ಎನ್ಇಪಿ: ಅಸಮಾನ ಶೈಕ್ಷಣಿಕ ವ್ಯವಸ್ಥೆಯ ಕುರಿತು ಮಾಜಿ ಸಚಿವರ ಜಾಣಕುರುಡು

ಎನ್ಇಪಿ: ಅಸಮಾನ ಶೈಕ್ಷಣಿಕ ವ್ಯವಸ್ಥೆಯ ಕುರಿತು ಮಾಜಿ ಸಚಿವರ ಜಾಣಕುರುಡು

– ಯತಿರಾಜ್‌ ಬ್ಯಾಲಹಳ್ಳಿ

ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಕೇಂದ್ರ ಸರ್ಕಾರ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-೨೦೨೦) ಕುರಿತು ‘ಪ್ರಜಾವಾಣಿ’ಯಲ್ಲಿ ಜುಲೈ ೧೫ರಂದು ಬರೆದಿರುವ “ದೇಶ ಹಿತದ ಜಾಗದಲ್ಲಿ ಪಕ್ಷದ ಹಿತದ ವಿಕೃತಿ” ಲೇಖನವು ಸುಳ್ಳು ಮತ್ತು ವಂಚನೆಯ ಪ್ರತಿರೂಪವಷ್ಟೇ. ಎನ್‌ಇಪಿ ಬದಲು ಎಸ್‌ಇಪಿ (ರಾಜ್ಯ ಶಿಕ್ಷಣ ನೀತಿ) ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಅಶ್ವತ್ಥ ನಾರಾಯಣ ಅವರು ಮತ್ತೆ ರಾಜ್ಯದ ಜನತೆಗೆ ಸುಳ್ಳುಗಳನ್ನು ಯಾವುದೇ ಮುಜುಗರವಿಲ್ಲದೆ ಹೇಳಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಮಾಡಿರುವ ಮಹಾ ವಂಚನೆಗಳನ್ನು ಮರೆಮಾಚುತ್ತಿದ್ದಾರೆ.

 

ನೆಹರೂ, ರಾಜೀವ್‌ ಗಾಂಧಿ ಕಾಲದಲ್ಲಿ ರೂಪಿಸಲಾದ ಶಿಕ್ಷಣ ನೀತಿಗಳ ಕುರಿತು ಟೀಕಾಪ್ರಹಾರಗಳನ್ನು ತಮ್ಮ ಲೇಖನದಲ್ಲಿ ನಡೆಸಿದ್ದಾರೆಯೇ ಹೊರತು, ಎನ್‌ಇಪಿ ಉಂಟುಮಾಡಿರುವ ಅಸಮಾನ ಶೈಕ್ಷಣಿಕ ವ್ಯವಸ್ಥೆಯ ಕುರಿತು ಜಾಣಕುರುಡರಾಗಿದ್ದಾರೆ.

 

ಯಾವುದೇ ಮುಂದಾಲೋಚನೆ ಮಾಡದೆ, ಚರ್ಚೆಗಳನ್ನು ನಡೆಸದೆ, ಕೋವಿಡ್‌ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಎನ್‌ಇಪಿಯನ್ನು ಜಾರಿಗೆ ತಂದ ಅಪಕೀರ್ತಿ ಶ್ರಿಯುತ ಮಾಜಿ ಸಚಿವರಿಗೆ ಸಲ್ಲಬೇಕು. ಅವರು ಏಕಪಕ್ಷೀಯವಾಗಿ ಮತ್ತು ತಮ್ಮ ದೆಹಲಿ ನಾಯಕರನ್ನು ಮೆಚ್ಚಿಸುವುದಕ್ಕಾಗಿ ಎನ್‌ಇಪಿ ಜಾರಿಗೆ ಉತ್ಸುಕತೆ ತೋರಿದರು. ಸಂಕ್ರಾಮಿಕದಿಂದ ತತ್ತರಿಸಿದ್ದ ಶಿಕ್ಷಣ ವ್ಯವಸ್ಥೆಯ ಮೇಲೆ ಗದಾಪ್ರಹಾರ ನಡೆಸಿದರು.

 

ʻʻಬ್ರಿಟಿಷ್‌ ಕಾಲದಲ್ಲಿ ಜಾರಿಗೆ ತಂದ ಶಿಕ್ಷಣ ನೀತಿಗಳು ಕಾರಕೂನರನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದವುʼʼ ಎನ್ನುವ ಮಾಜಿ ಸಚಿವರು, ಎನ್‌ಇಪಿ ಕೂಡ ಇದಕ್ಕಿಂತ ಹೊರತಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲವೇಕೆ? ಬಂಡವಾಳಶಾಹಿಗಳಿಗೆ ಗುಲಾಮರನ್ನು ಒದಗಿಸುವ ಮುಖ್ಯಗುರಿಯನ್ನು ಹೊಂದಿರುವ ಎನ್‌ಇಪಿ, ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆ ಎಂಬ ಚಿನ್ನದ ಚೂರಿಯನ್ನು ಹಿಡಿದು ನಿಂತಿದೆ. ಬಡ, ಅಸಹಾಯಕ ಸಮುದಾಯಗಳ ವಿದ್ಯಾರ್ಥಿಗಳು ಅರ್ಧದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಲು ಸರ್ಕಾರವೇ ಪ್ರೇರೇಪಣೆ ನೀಡುತ್ತಿದೆ.

 

ಎನ್‌ಇಪಿ ಮಾಡಿರುವ ಯಡವಟ್ಟುಗಳ ಕುರಿತು ಇತ್ತೀಚೆಗೆ ಕನ್ನಡದಲ್ಲಿಯೇ ಒಂದು ಕೃತಿ ಬಿಡುಗಡೆಯಾಗಿದೆ. ಶಿಕ್ಷಣತಜ್ಞ ಶ್ರೀಪಾದ ಭಟ್‌ ಅವರ ʼಕಣ್ಕಟ್ಟು- ಎನ್‌ಇಪಿ ವಿಮರ್ಶಾತ್ಮಕ ವಿಶ್ಲೇಷಣೆʼ ಪುಸ್ತಕವು ಎನ್‌ಇಪಿಯ ಆಳ-ಅಗಲವನ್ನು ತೆರೆದಿಟ್ಟಿದೆ. ಮನುವಾದದ ಪುನರುತ್ಥಾನ, ಶೈಕ್ಷಣಿಕ ಪ್ರತಿಕ್ರಾಂತಿ ಮತ್ತು ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಡಕಟ್ಟು, ಮಹಿಳಾ ಸಮುದಾಯವನ್ನು ಶಿಕ್ಷಣದಿಂದ ಹೊರಗಿಡುವ ಕ್ರೌರ್ಯವನ್ನು ಎನ್‌ಇಪಿ ಹೇಗೆ ಒಳಗೊಂಡಿದೆ ಎಂಬುದನ್ನು, ಅಶ್ವತ್ಥ ನಾರಾಯಣ ಅವರು ಈ ಪ್ರತಿಕ್ರಾಂತಿಯಲ್ಲಿ ಹೇಗೆ ಪಾಲ್ಗೊಂಡಿದ್ದಾರೆ ಎಂಬುದನ್ನು ಕೃತಿ ವಿಸ್ತೃತವಾಗಿ ಚರ್ಚಿಸಿದೆ.

 

ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಾದ ಶಿಕ್ಷಣ ನೀತಿ ಪದೇ ಪದೇ ಸನಾತನ ಸಂಸ್ಕೃತಿಯ ಬಗ್ಗೆ ಮಾತನಾಡುತ್ತದೆ. ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರನ್ನು ತೃತೀಯದರ್ಜೆಯ ಪ್ರಜೆಗಳನ್ನಾಗಿ ರೂಪಿಸುವುದೇ ಸನಾತನ ವ್ಯವಸ್ಥೆ. ಕಸ್ತೂರಿ ರಂಗನ್‌ ನೇತೃತ್ವದಲ್ಲಿ ರಚನೆಯಾದ ಎನ್‌ಇಪಿ ಸಮಿತಿಯಲ್ಲಿಯೂ ಸಾಮಾಜಿಕ ನ್ಯಾಯ ಪಾಲನೆಯಾಗಲಿಲ್ಲ. ಆರ್‌ಎಸ್‌ಎಸ್‌ ಹಿನ್ನೆಲೆಯವರೇ ಇದರಲ್ಲಿ ತುಂಬಿಕೊಂಡಿದ್ದರು. ಈ ಹಿಂದೆ ರೂಪಿಸಲಾದ ಶಿಕ್ಷಣ ನೀತಿಗಳ ಕುರಿತು ಅವಲೋಕನ ಮಾಡಲಿಲ್ಲ. ಅವುಗಳಲ್ಲಿನ ಉತ್ತಮ ಅಂಶಗಳನ್ನು ಒಳಗೊಳ್ಳಲಿಲ್ಲ. ಶಿಕ್ಷಣದ ಹಕ್ಕನ್ನು ಖಾತ್ರಿಪಡಿಸಲಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಗಾಳಿಗೆ ತೂರಲಾಯಿತು. ಮೆರಿಟ್‌ ಬಗ್ಗೆ ಪದೇ ಪದೇ ಮಾತನಾಡುವ ಎನ್‌ಇಪಿ ಅಂಚಿನಲ್ಲಿರುವ ಸಮುದಾಯಗಳಿಗೆ ಪ್ರಾತಿನಿಧ್ಯವನ್ನು ಕಲ್ಪಿಸುವ ಕುರಿತು, ಈ ಸಮುದಾಯಗಳಿಗೆ ಸಲ್ಲಬೇಕಾದ ಸ್ಕಾಲರ್‌ಶಿಪ್‌ಗಳ ಕುರಿತು ಮೌನ ತಾಳುತ್ತದೆ. ನೆಹರೂ ಕಾಲದಲ್ಲಿ ರೂಪಿತವಾಗಿ ಕೊಠಾರಿ ಆಯೋಗ ಸಾರ್ವತ್ರಿಕ ಮಾನವೀಯ ಮೌಲ್ಯಗಳ ಕುರಿತು ಹೇಳಿದರೆ, ಎನ್‌ಇಪಿ ʼಭಾರತೀಯ ಮೌಲ್ಯಗಳುʼ ಎಂಬ ಹೆಸರಲ್ಲಿ ʼಚಾತುರ್ವರ್ಣ ವ್ಯವಸ್ಥೆʼಯನ್ನು ಮರುಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಸಂವಿಧಾನದ ಆಶಯಗಳನ್ನು ಧಿಕ್ಕರಿಸಿದೆ.

 

ಎನ್‌ಇಪಿ ರೂಪಿಸಲು ೨೦ ಲಕ್ಷ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಮಾಜಿ ಸಚಿವರು ಹೇಳಿಕೊಂಡಿದ್ದಾರೆ. ವಾಸ್ತವದಲ್ಲಿ ಎಲ್ಲಾ ರಾಜ್ಯಗಳಲ್ಲಿನ ಶಿಕ್ಷಣ ತಜ್ಞರ, ಶಿಕ್ಷಣ ಹಕ್ಕುದಾರರ ಜೊತೆ ಮಾತನಾಡಲಿಲ್ಲ. ಎಸ್‌ಡಿಎಂಸಿ, ವಿದ್ಯಾರ್ಥಿ ಸಂಘಟನೆಗಳು, ಪ್ರಗತಿಪರ ವಿಚಾರಧಾರೆಯ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಸಂಸತ್ತಿನಲ್ಲಿ ಮುಕ್ತ ಚರ್ಚೆಯೂ ಆಗಲಿಲ್ಲ. ಸಂಘಪರಿವಾರದ ಅಂಗಸಂಸ್ಥೆಗಳು ನೀಡಿದ ಅಭಿಪ್ರಾಯಗಳನ್ನೇ ಅಂತಿಮವೆಂದು ಭಾವಿಸಲಾಗುವುದೇ? ಅವುಗಳು ನಡೆಸಿದ ಸೆಮಿನಾರ್‌ಗಳನ್ನೇ ಚರ್ಚೆ ಎನ್ನಲು ಸಾಧ್ಯವೆ?

 

ʻʻಮಕ್ಕಳ ಶಿಕ್ಷಣ, ಆರೈಕೆ, ರಕ್ಷಣೆ, ಪೋಷಣೆಗೆ ಇರುವ ಶಿಕ್ಷಣದ ಮೂಲಭೂತ ಹಕ್ಕು (ಪರಿಚ್ಛೇದ ೨೧ಎ), ಬಾಲ ಕಾರ್ಮಿಕ ಪದ್ಧತಿ ನಿಷೇಧ (ಪರಿಚ್ಛೇದ ೨೪), ಮಕ್ಕಳು ಆರೋಗ್ಯಕರವಾಗಿ ಅಭಿವೃದ್ಧಿ ಹೊಂದಲು ಅವಕಾಶ ಮತ್ತು ಸೌಲಭ್ಯ (ಪರಿಚ್ಛೇದ ೩೯ ಎಫ್), ಬಾಲ್ಯಪೂರ್ವ ಆರೈಕೆಗಳಾದ ಪೌಷ್ಟಿಕಾಂಶ, ಆರೋಗ್ಯ (ಪರಿಚ್ಛೇದ ೪೫), ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ದುರ್ಬಲ ವರ್ಗಗಳ ಶೈಕ್ಷಣಿಕ ಹಿತಾಸಕ್ತಿ ರಕ್ಷಣೆ (ಪರಿಚ್ಛೇದ ೧೫(೪), ೪೬) ಇದ್ಯಾವುದನ್ನೂ ಎನ್‌ಇಪಿ ಗಣನೆಗೆ ತೆಗೆದುಕೊಂಡಿಲ್ಲʼʼ ಎನ್ನುತ್ತಾರೆ ಶ್ರೀಪಾದ್‌ ಭಟ್.

 

‘ಮಕ್ಕಳ ಹಕ್ಕಿಗಾಗಿ ವಿಶ್ವಸಂಸ್ಥೆಯ ಸಮಾವೇಶ’ದ ನೀತಿಗಳಿಗೆ ಭಾರತ ಸಹಿ ಹಾಕಿದೆ. ಮಕ್ಕಳು ತಮ್ಮ ಹಕ್ಕನ್ನ ಸಂಪೂರ್ಣವಾಗಿ ಅನುಭವಿಸುವಂತೆ ಸರಕಾರ ಮತ್ತು ಪೋಷಕರು ಎಲ್ಲ ಬಗೆಯ ಕಾರ್ಯವಿಧಾನಗಳನ್ನ ಜಾರಿಗೊಳಿಸಬೇಕು ಎಂಬುದಕ್ಕೆ ಬದ್ಧವಾಗಿದ್ದೇವೆ ಎಂದು ಭಾರತ ಒಪ್ಪಿಕೊಂಡಿದೆ. ಆದರೆ ಎನ್‌ಇಪಿ ಇದನ್ನೂ ಕಡೆಗಣಿಸಿದೆ.

 

ಬಹುಶಿಸ್ತೀಯ ಪಠ್ಯಕ್ರಮವನ್ನು ಜಾರಿಗೊಳಿಸುವ ಮುನ್ನ ಇಲ್ಲಿನ ಕಾಲೇಜುಗಳ ಕಷ್ಟಸುಖಗಳೇನು ಎಂಬುದನ್ನು ಮಾಜಿ ಸಚಿವರು ಮರೆತ್ತಿದ್ದರು. ಇಲ್ಲಿನ ಪ್ರಾಧ್ಯಾಪಕರ ಕೊರತೆ, ಬಹುಶಿಸ್ತೀಯ ಪಠ್ಯಕ್ರಮಕ್ಕೆ ಬೇಕಾದ ಸಿದ್ಧತೆ, ತರಬೇತಿ ಯಾವುದನ್ನೂ ಗಮನಿಸಲಿಲ್ಲ. ಎನ್‌ಇಪಿಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ವಲಯಕ್ಕೆ ವಿಲೀನಗೊಳಿಸುವ ಕಸರತ್ತಿನ ಭಾಗವಾಗಿತ್ತಷ್ಟೇ. ಅಶ್ವತ್ಥ ನಾರಾಯಣ ಜಾರಿಗೊಳಿಸಿದ ಎನ್‌ಇಪಿ ಮಾಡಿದ ಅವಾಂತರಕ್ಕೆ ಒಂದು ಉದಾಹರಣೆ:

ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್) ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬೇಕು. ಅದು ಆನ್‌ಲೈನ್‌ನಲ್ಲೇ ಆಗಬೇಕು. ಪೋರ್ಟನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ, ವೆಬ್‌ಸೈಟ್‌ ಸಂಪರ್ಕ ಇಲ್ಲವಾಗಿ ಅರ್ಜಿಗಳನ್ನು ಸಲ್ಲಿಸಲು ಕೂಡ ಆಗಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಆಫ್‌ಲೈನ್‌ ಮೂಲಕ ಪ್ರವೇಶಾತಿ ಕಲ್ಪಿಸಿದ್ದವು. ದುಬಾರಿ ಶುಲ್ಕ ತೆತ್ತು, ಬಡ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳನ್ನು ಸೇರಬೇಕಾಯಿತು.

 

ತಾಂತ್ರಿಕ ದೋಷದಿಂದಾದ ಯಡವಟ್ಟಿನ ಕುರಿತು ʼದಿ ಹಿಂದೂʼ ವರದಿ ಮಾಡುತ್ತಾ, “1.18 ಲಕ್ಷ ಪ್ರವೇಶಾವಕಾಶವಿರುವ 171 ಪದವಿ ಕಾಲೇಜುಗಳಲ್ಲಿ ಕೇವಲ 8,136 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. 1.1 ಲಕ್ಷ ವಿದ್ಯಾರ್ಥಿಗಳು ಪ್ರವೇಶದಿಂದ ವಂಚಿತರಾಗಿದ್ದಾರೆ. ಈ ಕಾಲೇಜುಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 15 ಪದವಿ ಕಾಲೇಜುಗಳಲ್ಲಿ ಒಂದಂಕಿಯ ಪ್ರವೇಶಾತಿಯಾಗಿದೆ. ಇದರ ಫಲವಾಗಿ ಸರಕಾರಿ ಕಾಲೇಜುಗಳಿಗೆ ಹಿನ್ನಡೆಯಾದರೆ ಖಾಸಗಿ ಕಾಲೇಜುಗಳಿಗೆ ಉತ್ತೇಜನ ದೊರಕಿವೆʼʼ ಎಂದಿದೆ. ಇದು ಮಾಜಿ ಸಚಿವ ಅಶ್ವತ್ಥನಾರಾಯಣ ಅವರ ಸಾಧನೆ. ಇದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾದ ಹಗರಣ ಎನ್ನಬಹುದು. ರಾಜ್ಯ ಕಾಂಗ್ರೆಸ್‌ ಸರ್ಕಾರ ಎನ್‌ಇಪಿ ಹಗರಣವನ್ನು ಗಂಭೀರವಾಗಿ ತೆಗೆದುಕೊಂಡು ಅಶ್ವತ್ಥ ನಾರಾಯಣ ವಿರುದ್ಧ ಸೂಕ್ತ ತನಿಖೆ ನಡೆಸಬೇಕಾದ ತುರ್ತಿದೆ.

ತಮ್ಮ ಲೇಖನದಲ್ಲಿ ಮಾಜಿ ಸಚಿವರು, ʻʻಶ್ರೀಮಂತರ ಮಕ್ಕಳು ತಮಗೆ ಬೇಕೆನಿಸಿದ ವಿದೇಶಿ ವಿಶ್ವವಿದ್ಯಾಲಯಗಳಿಗೆ ಹೋಗಬಲ್ಲರು. ನಮ್ಮಲ್ಲೂ ಉಳ್ಳವರು ಖಾಸಗಿ/ಸ್ವಾಯತ್ತ ವಿ.ವಿ.ಗಳ ಕಡೆಗೆ ಹೋಗುತ್ತಾರೆ. ಏಕೆಂದರೆ, ಅಲ್ಲಿಯ ದುಬಾರಿ ಖರ್ಚುವೆಚ್ಚಗಳನ್ನು ಭರಿಸುವಂತಹ ಆರ್ಥಿಕ ಶಕ್ತಿ ಅವರಲ್ಲಿದೆ. ಆದರೆ, ನಮ್ಮ ಸರಕಾರಿ ಕಾಲೇಜು/ವಿಶ್ವವಿದ್ಯಾಲಯಗಳಿಗೆ ಬರುವವರೆಲ್ಲ ಮಧ್ಯಮ, ಕೆಳಮಧ್ಯಮ ಮತ್ತು ಬಡವರ ಮಕ್ಕಳಲ್ಲವೇ? ಇಂತಹ ಮಕ್ಕಳಿಗೂ ಕೈಗೆಟಕುವ ದರದಲ್ಲಿ ವಿದೇಶಿ ಗುಣಮಟ್ಟದ ಶಿಕ್ಷಣವು ಆರಂಭದಿಂದಲೇ ಸಿಗಬೇಕೆನ್ನುವುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಹಿಂದಿರುವ ಸಂಕಲ್ಪವಾಗಿದೆʼʼ ಎಂದು ಬೊಗಳೆ ಬಿಟ್ಟಿದ್ದಾರೆ.

ವಿದೇಶ ವಿವಿಗಳನ್ನು ಭಾರತದಲ್ಲಿ ತೆರೆಯಲು ಅವಕಾಶ ನೀಡುವುದಾಗಿ ಯುಜಿಸಿ ಕರಡು ನೀತಿ ಹೇಳಿದೆ. ಇಂತಹ ವಿವಿಗಳ ಸ್ಥಾಪನೆಗೆ ಸಬ್ಸಿಡಿಯೂ ಇಲ್ಲಿ ದೊರಕುತ್ತದೆ. ಹೊರಗಿನವರಿಗೆ ಭರಪೂರ ನೆರವು ನೀಡಲು ಮುಂದಾಗುವ ಕೇಂದ್ರ ಸರ್ಕಾರ ಇಲ್ಲಿಯೇ ಇರುವ ವಿವಿಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ನೀಗಿಸಲು ಯೋಚಿಸುತ್ತಿಲ್ಲ. ನಮ್ಮ ವಿವಿಗಳಲ್ಲಿನ ಪ್ರಾಧ್ಯಾಪಕರ ಕೊರತೆಯನ್ನು ತುಂಬಲು ಚಿಂತಿಸುತ್ತಿಲ್ಲ. ನಮ್ಮ ವಿವಿಗಳ ಮೇಲೆ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಹೇರುತ್ತಿರುವ ಸರ್ಕಾರ ವಿದೇಶಿ ವಿವಿಗಳೊಂದಿಗೆಯೂ ಹೀಗೆಯೇ ನಡೆದುಕೊಳ್ಳುತ್ತದೆಯೇ?- ಖಂಡಿತ ಅಂತಹ ಕಡಿವಾಣವನ್ನು ವಿದೇಶಿ ವಿವಿಗಳು ಒಪ್ಪುವುದಿಲ್ಲ ಎಂಬುದು ವಾಸ್ತವ. ಹೀಗಾದಾಗ ವಿದೇಶಿ ವಿವಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿ, ಇಲ್ಲಿನವರಿಗೆ ಇಲ್ಲಸಲ್ಲದ ಕಡಿವಾಣ ಹಾಕುವ ಇಬ್ಬಂದಿತನದ ನೀತಿಯನ್ನು ಸರ್ಕಾರ ಹೊಂದಿದೆ ಅಂತಾಗುತ್ತದೆಯಲ್ಲ?

 

ʻʻಪ್ರವೇಶಾತಿ ಆದ್ಯತೆಯ ಕುರಿತಂತೆ ವಿದೇಶಿ ವಿವಿಗಳಿಗೆ ಸ್ವಾತಂತ್ರ್ಯವಿದೆ. ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ… ಶುಲ್ಕ ನೀತಿಯಲ್ಲಿ ಹಸ್ತಕ್ಷೇಪವಿರುವುದಿಲ್ಲʼʼ ಎಂದು ಯುಜಿಸಿ ಹೇಳಿದೆ. ಅಂದರೆ ಸಾಮಾಜಿಕ ನ್ಯಾಯ ಪಾಲನೆಯಾಗುವುದಿಲ್ಲ. ಹೀಗಿರುವಾಗ ಬಡ ವಿದ್ಯಾರ್ಥಿಗಳಿಗೆ, ಅಂಚಿನಲ್ಲಿರುವ ಸಮುದಾಯಗಳಿಗೆ ಈ ವಿದೇಶಿ ವಿವಿಗಳಿಂದ ಅದ್ಯಾವ ಉಪಯೋಗವಾಗುತ್ತದೆ? ವಿದೇಶಿ ವಿವಿಗಳು ತಮಗೆ ಬೇಕಾದಂತೆ ಶುಲ್ಕವನ್ನು ನಿಗದಿ ಮಾಡಿಕೊಳ್ಳುತ್ತವೆ. ಮತ್ತೆ ಉಳ್ಳವರಷ್ಟೇ ಈ ವಿವಿಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಮಧ್ಯಮ, ಕೆಳಮಧ್ಯಮ ಮತ್ತು ಬಡವರ ಮಕ್ಕಳಿಗೆ ಇದರಿಂದ ಹೇಗೆ ಉಪಯೋಗವಾಗುತ್ತದೆ ಎಂಬುದನ್ನು ಮಾಜಿ ಸಚಿವರೇ ಬಿಡಿಸಿ ಹೇಳಬೇಕು.

೨೦೧೨-೧೩ರಲ್ಲಿ ಯುಪಿಎ-೨ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ವಿದೇಶಿ ವಿವಿ ಮಸೂದೆಯನ್ನು ಜಾರಿಗೆ ತರಲು ಸರ್ಕಾರ ಹೊರಟಿತ್ತು. ಇದೇ ಬಿಜೆಪಿ ಮತ್ತು ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಮಸೂದೆ ಅಂಗೀಕಾರವಾಗಿಲ್ಲ. ರಾಜ್ಯಸಭೆಯಲ್ಲಿ ಬಹುಮತ ದೊರಕಲಿಲ್ಲ. ದುರಾದೃಷ್ಟವಶಾತ್‌ ಇದೇ ಬಿಜೆಪಿ ಯಾವುದೇ ಮಸೂದೆಯನ್ನು ಮಂಡಿಸದೆ, ಸಂಸತ್ತಿನ ಅನುಮೋದನೆ ಪಡೆಯದೆ ಯುಜಿಸಿ ಮೂಲಕ ವಿದೇಶಿ ವಿವಿಗಳಿಗೆ ಅವಕಾಶ ನೀಡಲು ಹೊರಟಿದೆ. ಇದನ್ನು ಹಿಪೊಕ್ರಸಿ ಎನ್ನದೆ ಏನನ್ನಲಿ?

———————————–

– ಯತಿರಾಜ್‌ ಬ್ಯಾಲಹಳ್ಳಿ

ಪತ್ರಕರ್ತರು, ಮೂಲತಃ ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನವರು. ಸಾಮಾಜಿಕ ಚಳವಳಿ ಮತ್ತು ಬರಹದಲ್ಲಿ ಸಕ್ರಿಯರು.