ದೇಶಭಕ್ತಿ ಮತ್ತು ಸಂಸ್ಕೃತಿಯ ಹೇಸರಿನಲ್ಲಿ ದಲಿತ ಅಲ್ಪಸಂಖ್ಯಾತರ ಕಗ್ಗೂಲೆಗಳು

 

ಹುಚ್ಚಂಗಿ ಪ್ರಸಾದ್ ಸಂತೇಬೆನ್ನೂರು (Hucchangi Prasad)

 

hucchangi prasadಇಂದು ಡಾ.ಬಿ.ಅರ್.ಅಂಬೇಡ್ಕರವರ 125 ನೇ ಜನ್ಮೋತ್ಸವದಲ್ಲಿ ಭಾರತ ಮಿಂದೇಳುತ್ತಿದೆ. ವಿಶ್ವಮಟ್ಟದಲ್ಲಿ ಅಂಬೇಡ್ಕರವರ ಜಯಂತಿಯನ್ನು ”ಜಾಗತೀಕ ಜ್ಞಾನ” ದಿನವನ್ನಾಗಿ ಅರ್ಥಪೊರ್ಣವಾಗಿ ಆಚರಿಸುತ್ತಿದ್ದರೆ ಭಾರತದ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ರಾಜಕಾರಣಿಗಳು ಬಾಬಾಸಾಹೇಬರ ಉತ್ಸವ ಮೂರ್ತಿಯನ್ನೊತ್ತು ಹೊಗಳುತ್ತ ಪ್ಲೆಕ್ಸ್‌ ಹಾಗೂ ಮಾಧ್ಯಮಗಳಲ್ಲಿ ಭೂಬ್ಬೆಹೊಡೆಯುತ್ತಿದ್ದಾರೆ.

ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯಂತು ಅಂಬೇಡ್ಕರವರನ್ನು ಮೈಮೇಲೆ ಅವಾಹಿಸಿಕೊಂಡಂತೆ ಮಾತನಾಡುತ್ತ ಲಂಡನ್ನಲ್ಲಿ ಅಂಬೇಡ್ಕರ್ ವಾಸವಿದ್ದ ಮನೆ ಹಾಗೂ ಚನ್ನೈನಲ್ಲಿರುವ ಅವರ ಸಮಾಧಿಯನ್ನು ಅಬಿವೃದ್ದಿಗೂಳಿಸಿ ಪ್ರವಾಸಿತಾಣವಾಗಿ ಮಾಡಲು ಕೋಟಿಗಟ್ಟಲೆ ಅನುಧಾನ ನೀಡುತ್ತಿದ್ದಾರೆ.ಬ್ರಾಹ್ಮಣರ ಹಿಡಿತಲ್ಲಿರುವ ಮುದ್ರಣ ಹಾಗೂ ಎಲೆಕ್ಟಾನಿಕ್ ಮಾಧ್ಯಮಗಳು ಕೆಲವು ನಕಲಿ ಅಂಬೇಡ್ಕರ ಅನಯಾಯಿಗಳಿಂದ ಹಾಗೂ ನಕಲಿ ದಲಿತ ಸಾಹಿತಿಗಳು,ಚಿಂತಕರು,ಬರಹಗಾರರಿಂದ ತಮಗೆ ಇಷ್ಟವಾದ ವಿಚಾರಗಳನ್ನು ಮಾತಾಡಿಸುತ್ತ ಅಂಬೇಡ್ಕರವರ ನೈಜ ವಿಚಾರಗಳನ್ನು ಗಂಟುಕಟ್ಟಿಕ್ಕಿ ಅಂಬೇಡ್ಕರವರನ್ನು ಹೊಗಳಿ ಹೊನ್ನಶೀಲಕ್ಕೇರಿಸುತ್ತಿದ್ದಾರೆ.

ಇದೇನಿದು ಮನುಪ್ರೇರಿತ ಮಾಧ್ಯಮಗಳು, ಹಾಗೂ ಮೋದಿ ಮತ್ತು ಸಂಘಪರಿವಾರದವರು ಅಂಬೇಡ್ಕರವರ ಅಡ್ಡಪಲ್ಲಕ್ಕಿಯನ್ನೊತ್ತು ಮೆರೆದಾಡುಸುತ್ತಿದ್ದಾರೆ ಎಂದರೆ ಇದರ ಹಿಂದಿನ ಮರ್ಮವನ್ನು ಶೋಧಿಸಬೇಕಿದೆ. ಇದನ್ನೆಲ್ಲಾ ಇವರು ಇಷ್ಟೊಂದು ಅಧ್ದೂರಿಯಾಗಿ ಅಂಬೇಡ್ಕರ ಜಯಂತಿಯನ್ನು ಮಾಡಿದಕ್ಷಣ ಅಂಬೇಡ್ಕರವರ ಕನಸ್ಸು ಈಡೇರಿತೆ? ಜಾತಿವ್ಯವಸ್ತೆ, ಅಸ್ಪೃಷ್ಯತೆ, ಬಡತನ, ಕೋಮುವಾದ, ಅಸಮಾನತೆ ಹಾಗೂ ಸಾಮಾಜಿಕ ಅನಿಷ್ಟ ಪದ್ದತಿಗಳು ನಾಶವಾದವೊ ? ಆರ್ಥಿಕ,ಸಾಮಾಜಿಕ,ರಾಜಕೀಯ.ಶೈಕ್ಷಣಿಕತೆಯ ಸಮಾನತೆ ಎಲ್ಲರಿಗೂ ಸಮನಾಗಿ ಸಿಕ್ಕಿದೆಯೇ? ಈ ಪ್ರಶ್ನೆಗಳಿಗೆ ಇವರು ಶೊನ್ಯ ಉತ್ತರ ನೀಡುತ್ತಾರೆ.ಬದಲಿಗೆ ಇವುಗಳು ನಾಗರಹಾವಿನಂತೆ ಎಡೆಬಿಚ್ಚಿ ಬೂಸುಗುಡುತ್ತಿವೆ. ಇವುಗಳಿಂದ ಕೆಲವರು ಬಲಿಯಾಗಿ ಸಾಯುತ್ತಿದ್ದರೆ ಇನ್ನು ಕೆಲವರು ಗಾಯಗೊಂಡು ಒಳಗೊಳಗೆ ನರಕಯಾತನೆ ಅನುಭವಿಸುತ್ತಿದ್ದಾರೆ,ಆಗಾದರೆ ಈ ಡೊಂಗಿವಾದಿಗಳಿಂದ ಅಂಬೇಡ್ಕರ್ ಜಯಂತಿ ಅರ್ಥಕಳೆದುಕೊಡು ಅವರು ತಮ್ಮ ಬೇಳೆಬೇಯಿಸಿಕೊಳ್ಳುತ್ತಿರುವುದು ಮೇಲ್ನೋಟದಲ್ಲೆ ಎದ್ದುಕಾಣುತ್ತಿದೆ. ಈ ಸಂಧರ್ಭದಲ್ಲಿ ಅಂಬೇಡ್ಕರವರ ಮಾತು ನೆನಪಾಗುತ್ತದೆ ಅದೇನೆಂದರೆ ‘ನನ್ನನ್ನು ಮತ್ತು ನನ್ನ ಚಿಂತನೆಗಳನ್ನು ನನ್ನ ವಿರೋಧಿಗಳು ಚನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಆದರೆ ನನ್ನ ಜನರು ಅರ್ಥಮಾಡಿಕೊಳ್ಳುತ್ತಿಲ್ಲ’ ಬಾಬಾಸಾಹೇಬರ ಈ ಮಾತು ಮೋದಿ ಮತ್ತು ಸಂಘಪರಿವಾರದವರ ಮರ್ಮವನ್ನು ಭೇಧಿಸುತ್ತದೆ.

ಈಗ ಭಾರತ ಮೊದಲಿನಂತಿಲ್ಲ. ಇಂದು ಅನೇಕ ಅಪಾಯಕಾರಿಯಾದ ಕರಾಳ ದಿನಗಳಿಗೆ ಇತಿಹಾಸ ಬರೆಯುತ್ತಿದೆ,ಸಂಸ್ಕೃತಿ ಮತ್ತು ದೇಶಭಕ್ತಿಯ ಹೇಸರಿನಲ್ಲಿ ಅಸಮಾನತೆಯ ಬಗ್ಗೆ ಮಾತಡುವವರನ್ನೆಲ್ಲಾ ದೇಶದ್ರೋಹಿಗಳೆಂದು ಜೈಲಿಗೆ ಕಳಿಸುವ ಸಂಸ್ಕೃತಿ ಬಲಿಷ್ಟವಾಗಿ ಬಲಿಯುತ್ತಿದೆ, ಬಿಜೆಪಿ ಹಾಗೂ ಆರ್ ಎಸ್ಎಸ್ ವರಿಗೆ ಎಂದು ಇಲ್ಲದ ದೇಶಭಕ್ತಿ ಇಂದು ಕಂಡುಬರುತ್ತಿದೆ,ಇವರಿಗೆ ದೇಶಭಕ್ತಿಯೆಂಬುದು ನಿರ್ಜೀವಗಡಿ ರೇಖೆಗೆ ಸೀಮಿತಗೊಂಡು ಸೈನಿಕರು ಸತ್ತಾಗ ಹಾಗೂ ಯಾವೊನೊ ಶಂಕಿತಉಗ್ರ ಬಂಧಿಯಾದಗ ಅಥವ ಇನ್ನೆಲ್ಲೊ ಕೋಮುವಾದ ವಿಜೃಂಭಿಸಿದಾಗ ಮಾತ್ರ ದೇಶಭಕ್ತಿ ಉಕ್ಕಿ ಹರಿಯುತ್ತದೆ,ಆದರೆ ಈ ಗಡಿರೇಖೆಯಲ್ಲಿ ಬಡತನ ಹಸಿವು ಅನಕ್ಷರತೆ ಜಾತೀಯತೆಗಳಿಂದ ಶತಶತಮಾನದಿಂದಲೂ ಶೋಷಣೆಯನ್ನು ಅನಭವಿಸುತ್ತ ಇಂದಿಗೂ ಅನುಭವಿಸುತ್ತಿರುವ ದಲಿತ ಹಿಂದುಳಿದ ಅಲ್ಪಸಂಖ್ಯಾತ ಮಹಿಳೆಯರು ಅಸ್ಪೃಶ್ಯತೆ,ದೌರ್ಜನ್ಯ,ಕೊಲೆ,ಅತ್ಯಾಚಾರಗಳೇಕೆ ದೇಶದ್ರೋಹವಾಗುವುದಿಲ್ಲ ಎಂಬುದನ್ನು ಚಿಂತಿಸಬೇಕಾಗಿದೆ.

ದೇಶಾದ್ಯಂತ ಬಿಜೆಪಿ ಹಾಗೂ ಸಂಘಪರಿವಾರದವರು ‘ಸಂಸ್ಕೃತಿ ಮತ್ತು ದೇಶಭಕ್ತಿಯ ಹೆಸರಿನಲ್ಲಿ ದಲಿತರ ಮರಣಶಾಸನವನ್ನು ಬರೆಯುತ್ತಿದ್ದಾರೆ. ದೇಶಭಕ್ತಿ ಸಂಸ್ಕೃತಿಯ ಹೆಸರನ್ನು ಮುಂದಿಟ್ಟುಕೊಂಡು ದೇಶದ ಆಗುಹೋಗುಗಳಬಗ್ಗೆ ಮಾತನಾಡುವವರ ನೈಜದೇಶಭಕ್ತಿ ಹಾಗೂ ಸಂಸ್ಕೃತಿ ಎನೆಂಬುದು ಶೋಧಿಸಬೇಕಿದೆ. ಕೋಮುವಾದ,ಜಾತೀಯತೆ,ಅಸ್ಪೃಷ್ಯತೆ,ಅಸಮಾನತೆ ಬಗ್ಗೆ ಮಾತಾಡಿದರೆ ದೇಶದ್ರೋಹಿಗಳೆಂದು ಸಂಸ್ಕೃತಿನಾಶಕರೆಂದು ಜೈಲಿಗಟ್ಟುವ ಹಾಗೂ ಇದರಬಗ್ಗೆ ಬರೆಯುವ ಸಾಹಿತಿಗಳನ್ನುಕೊಲೆ ಮಾಡುವ,ಕೈಬೆರಳುಗಳನ್ನು ಕತ್ತರಿಸುವ ಇವರ ಸಂಸ್ಕೃತಿ ಹಾಗೂ ದೇಶಭಕ್ತಿಯನ್ನು ಮೆಚ್ಚಲೇಬೇಕಾಗುತ್ತದೆ,ಇದನ್ನೆಲ್ಲ ದೇಶಭಕ್ತಿ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಸಮರ್ಥಿಸುವವರಿಗೆ ಈ ದೇಶದ ಸಂಸ್ಕೃತಿಯ ಬಗ್ಗೆ ಅಷ್ಟು ಕಾಳಜಿ ಇದೆಯೆ? ಇದ್ದರೆ ಅದು ಯಾರ ಪರವಾದುದ್ದು? ಇದುಕೊಡ ಮುಖ್ಯವಾಗಬೇಕು.

ಮೇಲಿನ ಚರ್ಚೆಗೆ ಒತ್ತುಕೊಡುವ ಮುಖ್ಯ ಉದ್ದೇಶ ಯಾವುದು? ದೇಶಭಕ್ತಿ ಹಾಗೂ ಸಂಸ್ಕೃತಿ ಎನೆಂಬುದನ್ನು ನಾವು ಅರಿಯಬೇಕಾಗಿದೆ. ಇಂದು ಭಾರತವನ್ನು ಆಳುತ್ತಿರುವುದು ಪ್ರಜಾಪ್ರಭುತ್ವವೊ? ಹಿಂದುತ್ವವೊ? ಎಂಬುದನ್ನು ಶೋಧಿಸಬೇಕಾಗಿದೆ. 2003 ರಲ್ಲಿ ತಮಿಳುನಾಡಿನ ತಿರುಚಿ ಜಿಲ್ಲೆಯ ತಿಣ್ಣಿಯಮ್ ಎಂಬ ಹಳ್ಳಿಯಲ್ಲಿ ಮೇಲ್ಜಾತಿಯ ಭೊಮಾಲಿಕರು ದಲಿತರಿಗೆ ಒಣಗಿದ ಮಲ ತಿನಿಸಿದರು.ಇದಕ್ಕೊ ಹಿಂದೆ 1986 ಹಾಗೂ1994ರಲ್ಲಿ ತತ್ತರು ಮತ್ತು ಬೆಂಡಿಗೇರೆಯಲ್ಲಿ ಲಿಂಗಾಯ್ತ ಭೊಮಾಲಿಕರು ಹಾಗೂ ರೆಡ್ಡಿ ಭೊಮಾಲಿಕರು ದಲಿತರಿಗೆ ಮಲವನ್ನು ತಿನ್ನಿಸಿದರು. ಮಲ ತಿನಿಸುವುದು ಮನುಷ್ಯತ್ವ ಕುಲದ ಅತ್ಯಂತ ಹೇಯ ಕೃತ್ಯವಾಗಿದೆ,ಮಲವನ್ನು ತಿನ್ನಿಸಿದಾಗ ಏಕೆ ಇವರಿಗೆ ಇದು ದೇಶದ್ರೋಹ ನೀಚ ಸಂಸ್ಕೃತಿ ಎಂದು ಕಾಣದೆ ಇದರ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ ಇದ್ದಿದ್ದು, ಇದನ್ನು ಬೆಂಬಲಿಸುವುದು ದೇಶ ದ್ರೋಹವಾದರೆ ದೇಶಪ್ರೇಮವೆಂದರೇನು ?,ಮಹಾರಾಷ್ಟ್ರದ ಬಂಡೊಲಿ ಜಿಲ್ಲೆಯ ಮೂಹಾಲಿ ತಾಲ್ಲೂಕಿನ ಖೈರ್ಲಾಂಜಿಯಲ್ಲಿ ನಡೆದ ದಲಿತರ ಅತ್ಯಾಚಾರ ಹಾಗೂ ಕೊಲೆಯನ್ನು ನೆನೆದುಕೊಂಡರೆ ಮೈ ಗಡಗಡ ನಡುಗುತ್ತದೆ. ದಲಿತ ಕುಟುಂಬಕ್ಕೆ ಸೇರಿದ ಭಯ್ಯಾಲಾಲ್ ಭೂತಮಾಂಗೆಯ ಹೆಂಡತಿ ಸುರೇಖಾ ಮಕ್ಕಳು ಪ್ರಿಯಾಂಕ,ರೋಷನ್, ಸುಧೀರ್, ಭಯ್ಯಾಲಾಲ್ ಭೂತಮಾಂಗೆ ಹೊರಗೆ ಹೋಗಿದ್ದ ಸಮಯದಲ್ಲಿ ಇಡೀ ಹಳ್ಳಿಯ ಜನರು ಹೊಲದ ಕೆಲಸಕ್ಕೆ ಕೊಲಿಯಾಳಾಗಿ ಹೋಗಲಿಲ್ಲ ಎಂಬ ಒಂದೇ ಕಾರಣಕ್ಕೆ ಮೂರು ಜನ ಮಕ್ಕಳೆದುರಿಗೆ ಸುರೇಖಾಳನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದರು. 19 ವರ್ಷದ ಇನ್ನೂ ಪಿಯುಸಿ ಓದುತ್ತಿದ್ದ ಪ್ರೀಯಾಂಕಳನ್ನು ಬೆತ್ತಲೆಗೂಳಿಸಿ ಸಾಲಾಗಿ ಮತ್ತು ಗುಂಪಾಗಿ ನಿಂತು ಒಬ್ಬರಾದ ಮೇಲೆ ಇನ್ನೂಬ್ಬರು ವಿಕೃತವಾಗಿ ಅತ್ಯಾಚಾರ ಮಾಡಿದರು. ಸಾಲದ್ದಕ್ಕೆ ಸ್ವಂತ ತಮ್ಮನಾದ ಅಂಗವಿಕಲ ರೋಷನ್ನಿಗೆ ಅಕ್ಕ ಪ್ರಿಯಾಂಕಳನ್ನು ಲೈಂಗಿಕತೆ ಮಾಡಲು ಹೇಳಿದಾಗ ಆತ ಅದನ್ನು ನಿರಾಕರಿಸಿದ್ದಕ್ಕೆ ಆತನ ಮರ್ಮಾಂಗವನ್ನೆ ಕತ್ತರಿಸಿದರು. ದುರಂತವೆಂದರೆ ಬರೀ ಅತ್ಯಾಚಾರ ಮಾಡಿ ತಾಯಿ ಮಗಳನ್ನು ಸಾಯಿಸಿದರು, ಸತ್ತರು ಬಿಡದೆ ಅತ್ಯಾಚಾರ ಮಾಡುತ್ತಿದ್ದ ಗಂಡಸರಿಗೆ ಅಲ್ಲಿನ ಹೆಂಗಸರು ಪ್ರೋತ್ಸಾಹ ಮಾಡುತ್ತಿದ್ದರು,ಅಲ್ಲದೆ ಜನನೇಂದ್ರಿಗಳಿಗೆ ಚೂಪಾದ ಕಲ್ಲುಗಳನ್ನು ತುಂಬಿ ಜಾತಿಯ ಮದವೇರಿದ ಅವರು ಎಲ್ಲರನ್ನು ಕ್ರೂರವಾಗಿ ಅಟ್ಟಾಡಿಸಿಕೊಂಡು ಕೊಲೆಮಾಡಿ ನದಿಗೆ ಹೆಣಗಳನ್ನು ಎಸೆದರು. ತನ್ಮೂಲಕ ದಲಿತರ ಮೇಲಿನ ದೌರ್ಜನ್ಯದ ಮತ್ತೂಂದು ರಕ್ತಸಿಕ್ತ ಇತಿಹಾಸವನ್ನು ಬರೆದರು,ಅಲ್ಲದೆ ಕೊಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ದಲಿತರನ್ನು ಹಾಡಹಗಲಿನಲ್ಲೆ ಸಜೀವವಾಗಿ ಸುಟ್ಟು ಸಾಯಿಸಿದರು. ಇಂತಹ ಘಟನೆಗಳು ನಡೆದಾಗ ಏಕೆ ಇವರಿಗೆ ಇದು ದೇಶದ್ರೋಹವೆಂದು ಅನಿಸಲಿಲ್ಲವೆ ರಕ್ತ ಕುದಿಯುವ ಈ ಘಟನೆಗಳ ಬಗ್ಗೆ ಸಂಸ್ಕೃತಿ ಹಾಗೂ ದೇಶಭಕ್ತಿಯ ಪ್ರಜ್ಞೆ ಮೂಡಿರಲಿಲ್ಲವೆ? ಇವುಗಳನ್ನೆಲ್ಲ ಮಾಡಿದವರು ಹಿಂದುತ್ವದ ಕರಿನೆರಳಿನ ಜಾತಿಯ ಪೆಡಂಬೂತಕ್ಕೆ ಸಿಲುಕಿದ ವಿಕೃತ ಮನಸ್ಸುಗಳು ಮಾಡಿದ್ದೆಲ್ಲಾ ದೇಶಪ್ರೇಮವೆನ್ನುವುದೆ? ಇವರಿಗೂಂದು ನ್ಯಾಯ ದಲಿತರಿಗೂಂದು ನ್ಯಾಯವೆ? ಇಂದಿಗೊ ಕಾಲಿಗೆ ಚಪ್ಪಲಿಗಳಿಲ್ಲದೆ ಕೈಗೆ ಗ್ಲೌಸ್ ಇಲ್ಲದೆ ದಿನ ನಿತ್ಯ ಮ್ಯಾನ್ಹೊಲ್ಗಳಲ್ಲಿ ನರಕ ಅನುಭವಿಸುತ್ತಿರುವ ಮಲ ಸ್ವಚ್ಚಗೊಳಿಸಲೋಗಿ ಉಸಿರುಗಟ್ಟಿ ಸತ್ತವರು, ತಲೆಯ ಮೇಲೆ ಮಲ ಹೋರಿಸುತ್ತಿರುವ ನೀಚ ವ್ಯವಸ್ತೆಯ ಹೂನ್ನಾರವನ್ನು ಬಯಲು ಮಾಡಲು ತಲೆಯ ಮೇಲೆ ಮಲ ಸುರಿದುಕೊಂಡು ಜಗತ್ತಿಗೆ ತೋರಿಸಿದ್ದು, ಆಧುನಿಕ ಭಾರತ ತಲೆ ತಗ್ಗಿಸಿ ನಾಚಿಕೆ ಪಟ್ಟುಕೊಳ್ಳಬೇಕಿದೆ.

ಇದೆಲ್ಲಾ ಹಳೆಯ ಘಟನೆ ಎಂದು ತಿರಸ್ಕರಿಸುವುದಾದರೆ ಅಚ್ಚೆ ದಿನ್ ಆತ ಹೈ ಎನ್ನುತ್ತ ಅಧಿಕಾರದ ಚುಕ್ಕಾಣಿ ಹಿಡಿದ ಸಂಘಪರಿವಾರದ ನರೇಂದ್ರ ಮೋದಿ ಆಡಳಿತದ ದಿನಗಳು ಎಷ್ಟೊಂದು ಕರಾಳತೆಯನ್ನು ಮೆರೆಯುತ್ತವೆ ಎಂಬುದನ್ನು ಕಾಣಬೇಕಿದೆ. ಒಳ್ಳೆಯ ದಿನಗಳು ಬರುತ್ತವೆ ಎಂದು ಅದಿಕಾರ ಹಿಡಿದ ನರೇಂದ್ರ ಮೋದಿಯ ‘ಡಿಜಟಲ್ ಇಂಡಿಯಾ’ದಲ್ಲಿ ದಲಿತರ ದೌರ್ಜನ್ಯ ಕೊಲೆಸುಲಿಗೆಗಳು ಕಭಂದ ಬಾಹುಗಳನ್ನು ಚಾಚಿಕೊಂಡಿರುವುದು ಭಾರತವನ್ನು ಬೆಚ್ಚಿಸುತ್ತದೆ,

2015 ರಲ್ಲಿ ಉತ್ತರ ಪ್ರದೇಶದಲ್ಲಿ ಅನ್ಯಾಯಕ್ಕೆ ಒಳಗಾಗಿದ್ದ ದಲಿತ ಕುಟುಂಬದ ಮಹಿಳೆಯರು ದೂರು ಕೊಡಲು ಪೋಲಿಸ್ ಠಾಣೆಗೆ ಹೋದಾಗ ಶೀಲ ಕಾಯುವ ಪೋಲಿಸರೆ ಆ ದಲಿತ ಮಹಿಳೆಯರನ್ನು ಬೆತ್ತಲುಗೊಳಿಸಿ ಹೀನಾಯವಾಗಿ ಹೊಡೆದು ಬೆತ್ತಲೆ ಮಾಡಿದರು. ಇದೇ ರಾಜ್ಯದ ಬದಾವ್ ಎಂಬಲ್ಲಿ ಇಬ್ಬರು ದಲಿತ ಯುವತಿಯರನ್ನು ಅತ್ಯಚಾರವೆಸಗಿ ಕೊಂದು ನೇಣುಹಾಕಿದರು. ಕೆಲವು ತಿಂಗಳ ಕೆಳಗೆ ಚನ್ನೈನಲ್ಲಿ ದಲಿತಯುವಕ ‘ಅಂಬೇಡ್ಕರ್ ರಿಂಗ್ಟೋನ್’ಹಾಕಿಕೊಂಡು ರಸ್ತೆಯಲ್ಲಿ ನಡೆದಾಡಿದ ಒಂದೇ ಕಾರಣಕ್ಕೆ ರೋಷಗೊಂಡ ಹಿಂದು ಯುವಕರು ದಲಿತ ಯುವಕನನ್ನು ಬರ್ಬರವಾಗಿ ಹತ್ಯ ಮಾಡಿದರು. ಉತ್ತರ ಪ್ರದೇಶದಲ್ಲಿ ದಲಿತ ವೃದ್ದನೊಬ್ಬ ಮಂದಿರದೊಳಗೆ ಹೋದನೆಂದು ಅಲ್ಲಿನ ಬ್ರಾಹ್ಮಣನೂಬ್ಬ ಆ ವೃದ್ದನನ್ನು ಸಾವಿರಾರು ಭಕ್ತರ ಸಮ್ಮುಕದಲ್ಲೆ ಕಂಬಕ್ಕೆ ಕಟ್ಟಿ ಹೀನಾಯವಾಗಿ ಥಳಿಸಿ ಪಟ್ರೋಲ್ ಸುರಿದು ಸಜೀವದಹನ ಮಾಡಿದರು. ಚಾಮರಾಜನಗರ ಜಿಲ್ಲೆಯಲ್ಲಿ ತೋಟದ ಕೆಲಸಕ್ಕೆ ಬಾರಲಿಲ್ಲ ಅಂತ ಇಬ್ಬರು ದಲಿತ ಕೊಲಿಕಾರ್ಮಿಕರ ತಲೆಗಳನ್ನು ಕತ್ತರಿಸಿ ಬಿಸಾಕಿದರು. ಉತ್ತರಪ್ರದೇಶದ ದಾದ್ರಿಯಲ್ಲಿ ದನದ ಮಾಂಸ ಮನೆಯಲ್ಲಿಟ್ಟುಕೊಂಡಿದ್ದಾನೆ ಎಂದು ಶಂಕಿಸಿ ಮಹಮದ ಇಕ್ಬಲ್ ಎಂಬ ಮುಸ್ಲಿಂ ಜನಾಂಗದ ವ್ಯಕ್ತಿಯನ್ನು ಇದೇ ಹಿಂದುತ್ವವಾದಿಗಳು ಕೊಂದುಹಾಕಿದರು. ಇದೇ ವಿಷಯಕ್ಕೆ ದನಗಳನ್ನು ಸಾಗಣಿಕೆ ಮಾಡುತ್ತಾನೆಂದು ತಿಳಿದು ಹರಿಯಾಣದಲ್ಲಿ ನ್ಯೊಮಾನ್ ಎಂಬುವನನ್ನು ಚಿತ್ರಹಿಂಸೆಯಿಂದ ಕೊಂದುಹಾಕಿದರು. ಹರಿಯಾಣದ ಫರೀದಬಾದ್ ಜಿಲ್ಲೆಯಲ್ಲಿ ರಾತ್ರಿಯ ವೇಳೆ ನಿದ್ದೆ ಮಾಡುತ್ತಿದ್ದ ದಲಿತ ಹಸುಳೆ ಕಂದಮ್ಮಗಳಾದ ವೈಬವ್ ಮತ್ತು ದಿವ್ಯಎಂಬ ಹಸುಗೂಸುಗಳು ಮಲಗಿದ್ದ ಮನೆಗೆ ಬೆಂಕಿಹಚ್ಚಿ ಸುಟ್ಟು ಭಸ್ಮ ಮಾಡಿದರು. 2016 ಮೇ ತಿಂಗಳಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೋಕಿನ ಶಟ್ಟಿಹಳ್ಳಿಯಲ್ಲಿ ಮಲ್ಲಿಕಾರ್ಜುನ ಎಂಬ ದಲಿತ ಯುವಕನನ್ನು ತೋಟದಲ್ಲಿ ಕುತ್ತಿಗೆಗೆ ಕಬ್ಬಿಣದ ರಾಡನ್ನಾಕಿ ಕರೆಂಟು ಕೊಟ್ಟು ಬರ್ಬವಾಗಿ ಕೊಲೆ ಮಾಡಿದರು. ಇವೆಲ್ಲಾ ಘಟನೆಗಳು ಯಾರಿಗೆ ಒಳ್ಳೆಯ ದಿನಗಳು ಎಂಬುದನ್ನು ಮೋದಿಗೆ ಹೇಳಬೇಕಿದೆ. ಇವರ ಡಿಜಟಾಲ್ ಇಂಡಿಯಾದ ಇತಿಹಾಸವನ್ನು ಬರೆದು ತೋರಿಸಬೇಕಿದೆ.

ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನ ದಲಿತ ವಿಧ್ಯಾರ್ಥಿ ರೋಹಿತ ವೇಮುಲ ನ್ಯಾಯಬದ್ದ ಹಕ್ಕುಗಳನ್ನು ಕೇಳಿದ್ದಕ್ಕಾಗಿ ವಿವಿಕುಲಪತಿ ಮತ್ತು ಬಿಜೆಪಿಯ ಸಚಿವೆ ಸೃತಿ ಇರಾನಿ ಮುಂತಾದವರು ಸೇರಿಕೊಂಡು ಆ ವಿದ್ಯಾರ್ಥಿಯನ್ನು ವಿವಿಯಿಂದ ಹೊರಹಾಕಿ ತಾನೆ ನೇಣು ಹಾಕಿಕೊಂಡು ಸಾಯುವಂತೆ ಮಾಡಿದ ಘಟನೆ ಇಡೀ ಭಾರತವೆ ತಲೆತಗ್ಗಿಸುವಂತೆ ಮಾಡಿದೆ. ಇದರ ವಿಷಯವನ್ನು ಕುರಿತು ಮಾತನಾಡಿದ ದೆಹಲಿಯ ಜೆ ಏನ್ ಯು ವಿವಿಯ ವಿದ್ಯಾರ್ಥಿ ಕನ್ನಯ್ಯಕುಮಾರನನ್ನು ದೇಶದ್ರೋಹಿಯೆಂದು ಜೈಲಿಗೆ ಹಾಕಿದರು. ಇವುಗಳೆಲ್ಲಾ ರಾಷ್ಟ್ರ ಮಟ್ಟದ ಘಟನೆಗಳಾಗಿದ್ದರಿಂದ ಎಲ್ಲರಿಗು ಗೂತ್ತಾಗಿವೆ. ಆದರೆ ಸಾವಿರಾರು ಘಟನೆಗಳು ಹಳ್ಳಿಗಳಲ್ಲಿ ಇಂದಿಗೊ ಕಣ್ಣಿಗೆ ಕಾಣದೆ ಹಾಗೆ ಕರಗಿ ಹೋಗುತ್ತಿವೆ. ಅದರಲ್ಲಿ ಕರ್ನಾಟಕದಲ್ಲಿ ಹಲವು ಕಡೆ ತಮಟೆ ಬಾರಿಸದ ಕಾರಣಕ್ಕೆ ದಲಿತರ ಮೇಲಿನ ತೀರ್ವತರ ಹಲ್ಲೆ ಕೊಲೆ ಬಹಿಷ್ಕಾರಗಳು ಒಗ್ಗಟ್ಟಿನ ಹಳ್ಳಿಗಳೆಂದು ಕೊಂಡಾಡುವ ಹಳ್ಳಿಗಳಲ್ಲಿ ಸಂಪ್ರದಾಯವಾದಿಗಳ ಜಾತಿವಾದಿಗಳ ಮುಖಕ್ಕೆ ಬಡಿದಂತೆ ನಡೆಯುತ್ತಿರುವ ಮಾರ್ಯದೆ ಹತ್ಯಗಳು ,ಅಂತರ್ಜಾತಿ ವಿವಾಹ ನೆಪವಾಗಿಟ್ಟುಕೊಂಡು ಮಾಡುವ ಕೊಲೆಗಳು ಇವರಿಗೆ ದೇಶ ದ್ರೋಹವೆಂಬಂತೆ ಕಾಣುವುದಿಲ್ಲವೆ? ಮಂಡ್ಯ ಜಲ್ಲೆಯಲ್ಲಿ ಮೇಲ್ಜಾತಿ ಯುವತಿ ಕೇವಲ ದಲಿತ ಹುಡುಗನನ್ನು ಪ್ರೀತಿಸಿದ ಎಂಬ ಕಾರಣಕ್ಕಾಗಿ ಜಾತಿಮನಸ್ಸಿನ ಅಣ್ಣ ತಂದೆ ತಾಯಿಗಳು ಸೇರಿಕೊಂಡು ಮಾವಿನ ಹಣ್ಣಿನ ಜ್ಯೋಸ್ ನಲ್ಲಿ ವಿಷಹಾಕಿ ಕೊಲೆಮಾಡಿದರು. ಈ ರೀತಿ ಮರ್ಯಾದೆ ಹತ್ಯಗಳು ಕರ್ನಾಟಕದಲ್ಲಿ ಒಂದಲ್ಲ ಒಂದು ಕಡೆ ದಿನ ನಿತ್ಯೆ ನಡೆಯುತ್ತಿವೆ. ಇಂತಹ ಘಟನೆಗಳು ಇವರ ನೈಜ ದೇಶಭಕ್ತಿ ಹಾಗೂ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ನಿರ್ಜೀವ ಗಡಿರೇಖೆಯನ್ನಿಟ್ಟುಕೊಂಡು ದೇಶಭಕ್ತಿ ಎಂದು ಬೊಬ್ಬೆ ಹಾಕುತ್ತ ಜಾತೀಯತೆಯನ್ನು ಕೋಮುವಾದವನ್ನು ಪೋಷಿಸುತ್ತಿರುವ ಈ ಸಂಘಪರಿವಾರದವರಿಗೆ ಏನನ್ನಬೇಕು? ದೇಶಭಕ್ತಿಯ ಹೆಸರಿನಲ್ಲಿ ದಲಿತರನ್ನು ಹಾಗೂ ಅಲ್ಪ ಸಂಖ್ಯಾತರನ್ನು ಅತ್ಯಚಾರ ಕೊಲೆ ಮಾಡುವ ಈ ಚೆಡ್ಡಿ ಸಂಸ್ಕೃತಿಯ ಮರ್ಮವನ್ನು ಬೇದಿಸಬೇಕಿದೆ,

ಅಲ್ಲದೆ ಗೋವಿಂದ ಪನ್ಸಾರೆ, ಎಂಎಂ ಕಲ್ಬುರ್ಗಿ ಹತ್ಯಗಳು ಹಾಗೂ ನನ್ನಂತ ಒಬ್ಬ ದಲಿತ ಬರಹಗಾರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೈ ಬೆರಳುಗಳನ್ನು ಕತ್ತರಿಸಲು ಬಂದ ವಿಕೃತ ಹಿಂದುವಾದಿಗಳ ದೇಶಭಕ್ತಿ ಹಾಗು ಸಂಸ್ಕೃತಿ ಎನೆಂಬುದು ತಿಳಿದುಕೊಳ್ಳಬೇಕಾಗಿದೆ. ನಕಲಿ ಮುಖದ ಬಂಡಸಂಸ್ಕೃತಿಯನ್ನು ಬಿಚ್ಚಿ ತೋರಿಸಬೇಕಾಗಿದೆ,ಒಂದು ಕಡೆ ಮೇಕ್ ಇನ್ ಇಂಡಿಯಾ ,ಡಿಜಿಟಲ್ ಇಂಡಿಯಾ ಎಂದು ನರೇಂದ್ರ ಮೋದಿವರು ಕಾರ್ಪೋರೆಟ್ ಕುಳಗಳಿಗೆ ಭಾರತವನ್ನ ಬಾಚಿ ಬಳಿದು ಕೊಟ್ಟು ಅಭಿವೃದ್ದಿ ಎಂದು ಬೊಗಳೆ ಬಿಡುವ ಈತನ ಸಂಸ್ಕೃತಿ ಯಾರ ಪರವೆಂದು ಗೂತ್ತಾಗಿದೆ, ಮತ್ತೊಂದೆಡೆ ಈ ದೇಶದ ಶೋಷಿತರನ್ನು ಹೀಗೆ ಬದುಕಿರಿ,ಇಂತಹ ಆಹಾರವನ್ನೆ ತಿನ್ನಿರಿ,ಇಂತಹ ಬಟ್ಟೆಗಳನ್ನೆ ಹಾಕಿರಿ,ಇಂತಹ ಮಾತುಗಳನ್ನೆ ಮಾತಾಡಬೇಕು ಎಂದು ಕಠಿಣ ಕಾನೂನುಗಳನ್ನು ಮಾಡುತ್ತ ಬಾಬಾ ಸಾಹೇಬರ ಸಂವಿಧಾನವನ್ನು ಬೆಂಕಿಯೊಳಗಾಕಿ ಸುಡುತ್ತಿರುವ ದೇಶಭಕ್ತಿಯನ್ನು ನಾಶ ಮಾಡಬೇಕಾಗಿದೆ.

ಇಂದಿನ ಭಾರತದ ಸ್ಥಿತಿಗತಿಯು ತುಂಬ ವೈರುದ್ಯಗಳಿಂದ ತುಂಬಿದೆ. ಇಲ್ಲಿ ಶ್ರೀಮಂತರು ಹೊಟ್ಟೆ ತುಂಬ ತಿಂದು ಅರಗಿಸಿಕೊಳ್ಳದೆ ಸಾಯುವವರಿದ್ದರೆ,ಮತ್ತೊಂದು ಕಡೆ ಒಂದ್ಹೊತ್ತಿನ ಅನ್ನವಿಲ್ಲದೆ ಕುಡಿಯಲು ನೀರಿಲ್ಲದೆ ಮೈಗೆ ಬಟ್ಟೆಯಿಲ್ಲದೆ ದಿನದಿನಕ್ಕೊ ಸಾವಿರಾರು ಜನ ಸಾಯುವವರು ಹೆಚ್ಚಾಗಿದ್ದಾರೆ. ಭಾರತದಲ್ಲಿ ಬಡತನಕ್ಕೇನು ಬರವಿಲ್ಲ,ಇಂದಿಗೂ ಹಳ್ಳಿಗಳಲ್ಲಿ ಜಾತಿಯತೆ ಕೋಮುವಾದಗಳು ಭದ್ರಬುನಾದಿಯಾಗಿ ಬೆಳೆದು ತನ್ನ ಬೇರುಗಳನ್ನು ನಾನಾಕಡೆ ಚಾಚುತ್ತ ದಲಿತರ ಅಲ್ಪ ಸಂಖ್ಯಾತರ ಬದುಕನ್ನು ಸರ್ವನಾಶ ಮಾಡುತ್ತಿವೆ. ಹೆಣ್ಣು ಮಕ್ಕಳು ದಿನನಿತ್ಯ ಅನುಭವಿಸುತ್ತಿರುವ ಲೈಂಗಿಕ ಶೋಷಣೆಗಳನ್ನು ವಿರೋಧಿಸದವರು ಈ ದೇಶದ ಬಗ್ಗೆ ಮಾತನಾಡುವ ಕಾಟಾಚಾರಕ್ಕೆ ಹೆಣ್ಣನ್ನು ಮಾತೆಯನ್ನಾಗಿ ನೋಡುತ್ತೇವೆ ಎಂದು ಬೊಗಳೆ ಮಾತುಗಳನ್ನು ಬಿಡಬೇಕಾಗಿದೆ,ದೇವರ ಹೆಸರಿನಲ್ಲಿ ದೇವದಾಸಿಯ ನೆಪವಿಟ್ಟುಕೊಂಡು ಏನು ಅರಿಯದ ದಲಿತ ಯುವತಿಯರನ್ನು ಸೂಳೆಯರನ್ನಾಗಿ ಮಾಡಿ ಅವರನ್ನು ವೇಶ್ಯವಾಟಿಕೆಗೆ ನೂಕಿದ ಹಿಂದು ಸಾಮ್ರಾಜ್ಯಶಾಹಿಗಳ ದೇಶಭಕ್ತಿ ಹಾಗು ಸಂಸ್ಕೃತಿಯನ್ನ ಜಗತ್ತಿಗೆ ಸಾರಬೇಕಿದೆ.

ಹಿಂದೆ ರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಒಂದು ಸಮೀಕ್ಷೆಯು ತನ್ನ ವರದಿಯಲ್ಲಿ ಪ್ರತಿ ಗಂಟೆಗೆ ಇಬ್ಬರು ದಲಿತರು ದೌರ್ಜನ್ಯಕ್ಕೆ ಒಳಗಾಗುತ್ತಾರೆ,ಮೂವರು ದಲಿತ ಮಹಿಳೆಯರ ಮೇಲೆ ಅತ್ಯಚಾರವಾಗುತ್ತದೆ,ಹಾಗೆಯೆ ಪ್ರತಿ ದಿನ ಮೂವರು ದಲಿತರ ಕಗ್ಗೂಲೆ ಮತ್ತು ಎರಡು ದಲಿತರ ಮನೆಗಳು ಭಸ್ಮವಾಗುತ್ತಿವೆ ಎಂದು ಹೇಳಿದೆ.

ಇವೆಲ್ಲ ಯಾವ ಸಂಸ್ಕೃತಿ ಹಾಗೂಯಾವ ದೇಶಭಕ್ತಿಯ ಹೇಸರಿನಲ್ಲಿ ನಡೆಯುತ್ತಿವೆ? ಇವುಗಳ ವಿರುದ್ದ ನಾಗರೀಕರೆನಿಸಿಕೊಂಡವರು ತಮ್ಮ ಧ್ವನಿಯನ್ನು ಎತ್ತಬೇಕು,ಆದರೆ ಇವೆಲ್ಲಾ ಚರ್ಚೆಗೆ ಒಳಗಾಗದಂತೆ ತಡೆಯುವ ಉದ್ದೇಶದಿಂದ ಅಂಬೇಡ್ಕರ್ ಜಯಂತಿಯನ್ನು ಒಂದು ಬ್ರಾಂಡಾಗಿಟ್ಟುಕೊಂಡುಇಂತಹ ದಾಳಿಗಳಿಗೆ ಕುಮ್ಮಕ್ಕು ನೀಡುವ ಮನುವಾದಿಗಳ ಮರ್ಮವನ್ನು ಭೇಧಿಸಬೇಕಿದೆ. ಸಂಸ್ಕೃತಿಯ ಹೆಸರಿನಲ್ಲಿ ಇಂತಹ ಅನಿಷ್ಟ ಪದ್ದತಿಗಳನ್ನು ಕಿತ್ತೊಗೆಯದ ಹೊರತು ಶೋಷಿತ ದಲಿತ ಮಹಿಳೆಯರಿಗೆ ಉಳಿಗಾಲವಿರಲಾರದು,ಇಂದಿನ ಹೈಟೆಕ್ ಯುಗದಲ್ಲಿಯೂ ದಲಿತ ಎಂಬ ಒಂದೇ ಕಾರಣಕ್ಕೆ ದಲಿತನೌಕರರಿಗೆ ಮನೆಬಾಡಿಗೆಯೂ ಸಿಗದೆ ಇರುವುದು ಇದು ನಮ್ಮ ದೇಶನಾ? ಎಂಬ ಅನುಮಾನ ಕಾಡುತ್ತದೆ,ಇಢೀ ದೇಶದ ದಲಿತಸಂಸ್ಕೃತಿಯನ್ನು ಹಾಗೂ ಸಂವಿಧಾನವನ್ನು ಕೇಸರೀಕರಣಗೊಳಿಸುತ್ತಿರುವ ಹೂನ್ನಾರಗಳು ಎಗ್ಗಿಲ್ಲದೆ ನಡೆಯುತ್ತಿವೆ, ‘ಶೂದ್ರರ ಹತ್ಯಯು ಬೆಕ್ಕು ಮುಂಗಸಿ ಕಪ್ಪೆ ನಾಯಿ ಕತ್ತೆ ಉಡ ಕಾಗೆಗೂಗೆಗಳ ಹತ್ಯಗೆ ಸಮಾನ'(ಮನುಸೃತಿ11/131) ಎನ್ನುವ ಮನುಸೃತಿಯಂತೆ ದಲಿತರ ಹತ್ಯಗಳನ್ನು ಕಾಗೆಗೂಗೆಗಳಂತೆ ತಿಳಿದುಕೊಂಡಿರುವ ಬ್ರಾಹ್ಮಣತ್ವವು ನಾಯಿಕೊಡೆಯಂತೆ ಬೆಳೆಯುತ್ತಿರುವುದು ಈ ದೇಶದ ದುರಂತವಾಗಿದೆ, ಇವರ ಸಂಸ್ಕೃತಿಯ ಹುನ್ನಾರವನ್ನು ಮುರಿಯಬೇಕಾಗಿದೆ.

ಬಹುಶಃ ಸಂಸ್ಕೃತಿಯ ಚೌಕಟ್ಟು ಇಂಡಿಯಾದಲ್ಲಿ ಈ ರೀತಿ ರೂಪಗೊಂಡಿರಬಹುದೆನಿಸುತ್ತದೆ. ಏಕೆಂದರೆ ಇಲ್ಲಿ ಬಹುಸಂಸ್ಕೃತಿ ಇದೆ,ಆದರೆ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದ ದೇಶ ನಮ್ಮದು. ಇಲ್ಲಿ ಏಕ ಸಂಸ್ಕೃತಿ ಬಹು ಸಂಸ್ಕೃತಿಯನ್ನು ಶತಮಾನದಿಂದಲು ಶೋಷಿಸುತ್ತ ಬಂದಿದೆ,ಒಂದು ಸಂಸ್ಕೃತಿ ಇನ್ನೂಂದು ಸಂಸ್ಕೃತಿಯನ್ನು ತುಳಿದು ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿದೆ. ಈ ದೇಶದ ಮೂಲ ಸಂಸ್ಕೃತಿವಂತರ ಆಸ್ತಿ, ವಿದ್ಯ,ಅಧಿಕಾರಗಳನ್ನೆಲ್ಲಾ ಕಸಿದುಕೊಂಡು ಗುಲಾಮರನ್ನಾಗಿ ಮಾಡಿದ ಏಕ ಸಂಸ್ಕೃತಿ ಮೂಲ ಸಂಸ್ಕೃತಿಗೆ ತಮ್ಮ ಬಗ್ಗೆ ಕೀಳರಿಮೆ ಬರುವಂತೆ ಮಾಡಿ ತಮಗೆ ಬೇಕಾದಂತೆ ಅವುಗಳನ್ನು ಮೇಲ್ ಸಂಸ್ಕೃತಿಗಳು ಬಳಸಿಕೊಳ್ಳುತ್ತಿದ್ದಾವೆ. ಇದು ಈಗಲು ನಡೆಯುತ್ತಿದೆ ಹೀಗೆ ತಮ್ಮ ತೆವಲು ತೀರಿಸಿಕೊಳ್ಳುತ್ತಿವೆ. ಸಂಸ್ಕೃತಿಗಳು ಬಿತ್ತಿದ ಹೆಗ್ಗುರುತಿನ ಛಾಯೆ ದಲಿತರ ಅಲ್ಪಸಂಖ್ಯಾತರ ದೌರ್ಜನ್ಯ ದಾಳಿಯಲ್ಲಿ ಅಡಗಿ ಕುಳಿತಿವೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ದೂಡ್ಡ ಕಳಂಕ ಹಾಗೂ ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ,ಇದು ಬುಡ ಸಮೆತ ಬದ ಲಾಗಬೇಕಾದರೆ ಈ ಮೇಲ್ ಸಂಸ್ಕೃತಿ ಡೊಂಗಿ ದೇಶಭಕ್ತಿ ಎನ್ನುವ ಅಮಾನವೀಯ ಧೋರಣೆಗಳು ನಾಶವಾಗಬೇಕು

ಸಂಸ್ಕೃತಿ ವಿನಾಶ ಎನ್ನುವುದು ಅಷ್ಟು ಸುಲಭವಲ್ಲ ಆದರೆ ಪರಿವರ್ತನೆ ಮಾಡುವುದು ಸಧ್ಯಕ್ಕಿರುವ ಮಾರ್ಗೋಪಾಯ. ಈ ಪರಿವರ್ತನೆ ಪ್ರಸ್ತುತ ನೆಲೆಗಳಿಂದಲೂ ರೂಪಗೂಳ್ಳಬೇಕಿದೆ,ಇದು ಸಮೀಷ್ಟೆ ಪ್ರಜ್ಞೆಯಿಂದ ಮಾತ್ರ ಸಾಧ್ಯ. ಈ ಪ್ರಜ್ಞೆ ನಿರಂತರ ಚಿಂತನೆ ಮತ್ತು ಸಾಮಾಜಿಕ ಚಳುವಳಿಗಳಿಂದ ರೂಪಗೂಳ್ಳಬೇಕಿದೆ. ಇದಕ್ಕೆ ಎಲ್ಲಾ ಪ್ರಗತಿಪರ ಚಳುವಳಗಳು ಮತ್ತು ಹೋರಾಟಗಾರರು ಮುಂದಾಗಬೇಕು. ಈ ನಿಟ್ಟಿನಲ್ಲಿ ನಿಜವಾದ ಸಂಸ್ಕೃತಿ ಹಾಗೂ ದೇಶಭಕ್ತಿ ಹಾಗೂ ಮನುವಾದಿಗಳ ಡೊಂಗಿತನವನ್ನು ಯೋಚಿಸಿ ಜಗತ್ತಿಗೆ ಸಾರುವುದು ಅತ್ಯಗತ್ಯ ಎನಿಸುತ್ತದೆ.

~~~

 

ಹುಚ್ಚಂಗಿ ಪ್ರಸಾದ್ ಪರಿಚಯ ಕೇರಿ ತುಂಬ ದೇವದಾಸಿಯರ(ಸೂಳೆಯರ) ಬದುಕನ್ನು ನೋಡುತ್ತ,ಮೇಲ್ಜಾತಿಗಳು ಮಾಡುತ್ತಿದ್ದ ದೌರ್ಜನ್ಯ, ದಬ್ಬಾಳಿಕೆ, ಜಾತೀಯತೆ, ಅಸ್ಪೃಶ್ಯತೆಯನ್ನು ಅನುಭವಿಸುತ್ತ ಬೆಳೆದವರು. ಮನೆಯಲ್ಲಿ ಬಡತನದಿಂದ ತಂದೆತಾಯಿ ಜೀತ,ಮೂರು ಹೊತ್ತಿನ ಊಟಕ್ಕೋಸ್ಕರ ಶಾಲೆಗೆ ದಾಖಲಿಸದೆ ನೇರವಾಗಿ ಪ್ರಸಾದ್ ರವರನ್ನು ಜೀತಕ್ಕೆ ದಾಖಲು ಮಾಡಿದರು. ನಾಲ್ಕು ವರ್ಷ ಜೀತದ ಮನೆಯಲ್ಲಿ ದುಡಿದು ‘ಚಿಣ್ಣರ ಅಂಗಳ ಬಾಲಕಾರ್ಮಿಕ ವಿಮೋಚನ ಪದ್ದತಿಯಿಂದ ಜೀತ ತೊರೆದು ಒಂದು ಎರಡು ಮೂರನೆ ತರಗತಿಯನ್ನು ಓದದೆ ನೇರವಾಗಿ ವಯಸ್ಸಿನ ಆಧಾರದ ಮೇಲೆ ಐದನೇ ತರಗತಿಗೆ ಸರ್ಕಾರಿ ಶಾಲೆಗೆ ದಾಖಲಾದರು. ಪ್ರಸ್ತುತವಾಗಿ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾದಿಕಾರದಿಂದ ಮೆಚ್ಚುಗೆ ಬಹುಮಾನ ಗಳಿಸಿದ ಅವರ ಚೊಚ್ಚಲ.

 

 

Be the first to comment on "ದೇಶಭಕ್ತಿ ಮತ್ತು ಸಂಸ್ಕೃತಿಯ ಹೇಸರಿನಲ್ಲಿ ದಲಿತ ಅಲ್ಪಸಂಖ್ಯಾತರ ಕಗ್ಗೂಲೆಗಳು"

Leave a comment

Your email address will not be published.


*