ಅಧ್ಯಕ್ಷ ಭಾಷಣ: ೧೦ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ವಿಜಯಪುರ, ೨೯-೩೦ ಜುಲೈ ೨೦೨೩

ಅಧ್ಯಕ್ಷ ಭಾಷಣ: ೧೦ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ವಿಜಯಪುರ, ೨೯೩೦ ಜುಲೈ ೨೦೨೩


ಪ್ರೊ. ಎಚ್.ಟಿ. ಪೋತೆ

ಹತ್ತನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಮತ್ತು ಅವರ ಎಲ್ಲಾ ಪದಾಧಿಕಾರಿಗಳಿಗೂ ನಾನು ಕೃತಜ್ಞನಾಗಿದ್ದೇನೆ. ಎಲ್ಲಾ ಜಿಲ್ಲೆಗಳ ಅಧ್ಯಕ್ಷರಿಗೂ, ಸದಸ್ಯರಿಗೂ, ಎಲ್ಲಾ ದಲಿತ ಸಮುದಾಯಕ್ಕೂ, ಕನ್ನಡ ಸಾಹಿತ್ಯದ ಬಂಧುಗಳಿಗೂ, ದಲಿತ ಸಂಘರ್ಷ ಸಮಿತಿಯ ಎಲ್ಲಾ ಸಹೋದರರಿಗೂ ನನ್ನ ಜೈ ಭೀಮ ವಂದನೆಗಳು. ನನ್ನ ಹುಟ್ಟೂರಿನಲ್ಲಿ ನಡೆಯುವ ಎರಡು ದಿನದ ಈ ಸಮ್ಮೇಳನದ ಬಂಡಿಯ ಸರ್ವಾಧ್ಯಕ್ಷ ಎಂಬ ನೊಗವನ್ನು ನನ್ನ ಹೆಗಲಿಗೇರಿಸಿ; ಸಾಹಿತ್ಯಕ ಮತ್ತು ಸಾಂಸ್ಕೃತಿಕ ಜವಾಬ್ದಾರಿಯನ್ನು ತಾವು ಹೆಚ್ಚಿಸಿದ್ದೀರಿ. ಇದು ನನ್ನ ಜೀವನದ ಬಹುದೊಡ್ಡ ಜವಾಬ್ದಾರಿ ಎಂದು ನಾನು ತಿಳಿಯುತ್ತೇನೆ.

ಈ ಸಮ್ಮೇಳನವು ನಡೆಯುತ್ತಿರುವುದು ಐತಿಹಾಸಿಕ ನಗರ ವಿಜಯಪುರದಲ್ಲಿ. ಎಪ್ಪತ್ತರ ದಶಕದಲ್ಲಿ ಭಯಂಕರ ಬರಗಾಲ ಬಿದ್ದ ಕಾರಣ, ನನ್ನ ಪುಟ್ಟೂರಾದ ಹಂಜಗಿಯಲ್ಲಿ ಓದುತ್ತಿದ್ದಾಗ ನನ್ನ ಹಾಗೂ ನನ್ನ ಸಹೋದರರನ್ನು ಹೆತ್ತವರು ವಿಜಯಪುರದ ಆಶ್ರಮಶಾಲೆಗೆ ಸೇರಿಸಿದರು. ಸರಕಾರಿ ಆಶ್ರಮ ಶಾಲೆಗಳು ಹೊಟ್ಟೆಯ ಹಸಿವು ತೀರಿಸಿದ್ದಲ್ಲದೆ, ಮೈಮುಚ್ಚಿಕೊಳ್ಳಲು ಬಟ್ಟೆ ನೀಡಿ ಅಕ್ಷರದ ಅರಿವು ಮೂಡಿಸಿದ ನೆಲವಿದು. ಆಗಿನ್ನು ಈ ಕಂದಗಲ್ ಹನುಮಂತರಾಯ ರಂಗಮಂದಿರ ನಿರ್ಮಾಣವಾಗಿರಲಿಲ್ಲ. ಶಾಲೆಗೆ ಬಿಡುವಿದ್ದಾಗ ರಾಣಿ ಬಗೀಚು, ಬಾರಾಕಮಾನ, ಚಾಂದಬಾವಡಿ, ಮುಳ್ಳಗಸಿ, ಅಲ್ಲಾಪೂರ ಓಣಿ ಇಂಥಲ್ಲೆಲ್ಲ ಸ್ನೇಹಿತರು, ಸಹೋದರರೊಂದಿಗೆ ಓಡಾಡಿ ಜರ್ಮನಿ (ವಾಯರ್) ತಂತಿಗಳನ್ನು ಆಯ್ದುಕೊಂಡು, ತೂಕದವನಿಗೆ ಮಾರಿ ಬಂದ ಹಣದಿಂದ, ಬೇಕಾದ ತಿನಿಸುಗಳನ್ನು ಪಡೆದು ತಿಂದ ನೆನಪು, ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಈ ನೆನಪು ಹಸಿರಾಗಿಸಿ ತಾಯಿಯಂತೆ ಸಲುಹಿದವರು ಆಶ್ರಮಶಾಲೆಯ ಶಿಕ್ಷಕರಾದ ಮಲ್ಲಿಕಾರ್ಜುನ ಮಠ, ಗುಡಿಬಾಯಿ ಮೇಡಂ ಹಾಗೂ ಘಂಟಿ ಮಾಸ್ತರ್, ಈ ಮೂವರು ಗುರುಗಳು ನನ್ನನ್ನು ಸದಾ ಕಾಡುತ್ತಿರುತ್ತಾರೆ. ಒಂದು ದಿನ ಹಾಸ್ಟೆಲ್ ಬೊಗೊಣಿಯ ಸಾಂಬಾರಿನಲ್ಲಿ ಹಲ್ಲಿ ಬಿದ್ದು ಬಂದಿತ್ತು, ಅಂದು ಊಟ ಬಡಿಸುವ ಪಾಳಿ ನನ್ನದೇ ಇದ್ದುದರಿಂದ, ಸಾಂಬಾರ್ ಬಕೀಟಿಗೆ ತುಂಬಿಕೊಳ್ಳುವಾಗ ಹಲ್ಲಿ ಕಂಡಿತು. ಪ್ರಾರ್ಥನೆ ಮುಗಿದು ಎಲ್ಲರೂ ಉಣ್ಣುವ ಹೊತ್ತಿಗೆ ಗಾಬರಿಗೊಂಡು ‘ಯಾರೂ ಊಟ ಮಾಡಬೇಡಿ, ಹಲ್ಲಿ ಬಿದ್ದಿದೆ’ ಎಂದು ಜೋರಾಗಿ ಕೂಗಿದ್ದು ಕೇಳಿ ನನ್ನ ವಾರಿಗೆಯ ಎಲ್ಲರೂ ಬೆಚ್ಚಿ ಬಿದ್ದರು. ಅಂಥ ಗಂಡಾಂತರದಿಂದ ಬಚಾವಾದ ನಾನು ಈಗ ಹೀಗೆ ನಿಮ್ಮೆದುರಿಗಿದ್ದೇನೆ.

ವಿಜಯಪುರ ನನ್ನ ಪಾಲಿಗೆ ಅಕ್ಷರದ ಅಕ್ಷಯ ಪಾತ್ರೆ ಇದ್ದ ಹಾಗೆ, ಆಶ್ರಮಶಾಲೆಯ ಓದು ಮುಗಿಸಿದ ಮೇಲೆ ಹಂಜಗಿ, ಇಂಡಿಯ ಸರಕಾರಿ ಶಾಲೆಗಳಲ್ಲಿ, ನಿಂಬಾಳದ ಗುರುದೇವ ರಾನಡೆ ಹೈಸ್ಕೂಲಿನಲ್ಲಿ ಓದಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದೆ. ನಂತರ ಬಿ ಎಲ್ ಡಿ ಇ ಸಂಸ್ಥೆಯ, ಎಸ್‌.ಎಸ್‌. ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದು, ಅದೇ ಶಿಕ್ಷಣ ಸಂಸ್ಥೆಯ ನ್ಯೂ ಆರ್ಟ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಓದಿದ ಭಾಗ್ಯ ನನ್ನದು. ಬಿ ಎಲ್ ಡಿ ಇ ಶಿಕ್ಷಣ ಸಂಸ್ಥೆ ಈಗ ಸ್ವಾಯತ್ತ (ಡೀಮ್) ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ. ಇಂಥದೊಂದು ಹೆಮ್ಮೆಯ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿದ ಸಚಿವರಾದ ಶ್ರೀ ಎಂ.ಬಿ. ಪಾಟೀಲರು ಸಮಾರಂಭದ ಉದ್ಘಾಟಕರಾಗಿ ವೇದಿಕೆ ಮೇಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಆಶ್ರಮ ಶಾಲೆಯಿಂದ ಹಿಡಿದು ಕಾಲೇಜು ಮಟ್ಟದ ಶಿಕ್ಷಣ ಪಡೆದ ಅವಧಿಯಲ್ಲಿ ಊಟ ವಸತಿಗಾಗಿ ಮಾಡಿದ ಸಂಘರ್ಷ ಮರೆಯುವಂತಹದ್ದೇನಲ್ಲ. ತಿಟ್ಟು ತಿರುಗಿ ನೋಡಿದಾಗ…

ನಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಜಯಪುರ ಬರದ ನಾಡು. ಬರದ ನಾಡಿನ ಬವಣೆಯನ್ನು ನೀಗಿಸುವಲ್ಲಿ ಶ್ರಮಿಸಿದ ಶ್ರೀ ಎಂ.ಬಿ. ಪಾಟೀಲರು ಜಿಲ್ಲೆಯ ನೀರಾವರಿ ಯೋಜನೆಗಳನ್ನು ಯಶಸ್ವಿಗೊಳಿಸಿ, ರೈತರ ಭೂಮಿಯನ್ನು ಹಸಿರುಗೊಳಿಸಿದ್ದಾರೆ. ಆ ಮೂಲಕ ಬರದ ನಾಡನ್ನು ನೀರಾವರಿ ನಾಡನ್ನಾಗಿ ಮಾಡಿದ್ದಾರೆ. ದ್ರಾಕ್ಷಿ, ದಾಳಿಂಬೆ, ನಿಂಬೆಹಣ್ಣು ಬೆಳೆಯುವ ಪ್ರಸಿದ್ಧ ಪ್ರದೇಶವಾಗಿರುವುದು ನಮಗೆಲ್ಲ ಸಂತಸದ ಸಂಗತಿಯಾಗಿದೆ. ವಿಶ್ವ ಮಾರುಕಟ್ಟೆಯಲ್ಲಿ ವಿಜಯಪುರದ ದ್ರಾಕ್ಷಿ, ನಿಂಬೆಹಣ್ಣಿಗೆ ಅದರದೇ ಆದ ಮಹತ್ವವಿದೆ. ಈಗ ಜಿಲ್ಲೆಯಲ್ಲಿ ಅನೇಕ ಬದಲಾವಣೆಗಳಾಗಿದೆ. ನೀರಿನ ವಿಷಯ ಬಂದಾಗ, ನಜೀರಸಾಬ್ ಅವರನ್ನು ‘ನೀರಸಾಬ್’ ಎಂದು ನಮ್ಮ ಹಿರಿಯರು ನಾನು ಚಿಕ್ಕವನಾಗಿದ್ದಾಗ ಕರೆಯುತ್ತಿದ್ದುದು ಕೇಳಿದ್ದೇನೆ. ನಜೀರಸಾಬ್‌ ರಾಜ್ಯಕ್ಕೆ ನೀರಸಾಬರಾದರೆ, ಶ್ರೀ ಎಂ.ಬಿ. ಪಾಟೀಲರು ನಮ್ಮ ಜಿಲ್ಲೆಯ ಪಾಲಿಗೆ ನೀರಾವರಿ ಯೋಜನೆಗೆ ಜೀವ ತುಂಬಿ ನಜೀರಸಾಬ್ ಆಗಿದ್ದಾರೆ. ಇನ್ನೊಂದು ವಿಶೇಷವಾದ ಸಂಗತಿಯೆಂದರೆ ದಲಿತ ಸಾಹಿತ್ಯ ಪರಿಷತ್ತು ೨೦೦೮ರಲ್ಲಿ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಿತ್ತು. ಒಂದು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ದಲಿತ ಕವಿ ಡಾ. ಸಿದ್ಧಲಿಂಗಯ್ಯನವರು ಎನ್ನುವುದು ನನಗೆ ಅಭಿಮಾನದ ಸಂಗತಿಯಾಗಿದೆ. ಒಮ್ಮೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ತೊಂದರೆಗಳನ್ನು ಪರಿಹರಿಸಲು ಅಂದಿನ ಕುಲಪತಿಗಳಾದ ಪ್ರೊ. ಚಲುವುರಾಜು ಅವರನ್ನು ಒತ್ತಾಯಿಸಿ ಜೋರಾಗಿ ಮಾತಾಡುತ್ತಿರಬೇಕಾದರೆ, ಅವರ ಎದುರಿಗೆ ಬೇರೆ ಬೇರೆ ಸಮುದಾಯದ ಅಧಿಕಾರಿಗಳು ಕೂತಿದ್ದರು. ನನ್ನಿಂದ ಅಲ್ಲಿದ್ದ ಅಧಿಕಾರಿಗಳಿಗೆ ಮುಜುಗರ ಆಗಬಾರದೆಂಬ ಕಾರಣದಿಂದ ಪ್ರೊ, ಚಲುವುರಾಜು ಅವರು ‘ಹೋಗಯ್ಯಾ,ನೀನು ದಲಿತ ಕವಿ ಸಿದ್ದಲಿಂಗಯ್ಯ ಆಗು ಹೋಗು, ಹೋಗು’ ಎಂದು ಪ್ರೀತಿಯಿಂದ ಗದರಿದ್ದರು. ಅದು ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಈಗಲೂ ಉಳಿದಿದೆ. ಡಾ. ಸಿದ್ಧಲಿಂಗಯ್ಯನವರು ಈಗ ನಮ್ಮೊಂದಿಗಿಲ್ಲ. ಅನ್ನುವುದನ್ನು ನಂಬಲಿಕ್ಕಾಗುತ್ತಿಲ್ಲ. ಅವರು ೨೦೦೮ರಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸ್ಥಳದಲ್ಲಿ ನಾನು ಇಂದು ಸಮ್ಮೇಳನದ ಸರ್ವಾಧ್ಯಕ್ಷನಾದುದು ನನಗೆ ದೊರೆತ ಗೌರವವೆಂದು ಭಾವಿಸಿದ್ದೇನೆ. ಎರಡನೆಯ ಸಮ್ಮೇಳನವು ಬೀದರನಲ್ಲಿ ೨೦೦೯ರ ನವೆಂಬರ್‌ನಲ್ಲಿ ಜರುಗಿತು. ವಿಜಯಪುರ ಮೂಲದವರಾದ, ನಾಡಿನ ಹೆಸರಾಂತ ಲೇಖಕರಾದ ಡಾ. ಅರವಿಂದ ಮಾಲಗತ್ತಿಯವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಈ ಸಮ್ಮೇಳನವನ್ನು ಶ್ರೀ ಮಲ್ಲಿಕಾರ್ಜುನ ಖರ್ಗೆಜೀಯವರು ಉದ್ಘಾಟಿಸಿದ್ದರು ಎಂಬುದು ವಿಶೇಷವಾಗಿದೆ. ಪ್ರಸ್ತುತದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆಜೀಯವರು ಕಾಂಗ್ರೆಸ್‌ ಪಕ್ಷದ ರಾಷ್ಟ್ರಾಧ್ಯಕ್ಷರಾಗಿರುವುದು ನಮಗೊಂದು ಹೆಮ್ಮೆ ಮತ್ತು ಗೌರವದ ಸಂಕೇತ, ಕೊಪ್ಪಳದಲ್ಲಿ ನಡೆದ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು, ಅವರೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಈ ಸಮ್ಮೇಳನವು ಜೂನ್ ೨೦೧೧ರಲ್ಲಿ ನಡೆಯಿತು. ನಾಲ್ಕನೆಯ ಸಮ್ಮೇಳನವು ೨೦೧೨ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಜರುಗಿತು. ಈ ಸಮ್ಮೇಳನದ ಸರ್ವಾಧ್ಯಕ್ಷರಾದವರು ಡಾ. ಚೆನ್ನಣ್ಣ ವಾಲೀಕಾರ, ಖ್ಯಾತ ಬಂಡಾಯ ಲೇಖಕರು, ಅವರು ನನ್ನ ಗುರುಗಳಾಗಿದ್ದರು ಎಂಬುದು ನನಗೆ ಹೆಮ್ಮೆ ತರುವಂತಹದು.

ಇನ್ನು ಐದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜರುಗಿತು. ಈ ಸಮ್ಮೇಳನದ ಸರ್ವಾಧ್ಯಕ್ಷರಾದವರು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಅವರು ಕನ್ನಡ- ಸಂಸ್ಕೃತ ವಿಷಯಗಳಲ್ಲಿ ವಿದ್ವಾಂಸರಾಗಿದ್ದಲ್ಲದೆ ಬೌದ್ಧ, ಜೈನ, ಚಾರ್ವಾಕ, ಲಿಂಗಾಯತ ದರ್ಶನಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದವರು. ಪಾಲಿ, ಪ್ರಾಕೃತ ಬಲ್ಲವರು. ನಮ್ಮ ನಡುವಿನ ಬಹುಶೃತ ವಿದ್ವಾಂಸರು. ಕನ್ನಡ ಜ್ಞಾನಪೀಠ ಎಂದೇ ಕರೆಯುವ ನೃಪತುಂಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಲಿತ ಸಮುದಾಯದ ಸಣ್ಣ ನೆಲೆಯಿಂದ ಬಂದು ಸಂಸ್ಕೃತ ಪಂಡಿತರಾದದ್ದು, ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ಅದಕ್ಕೊಂದು ರೂಪಕೊಟ್ಟಿದ್ದಾರೆ. ಅವರ ಸಾಧನೆ ಅದೊಂದು ಚಾರಿತ್ರಿಕ ಸಂಗತಿಯೇ ಸರಿ. ಅವರು ಇಂದು ಸಮ್ಮೇಳನದ ಆಶಯ ಭಾಷಣ ಮಾಡಿರುವುದು ನನ್ನ ಭಾಗ್ಯವೆಂದು ಭಾವಿಸಿದ್ದೇನೆ. ಆರನೆಯ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ಜಾಜಿ ಮಲ್ಲಿಗೆಯ ಕವಿ ಡಾ. ಸತ್ಯಾನಂದ ಪಾತ್ರೋಟ ಅವರು, ಈ ಸಮ್ಮೇಳನವು ಆಕ್ಟೋಬರ್ ೨೦೧೫ರಲ್ಲಿ ಬಾಗಲಕೋಟೆಯಲ್ಲಿ ಯಶಸ್ವಿಯಾಗಿ ನಡೆಯಿತು, ಏಳನೆಯ ಸಮ್ಮೇಳನವು ದಲಿತ ಯುದ ಸಮ್ಮೇಳನವೆಂಬ ಹೆಸರಿನಲ್ಲಿ ಧಾರವಾಡದಲ್ಲಿ ಜೂನ್ ೨೦೧೮ರಲ್ಲಿ ಜರು ಸಹೋದರಿ ಡಾ. ಸಮತಾ ದೇಶಮಾನೆ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು, ಎಂಟನೆಯ ಸಮ್ಮೇಳನವು ಆನ್‌ಲೈನ್‌ ಮೂಲಕ ಜರುಗಿತು. ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ಇತಿಹಾಸ ತಜ್ಞರಾದ, ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಚಿನ್ನಸ್ವಾಮಿ ಸೋಸಲೆಯವರು, ಒಂಬತ್ತನೆಯ ಸಾಹಿತ್ಯ ಸಮ್ಮೇಳನವು ಗಜಲ್ ಸಾಹಿತ್ಯ ಸಮ್ಮೇಳನವೆಂಬ ಹೆಸರಿನೊಂದಿಗೆ ಗಂಗಾವತಿಯಲ್ಲಿ ಜರುಗಿತು. ಕವಿ ಶ್ರೀ ಅಲ್ಲಾಗಿರಿರಾಜ, ಅವರು ಸರ್ವಾಧ್ಯಕ್ಷರಾಗಿದ್ದರು. ದಲಿತ ಸಾಹಿತ್ಯ ಪರಿಷತ್ತು ಇಂಥ ಕಾರ್ಯ ಮಾಡುವ ಮೂಲಕ ಶೋಷಿತರೆಲ್ಲರನ್ನು ಒಳಗೊಳ್ಳುತ್ತ ಬಂದಿರುವದಕ್ಕೆ ಇದೇ ಸಾಕ್ಷಿಯಾಗಿದೆ. ದಲಿತ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಯಾತ್ರೆ ಬಸವನ ನಾಡು ವಿಜಯಪುರದಿಂದ ಆರಂಭಗೊಂಡು ಮತ್ತೆ ಬಸವನ ನಾಡಿಗೆ ಮರಳಿರುವುದು ನನ್ನಲ್ಲಿ ಸಂತಸವನ್ನು ಹೆಚ್ಚಿಸಿದೆ.

ವಿಜಯಪುರವೆಂಬ ವಿಸ್ಮಯ ಗೊಮ್ಮಟದ ನಾಡಿನ ಇತಿಹಾಸ ನಿಜವಾಗಲೂ ಹೆಮ್ಮೆ ಪಡುವಂತಹದ್ದು, ವಿಜಯಪುರವು ಆದಿಲ್ ಶಾಹಿ, ನಿಜಾಮಶಾಹಿ ಪದ್ಧತಿಯಲ್ಲಿ ಆಡಳಿತಕ್ಕೊಳಪಟ್ಟ ಪ್ರದೇಶ, ಅದರಲ್ಲು ವಿಜಯಪುರ ಜಿಲ್ಲೆ ಕನ್ನಡ ನಾಡಿನ ಮುಕುಟವಿದ್ದಂತೆ, ವಿಶ್ವ ಪ್ರಸಿದ್ಧಿಯ ಗೋಳಗುಮ್ಮಟವನ್ನು ಅದು ಧರಿಸಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಭೀಮಾ ಹಾಗೂ ಡೋಣಿ ಹೀಗೆ ಐದು ನದಿಗಳನ್ನು ಹೊಂದಿದ್ದರಿಂದ ಪಂಚ ನದಿಗಳ ಬೀಡು, ಕರ್ನಾಟಕದ ಪಂಜಾಬ ಎಂತಲೂ ಗುರುತಿಸಿಕೊಂಡಿದೆ. ಪೌರಾಣಿಕವಾಗಿ, ಐತಿಹಾಸಿಕವಾಗಿಯೂ ವಿಜಯಪುರ ಜಿಲ್ಲೆ ಖ್ಯಾತಿಯನ್ನು ಪಡೆದಿದೆ. ಇಂಡಿ ತಾಲ್ಲೂಕಿನ ಭೀಮಾನದಿ ದಡದ ಮೇಲಿರುವ ಧೂಳಖೇಡ ಗ್ರಾಮವು ದಕ್ಷಯಜ್ಞದ ಕಥೆಯನ್ನು ಹೇಳುತ್ತದೆ. ಪ್ರಾಚೀನ ಹಿಪ್ಪಲಿ-ಹಿಪ್ಪರಗಿಯಲ್ಲಿ ಒಂದು ದೇವಸ್ಥಾನವಿದ್ದು, ಅದನ್ನು ಜಮದಗ್ನಿ ಕಟ್ಟಿಸಿದ್ದು ಎಂದು ಹೇಳುತ್ತಾರೆ. ಸೀತಿಮನಿ ಸ್ಥಳವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಂಡಿ ತಾಲ್ಲೂಕಿನ ಸಾಲೋಟಗಿಯಲ್ಲಿ (ಪಾವಟ್ಟಿಗೆ) ಎ೦ಟನೆಯ ಶತಮಾನದಷ್ಟು ಹಿಂದೆಯೇ ವಿದ್ಯಾರ್ಥಿಗಳು ವಾಸವಿರುವ ಒಂದು ಬೃಹತ್ ಮಹಾವಿದ್ಯಾಲಯವನ್ನು ರಾಷ್ಟ್ರಕೂಟ ಮಂತ್ರಿಯೊಬ್ಬನು ಕಟ್ಟಿಸಿದ್ದನೆನ್ನುವುದು ಐತಿಹಾಸಿಕ ಸತ್ಯಸಂಗತಿಯಾಗಿದೆ. ಕನ್ನಡ ಸಾಹಿತ್ಯದ ಮೇರು ವ್ಯಕ್ತಿತ್ವ ಬಿ.ಎಂ.ಶ್ರೀಯವರನ್ನು ವಿಜಯಪುರಕ್ಕೆ ಕರೆತಂದವರು, ಗೋಳಗುಮ್ಮಟ ತೋರಿಸುವುದಾಗಿ ವಿನಂತಿಸುತ್ತಾರೆ. ಆಗ ಅವರು ‘ನೋಡಿ, ನಾನು ಅದಕ್ಕಿಂತ ಮೊದಲು ಇನ್ನೊಂದು ದೊಡ್ಡ ಗುಮ್ಮಟ ನೋಡಬೇಕಾಗಿದೆ’ ಎಂದು ಹೇಳಿದಾಗ ಆತಿಥ್ಯ ವಹಿಸಿದವರಿಗೆ ‘ಇದೇನಿದು ಇನ್ನೊಂದು. ಗುಮ್ಮಟ ಯಾವುದು?’ ಎಂದು ಆಶ್ಚರ್ಯದಿಂದ ಬಿ.ಎಂ.ಶ್ರೀ ಯವರನ್ನು ನೋಡಿದರು. ನಾನು ನೋಡಬೇಕಾಗಿರುವುದು ‘ವಚನಗುಮ್ಮಟ ಫಗು ಹಳಕಟ್ಟಿಯವರನ್ನು’ ಎಂದು ಹೇಳಿದರಂತೆ. ಇದು ವಿಜಯಪುರದ ವೈಶಿಷ್ಟ್ಯ.

‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’ ಎಂದು ಹೇಳಿ ಉಚ್ಚಕುಲದವರ ಬಡಿವಾರಕ್ಕೆ ತಕ್ಕ ಉತ್ತರವನ್ನು ನೀಡಿ ವಿಶ್ವಪಥವನ್ನರುಹಿದ ಬಸವಣ್ಣನ ಜನ್ಮಸ್ಥಳ ವಿಜಯಪುರ, ನುಲಿಯ ಚಂದಯ್ಯ, ಮಡಿವಾಳ ಮಾಚಿದೇವ, ಹಾವಿನಾಳ ಕಲ್ಲಯ್ಯನಂತಹ ಅನೇಕ ವಚನಕಾರರನ್ನು ತನ್ನ ಮುಡಿಗೇರಿಸಿದ ನೆಲವೆನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಆಧುನಿಕ ಕಾಲದ ಕೌಜಲಗಿ ಶ್ರೀನಿವಾಸರಾಯರು, ಕಾಕಾ ಕಾರ್ಖಾನೀಸರು, ಕೌಜಲಗಿ ಹನುಮಂತ ರಾಯರು, ಕಂದಗಲ್ ಹನುಮತರಾಯರು ಚಿಕ್ಕೋಡಿ ತಮ್ಮಣ್ಣ, ಅಂಬಲಿ ದುಬೆಯವರು, ಜಯರಾಮಾಚಾರ್ಯರು, ಮೊಹರೆ ಹನುಂತರಾಯರು, ನಂದಿಗನೂರು ಸಿದ್ಧರಾಮಪ್ಪ, ಹರ್ಡೆಕರ ಮಂಜಪ್ಪನವರು, ಕಂಠಿಯವರು. ಜಂಗಿನ ಮುರಗೆಯ್ಯನವರು, ತತ್ವಜ್ಞಾನಿ ಗುರುದೇವ ರಾನಡೆಯವರು ಬಿ.ಡಿ. ಜತ್ತಿಯವರು, ಬಂಥನಾಳ ಶಿವಯೋಗಿಗಳು, ಸುಗಂಧಿಯವರು, ನೇತ್ರದಾನಿ ಮೋದಿಯವರು, ಶ್ರೀ ಸಿದ್ದೇಶ್ವರ ಸ್ವಾಮಿಗಳು, ಬಿ.ಎಂ. ಪಾಟೀಲರು, ಬಾಬಾ ಸಾಹೇಬರೊಂದಿಗೆ ಬೌದ್ಧಧರ್ಮ ಸ್ವೀಕರಿಸಿದ ಸಿದ್ಧಾರ್ಥ ಅರಕೇರಿಯವರು, ಬಾಬಾಸಾಹೇಬ ಪಕ್ಷದಿಂದ ಶಾಸಕರಾಗಿದ್ದ ಕಾಳೆಯವರು, ಅಂಬೇಡ್ಕರ್ ಅವರನ್ನು ಭೇಟಿ ಮಾಡಿದ ಎಲ್.ಆರ್. ನಾಯಕ, ಎಚ್.ಆರ್. ಸಿಂಧೆ ಎಲ್ಲರೂ ವಿಜಯಪುರಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಾಹಿತ್ಯದ ಬೇರುಗಳು

ಕನ್ನಡ ಆಧುನಿಕ ಸಾಹಿತ್ಯದ ಶಕ್ತಿಗಳಾದ ಮಧುರಚೆನ್ನರು ಹಾಗೂ ಅವರ ಗೆಳೆಯರ ಗುಂಪಿನವರಾದ ಪಿ. ಧೂಲಾಸಾಹೇಬ್‌, ರೇವಪ್ಪ ಕಾಪೆ, ಸಿಂಪಿ ಲಿಂಗಣ್ಣ ಇವರ ಸಾಧನೆ ನಿಜಕ್ಕೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೊಂದು ಬಹುದೊಡ್ಡ ಕಿರೀಟ, ಕಳೆದ ಶತಮಾನದ ಆರಂಭದಲ್ಲಿ ಹಲಸಂಗಿ ಗೆಳೆಯರು ಕೈಕೊಂಡ ನಾಡುನುಡಿಯ ಸೇವೆ ಗಮನಾರ್ಹವಾಗಿದೆ. ಅವರ ಕಾರ್ಯಚಟುವಟಿಕೆ, ಸಾಹಿತ್ಯ-ಸಾಧನೆ, ಸಿದ್ಧಿಗಳು ಅನನ್ಯವಾದವು. ನವೋದಯ ಸಾಹಿತ್ಯದ ಪ್ರಾರಂಭದ ಘಟ್ಟದಲ್ಲಿ ಹಲಸಂಗಿ ಗೆಳೆಯರು ಹಳ್ಳಿಯ ಪರಿಸರದಲ್ಲಿ ಇದ್ದುಕೊಂಡು ತಮ್ಮದೇ ಆದ ರೀತಿಯಲ್ಲಿ ಸಾಹಿತ್ಯ ಕೃಷಿಗೆ ತೊಡಗಿದ್ದು ವಿಶೇಷವಾಗಿದೆ. ಮೂಲತಃ ಕವಿಗಳಾದ ಅವರೆಲ್ಲ ಸೃಜನಶೀಲ ಸಾಹಿತ್ಯದ ಜೊತೆಜೊತೆಗೆ ಜನಪದ ಸಾಹಿತ್ಯ, ನಾಡು-ನುಡಿಯ ಕಾರ್ಯದಲ್ಲಿಯೂ ಅವರು ವೈಯಕ್ತಿಕವಾಗಿ, ಸಾಂಘಿಕವಾಗಿ ಮಾಡಿದ ಕಾರ್ಯ ಅವಿಸ್ಮರಣೀಯವಾಗಿದೆ.

ಮುಲ್ಕಿ ಪರೀಕ್ಷೆವರೆಗೆ ಓದಿದ ಈ ಗೆಳೆಯರ ತಿಳಿವಿನ ಪರಿಧಿ-ವಿಸ್ತಾರ ಆಶ್ಚರ್ಯ ತರಿಸುವಂಥದ್ದು, ಯಾವ ಸೌಕರ್ಯಗಳೂ ಇಲ್ಲದ ಹಲಸಂಗಿಯಂಥ ಸಣ್ಣ ಹಳ್ಳಿಯಲ್ಲಿದ್ದುಕೊಂಡೇ ವೇದ ಉಪನಿಷತ್ತು, ಭಾರತೀಯ-ಪಾಶ್ಚಾತ್ಯ ತತ್ವಜ್ಞಾನ, ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಶ್ರೀ ಮಾತಾರವಿಂದರ ವಿಚಾರಧಾರೆ, ಕಲೆಸಾಹಿತ್ಯ ವನ್ನೆಲ್ಲಾ ಅವರು ಚೆನ್ನಾಗಿ ತಿಳಿದಿದ್ದರು. ಸಮಕಾಲೀನ ಕವಿ-ಸಾಹಿತಿಗಳಾದ ದ.ರಾ.ಬೇಂದ್ರೆ, ಶಿವರಾಮ ಕಾರಂತ, ವಿ.ಕೃ ಗೋಕಾಕ, ರಂ.ಶ್ರೀ ಮುಗಳಿ, ಸ.ಸ. ಮಾಳವಾಡ ಮೊದಲಾದವರೊಂದಿಗೆ ಗಾಢ ಸ್ನೇಹ-ಸಂಬಂಧ ಹೊಂದಿದ್ದರು. ೧೯೨೨ರಷ್ಟು ಹಿಂದೆಯೇ ಹಲಸಂಗಿಯಲ್ಲಿ ಶಾರದಾ ವಾಚನಾಲಯ ಸ್ಥಾಪಿಸಿ ‘ಮೊಗ್ಗು’ ಎಂಬ ಕೈಬರಹ ಪತ್ರಿಕೆ ಹೊರಡಿಸಿದ್ದರು. ಅದರಲ್ಲಿ ಹಲಸಂಗಿ ಗೆಳೆಯರೆಲ್ಲರ ಕವಿತೆ, ಬರಹ- ಚಿತ್ರ ದಾಖಲುಗೊಂಡಿವೆ. ಜನಪದ ಸಾಹಿತ್ಯ ಗಾಂಪರ ಸಾಹಿತ್ಯವೆನ್ನುತ್ತಿದ್ದ ಕಾಲದಲ್ಲಿ ಹಲಸಂಗಿ ಗೆಳೆಯರಾದ ಮಧುರಚೆನ್ನ, ಸಿಂಪಿ ಲಿಂಗಣ್ಣ, ಪಿ.ಧೂಲಾ ಸಾಹೇಬ ಮತ್ತು ಕಾಪಸೆ ರೇವಪ್ಪನವರು ಅದರ ಸಂಗ್ರಹ – ಸಂಪಾದನೆಯನ್ನು ಶ್ರದ್ಧೆಯಿಂದ ಮಾಡಿ ಪಂಡಿತಮಾನ್ಯರನ್ನು ಬೆರಗುಗೊಳಿಸಿದರು. ಜನಪದ ಸಾಹಿತ್ಯಕ್ಕೊಂದು ಸ್ಥಿರವಾದ ನೆಲೆಗಟ್ಟನ್ನು ಒದಗಿಸಿಕೊಟ್ಟರು. ಜನಪದ ಸಾಹಿತ್ಯ ಸಂಗ್ರಹ- ಸಂಪಾದನೆಯ ಪ್ರಥಮ ಘಟ್ಟದಲ್ಲಿ ಹಲಸಂಗಿ ಗೆಳೆಯರು ಪ್ರಕಟಿಸಿದ ಗರತಿಯ ಹಾಡು, ಜೀವನ ಸಂಗೀತ, ಮಲ್ಲಿಗೆ ದಂಡೆ ಸಂಕಲನಗಳು ಇಂದಿಗೂ ತಮ್ಮ ಶ್ರೇಷ್ಠತೆಯ ಒಡೆತನವನ್ನು ಉಳಿಸಿಕೊಂಡು ಬಂದಿವೆ. ಇಂತಹ ಅಪರೂಪದ ವ್ಯಕ್ತಿ ವಿಶಿಷ್ಟತೆಯುಳ್ಳ ಹಲಸಂಗಿ ಗೆಳೆಯರ ಕುರಿತು ಕರ್ನಾಟಕ ಘನಸರಕಾರ ವಿಜಯಪುರದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನವನ್ನು ಪ್ರತಿಷ್ಠಾ ಪಿಸಿದೆ. ಇಷ್ಟಕ್ಕೆ ನಾವು ತೃಪ್ತರಾಗಬೇಕಿಲ್ಲ. ಇವರು ಮಾಡಿದ್ದು, ವಿಶ್ವಶ್ರೇಷ್ಠ ಕೆಲಸ, ಇದು ಜಗತ್ತಿನ ಜಾನಪದ ಕ್ಷೇತ್ರಕ್ಕೆ ಬಹುಪಯೋಗಿ ಕಾಣಿಕೆಯಾಗಿದೆ. ಆದ್ದರಿಂದ ಇಂಡಿಯಲ್ಲಿ ಇವರ ಹೆಸರಿನಲ್ಲಿ ಸಂಶೋಧನ ಸಂಸ್ಥೆ ಪ್ರಾರಂಭವಾಗಬೇಕು, ಹಲಸಂಗಿಯನ್ನು ನವೋದಯದ ಕೇಂದ್ರ ಘೋಷಿಸಬೇಕು ಎನ್ನುವುದರತ್ತ ನನ್ನ ಒತ್ತಾಯವಾಗಿದೆ.

 ಸಾಹಿತ್ಯದ ಚಿಗುರುಗಳು

ಆಧುನಿಕ ವಚನ ಸಾಹಿತ್ಯದಲ್ಲಿ ಕೃಷಿ ಮಾಡಿದವರಲ್ಲಿ ಕುಮಾರ ಕಕ್ಕಯ್ಯ ಪೋಳ ಪ್ರಮುಖರು. ಚಾತುರ್ವಣ್ರ ಧರ್ಮ ದರ್ಶನದಂತಹ ಮಹತ್ವ ಕೃತಿ ನೀಡಿದ ಶ್ರೇಷ್ಠ ವಿಚಾರವಾದಿ, ಸಂಶೋಧಕರಾದ ಎಂ.ಎಂ. ಕಲಬುರಗಿಯವರನ್ನು ನೆನೆದಾಗ ಕಳ್ಳು ಮಿಡುಕುತ್ತದೆ. ವಿಜಯಪುರದ ಪ್ರತಿಭೆಯಾಗಿ ಅವರು ನಾಡಿಗೆ ನೀಡಿದ ಕೊಡುಗೆ ಅಪಾರವಾದುದು. ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಎಂ.ಎಂ. ಕಲಬುರಗಿಯವರು ಉದ್ಘಾಟಿಸಿ ಪ್ರಖರವಾಗಿ ಮಾತಾಡಿದ್ದರು. ಅವರ ಮಾತುಗಳು ನನ್ನನ್ನು ಪ್ರಭಾವಿತನನ್ನಾಗಿ ಮಾಡಿದ್ದರಿಂದ ‘ಏನ್ ಸರ್, ಈ ಮಾತುಗಳನ್ನು ಬಹಳ ಹಿಂದೆ ಹೇಳಬೇಕಾಗಿತ್ತು.’ ಎಂದಾಗ “ಎಲ್ಲದಕ್ಕೂ ಕಾಲ ಕೂಡಿ ಬರಬೇಕೆಂದು ಹೇಳಿ ನನ್ನನ್ನು ಸಮಾಧಾನಿಸಿದ್ದರು. ಅಂಥವರು ಹಂತಕರ ಗುಂಡಿಗೆ ಬಲಿಯಾದದ್ದು ದುಃಖದ ಸಂಗತಿಯೇ ಸರಿ, ಗುರುಲಿಂಗ ಕಾಪ್ಪೆಯವರು, ಅರವಿಂದ ಮಾಲಗತ್ತಿ, ಸತ್ಯಾನಂದ ಪಾತ್ರೋಟ, ಸಿದ್ಧನಗೌಡ ಪಾಟೀಲ, ಎಚ್‌.ಟಿ. ಪೋತೆ, ಅರ್ಜುನ ಗೊಳಸಂಗಿ, ಹರಿಲಾಲ ಪವಾರ್, ದೊಡ್ಡಣ್ಣ ಭಜಂತ್ರಿ, ಎಸ್‌.ಕೆ. ಕೊಪ್ಪ ಎಂ.ಎಸ್. ಮದಭಾವಿ, ಮಲ್ಲಿಕಾರ್ಜುನ ಮೇತ್ರಿ, ಎಸ್‌.ಐ. ಮೇತ್ರಿ, ಇಂದುಮತಿ ಲಮಾಣಿ, ಸುಜಾತಾ ಚಲವಾದಿ, ಪೂರ್ಣಿಮಾ ಹೋಳಿನ್ ಹೀಗೆ ಅನೇಕರು ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಮಕ್ಕಳ ಸಾಹಿತ್ಯ ರಚನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಶಂಗು ಬಿರಾದಾರ, ಶಿಶು ಸಂಗಮೇಶ, ಕಂಚ್ಯಾಣಿ ಶರಣಪ್ಪ, ಏ.ಕೆ. ರಾಮೇಶ್ವರ ಮುಂತಾದವರನ್ನು ಗೌರವದಿಂದ ನೆನೆಯಲೇಬೇಕು.

ಕನ್ನಡದ ದಲಿತ ಸಾಹಿತ್ಯ ಬೆಳೆದದ್ದು ಹೀಗೆ….

ಕನ್ನಡದ ದಲಿತ ಸಾಹಿತ್ಯವು ರೂಪು ಪಡೆದಿರುವುದು ಸಾಹಿತ್ಯಕ ಭಾಷೆಯ ಆವರಣದಲ್ಲೇ, ಕನ್ನಡದ ದಲಿತ ಜಗತ್ತನ್ನು ತಿಳಿಯಲು ಹಲವು ದಾರಿಗಳಿರುವುದು ಸರಿಯಷ್ಟೆ. ಅವುಗಳಲ್ಲಿ ನಾನು ಮೊದಲು ತಿಳಿಸಿದಂತೆ ಸಾಹಿತ್ಯಕ ನೆಲೆಯ ಪೂರ್ವಾಪರಗಳನ್ನು ಈಗ ಪರಿಶೀಲಿಸಬಹುದು. ಕನ್ನಡದ ದಲಿತ ಸಾಹಿತ್ಯವು ಭಾರತೀಯ ಸಂದರ್ಭದಲ್ಲಿ ಸಮೃದ್ಧ ನೆಲೆಯನ್ನು ಪಡೆದಿದೆ. ಕಾವ್ಯ, ಕಥೆ, ಕಾದಂಬರಿ, ಆತ್ಮಕಥೆ, ನಾಟಕ-ಈ ಪ್ರಕಾರಗಳಲ್ಲಿ ಈವರೆಗೂ ಪ್ರಕಟವಾಗಿರುವ ಬರೆಹಗಳು ನನ್ನ ಮಟ್ಟಿಗೆ ಹೇಳುವುದಾದರೆ ಸೃಜನಶೀಲತೆಯ ಉತ್ಕೃಷ್ಟತೆಯನ್ನು ಪಡೆದಿವೆ. ಬಿ. ಶ್ಯಾಮಸುಂದರ್, ಕುಮಾರ್ ಕಕ್ಕಯ್ಯ ಪೋಳ, ಜಿ. ವೆಂಕಟಯ್ಯ, ಸೋಸಲೆ ಸಿದ್ದಪ್ಪ, ಬೀದರಿನ ಗವಾಯಿಗಳು, ಎನ್. ನರಸಿಂಹಯ್ಯ ಇವರು ಮೊದಲ ತಲೆಮಾರಿನ ದಲಿತ ಲೇಖಕರರಾಗಿ ಕನ್ನಡ ದಲಿತ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದುದು.

ಆಧುನಿಕ ಕಾವ್ಯಕ್ಷೇತ್ರದಲ್ಲಿ ಡಾ. ಸಿದ್ಧಲಿಂಗಯ್ಯ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ. ಅರವಿಂದ ಮಾಲಗತ್ತಿ, ಡಾ. ಚೆನ್ನಣ್ಣ ವಾಲೀಕಾರ, ಡಾ. ಕೆ.ಬಿ. ಸಿದ್ದಯ್ಯ, ಗೋವಿಂದಯ್ಯ, ಡಾ. ಸತ್ಯಾನಂದ ಪಾತ್ರೋಟ, ಎನ್.ಕೆ. ಹನುಮಂತಯ್ಯ, ಡಾ. ಎಲ್. ಹನುಮಂತಯ್ಯ, ಡಾ. ವಿ. ಮುನಿವೆಂಕಟಪ್ಪ, ಸುಬ್ಬು ಹೊಲೆಯಾರ್, ಸುಕನ್ಯಾ ಮಾರುತಿ, ಮೋಹನ ನಾಗಮ್ಮನವರ, ಹೊಸೂರು ಮುನಿಶಾಮಪ್ಪ, ಶಂಕನಪುರ ಮಹಾದೇವ, ಎಂ.ಎಸ್. ಶೇಖರ್, ಬಿ.ಟಿ. ಲಲಿತಾ ನಾಯಕ್, ದು. ಸರಸ್ವತಿ, ಲಕ್ಷ್ಮೀಪತಿ ಕೋಲಾರ, ಟಿ. ಯಲ್ಲಪ್ಪ, ಲಕ್ಕೂರು ಆನಂದ, ಎಚ್. ಲಕ್ಷ್ಮೀನಾರಾಯಣಸ್ವಾಮಿ, ಡಾ. ಸತ್ಯಮಂಗಲ ಮಹಾದೇವ, ಡಾ. ಜಯದೇವಿ ಗಾಯಕವಾಡ, ಡಾ. ಅನಸೂಯಾ ಕಾಂಬಳೆ, ಡಾ. ಬಿ.ಯು. ಸುಮಾ, ಮುಂತಾದವರು ರಚಿಸಿರುವ ಕಾವ್ಯ ಸಮೃದ್ಧಿಯು ಆಕೃತಿ ಮತ್ತು ಆಶಯದಿಂದಲೂ ಭಾಷೆ-ವೈಚಾರಿಕ ಚಿಂತನೆಗಳಿಂದಲೂ ಕಲಾಕೃತಿಯ ದೃಷ್ಟಿ ಯಿಂದಲೂ ವಿಶಿಷ್ಟ ಸ್ಥಾನವನ್ನು ದಲಿತ ಸಾಹಿತ್ಯ ಚರಿತ್ರೆಯಲ್ಲಿ ಪಡೆದಿದೆ. ಇಲ್ಲಿಯ ಕವಿಗಳು ಮುಂದಿನ ಅನೇಕ ಯುವಕವಿಗಳಿಗೆ ಸ್ಪೂರ್ತಿಸ್ಥಾನವನ್ನು ಒದಗಿಸುತ್ತಿದ್ದಾರೆ.

ಈಗ ಕಾವ್ಯ ರಚಿಸುತ್ತಿರುವ ನೂರಾರು ಕವಿಗಳು ತಳವರ್ಗಸಮುದಾಯದ ಆಶೋತ್ತರಗಳನ್ನೂ ಜಾಗತಿಕ ನೆಲೆಯ ಪರಿವೇಶಗಳನ್ನೂ ಒಟ್ಟಿಗೆ ನೋಡುತ್ತಿದ್ದಾರೆ. ಬೇರೆ ಬೇರೆ ತಳವರ್ಗದ ಸಮುದಾಯಗಳಿಂದ ಬಂದಿರುವ ಕವಿಗಳ ರಚನೆಯಲ್ಲಿ ವಿಭಿನ್ನ ಧ್ವನಿಗಳನ್ನು ನಾವು ಗುರುತಿಸಬಹುದಾಗಿದೆ. ಆದರೆ, ಇವರೆಲ್ಲರ ಕಾವ್ಯದ ಹಿಂದಿರುವ ಜೀವಂತ ರೂಪಕ ಡಾ. ಬಾಬಾಸಾಹೇಬ ಅಂಬೇಡ್ಕರ್. ಅವರ ತಾತ್ವಿಕತೆಯೇ ಹಿನ್ನೆಲೆ ಆಗಿರುವುದನ್ನು ನಾವು ಮರೆಯುವ ಹಾಗಿಲ್ಲ. ಪ್ರತಿಯೊಬ್ಬ ಕವಿಯ ಹಿಂದಿನ ತಾತ್ವಿಕ ಪ್ರೇರಣೆ ಅಂಬೇಡ್ಕರ್ ಆಗಿದ್ದಾರೆ. ಭಾರತೀಯ ದಲಿತ ಸಾಹಿತ್ಯ ಸಂದರ್ಭವನ್ನು ನಾವು ಗಮನಿಸಿದರೆ ಅಲ್ಲೂ ಕೂಡ ಬಾಬಾ ಸಾಹೇಬ ಅಂಬೇಡ್ಕರ್ ಅವರ ನಿಲುವುಗಳು ಸ್ಥಳೀಯ ದೇಶೀ ಪದ್ಧತಿಯ ಮೂಲಕ ಬೆಳೆದ ಪ್ರಗತಿಪರ ನಿಲುವುಗಳತ್ತ ಒಡಗೂಡಿರುವುದನ್ನು ನಾವು ಕಾಣಬಹುದಾಗಿದೆ. ಇಂಥದೊಂದು ಅಕ್ಷರಸಂಸ್ಕೃತಿಯ ಬೆರಗು ಮಡಿವಂತಿಕೆಯಿಂದ ಹೊರಬರಲು ಕಾರಣರಾದವರು ಡಾ. ಬಿ.ಆರ್. ಅಂಬೇಡ್ಕರ್. ಅವರು ಬರದೇ ಹೋಗಿದ್ದರೆ ಇಂಥ ಸಮಾವೇಶಗಳು ಜರುಗಲು ಸಾಧ್ಯವಿರಲಿಲ್ಲ ಎಂಬುದು ನಾವೆಲ್ಲ ಒಪ್ಪಿಕೊಳ್ಳಲೇಬೇಕಾಗಿದೆ.

ಕಾವ್ಯಪ್ರಕಾರದಲ್ಲಿ ಕಾಣಿಸುವ ಇಂಥ ಹೆದ್ದೆರೆಯು ಕಥೆ, ಕಾದಂಬರಿಗಳ ಪ್ರಕಾರದಲ್ಲೂ ಅಷ್ಟೇ ಪ್ರಾಮುಖ್ಯವನ್ನು ಪಡೆದಿರುವ ಅಂಶವನ್ನು ಕಳೆದ ಅರ್ಧಶತಮಾನದ ಕಥನಪ್ರಪಂಚದಲ್ಲಿ ನಾವು ಕಾಣಬಹುದಾಗಿದೆ. ಕಥನಪ್ರಕಾರದ ಮಹಾರೂಪಕ ದೇವನೂರ ಮಹಾದೇವ. ಇವರ ಒಡಲಾಳ, ದ್ಯಾವನೂರು, ಕುಸುಮಬಾಲೆ ಜೊತೆಗೆ ‘ಎದೆಗೆ ಬಿದ್ದ ಅಕ್ಷರ’ ಕೃತಿಗಳು ಭಾರತೀಯ ಸಾಹಿತ್ಯದಲ್ಲಿಯೇ ಅನರ್ಥ್ಯ ರತ್ನಗಳಾಗಿವೆ. ಈ ಅಂಶವನ್ನು ಕನ್ನಡ ವಿಮರ್ಶಾಲೋಕವು ಈಗಾಗಲೇ ಗುರುತಿಸಿದೆ. ಇವರ ಜತೆಗೆ ಕಥನಕ್ಷೇತ್ರದಲ್ಲಿ ಮುಳ್ಳೂರು ನಾಗರಾಜ, ಡಾ. ಮ.ನ ಜವರಯ್ಯ, ಡಾ. ಚೆನ್ನಣ್ಣ ವಾಲೀಕಾರ, ಡಾ. ಮೊಗಳ್ಳಿ ಗಣೇಶ್‌, ಡಾ. ಎಚ್‌.ಟಿ. ಪೋತೆ, ಲಕ್ಷ್ಮಣ್‌, ಡಾ. ರಂಗರಾಜ ವನದುರ್ಗ, ಡಾ. ಹೆಬ್ಬಾಲೆ ನಾಗೇಶ, ಉಮೇಶ ತಿಮ್ಮಾಪುರ ಈ ಸಾಲು ದೀಪಕರ ಪಟ್ಟಿ ಬೆಳೆಯುತ್ತದೆ. ತಮ್ಮ ತಮ್ಮ ಸಮುದಾಯದ ಭಾಷಿಕ ಆವರಣದ ಮೂಲಕ ದಲಿತ ಕಥನಲೋಕದ ನಿರ್ಮಾಣವನ್ನು ಇವರು ಮಾಡುತ್ತಿದ್ದಾರೆ. ಈಚೆಗೆ ಬರೆಯುತ್ತಿರುವ ನೂರಾರು ಕಥನಕಾರರು ರಚಿಸಿರುವ ಕಥೆ, ಕಾದಂಬರಿಗಳನ್ನು ಹೆಸರಿಸಲು ಇದು ಸ್ಥಳವಲ್ಲ. ಆದರೆ, ಹೆಸರಿಸದ ನೂರಾರು ಕಥನಕಾರರು `ಕಥನಕ್ರಮದ ಪ್ರತಿಭಾಸಂಪತ್ತನ್ನು ದಲಿತ ಸಾಂಸ್ಕೃತಿಕ ಲೋಕದಿಂದಲೇ ಅನನ್ಯವಾಗಿ ಮೆರೆದು ಉತ್ತರ ಮುಖಿಗಳಾಗುತ್ತಿದ್ದಾರೆ.

ಆತ್ಮಕತೆಯ ಪ್ರಕಾರದಲ್ಲಿ ಮಹಾರಾಷ್ಟ್ರದ ಆತ್ಮಕಥೆಗಳನ್ನು ನೆನಪಿಸುವ ಮಹತ್ವದ ಕೃತಿಗಳು ಕನ್ನಡದಲ್ಲೂ ಪ್ರಕಟವಾಗಿವೆ. ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ದಲಿತರಿಂದ ಒಡಮಾಡಿದ ಅಮೂಲ್ಯ ಸೇರ್ಪಡೆಯಾಗಿದೆ. ಡಾ. ಸಿದ್ದಲಿಂಗಯ್ಯನವರ ‘ಊರುಕೇರಿ’, ಡಾ. ಅರವಿಂದ ಮಾಲಗತ್ತಿ ಅವರ `ಗೌವರ್ನಮೆಂಟ್’ ಬ್ರಾಹ್ಮಣ’, ಲಕ್ಷ್ಮಣ್ ಅವರ ‘ಸಂಬೋಳಿ’, ಮುಳ್ಳೂರ ನಾಗರಾಜ ಅವರ ‘ಮಾಮಠದ ಮೇಲೊಂದು ಕೋಗಿಲೆ’, ಎಲ್. ಹನುಮಂತಯ್ಯನವರ “ಒಂಟಿ ಕಾಲಿನ ನಡಿಗೆ’ ದು. ಸರಸ್ವತಿ ಅವರ ‘ಈಗೇನ್’ ಮಾಡೀರಿ’, ತುಂಬಾಡಿ ರಾಮಯ್ಯ ಅವರ ‘ಮಣೆಗಾರ’, ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ನೆನಪಿನ ಹಕ್ಕಿಯನ್ನು ಹಾರಲು ಬಿಟ್ಟು’, ಡಾ. ಎಚ್‌.ಟಿ. ಪೋತೆಯವರ ‘ಬಯಲೆಂಬೊ ಬಯಲು ಬಯೋಪಿಕ್’ ಕಾದಂಬರಿ, ಬಿ.ಟಿ. ಲಲಿತಾ ನಾಯಕ ಅವರ “ನಮ್ಮ ರೂಫಿ’, ಎಸ್.ಪಿ ಸುಳ್ಳದ ಅವರ ‘ಅಸ್ಪೃಶ್ಯನ ಆತ್ಮಕಥನ’ ಸಮತಾ ದೇಶಮಾನ ಅವರ ‘ಮಾತಂಗಿ ದೀವಟಿಗೆ’ ಹಣಮಂತರಾವ್ ದೊಡ್ಡಮನಿ ಅವರ ‘ಪಂಚಮ’ ಮುಂತಾದವು ಜೀವಂತ ಅನುಭವಗಳಿಂದ ನಮ್ಮ ಮನಸ್ಸನ್ನು ಕಲಕುತ್ತವೆ. ನಾಟಕಪ್ರಕಾರದಲ್ಲಿ ತೊ. ನಂಜುಂಡಸ್ವಾಮಿ, ಬಿ.ಟಿ, ಮುನಿರಾಜು, ಎಲ್. ಹನುಮಂತಯ್ಯ, ಈಶ್ವರ ಇಂಗನ್, ಹಾಲ್ಕುರಿಕೆ, ಶಿವಶಂಕರ್ ಮುಂತಾದವರು ಬರೆದ ನಾಟಕಗಳು ವರ್ತಮಾನದ ವಿದ್ಯಮಾನಗಳಿಗೆ ಕನ್ನಡಿಯನ್ನು ಹಿಡಿಯುತ್ತವೆ. ಹೀಗಾಗಿ, ಕನ್ನಡ ದಲಿತ ಸಾಹಿತ್ಯ ಸೃಜನಶೀಲ ನೆಲೆಯಲ್ಲಿ ಪಡೆದಿರುವ ಸ್ಥಾನ ಅನನ್ಯವಾದುದೆಂದು ನನ್ನ ತಿಳಿವಳಿಕೆ, ದಲಿತ ಸಾಂಸ್ಕೃತಿಕ ಲೋಕದ ಸಮೃದ್ಧ ಅನುಭವಗಳನ್ನು ಭಾಷಿಕ ಆವರಣದಲ್ಲಿ ಹೆಣೆಯುವಾಗ ಪಡೆದಿರುವ ಕಲಾತ್ಮಕ ಭಿತ್ತಿ ಅನನ್ಯವಾದುದು. ತಳವರ್ಗ ಮತ್ತು ಆದಿವಾಸಿ ಜನವರ್ಗಗಳ ದುಃಖ- ಮಮ್ಮಾನಗಳನ್ನು ನಮ್ಮ ಕಥನಕಾರರು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ, ಅವುಗಳ ವಿಶ್ಲೇಷಣೆ ಹಾಗೂ ವಿಮರ್ಶೆ ವಿಸ್ತಾರವಾಗಿ ಈಗ ನಡೆಯಬೇಕಾಗಿದೆ.

ಅವರಿತ ಸಾಹಿತ್ಯದ ಸೃಜನೇತರ ನೆಲೆಯು ಕೂಡ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಐವತ್ತು ವರ್ಷಗಳಿಂದ ತುಂಬಾ ತೀವ್ರವಾಗಿ ವಿಮರ್ಶೆ-ಸಂಶೋಧನೆಗಳಲ್ಲಿ ಅನೇಕರು ತೊಡಗಿಸಿಕೊಂಡಿದ್ದಾರೆ. ಈ ಐವತ್ತು ವರ್ಷಗಳಲ್ಲಿ ಅನೇಕ ದಲಿತ ವಿದ್ವಾಂಸರು ಹೊರಬಂದಿದ್ದಾರೆ. ಅವರು ಸ್ವತಂತ್ರ ಚಿಂತಕರಾಗಿ ಬೆಳೆದಿದ್ದಾರೆ. ಈಗಾಗಲೆ ಪ್ರಸ್ತಾಪಿಸಿರುವಂತೆ ಕುಮಾರ ಕಕ್ಕಯ್ಯ ಪೋಳ, ಬಿ.ಶ್ಯಾಮಸುಂದರ್, ಸೋಸಲೆ ಸಿದ್ದಪ್ಪ, ಎನ್‌. ನರಸಿಂಹಯ್ಯ ಮುಂತಾದವರು ನಮ್ಮ ನೆನಪಿಗೆ ಬರುತ್ತಾರೆ. ಪ್ರೊ. ಬಿ. ಕೃಷ್ಣಪ್ಪ ಅವರು ತಮ್ಮ ಬರಹಗಳಿಂದ ನಮ್ಮ ದೃಷ್ಟಿ-ಧೋರಣೆಗಳನ್ನು ಎತ್ತರಿಸಿದ್ದಾರೆ. ವಿಮರ್ಶೆ ಹಾಗೂ ಸಂಶೋಧನ ಪ್ರಕಾರದಲ್ಲಿ ಡಾ. ಕಮಲಾ ಹಂಪನಾ ಅವರದ್ದು ದೊಡ್ಡ ಹೆಸರಾಗಿದೆ. ಡಾ. ದೇವಯ್ಯ ಹರವೆ, ಕೋಟಗಾನಹಳ್ಳಿ ರಾಮಯ್ಯ. ಡಾ. ಸಣ್ಣರಾಮ, ಡಾ. ಅಭಯಕುಮಾರ್, ಡಾ. ಎಚ್‌.ಟಿ. ಪೋತೆ, ಡಾ. ಬಿ.ಎಂ. ಪುಟ್ಟಯ್ಯ, ಡಾ. ಮೈಲಹಳ್ಳಿ ರೇವಣ್ಣ, ಡಾ. ಧನವಂತ ಹಾಜವಗೋಳ, ಡಾ. ಅಪ್ಪಗೆರೆ ಸೋಮಶೇಖರ್, ಗಂಗಾರಾಮ ಚಂಡಾಳ, ಡಾ. ಮಾಧವ ಪೆರಾಜೆ, ಡಾ. ವಡ್ಡಗೆರೆ ನಾಗರಾಜ, ಡಾ. ಚಂದ್ರಕಿರಣ ಕುಳವಾಡಿ, ಡಾ. ಎನ್‌. ಚಿನ್ನಸ್ವಾಮಿ ಸೋಸಲೆ, ಡಾ. ನೆಲ್ಲಿಕಟ್ಟೆ ಸಿದ್ದೇಶ, ಡಾ. ಚಲುವರಾಜು, ಡಾ. ಪೊನ್ನಸಿದ್ದಾರ್ಥ, ಡಾ. ಬಿ.ಗಂಗಾಧರ, ಡಾ. ನಂಜಯ್ಯ ಹೊಂಗನೂರು, ಡಾ. ಶಿವಾನಂದ ಕೆಳಗಿನಮನಿ, ಡಾ. ಎಚ್‌.ಟಿ. ವೆಂಕಟೇಶಮೂರ್ತಿ, ಡಾ. ಎಸ್.ಎಂ. ತಳವಾರ, ಡಾ. ಅರ್ಜುನ ಗೊಳಸಂಗಿ, ಡಾ. ಬಿ.ಯು, ಸುಮಾ, ಡಾ. ಅರುಣಕುಮಾರ ಜೋಳದಕೂಡ್ಲಿಗಿ, ಡಾ. ಯಲ್ಲಪ್ಪ ಭಜಂತ್ರಿ, ಡಾ. ಸೋಮಣ್ಣ ಹೊಂಗಳ್ಳಿ, ಡಾ. ಎನ್.ಕೆ. ಲೋಲಾಕ್ಷಿ ಡಾ. ಎಂ.ಬಿ. ಕಟ್ಟಿ, ಡಾ. ಓಬಳೇಶ…. ಈ ಹೆಸರುಗಳ ಜೊತೆಗೆ ಇನ್ನೂ ಹತ್ತಾರು ಹೆಸರುಗಳನ್ನು ಹೆಸರಿಸುತ್ತ ಹೋಗಬಹುದು. ಇವರೆಲ್ಲರೂ ನಮ್ಮ ದಲಿತ ಸಮುದಾಯದ ವಿದ್ವಾಂಸರೆಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ.

ಕಮಲಾ ಹಂಪನಾ ಗ್ರಂಥಸಂಪಾದನೆ ಮತ್ತು ವಿಮರ್ಶೆಗಳಲ್ಲಿ ಸಾಧಿಸಿರುವ ನೆಲೆ ನಮಗೆ ಆದರ್ಶವಾಗಿದೆ. ಬಿ. ಕೃಷ್ಣಪ್ಪ ತಮ್ಮ ವಿಮರ್ಶಾಬರಹಗಳಲ್ಲಿ ದಲಿತ ಸಂವೇದನೆಯ ಚಹರೆಗಳನ್ನು ಬಲುಸೂಕ್ಷ್ಮವಾಗಿ ತೋರಿಸಿಕೊಟ್ಟಿದ್ದರು. ದೇವಯ್ಯ ಹರವೆ ಕೂಡ ದಲಿತ ವಿಮರ್ಶೆ ಮತ್ತು ವೈಚಾರಿಕತೆ ಕ್ಷೇತ್ರವನ್ನು ವಿಸ್ತರಿಸಿದ್ದರು. ಈಗ ಇಬ್ಬರೂ ನಮ್ಮೊಂದಿಗಿಲ್ಲ. ಆದರೆ, ಎಪ್ಪತ್ತರ ದಶಕದಲ್ಲಿ ‘ಉತ್ತಮ ವಿಮರ್ಶೆಗಳನ್ನು ಅವರು ಬರೆಯುತ್ತಿದ್ದರು. ಅವರ ಬರೆಹಗಳಲ್ಲಿ ಸೂಕ್ಷ್ಮ ನಿರೀಕ್ಷಣೆ ಹಾಗೂ ದಲಿತ ಸಂವೇದನೆ ಇರುತ್ತಿತ್ತು. ಕೋಟಗಾನಹಳ್ಳಿ ರಾಮಯ್ಯ ಉಪಸಂಸ್ಕೃತಿ ಮಾಲೆಗಾಗಿ ಬರೆದ ‘ಸಿಂದ್ ಮಾದಿಗರ ಸಂಸ್ಕೃತಿ’ ಸಂಶೋಧನೆಗೆ ಈ ಹೊತ್ತಿಗೂ ಒಂದು ಮಾದರಿಯಂತಿದೆ. ಡಾ. ಮೈಲಹಳ್ಳಿ ರೇವಣ್ಣ ಹಸ್ತಪ್ರತಿಶಾಸ್ತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ಮಾದಿಗ ಸಮುದಾಯದ ಸಾಂಸ್ಕೃತಿಕ ಬೇರುಗಳನ್ನು ತಮ್ಮ ಲೇಖನಗಳ ಮೂಲಕ ಅನಾವರಣಗೊಳಿಸಿದ್ದಾರೆ. ಡಾ. ಎಚ್‌.ಟಿ. ಪೋತ ಅವರ ಬರೆಹಗಳು ವಿಮರ್ಶೆ-ಶೋಧ, ಜೀವನ ಚರಿತ್ರೆ ಮತ್ತು ವೈಚಾರಿಕ ಆಶಯಗಳಿಂದ ಮುಪ್ಪುರಿಗೊಂಡಿವೆ. ಶ್ರೀ ಇಂದೂಧರ ಹೊನ್ನಾಪುರ ಅವರು ‘ಪಂಚಮ’ ಪತ್ರಿಕೆಯ ಲೇಖನಗಳಿಂದಲೂ ‘ಸಂವಾದ’ ಪತ್ರಿಕೆಯ ಲೇಖನಗಳಿಂದಲೂ ವರ್ತಮಾನ ಲೋಕದ ದಲಿತರ ಬೆಳಕು ಆರದಂತೆ ನೋಡಿಕೊಳ್ಳುತ್ತಿದ್ದಾರೆ. ಡಾ. ಮೋಹನ್‌ರಾಜ್‌ ಅವರ ಭೀಮವಾದದ ಲೇಖನಗಳು ಗಮನಸೆಳೆಯುತ್ತಿವೆ. ಇವರಲ್ಲದೆ ಡಾ. ಕೆ.ಆರ್. ದುರ್ಗಾದಾಸ್, ಡಾ. ಅರ್ಜುನ ಗೊಳಸಂಗಿ, ಡಾ. ವೈ.ಬಿ.ಹಿಮ್ಮಡಿ, ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, ಡಾ. ಸೂರ್ಯಕಾಂತ ಸುಜ್ಯಾತ್, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಪ್ರೊ. ತೇಜಸ್ವಿ ` ಕಟ್ಟಿಮನಿ, ಡಾ. ಅಭಯಕುಮಾರ್, ಡಾ. ಹಣಮಂತರಾವ್ ದೊಡ್ಡಮನಿ, ಡಾ. ಪ್ರಶಾಂತ ನಾಯಕ, ಡಾ. ಪಿ. ಸುಶೀಲಾ, ಡಾ. ಲಿಂಗಣ್ಣ ಗೋನಾಳ ಮುಂತಾದವರು ಸಂಶೋಧನೆಯಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲವರು ಬಹುಸೂಕ್ಷ್ಮತೆಯಿಂದ  ದಲಿತ ಸಂವೇದನೆಯ ವಿಮರ್ಶೆಯನ್ನು ವಿಸ್ತರಿಸುತ್ತಿದ್ದಾರೆ. ಇಲ್ಲಿ ಕೇವಲ ದೃಷ್ಟಾಂತಕ್ಕಾಗಿ ಕೆಲವರ ಹೆಸರನ್ನು ಹೆಸರಿಸಿದ್ದೇನೆ. ಆದರೆ, ಮೇಲೆ ಹೆಸರಿಸಿದ ವಿದ್ವಾಂಸರು ದಲಿತ ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲದೆ, ಇತರ ವೈಚಾರಿಕ ಕ್ಷೇತ್ರಗಳಲ್ಲೂ ಗಣ್ಯವಾದ ಸಾಧನೆಯನ್ನು ಮಾಡಿದ್ದಾರೆ. ದಲಿತ ಚಳವಳಿಯನ್ನು ಮುನ್ನಡೆಸಿದವರು

ದಲಿತರಲ್ಲಿ ಜಾಗೃತಿಯ ಪ್ರಜ್ಞೆಯನ್ನು ಮೂಡಿಸಿದ್ದೇ ದಲಿತ ಚಳವಳಿಗಳು, ಆರಂಭದ ದಿನಗಳಲ್ಲಿ ಅವು ತುಂಬಿದ ಉತ್ಸಾಹವೇ ಇಂದು ದಲಿತ ಪ್ರಜ್ಞೆ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಬಾಬಾಸಾಹೇಬ್ ಅಂಬೇಡ್ಕರ್ ಚಿಂತನೆಗೆ ಪ್ರಭಾವಿತರಾಗಿ ಬಿ. ಶ್ಯಾಮಸುಂದರ್ ಅವರು ಭೀಮಸೇನೆಯನ್ನು ೧೯೬೮ ರಲ್ಲಿ ಕಲಬುರಗಿಯಲ್ಲಿ ಪ್ರಾರಂಭಿಸಿದರು. ಆರಂಭದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಜೀಯವರು ಭೀಮಸೇನೆಯನ್ನು ಮುನ್ನಡಿಸಿದ್ದಾರೆ. ಬೆಳಗಾವಿ ವಿಭಾಗದಲ್ಲಿ ದೇವರಾಯ ಇಂಗಳೆಯವರು ಸಾಮಾಜಿಕ ಚಳವಳಿ ಮಾಡಿದ್ದಲ್ಲದೆ ಅಂಬೇಡ್ಕರ್ ಅವರನ್ನು ಕನ್ನಡದ ಪ್ರದೇಶಕ್ಕೆ ಕರೆದು ತಂದವರಲ್ಲಿ ಇವರು ಮೊದಲಿಗರು. ಕಲಬುರಗಿಯವರಾದ ಡಾ. ಡಿ.ಜಿ. ಸಾಗರ ಅವರು ದಸಂಸದ ಸಾಮಾನ್ಯ ಸದಸ್ಯರಾಗಿ ಮುಂದೆ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿ ದಲಿತ ಚಳವಳಿಯನ್ನು ಮುನ್ನಡಿಸಿದ್ದಾರೆ. ದಲಿತ ಚಳವಳಿ ನೇತಾರ ಬಿ. ಕೃಷ್ಣಪ್ಪನವರಿಂದ ಆರಂಭಗೊಂಡು ದೇವನೂರ ಮಹಾದೇವ, ಸಿದ್ಧಲಿಂಗಯ್ಯ, ಚಂದ್ರಪ್ರಸಾದ ತ್ಯಾಗಿ, ಎನ್. ವೆಂಕಟೇಶ್, ಬಸಣ್ಣ ಸಿಂಗೆ, ದೇವೇಂದ್ರ ಹೆಗಡೆ, ಅಭಿಷೇಕ ಚಕ್ರವರ್ತಿ, ರಾಜು ಆಲಗೂರ, ರಮೇಶ್ ಅಸಂಗಿ, ಎಸ್‌.ಪಿ. ಸುಳ್ಳದ, ದೇವೇಂದ್ರ ಶೆಳ್ಳಗಿ, ರವೀಂದ್ರನಾಥ ಪಟ್ಟಿ, ಎನ್. ಗಿರಿಯಪ್ಪ, ಕೆ.ಟಿ. ಶಿವಪ್ರಸಾದ, ಆದ್ಯ ಸೋಮಶೇಖರ್, ಬೆಲ್ಲದಮಡು ರಂಗಸ್ವಾಮಿ, ಮುಳ್ಳೂರು ನಾಗರಾಜ, ಸಿ.ಎಂ.ಮುನಿಯಪ್ಪ, ಕೊಟಗಾನಹಳ್ಳಿ ರಾಮಯ್ಯ, ಹರಿಹರ ಆನಂದಸ್ವಾಮಿ, ಕೆ.ಬಿ. ಸಿದ್ದಯ್ಯ, ಎನ್. ಮುನಿಸ್ವಾಮಿ, ಇಂದಿರಾ ಕೃಷ್ಣಪ್ಪ, ಗೋಪಾಲ, ಮಂಗಳೂರು ವಿಜಯ, ರುದ್ರಪ್ಪ ಹನಗವಾಡಿ, ಬಸವರಾಜ ಚಲವಾದಿ, ಲಕ್ಷ್ಮಿ ನಾರಾಯಣ ನಾಗವಾರ, ಅರ್ಜುನ ಭದ್ರೆ, ಮಾವಳ್ಳಿ ಶಂಕರ್, ಡಾ. ಮೋಹನ್‌ ರಾಜ್, ಕೃಷ್ಣದಾಸ ಹಾಸನ್, ನಾರಾಯಣದಾಸ ಪಿಚ್ಚಳ್ಳಿ ಶ್ರೀನಿವಾಸ ಮಂಡ್ಯ, ವೆಂಕಟಗಿರಿ, ಲಕ್ಷ್ಮಣ ಹೊಸಕೋಟೆ, ಕುಕ್ಕರಹಳ್ಳಿ ಬಸವರಾಜ, ಎಸ್. ತುಕಾರಾಮ್, ರಾಶಿ ದೇವರಾಜ್, ಇಂದೂಧರ ಹೊನ್ನಾಪುರ, ಎಚ್‌. ಜನಾರ್ದನ್‌, ದೇವನೂರ ಶಿವಮಲ್ಲು, ಜಯಣ್ಣ, ಚಂದ್ರಮ್ಮ ತ್ಯಾಗಿ, ಗೊಪಾಲ್, ಹಾ.ಮಾ. ರಾಮಚಂದ್ರ, ಕೊಮ್ಮಣ್ಣ, ಮಾರುತಿ ಬೌದ್ದೆ, ಸುರೇಶ ಮೆಂಗಲ್, ಮಲ್ಲೇಶಿ ಸಜ್ಜನ್, ವೈ.ಸಿ. ಮಯೂರ ಸಾವಿರಾರು ಜನ ಚಳವಳಿಗೆ ಜೀವ ತುಂಬಿದ್ದಾರೆ ಅಷ್ಟೇ ಅಲ್ಲದೆ ಜೀವ ತೇಯಿದಿದ್ದಾರೆ.

ಸಾಮಾಜಿಕ ಬದುಕು

ನಮಗೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದುವು. ದಲಿತ ಚಳವಳಿ ನಡೆದರೆ ‘ಭಾರತವು ಪ್ರಕಾಶಿಸುತ್ತಿದೆ’ ‘ಸಬಕಾ ಸಾಥ ಸಬಕಾ ವಿಕಾಸ’ ಎಂಬ ಘೋಷವಾಕ್ಯಗಳು ವಿಜೃಂಭಿಸುತ್ತಿವೆ. ಆದರೆ ಬಡತನ ಎಲ್ಲಾ ಸಮುದಾಯಗಳಲ್ಲೂ ಹಾಗೆಯೇ ಸಾಗಿದೆ. ಈಗಲೂ ಸಹಸ್ರಾರು ದಲಿತ ಸಮುದಾಯಗಳಿಗೆ ಬಡತನದ ಕೆಳರೇಖೆಗಿಂತ ಮೇಲೇಳಲು ಸಾಧ್ಯವಾಗಿಲ್ಲ. ನಗರ ಪ್ರದೇಶಗಳ ಅಂಚಿನಲ್ಲಿ ಸ್ಥಾಪನೆಗೊಂಡಿರುವ ‘ಕೈಗಾರಿಕಾ ಪ್ರದೇಶಗಳಲ್ಲಿ ಕೆಲವರಿಗೆ ಉದ್ಯೋಗ ಸಿಕ್ಕಿರುವುದೇನೋ ನಿಜ. ಆದರೆ, ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಲಿತ ಸಮುದಾಯದವರ ಬದುಕು ಈಗಲೂ ಅಸಹನೀಯವಾಗಿದೆ. ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳು ಸಮರ್ಪಕವಾಗಿ ಇನ್ನೂ ಅಲ್ಲಿ ಬಳಕೆಗೊಂಡಿಲ್ಲ. ಸಂವಿಧಾನದ ಸೌಲಭ್ಯಗಳು ತಳವರ್ಗದವರಿಗೆ ಸಿಗುವುದಕ್ಕಿಂತ ದಲ್ಲಾಳಿಗಳ ಹಾಗೂ ಮಧ್ಯವರ್ತಿ ಗೂಂಡಾಗಳ ಹಾಗೂ ಜಾತಿರಾಜಕಾರಣದವರ ಕೈಚಳಕಕ್ಕೆ ಒಳಗಾಗಿ ಸುಳ್ಳು ಜಾತಿಪ್ರಮಾಣಪತ್ರ ಪಡೆದವರಿಗೆ ಮೀಸಲಾತಿ ದಕ್ಕುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೇರೆ ಬೇರೆ ಯೋಜನೆಗಳಲ್ಲಿ ಸಾಮಾಜಿಕ ಬಡತನವನ್ನು ಉತ್ತಮೀಕರಿಸಲು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಿಸಬೇಕು. ಆದರೆ, ಅಂಥ ಪ್ರಯತ್ನಗಳು ಸಾಕಾಗೊಲ್ಲ ಎನ್ನುವುದಕ್ಕೆ ಆಗಾಗ್ಗೆ ಮಾಧ್ಯಮಗಳಲ್ಲಿ ಬರುವ ಅನ್ವೇಷಿತ ವರದಿಗಳು ಸಾಬೀತುಗೊಳಿಸುತ್ತಿವೆ.

ದಲಿತ ಸಮುದಾಯದ ಸಾಮಾಜಿಕ ಜೀವನಮಟ್ಟ ಸುಧಾರಿಸುವಲ್ಲಿ ಆರ್ಥಿಕ ಸಬಲೀಕರಣ ಒಂದಾದರೆ; ಇತರೆ ಸಮುದಾಯದವರ ಮಾನವೀಕರಣದ ಪೋಷಣೆ ಮತ್ತು ಆಂತರಿಕ ಪ್ರೀತಿಯೂ ಅಗತ್ಯವಾಗಿದೆ. ದಲಿತ ಸಮುದಾಯ ಹಾಗೂ ಮೇಲ್ವರ್ಗ ಸಮುದಾಯ ಆಗಾಗ್ಗೆ ಸಂಘರ್ಷಕ್ಕೆ ಇಳಿಯುವುದುಂಟು. ಅದು ಎರಡು ಸಮುದಾಯಗಳ ನಡುವಣ ಗಂಡು- ಹೆಣ್ಣುಗಳ ಪ್ರೀತಿಸಂಬಂಧ, ಕಲ್ಲಕವಾದ ರಾಜಕೀಯ ಸಂಬಂಧ ಇಂಥದ್ರಗಳು ಕಾರಣಗಳಾಗಿರುವುದುಂಟು. ಜಾತಿ ವೈಷಮ್ಯದ ಬಿಕ್ಕಟ್ಟು ಇನ್ನೂ ತಗ್ಗಿಲ್ಲ. ತಾಲ್ಲೂಕು ಪ್ರದೇಶಗಳ ಗಡಿಭಾಗಗಳಲ್ಲಿ ಜನರ ಜೀವನ ವ್ಯವಸ್ಥೆ ಎನ್ನು ದುಃಸ್ತಿತಿಯಲ್ಲಿದೆ ಎಂದು ಬೇರೆ ಹೇಳಬೇಕಾಗಿಲ್ಲ.

ಭಾರತದ ಉತ್ತರ ಭಾಗದ ಅನೇಕ ರಾಜ್ಯಗಳಲ್ಲಿರುವ ಗೂರು ಆದಿವಾಸಿ ಸಮುದಾಯದವರು ಕಡುಬಡತನದ ರೇಖೆಯಲ್ಲಿಯೇ ಉಳಿದಿದ್ದಾರೆ. ಸವರ್ಣೀಯರಿಂದ ಅವರು ಸದಾ ದಮನಕ್ಕೆ ಒಳಗಾಗುತ್ತಿದ್ದಾರೆ. ಜಾತಿ, ವಿವಾಹ, ಭೂಮಿ ಇವೇ ಮೊದಲಾದುವು ಇಂಥ ವೈಷಮ್ಯಕ್ಕೆ ಅವರು ತುತ್ತಾಗುತ್ತಿದ್ದಾರೆ. ಈ ಪರಿಸ್ಥಿತಿಯು ಕರ್ನಾಟಕದಲ್ಲಿ ಅಷ್ಟು ಭೀಕರವಾಗಿಲ್ಲ. ಆದರೆ, ಕುದುರೆಮೋತಿ, ಕಂಬಾಳದಲ್ಲಿ, ಬೆಂಡಿಗೇರಿ ಪ್ರಕರಣಗಳಲ್ಲದೆ, ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಮೂತ್ರ ಕುಡಿಸುವುದು ಇವೇ ಹತ್ತಾರು ವಿಷಮ ಘಟನೆಗಳು ಆಗಾಗ್ಗೆ ತಲೆಯೆತ್ತುತ್ತಿರುತ್ತವೆ. ಆ ಕರಾಳ ದಿನಗಳನ್ನು ಮತ್ತೆ ಮತ್ತೆ ನೆನೆಪಿಗೆ ತರುತ್ತಿವೆ. ಇವಕ್ಕೆಲ್ಲ ಸಾಮಾಜಿಕ ಸಮನ್ವಯತೆಯ ಅಭಾವ ಕಾರಣವಾಗಿದೆ. ಕರ್ನಾಟಕವನ್ನು ಉಳಿದ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿಯ ಪರಿಸ್ಥಿತಿ ಅಷ್ಟು ಭೀಕರವಾಗಿಲ್ಲವೆನ್ನುವುದೇನೋ ನಿಜವಾದರೂ ಕಳೆದ ನಾಲ್ಕಾರು ವರ್ಷಗಳಲ್ಲಿ ಜಾತಿವೈವನ್ನು ಹೆಚ್ಚುತ್ತಿರುವುದು ಕಣ್ಣಿಗೆ ರಾಚುವಂತಿದೆ. ಸಮಸಮಾನತೆಗೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕ, ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕಗಳು ಸಕ್ರಿಯವಾಗಿ ಎಚ್ಚರವಾಗಿಲ್ಲದಿರುವುದು ಇದಕ್ಕೆ ಕಾರಣವೆಂದು ನನಗನಿಸುತ್ತದೆ. ದಲಿತರು ಅಸಂಘಟಿತರಾಗಿದ್ದಾರೆಂಬ ಕಾರಣದಿಂದ ನೆತ್ತಿಯ ಮೇಲಿನ ಮಾಸು ಹಾರದ ಸಂಸದನೊಬ್ಬ ಸಾವರಕ‌ ದೇಶದ್ರೋಹಿಯಾದರೆ ಅಂಬೇಡ್ಕರ್ ಯಾಕೆ ದೇಶದ್ರೋಹಿ ಅಲ್ಲವೆಂದು ತನ್ನ ಎಳಸು ಸಾಲಿಗೆ ಹರಿಬಿಟ್ಟಿಟ್ಟಂತೆ, ಇನ್ನೊಂದು ಅವಧಿಗೆ ನಾವು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವವರು ನಮ್ಮ ನಡುವೆ ಇದ್ದಾರೆ. ಇಂಥವರಿಗೆ ಮತದಾನದ ಮೂಲಕ ಪಾಠ ಕಲಿಸುವುದನ್ನು ಸಂವಿಧಾನದ ಪರವಾಗಿರುವವರು ತಪ್ಪದೆ ಮಾಡಬೇಕು. ಸರ್ಕಾರವು ದಲಿತರಿಗಾಗಿ, ತಳವರ್ಗದವರಿಗಾಗಿ ಅನೇಕ ನಿಗಮ- ಸಂಸ್ಥೆಗಳನ್ನು ಸ್ಥಾಪಿಸಿರುವುದೇನೋ ಸರಿ. ಆದರೆ, ಅವು ಅಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದುದರಿಂದ, ಇದು ತಾಲ್ಲೂಕು ಮಟ್ಟದಲ್ಲಿಯೇ ಅಂಥ ದಲಿತ ಸಮುದಾಯಗಳನ್ನು ಎಸ್.ಜಿ.ಓ. ಮೂಲಕ ಗುರುತಿಸಿ, ಪರಿಣಾಮಕಾರಿಯಾಗುವಂಥ ಆರ್ಥಿಕ ಪ್ಯಾಕೇಜ್‌ಗಳನ್ನು ನೀಡುವುದು ಸರಿಯೆಂದು ನನಗೆ ತೋರುತ್ತದೆ. ಸರ್ಕಾರದ ಯೋಜನೆಗಳು ನಗರ ಜಿಲ್ಲೆಗಳಲ್ಲಿ ಬಳಕೆಗೊಂಡನ್ನು ತಾಲ್ಲೂಕು ಮತ್ತು ಗ್ರಾಮಮಟ್ಟದಲ್ಲಿ ಅವು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿಲ್ಲ. ಇಲ್ಲಿ ಸ್ಥಳೀಯ ರಾಜಕಾರಣ ಮತ್ತು ಮಧ್ಯವರ್ತಿಗಳ ಪ್ರವೇಶ ಆಗುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ನಮ್ಮ ಸಮಾಜದ ಮೇಲ್ವರ್ಗದವರು ದಲಿತ ಹಾಗೂ ಹಿಂದುಳಿದ ಸಮುದಾಯಗಳನ್ನು ತಮ್ಮ ಸಮೀಪಕ್ಕೆ ಕರೆದುಕೊಳ್ಳಬೇಕಾಗಿದೆ. ನಾನು ಮೊದಲು ಹೇಳಿದಂತೆ ‘ಮಾನವೀಕರಣ’ದ ಅಂತಃಕರಣದ ಕಣ್ಣಿನಲ್ಲಿ ಕಾಣಲು ಅವರು ತೊಡಗಬೇಕಾಗಿದೆ. ನೀರು, ಆಹಾರ, ವಿವಾಹಗಳು ಅವರೆಲ್ಲರನ್ನೂ ಹತ್ತಿರಕ್ಕೆ ಕರೆದುಕೊಳ್ಳಲು ಸಾಧ್ಯವಿದೆ. ‘ವೈಷಮ್ಯವು ವಿಷ’ಎಂಬುದನ್ನು ಇವರಿಬ್ಬರೂ ತಿಳಿಯಬೇಕಾಗಿದೆ. ಸರ್ಕಾರವು ಸಮಾಜ ವಿಜ್ಞಾನಿಗಳ ನೆರವಿನ ಮೂಲಕ ಇಂಥದೊಂದು ಉಪಕ್ರಮಕ್ಕೆ ಈಗಿರುವ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾವಣೆ ಮಾಡುವುದು ಅವಶ್ಯವೆಂದು ನಾನು ತಿಳಿಯುತ್ತೇನೆ. ಹೀಗಾಗಿ, ಅಂಬೇಡ್ಕರ್ ಹೆಸರಿನ ನಿಗಮ, ಮಂಡಳಿಗಳಿಗೆ ಸಮಾಜಮುಖೀ ನೆಲೆಯ ಕಾಯಕಲ್ಪದ ಅಗತ್ಯವಿದೆ, ಅಲ್ಲಿ ಅಂತಃಕರಣವುಳ್ಳ ಅಧಿಕಾರಿಗಳ, ಮಾನವೀಯ ಸೆಲೆಯುಳ್ಳವರನ್ನು ನೇಮಿಸುವುದು ಅಗತ್ಯವಿದೆ. ಇದು ಕೆಳಮಟ್ಟದ ಸುಧಾರಣೆಗೆ ಪರ್ಯಾಯವಾಗಿ ಕಾರಣವಾಗುತ್ತದೆ. ಈ ಜನಸಮುದಾಯದ ಕೀಳರಿಮೆ ತಿರಸ್ಕಾರವನ್ನು ಅಳಿಸಿಹಾಕಿ, ಇದರಲ್ಲಿ ಸ್ವಾಭಿಮಾನ ಮತ್ತು ಕ್ರಿಯಾಶೀಲತೆಯನ್ನು ಮೂಡಿಸಲು ಇದರಿಂದ ಕಾರಣವಾಗುತ್ತದೆಂದು ನಾನು ತಿಳಿಯುತ್ತೇನೆ. ಸಂವಿಧಾನ ಮತ್ತು ದಲಿತರು

ಸಂವಿಧಾನದ ನಿಯಮದಡಿಯಲ್ಲಿ ಸಂಘ, ಸಂಸ್ಥೆಗಳನ್ನು ಕಟ್ಟಿಕೊಂಡವರು ವಿಧಾನಸಭೆ, ಲೋಕಸಭೆಗೆ ಚುನಾಯಿತ ಸದಸ್ಯರ ಸಂವಿಧಾನ ಬದಲಿಸುವುದಕ್ಕಾಗಿಯೇ ನಾವು ಬಂದಿದ್ದೇವೆ ಎಂದು ಹೇಳುತ್ತಿರುವುದು ಕಂಡಿದ್ದೇವೆ. ಅದನ್ನು ಪ್ರತಿಭಟಿಸುವ, ವಿರೋಧಿಸುವ ತೀಕ್ಷ್ಯ ಸ್ವಭಾವದ ದಲಿತರು, ಮಹಿಳೆಯರು ಕಳೆದುಕೊಳ್ಳುತ್ತಿದ್ದಾರೆಂದೆನಿಸುತ್ತಿದೆ. ಬಂಧುಗಳ, ಸಂವಿಧಾನ ಕೇವಲ ದಲಿತರಿಗೆ ಸಂಬಂಧಿಸಿದ್ದಲ್ಲ. ಅದು ಭಾರತದ ಬಹುಸಂಖ್ಯಾತರ ಬದುಕಿನ ಆಡಂಬೋಲ, ಹಿಂದುಳಿದವರು, ಮಹಿಳೆಯರು ಸುಮ್ಮನಾದರೆ ಮುಂದೊಂದು ದಿನ ಮಣಿಪುರದ ‘ಕುಕಿ’ ಸಮುದಾಯದ ಬುಡಕಟ್ಟು ಜನರಿಗೆ ಬಂದ ಸ್ಥಿತಿ ಎಲ್ಲರಿಗೂ ಬಂದರೂ ಬರಬಹುದು. ಹಾಡುಹಗಲೆ ಮಹಿಳೆಯರನ್ನು ಬೆತ್ತಲೆಗೊಳಿಸಿ ಅನುಚಿತವಾಗಿ ವರ್ತಿಸುತ್ತಿರುವುದು ನಾವೆಲ್ಲರೂ ನೋಡಿಯೂ ಸುಮ್ಮನಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ನನಗೆ ಅನಿಸುತ್ತಿದೆ. ಹತ್ರಾಸನಲ್ಲಿ, ವಿಜಯಪುರದಲ್ಲಿ ಅಷ್ಟೇ ಅಲ್ಲ, ರಾಜ್ಯ, ದೇಶದಾದ್ಯಂತ ಮಹಿಳೆಯರ ವಿಶೇಷವಾಗಿ ದಲಿತ ಮಹಿಳೆಯರ ಮೇಲೆ ಜರುಗುತ್ತಿರುವ ಅತ್ಯಾಚಾರಗಳು ಹೆಚ್ಚುತ್ತಿವೆ. ಕೊಲೆ ಹತ್ಯೆಗಳು ನಿಲ್ಲುತ್ತಿಲ್ಲ. ಇವು ನಿಲ್ಲುವುದು ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿದೆ.

ದೇವಾಲಯಗಳು ಅಸಮಾನತೆಯ ಕೇಂದ್ರಗಳಾಗಿ ನೆಲೆ ನಿಲ್ಲುತ್ತಿರುವುದ ರಿಂದ ಸಾಮಾಜಿಕ ವಿಘಟನೆಗೆ, ಸಂಘರ್ಷಕ್ಕೆ ಕಾರಣವಾಗುತ್ತಿವೆ. ಇಂಥ ಅಪಮಾನಿಸುವ ಕೇಂದ್ರಗಳ ಪೋಷಣೆಗೆ ಸರಕಾರ ಮುಂದಾಗಬಾರದು. ಮುಕ್ತ ಪ್ರವೇಶದ ಜೊತೆಗೆ ಮೀಸಲಾತಿ ನಿಯಮ ದೇವಾಲಯಗಳಲ್ಲೂ ಜಾರಿಗೊಳಿಸಬೇಕು. ಇಂದು ದೇವಾಲಯಗಳು ಕೇವಲ ಪೂಜೆ ಅಥವಾ ಹರಕೆಯ ಕೇಂದ್ರಗಳಾಗಿ ಉಳಿದಿಲ್ಲ. ದೇವಾಲಯದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಸಮಾನವಾಗಿ ಹಂಚಿಕೆಯಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯವಿದೆ, ಆಗಲೇ ಸಂವಿಧಾನದ ಆಶಯ ಈಡೇರಿದಂತಾಗುತ್ತದೆ.

ಪ್ರತಿಷ್ಠಾನಗಳು ಬೇಕಾಗಿದೆ.

ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನೇಕ ಪ್ರತಿಷ್ಠಾನಗಳು ಸ್ಥಾಪನೆಯಾಗಿವೆ. ಬಹಳ ನೋವಿನ ಸಂಗತಿಯೆಂದರೆ, ಆ ಎಲ್ಲ ಸಾಹಿತ್ಯಕ, ಸಾಂಸ್ಕೃತಿಕ ಪ್ರತಿಷ್ಠಾನಗಳು ಮೇಲರ್ಗದ ಲೇಖಕರ, ಚಿಂತಕರ ಹೆಸರಿನಲ್ಲಿ ಸ್ಥಾಪನೆಗೊಂಡಿವೆ. ಆದು ಹಲಸಂಗಿ ಗೆಳೆಯರ ಬಳಗದ ಪ್ರತಿಷ್ಠಾನ ಆಗಿರಬಹುದು, ಬಸವರಾಜ ಕಟ್ಟಿಮನಿಯವರ ಪ್ರತಿಷ್ಠಾನವಾಗಿರಬಹುದು. ಅವುಗಳಿಗೆ ನಮ್ಮ ವಿರೋಧ ಇಲ್ಲ. ಅಂಥ ಪ್ರತಿಷ್ಠಾನಗಳಲ್ಲಿ ಸಾಮಾಜಿಕ ನ್ಯಾಯ ಸಾಧ್ಯವಾಗುತ್ತಿಲ್ಲವೆನ್ನುವುದು ಬೇಸರ ತರಿಸುತ್ತಿದೆ. ಇದನ್ನು ಸರಿದೂಗಿಸಲು ಬಿ. ಶ್ಯಾಮಸುಂದರ್, ಕುಮಾರಕಕ್ಕಯ್ಯ ಪೋಳ, ಚೆನ್ನಣ್ಣ ವಾಲೀಕಾರ, ಚಂದ್ರಪ್ರಸಾದ ತ್ಯಾಗಿ, ಗೀತಾ ನಾಗಭೂಷಣ, ಎಚ್‌.ಎಂ. ಗಂಗಾದರಯ್ಯ, ಬಿ. ಬಸವಲಿಂಗಪ್ಪ ಇವರೆಲ್ಲ ಸಾಹಿತ್ಯ ಸಂಸ್ಕೃತಿ, ಸಾಮಾಜಿಕ ಪ್ರಜ್ಞೆಗಾಗಿ ದುಡಿದಿದ್ದಾರೆ. ಇವರ ಹೆಸರಿನಲ್ಲಿ ಅವರವರು ಹುಟ್ಟಿದ ಜಿಲ್ಲೆಯಲ್ಲಿ ಪ್ರತಿಷ್ಠಾನಗಳನ್ನು ಸ್ಥಾಪಿಸಿ, ಅನುದಾನ ನೀಡಿ ಸಾಮಾಜಿಕ, ಸಾಹಿತ್ಯಕ ಕಾರ್ಯಕ್ರಮಗಳು ನಡೆಸಲು ಅನುವು ಮಾಡಿಕೊಡಲು ಸರಕಾರ ಮುಂದಾಗಬೇಕೆಂದು ಒತ್ತಾಯಿಸುತ್ತೇನೆ.

ಸಂವಿಧಾನ ಸುಡುವ, ಮಹಾತ್ಮ ಗಾಂಧೀಜಿಯ ಅಣಕು ಹತ್ಯೆ ಮಾಡುವುದು ಸರ್ವೆಸಾಮಾನ್ಯವಾದ ಈ ಕಾಲದಲ್ಲಿ ಅಂತಹ ಶಕ್ತಿಗಳಿಗೆ ಬುದ್ಧಿ ಕಲಿಸಬೇಕು. ದಲಿತ ಶೋಷಿತ, ಮಹಿಳಾ ಸಮುದಾಯದಲ್ಲಿ ಶಕ್ತಿ ತುಂಬಲು ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುವುದು ಸರಕಾರದಿಂದ, ಸಾರ್ವಜನಿಕರಿಂದ ಆಗಬೇಕಿದೆ. ಬಡತನ ನೀಗಿಸಲು ಯೋಜನೆ ರೂಪಿಸಬೇಕು, ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್‌ಗಳನ್ನು ಹೆಚ್ಚಿಸಬೇಕು. ಇನ್ನು ವಿಜ್ಞಾ ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸಂವಿಧಾನದ ಓದು ಕಡ್ಡಾಯದ ಜೊತೆಗೆ ಶೋಷಿತ ವರ್ಗದ ಸಾಹಿತ್ಯ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಮನವರಿಕೆ ಮಾಡುವುದರಿಂದ ಅವರಲ್ಲಿ ಮಾನವೀಯ ಸಂಬಂಧಗಳು ಬೆಳೆಸಲು ಸಾಧ್ಯವಾಗುತ್ತದೆ. ಇಂಥ ಚಿಂತನೆಯ ಅರಿಯದ ಅವರು ಸಾಮಾಜಿಕ ನ್ಯಾಯದ ವಿರೋಧಿಗಳಾಗಿ ಯಂತ್ರಗಳಂತೆ ಕೆಲಸ ಮಾಡುತ್ತಿದ್ದಾರೆ. ಮಾನವೀಯ ಸಂಬಂಧಗಳನ್ನು ಅವರು ಅರಿತುಕೊಳ್ಳುವಂತೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕಾಗಿದೆ.

ಇನ್ನೊಂದು ಮಹತ್ವದ ಸಂಗತಿಯೆಂದರೆ, ದಲಿತರನ್ನು ಮತದಾನದ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ. ಆ ಸಂದರ್ಭದಲ್ಲಿ ಒಂದಷ್ಟು ದುಡ್ಡು ಕೊಟ್ಟು ಅವರಿಗೆ ಗೌರವಿಸೋದು ನಡೆಯುತ್ತಿದೆ ಸರಕಾರ ರಚನೆಯಾದ ಮೇಲೆ ಅಧಿಕಾರದ ಹಂಚಿಕೆ ಬಂದಾಗ ದಲಿತರನ್ನು ಸಮಾಜದ ಅಂಚಿಗೆ ಪುನಃ ತಳ್ಳಲಾಗುತ್ತಿದೆ ಎಂದು ದಲಿತ ಸಮುದಾಯದ ಅನೇಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಿಜವಾದ ಅರ್ಥದಲ್ಲಿ ದಲಿತಸಮುದಾಯವನ್ನು ಮೇಲೆತ್ತಲು ಅವರಿಗೆ ಸಿಗಬೇಕಾದ ಹಕ್ಕನ್ನು ಕೊಡುವಲ್ಲಿ ಆಡಳಿತಯಂತ್ರ ಕೆಲಸ ಮಾಡಬೇಕೆಂದು ಆಗ್ರಹಿಸುತ್ತಿದ್ದೇನೆ. ಸರಕಾರ, ಸರಕಾರದ ಮಂತ್ರಿಗಳು ದಲಿತರ ನೋವು, ಯಾತನೆಗಳನ್ನು ಅಂತಃಕರಣದಿಂದ ಗಮನಿಸ ಬೇಕಾದುದು ಇಂದಿನ ಅಗತ್ಯವಾಗಿದೆ.

ಸರಕಾರಕ್ಕೆ ಒತ್ತಾಯಗಳು

ನವಬೌದ್ಧರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವುದು.

ಡಾ. ಬಿ.ಆರ್. ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸುವುದು. ದಲಿತ ಚಳವಳಿ ಹೋರಾಟಗಾರರ ಹಾಗೂ ಚಿಂತಕರ ಜೀವನ ಕಥನ ಗ್ರಂಥಗಳ ಪ್ರಕಟಣೆಗೆ ಅನುದಾನ ನೀಡುವುದು, ಸಫಾಯಿ ಕರ್ಮಚಾರಿ ಕೆಲಸದಲ್ಲಿ ಮಾನವಬಳಕೆ ಬದಲು ಯಂತ್ರೋಪಕರಣ

ಬಳಸುವುದಾಗಬೇಕು. ಯಾರು ಸಫಾಯಿ ಕರ್ಮಚಾರಿ ಉದ್ಯೋಗದಲ್ಲಿದ್ದಾರೋ ಅವರಿಗೆ

ಪರ್ಯಾಯ   ಉದ್ಯೋಗಗಳನ್ನು ನೀಡಬೇಕು.

ಜೈ ಭೀಮ