ಡಾ.ಬಿ.ಆರ್ ಅಂಬೇಡ್ಕರ್: ಭಾರತದ ನೋಟುಗಳ ಮೇಲೆ ಯಾಕಿಲ್ಲ..?

 

ದಿಲೀಪ್ ನರಸಯ್ಯ ಎಮ್ (Dileep Narasaiah)

 

dileep maheshಇಡೀ ಪ್ರಪಂಚದಲ್ಲಿ ತಮ್ಮದೇ ವಿದ್ವತ್ತಿನಿಂದ ವಿಶಿಷ್ಟ ಚಾಪನ್ನು ಮೂಡಿಸಿ, ಶ್ರೇಷ್ಠ ಮಾನವತಾವಾದಿ ಹಾಗೂ ಅರ್ಥಶಾಸ್ತ್ರಜ್ಞರಾಗಿ ಗಮನ ಸೆಳೆದವರು ಡಾ.ಬಿ.ಆರ್.ಅಂಬೇಡ್ಕರ್. ಆದರೆ ಜಾತಿಯ ಮತ್ತು ಧರ್ಮದ ಸಂಕೋಲೆಯಲ್ಲಿ ಸಿಲುಕಿ ಹಾಕಿಕೊಂಡು ದೂರ ನಿಲ್ಲಿಸಿದವರಲ್ಲಿ ಅವರನ್ನು ಬಿಟ್ಟರೆ ಬಹುಶಃ ಜಗತ್ತಿನಲ್ಲಿ ಮತ್ಯಾವ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ. ಯಾವತ್ತಿನಿಂದ ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಪ್ರಾರಂಭಿಸಿದರೋ ಅಂದಿನಿಂದ ಇಂದಿನವರೆಗೂ ಅಂಬೇಡ್ಕರ್ ಅಸ್ಪೃಶ್ಯ ಅಥವಾ ದಲಿತ ನಾಯಕರೆಂದು ಗುರುತಿಸಲ್ಪಡುತ್ತಾರೆ. ಅಸ್ಪೃಶ್ಯ ಅಥವಾ ದಲಿತ ಹೋರಾಟಗಾರ ಎಂಬ ಇಮೇಜ್ಅನ್ನು ಅವರಿಗೆ ನೀಡಿ ಅವರಲ್ಲಿದ್ದ ಅತ್ಯದ್ಭುತ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಮನುವಾದಿಗಳು ಹಿತಾಸಕ್ತಿಗಳು ಸಂಪೂರ್ಣವಾಗಿ ಮರೆಮಾಚಲು ಶ್ರಮಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಜನವರಿ 26, 1950ರಂದು ಭಾರತ ಸಂವಿಧಾನ ಜಾರಿಯಾದ ನಂತರ ಸರ್ವರಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸ್ವಾತಂತ್ರ್ಯ ಸಿಗುತ್ತದೆ. ಸರ್ವ ಸಮುದಾಯಗಳ ಜೊತೆ ಸ್ವಾತಂತ್ರ್ಯ ಪಡೆದ ದಲಿತ ಸಮುದಾಯಗಳು ಅಂಬೇಡ್ಕರ್ ಅವರನ್ನು ತಮ್ಮ ವಿಮೋಚಕ, ಉದ್ದಾರಕ, ಅನ್ನದಾತ ಎಂದು ಭಾವಿಸ ತೊಡಗಿದರೆ ಇನ್ನಿತರರು ಅವರೊಬ್ಬ ಕೇವಲ ಅಸ್ಪೃಶ್ಯರ ನಾಯಕರೆಂದು ಕಡ್ಡಿ ತುಂಡಾದಂತೆ ಕಡೆಗಣಿಸುತ್ತಾರೆ. ಅಂಬೇಡ್ಕರ್ ಅಂತಹ ಮೇಧಾವಿ, ಬಹುಮುಖ ಪ್ರತಿಭೆ, ವ್ಯಕ್ತಿತ್ವವನ್ನು ಹೀಗೆ ನಿರ್ಲಕ್ಷಿಸುತ್ತಾ ಬಂದಿರುವುದು ಈ ದೇಶದ ಘೋರ ದುರಂತವೆಂದೇ ಹೇಳಬಹುದು.

ಅಂಬೇಡ್ಕರ್ ತಮ್ಮ ಜೀವಿತ ಕಾಲದಲ್ಲಿ ಪಟ್ಟ ಶ್ರಮಕ್ಕೆ ಇಂದು ಕೊಟ್ಯಾಂತರ ಜನ ಸುಖವಾಗಿ ಬಾಳುತ್ತಿದ್ದಾರೆ.. ಹೌದು, ಅಂಬೇಡ್ಕರ್ ಅವರ ಚಿಂತನೆಗಳು ಇಂದು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿವೆ. ವಿದ್ಯಾವಂತರು ಹೆಚ್ಚಾಗುತ್ತಿದ್ದಂತೆ ಬಾಬಾ ಸಾಹೇಬರ ಸಿದ್ದಾಂತ ಎಲ್ಲೆಡೆ ಬೇರೂರುತ್ತಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿದ್ವಾಂಸರು ಅಂಬೇಡ್ಕರ್ ಅವರನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ಅಧ್ಯಯನ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಸಂಶೋಧನೆಗಳು ನಡೆಯುತ್ತಿದ್ದರೂ ಬಾಬಾ ಸಾಹೇಬರ ಚಿಂತನೆಯಲ್ಲಿರುವ ವಿಶಾಲತೆ, ತೀವ್ರತೆ ಹಾಗೂ ಉಪಯುಕ್ತತೆ ಗ್ರಹಿಸುವಲ್ಲಿ ಕೆಲವರು ದುರುದ್ದೇಶಪುರಿತವಾಗಿ ಹಿಂದೆ ಬಿದ್ದಿರುವುದು ಶೋಚನೀಯ. ಆದರೆ, ಒಂದಂತೂ ನಿಜ, ಡಾ.ಅಂಬೇಡ್ಕರ್ ಅವರ ಚಿಂತನೆಗಳು ಸಮಾಜದಲ್ಲಿ ಎಷ್ಟು ನಿಧಾನಗತಿದಲ್ಲಿ ಚಲಿಸುತ್ತದೋ ಅಷ್ಟು ಪರಿಣಾಮಕಾರಿಯಾಗಿ ಆಳವಾಗಿ ಬೇರು ಬಿಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಇಂದು ಭಾರತೀಯ ಆಢಳಿತ ಸೇವೆಯ ಪಠ್ಯಕ್ರಮದಲ್ಲೂ ಅಂಬೇಡ್ಕರ್ ಅವರನ್ನು ಅಸ್ಪೃಶ್ಯರ ಹೋರಾಟಗಾರರು ಎಂದು ಬಿಂಬಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಹಾಗಿಯೇ ಬಹಳಷ್ಟು ಜನ ತಿಳಿದುಕೊಂಡಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಮೂಲತಃ ಅಸ್ಪೃಶ್ಯತೆಯ ವಿರುದ್ದ ಹೋರಾಟ ಮಾಡಿದ್ದಲ್ಲದೆ ಅವರೊಬ್ಬ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರಜ್ಞರು ಎಂಬುದು ಅರಿಯಬೇಕಿದೆ. ಇದುವರೆಗೆ ಅಂಬೇಡ್ಕರ್ ಅವರಷ್ಟು ಯಾವ ಭಾರತೀಯನು ಅರ್ಥಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಿಲ್ಲದಿರುವುದು ಗಮನಾರ್ಹ. ಅಂಬೇಡ್ಕರ್ ಅವರು ಸುಮಾರು 22ಕ್ಕೂ ಹೆಚ್ಚು ಕೋರ್ಸ್ಗಳನ್ನು ಅರ್ಥಶಾಸ್ತ್ರ ವಿಷಯದಲ್ಲಿ ಅಧ್ಯಯನ ಮಾಡಿದ್ದರು. ಅವರು ಸಂಶೋಧಿಸಿರುವ ಪ್ರತಿಯೊಂದು ಗ್ರಂಥವು ಜಗತ್ತಿನಾದ್ಯಂತ ಅರ್ಥಶಾಸ್ತ್ರಜ್ಞರ ಗಮನವನ್ನು ಇಂದಿಗೂ ಕೂಡ ಸೆಳೆಯುತ್ತದೆ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳನ್ನು ಅಭಿವ್ಯಕ್ತಿ ದೃಷ್ಟಿಯಿಂದ ಎರಡು ಭಾಗಗಳಾಗಿ ನೋಡಬಹುದು. ಒಂದು ಪ್ರತ್ಯಕ್ಷ ಅಥವಾ ವ್ಯಕ್ತವಾದದು ಮತ್ತೊಂದು ಪರೋಕ್ಷ ಅಥವಾ ಧ್ವನಿತ. ಅವರು ತಮ್ಮ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಬರೆದ ಪ್ರಬಂಧಗಳು, ಪ್ರೌಢ ಪ್ರಬಂಧಗಳು ಮತ್ತು ಲೇಖನಗಳಲ್ಲಿ ಆರ್ಥಿಕಾಭಿವೃದ್ಧಿಗೆ ಇರುವ ಸಮಸ್ಯೆ, ಪರಿಣಾಮ ಹಾಗೂ ಪರಿಹಾರಗಳನ್ನು ವೈಜ್ಞಾನಿಕ ಮತ್ತು ವಸ್ತುನಿಷ್ಠ ವಿಶ್ಲೇಷಣೆಗಳನ್ನು ಪ್ರಮುಖವಾಗಿ ಗಮನಹರಿಸುವುದನ್ನು ಕಾಣಬಹುದು.

ಡಾ. ಅಂಬೇಡ್ಕರ್ ಅವರ ಶೈಕ್ಷಣಿಕ ಪ್ರಬಂಧಗಳಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದದ್ದು ಅವರು 24 ವರ್ಷ ವಯಸ್ಸಿನಲ್ಲಿ ಎಂ ಎ ಪದವಿಗಾಗಿ ಅಮೇರಿಕಾ ಕೊಲಂಬಿಯ ವಿಶ್ವವಿದ್ಯಾಲಯಕ್ಕೆ ಮೇ.15 1915ರಲ್ಲಿ ಸಲ್ಲಿಸಿದ ಈಸ್ಟ್ ಇಂಡಿಯಾ ಕಂಪನಿಯ ಆಢಳಿತ ಮತ್ತು ಹಣಕಾಸು ವ್ಯವಸ್ಥೆ ( The Administration and Finance Of The East India Company) ಎಂಬ ಪ್ರಬಂಧ ಎಲ್ಲರ ಗಮನಸೆಳೆಯುತ್ತದೆ. 1917ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯಕ್ಕೆ ಪಿಹೆಚ್ ಡಿ ಪ್ರೌಢ ಪ್ರಬಂಧವನ್ನು ಬ್ರಿಟೀಷ್ ಭಾರತದಲ್ಲಿ ಪ್ರಾಂತೀಯ ಹಣಕಾಸಿನ ವಿಕಾಸ (1925ರಲ್ಲಿ ಪ್ರಕಟವಾಗುವ ಕೃತಿ), 1917ರಲ್ಲಿ ರೂಪಾಯಿ ಸಮಸ್ಯೆ : ಅದರ ಹುಟ್ಟು ಮತ್ತು ಪರಿಹಾರ ಎಂಬ ಪ್ರೌಢ ಪ್ರಬಂಧವನ್ನು ಡಿಎಸ್ಸಿ ಪದವಿಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ಸಲ್ಲಿಸಿ ಒಂದು ಅಲೆಯನ್ನೇ ಸೃಷ್ಟಿಸುತ್ತಾರೆ. ಮುಂದುವರೆದು ಏನ್ಷಿಯೆಂಟ್ ಇಂಡಿಯನ್ ಕಾಮರ್ಸ್, ದಿ ಪ್ರೆಸೆಂಟ್ ಪ್ರಾಬ್ಲಂ ಇನ್ ಇಂಡಿಯನ್ ಕರೆನ್ಸಿ ಭಾಗ 1 ಮತ್ತು ಭಾಗ 2 ವಿಮರ್ಶೆ, ಹೆಚ್.ಎಲ್ ಚಾಬ್ಲನಿಯ-ಕರೆನ್ಸಿ ಅಂಡ್ ಎಕ್ಸೆಂಜ್, ಹಿಸ್ಟರಿ ಆಫ್ ಕರೆನ್ಸಿ ಅಂಡ್ ಬ್ಯಾಂಕಿಂಗ್ ಅವರ ಅತ್ಯಧ್ಬುತ ಸಂಶೋಧನಾ ಪ್ರಬಂಧಗಳಾಗಿವೆ. ಮತ್ತೊಂದು ಅವರ ಲೇಖನ ಸಣ್ಣ ಹಿಡುವಳಿಗಳ ಸಮಸ್ಯೆ (ಭಾರತದಲ್ಲಿ ಸಣ್ಣ ಹಿಡುವಳಿಗಳು ಮತ್ತು ಅದರ ಸಮಸ್ಯೆಗಳು) ಕುರಿತ ಲೇಖನವನ್ನು 1918ರಲ್ಲಿ ಜರ್ನಲ್ ಆಫ್ ದಿ ಇಂಡಿಯನ್ ಎಕಾನಮಿಕ್ ಸೊಸೈಟಿ ಸಂಪುಟ ಒಂದರಲ್ಲಿ ಪ್ರಕರಟವಾಗುತ್ತದೆ. ಹೀಗೆ ಲೆಕ್ಕವಿಲ್ಲವಷ್ಟು ಸಂಶೋಧನೆಗಳನ್ನು ಮಾಡಿ ಭಾರತದ ಆರ್ಥಿಕ ವ್ಯವಸ್ಥೆ ಮತ್ತು ಆಡಳಿತವನ್ನು ಉತ್ತುಂಗಕ್ಕೆ ಏರಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಜೀವಿತಾವಧಿ ಶ್ರಮಿಸಿದ್ದಾರೆ.

prof mahesh guru

ಆರ್ಥಿಕ ತಜ್ಞರಾಗಿ, ಸಾಮಾಜಿಕ ಪರಿವರ್ತರಾಗಿ, ರಾಜಕೀಯ ಮುತ್ಸದಿಯಾಗಿ, ಪತ್ರಿಕೋದ್ಯಮಿಯಾಗಿ, ತತ್ವಜ್ಞಾನಿಯಾಗಿ, ಸಂವಿಧಾನತಜ್ಞರಾಗಿ, ಹೀಗೆ ಸಾಕಷ್ಟು ಕ್ಷೇತ್ರದಲ್ಲಿ ಪಾಂಡಿತ್ಯವನ್ನೊಂದವರು ಡಾ.ಬಿ.ಆರ್.ಅಂಬೇಡ್ಕರ್. ಅವರ ಜೀವನ ಸಾಧನೆಯನ್ನರಿತು ವಿಶ್ವದ ನೂರು ಜನ ಮಹಾ ಪುರುಷರಲ್ಲಿ ಅಂಬೇಡ್ಕರ್ ಮೊದಲನೆಯವರು ಎಂದು ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವ ವಿದ್ಯಾನಿಲಯವು ಗುರುತಿಸಿರುವುದು ಭಾರತೀಯರಿಗೆ ಒಂದು ಹೆಮ್ಮೆಯ ವಿಚಾರವೇ ಸರಿ.

ಡಾ.ಅಂಬೇಡ್ಕರ್ ಅವರು ಅರ್ಥಶಾಸ್ತ್ರ ವಿಷಯದಲ್ಲಿ ಜ್ಞಾನ ಮತ್ತು ಪರಿಣತಿ ಹೊಂದಿಲ್ಲದಿದ್ದರೆ ಸ್ವತಂತ್ರ ಭಾರತದ ಸಂವಿಧಾನವನ್ನು ರೂಪಿಸಲು ಬಹುಶಃ ಅಂಬೇಡ್ಕರ್ ಅವರಿಗೆ ಸಾಧ್ಯವಾಗುತ್ತಿರಲಿಲ್ಲವೇನೋ ಅನಿಸುತ್ತದೆ. ಅವರು ನಮ್ಮಲ್ಲಿದ್ದ ರಾಜ ವ್ಯವಸ್ಥೆಯನ್ನು ಫೆಡರಲ್ ಮಾದರಿಯಲ್ಲಿ ರೂಪಿಸುವಾಗ ಅದರ ಭಾಗವಾಗಿ ಕೇಂದ್ರ್ರ ಸರ್ಕಾರ ಹೆಚ್ಚಿನ ಅಧಿಕಾರ ಹಾಗೂ ಘಟಕ ರಾಜ್ಯಗಳಿಗೆ ಸಬಲ ಕೇಂದ್ರ ಸರ್ಕಾರದಲ್ಲಿ ನಿರ್ಧಿಷ್ಟ ಅಧಿಕಾರಗಳನ್ನು ಕೊಡುವ ವ್ಯವಸ್ಥೆ ಮಾಡಲು ಶ್ರಮಿಸಿದ್ದಾರೆ. ಭಾರತವನ್ನು ಆಧುನಿಕ ಯುಗದಲ್ಲಿ ಸುಖೀರಾಜ್ಯವನ್ನಾಗಿ ಗಟ್ಟಗೊಳಿಸುವ ನಿಟ್ಟಿನಲ್ಲಿ ಶ್ರೇಷ್ಟ ಆರ್ಥಿಕ ನೀತಿ ಮತ್ತು ತತ್ವಗಳ ವಿಚಾರಧಾರೆಗಳನ್ನೊಳಗೊಂಡ ಸಂವಿಧಾನ ನೀಡುವಲ್ಲಿ ಯಶಸ್ವಿಯಾಗುತ್ತಾರೆ. ಅವರು ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಆಯೋಗದ ಎದುರು ನೀಡಿದ ಸಾಕ್ಷ್ಯದಾರಗಳು ಸಾರ್ವಜನಿಕ ಹಣಕಾಸು ಆಢಳಿತದಲ್ಲಿ ಅವರು ಹೊಂದಿದ್ದ ಪರಿಣತಿ ಮತ್ತು ಆಗಾಧವಾದ ಜ್ಞಾನಕ್ಕೆ ಸಾಕ್ಷಿ. ಅವರು ತಮ್ಮ ವಿಶಿಷ್ಟ ಆರ್ಥಿಕ ಚಿಂತನೆಗಳನ್ನು ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕೀರ್ಣಗಳು, ಸಭೆ ಹಾಗೂ ನಿಯತಕಾಲಿಕೆಗಳಲ್ಲಿ ಪರಿಣಾಮಕಾರಿಯಾಗಿ ಮಂಡಿಸಿದ್ದಾರೆ. ಆದ್ದರಿಂದಲೇ ಅವುಗಳು ಅಂದಿನಿಂದ ಇಂದಿನವರೆಗೂ ಆಂಗ್ಲ ಅರ್ಥಶಾಸ್ತ್ರ ಪಂಡಿತರ ಗಮನ ಸೆಳೆಯುತ್ತಿದ್ದು, ಅವರ ಪ್ರಶಂಸೆಗಳಿಗೆ ಪಾತ್ರವಾಗಿದೆ.
ಅಂಬೇಡ್ಕರ್ ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ಬಡವರ ಬಗ್ಗೆ ಕಾಳಜಿಯನ್ನು ಹೊಂದಿದ್ದರು. ಅಸಮಾನತೆ, ಅನ್ಯಾಯ, ಶೋಷಣೆಯ ವಿರುದ್ಧ ಅವರಿಗಿದ್ದ ಸಿಟ್ಟು ತಮ್ಮ ಲೇಖನಗಳು ಮತ್ತು ಪ್ರಬಂಧಗಳಲ್ಲಿ ಕಠೋರವಾಗಿ ವ್ಯಕ್ತಪಡಿಸಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಬ್ರಿಟೀಷರು ಭಾರತದ ಸಂಪತ್ತನ್ನು ಹೇಗೆ ಕೊಳ್ಳೆ ಹೊಡೆದರು ಎಂಬುದನ್ನು ಅಂಬೇಡ್ಕರ್ ತೀವ್ರವಾಗಿ ಖಂಡಿಸಿದ್ದಾರೆ. ‘ದಿ ಅಡ್ಮಿಸ್ಟ್ರೇಷನ್ ಅಂಡ್ ಫೈನಾನ್ಸ್ ಆಫ್ ದಿ ಈಸ್ಟ್ ಇಂಡಿಯಾ ಕಂಪನಿ’ ಎಂಬ ಅವರ ಚೊಚ್ಚಲ ಪ್ರಬಂಧವು 1792 ರಿಂದ 1858 ವರೆಗಿನ ಧೀರ್ಘಾವಧಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಭಾರತವನ್ನು ಹೇಗೆ ಶೋಷಿಸಿತು ಎಂಬುದನ್ನು ತಿಳಿಸಿಕೊಡುತ್ತಾರೆ. ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ 1858ರಲ್ಲಿ ಸ್ಥಗಿತಗೊಳಿಸಿದಾಗ ಆದ ಅನ್ಯಾಯ ಪರಿಹರಿಸುವ ಬದಲಿಗೆ ಬ್ರಿಟೀಷ್ ಸಾಮ್ರಾಜ್ಯ ತನ್ನ ಅನುಬೋಗಕ್ಕೆ ತೆಗೆದುಕೊಂಡ ದೊಡ್ಡ ಮೊತ್ತದ ಸಾಲವನ್ನು ಮುಗ್ಧ ಭಾರತೀಯನ ತಲೆಗೆ ಹೇಗೆ ಕಟ್ಟಿತು ಎಂಬ ಸತ್ಯಾಂಶವನ್ನು ತಮ್ಮ ಸಂಶೋಧನೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಈ ಕೃತಿ ಈಸ್ಟ್ ಇಂಡಿಯಾ ಕಂಪನಿಯ ಆಢಳಿತದ ಒಂದು ತುಲನಾತ್ಮಕ ವಿವೇಚನೆಯಾಗಿತ್ತು. ಇದು ಬ್ರಿಟೀಷ್ ಚಕ್ರಾಧಿಪತ್ಯದ, ದುರಾಢಳಿತದ ವಿಮರ್ಶಾತ್ಮಕ ಮೌಲಿಕರಣದ ರೂಪದಲ್ಲಿರುವುದನ್ನು ನಾವು ಕಾಣಬಹುದು.

ಈ ಕೃತಿಯಲ್ಲಿ ಅಂಬೇಡ್ಕರ್ ನೀಡಿದ ಹೇಳಿಕೆ ಎಂತವರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತದೆ. ಅದೇನೆಂದರೆ, “ಭಾರತಕ್ಕೆ ಇಂಗ್ಲೆಂಡಿನ ಕೊಡುಗೆಯನ್ನು ವಿವೇಚಿಸಬೇಕಿದೆ. ಅದರಲ್ಲಿ ಎದ್ದು ಕಾಣುವ ಅಂಶವೇನೆಂದರೆ, ಆರ್ಥಿಕವಾಗಿ ಭಾರತಕ್ಕೆ ಇಂಗ್ಲೆಂಡಿನ ಕೊಡುಗೆಗಿಂತಲೂ ಇಂಗ್ಲೆಂಡಿಗೆ ಭಾರತ ನೀಡಿದ ಕೊಡುಗೆ ಆಗಾಧವಾದದ್ದು. ಇದು ದಿಗ್ಬ್ರಮೆಗೊಳಿಸುವ ಅಂಶವಾದರೂ ಸತ್ಯ ಸಂಗತಿಯಾಗಿದೆ. ಭಾರತಕ್ಕೆ ಇಂಗ್ಲೆಂಡಿನ ಕೊಡುಗೆ ಶೂನ್ಯವೆಂದು ಹೇಳಬಹುದು.” ಮುಂದುವರೆದು, ಅವರು ಹೀಗೆ ಹೇಳುತ್ತಾರೆ “ಇಂಗ್ಲೆಂಡ್ ಭಾರತದ ಬೆಳ್ಳಿ ಮತ್ತು ಬಂಗಾರದ ಸಂಗ್ರಹಕ್ಕೆ ಒಂದು ಚಿಕ್ಕಾಸನ್ನು ನೀಡಿಲ್ಲ. ಆದರೆ ಅದು ಭಾರತವನ್ನು ಎಷ್ಟರ ಮಟ್ಟಿಗೆ ಬರಿದು ಮಾಡುತ್ತದೆ ಎಂದರೆ ಇಡೀ ಪ್ರಪಂಚದಲ್ಲಿ ಒಂದು ಬತ್ತಿ ಹೋದ ಸ್ಥಳವನ್ನಾಗಿಸಿದೆ” ಎಂದು ಕಿಡಿಕಾರುತ್ತಾರೆ. ಈ ಮೇಲ್ಕಂಡ ಹೇಳಿಕೆಯನ್ನು ವಿಶ್ಲೇಷಿಸಿದರೆ ನಮಗ ನ್ನಿಸುವುದು ಭಾರತದ ಸ್ವತಂತ್ರ ಚಳುವಳಿಯಲ್ಲಿ ಧುಮುಕಿದ್ದ ಯಾವೊಬ್ಬ ಹೋರಾಟಗಾರರು ಈ ಮಟ್ಟಿಗೆ ಬ್ರಿಟಿಷರ ಆಳ್ವಿಕೆಯ ತೇಜೋವಧೆ ಮಾಡಿಲ್ಲದಿರುವುದನ್ನು ಇತಿಹಾಸ ಪಾಠ ಹೇಳಿಕೊಡುತ್ತದೆ. ಸಮಗ್ರ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ಬ್ರಿಟೀಷರ ದುರಾಡಳಿತದ ಆಳ್ವಿಕೆಯನ್ನು ಖಂಡಿಸಿದ ಏಕೈಕ ದೇಶ ಪ್ರೇಮಿಯನ್ನು ಭಾರತ ಕಂಡಿದ್ದೇ ಆದರೆ ಅದು ಡಾ.ಅಂಬೇಡ್ಕರ್ ಹೊರೆತು ಬೇರ್ಯಾರು ಅಲ್ಲ ಎಂಬುದನ್ನು ನಿರೂಪಿಸಬಹುದು. ಅಂಬೇಡ್ಕರ್ “ಇಂಗ್ಲೆಂಡ್ ಭಾರತಕ್ಕೆ ಶಾಂತಿಯನ್ನು ಒದಗಿಸಿದೆ ಎಂದು ಸ್ಪಷ್ಟ ಪಡಿಸುತ್ತಾರೆ. ಅದು ಸ್ಥಾಪಿಸಿದ ಆಢಳಿತ ವ್ಯವಸ್ಥೆ, ನ್ಯಾಯಾಂಗ ಪದ್ಧತಿ ಮುಂತಾದವು ಭಾರತಕ್ಕೆ ನೀಡಿದ ಕೊಡುಗೆಗಳಾಗಿವೆ. ಆದರೆ, ‘ಮೃಗ ಜೀವನದ ಶಾಂತಿಗಾಗಿ ಆರ್ಥಿಕ ದಾರಿದ್ರ್ಯಕ್ಕೆ ಪ್ರಾಶಸ್ತ್ಯ ಕೊಡಬೇಕೇ ಹೇಗೆ’ಎಂಬುದನ್ನು ಪ್ರತಿಯೊಬ್ಬನು ಅವಲೋಕಿಸಬೇಕಾದ ಸಂಗತಿ” ಎಂದು ಬಹಳ ಕಠೋರವಾಗಿಯೇ ಬ್ರಿಟೀಷರನ್ನು ನಿಂದಿಸಿದ್ದಾರೆ.

ಇಂದಿಗೂ ಕೂಡ ನಾವೆಲ್ಲಾ ತಿಳಿದಿರುವ ಹಾಗೇ ಒಬ್ಬ ಸಾಮಾನ್ಯ ಮನುಷ್ಯನಿಂದ ಹಿಡಿದು ಪ್ರಾಧ್ಯಾಪಕರು, ರಾಜಕಾರಣಿಗಳು, ಸಂಶೋಧಕರು, ಪತ್ರಕರ್ತರು ಮತ್ತು ಅಧಿಕಾರಿಗಳು ಹೀಗೆ ಬಹು ಮಂದಿ ಎಲ್ಲಾ ಕ್ಷೇತ್ರದಲ್ಲೂ ಕೇವಲ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚಿಸುತ್ತಾರೆ ಹೊರತು ಪರಿಹಾರ ಮಂಡಿಸುವಲ್ಲಿ ವಿಫಲರಾಗುತ್ತಾರೆ. ಆದರೆ ಅಂಬೇಡ್ಕರ್ ಅವರು ಸಮಸ್ಯೆಗಳ ಬಗ್ಗೆ ದನಿ ಎತ್ತಿದರೆ ಅದಕ್ಕೆ ಪರಿಹಾರವನ್ನು ಬೆನ್ನಹಿಂದೆಯೇ ನೀಡುತ್ತಿದ್ದ ಮಹಾನ್ ಪರಿವರ್ತಕರು. 24 ವಯಸ್ಸಿನಲ್ಲಿಯೇ ಆರ್ಥಿಕ ಸಮಸ್ಯೆ, ಸುಧಾರಣೆ ಮತ್ತು ಪರಿಹಾರಗಳ ಬಗ್ಗೆ ವೈಜ್ಞಾನಿಕವಾಗಿ ಚರ್ಚಿಸುತ್ತ್ತಿದ್ದಾರೆಂದರೆ ಊಹಿಸಿಕೊಳ್ಳಿ ಅಂಬೇಡ್ಕರ್ ಅವರ ಜ್ಞಾನ ಬಂಡಾರವನ್ನು. 1923ರಲ್ಲಿ ‘ದಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ದಿ ಪ್ರಾಬ್ಲಂ ಆಫ್ ರುಪೀ: ಇಟ್ಸ್ ಆರಿಜನ್ ಅಂಡ್ ಸೆಲ್ಯೂಷನ್’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸುತ್ತಾರೆ. ಜಗತ್ತಿನಲ್ಲೇ ರೂಪಾಯಿ ಸಮಸ್ಯೆ ಮತ್ತು ಪರಿಹಾರಗಳ ಬಗ್ಗೆ ಮಾತನಾಡಿದ ಮೊಟ್ಟ ಮೊದಲ ವ್ಯಕ್ತಿ ಅಂಬೇಡ್ಕರ್ ಎಂದು ಸಾಬೀತಾಗಿದೆ. ಇಂದಿಗೂ ಸಹ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿನ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಅಲ್ಲಿ ಪದವಿ ಪಡೆದುಕೊಂಡವರು ಬಾಬಾ ಸಾಹೇಬರ ಆರ್ಥಿಕ ಸಿದ್ಧಾಂತದ ಅನುಯಾಯಿಗಳಾಗಿದ್ದೇವೆ ಎಂದು ಸ್ವತಃ ಅವರೇ ಬ್ಲಾಗ್ಗಳಲ್ಲಿ ಬರೆದುಕೊಂಡಿರುವುದು ಲಭ್ಯವಿದೆ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ, ನೀತಿ ಮತ್ತು ತತ್ವಗಳನ್ನು ಮನಗಂಡು ಅವರ ಮಾರ್ಗದರ್ಶಕರಾಗಿದ್ದ ಪ್ರೊ.ಎಡ್ವಿನ್ ಕೆನಾನ್ ಅವರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಜಗತ್ತಿಗೆ ಉಪಯೋಗವಾಗುವ ಒಂದು ಅದ್ಭುತವಾದ ಸಂಶೋಧನಾ ಕೃತಿಯನ್ನು ನೀಡಿದ್ದೀರಿ ಎಂದು ತುಂಬು ಸಭೆಯಲ್ಲಿ ಅಂಬೇಡ್ಕರ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಾರೆ.

ಅಂಬೇಡ್ಕರ್ ಪ್ರಬುದ್ಧ ಅರ್ಥಶಾಸ್ತ್ರಜ್ಞರಾಗಿ ಹಣಕಾಸು ವ್ಯವಸ್ಥೆ, ನಿರ್ವಹಣೆ ಭೂಸ್ವಾಮ್ಯಕ್ಕೆ ಸಂಬಂಧಪಟ್ಟ ವಿಚಾರಗಳು, ಕೃಷಿ ಕೈಗಾರೀಕರಣ, ಹಿಡುವಳಿ, ಆಯವ್ಯಯ ಮಂಡನೆ, ಆರ್ಥಿಕ ಕಾನೂನು ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು. ಡಾ.ಅಂಬೇಡ್ಕರ್ ಭಾರತ ದೇಶದ ಕೃಷಿ, ಅರ್ಥ ನೀತಿಯ ಸಮಸ್ಯೆಗಳ ಮೇಲೆ ಅನೇಕ ಲೇಖನ ಮತ್ತು ಪ್ರಬಂಧಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಭಾರತದಲ್ಲಿ ಸಣ್ಣ ಹಿಡುವಳಿಗಳು ಮತ್ತು ಅದರ ಪರಿಣಾಮಗಳು ಎಂಬ ಲೇಖನದಲ್ಲಿ ಕೃಷಿ ಉತ್ಪಾದನೆಯ ಸಂಬಂಧಪಟ್ಟಂತೆ ಕೃಷಿ ಅರ್ಥ ನೀತಿಯ ಹಲವು ಸಮಸ್ಯೆಗಳಲ್ಲಿ ಅವರು ಕೃಷಿ ಉತ್ಪಾದಕತೆಯ ಮೇಲೆ ಪ್ರಭಾವ ಬೀರುವ ಹಿಡುವಳಿಗಳ ಗಾತ್ರ ವಿಷಯದ ಬಗ್ಗೆ (ಸಂಪುಟ 1, ಭಾಗ 5, ಪುಟ 514 ರಿಂದ 546 ಪರಿಷ್ಕೃತ ಆವೃತ್ತಿ 2015) ಸುದೀರ್ಘವಾಗಿ ಚರ್ಚಿಸಿದ್ದಾರೆ.

ಭಾರತದ ಭೂ ಹಿಡುವಳಿಗಳು ಗಾತ್ರದಲ್ಲಿ ಚಿಕ್ಕದಾಗಿರುವುದಲ್ಲದೇ ಅವುಗಳು ಚದುರಿ ಹೋಗಿವೆ ಎಂದು ಹೇಳುತ್ತಾರೆ. ಹಿಡುವಳಿಗಳ ಸಮಸ್ಯೆಗಳನ್ನು ಎರಡು ವಿಧಗಳಾಗಿ ವಿಂಗಡಿಸುತ್ತಾರೆ. ಮೊದಲನೆಯದು, ಈ ಹಿಡುವಳಿಗಳನ್ನು ಹೇಗೆ ಒಟ್ಟುಗೂಡಿಸುವುದು? ಎರಡನೆಯದು, ಒಗ್ಗೂಡಿಸಿದ ನಂತರ ಅವುಗಳನ್ನು ಯಾವ ರೀತಿ ಅಭಿವೃದ್ದಿಗೊಳಿಸಬೇಕು? ಎಂಬ ಈ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಪರಿಹಾರಗಳನ್ನು ನೀಡುತ್ತಾರೆ. ಭೂಮಿಗಳ ವಿಭಾಗದ ಬಗ್ಗೆ ಆಢಳಿತ ವರ್ಗದ ಅಭಿಪ್ರಾಯ ಭಿನ್ನವಾಗಿತ್ತು. ಅದು ಹಿಡುವಳಿಗಳನ್ನು ತುಂಡು ತುಂಡಾಗಿ ಹೊಡೆಯುವುದು ಸಮಸ್ಯಾತ್ಮಕವಾಗಿರುವುದರಿಂದ ಅವುಗಳನ್ನು ದೊಡ್ಡ ಆರ್ಥಿಕ ಹಿಡುವಳಿಗಳನ್ನಾಗಿ ಒಗ್ಗೂಡಿಸುವ ಅವಶ್ಯಕತೆಯ ಪರವಾಗಿತ್ತು. ಡಾ. ಅಂಬೇಡ್ಕರ್ ಅವರು ಈ ತರಹದ ಸಿದ್ಧ ಮಾದರಿಯ ಆರ್ಥಿಕ ಹಿಡುವಳಿಗಳನ್ನು ವಿವರಿಸುತ್ತಾ ಯಾವುದೇ ಹಿಡುವಳಿಗಳನ್ನು ಆರ್ಥಿಕವಾಗಿ ಮಾಡುವಲ್ಲಿ ಅದರ ಗಾತ್ರವು ಅಪ್ರಸ್ತುತ ಎಂದು ಪ್ರತಿಪಾದಿಸುತ್ತಾರೆ.

ಅಕ್ಟೋಬರ್ 10, 1927 ರಂದು ಬಾಂಬೆಯ ಲೆಜಿಸ್ಲೇಟಿವ್ ಕೌನ್ಸಿಲ್ನಲ್ಲಿ ನಡೆದ “ಸಣ್ಣ ಹಿಡುವಳಿದಾರರ ರಿಲಿಫ್ ರಿಲೀಫ್ ಬಿಲ್ ” ಚರ್ಚೆಯಲ್ಲಿ ಅಂಬೇಡ್ಕರ್ ಪಾಲ್ಗೊಂಡು ಬಹಳ ಪ್ರಾಯೋಗಿಕವಾಗಿ ತಮ್ಮ ವಿಚಾರವನ್ನು ಮಂಡಿಸುತ್ತಾ ಅಗ್ರೇರಿಯನ್ ಪ್ರಶ್ನೆಗೆ ಪರಿಹಾರ ಅಡಗಿರುವುದು ಹೊಲ, ಗದ್ದೆಗಳ ಪ್ರಮಾಣವನ್ನು ಹೆಚ್ಚಿಸುವುದರಲ್ಲಿ ಅಲ್ಲ. ಆದರೆ ಅಧಿಕ ಬಂಡವಾಳ ಹಾಗೂ ಹೆಚ್ಚು ಶ್ರಮಗಳನ್ನೊಳಗೊಂಡ ಭೂಮಿಯ ಮೇಲಿನ ತೀವ್ರಗತಿಯ ಬೇಸಾಯದಿಂದ ಎಂದು ಪ್ರತಿಪಾದಿಸುತ್ತಾರೆ. ಮುಂದುವರಿಯುತ್ತಾ, ಸೂಕ್ತ ವಿಧಾನವೆಂದರೆ ಸಹಕಾರಿ ಕೃಷಿಯನ್ನು ಪರಿಚಯಿಸುವುದು ಮತ್ತು ಸಣ್ಣ ಹೊಲ ಗದ್ದೆಗಳ ಮಾಲೀಕರನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸುವುದು ಒಳ್ಳೆಯದು ಎನ್ನುತ್ತಾರೆ. ಅಂಬೇಡ್ಕರ್ ಸೂಚಿಸಿದ ಸಹಕಾರಿ ಮಾದರಿಯ ಸಲಹೆ ನನ್ನ ಸ್ವಂತಹದಲ್ಲ ಬದಲಾಗಿ ಈ ವ್ಯವಸ್ಥೆ ಯುರೋಪಿಯನ್ ರಾಷ್ಟ್ರಗಳು ಮಾತ್ರವಲ್ಲದೇ ಈಗಾಗಲೇ ಇಟಲಿ, ಫ್ರಾನ್ಸ್ ಹಾಗೂ ಇಂಗ್ಲೆಂಡಿನ ಕೆಲವು ಕಡೆ ಅಸ್ಥಿತ್ವದಲ್ಲಿದೆ ಎಂದು ತಿಳಿಸುತ್ತಾರೆ.

ಭಾರತದ ಆರ್ಥಿಕ ವ್ಯವಸ್ಥೆ, ಆಢಳಿತ ನಿಯಮಗಳು ಬಲಿಷ್ಠವಾಗಿರಬೇಕು ಮತ್ತು ಅದು ಹೀಗೆ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿರಬೇಕೆಂದು ಸತತ ನಾಲ್ಕು ದಶಕಗಳ ಕಾಲ ಅಂಬೇಡ್ಕರ್ ಶ್ರಮಿಸಿದ್ದಾರೆ. ಬಾಬಾ ಸಾಹೇಬರ ಆರ್ಥಿಕ ಚಿಂತನೆ, ತತ್ವ ಮತ್ತು ಸಿದ್ಧಾಂತವನ್ನು ಈ ಮೇಲೆ ಚರ್ಚಿಸಿದಂತೆ ಸಾಕಷ್ಟು ಕೊಡುಗೆಯನ್ನು ಗಮನಿಸಿದ್ದೀರಿ. ಆದರೆ ಬಹಳ ಮುಖ್ಯವಾದ ವಿಷಯವೇನೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಬಾಬಾ ಸಾಹೇಬರ ಕೊಡುಗೆ ಏನೆಂಬುದನ್ನು ಇಡೀ ದೇಶಾದ್ಯಂತ ಚರ್ಚಿಸಬೇಕಿದೆ. 1935 ಏಪ್ರಿಲ್ 1 ರಂದು ಸ್ಥಾಪನೆಯಾದ ಆರ್ಬಿಐಗೆ ಆರ್ ಬಿ ಐಗೆ ಅಂಬೇಡ್ಕರ್ ನೀಡಿದ ಕೊಡುಗೆ ಮಹತ್ವದ್ದು. ಅದರ ಸ್ಥಾಪನೆ ಮತ್ತು ಅಭ್ಯೋದಯಕ್ಕೆ ಬಾಬಾ ಸಾಹೇಬರ ಅಪಾರವಾದ ಕೊಡುಗೆ ಏನೆಂಬುದು ಭಾರತದ ಕೋಟ್ಯಾಂತರ ಜನರಿಗೆ ಇನ್ನೂ ತಿಳಿದೇ ಇಲ್ಲದಿರುವುದು ಆಶ್ಚರ್ಯವೆನಿಸುತ್ತದೆ. 1924-25ರಲ್ಲಿ ‘ದಿ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್’ ಆಯೋಗವು ಭಾರತದ ಹಣ ವ್ಯವಸ್ಥೆಯ ಪರಿಶೀಲನೆಗಾಗಿ ಮತ್ತು ಅದರ ಹಣ ಚಲಾವಣೆಯ ಸುಧಾರಣೋಪಾಯಗಳನ್ನು ಸೂಚಿಸಲು ಭಾರತಕ್ಕೆ ಭೇಟಿ ನೀಡುತ್ತದೆ. ಆ ಸಂದರ್ಭದಲ್ಲಿ ಭಾರತದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಭಾರತದಲ್ಲಿದ್ದ ಕೆಲವು ಅರ್ಥಶಾಸ್ತ್ರಜ್ಞರನ್ನು ಭೇಟಿ ಮಾಡಿದರೂ ಅವರಿಗೆ ಸೂಕ್ತ ಮಾಹಿತಿ ಮತ್ತು ಸಲಹೆ ದೊರೆಯದ ಕಾರಣ ಅಂಬೇಡ್ಕರ್ ಅವರನ್ನು ಕಾಣಲು ತೀರ್ಮಾನಿಸುತ್ತಾರೆ. ಆ ಆಯೋಗದ ನೇತೃತ್ವವನ್ನು ವಹಿಸಿ ಅಧ್ಯಕ್ಷರಾಗಿದ್ದವರು ಹಿಲ್ಟನ್ ಯಂಗ್ ಅವರು. ಆಯೋಗದಲ್ಲಿದ್ದ ಹತ್ತು ಸದಸ್ಯರು ಮತ್ತು ಇಬ್ಬರು ಕಾರ್ಯದರ್ಶಿಗಳಾದ ಆರ್.ಎನ್.ಮುಖರ್ಜಿ, ನಾರ್ಕೋಟ್ ವಾರೆನ್, ಆರ್.ಎ.ಮಾಂಟ್, ಎಂ.ಬಿ.ದಾದಾಭಾಯ್, ಹೆನ್ರಿ ಸ್ಟ್ರ್ಯಾಕೋಷ್, ಅಲೆಕ್ಸ್ ಆರ್.ಮರ್ರೆ, ಪುರುಷೋತ್ತವi ದಾಸ್, ಠಾಕೂರ್ದಾಸ್, ಜೆ.ಸಿ.ಕೋಯಾಜಿ, ಡಬ್ಲೂ.ಇ.ಪ್ರೆಸ್ಟನ್ ಅವರುಗಳು ಸದಸ್ಯರಾದರೆ, ಜಿ.ಹೆಚ್.ಬಾಕ್ಸಟರ್, ಮತ್ತು ಎ.ಅಯ್ಯಂಗಾರ್ ಅವರು ಕಾರ್ಯದರ್ಶಿಗಳಾಗಿರುತ್ತಾರೆ. ಈ ಆಯೋಗವು ಬಾಬಾ ಸಾಹೇಬರನ್ನು ಭೇಟಿ ಮಾಡಲು ಬಂದ ಸಂದರ್ಭದಲ್ಲಿ ಭಾರತದ ಹಣ ವ್ಯವಸ್ಥೆಯ ಪರಿಶೀಲನೆ ಮತ್ತು ಅದರ ಹಣ ಚಲಾವಣೆಯ ಸುಧಾರಣೋಪಾಯಗಳನ್ನು ಸೂಚಿಸಲು ಒಂಭತ್ತು ಪ್ರಶ್ನೆಗಳನ್ನು ಅವರ ಮುಂದಿಡುತ್ತಾರೆ (ರಿಪೋರ್ಟ್ ಆಫ್ ದಿ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್ ಸಂಪುಟ 3, ಅನುಬಂಧ 95ಎ, ಪುಟ 612). ಆಯೋಗವು ಕೇಳಿದ 9 ಪ್ರಶ್ನೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಆಯೋಗಕ್ಕೆ ಸಾಕ್ಷ್ಯಧಾರಗಳ ಸಮೇತ ಪುಟಗಟ್ಟಲೇ ಲಿಖಿತ ಹೇಳಿಕೆಗಳನ್ನು ನೀಡುತ್ತಾರೆ (ಪರಿಷ್ಕೃತ ಆವೃತ್ತಿ 2015, ಸಂಪುಟ5, ಪುಟ 598). ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಲು ರೂಪುರೇಷೆಗಳ ಜೊತೆ ಅದರ ಕಾರ್ಯಪ್ರವೃತ್ತಿ ಮತ್ತು ನೀಲ ನಕಾಶೆಯನ್ನು ಕಮಿಷನ್ ಮುಂದಿಡುತ್ತಾರೆ. ಬಾಬಾ ಸಾಹೇಬ್ ಅವರಿಗಿದ್ದ ಜ್ಞಾನ ಮನಗಂಡಿದ್ದ ಆಯೋಗವು ಅವರು ಮಂಡಿಸಿದ ವಿಚಾರ ಮತ್ತು ಸಲಹೆಗಳನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿಯೇ ಆರ್ ಬಿ ಐ ಯನ್ನು ಕಾರ್ಯರೂಪಕ್ಕೆ ತರಲು ಕಮಿಷನ್ ಮಹತ್ವದ ನಿರ್ಧಾರ ಕೈಗೊಳ್ಳುತ್ತದೆ. ಸಭೆಯಲ್ಲಿ ಚರ್ಚಿತವಾದ ವಿಚಾರಗಳನ್ನು ದಾಖಲಾಯಿಸಿಕೊಂಡು 1934ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿ ಆರ್ಬಿಐ ಆರ್ ಬಿ ಐ ಕಾಯ್ದೆಯನ್ನು ಜಾರಿಮಾಡುತ್ತದೆ. ಇಂದು ಆರ್ ಬಿ ಐ ಬಹುದೊಡ್ಡ ಸಂಸ್ಥೆಯಾಗಿ ಯಾವುದೇ ಲೋಪದೋಷಗಳಿಲ್ಲದೇ ಕಾರ್ಯ ನಿರ್ವಹಿಸುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣಕರ್ತರು ಬಾಬಾ ಸಾಹೇಬ್ ಅಂಬೇಡ್ಕರ್. ಮತ್ತೊಂದು ವಿಶೇಷವೇನೆಂದರೆ 1924-25ರಲ್ಲಿ ಅಂಬೇಡ್ಕರ್ ಅವರನ್ನು ಭೇಟಿ ಮಾಡಲು ಹಾಜರಾಗಿದ್ದ ಆಯೋಗದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ‘ದಿ ಪ್ರಾಬ್ಲಂ ಆಫ್ ರುಪೀ: ಇಟ್ಸ್ ಆರಿಜನ್ ಅಂಡ್ ಇಟ್ಸ್ ಸಲ್ಯೂಷನ್’ ಪುಸ್ತಕವನ್ನು ತಮ್ಮ ಬಳಿಯೇ ಇಟ್ಟುಕೊಂಡಿರುತ್ತಾರೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ 1920-30ರ ದಶಕದಲ್ಲಿಯೇ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿತ್ತು ಎಂಬುವುದಕ್ಕೆ ಸತ್ಯ ನಿದರ್ಶನವಾಗಿದೆ. ಅದಕ್ಕೆ ತಾನೇ ನೊಬೆಲ್ ಪ್ರಶಸ್ತಿ ಪುರಷೃತರಾದ ಅಮಾರ್ತ್ಯ ಸೇನ್ ಕೂಡ ಬಾಬಾ ಸಾಹೇಬರನ್ನು ಭಾರತ ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ. ಮುಂದುವರೆದು ಅವರು ಬಾಬಾ ಸಾಹೇಬರ ರಾಷ್ಟ್ರದ ಆರ್ಥಿಕ ಸಮಸ್ಯೆಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಒದಗಿಸಿದ ಮಹಾನ್ ವ್ಯಕ್ತಿ ಎಂದು ಪ್ರತಿಪಾದಿಸುತ್ತಾರೆ. ಮತ್ತೊಂದು ಸತ್ಯವೆಂದರೆ ಭಾರತದಲ್ಲಿ ಸೋಕಾಲ್ಡ್ ಬುದ್ದಿ ಜೀವಿಗಳು ಬಾಬಾ ಸಾಹೇಬರನ್ನು ದೂರ ತಳ್ಳಿದರೂ ಅಮಾರ್ತ್ಯ ಸೇನ್ ಮಾತ್ರ ಆರ್ಥಿಕ ವಿಷಯದಲ್ಲಿ ಬಾಬಾ ಸಾಹೇಬರ ಅನುಯಾಯಿಯಾಗಿ ಬಿಡುತ್ತಾರೆ. ನನಗೆ ನೊಬೆಲ್ ಧಕ್ಕಿರುವುದೇ ಅಂಬೇಡ್ಕರ್ ಅವರ ಚಿಂತನೆಗಳಿಂದಲೇ ಎಂಬುದನ್ನು ಸ್ವತಃ ಅವರೇ ಸಾಕಷ್ಟು ಬಾರಿ ಕಾನ್ಫರೆನ್ಸ್ಗಳಲ್ಲಿ ಹೇಳಿಕೊಂಡಿರುವುದು ದಾಖಲಾಗಿವೆ.

ಪ್ರಬುದ್ಧ ಆರ್ಥಿಕ ತಜ್ಞರಾಗಿ ಡಾ.ಅಂಬೇಡ್ಕರ್ ಅವರು ಮಾಡಿರುವ ಸಾಧನೆ ಶ್ಲಾಘನೀಯವಾದದ್ದು. ಭಾರತದ ಆರ್ಥಿಕ ವ್ಯವಸ್ಥೆ ಮತ್ತು ಆಢಳಿತವನ್ನು ಸದೃಢಗೊಳಿಸಲು ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳಿಗಾಗಿ ಹಗಲು ರಾತ್ರಿ ದುಡಿದ ಮಹಾನ್ ಚೇತನ ಡಾ.ಅಂಬೇಡ್ಕರ್. ಇಷ್ಟೆಲ್ಲಾ ಸಾಧನೆಗೈದಿರುವ ಅಂಬೇಡ್ಕರ್ ಅವರ ಭಾವಚಿತ್ರವು ಭಾರತದ ನೋಟುಗಳ ಮೇಲೆ ರಾರಾಜಿಸಬೇಕಿತ್ತು. ಆದರೆ ಆಗಾಗಿಲ್ಲದಿರುವುದಕ್ಕೆ 65 ವರ್ಷಗಳ ಕಾಲ ನಮ್ಮನ್ನಾಳಿದ ಕಾಂಗ್ರೆಸ್, ಜನತಾ ಪಾರ್ಟಿ, ಜನತಾ ಪಾರ್ಟಿ (ಸೆಕ್ಯೂಲರ್), ಜನತಾದಳ, ಭಾರತೀಯ ಜನತಾ ಪಕ್ಷಗಳ ನಾಯಕರೇ ಕಾರಣ. ಇದುವರೆಗೂ ಯಾವೊಂದು ಸರ್ಕಾರವಾಗಲೀ ನಾಯಕರುಗಳಾಗಲೀ ಅಥವಾ ರಾಜಕೀಯ ಮೀಸಲಾತಿಯ ಪಲಾನುಭವಿಗಳಾಗಲೀ, ಆರ್ ಬಿ ಐ ಇತಿಹಾಸವನ್ನರಿತ ಗವರ್ನರ್ಗಳಾಗಲಿ ಯಾವೊಂದು ಸಭೆಯಲ್ಲು ಅಂಬೇಡ್ಕರ್ ಅವರನ್ನು ನೋಟುಗಳ ಮೇಲೆ ಕಾಣಬೇಕೆಂದು ಸದ್ದು ಮಾಡದಿರುವುದು ಘೋರ ದುರಂತ.

ಆದರೆ ಈಗ ಕಾಲ ಬದಲಾದಂತಿದೆ. ಶಿಖರದೆತ್ತರ ಸಾಧನೆಗೈದಿರುವ ಅಂಬೇಡ್ಕರ್ ಅವರ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಿಸುವಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧಕರು, ಸರ್ಕಾರೇತರ ಸಂಸ್ಥೆಗಳು, ಅಂಬೇಡ್ಕರ್ವಾದಿಗಳು ದೇಶಾದ್ಯಂತ ಧನಿ ಎತ್ತುವ ಕಾಲ ಬಂದಿದೆ. ಈಗಾಗಲೇ ಈ ವಿಚಾರವಾಗಿ ಸಾಕಷ್ಟು ಸಕಾರಾತ್ಮಕ ಚರ್ಚೆಗಳಾಗುತ್ತಿರುವುದು ಸಂತಸವೆನಿಸಿದೆ. 2012ರ ಜುಲೈನಲ್ಲಿ ‘ಮುಸ್ಲಿಂ ಸ್ವಯಂ ಸೇವಾ ಸಂಘದ ಸಾವಿರಾರು ಮುಸ್ಲಿಂ ಬಾಂಧವರು ನೋಟುಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಚ್ಚಾಗಬೇಕೆಂದು ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅಂದು ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಹಾಗೂ ಆರ್ ಬಿ ಐ ಗೆ ಮನವಿ ಸಲ್ಲಿದ್ದರು. ಇದರ ಬಗ್ಗೆ ಸದನದಲ್ಲಿ ಚರ್ಚಿಸುವುದಾಗಿಯೂ ಕೆಲ ಕಾಂಗ್ರೆಸ್ ಮಂತ್ರಿಗಳು ಭರವಸೆಕೊಟ್ಟಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

2014ನೆಯ ಲೋಕಾಸಭಾ ಚುನಾವಣಾ ಪುರ್ವದಲ್ಲಿಯೇ ಬಹುಜನ ಸಮಾಜ ಪಕ್ಷದ ಅಧಿನಾಯಕಿ ಕುಮಾರಿ ಮಾಯಾವತಿ ಅವರು ಬಿಎಸ್ಪಿ ಅಧಿಕಾರಕ್ಕೆ ಬಂದರೆ ಬಾಬಾ ಸಾಹೇಬ್ ಅವರ ಭಾವಚಿತ್ರವನ್ನು ಮುದ್ರಿಸುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದರು. ಒಂದು ಸಾವಿರ ರುಪಾಯಿಯ ಮೇಲೆ ಅಂಬೇಡ್ಕರ್ ಅವರ ಚಿತ್ರವನ್ನು ಮುದ್ರಿಸಿ ಸಾಂಕೇತಿಕವಾಗಿ ನೋಟಿನ ಮಾದರಿಯನ್ನೆ ಬಿಡುಗಡೆಗೊಳಿಸಿದ್ದರು. ಇದನ್ನು ಗಮನಿಸಿದರೆ ಯಾವ ರಾಷ್ಟ್ರೀಯ ರಾಜಕೀಯ ಪಕ್ಷಗಳು ಮಾಡದ ಸಾಹಸವನ್ನು ಮಾಯಾವತಿ ಮಾಡುತ್ತಾರೆ. ಮತ್ತೊಂದೆಡೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಹಿಂದೂ ಪರ ಸಂಘಟನೆಗಳಲ್ಲೊಂದಾದ ಹಿಂದು ಮಹಾಸಭಾದವರು ಭಾರತದ ನೋಟುಗಳಲ್ಲಿ ಗಾಂಧೀಜಿಯವರ ಭಾವಚಿತ್ರ ಅಚ್ಚಾಗುವುದನ್ನು ತಡೆದು ಡಾ.ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಅವರ ಭಾವಚಿತ್ರಗಳನ್ನು ಮುದ್ರಿಸಬೇಕೆಂದು 2015ರ ಜನವರಿ 3ರಂದು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು ಉಂಟು.

ಇತ್ತೀಚೆಗೆ, ರಾಷ್ಟ್ರೀಯ ಸಲಹಾ ಮಂಡಳಿಯ ಮಾಜಿ ಸದಸ್ಯರಾದ ನರೇಂದ್ರ ಜಾದವ್ ಅವರು 1996ರ ನಂತರ ಎಲ್ಲಾ ನೋಟುಗಳಲ್ಲಿ ಗಾಂಧೀಜಿಯ ಫೋಟೋಗಳು ಅಚ್ಚಾಗಿದೆ. ಆದರೆ ಡಾ.ಅಂಬೇಡ್ಕರ್ ಹಾಗೂ ಸ್ವಾಮಿ ವಿವೇಕಾನಂದರ ಚಿತ್ರಗಳು ಯಾಕಿಲ್ಲ ಎಂಬ ಪ್ರಶ್ನೆಯನ್ನೆತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಡಾ.ಅಂಬೇಡ್ಕರ್ ಹಾಗೂ ಸ್ವಾಮಿ ವಿವೇಕಾನಂದರ ಚಿತ್ರಗಳನ್ನು ಮುದ್ರಿಸಬೇಕೆಂದು ಸಲಹೆ ನೀಡುವುದಾಗಿ ಅವರು ನೀಡಿರುವ ಹೇಳಿಕೆ ಜನವರಿ1, 2016 ರಂದು ಎಲ್ಲಾ ಸುದ್ಧಿ ಮನೆಗಳಲ್ಲೂ ಸದ್ದು ಮಾಡಿತ್ತು.

ಶೈಕ್ಷಣಿಕ ವಲಯ, ಸರ್ಕಾರೇತರ ಸಂಸ್ಥೆಗಳು, ಅಂಬೇಡ್ಕರ್ ವಾದಿಗಳು, ನಿವೃತ್ತ ಕೇಂದ್ರ ಸರ್ಕಾರದ ಅಧಿಕಾರಿಗಳು ಮತ್ತು ಹಿಂದು ಪರ ಸಂಘಟನೆಗಳು ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರವು ಭಾರತದ ನೋಟುಗಳ ಮೇಲೆ ಅಚ್ಚಾಗಬೇಕೆನ್ನುತ್ತಿರುವುದೇನೋ ಸರಿ. ಆದರೆ ನಾವಿಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದುದ್ದು ಏನೆಂದರೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುದ್ರಿಸಬೇಕೆಂದು ಒತ್ತಾಯ ಮಾಡುತ್ತಿರುವವರಲ್ಲಿ ಎರಡು ಪಂಗಡಗಳಿವೆ. ಮೊದಲನೆಯವರು ಅಂಬೇಡ್ಕರ್ ವಾದಿಗಳಾದರೆ, ಎರಡನೆಯವರು, ಅಂಬೇಡ್ಕರ್ ವಾದಿಗಳ್ಳಲ್ಲದವರು. ಸ್ವಾತಂತ್ರ್ಯದ ನಂತರ ಭಾರತದಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಎಲ್ಲಾ ಜಾತಿ ಜನಾಂಗದ ನಾಯಕರು ರಾಜಕೀಯವಾಗಿ ಬಳಸಿಕೊಂಡು ದಲಿತ ಸಮುದಾಯ ಮತ್ತು ಸಂಘಟನೆಗಳನ್ನು ದಿಕ್ಕು ತಪ್ಪಿಸಿದ್ದಾರೆ. ಆದರೆ ಡಾ.ಅಂಬೇಡ್ಕರ್ ಭಾವಚಿತ್ರವನ್ನು ಇಂಡಿಯನ್ ಕರೆನ್ಸಿಯಲ್ಲಿ ಮುದ್ರಿಸಬೇಕೆಂದು ಎದ್ದಿರುವ ಅಲೆ ಮತ್ತೆ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಒಂದೆಡೆ ಅಂಬೇಡ್ಕರ್ ವಾದಿಗಳು ಬಾಬಾ ಸಾಹೇಬರ ಸಾಧನೆಯನ್ನರಿತು ಅಭಿಮಾನದಿಂದ ಮನವಿ ಮಾಡಿದರೆ, ಮತ್ತೊಂದೆಡೆ ಹಿಂದೂ ಪರ ಸಂಘಟನೆಗಳು (ಹಿಂದೂವಾದಿಗಳು) ವಲ್ಲದ ಮನಸ್ಸಿನಿಂದ ಅಂಬೇಡ್ಕರ್ ಅವರ ಹೆಸರನ್ನು ಎಳೆತಂದು ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ, ಸ್ವಾಮಿ ವಿವೇಕಾನಂದ ಹಾಗೂ ಇನ್ನಿತರ ಹಿಂದೂ ಧರ್ಮಿಯರ ಮಹಾನುಭವರನ್ನು ಭಾರತದ ನೋಟುಗಳ ಮೇಲೆ ಮುದ್ರಿಸಲು ಒತ್ತಾಯಿಸುತ್ತಿರುವುದು ಯಾವ ನ್ಯಾಯ?

ಅಂಬೇಡ್ಕರ್ ಅವರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳು ಸಮಕಾಲಿನ ಸಮಾಜದ ಎಲ್ಲಾ ಸಮಸ್ಯೆಗಳನ್ನು ಗುಣಪಡಿಸುವ ಒಂದು ಮೆಡಿಸಿನ್ ಇದ್ದಹಾಗೆ. ಅವರನ್ನು ಮುಖ್ಯವಾಹಿನಿಯ ಮುಂಭಾಗದಲ್ಲಿ ತಂದು ಮಾತನಾಡುವಾಗ ಜಾತಿಯನ್ನು ಸಿಲುಕಿ ಹಾಕಿ ಹಿಂದೆ ಸರಿಯುತ್ತಿರುವುದು ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರ್ಯ ನಂತರವೂ ನಡೆಯುತ್ತಾ ಬಂದಿರುವುದು ಇನ್ನಾದರೂ ನಿಲ್ಲಬೇಕಿದೆ. ಇನ್ನೂ ಮುಂದಾದರೂ ಅವರನ್ನು ಜಾತಿಯ ಸಂಕೋಲೆಯಿಂದ ಕಳಚಿ ಅನಂತರ ಮಾತನಾಡುವ ಮನೋಭಾವನೆಗಳು ಹುಟ್ಟಬೇಕಿದೆ. ಆಗಾದಾಗ ಮಾತ್ರ ನಮ್ಮೊಳಗಿನ ವೈರುದ್ಯಗಳು ಕೊನೆಗೊಂಡು ಚಿಂತಕರನ್ನು ಚಿಂತಕರೆಂದು, ತಜ್ಞರನ್ನು ತಜ್ಞರೆಂದು ಕಾಣಲು ಸಾಧ್ಯವಾಗುತ್ತದೆ. ಹೊರ ದೇಶಗಳಲ್ಲಿ ಅಂಬೇಡ್ಕರ್ ಅವರನ್ನೆ ಕೇಂದ್ರ ಬಿಂದುವಾಗಿಟ್ಟುಕೊಂಡು ನಡೆಯುತ್ತಿರುವ ಚರ್ಚೆ, ಸಭೆ ಮತ್ತು ಸಂಶೋಧನೆಗಳು ಭಾರತದಲ್ಲಿಯೂ ಹೆಚ್ಚೆಚ್ಚು ನಡೆಯಬೇಕಿದೆ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ಮತ್ತು ಕೊಡುಗೆಗಳ ಬಗ್ಗೆ ಸಾರ್ವಜನಿಕವಾಗಿ, ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ವಲಯದಲ್ಲಿ ಹೆಚ್ಚು ಚರ್ಚೆಗಳು ಪ್ರಾರಂಭವಾಗಬೇಕಿದೆ. ಬಾಬಾ ಸಾಹೇಬ್ ಅವರ 125ನೆಯ ಜಯಂತೋತ್ಸವ ಆಚರಣೆಯಲ್ಲಿರುವ ಕೇಂದ್ರ ಸರ್ಕಾರ ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ, ಆರ್ ಬಿ ಐ ನಿರ್ಮಾತೃಗಳಾದ ಬಾಬಾ ಸಾಹೇಬ್ ಡಾ.ಬಿಆರ್.ಅಂಬೇಡ್ಕರ್ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಿಸಿದಾಗ ಮಾತ್ರ ನೈಜ್ಯ ಮಹಾತ್ಮರಿಗೆ ಗೌರವ ಸಲ್ಲಿಸಿದಂತಾಗುತ್ತದೆ.

~~

ದಿಲೀಪ್ ನರಸಯ್ಯ ಎಮ್, ಮೈಸೊರು ವಿಶ್ವವಿದ್ಯಾನಿಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿಯಲ್ಲಿ ಸಂಶೋದನ ವಿದ್ಯಾರ್ಥಿಯಾಗಿದ್ದಾರೆ. ಈ ಪ್ರಬಂಧವನ್ನು ಏಪ್ರಿಲ್ ೨೦೧೬ ರಲ್ಲಿ ಬಿಡುಗಡೆಯಾದ ಇವರ ಪ್ರಥಮ ಪುಸ್ತಕ ‘ದಲಿತರು ಮತ್ತು ಮಾಧ್ಯಮ’ ದಿಂದ ತೆಗೆದುಕೊಳ್ಳಲಾಗಿದೆ.

 

Be the first to comment on "ಡಾ.ಬಿ.ಆರ್ ಅಂಬೇಡ್ಕರ್: ಭಾರತದ ನೋಟುಗಳ ಮೇಲೆ ಯಾಕಿಲ್ಲ..?"

Leave a comment

Your email address will not be published.


*