ದಲಿತರ ಓಟು ಮತ್ತು ದುಡ್ಡು; ಸಿದ್ದರಾಮಯ್ಯರ ಅಧಿಕಾರ ಮತ್ತು ಜಾತ್ರೆ?

ದಲಿತರ ಓಟು ಮತ್ತು ದುಡ್ಡು; ಸಿದ್ದರಾಮಯ್ಯರ ಅಧಿಕಾರ ಮತ್ತು ಜಾತ್ರೆ

 

ಪ್ರಜ್ವಲ್ ಶಶಿ ತಗಡೂರು

ಶೋಷಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಅಭಿವೃದ್ಧಿಗಾಗಿ ಉತ್ತಮ ಶಿಕ್ಷಣ, ಉದ್ಯೋಗ, ಆರೋಗ್ಯ, ಆಥಿ೯ಕ ಭದ್ರತೆ, ಅಗತ್ಯ ರಕ್ಷಣೆ ಇದಕ್ಕಾಗಿ ಮೀಸಲಿಟ್ಟ ವಿಶೇಷ SCSP/TSP ಅನುದಾನವನ್ನು ಕಾಂಗ್ರೆಸ್ ಪಕ್ಷ ತನ್ನ ಗ್ಯಾರಂಟಿ ಯೋಜನೆಗೆ ಸಮಾಜ ಕಲ್ಯಾಣ ಇಲಾಖೆಯ ಅಂದಾಜು 11,000 ಕೋಟಿ ರೂ. ಅನುದಾನವನ್ನು ಬಳಕೆ ಮಾಡಿಕೊಂಡಿರುವುದು ಅತ್ಯಂತ ಖಂಡನೀಯ.

 

ಕಾಂಗ್ರೆಸ್ ನ ಗ್ಯಾರಂಟಿ ಈಡೇರಿಕೆಗೆ SC/ST ಸಮುದಾಯಗಳ ಹಣವೇಕೇ? ಪರಿಶಿಷ್ಟರೆಲ್ಲಾ ಈಗಾಗಲೇ ಉದ್ಧಾರವಾಗಿದ್ದಾರೆಯೇ? ಪರಿಶಿಷ್ಠರ ₹11,000 ಕೋಟಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿದ ಮೇಲೆ 7D ರದ್ದುಗೊಳಿಸಿದ್ದು ಯಾಕೆ? ಹಾಗದರೆ ಅದು ಮೂಗಿಗೆ ತುಪ್ಪ ಸವರುವ ನಾಟಕವೇ? ಅಂಬೇಡ್ಕರರ ಕಾಲದಿಂದಲೂ ಬಹುಷಃ ದಲಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದಷ್ಟು ಮತ್ಯಾರು ಮಾಡಿಲ್ಲ ಅನಿಸುತ್ತದೆ. ಏಕೆಂದರೆ ದಲಿತರನ್ನು ಯಾಮಾರಿಸುವ ಕಲೆ ಕಾಂಗ್ರೆಸ್ ಗೆ ಕರಗತವಾಗಿದೆ. ಆದರೆ ದಲಿತರಿಗೆ ಅಥ೯ವಾಗದಿರುವುದು ದುರಂತದ ಸಂಗತಿ.

 

ಕಳೆದ ಬಾರಿಯ ಸಾವ೯ತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ದಲಿತರ ಉದ್ಧಾರಕ್ಕೆ ಜನ್ಮವೆತ್ತಿದೆ ಎನ್ನುವ ಹಾಗೇ ಬಹುತೇಕರು ಪ್ರಚಾರ ಮಾಡಿದ ಪರಿಣಾಮ ಪರಿಶಿಷ್ಠ ಸಮುದಾಯಗಳ ಓಟಿನಿಂದಲೇ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಮಾತ್ರ ಪರಿಶಿಷ್ಟರಿಗೆ ನೀಡದೆ ಸಿದ್ದರಾಮಯ್ಯರಿಗೆ ಎರಡನೇ ಬಾರಿಗೆ ಅವಕಾಶ ಮಾಡಿಕೊಟ್ಟಿತು. ಈಗ ದಲಿತರ ದುಡ್ಡು ದುಬ೯ಳಕೆ ಮಾಡಿಕೊಂಡು ಅದರಲ್ಲಿ ಸಿದ್ದರಾಮಯ್ಯರ ಜಾತ್ರೆ ಮಾಡುತ್ತ ದಲಿತ ವಿರೋಧಿ ನಡೆ ಅನುಸರಿಸುತ್ತಿರುವುದು ಎಷ್ಠರ ಮಟ್ಟಿಗೆ ಸರಿ? ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪನವರೇ ಪರಿಶಿಷ್ಟರ ಹಣವನ್ನು ಇತರೆ ಕಾರ್ಯಗಳಿಗೆ ನೀಡಿ ಪರಿಶಿಷ್ಟರನ್ನು ಬರಿಗೈಲಿ‌ ನಿಲ್ಲಿಸಿ ಬರಿ ಸಂವಿಧಾನ ಪೀಠಿಕೆ ಓದಿದರೆ /ಓದಿಸಿದರೆ ಆಗುವ ಪ್ರಯೋಜನವೇನು? ಇದು ಬಾಬಾಸಾಹೇಬರ ಆಶಯಕ್ಕೆ ಅವಮಾನ ಮಾಡಿದಂತಾಗುವುದಿಲ್ಲವೇ? ಇದೇನಾ ಸಂವಿಧಾನದ ನೆರಳು…??

– ಪ್ರಜ್ವಲ್ ಶಶಿ ತಗಡೂರು, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು ಪ್ರತಿನಿಧಿಸುತ್ತಿರುವ ವರುಣಾ ವಿಧಾನ ಸಭಾ ಕ್ಷೇತ್ರದ ಮತದಾರ.