ಕಾಟೇರ: ಕಮ್ಮಾರನೇ ಏಕೆ?
ಕೋಡಿಹಳ್ಳಿ ಸಂತೋಷ್
ಕಾಟೇರನ ಜಗತ್ತಿನಲ್ಲಿ ಈ ನೆಲದ ಶೋಷಿತರು, ಹಿಂದುಳಿದವರು,ಬಡವರು,ಸ್ತ್ರೀಯರು ನಿತ್ಯ ಬೆಂಕಿಗೆ ಬಿದ್ದು ಬೇಯುತ್ತಿರುವ ಕುಲುಮೆ ಇದೆ.
“ಭೀಮನಹಳ್ಳಿ”ಯ ಕಾಟೇರ ತನ್ನ ಕುಲುಮೆಗೆ ಬಿದ್ದ ಕಬ್ಬಿಣವನ್ನು ಕಾಯಿಸಿ ಹದ ಮಾಡಿ ಹತಾರಗಳಿಗೆ ಜೀವ ಕೊಡುತ್ತಾನೆ.
ಜೀವ ಪಡೆದುಕೊಳ್ಳುವ ಹತಾರಗಳು..
ಜೀವ ತೆಗೆಯುವವರ ಕೈಸೇರದೇ ಶೋಷಿತರ-ಶ್ರಮಿಕರ-ರೈತರ ಹೋರಾಟದ ಬದುಕಿಗೆ ಬೆಂಗಾವಲಾಗುತ್ತವೆ..
ಬೆಂಗಾವಲಾದ ಹತಾರಗಳು ಕೆಡುಕನ್ನು ಹುಡುಕಿ ಹುಡುಕಿ ಹತಮಾಡುತ್ತವೆ..
ಈ ಸಿನಿಮಾದ ನಾಗರೀಕ ಜಗತ್ತಿನಲ್ಲಿ
ಎಲ್ಲರ ಬದುಕಿಗೆ-ನೆಮ್ಮದಿಗೆ ಕಾನೂನು ಸುವ್ಯವಸ್ಥೆಯ ಜಾರಿಗೆ
ಕಾಟೇರನ ಹತಾರಗಳು ಎಚ್ಚರಿಕೆಯಿಂದ ಬಳಕೆಯಾಗುತ್ತವೆ…..
ಶತಮಾನಗಳಿಂದ ಬ್ರಾಹ್ಮಣ್ಯವು ಪೋಷಿಸಿದ ರಾಜಪ್ರಭುತ್ವಗಳ
ರಕ್ತಪಿಪಾಸು ತೃಷೆಗೆ ಬಳಕೆಯಾಗುತ್ತಾ ಬಂದಿದ್ದ ಹತಾರಗಳು
ಕಾಟೇರನ ಕುಲುಮೆಯಲ್ಲಿ ಹದಗೊಂಡು ಜೀವಪರತೆಯ
ವಿವೇಕ ಕಲಿತು ಎದ್ದು ಬರುತ್ತವೆ.
ವಿವೇಕವುಳ್ಳ ಹತಾರಗಳಿಗೆ ತಾವು ಯಾವ ವ್ಯಕ್ತಿ- ಸಿದ್ಧಾಂತ-ಜೀವನಕ್ರಮಗಳ ವಿರುದ್ಧ ಹರಿತಗೊಳ್ಳಬೇಕೆಂಬುದು ಗೊತ್ತಿದೆ.
ಹಾಗಾಗಿ ಕಾಟೇರನ ಮಚ್ಚು
ರಕ್ತಪಿಪಾಸುಗಳು ಆಮದು ಮಾಡಿಕೊಂಡಿದ್ದ ಆಭರಣದಂತೆ ಹೊಳೆಯುತ್ತಿದ್ದ
ಕತ್ತಿಯನ್ನು ಬಾಳೆದಿಂಡಿನಂತೆ ಕತ್ತರಿಸಿ ಹಾಕುವ ದೃಶ್ಯ ಸಿನಿಮಾದಲ್ಲಿ ಹೈಲೈಟ್ ಆಗುತ್ತದೆ…..
ಮಧ್ಯ ಏಷಿಯಾದಿಂದ
ಆಭರಣದಂತಹ ಮರಾಮೋಸದ
ಕತ್ತಿ ಹೊತ್ತು ತಂದ
ಆರ್ಯ ಬ್ರಾಹ್ಮಣ್ಯವು
ಎರಡೂವರೆ ಸಾವಿರ ವಷ೯ಗಳಿ೦ದ ಈ ನೆಲದ ಅಮಾಯಕ ಜೀವಗಳ ರಕ್ತಕುಡಿಯುತ್ತಲೇ ಇದೆ..
ಆದರೆ ಕಾಟೇರನ ಕುಲುಮೆ ಬಿದ್ದು ಹದಗೊಂಡು
ಅವನ ಕೈಯಿಂದ ತಯಾರಾಗುವ
ದೇಸಿ ಮಚ್ಚು
ಈ ವಿದೇಶಿ ಕತ್ತಿಯನ್ನು ಒಂದೇ ಹೊಡೆತಕ್ಕೆ ತುಂಡರಿಸುತ್ತದೆ,
ಕಾಟೇರನ ಮಚ್ಚಿನ ವಿವೇಕ ಈ ನೆಲದಲ್ಲಿ ಪಡಮೂಡಿದ್ದರಿಂದ ಜೀವಕಳೆಯುವ ಕತ್ತಿಯನ್ನು ಕತ್ತರಿಸುವ ಗುಣ ಅದಕ್ಕಿರುತ್ತದೆ……
ಜೀವ ತೆಗೆಯಲು ತಯಾರಾದ ಆಯ೯ ಆಯುಧದ ಜೀವವನ್ನೇ ತುಂಡರಿಸಿ
ಆಯುಧಗಳ ಬದಲಾಗಿ
ಅಪ್ಪಟ ಮನುಷ್ಯರ ಬದುಕಿನ ಜೀವಪರ ಜೀವನಕ್ರಮ ಕಟ್ಟಲು ಅಗತ್ಯವಾದ
ಹತಾರಗಳಿಗೆ ಜೀವ ಕೊಡುವುದೇ ಕಾಟೇರನ ಕಮ್ಮಾರಿಕೆಯ ಅಸಲೀ ಕಾಯಕವಾಗುತ್ತದೆ……
[ವಿ.ಸೂ. ಕನಾ೯ಟಕದಲ್ಲಿ ಕಮ್ಮಾರರು-ಮಾದಿಗರದ್ದು ಅಪ್ಪಮಕ್ಕಳ ಸಂಬಂಧ.
ಅಳುಮಕ್ಕಳ ಪರಿಕಲ್ಪನೆಯಡಿ ಸಾವಯವ ರೀತಿಯಲ್ಲಿ ಈ ಶೋಷಿತ ಸಮುದಾಯಗಳು ಬೆಸೆದುಕೊಂಡಿವೆ.
ದಕ್ಕಲಿಗ-ಮಾದಿಗರ ನಡುವೆ ಇರುವ ಆಪ್ತತೆ ಮತ್ತು ಅಂತರ ಮಾದಿಗರು-ಕಮ್ಮಾರರ ನಡುವೆ ಇದೆ.
ಈ ಕಾಸ್ಟ್-ಸೋಷಿಯೋ ರೆಫೆರೆನ್ಸ್ ನ ಸೂಕ್ಷ ವಿವರವನ್ನ
ಅದ್ಯಾವ ಪುಣ್ಯಾತ್ಮ ಹುಡುಕಿ
ಈ ಸಿನಿಮಾದ ನಿದೇ೯ಶಕರ ಕೈಗಿತ್ತನೋ ದೇವರೆ ಬಲ್ಲ.
ಒಟ್ಟಾರೆ ಕಾಟೇರ ಸಿನಿಮಾ ಕಾಟಾಚಾರಕ್ಕೆ ತಯಾರಾದದ್ದಲ್ಲ..
ಜಾತಿ-ಧಮ೯-ಕಸುಬುಗಳ ನಡುವೆ
ಸೀಳಿ ಹೋಗಿರುವ ಶೋಷಿತರನ್ನ ಬೆಸೆಯುವ ಅನನ್ಯ ಮಾನವತೆಯ ಸಂಕಥನವನ್ನ ಕಟ್ಟುವ ಶತಮಾನದ ದೃಶ್ಯಕಾವ್ಯ ಈ ಸಿನಿಮಾ.]