್ಲು ಸಾಮಾನ್ಯರಾಗಿ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅದಕ್ಕೆ ಸಂಬಂಧಿಸಿದ ಹಾಗೆ ಇಣುಕಿ ನೋಡಿದರೆ ಯು,ಆರ್.ಅನಂತಮೂರ್ತಿ ಅವರ ನಿಲುವು ಕೊಂಚ ರೈತರ ಪರವಾಗಿಯೂ ನಿಲ್ಲುತ್ತದೆ. ಪ್ರತಿಯೊಬ್ಬ ಮನುಷ್ಯ ಅವರಿಗೆ ಎಷ್ಟು ಅನಿವಾರ್ಯವೊ ಅಷ್ಟು ಮಾತ್ರ ಪೂರೈಸಿಕೊಳ್ಳಬೇಕು. ಆದರೆ ಅದು ಹಾಗೆ ಹಾಗುತ್ತಿದೆಯೆ? ಅನಿವಾರ್ಯತೆ ಮೀರಿ ಪೂರೈಸಿಕೊಳ್ಳುವ ಸ್ವಾರ್ಥ, ಇದರಿಂದ ಜನ ಸಮೂಹ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಈ ಕೃತಿಯು ಹೇಳುತ್ತದೆ. “ಈ ನೆಲದ ಸಂಪತ್ತು ಕೇವಲ ರಾಜಕಾರಣಿಗಳು ಮತ್ತು ಕಾರ್ಪೋರೇಟ್ ನಾಯಕರ ಕೈಯಲ್ಲಿದೆ. ಆ ಮೂಲಕ ಕೋಟ್ಯಾಂತರ ಜನ ಸಮುದಾಯ ಸಂಪತ್ತಿಲ್ಲದೆ ಕಂಗಾಲಾಗಿದ್ದಾರೆ. ಈ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾದರೆ ಎಲ್ಲರೂ ಸುಭಿಕ್ಷವಾಗಿ ಬದುಕಲು ಅನುವಾಗುತ್ತದೆ. ಸೀಮಿತ ಜನರು ಹಿಡಿದಿಟ್ಟುಕೊಂಡಿರುವ ಸಂಪತ್ತನ್ನು ಕಿತ್ತು ಪ್ರತಿಯೊಬ್ಬರಿಗೂ ಹಂಚಬೇಕಾಗಿದೆ. ಹಾಗಾದಾಗ ಮಾತ್ರ ಸಮಾನತೆ ಕಾಯ್ದುಕೊಳ್ಳಲು ಸಾಧ್ಯ.” ಎಂಬ ನಿಮ್ಮ ವಾದವನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಆದರೆ ರಾಜ್ಯಾಧಿಕಾರ, ಕಾರ್ಪೋರೇಟ್ ಕಂಪನಿಗಳು ಹಾಗೂ ಈ ದೇಶದ ಸಂಪತ್ತು ಯಾರ ಕೈಯಲ್ಲಿದೆ. ಈ ದೇಶದ ಬಹುತೇಕ ಸಂಪತ್ತು ಬಹುತೇಕ, ಬ್ರಾಹ್ಮಣ, ಬನಿಯಾಗಳ ಕೈಯಲ್ಲಿದೆ. ಶೂದ್ರರು ಮತ್ತು ಅತಿ ಶೂದ್ರರು ಅದರಿಂದ ವಂಚಿತರಾಗಿದ್ದಾರೆ. ಇದನ್ನು ನಿರ್ಭೀತಿಯಿಂದ ಹೇಳಲು ಯು.ಆರ್. ವಿಫಲರಾಗಿದ್ದಾರೆ.
ಸಾವರ್ಕರ್ ಅವರು ರಾಷ್ಟ್ರೀಯವಾದಿ ಎಂಬುದನ್ನು ಊಹಿಸಲು ಸಾಧ್ಯವಿಲ್ಲ, ಆತ ಒಬ್ಬ ಮತೀಯವಾದಿ, ಸಮಾಜವಾದಿಯಾದ ಅನಂತಮೂರ್ತಿ ಅವರು ಮತೀಯವಾದಿಯ ಹಿಂದೆ ಬಿದ್ದದ್ದನ್ನು ನೋಡಿದರೆ ಇಲ್ಲಿ ಅನುಮಾನಕ್ಕೆ ಸಾಕಷ್ಟು ಎಡೆಮಾಡಿಕೊಡುತ್ತವೆ. ರಾಷ್ಟ್ರ ನಿರ್ಮಾಣ ವಿಚಾರ ಬಂದಾಗ ಶ್ರೀರಾಮನನ್ನು ಬೇಕೆಂದೆ ಮೇಲುಗೈ ಮಾಡುತ್ತೀರಿ, ಸುಗ್ರೀವನು ಶ್ರೀರಾಮನನ್ನು ಚಕ್ರವರ್ತಿಯಾಗಿ ಒಪ್ಪಿಕೊಂಡಿದ್ದನ್ನ ಹೇಳುತ್ತೀರಿ. ನಿಜ, ಸುಗ್ರೀವ ಒಬ್ಬ ಸೋದರ ದ್ರೋಹಿ, ರಾಜ್ಯಕ್ಕಾಗಿ ಅಣ್ಣ ವಾಲಿಯನ್ನೆ ಕೊಲ್ಲಲು ಸುಫಾರಿ ಕೊಟ್ಟವನು. ಹಾಗೆಯೆ ರಾಮ ಒಬ್ಬ ಸುಫಾರಿ ಹಂತಕ. ಈ ವಿಚಾರವನ್ನು ಬೇಕೆಂದೆ ಮರೆಮಾಚಿದ್ದೀರಿ. ರಾಮಾಯಣದಲಿ ಬರುವ ಸನ್ನಿವೇಶದಂತೆ ವಾಲಿ ಮತ್ತು ಸುಗ್ರೀವ ಇಬ್ಬರು ಕಿಷ್ಕಿಂದೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದ ವಾನರ ಕುಲದ ಆಳರಸ ಮನೆತನಕ್ಕೆ ಸೇರಿದವನು. ವಾಲಿ ಸಿಂಹಾಸನ ರೂಢನಾಗಿದ್ದ, ಆ ಸಮಯದಲ್ಲಿ ಮಾಯಾವಿ ಎಂಬ ರಾಕ್ಷಸನೊಡನೆ ಯುದ್ದ ಮಾಡುವ ಪ್ರಸಂಗ ಬರುತ್ತದೆ. ಅವರಿಬ್ಬರ ನಡುವೆ ಹಾಗುವ ಮಲ್ಲ ಯುದ್ದದಲ್ಲಿ ಮಾಯಾವಿ ಜೀವ ಉಳಿಸಿಕೊಳ್ಳಲು ಪಲಾಯನ ಮಾಡುತ್ತಾನೆ. ವಾಲಿ, ಸುಗ್ರೀವರು ಅವನ ಬೆನ್ನಟ್ಟುತ್ತಾರೆ, ಮಾಯಾವಿ ಒಂದು ಆಳವಾ ಗುಹೆ ಹೊಕ್ಕು ಬಿಡುತ್ತಾನೆ. ಗುಹೆಯ ಬಾಗಿಲಲ್ಲೆ ಕಾಯುವಂತೆ ಸುಗ್ರೀವನಿಗೆ ಹೇಳಿ ಹೋಗಿರುತ್ತನೆ, ತುಂಬಾ ಸಮಯವಾದರು ವಾಲಿ ಬರುವುದೇ ಇಲ್ಲ. ಕೆಲ ಕಾಲದ ನಂತರ ಗುಹೆಯ ಒಳಗಿನಿಂದ ರಕ್ತದ ಪ್ರವಾಹವೆ ಹರಿದು ಬರುತ್ತದೆ. ಇದನ್ನು ಕಂಡ ಸುಗ್ರೀವ, ವಾಲಿಯೆ ಹತನಾಗಿರಬೇಕೆಂದು, ಕಿಷ್ಕಿಂದೆಗೆ ಓಡಿ ಬಂದು ನಾನೆ ರಾಜನೆಂದು ಘೊಷಿಸಿಕೊಂಡು ಹನುಮಂತನನ್ನು ಪ್ರಧಾನಿಯನ್ನಾಗಿ ನೇಮಿಸಿಕೊಳ್ಳುತ್ತಾನೆ. ಆದರೆ ಅಲ್ಲಿ ವಾಲಿ ಹತನಾಗಿರಲಿಲ್ಲ, ಮಾಯಾವಿ ವಾಲಿಯಿಂದ ಹತನಾಗಿರುತ್ತಾನೆ. ಗುಹೆಯ ಹೊರಬಂದು ವಾಲಿ ನೋಡಿದಾಗ ಸುಗ್ರೀವನಿರದುದ್ದನ್ನು ಕಂಡು ಚಕಿತನಾಗಿ ಕಿಷ್ಕಿಂದೆಗೆ ಧಾವಿಸಿ ಬರುತ್ತಾನೆ. ಅಲ್ಲಿ ಸುಗ್ರೀವ ತಾನೆ ರಾಜನೆಂದು ಘೋಷಿಸಿಕೊಂಡಿರುವುದು ಕಂಡು ಬಂದು ಸೋದರನ ದ್ರೋಹಕ್ಕೆ ಕುಪಿತನಾಗುತ್ತಾನೆ. ತದನಂತರ ಸುಗ್ರೀವನ ದುರಾಕ್ರಮಣ ಹೆಚ್ಚಾಗಿ, ವಾಲಿ ಸುಗ್ರೀವನನ್ನು ಒದ್ದೋಡಿಸಿ ರಾಜ್ಯಾಧಿಕಾರವನ್ನು ಮರಳಿ ಪಡೆಯುತ್ತಾನೆ. ಮುಂದೆ ಇಬ್ಬರು ಪರಸ್ಪರ ವೈರಿಗಳಾಗುತ್ತಾರೆ, ಈ ಘಟನೆ ಸಂಭವಿಸಿದ್ದು ರಾವಣ ಸೀತೆಯನ್ನು ಅಪಹರಿಸಿದ್ದ ಸಂದರ್ಭದಲ್ಲೆ.
ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಅಲೆಯುತ್ತಿದ್ದರು, ಇತ್ತ ಸುಗ್ರೀವ ಹನುಮಂತರು ವಾಲಿಯಿಂದ ಮತ್ತೆ ಸಿಂಹಾಸನವನ್ನು ಪಡೆಯಲು ನೆರವಾಗುವ ಗೆಳೆಯರನ್ನು ಹುಡುಕುತಿದ್ದರು. ಅಂತಹ ಸ್ಥಿತಿಯಲ್ಲಿ ಈ ಇಬ್ಬರು ಆಕಸ್ಮಿಕವಾಗಿ ಭೇಟಿಯಾದರು. ತಮ್ಮ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡು ಒಂದು ಒಪ್ಪಂದಕ್ಕೆ ಬರುತ್ತಾರೆ. ಅದರಂತೆ ಸುಗ್ರೀವ ವಾಲಿಯನ್ನು ಕೊಂದು ಕಿಷ್ಕಿಂದೆಯ ಸಿಂಹಾಸನವೇರಲು ರಾಮ ಸಹಾಯ ಮಾಡಬೇಕು. ಹಾಗೆಯೆ ಸುಗ್ರೀವ ಮತ್ತು ಹನುಮಂತರು ಸೀತೆಯನ್ನು ಹುಡುಕಿ ಮರಳಿ ಪಡಯಲು ಸಹಾಯ ಮಾಡಬೇಕು. ಇದು ಅವರ ಒಪ್ಪಂದವಾಗಿತ್ತು. ಈ ಒಪ್ಪಂದದಂತೆ ತನ್ನ ಕಾರ್ಯವನ್ನು ನೆರವೇರಿಸಲು ರಾಮನು ಒಂದೇ ರೀತಿಯಾಗಿದ್ದ ವಾಲಿ ಮತ್ತು ಸುಗ್ರೀವರನ್ನು ಗುರುತಿಸಲು ಸುಗ್ರೀವ ಒಂದು ಹಾರವನ್ನು ಹಾಕಿಕೊಂಡು ವಾಲಿಯೊಡನೆ ಧ್ವಂಧ್ವ ಯುದ್ದ ಮಾಡಬೇಕೆಂದು, ಈ ಸಂದರ್ಭವನ್ನೆ ಬಳಸಿಕೊಂಡು ರಾಮ ಮರದ ಹಿಂದೆ ಬಚ್ಚಿಟ್ಟುಕೊಂಡು ಬಾಣ ಬಿಟ್ಟು ವಾಲಿಯನ್ನು ಕೊಂದು ಸುಗ್ರೀವ ಕಿಷ್ಕಿಂದೆ ರಾಜನಾಗಲು ನೆರವಾಗುತ್ತಾನೆ. ಅಂದ ಮೇಲೆ ರಾಮ ಒಬ್ಬ ಕೊಲೆಗಡುಕ, ದ್ರೋಹಿ, ವಂಚಕನೆAದಾಯಿತು. ಹಾಗಾದರೆ ಅವನು ಹೇಗೆ ರಾಷ್ಟ್ರ ನಿರ್ಮಾತೃ ಆದನು. ಸರಿ ಮುಂದೆ ಹನುಮಂತನ ವಿಚಾರಕ್ಕೆ ಬರೋಣ ಒಂದು ರಾಷ್ಟ್ರ ನಿರ್ಮಾಣದಲ್ಲಿ ಶ್ರೀ ರಾಮನಿಗೆ ಹನುಂತನ ಸಹಮತವಿತ್ತು ಎಂದು ಹೇಳುತ್ತೀರಿ. ಹೌದು, ನಿಜ ಆದರೆ ಯಾವ ರೀತಿಯ ಸಹಮತವಿತ್ತು ಎಂಬುದು ಇಲ್ಲಿ ಮುಖ್ಯ. ವಾಲಿಯನ್ನು ಕೊಂದು ರಾಜ್ಯ ದೊರಕಿಸಿ ಕೊಟ್ಟಿದ್ದರಿಂದ ಒಪ್ಪಂದದ ಪ್ರಕಾರ ಸೀತೆಯನ್ನು ಹುಡುಕಿ ಕೊಡುವ ಜವಾಬ್ದಾರಿ ಅವನದಾಗಿತ್ತು ಹಾಗಾಗಿ ಜೊತೆಯಲ್ಲಿದ್ದನು. ಹನುಮಂತ ಮೂಲ ಬುಡಕಟ್ಟಿನವನು ಆತನಿಗೆ ವಿವೇಕ ಇತ್ತೊ? ಅಥವಾ ಇಲ್ಲವೊ? ಕಾಲ ಚಕ್ರದ ಚಾಲನೆಯಲ್ಲಿ ಶ್ರೀ ರಾಮನ ದಾಸನಾದ ಯಾಕೆಂದರೆ ಸುಗ್ರೀವ ಸಿಂಹಾಸನ ರೂಢನಾದ ಮೇಲೆ ಹನುಮಂತನಿಗೆ ಪ್ರಧಾನಿ ಪಟ್ಟ ಸಿಕ್ಕಿತಲ್ಲ, ಆ ಋಣಕ್ಕೆ ಶ್ರೀರಾಮನ ದಾಸ್ಯಕ್ಕೆ ಒಳಗಾಗಬೇಕಾಯಿತು. ಗುಲಾಮಗಿರಿಯ ಸಂಸ್ಕೃತಿಯು ಹನುಮಂತನಿಂದಲೆ ಹುಟ್ಟಿಕೊಂಡಿರಬೇಕು ಎಂದು ಹೇಳಿದರೆ ತಪ್ಪಾಗಲಾರದು. ಅಂತಹ ದಾಸಪರಂಪರೆ ಅಂದಿನಿಂದಲೂ ನಡೆಯುತ್ತಿದೆ. ಇಂದು ೨೧ನೇ ಶತಮಾನಕ್ಕೂ ಕಾಲಿಟ್ಟಿದೆ. ಪ್ರಸ್ತುತ ಕಾಲ ಮಾನವನ್ನು ಕೆಣಕಿದರೆ ಕರ್ನಾಟಕದ ಕರಾವಳಿ ಭಾಗದಲ್ಲಿ ಬುಡಕಟ್ಟು ಜನಾಂಗಗಳು ಅಧಿಕಾರ ಮತ್ತು ಸ್ವಾರ್ಥ ಪರತೆಯಿಂದ ಹಿಂದೂ ಸಂಘಟನೆಗಳ ಜೊತೆ ಗುರುತಿಸಿಕೊಳ್ಳುವ ಮೂಲಕ ಮತಾಂಧರಾಗಿ, ಮತೀಯವಾದಿಗಳಾಗಿ, ಪೂರ್ವಗ್ರಹ ಪೀಡಿತರಾಗಿ ಬದುಕುತಿಲ್ಲವೆ? ಕರಾವಳಿಯಲ್ಲಿ ಇಂದಿಗೂ ಕೂಡ ಬುಡಕಟ್ಟು ವಾಸಿಗಳು ಹಿಂದೂ ಸಂಘಟನೆಗಳ ದಾಸರು. ಏನೆ ಆಗಲಿ ಹನುಮಂತ ಇವರಿಗೆ ಕೊಟ್ಟ ಬಳುವಳಿ ಅಲ್ಲವೆ?
ಭಾರತ ಬಹು ಸಂಸ್ಕೃತಿ, ಬಹು ಭಾಷೆ, ಬಹು ಜನಾಂಗಗಳ ದೇಶ. ಎಲ್ಲರನ್ನು ಒಂದೇ ವೇದಿಕೆಯಲ್ಲಿ ತರಲು ಸಮಾನತೆ ಪ್ರಮುಖವಾಗಿ ಬೇಕಾಗಿರುವ ಅಸ್ತ್ರ. ಅಂತಹ ಮಹಾನ್ ಕಾರ್ಯವನ್ನು ಎಂದಾದರು ಇಲ್ಲಿನ ಆರ್ಯರು ಎಂದು ಕರೆಸಿಕೊಳ್ಳುವವರು ಮಾಡಿದ್ದಾರೆಯೆ? ಘಸ್ನಿ ಎಂಬ ವಿಗ್ರಹ ಭಂಜಕ ನಮ್ಮ ದೇಶವನ್ನು ಆಕ್ರಮಿಸಿದಾಗ ಇಡೀ ಭಾರತ ಒಟ್ಟಾಗ ಬಹುದಿತ್ತು. ಆದರೆ ಮಹಮ್ಮದೀಯರ ಆಕ್ರಮಣ ಆಳವಾಗಿ ನಮ್ಮನ್ನು ಭಾದಿಸಲಿಲ್ಲ ಎಂದು ಹೇಳಿತ್ತೀರಿ. ಹೌದು, ನಿಜ ನೀವು ಹೇಳುವಂತೆ ಈ ದೇಶದಲ್ಲಿ ದ್ರಾವಿಡರು ಖಡ್ಗ ಹಿಡಿಯುವ ಹಕ್ಕನ್ನು ಕಸಿದುಕೊಂಡಿದ್ದು ಆರ್ಯರು. ಅಂದ ಮೇಲೆ ಖಡ್ಗದ ಮೇಲಿನ ಹಕ್ಕನ್ನು ಕಳೆದುಕೊಂಡ ಮೇಲೆ ಹೇಗೆ ತಾನೆ ದೇಶದ ರಕ್ಷಣೆಗೆ ಮುಂದಾಗಲು ಸಾಧ್ಯ? ಆರ್ಯೇತರಿಗೆ ಖಡ್ಗವ ಕೊಡಲಿಲ್ಲ, ಜೊತೆಗೆ ಆರ್ಯರು ಕೂಡ ಆ ದಾಳಿಯನ್ನು ತಡೆಯುವಲ್ಲಿ ವಿಫಲರಾದರು ಅಂದ ಮೇಲೆ ಹೇಗೆ ಒಗ್ಗಟ್ಟಾಗಿ ತಡೆಯಲು ಸಾಧ್ಯ. ಮಹಮ್ಮದೀಯರ ಆಳ್ವಿಕೆ ಪ್ರಾರಂಭವಾದ ಮೇಲೆ ಸಂಪೂರ್ಣವಾಗಿ ಆರ್ಯರು ಅವರಿಗೆ ಶರಣಾಗತರಾಗಿ ಗುಲಾಮರಾದರು ಅಂದ ಮೇಲೆ ಅದು ಹೇಗೆ ಭಾದಿಸಲು ಸಾಧ್ಯ. ಯು.ಆರ್.ಅನಂತಮೂರ್ತಿ ಅವರು ಇತಿಹಾಸವನ್ನು ಇತಿಹಾಸವಾಗಿ ನೊಡದೆ, ಧರ್ಮದ ಗುಂಗಿನಲ್ಲಿ ಜೋತು ಬಿದ್ದು ಭ್ರಮಾ ಲೋಕದಲ್ಲಿ ಮಾತನಾಡುವ ಶಬ್ದಗಳಾಗಿವೆ ಹೊರತು, ನೈಜ ಸ್ಥಿತಿಯನ್ನಲ್ಲ.
ಹಿಂದುತ್ವ ಹಿಂದ್ ಸ್ವರಾಜ್ ಕೃತಿಯನ್ನು ಬಹಳಷ್ಟು ಶ್ರಮವಹಿಸಿ ತಂದಿರುವ ಯು.ಆರ್.ಅನಂತಮೂರ್ತಿ ಅವರು ಬುದ್ದನ ಕುರಿತು ಮಾತನಾಡುವಾಗ ಪ್ರಜ್ಞಾಹೀನವಾಗಿ ಮಾತನಾಡುತ್ತಾರೆ. ಗೌತಮ ಸತ್ತ ಹೆಣ, ಮುದುಕ, ನರಳುವ ರೋಗಿ ಮುಂತಾದವುಗಳನ್ನು ನೋಡಿ ಸತ್ಯಕ್ಕಾಗಿ ಕಾಡು ಸೇರಲು ಹೋದವ ಎಂದು ಹೇಳುವ ನಿಮ್ಮ ಮಾತು ನಿಜ. ಆ ಸತ್ಯದ ಹುಡುಕಾಟವನ್ನು ಅನಂತಮೂರ್ತಿಯವರು ನಡೆಸಿಯೇ ಇಲ್ಲ. ಸೈದ್ದಾಂತಿಕವಾಗಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಈ ಕೃತಿಯಿಂದಾಗುತ್ತಿದೆ ಎಂಬುದನ್ನು ಮರೆ ಮಾಚುವಂತಿಲ್ಲ.
ರಾಮನಿದ್ದನು, ಕೃಷ್ಣನಿದ್ದನು, ಬೋದಿವೃಕ್ಷವಿತ್ತು ಎಂದು ಸಾವರ್ಕರ್ ಭಾವುಕರಾಗುತ್ತಾರೆ ಎಂದು ನೀವು ಹೇಳುತ್ತೀರಿ ಆದರೆ ಅದೇ ಬೋದಿ ವೃಕ್ಷಕ್ಕೆ ಕಲ್ಲು ಹೊಡೆದವರು ಸಾವರ್ಕರ್ ಹಿಂಬಾಲಕರು. ಬುದ್ದ ಮತ್ತು ಶಂಕರರು ತಮ್ಮ ತತ್ವಗಳನ್ನು ಕೊಟ್ಟಿದ್ದಾರೆ ಎನ್ನುವ ಮೂಲಕ ಇಬ್ಬರಿಗೂ ಒಂದೇ ಮಹತ್ವವನ್ನು ಕೊಡುವ ಸಾವರ್ಕರ್ ಅವರು ಹೇಡಿಯಾಗಿ ನಿಲ್ಲುತ್ತಾರೆ. ನೀವು ಸಾವರ್ಕರ್ ಹಿಂಬಾಲಕರಾಗಿದ್ದಿರಿ ಎಂಬುದು ಕುಂತು ಚಲಿಸುತ್ತಿದೆ. ಶಂಕರ ಎಂಬಾತ ಭಾರತದಿಂದ ಬುದ್ದನನ್ನು ಆಚೆ ತಳ್ಳಿದ ಗೂಂಡಾ ಸಂಸ್ಕೃತಿಯನ್ನು ಹೊಂದಿದವನು, ಇಂತಹ ಸಂಸ್ಕೃತಿಯನ್ನು ಒಪ್ಪಿಕೊಂಡ ಸಾವರ್ಕರ್ ಕೂಡ ಮತ್ತೊಬ್ಬ ಗೂಂಡಾ ಸಂಸ್ಕೃತಿಯವನು ಎಂದೆ ಹೇಳಬೇಕು. ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಂಡ ಸಿಸ್ಟರ್ ನಿವೇದಿತಾಳನ್ನು ಈ ದೇಶದವಳು, ಹಿಂದೂ ಎಂದೆಲ್ಲಾ ಅಪ್ಪಿ ಮುದ್ದಾಡಿದ ಸಾವರ್ಕರ್ ಕಣ್ಣಿಗೆ, ಸಹಸ್ರಾರು ವರ್ಷಗಳಿದ ಹಿಂದೂ ಸಂಸ್ಕೃತಿಯ ಅಡಿಪಾಯಕ್ಕೆ ಸಿಕ್ಕ ಅಸ್ಪೃಶ್ಯರು ನಿಮ್ಮ ಕಣ್ಣಿಗೆ ವಿದೇಶಿಯರಂತೆ ಕಂಡರೇ?
“ಈಗ ನಾನು ಗಾಂಧಿಯ ‘ಹಿಂದ್ ಸ್ವರಾಜ್’ ಪುಸ್ತಕದ ಸಂಗ್ರಹವನ್ನು ನಿಮ್ಮ ಮುಂದಿಡುತ್ತೇನೆ. ಈ ಮರುಚಿಂತನೆಯ ಓದು ನಮ್ಮ ಕಾಲಗ್ರಹಣದ ದೃಷ್ಟಿಯಿಂದ ಮಾತ್ರವಲ್ಲದೆ ನಮ್ಮ ಆಳವಾದ ಆಶಯಗಳನ್ನು ಅವು ಸೋತಂತೆ ಕಂಡರೂ ಓದುಗರ ಗಮನಕ್ಕೆ ತರುವುದೂ ಆಗಿದೆ. ವಿಚಾರಗಳು ಸಾಯುವುದಿಲ್ಲ ಎನ್ನುವುದು ನನ್ನ ನಂಬಿಕೆ. ಗಾಂಧಿಯ ಹಿಂದೆ ಟಾಲ್ ಸ್ಟಾಯ್ ಇದ್ದಾರೆ. ರಸ್ಕಿನ್ ಇದ್ದಾನೆ. ಕಠೋಪನಿಷತ್ ಇದೆ. ಗೀತೆ ಇದೆ; ರಾಮಾಯಣ ಇದೆ; ‘ವೈಷ್ಣವ ಜನತೋ’ ಪದ್ಯ ಬರೆದ ಗುಜರಾತಿನ ಕವಿ ಇದ್ದಾನೆ. ‘ಹಿಂದ್ ಸ್ವರಾಜ್’ ಪುಸ್ತಕವನ್ನು ನಾನು ಹಲವು ಆವೃತ್ತಿಗಳಲ್ಲಿ ಓದಿದ್ದೆ. ಆದರೆ ಕೆನಡಾದ ಕಾಲ್ಗರಿ ಎನ್ನುವ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆದ ಆಂಥನಿ ಪರೆಲ್ ನ ಅದ್ಭುತವಾದ ‘ಹಿಂದ್ ಸ್ವರಾಜ್’ ನ್ನು ಓದಿ ನನ್ನ ಹಲವು ವಿಚಾರಗಳನ್ನು ಬೆಳೆಸಿಕೊಂಡಿದ್ದೇನೆ”.
“ಹಿಂದ್ ಸ್ವರಾಜ್ ಒಂದು ಬೀಜ. ಗಾಂಧಿ ವೃಕ್ಷ ಬೆಳೆದಿದ್ದು ಈ ಬೀಜದಿಂದ. ಪರೆಲ್ ಈ ಕೃತಿಯನ್ನು ರುಸೋನ ಸೋಶಿಯಲ್ ಕಾಂಟ್ರಾಕ್ಟ್ (social contract) ಸೆಂಟ್ ಇಗ್ನೇಷಿಯಸ್ ಲಾಯಲಾನ್ನ spiritual exercises ಅಥವಾ ಬೈಬಲ್ ನ ಮ್ಯಾಥೋ ಬರವಣಿಗೆಗೆ ಹೋಲಿಸುತ್ತಾರೆ”.
(ಪು.ಸಂ.೫೨,೫೩). ಫ್ರಾನ್ಸ್ ನ ಲೇಖಕ ರುಸೊ ಅವರು ಪ್ರಯಾಣದ ವೇಳೆಯಲ್ಲಿ ಬರೆದಿರುವ ‘ಸಾಮಾಜಿಕ ಒಪ್ಪಂದ’ ಕೃತಿಯನ್ನು ಗಾಂಧಿಯ ‘ಹಿಂದ್ ಸ್ವರಾಜ್’ ಕೃತಿಗೆ ಪರೆಲ್ ಅವರನ್ನು ಎಳೆದು ತಂದು ಹೋಲಿಸುವುದನ್ನು ನಿಮ್ಮಷ್ಟು ಸಲೀಸಾಗಿ ಯಾರು ಒಪ್ಪಿಕೊಳ್ಳಲಾರರು ಎಂದು ಅಂದು ಕೊಂಡಿದ್ದೇನೆ. ಯಾಕೆಂದರೆ ಗಾಂಧಿ ಒಬ್ಬ ಸಾಮಾಜಿಕ ಚಿಂತಕನು ಅಲ್ಲ, ಆತನ ಕೃತಿಯಿಂದ ಯಾವ ಕ್ರಾಂತಿಯೂ ಭಾರತದಲ್ಲಿ ನಡೆದಿಲ್ಲ. ರುಸೊ ಅವರು ಬರೆದಿರುವ ‘ಸಾಮಾಜಿಕ ಒಪ್ಪಂದ’ ಕೃತಿಯು ಸ್ವಾತಂತ್ರ್ಯ , ಸಮಾನತೆ, ಭಾತೃತ್ವದ ಮೇಲೆ ನಿಂತಿದೆ. ಗಾಂಧಿಯ ಹಿಂದ್ ಸ್ವರಾಜ್ ಯಾವ ತತ್ವದ ಮೇಲೆ ನಿಂತಿದೆ? ರುಸೊ ಅವರ ಕೃತಿಯಿಂದ ೧೭೮೯ ರಲ್ಲಿ ಫ್ರೆಂಚ್ ನಲ್ಲಿ ಬಹುದೊಡ್ಡ ಕ್ರಾಂತಿಯೆ ಆಗಿದೆ. ಗಾಂಧಿಯ ‘ಹಿಂದ್ ಸ್ವರಾಜ್’ ನಿಂದ ಭಾರತದಲ್ಲಿ ಯಾವ ಕ್ರಾಂತಿ ಸಂಭವಿಸಿದೆ? ಇವರ ಹಿಂದ್ ಸ್ವರಾಜ್ ನಿಂದ ಈ ಸಮಾಜಕ್ಕೆ ಯಾವ ಉಪಯೋಗವು ಆಗಿಲ್ಲ. ಹಾಗಾಗಿ ರುಸೊ ಕೃತಿಗೆ ಗಾಂಧಿ ಹಿಂದ್ ಸ್ವರಾಜ್ ಅನ್ನು ತುಲನೆ ಮಾಡುವುದೆ ದೊಡ್ಡ ಅಪರಾಧ. ಅದರ ಬದಲಾಗಿ ಅಂಬೇಡ್ಕರ್ ಅವರ ಬರಹಗಳನ್ನು ರುಸೊ ಕೃತಿಗೆ ಹೋಲಿಸಿ ನೋಡುವ ಸಾಹಸಕ್ಕೆ ನೀವು ಹೋಗಿಯೆ ಇಲ್ಲ. ರುಸೊ ಅವರ ಕೃತಿಗೂ ಅಂಬೇಡ್ಕರ್ ಅವರ ಬರಹಗಳಿಗೂ ಎಷ್ಟು ಸಾಮ್ಯತೆ ಇದೆ ಅಲ್ಲವೆ? ಅಂಬೇಡ್ಕರ್ ಅವರು ಅಸ್ಪೃಶ್ಯರು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮುಂತಾದವರ ಪರವಾಗಿ ಅದೆಷ್ಟು ಧನಿಗಳನ್ನು ಎತ್ತಿಲ್ಲ? ಗಾಂಧಿ ಯಾವ ಪರವಾಗಿ ದ್ವನಿ ಮಾಡಿದ್ದಾರೆ. ಬದಲಾಗಿ ಗಾಂಧಿಯನ್ನು ಅಸ್ಪೃಶ್ಯರ ವಿರೋಧಿ ಎಂದು ಸ್ವತಹ ಅಂಬೇಡ್ಕರ್ ಅವರೆ ಕರೆಯುತ್ತಾರೆ. ಒಂದು ಮುಳ್ಳು ಹಾದಿಯಲ್ಲಿ ಅಜೇಯ ಹುಡುಕುವ ನಿಮಗೆ ಇದು ತಿಳಿಯಲಾಗದು. ಕೊನೆಗೂ ಹಿಂದ್ ಸ್ವರಾಜ್ ಮೂಲಕ ಆರ್ಯೇತರ ವಿರೋಧಿ ವಿಷ್ಣುವನ್ನು ಎತ್ತಿ ಮೆರೆಯುವ ಮೂಲಕ ಬ್ರಾಹ್ಮಣವಾದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಅದೇ ಸಂಸ್ಕಾರ ಕಾದಂಬರಿಯೂ ಕೂಡ ಇಂತದೇ ವೈರುಧ್ಯಗಳನ್ನು ಸೃಷ್ಟಿಸುತ್ತದೆ. ಪ್ರಾಣೇಶಾಚಾರ್ಯರು ಹೆಂಡತಿಯನ್ನು ಕಳೆದುಕೊಂಡು ಸೂತಕದ ಛಾಯೆಯಲ್ಲಿ ಇದ್ದಾಗ ಹೊಟ್ಟೆಯನ್ನು ತುಂಬಿಕೊಳ್ಳಲೊಸಗ ಮಠದಲ್ಲಿ ಊಟಕ್ಕೆ ಕುಳಿತು ಇಡೀ ಬ್ರಾಹ್ಮಣಿಕೆಯ ಸಂಪ್ರದಾಯವನ್ನು ಮುರಿದು ಬುಡ ಮೇಲು ಮಾಡಿದ್ದು ಒಂದು ಕಡೆಯಾದರೆ, ಅದೇ ಪ್ರಾಣೇಶಚಾರ್ಯರಿಗೆ ಶೂದ್ರ ಮಹಿಳೆಯನ್ನು ಲೈಂಗಿಕ ಕ್ರಿಯೆಗೆ ಮಲಗಿಸಿದ್ದು, ಮನುಸ್ಕೃತಿಯನ್ನು ಮತ್ತೆ ಮೇಲುಗೈ ಸಾಧಿಸುವಂತೆ ಮಾಡಿದ್ದು ತೆರೆ ಮರೆಯಲ್ಲಿ ಬ್ರಾಹ್ಮಣವಾದವನ್ನು ಒಪ್ಪಿಕೊಳ್ಳುವ ಸುಳಿವುಗಳು. ಸಂಸ್ಕಾರದಲ್ಲಿ ಒಂದು ರೀತಿಯಲ್ಲಿ ನಿಮ್ಮ ವಾದಗಳು ಬಯಲಾದರೆ, ಹಿಂದ್ ಸ್ವರಾಜ್ ನಲ್ಲಿ ಮತ್ತೊಂದು ರೀತಿಯಲ್ಲಿ ಬಯಲಾಗುತ್ತದೆ.
ಸಾವರ್ಕರ್ ನಂಬಿದ್ದು ಹಿಂದುತ್ವವನ್ನು, ಗಾಂಧಿ ನಂಬಿದ್ದು ಭಗವದ್ಗೀತೆಯನ್ನು, ಭಗವದ್ಗೀತೆ ನಿಂತಿರುವುದೇ ವರ್ಣ ವ್ಯವಸ್ಥೆ ಆಧಾರದ ಮೇಲೆ, ಅದು ನಿಂತಿರುವುದು ಜಾತಿ ವ್ಯವಸ್ಥೆಯ ಜೀವಂತಿಕೆಯಲ್ಲಿ. ಸಾವರ್ಕರ್, ಗಾಂಧಿ ಇವರನ್ನು ಒಪ್ಪಿಕೊಂಡರೆ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡಂತೆ. ಹಾಗಾಗಿ ಅನಂತಮೂರ್ತಿ ಅವರು ಜಾತಿ ವ್ಯವಸ್ಥೆಯನ್ನು ಮೀರುವಲ್ಲಿ ವಿಫಲರಾಗಿದ್ದಾರೆ. ಇರುವ ವ್ಯವಸ್ಥೆಯನ್ನು ಮರು ಮಾತನಾಡದೆ ಒಪ್ಪಿಕೊಂಡು ಮುಂದೆ ನಡೆದಿದ್ದಾರೆ. ಗಾಂಧಿ ಮುಂದುವರಿದ ಭಾಗವಾಗಿ ಸಾವರ್ಕರ್ ಬಂದರೆ. ಇವರಿಬ್ಬರ ಮುಂದುವರಿದ ಭಾಗವಾಗಿ ಯು.ಆರ್.ಅನಂತಮೂರ್ತಿ ಕಾಣುತ್ತಿದ್ದಾರೆ.
“ಗಾಂಧಿಯುಗ ಮುಗಿದು ಸಾವರ್ಕರ್ ಜಯಿಸಿರಬಹುದು ಎಂದು ನನಗೆ ಅನಿಸುತ್ತದೆ. ಇದು ಸದ್ಯಕ್ಕೆ ಮಾತ್ರ ಇರಬಹುದು. ಆದರೆ ಸಾವರ್ಕರ್ ಗೆದ್ದಿದ್ದಾರೆ”. (ಪು.ಸಂ. ೩೨).
ಸಾವರ್ಕರ್ ಮತ್ತು ಗಾಂಧಿ ಇಬ್ಬರನ್ನೂ ಬಿಟ್ಟು ಕೊಡದ ಮತ್ತು ಅವರ ಚಿಂತನೆಯನ್ನೆ ಭಾರತದ ಸಾರ್ವಭೌಮ ಎಂದು ಹೇಳುವ ಅನಂತಮೂರ್ತಿ ಅವರ ನಿಲುವು ಅತ್ಯಂತ ಅಪಾಯಕಾರಿ. ಒಟ್ಟಾರೆಯಾಗಿ ಈ ಕೃತಿಯು ಬ್ರಾಹ್ಮಣವಾದ ಮತ್ತು ರಾಮರಾಜ್ಯಕ್ಕೊಂದು ಪ್ರಣಾಳಿಕೆಯಾಗಿದೆಯೆ ಹೊರತು, ಜೀವಪರ ಚಿಂತನೆ ಮತ್ತು ಈ ದೇಶದ ಬಹುಸಂಖ್ಯಾತ ಶೋಷಿತರ ವಿರೋಧದ ನೆಲೆಯಲ್ಲಿದೆ.
…………………………………….
ಹಾರೋಹಳ್ಳಿ ರವೀಂದ್ರ, ಲೇಖಕರು, ಮೈಸೂರು.