ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು ಸಂಸ್ಥಾನಕ್ಕೆ ಅಂಬೇಡ್ಕರ್ ಅವರ ಪ್ರವೇಶವಾಗದ ಕುರಿತು ಕಾಡುವ ಪ್ರಶ್ನೆಗಳು

 

 ಡಾ.ಎನ್. ಚಿನ್ನಸ್ವಾಮಿ ಸೋಸಲೆ (Chinnaswamy Sosale)

ಮೈಸೂರು ಸಂಸ್ಥಾನದ ಇಂದಿನ ಕರ್ನಾಟಕ ಭಾಗಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳು ಪ್ರವೇಶವಾಗುವುದು 1970ರಿಂದೀಚೆಗೆ. ಏಕೆಂದರೆ ಸಂಸ್ಥಾನದಲ್ಲಿ ಶಿಕ್ಷಣ ಪಡೆದ ಮೊದಲ ತಲೆಮಾರಿನ ದಲಿತ ಶಿಕ್ಷಣವಂತರು ಹಾಗೂ ಸಾಹಿತಿಗಳು ಅಂಬೇಡ್ಕರ್ ಅವರ ಜಾಗದಲ್ಲಿ ಗಾಂಧಿಯನ್ನು ಕಾಣುತ್ತಾರೆ. ಅಥವಾ ಗಾಂಧಿ ಅವರನ್ನು ಕಾಣುವಂತೆ ಮಾಡಲಾಯಿತು ಎಂದರೆ ನನ್ನ ವಿಷಯ ಮಂಡನೆಗೆ ಹೆಚ್ಚಿನ ಸತ್ವ ದೊರಕಬಹುದಾಗಿದೆ. ಮೊದಲ ತಲೆಮಾರಿನ ದಲಿತರು ಶಿಕ್ಷಣವಂತರಾಗಲು ಪ್ರಮುಖ ಕಾರಣಕರ್ತರು ಮೈಸೂರು ಸಂಸ್ಥಾನದ ಸಮಯ ಸಾಧಕತನದ ಬ್ರಾಹ್ಮಣರು.

sosale book launch

ಬ್ರಾಹ್ಮಣ ಸಮಾಜ ಸೇವಕರು ಹಾಗೂ ಸ್ವಂಘೋಷಿತ ಹಿಂದೂಧರ್ಮ ರಕ್ಷಕರು. ಅಪ್ಪಿ-ತಪ್ಪಿಯೂ ಇವರು ತಾವು ವಿಶೇಷ ಸೌಲಭ್ಯಗಳನ್ನು ರಾಜರಿಂದ ಪಡೆಯುವ ಸಲುವಾಗಿ ಶಿಕ್ಷಣ ನೀಡಲು ಮುಂದಾದ ದಲಿತರಿಗೆ ಅಂಬೇಡ್ಕರ್ ಅವರನ್ನು ಪರಿಚಯಿಸಲಿಲ್ಲ. ಏಕೆಂದರೆ, ಅಂಬೇಡ್ಕರ್ ಅವರು ಅಂದು ರಾಷ್ಟ್ರದಾದ್ಯಂತ ಕೈಗೊಂಡಿದ್ದ ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಇವರಿಗೆ ರಾಷ್ಟ್ರ ವಿರೋಧಿ ಕೆಲಸವಾಗಿ ಕಂಡಿತು. ಆದರೆ ಅಂಬೇಡ್ಕರ್ ಅವರೊಂದಿಗೆ ಗಾಂಧೀಜಿ ಅವರು ಪುನಾ ಒಪ್ಪಂದಲ್ಲಿ ಸೋತು-ಗೆದ್ದಂತೆ ಫೋಜು ನೀಡಿ ಅದರನ್ವಯದ ನಂತರ ಅವರು ಅಸ್ಪೃಶ್ಯರಿಗೆ ಹರಿಜನರು ಎಂದು ಹೊಸ ಹೆಸರನ್ನಿಟ್ಟು ದಲಿತರ ಉದ್ಧಾರಕ್ಕೆ ನಾನು ಕಂಕಣಕಟ್ಟಿ ನಿಂತಿರುವೆ ಎಂದು ಗಂಟಲ ಮೇಲಿಂದಲೇ ಕರೆಕೊಟ್ಟ ತಕ್ಷಣ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರ ಪ್ರಬಲ ಕೋಮಿನ ಕೆಲ ಜನರು ದಲಿತರ ಉದ್ಧಾರಕ್ಕೆ ಸ್ವಂಘೋಷಿತ ನಾಯಕರಾಗಿ ಹೊರಹೊಮ್ಮಿದರು. ಗಾಂಧೀಜಿ ಅವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡು ದಲಿತರಿಗೆ ಶಿಕ್ಷಣ ನೀಡುವ ನೆಪದಲ್ಲಿ ತಮ್ಮ ಪಾರಂಪರಿಕ ಸನಾತನೀಯ ಧರ್ಮ ರಕ್ಷಣೆಗೆ ಮುಂದಾದರು.

ಅಂದು ಅಂಬೇಡ್ಕರ್ ಅವರು ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದಾಗ ಅವರು ರಾಷ್ಟ್ರ ದ್ರೋಹಿಗಳಾಗಿ ಕಂಡವರಿಗೆ, ಅದೇ ಗಾಂಧಿಜೀ ಅವರು ಹರಿಜನೋದ್ಧಾರಕ್ಕೆ ಕರೆಕೊಟ್ಟ ತಕ್ಷಣ ಇವರಿಗೆ ರಾಷ್ಟ್ರಪ್ರೇಮಿಯಾಗಿ, ದಲಿತೋದ್ಧಾರಕನಾಗಿ, ರಾಷ್ಟ್ರಪಿತನಾಗಿ ಕಂಡರು. ಇದು ಸವರ್ಣೀಯರು ದಲಿತರ ಉದ್ಧಾರ ಮಾಡಲು ಮುಂದಾಗುವುದರಲ್ಲಿಯೂ ಅಸ್ಪೃಶ್ಯತೆ ಆಚರಣೆ ಮಾಡಿಕೊಂಡೇ ಬಂದರೆಂಬುದು ಮನಗಾಣದೆ ಇದರು. ಈ ಕಾರಣಕ್ಕಾಗಿ ಮೊದಲ ತಲೆಮಾರಿನ ದಲಿತ ವಿದ್ಯಾವಂತರಿಗೆ ಅಂಬೇಡ್ಕರ್ ಅವರ ಪರಿಚಯವೇ ಸರಿಯಾಗಿ ಆಗಲಿಲ್ಲ ಎಂಬುದಕ್ಕೆ ಬದಲಾಗಿ ಇವರು ಉದ್ದೇಶಪುರ್ವಕವಾಗಿಯೇ ಪರಿಚಯಿ ಸಲಿಲ್ಲ ಎಂದೆನ್ನಬಹುದು.

ಆಧುನಿಕ ಮೈಸೂರು ಸಂಸ್ಥಾನ ಕರ್ನಾಟಕದ ಚರಿತ್ರೆಯಲ್ಲಿ ದಲಿತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತು. ಅವರನ್ನು ವಿದ್ಯಾವಂತರ್ನಾಗಿ ಮಾಡಲು ಶ್ರಮಿಸಿತು. ಈ ಕಾರ್ಯವನ್ನು ಕಣ್ಣಾರೆಕಂಡ ಗಾಂಧಿ ಅವರಿಂದ ಈ ಸಂಸ್ಥಾನ ರಾಮರಾಜ್ಯ ಎಂದೆನಿಸಿಕೊಂಡಿತ್ತು ಹಾಗೂ ಇದಕ್ಕೆ ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗಾಂಧಿ ಅವರಿಂದ ರಾಜಶ್ರೀ ಎಂದು ಕರೆಸಿಕೊಂಡರು ಎಂಬುದು ದಾಖಲಾಗಿರುವ ಚರಿತ್ರೆಯ ಒಂದು ಪ್ರಮುಖ ಭಾಗ. ಆದರೆ ದಲಿತರಿಗೆ ಮೈಸೂರು ಸಂಸ್ಥಾನ ಶೈಕ್ಷಣಿಕ ಹಾಗೂ ಕೆಲವು ಸಾಮಾಜಿಕ ಹಕ್ಕುಬಾಧ್ಯತೆಗಳನ್ನು ನೀಡಲು ಪ್ರಮುಖ ಕಾರಣವೇ ಬ್ರಾಹ್ಮಣರು ಹುಡುಕಿದ ಜಾಣ್ಮೆಯ ಸಮಯಸಾಧಕ ಕುತಂತ್ರದಿಂದ ಎಂಬುದು ಸತ್ಯಕ್ಕೆ ದೂರವಾದದ್ದೇನಲ್ಲ.

ಮೈಸೂರು ಸಂಸ್ಥಾನ 1799ರಲ್ಲಿ ಟಿಪ್ಪುಸುಲ್ತಾನರ ಮರಣದ ನಂತರ ಅನೇಕ ರಾಜಕೀಯ ಮಜಲುಗಳನ್ನು ಕಂಡಿತ್ತು. ಇದು ನಂತರ ದೇಶೀಯರು ಹಾಗೂ ವಸಾಹತುಶಾಹಿಗಳ ಹಿಡಿತದ ಆಳ್ವಿಕೆಗೆ ಒಳಪಟ್ಟು ನಂತರ 1830ರಲ್ಲಿ ಬ್ರಿಟಿಷರೇ ನೇರ ಆಳ್ವಿಕೆಗೆ ಒಳಪಡಿಸಿಕೊಂಡು 50 ವರ್ಷಗಳ ಕಾಲ ಮೈಸೂರನ್ನು ಆಳಿದರು. ನಂತರ 1881ರಲ್ಲಿ ಪುನಃ ಮೈಸೂರು ವಂಶಸ್ಥರಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. 1881ರಲ್ಲಿ ಮೈಸೂರು ಸಂಸ್ಥಾನದ ರಾಜರಾದ 10ನೇ ಚಾಮರಾಜ ಒಡೆಯರ್ ಅವರು ಸಂಸ್ಥಾನದ ದಿವಾನರನ್ನಾಗಿ ಮದ್ರಾಸ್ ಮೂಲದ ಬ್ರಾಹ್ಮಣರಾದ ಸಿ.ರಂಗಾಚಾರ್ಲು ಅವರನ್ನು ನೇಮಿಸಿಕೊಂಡರು. ಇವರ ನಂತರವೂ ಸಹ ಮದ್ರಾಸ್ ಮೂಲದ ಬ್ರಾಹ್ಮಣರಾದ ಕೆ.ಶೇಷಾದ್ರಿ ಅಯ್ಯರ್ ಅವರನ್ನು ನೇಮಿಸಿಕೊಳ್ಳಲಾಯಿತು. ಇದು ಮೈಸೂರು ಬ್ರಾಹ್ಮಣರಿಗೆ ಸಹಿಸಲಾರದಾಗಿ ಮೈಸೂರು ಅರಸರಿಗೆ ಮೈಸೂರು ಬ್ರಾಹ್ಮಣರನ್ನೇ ಮೈಸೂರು ಸಂಸ್ಥಾನಕ್ಕೆ ದಿವಾನರನ್ನಾಗಿಯೇ ನೇಮಿಸಬೆಕೆಂದು ಮೈಸೂರಿನ ಬ್ರಾಹ್ಮಣರು ಮನವಿ ಪತ್ರ ನೀಡಿದರು. ಇದೊಂದು ರೀತಿಯಲ್ಲಿ ಮೈಸೂರು ಬ್ರಾಹ್ಮಣರು ಮೀಸಲಾತಿ ಕೋರಿ ಪತ್ರ ನೀಡಿದ್ದೆ ಮುಂದೇ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಉಗಮಕ್ಕೆ ಕಾರಣವಾಯಿತು ಎಂದರೆ ತಪ್ಪಾಗದು. ಸೌಮ್ಯ ಸ್ವಭಾವದ ಜಾತಿಯ ಗುಂಪಿಗೆ ಸೇರಿದ್ದ, ಶಿಕ್ಷಣವಂತರೂ, ದೂರದೃಷ್ಠಿ ಹೊಂದಿದವರೂ, ಗುಣ ಸಂಪನ್ನರೂ ಆಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಬ್ರಾಹ್ಮಣರ ಮನವಿ ಪತ್ರಕ್ಕೆ ಸ್ಪಂದಿಸಿ ಮೈಸೂರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಸರ್ ಎಂ.ವಿಶೇಶ್ವರಯ್ಯ ಅವರನ್ನು ಮೈಸೂರು ದಿವಾನರನ್ನಾಗಿ ನೇಮಿಸಿಕೊಂಡರು.

ಮೇಲೆ ಹೇಳಿದ ಮೀಸಲಾತಿಯ ಕಲ್ಪನೆ ಭಾರತದಲ್ಲಿ ಅದರಲ್ಲಿಯೂ ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣರೆ ಹುಟ್ಟು ಹಾಕಿದ್ದು, ಸಂಸ್ಥಾನದಲ್ಲಿ ಇದು ಬ್ರಾಹ್ಮಣರಿಗೆ ಊರುಳಾಗುತ್ತದೆಂದು ಸ್ವತಃ ಬ್ರಾಹ್ಮಣರ್ಯಾರೋ ಊಹಿಸಿರಲಿಲ್ಲ. ಏಕೆಂದರೆ ಇದೇ ಮೀಸಲಾತಿ ಅನ್ವಯ ಸಂಸ್ಥಾನದ ಪ್ರಬಲ ಕೋಮಿನ ಬ್ರಾಹ್ಮಣೇತರ ವರ್ಗವಾದ ಹಾಗೂ ಈ ಸಂದರ್ಭದಲ್ಲಿಯೇ ಒಕ್ಕಲಿಗರ ಸಂಘ, ಲಿಂಗಾಯಿತರ ಸಂಘ ಹಾಗೂ ಮಹಮ್ಮದೀಯರ ಸಂಘಗಳನ್ನು ಸ್ಥಾಪಿಸಿಕೊಂಡು ಬಂಡವಾಳಶಾಹಿತ್ವ ಹಾಗೂ ಊಳಿಗಮಾನ್ಯಶಾಹಿತ್ವದ ಜೊತೆಗೆ ವ್ಯಾಪಾರ, ವಾಣಿಜ್ಯವನ್ನು ತಮ್ಮ ಕೈವಶ ಮಾಡಿಕೊಂಡು ಆರ್ಥಿಕವಾಗಿ ಪ್ರಬಲರಾಗಿ, ಜೊತೆಗೆ ಜನಸಂಖ್ಯೆಯಲ್ಲಿ ಹೆಚ್ಚಿನವರಾಗಿ, ಜಮೀನ್ದಾರ ರಾಗಿ, ಬಂಡವಾಳಶಾಹಿಗಳಾಗಿಯೂ ಗುರುತಿಸಿಕೊಂಡಿದ್ದ ಒಕ್ಕಲಿಗ, ಲಿಂಗಾಯಿತ ಹಾಗೂ ಮುಸ್ಲಿಂ ವರ್ಗದ ಪ್ರಬಲ ಬ್ರಾಹ್ಮಣೇತರರು ಮೈಸೂರಿನ ದಿವಾನರಾಗಿ-

ಬ್ರಾಹ್ಮಣರೇ ಏಕೆ ಆಗಬೇಕು, ನಾವು ಸಹ ಈ ಮಣ್ಣಿನ ಮಕ್ಕಳೇ ನಮಗೂ ಈ ಸಂಸ್ಥಾನದ ದಿವಾನರಾಗಬೇಕಾದ ಅರ್ಹತೆ ಇದೆ

ಎಂಬ ಪ್ರಬಲ ಕಾರಣವನ್ನು ಮುಂದಿಟ್ಟುಕೊಂಡು ಇದಕ್ಕೆ ಪೂರಕವಾಗಿ ಅನೇಕ ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿಗಾಗಿ ಚಳುವಳಿ ಕೈಗೊಂಡರು. ಈ ಚಳುವಳಿಯೇ ಆಧುನಿಕ ಮೈಸೂರು ಚರಿತ್ರೆಯಲ್ಲಿ ಬ್ರಾಹ್ಮಣೇತರ ಚಳವಳಿ ಎಂದು ದಾಖಲಾಗಿದೆ. ಈ ಚಳವಳಿಯ ಆಶಯವನ್ನು ಗಂಭೀರವಾಗಿ ಪರಿಗಣಿಸಿದ ನಾಲ್ವಡಿ ಕೃಷ್ಣರಾಜರು ಬೇರೆ ಮಾರ್ಗವಿಲ್ಲದೆ ಹಾಗೂ ತಮ್ಮಲ್ಲಿ ಮನೆ ಮಾಡಿದ್ದ ಸಾಮಾಜಿಕ ಪ್ರಜ್ಞೆಯ ತತ್ವದಲ್ಲಿ ಬ್ರಾಹ್ಮಣೇತರರಿಗೆ ದಿವಾನ್ ಸ್ಥಾನ ನೀಡಲು ಮುಂದಾದರು. ಇದರ ಫಲವಾಗಿ ಸಂಸ್ಥಾನದ ಪ್ರಥಮ ಬ್ರಾಹ್ಮಣೇತರ ದಿವಾನರಾಗಿ ಸರ್ ಎಂ.ಕಾಂತರಾಜ ಅರಸು ಅವರು ನೇಮಕವಾದರು.

sosale book

ನಂತರ ಹದಿನೈದು ವರ್ಷಗಳ ಕಾಲ ಮುಸ್ಲಿಂ ಸಮುದಾಯಕ್ಕೆ ಸೇರಿದ ಸರ್ ಮಿರ್ಜಾ ಎಂ.ಇಸ್ಮಾಯಿಲ್ ಅವರು ಆಳ್ವಿಕೆ ಮಾಡಿದರು. ಅಂದರೆ 1918ರಿಂದ 1940ರ ವರೆಗೆ ಬ್ರಾಹ್ಮಣೇತರರು(ಮಧ್ಯ ಮೂರು ವರ್ಷಗಳನ್ನು ಹೊರತುಡಪಿಸಿ) ಮೈಸೂರು ಸಂಸ್ಥಾನದ ದಿವಾನರಾಗಿ ಬ್ರಾಹ್ಮಣೇತರರು ಆಳ್ವಿಕೆ ಮಾಡುವಂತಾಯಿತು. ಇದು ಮೌರ್ಯರ ಕಾಲದಲ್ಲಿ ಚಾಣಕ್ಯರಾಗಿ, ವಿಜಯನಗರ ಕಾಲದಲ್ಲಿ ವಿದ್ಯಾರಣ್ಯರಾಗಿ, ಹೊಯ್ಸಳರ ಕಾಲದಲ್ಲಿ ಸುದ್ದತ್ತಾಮುನಿಗಳಾಗಿ, ಅಷ್ಟೇ ಏಕೆ ಕನ್ನಡ ನಾಡಿನ ಸ್ಥಾಪಿತ ರಾಜವಂಶವಾದ ಕದಂಬ ವಂಶದ ಸ್ಥಾಪಕ ಬ್ರಾಹ್ಮಣ ಮಯೂರ ಶರ್ಮನಾಗಿ (ಇವನ್ನು ಬ್ರಾಹ್ಮಣನಲ್ಲಿ, ಆದರೂ ಹೇಗೆ ಕರೆಯಲಾಗಿದೆ?) ಶತಶತಮಾನಗಳಿಂದ ವಿದ್ಯೆ ಎಂಬುದನ್ನು ತಮ್ಮ ಸ್ವತ್ತಾಗಿಸಿಕೊಂಡು ಆಳ್ವಿಕೆ ಮಾಡಲು ಬಂದಂತಹವರಿಗೆ ತಮ್ಮ ಅಸ್ತಿತ್ವದ ಮೂಲಭೂತ ಪ್ರಶ್ನೆಯಾಗಿ ಕಂಡಿತು. ಇಷ್ಟಲ್ಲದೆ ಪುರೋಹಿತಶಾಹಿಗಳು, ಬ್ರಿಟೀಷರು, ಫ್ರೆಂಚರು, ಡಚ್ಚರು, ಮುಸ್ಲಿಂ ಇತ್ಯಾದಿಗಳವರ ಆಳ್ವಿಕೆಯ ಸಂದರ್ಭದಲ್ಲಿ ಮಾರ್ಗದರ್ಶಕರಾಗಿ, ತಮ್ಮ ಅನುಕೂಲ ಸಾಧನೆಗೆ ಸಮಯ ಸಾಧಕರಾಗಿ, ಸ್ವಾರ್ಥಕ್ಕಾಗಿ ದೇಶವನ್ನು ಒಡೆದಾಳುವ ಕುತಂತ್ರ ಬಳಸಿದವರಾಗಿ, ದೇಶದ ದೇವಸ್ಥಾನ ಹಾಗೂ ದೇವರೆಲ್ಲವನ್ನು ಸ್ವಯಂ ಗುತ್ತಿಗೆ ಪಡೆದವರಾಗಿ ಹಾಗೂ ಶೂದ್ರರಿಗೆ, ಕುಲದೇವರಿಗೆ, ಕ್ಷತ್ರೀಯ ದಿಕ್ಷೆ ನೀಡಿ ಹೆಸರಿಗೆ ಮಾತ್ರ ರಾಜರನ್ನಾಗಿಸಿ ದಿವಾನರಾಗಿ ಆಳ್ವಿಕೆಯನ್ನು ತಲಾ ತಲಾಂತರದಿಂದಲೂ ಕೈಯಲ್ಲಿರಿಸಿಕೊಂಡಿದ್ದ ಬ್ರಾಹ್ಮಣರಿಗೆ ಇದು ಸಹಿಸಲಾರದ ಸಂದರ್ಭವಾಗಿ ಬಂದೋದಗಿತು.

ಆದರೆ, ಶತಶತಮಾನಗಳಿಂದಲೂ ರಾಜಶ್ರಯ ಪಡೆದಿದ್ದ ಹಾಗೂ ಇಂದಿಗೂ ಪಡೆಯಲು ಹಂಬಲಿಸುತ್ತಿದ್ದ ಮೈಸೂರು ಬ್ರಾಹ್ಮಣರಿಗೆ ಸಂಸ್ಥಾನದಲ್ಲಿನ ಪ್ರಬಲ ಬ್ರಾಹ್ಮಣೇತರರ ವಿರುದ್ಧ ಹೋರಾಡಿ ತಮ್ಮ ಕುತಂತ್ರ ಬುದ್ದಿಶಕ್ತಿಯಿಂದ ದಿಗ್ವಿಜಯ ಸಾಧಿಸಿ ಪುನಃ ದಿವಾನರಾಗುವುದು ಕಷ್ಟದ ಮಾತಾಗಿತ್ತು. ಇದಕ್ಕಾಗಿ ಅವರು ಕೈಕಟ್ಟಿ ಕೂರುವ ಕೆಲಸಕ್ಕೆ ಹೋಗದೆ ತಾವು ಶತಶತಮಾನಗಳಿಂದ ಶೂದ್ರ ಹಾಗೂ ದಲಿತರಿಗೆ ಹೇಳಿದ್ದ ಒಂದು ಊರಿನಲ್ಲಿ ಒಬ್ಬ ಬಡಬ್ರಾಹ್ಮಣನಿದ್ದ; ಆದರೆ ಅವನು ಬುದ್ದಿಯಲ್ಲಿ ಚಾಣಕ್ಷನಾಗಿದ್ದ ಎಂಬ ಮಾತಿನಂತೆ ತಮ್ಮ ಚಾಣಕ್ಷ ಬುದ್ಧಿಯನ್ನು ತೋರಿಸಲು ಮುಂದಾದರು. ಅಂದರೆ ಪ್ರಬಲ ಬ್ರಾಹ್ಮಣೇತರ ಕೋಮಿನವರ ವಿರುದ್ದ ಅಧಿಕಾರಕ್ಕಾಗಿ ಹೋರಾಟ ಮಾಡಲು, ಧೈರ್ಯವಾಗಿ ನಿಲ್ಲಲ್ಲು ಹಾಗೂ ಆ ಮೂಲಕ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮನಗೆದ್ದು ಸಂಸ್ಥಾನದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಲು ಆಯ್ಕೆಮಾಡಿಕೊಂಡ ಕ್ಷೇತ್ರವೇ ಪಂಚಮರ ಶಿಕ್ಷಣ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾದದ್ದು.

ಒಂದರ್ಥದಲ್ಲಿ ಸಾಮಾಜಿಕ ಅಂತಃಕರಣ ಹೊಂದಿದ್ದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶಾಹು ಮಹಾರಾಜ ಮುಂತಾದವರ ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾಗಿದ್ದ ನಾಲ್ವಡಿ ಅವರ ಮನದಲ್ಲಿ ಅಸ್ಪೃಶ್ಯರ ಪರವಾಗಿ ಕೆಲಸ ಮಾಡಬೇಕೆಂದು ಅತೋರಿಯುತ್ತಿತ್ತು. ಈ ಕಾರ್ಯಕ್ಕೆ ಅಡ್ಡಿಯಾಗಿದ್ದ ಇದೇ ಬ್ರಾಹ್ಮಣರ ಈ ನಿರ್ಧಾರ ನಾಲ್ವಡಿ ಅವರಿಗೆ ವರವಾಗಿ ಸಂದಿತು. ಶತಶತಮಾನಗಳಿಂದ ಮುಟ್ಟಲು ಯೋಗ್ಯರಲ್ಲವೆಂದು, ಪುರೋಹಿತರೇ ಊರಿನ ಅಮಂಗಲ ದಿಕ್ಕಿಗಿರುವ ದಕ್ಷಿಣದ ಕಡೆಗೆ ಇಟ್ಟಿದಂತಹ ಜನಾಂಗದವರನ್ನು ತಾವೇ ಮುಟ್ಟಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಶತಶತಮಾನದ ಶೋಷಣೆಯಿಂದ ಅವರ ಮೂಕ ಮಾತಿನ ಶಾಪವನ್ನು ಈ ಮೂಲಕ ಕಡಿಮೆ ಮಾಡಿಕೊಳ್ಳಲು ಮುಂದಾದರೆಂದುಕೊಳ್ಳುವುದು ಒಂದಾದರೆ, ಅರಸರಿಗೆ ಹತ್ತಿರವಾಗಿ ಪಂಚಮರಿಗೆ ಶಿಕ್ಷಣ ನೀಡಿ ನಿಮ್ಮ ಘನತೆಯನ್ನು ದೇಶ ವಿದೇಶಗಳಲ್ಲಿ ಪ್ರಖ್ಯಾತಿಗೊಳಿಸುತ್ತೇವೆಂದು ಹೇಳಿ ಪ್ರಮುಖ ಹುದ್ದೆಗಳಲ್ಲಿ ತಮ್ಮ ಚಾಣಕ್ಷಬುದ್ಧಿಯಿಂದ ಅಲಂಕರಿಸುವುದಾಗಿತ್ತು ಎಂಬುವುದೂ ಸಹ ಸತ್ಯ. ಜೊತೆಗೆ ಬಹುಮುಖ್ಯವಾಗಿ ಫ್ರೆಂಚ್, ಜರ್ಮನ್, ಇಂಗ್ಲೆಂಡ್ ಅವರು ನಿರ್ಮಿಸಿದ ಕ್ರೈಸ್ತ ಮಿಷನರಿಗಳ ಸೇವೆಯಿಂದ ಈ ಭಾಗದ ದಲಿತರು ಮತಾಂತರವಾಗಿರುವುದನ್ನು ತಪ್ಪಿಸಿ ಹಿಂದೂಧರ್ಮವನ್ನು ರಕ್ಷಣೆ ಮಾಡುವುದು ಸಹ ಈ ಸನಾತನೀಯರ ಮುಖ್ಯ ಧ್ಯೇಯವಾಗಿತ್ತು.

ಮೈಸೂರು ಸಂಸ್ಥಾನದ ಚಾಮರಾಜನಗರ, ಕನಕಪುರ, ಮಳವಳ್ಳಿ, ಟಿ.ನರಸೀಪುರ, ಗುಂಡ್ಲಪೇಟೆ, ಯಳಂದೂರು, ತುಮಕೂರು ಜಿಲ್ಲೆಯ ಪವಾಗಡ, ಕೋರಟಗೆರೆ, ಮಧುಗಿರಿ, ಶಿರಾ ಹಾಗೂ ಕನಕಪುರ, ರಾಮನಗರಗಳಲ್ಲಿ ಹಾಗೂ ಕನ್ನಡಿಗರೇ ಹೆಚ್ಚಾಗಿದ್ದು ಅಂದು ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದಂತಹ ಕೊಳ್ಳೇಗಾಲ ಭಾಗಗಳಲ್ಲಿ ಫ್ರೆಂಚ್ ಹಾಗೂ ಜರ್ಮನಿ ದೇಶದ ಪ್ರೊಟೆಸ್ಟೆಂಟ್ ಕ್ರೈಸ್ತ ಮಿಷನರಿಗಳು ಪ್ರಥಮ ಆದ್ಯತೆಯಲ್ಲಿ ಸೇವಾ ಮನೊಭಾವನೆಯಿಂದ ದಲಿತರಿಗೆ ಹತ್ತಿರವಾಗಲು ಮುಂದಾದರು. ಸನಾತನೀಯರು ಹಾಗೂ ಊಳಿಗಮಾನ್ಯಶಾಹಿಗಳಲ್ಲಿ ಶತಶತಮಾನಗಳಿಂದ ಸಾಮಾಜಿಕವಾಗಿ ನೀಚರಾಗಿ, ತೊತ್ತುಗಳಾಗಿ, ಜೀತದ ಆಳುಗಳಾಗಿ, ಊರಿನ ಜಮೀನ್ದಾರನ ಮನೆಯ ಬಿಟ್ಟಿ ಚಾಕರಿಯ ಆಳಾಗಿ, ಶಿಕ್ಷಣ ನಮ್ಮದಲ್ಲ ನಾವು ಹುಟ್ಟಿರುವುದೇ ದಣಿಗಳ ಮನೆಯಲ್ಲಿ ದುಡಿಯಲು ಎಂದೇನಿಸಿಕೊಂಡಿದ್ದ ಅಸ್ಪೃಶ್ಯ ಜನಾಂಗದವರ ಹತ್ತಿರಕ್ಕೆ ಈ ಮಿಷನರಿ ಅವರು ಬಂದು ಪ್ರೀತಿಯ ಧಾರೆ ಸುರಿಸಿದರು. ದಲಿತರು ನಮ್ಮನ್ನು ಮುಟ್ಟಿ ಮಾತನಾಡಿಸುವ, ನಮ್ಮ ದೇಶದವರಲ್ಲ ದಿದರೂ ವಿದೇಶಿ ಜನ ಇದ್ದಾರೆಂದುಕೊಂಡು ಆಶ್ಚರ್ಯ ಮತ್ತು ಸಂತೋಷಪಟ್ಟರು. ಈ ಭಾಗದಲ್ಲಿ ವಾಸಿಸುತ್ತಿದ್ದ ಅಸ್ಪೃಶ್ಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಷ್ಠ ರೋಗದಿಂದ ಬಳಲುತ್ತಿದ್ದವರಾಗಿದ್ದರು. ಮೊದಲೇ ಭಾರತೀಯ ಸಮಾಜದಿಂದ ಅಸ್ಪೃಶ್ಯರೆಂಬ ಪಟ್ಟ ಕಟ್ಟಿಕೊಂಡೆ ಹುಟ್ಟಿದ ಇವರಿಗೆ ಮತ್ತೊಂದು ಈ ಕುಷ್ಠರೋಗ ಎಂಬ ಬೀಕರ ಅಸ್ಪಶ್ಯತೆ. ಈ ಎರಡರಿಂದಲೂ ಮನುಷ್ಯರಾಗಿದ್ದರೂ ಕೀಳು ಪ್ರಾಣಿಗಳಿಗಿಂತಲೂ ಹೀನಾಯ ಬದುಕಿನ ಕಾರಳತನದಲ್ಲಿ ಬದುಕುತ್ತಿದ್ದವರ ಸೇವೆಗೆ ಜರ್ಮನ್ ಹಾಗೂ ಫ್ರೆಂಚ್ನ ಪ್ರೋಟಸ್ಟೆಂಟ್ ಕ್ರೈಸ್ತ ಮಿಷನರಿಗಳು ಮುಂದಾದವು. ತನ್ನ ಜನರಿಂದಲೇ ಮುಟ್ಟಲು ಯೋಗ್ಯರಲ್ಲ ವೆಂದೆನಿಸಿಕೊಂಡಿದ್ದವರನ್ನು ಮುಟ್ಟಿ, ಶುಶ್ರೂತೆ ಮಾಡಿ ಅವರಿಗೆ ಅವಶ್ಯಕವಾಗಿ ಬೇಕಾದ ಚಪ್ಪಲಿ, ಬಟ್ಟೆ ಹಾಗೂ ಔಷಧೋಪಚಾರವನ್ನು ಉಚಿತವಾಗಿ ನೀಡಿದರು. ಇವರ ಸೇವೆಯಿಂದ ಮನಸೋತ ದಲಿತರು ಇವರ ಯಾವುದೇ ಪ್ರಚೋದನೆ ಇಲ್ಲದೆಯೇ ಸಾವಿರಾರು ಜನ ತಮ್ಮ ನೆರವಿಗೆ ಬಂದ ವಿದೇಶಿ ಜನರ ಅವರು ಆಗಾಗಲೇ ಈ ಜನರಲ್ಲಿ ಹೇಳಿದ್ದ ಪವಿತ್ರವಾದ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ದಲಿತವರ್ಗದವರು ಈ ಸಂದರ್ಭದಲ್ಲಿ ಕ್ರೈಸ್ತಧರ್ಮ ಸ್ವೀಕರಿಸುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಅವರು ನೀಡಿದ ಉಚಿತ ಶಿಕ್ಷಣ.

ನೂರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಂತಹ ದಲಿತವರ್ಗದವರಿಗೆ ಕ್ರೈಸ್ತ ಮಿಷನರಿಗಳು ಇಂಗ್ಲಿಷ್ ಮಾಧ್ಯಮದ ಮೂಲಕವೇ ಶಿಕ್ಷಣ ಕೊಡಲು ಮುಂದಾದವು. ಇದರ ಪ್ರಭಾವ ಈ ಭಾಗದ ದಲಿತವರ್ಗದಲ್ಲಿ ಮೈಸೂರು ಅರಸರು ಶಿಕ್ಷಣ ನೀಡಲು ಮುಂದಾಗುವುದಕ್ಕೆ ಮುಂಚೆಯೇ ನೂರಾರು ಅಸ್ಪೃಶ್ಯರು ಇಂಟರರ ಮಿಡಿಯಟ್ವರೆಗೆ ಓದಿ, ಪ್ರಾಥಮಿಕ ಶಿಕ್ಷಕರ ವೃತ್ತಿಯನ್ನು ಅದೇ ಕ್ರೈಸ್ತ ಮಿಷನರಿಗಳಲ್ಲಿ ಆರಂಭಿಸಿದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿಯೇ ಮಂಡ್ಯ ಜಿಲ್ಲೆ ಮಳವಳ್ಳಿಯ ದಲಿತ ಕೇರಿಯಲ್ಲಿ 27 ಅಸ್ಪೃಶ್ಯರು ಶಿಕ್ಷಕ ವೃತ್ತಿಯನ್ನು ಯಶಸ್ವಿಯಾಗಿ ಪುರೈಸಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಆದರೆ ಇವರ್ಯಾರೋ ಪದವಿ ಪಡೆದವರಾಗಿರಲಿಲ್ಲ. ಮೈಸೂರು ಸಂಸ್ಥಾನದಲ್ಲಿ 1925ರಲ್ಲಿ ಸೋಸಲೆ ಬಿ.ರಾಚಪ್ಪ ಅವರು ಪ್ರಥಮ ಬಾರಿಗೆ ಬಿ.ಎ.ಪಾಸ್ ಮಾಡಿದ ದಲಿತ ವಿದ್ಯಾರ್ಥಿ ಎಂಬುದು ಚರಿತ್ರೆಯ ಭಾಗವೇ ಆಗಿದೆ(ಹೆಚ್ಚಿನ ಮಾಹಿತಿಗಾಗಿ ಇದೇ ಲೇಖಕರ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು ಸಂಸ್ಥಾನದಲ್ಲಿ ದಲಿತರು ಎಂಬ ಪುಸ್ತವನ್ನು ನೋಡಿ). ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬ್ರಾಹ್ಮಣರು ಕ್ರೈಸ್ತ ಮಿಷನರಿಗಳ ಉಚಿತ ಸೇವೆಗೆ ಮನ ಸೋತು ಕ್ರೈಸ್ತ ಮತ ಸ್ವೀಕರಿಸುತ್ತಿರುವ ಅಸ್ಪೃಶ್ಯರನ್ನು ಮನ ಒಲಿಸಿ ಅವರನ್ನು ಹಿಂದೂಧರ್ಮದ ಒಂದು ಭಾಗವನ್ನಾಗಿಸಿಕೊಳ್ಳುವುದು ಸಹ ಬ್ರಾಹ್ಮಣರ ಕುತಂತ್ರವಾಗಿತ್ತು. ಆದರೆ ಬ್ರಾಹ್ಮಣೇತರರು, ಬಸವಣ್ಣನ ವಂಶಸ್ಥರುಗಳಿವೆ ಇವ್ಯಾವುದರ ಅರಿವೇ ಇಲ್ಲದೆ ತಮ್ಮ ಊಳಿಗಮಾನ್ಯತ್ವವನ್ನು ಮಾತ್ರ ಜಾತಿಯ ಹಿನ್ನೆಲೆಯಲ್ಲಿ ಕಾಪಾಡಿಕೊಂಡು ಬರುವುದರಲ್ಲಿಯೇ ಶ್ರಮವಹಿಸುತ್ತಿದ್ದರು.

ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣರಿಗೆ ದಲಿತರಿಗೆ ಶಿಕ್ಷಣ ನೀಡಲು ಪ್ರಮುಖ ಕಾರಣಗಳಲ್ಲಿ ಮುಖ್ಯವಾದದ್ದು ಎಂದರೆ 19ನೇ ಶತಮಾನದ ಕೊನೆಯ ಭಾಗದಲ್ಲಿ ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಮೂಲಕ ಶುದ್ಧ ಚಳವಳಿಯನ್ನು ಬಂಗಾಳ ಹಾಗೂ ಇತರ ಕಡೆಗಳಲ್ಲಿ ವಿಶೇಷ ಕಾರ್ಯಕ್ರಮವಾಗಿ ಹಮ್ಮಿಕೊಂಡಿದ್ದು ಮೂಲ ಕಾರಣವಾಗಿತ್ತು. ವಿದೇಶಿಯರ ಪ್ರಭಾವಕ್ಕೆ ಒಳಗಾಗಿ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಅಸ್ಪೃಶ್ಯ ಜಾತಿಯ ದಲಿತರನ್ನು ಶುದ್ಧಿಕರಿಸಿ ಹಿಂದೂಧರ್ಮಕ್ಕೆ ಕರೆದುಕೊಂಡು ಬರುವ ಕಾಯಕದಲ್ಲಿ ತೊಡಗಿದ್ದು. ಮತಾಂತರ ಹೊಂದಿದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವುದೇ ಶುದ್ಧಿ ಚಳುವಳಿಯ ಮುಖ್ಯ ಉದ್ದೇಶವಾಗಿತ್ತು. ಇದು 20ನೇ ಶತಮಾನದಲ್ಲಿ ಮೈಸೂರು ಸಂಸ್ಥಾನದ ಬ್ರಾಹ್ಮಣರು ಬ್ರಾಹ್ಮಣೇತರರ ರಾಜಕೀಯ ಪ್ರಭಾವದಿಂದಾಗಿ ಶತಶತಮಾನದಿಂದ ಅನುಭವಿಸಿಕೊಂಡು ಬಂದಿದ್ದ ಅಧಿಕಾರದಿಂದ ವಂಚಿತರಾದಾಗ ಕ್ರೈಸ್ತರ ಉಚಿತ ಸೇವೆ ಹಾಗೂ ಮಾನವ ಪ್ರೀತಿಗೆ ಸೋತು ಕ್ರೈಸ್ತಮತ ಸ್ವೀಕಾರ ಮಾಡುವ ಅಸ್ಪೃಶ್ಯರನ್ನು ತಡೆದು ಮೈಸೂರಿನಲ್ಲಿ ದಯಾನಂದ ಸರಸ್ವತಿ ಮಾದರಿಯಲ್ಲಿ ಶುದ್ಧಿ ಚಳವಳಿ ಮಾಡಲು ಮುಂದಾದರು. ಹಿಂದೂಧರ್ಮವನ್ನು ಈ ಮೂಲಕ ರಕ್ಷಿಸುವುದೂ ಒಂದು ಪ್ರಮುಖವಾದ ಅಜೆಂಡವನ್ನಾಗಿ ಮಾಡಿಕೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹಿಂದೂಧರ್ಮದ ಪಾಠ ಹೇಳಿ ಸಕಲವನ್ನು ಅವರಿಂದ ಪಡೆದವರು. ಆ ಮೂಲಕ ತಮ್ಮ ಕುತಂತ್ರಕ್ಕೆ ಸೋತ ನಾಲ್ವಡಿ ಅವರ ಮನ ಗೆÀದ್ದು ತಮ್ಮ ಜಾಣ ಬ್ರಾಹ್ಮಣ ಬುದ್ಧಿಯನ್ನು ಕಾಪಾಡಿಕೊಂಡರು.

ಮೇಲಿನ ಬ್ರಾಹ್ಮಣ್ಯರ ಕುತಂತ್ರದಿಂದ ನಾಲ್ವಡಿ ಕೃಷ್ಣರಾಜರ ಮನಗೆದ್ದ ಬ್ರಾಹ್ಮಣರು ದಲಿತರ ಶಿಕ್ಷಣಕ್ಕೆ ಮುಂದಾಗಿ ಅವರ ಸೇವೆಯೇ ದೇವರ ಸೇವೆ ಎಂಬುವಂತೆ ಮನಮುಟ್ಟೋ ಕಾರ್ಯಕ್ರಮಗಳನ್ನು ರೂಪಿಸಿದರು. ಇದರಲ್ಲಿ ಪಂಚಮರ ಆರ್. ಗೋಪಾಲಸ್ವಾಮಿ ಅಯ್ಯರ್, ತಗಡೂರು ರಾಮಚಂದ್ರರಾವ್, ಎಂ.ಎನ್.ಜೋಯಿಸ್, ಪ್ರಾಣೇಶ್ವರ ರಾವ್, ಮುರ್ಗೇಶನ್ ಪಿಳ್ಳೆ ಮುಂತಾದವರು ಪ್ರಮುಖರು. ಇವೆರಲ್ಲರೂ ನಂತರದ ದಿನಗಳಲ್ಲಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಸೇವೆ ಮಾಡಲು ನಾಲ್ವಡಿ ಅವರಿಂದ ಆಯ್ಕೆಯಾದರು. ಮೈಸೂರು ಸಂಸ್ಥಾನದಲ್ಲಿ ಅಸ್ಪೃಶ್ಯರ ಉದ್ಧಾರಕ್ಕೆ ಕ್ರೈಸ್ತ ಮಿಷನರಿಗಳು ತೆರೆದಿದ್ದ ಶಾಲೆಗಳ ಮಾದರಿಯಲ್ಲಿಯೇ ಇವರು ಮಹಾರಾಜರಿಂದ ಒಪ್ಪಿಗೆ ಪಡೆದು, ಅವರ ಮನಹೊಲಿಸಿ ಆಯಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಹತ್ತಿರವೇ ಮೈಸೂರು ಸಂಸ್ಥಾನದ ಪಂಚಮರ ಶಾಲೆಗಳನ್ನು ತೆರೆದು ಉಚಿತ ಊಟ, ಬಟ್ಟೆ ಹಾಗೂ ಪುಸ್ತಕಗಳನ್ನು ನೀಡಿ ಸಮಾಜ ಸುಧಾರಣ ಕಾರ್ಯಕ್ಕೆ ಅಥವಾ ಹಿಂದೂಧರ್ಮ ಉಳಿಸುವಿಕೆಗೆ ಮುಂದಾದರು.

ದೇಶದ ಮಹಾನ್ ಧಾರ್ಮಿಕ ಪುರುಷರೆಂದು ಸ್ವ-ಘೋಷಿಸಿಕೊಂಡವರು, ಪುರಾಣಗಳ ಇತಿಹಾಸವನ್ನು ವರ್ಣನಾತ್ಮಕವಾಗಿ ಹೇಳಿ ದೇಶದಲ್ಲಿ ಅವರಿಗಾಗುತ್ತಿರುವ ಪುರೋಹಿತಶಾಹಿ, ಬಂಡವಾಳಶಹಿ, ಊಳಿಗಮಾನ್ಯಶಾಹಿ, ಆಡಳಿತಶಾಹಿಗಳಿಂದಾದ ಶತಶತಮಾನದ ನಷ್ಟವನ್ನು ನಿಜ ಪಠ್ಯದಲ್ಲಿ ಮುಚ್ಚಿಟ್ಟವರು. ಸತ್ತ ಪುರಾಣ ಹಾಗೂ ರಾಜ ಮಹಾರಾಜರ ವೈಭವದ ಚರಿತ್ರೆಯನ್ನು ರಾಷ್ಟ್ರೀಯ ಕಲ್ಪನೆಯಲ್ಲಿ ಹೇಳಿ ನಂಬಿಸಿದವರು. ಜ್ಯಾತ್ಯಾತೀತ ನಿಜ ಸಮಾಜದ ಸುಧಾರಕರಾದ ಬುದ್ಧ, ಬಸವ, ಅಂಬೇಡ್ಕರ್, ಪೆರಿಯರ್, ಅಯ್ಯನಕಾಳಿ, ಅಯೋತಿದಾಸ್, ಮಹಾತ್ಮ ಜೋತಿ ಬಾ ಪುಲೆ, ನಾರಾಯಣಗುರು, ಸ್ವಾಮಿ ವಿವೇಕಾನಂದ, ಸಾವಿತ್ರಿಬಾಯಿ ಪುಲೆ ಮುಂತಾದ ಜನಪರ ಚಿಂತಕರ ಚಿಂತನೆಗಳಿಂದ ಇವರನ್ನು ದೂರ ಇರುವಂತೆ ಮಾಡಿದವರು. ಈ ಜನರಲ್ಲಿ ಶಂಕರ, ಮಧ್ವ, ರಾಮಾನುಜಚಾರ್ಯ ಚಿಂತನೆಗಳು ಹಾಗೂ ಮಹಾತ್ಮಗಾಂಧಿ ಅವರ ಪ್ರಭಾವಗಳು ಉಳಿಯುವಂತೆ ಅತ್ಯಂತ ಬ್ರಾಹ್ಮಣ್ಯದ ಜ್ಞಾನದಿಂದ ಕಾಪಾಡಿ ಕೊಂಡವರು. ಇದೇ ಬ್ರಾಹ್ಮಣ ಸಮುದಾಯದ ಸಮಯ ಸಾಧಕತನ ಎಂಬುವುದನ್ನು ಮರೆಯಬಾರದಾಗಿದೆ.

ಈ ಹಿನ್ನೆಲೆಯಿಂದಲೇ ಮೈಸೂರು ಬ್ರಾಹ್ಮಣರಿಗೆ ದೇಶದಾದ್ಯಂತ ಅಸ್ಪೃಸ್ಯ ನಿವಾರಣೆಗಾಗಿ ಹಾಗೂ ಸಮಸಂಸ್ಕೃತಿಯ ನಿರ್ಮಾಣದ ಜೊತೆಗೆ ದಲಿತರಿಗೆ ಬೌದ್ಧಧರ್ಮದ ಉಪದೇಶ ನೀಡಿ ಈ ದೇಶದ ಮೂಲಮಣ್ಣಿನ ಧರ್ಮವಾದ ಬೌದ್ಧಧರ್ಮಕ್ಕೆ ದಲಿತರನ್ನು ಧರ್ಮಸ್ವೀಕಾರ ಮಾಡಲು ಮುಂದಾಗಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮೈಸೂರಿನ ಬ್ರಾಹ್ಮಣರು ನಾಲ್ವಡಿ ಕೃಷ್ಣರಾಜರ ಆಳ್ವಿಕೆಯ ಕಾಲದಲ್ಲಿ ಸಂಸ್ಥಾನವನ್ನು ಪ್ರವೇಶಿಸಲು ಯಾವ ಕಾರಣಕ್ಕೂ ಅವಕಾಶ ನೀಡದಿರುವಂತೆ ಕಾಪಾಡಿಕೊಂಡರು. ಸಂಸ್ಥಾನದಲ್ಲಿ ದಲಿತರಿಗೆ ವಿದ್ಯೆಯನ್ನು ನೀಡಲು ಮುಂದಾದವರೆಂದು ಹೇಳಿಕೊಂಡು ಅವರನ್ನು ಆಧುನಿಕ ಅಜ್ಞಾನದ ಕೊಂಪೆಯಲ್ಲಿ ಮುಳುಗುವಂತೆ ಮಾಡಿ ಜಾತಿ-ಜಾತಿಗಳನ್ನು ಗಟ್ಟಿಯಾಗಿಸಿ ತಮ್ಮ ಬ್ರಾಹ್ಮಣ್ಯವನ್ನು ತಾವರೆಯ ಎಲೆಯ ಮೇಲೆ ಬಿದ್ದ ನೀರಿನ ಬಿಂದುವಿನಂತೆ ನುಣುಚಿ ಜಾರಿ ಬೀಳದಂತೆ ಮಾಡಿ ತಮ್ಮ ಗೆಲುವನ್ನು ಪಡೆದರು.

ಹೀಗೆ ದಲಿತರಿಗೆ ಶಿಕ್ಷಣ ನೀಡಲು ಮುಂದಾದ ಬ್ರಾಹ್ಮಣರಿಗೆ 20ನೇ ಶತಮಾನದ ಪ್ರಾರಂಭದಲ್ಲಿಯೇ ಈ ದೇಶದ ಸಾಮಾಜಿಕ ಚರಿತ್ರೆಗೆ ಮುನ್ನುಡಿ ಬರೆದಿದ್ದಂತಹ ಹಾಗೂ ಇಲ್ಲಿನ ಸಾಮಾಜಿಕ ಅನಿಷ್ಠಪದ್ಧತಿ ಅಸ್ಪೃಸ್ಯತೆಯ ವಿರುದ್ಧ ಧ್ವನಿ ಎತ್ತಿ ಅಸ್ಪೃಶ್ಯರ ದನಿಯಾಗಿ ಮುಂದುವರೆಯುತ್ತಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇವರ ಸ್ವಾರ್ಥ ದಲಿತ ಪರ ಕೆಲಸಕ್ಕೆ ಸ್ಫೂರ್ತಿಯಾಗಲಿಲ್ಲ. ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣರು ದಲಿತರ ಪರವಾಗಿ ಅನೇಕ ಕಾರ್ಯಗಳನ್ನು ಕೈಗೊಂಡರೂ ಸಹ ಅಂದು ರಾಷ್ಟ್ರದಾದ್ಯಂತ ದಲಿತರ ದನಿಯಾಗಿದ್ದಂತಹ ಮಹಾತ್ಮ ಜೋತಿಬಾ ಪುಲೆ, ಪೆರಿಯರ್, ನಾರಾಯಣಗುರು, ಡಾ.ಬಿ.ಆರ್.ಅಂಬೇಡ್ಕರ್ರರು ಬ್ರಾಹ್ಮಣ್ಯ ತುಂಬಿದ ಮನಸ್ಸಿಗೆ ನಾಯಕರಾಗಲು ಸಾಧ್ಯವಾಗಲಿಲ್ಲ. ಆದರೆ ಪ್ರಾರಂಭದಲ್ಲಿ ಹೇಳಿರುವ ಹಾಗೆ ಪುನ ಒಪ್ಪಂದದಲ್ಲಿ ಅಂಬೇಡ್ಕರ್ ಅವರ ವಿರುದ್ಧ ಉಪವಾಸ ಸತ್ಯಾಗ್ರಹ ಎಂಬ ಬಣ್ಣ ಹಾಕದೇ ನಾಟಕವಾಡುವ ಅಸ್ಪೃಶ್ಯನಿವಾರಕ ನಾಯಕನ ಮಂತ್ರವನ್ನು ಊಡಿ ಸೋತು-ಗೆದ್ದ ಗಾಂಧಿಜೀ ಅವರು ಹಿಂದೂಧರ್ಮದ ರಕ್ಷಣೆಗಾಗಿ ಬಹುಸಂಖ್ಯಾತ ಅಸ್ಪೃಶ್ಯ ಜಾತಿಯವರಾಗಿದ್ದ ದಲಿತರನ್ನು ಹರಿಜನ ಎಂದು ಕರೆದರು. ಹರಿಜನೋದ್ದಾರವೇ ನನ್ನ ಮುಖ್ಯ ಗುರಿ ಎಂದ ತಕ್ಷಣ ಇಲ್ಲಿನ ದಲಿತರ ಪರ ಕೆಲಸ ಮಾಡುತ್ತಿದ್ದ ಸಮಯ ಸಾಧಕತನದ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರರಿಗೆ ಪ್ರಭಲ ನಾಯಕ ದೊರಕಿದಂತಾಯಿತು.

ಗಾಂಧೀಜಿ ಅವರನ್ನು ಮೈಸೂರಿನ ಬ್ರಾಹ್ಮಣರು ಹಾಗೂ ಬ್ರಾಹ್ಮಣೇತರರು ಮೈಸೂರಿಗೆ ಬರುವಂತೆ ಅಕ್ಷರಬಲ್ಲವರಾಗಿದ್ದರಿಂದ ಹಿಂದಿ-ಇಂಗ್ಲಿಷ್ನಲ್ಲಿ ತಮ್ಮ ದಲಿತಪರ ಕೆಲಸಗಳನ್ನು ವರ್ಣನಾತ್ಮಕವಾಗಿ ವಿವರಿಸಿ ಮೈಸೂರಿನಲ್ಲಿ ಅಸ್ಪೃಶ್ಯತೆಯೇ ಇಲ್ಲ ಎಂಬಂತೆ ಪತ್ರ ಬರೆದರು. ತಗಡೂರು ರಾಮಚಂದ್ರರಾವ್, ಎಂ.ಎನ್. ಜೋಯಿಸ್ರಂಥವರು ಸಬರಮತಿ ಆಶ್ರಮಕ್ಕೆ ಹೋಗಿ ಮೈಸೂರಿಗೆ ಬರುವಂತೆ ಖುದ್ದಾಗಿ ಆಹ್ವಾನಿಸಿದರು. ಗಾಂಧೀಜಿ ಅವರು ಮೈಸೂರಿಗೆ ಬಂದರು, ನಂದಿಬೆಟ್ಟದಲ್ಲಿ ವಿಶ್ರಾಂತಿಯನ್ನು ಪಡೆದರು. ನಂತರ ಗಾಂಧೀ ಅವರಿಗೆ ತಾವು ಮೈಸೂರಿಗೆ ಬಂದ ಕಾರ್ಯ ನೆನಪಾಗಿ ಹರಿಜನೋದ್ಧಾರಕ್ಕಾಗಿ ಪಾದಯಾತ್ರೆಗೆ ಕರೆಕೊಟ್ಟರು. ಅನೇಕ ಶ್ರೀಮಂತರು ಮೈಸೂರು, ತುಮಕೂರು, ಬೆಂಗಳೂರು, ಹಾಸನ, ಬಳ್ಳಾರಿ ಮುಂತಾದ ಪ್ರದೇಶಗಳಲ್ಲಿ ಅವರ ಜೋಳಿಗೆಗೆ ಅನೇಕರು ಹಣ ಹಾಗೂ ಆಸ್ತಿಗಳನ್ನು ದಾನ ನೀಡಿದರು. ಮೈಸೂರಿನ ದಿವಾನರಾಗಿದ್ದ ಸರ್.ಮಿರ್ಜಾಇಸ್ಮಾಯಿಲ್ ಅವರು ನಂದಿಬೆಟ್ಟದಲ್ಲಿ ಗಾಂಧಿ ಪರಿವಾರದವರನ್ನು ಗೌರವದಿಂದ ಆಹ್ವಾನಿಸಿ ವಿಶ್ರಾಂತಿ ಕೊಡಿಸಿದರು. ಗಾಂಧೀಜಿ ಅವರು ನಡೆದ ರಸ್ತೆ, ವಾಸ್ತವ್ಯ ಮಾಡಿದ್ದ ಸ್ಥಳಗಳನ್ನು ಚಾರಿತ್ರಿಕ ಸ್ಥಳಗನ್ನಾಗಿಸಿದರು. ಅಂದಿನ ಪ್ರಮುಖ ಸುದ್ದಿ ಮಾಧ್ಯಮಗಳಾಗಿದ್ದ ಮುದ್ರಿತ ಮಾಧ್ಯಮವಂತೂ ಸಂಪುರ್ಣವಾಗಿ ಶತಶತಮಾನದಿಂದ ಗುತ್ತಿಗೆ ಪಡೆದು ಶಿಕ್ಷಣ ಪಡೆದಿದ್ದಂತಹ ಬ್ರಾಹ್ಮಣರ ಸ್ವತ್ತಾಗಿಯೇ ಇತ್ತು. ಇವುಗಳಲ್ಲಿ ಗಾಂಧೀಜಿ ಅವರ ಕಾರ್ಯ ಸಾಧನೆಗಳನ್ನು ಒಂದಕ್ಕೆ ಹತ್ತು ಸೇರಿಸಿ ಪ್ರಚಾರ ಮಾಡಿದರು. ತಾವು ಶಿಕ್ಷಣ ನೀಡುತ್ತಿದ್ದಂತಹ ಪ್ರಥಮ ತಲೆಮಾರಿನ ದಲಿತ ವಿದ್ಯಾರ್ಥಿಗಳಿಗೆ ಪತ್ರಿಕೆಯಲ್ಲಿ ಬರೆದಿರುವುದನ್ನು ಓದಿ ನಾಳೆ ಶಾಲೆಯಲ್ಲಿ ಒಪ್ಪಿಸಬೇಕೆಂಬ ನಿಬಂಧನೆಗಳನ್ನು ಹಾಕಿದರು. ಗಾಂಧೀಜಿ ಅವರು ಶತಶತಮಾನಗಳಿಂದ ಶೋಷಣೆ ಹಾಗೂ ಅನ್ಯಾಯಕ್ಕೊಳಗಾದ ನಿಮ್ಮನ್ನು ಉನ್ನತೀಕರಣಕ್ಕೆ ಕೊಂಡ್ಯೊಯಲು ಉದಯಿಸಿದ ದೇವ ಮಾನವ ಎಂದು ಹೇಳಿ ಈ ಮುಗ್ದ ದಲಿತರಿಗೆ ನಂಬಿಸಿದರು.

ಆದರೆ ಇದೇ ಸಂದರ್ಭದಲ್ಲಿ ದೇಶದಾದ್ಯಂತ ದಲಿತರ ದನಿಯಾಗಿ ಈ ಭರತ ಭೂಮಿಯ ಬುದ್ದ, ಬಸವರ ನಿಜ ವಾರಸುದಾರನಾಗಿ, ಶತಶತಮಾನದಿಂದ ನೊಂದ ದಲಿತರ ಆಶಯ ಹಾಗೂ ಹೃದಯ ತುಂಬಿದ ಮೋಕಾ ಆರ್ಶೀವಾದದಿಂದ ದೇಶ ವಿದೇಶದಲ್ಲಿ ಉನ್ಯತ ಶಿಕ್ಷಣ ಪಡೆದು ಪ್ರಜಾಪ್ರಭುತ್ವದ ತತ್ವದ ಮೇಲೆ ತನ್ನ ಜನಾಂಗದ ಸಾಮಾಜಿಕ ಹಕ್ಕಿಗಾಗಿ ಹಗಲಿರುಳು ಹೋರಾಡುತ್ತಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೇಕೆ ಇದೇ ಬ್ರಾಹ್ಮಣರು ಒಮ್ಮೆಯಾದರೂ ಮೈಸೂರು ಸಂಸ್ಥಾನಕ್ಕೆ ಆಹ್ವಾನಿಸಲಿಲ್ಲ? ಎಂಬ ಪ್ರಶ್ನೆ ಪ್ರಭಲವಾಗಿ ಕಾಡದೆ ಇರದು. ಇದಕ್ಕೆ ಉತ್ತರವೂ ಅಷ್ಟೆ ಸುಲಭವಾದದ್ದೇ ಆಗಿದೆ. ಅದೆಂದರೆ ಈ ಭಾರತೀಯ ಸಾಮಾಜಿಕ ಸಂರಚನೆಯ ಮೂಲಭೂತ ಪ್ರಶ್ನೆಗೆ ಇವರು ಅಸ್ಪೃಶ್ಯ ಜಾತಿಗೆ ಸೇರಿದವರಾಗಿದ್ದು ಎಂಬುದು ಉತ್ತರವಾಗಿ ಉದಯಿಸುತ್ತದೆ. ಈ ಪ್ರಶ್ನೆ ದಲಿತರಲ್ಲಿ ಕಾಡಲೇಬೇಕು.

ಮಧ್ಯಕಾಲೀನ ಕರ್ನಾಟಕ ಚರಿತ್ರೆಯಲ್ಲದೆ ಭಾರತದ ಎಲ್ಲಾ ಯುಗದ ಚರಿತ್ರೆ ಯಲ್ಲಿಯೂ ದಲಿತರು ತೋತುಗಳಾಗಿ, ಅಸ್ಪೃಶ್ಯತೆಯ ಭಾಗವಾಗಿ, ನೀಚಜಾತಿ ಕುಲದವರಾಗಿ, ಮಾರಾಟದ ವ್ಯಕ್ತಿಗಳಾಗಿಯೇ ಬಿಂಬಿತವಾದಂತಹವರು. ಆದರೆ ಚಿತ್ರದುರ್ಗದ ಪಾಳೇಗಾರ ಮದಕರಿ ನಾಯಕನನ್ನು ಮೈಸೂರಿನ ಸರ್ವಾಧಿಕಾರಿ ಅರಸ ಹೈದರ್ಆಲಿ ಸೈನ್ಯ ಮುತ್ತಿಗೆ ಹಾಕಿದಾಗ ಹೈದರನ ಮುಸ್ಲಿಂ ಸೈನ್ಯವನ್ನು ಒನಕೆಯಿಂದ ಒಬ್ಬಳೆ ಹೊಡೆದು ಸಾಯಿಸಿದಳೆಂದು ಮುಟ್ಟಿಸಿಕೊಳ್ಳಲು ಯೋಗ್ಯವಲ್ಲವೆಂದುಕೊಂಡಿದ್ದಂತಹ ಚಲವಾದಿ ಸಮುದಾಯಕ್ಕೆ ಸೇರಿದ(ಹೊಲೆಯ ಜಾತಿ) ಒಬ್ಬ ಮಹಿಳೆಯನ್ನು ದೇಶದ ವೀರ ಮಹಿಳೆ ಎಂಬಂತೆ ಅಕ್ಷರ ಬಲ್ಲವರು ಬರೆದು ನಂಬಿಸಿದ್ದು ಒಂದಾದರೆ, ಪುಟ್ಟಣ್ಣ ಕಣಗಲ್ರಂತಹ ಬ್ರಾಹ್ಮಣ ಚಿತ್ರ ನಿರ್ದೇಶಕರು ವರ್ಣರಂಜಿತವಾಗಿ ಒನಕೆ ಒಬವ್ವನನ್ನು ಚಿತ್ರಿಸಿ, ಮುಸ್ಲಿಂ ಸೈನಿಕರಿಗೆ ಹಸಿರು ಬಟ್ಟೆ ಹಾಕಿಸಿ, ಮದಕರಿ ನಾಯಕನ ಸೈನಿಕರಿಗೆ ಕೇಸರಿ ಬಟ್ಟೆಹಾಕಿಸಿ ತಮ್ಮ ಧರ್ಮನಿಷ್ಠೆಯನ್ನು ಪ್ರದರ್ಶಿಸಿಯೇ ಬಿಟ್ಟರು. ಇದನ್ನೆಲ್ಲ ನೋಡಿದ ಒನಕೆ ಒಬವ್ವಳ ವಂಶಸ್ಥರು ಈ ದೇಶದ ಮಹಾನ್ ತ್ಯಾಗಿಗಳಂತೆಯೇ, ಧೈರ್ಯಶಾಲಿಗಳಂತೆಯೇ ಹೇಳಿ ಅವರನ್ನು ಸನಾತನೀಯರು ತಮ್ಮ ಅಡಿ ಆಳು ಗಳನ್ನಾಗಿ ಮಾಡಿಕೊಂಡರು. ಇಂದಿನ ಸಂದರ್ಭದಲ್ಲಿ ದಲಿತ ಚರಿತ್ರೆ ಬರೆಯುವಾಗ ಇಂಥ ನೂರಾರು ಪ್ರಶ್ನೆಗಳು ಮೂಡದೆ ಇರದು.

ಮುಂದುವರೆದು ಹೇಳುವುದಾದರೆ ಪ್ರಪಂಚದ ಭೂಪಟದಲ್ಲಿ ಮೈಸೂರು ಒಂದು ಚಾರಿತ್ರಿಕ ಹಾಗೂ ಐತಿಹಾಸಿಕ ಸ್ಥಳವಾಗಿ ಗುರುತಿಸಿಕೊಂಡಿದ್ದರೆ, ಅದು ಇಬ್ಬರು ಮಹಾನ್ ಚಾರಿತ್ರಿಕ ಪುರುಷರಿಂದ ಮಾತ್ರ ಅದರಲ್ಲಿ ಒಂದು ಮೈಸೂರಿನ ಹುಲಿ ಎಂದು ಬಿರುದು ಪಡೆದು ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಭಾರತ ಉಪ ಖಂಡವನ್ನೇ ತಮ್ಮ ಕೈಗೊಂಬೆಯಂತಾಡಿಸಿದ ಬ್ರಿಟೀಷರ ವಿರುದ್ಧ ಹೋರಾಡಿ ರಣರಂಗದಲ್ಲಿ ವೀರ ಮರಣ ಹೊಂದಿದ ಟಿಪ್ಪುಸುಲ್ತಾನ್ ಹಾಗೂ ಸಾಮಾಜಿಕ, ಆರ್ಥಿಕ, ಕೈಗಾರಿಕೆ, ಶೈಕ್ಷಣಿಕ, ವಾಣಿಜ್ಯ, ಕೃಷಿ, ಕನ್ನಡನಾಡು-ನುಡಿ ಮುಂತಾದ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಮಾಡಿ ಮೈಸೂರು ಸಂಸ್ಥಾನದ ‘ಸಾಂಸ್ಕೃತಿಕ ಅಭಿವೃದ್ಧಿಯ ಹರಿಕಾರ ಎನ್ನಿಸಿಕೊಂಡ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತೊಬ್ಬರಾಗಿರುತ್ತಾರೆ ಎಂಬುದು ಕಣ್ಣಿಗೆ ಕಾಣುವ ಸತ್ಯ. ಆದರೆ ಈ ಮಹಾನ್ ವ್ಯಕ್ತಿಗಳಾದ ಟಿಪ್ಪುಸುಲ್ತಾನ್ ಮುಸ್ಲಿಂ ಜನಾಂಗಕ್ಕೆ ಸೇರಿದವನೆಂಬ ಕಾರಣಕ್ಕೆ ಇವನ ಬದುಕು-ಸಾಧನೆ-ಪ್ರಭುತ್ವ ಕುರಿತು ಕನ್ನಡದಲ್ಲಿ ಬರೆದದ್ದು ನೂರು ಪುಟಗಳಾದರೆ, ಹೈದರ್ ಆಲಿ, ಟಿಪ್ಪುಸುಲ್ತಾನ್ ಕಾಲದಲ್ಲಿಯೂ ದಿವಾನರಾಗಿ ಹಾಗೂ 1799ರಲ್ಲಿ ಟಿಪ್ಪು ವೀರಮರಣ ಹೊಂದಿದ ನಂತರವೂ ಮೈಸೂರು ಅರಸರ ಆಳ್ವಿಕೆಗೆ ಜಾಣ್ಮೆಯಿಂದಲೇ ಸರಿದೂಗಿಸಿಕೊಂಡು ದಿವಾನರಾದ ಪುರ್ಣಯ್ಯನೆಂಬ ಬ್ರಾಹ್ಮಣನ ಕುರಿತು ಸಾವಿರಾರು ಪುಟಗಳ ಚರಿತ್ರೆ ರಚನೆಯಾಯಿತು. ಇವರ ಹೆಸರಿನ ಅನೇಕ ಸಂಘಸಂಸ್ಥೆಗಳು, ರಸ್ತೆಗಳು, ಭವನಗಳು, ಅಧ್ಯಯನ ಪೀಠಗಳು ಉದಯಿಸಿದವು. ಆದರೆ ಟಿಪ್ಪು ಹೆಸರಿನ ಕುರಿತಾದ ಸಂಘ-ಸಂಸ್ಥೆ, ರಸ್ತೆ, ನಗರಗಳಲ್ಲಿ ಬಡಾವಣೆಗಳನ್ನು ಹಿಂದೂಗಳು ಸ್ಥಾಪಿಸಲೇ ಇಲ್ಲ.

ಅದೇ ರೀತಿಯಲ್ಲಿಯೇ ಹೇಳುವುದಾದರೆ 1894ರಿಂದ 1940ರ ವರೆಗೆ ಒಟ್ಟು 46 ವರ್ಷಗಳ ಕಾಲ ಮೈಸೂರು ಸಂಸ್ಥಾನದ ರಾಜರಾಗಿ ತಮ್ಮ ಪ್ರಗತಿಪರ ಚಿಂತನೆಯಿಂದಾಗಿ ಜನಪರ-ಜನಮುಖಿ ಕೆಲಸಕಾರ್ಯಗಳನ್ನು ಕೈಗೆತ್ತಿಕೊಂಡು ಅವರು ಬಾಲ್ಯದಿಂದಲೇ ಪಡೆದಿದ್ದ ಶಿಕ್ಷಣ ಹಾಗೂ ಜನಪರ ಚಿಂತಿಸುವ ಮನೋಭಾವದಿಂದ, ಹೃದಯದಿಂದ ಮಮತೆಯ ದ್ಯೋತಕವಾಗಿ ಕೆಲಸ ಮಾಡಿ ಜನರ ಮನದಲ್ಲಿ ಅಜಾರಾಮರಾಗಿರುವ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಕುರಿತು ಅವರ ಆಳ್ವಿಕೆಯ ಕಾಲದಲ್ಲಿ ಆಸ್ಥಾನದ ಕೆಲ ಒಗಳು ಬಟ್ಟರು ಬರೆದ ಸಾಂಪ್ರದಾಯಿಕ ನೂರಾರು ಪುಟದ ಕನ್ನಡ ಬರಹಗಳನ್ನು ಬಿಟ್ಟರೆ ಅವರ ಅಧೀನದಲ್ಲಿ 1912ರಿಂದ 1918ರ ವರೆಗೆ ಕೇವಲ ಆರು ವರ್ಷಗಳು ದಿವಾನರಾಗಿ ಆಳ್ವಿಕೆ ಮಾಡಿದ ಸರ್ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಬಂದ ಕೃತಿಗಳು ಸಾವಿರಾರು ಪುಟಗಳಿಗೂ ಹೆಚ್ಚು. ಇದಕ್ಕೆ ಸಾವಿರಾರು ವರ್ಷಗಳಿಂದ ಶಿಕ್ಷಣವನ್ನು ನಮ್ಮ ಸ್ವತೆಂದು ಸ್ವಗೊಳಿಸಿಕೊಂಡು ಅಗ್ರಹಾರ, ಘಟಿಕಾಲಯ ಹಾಗೂ ಮಠಗಳಲ್ಲಿ ಪೋಷಿಸಿಕೊಂಡ ಬ್ರಾಹ್ಮಣ್ಯ ವೊಂದಿರುವ ಬ್ರಾಹ್ಮಣರ ಧಾರ್ಮಿಕ ಅಂಧಪತನವೇ ಕಾರಣವೆನ್ನಬಹುದು.

ತಮಗೆ ಅನುಕೂಲವಾಗುವಾಗ ದಲಿತರಿಗೆ ಶಿಕ್ಷಣ ನೀಡಿ ಅವರಿಗೆ ಮಹಾತ್ಮರಾಗು ವುದು, ಅಕ್ಷರಿಂದ ವಂಚಿತರಾಗಿ ಅಕ್ಷರಹೀನರನ್ನಾಗಿಸಿ ಮುಸ್ಲಿಂ ಧರ್ಮದ ವಿರುದ್ಧ ಮುಗ್ಧ ದಲಿತರನ್ನು ಎತ್ತಿಕಟ್ಟಲು ದಲಿತ ಮಹಿಳೆಯನ್ನು ವೀರಮಹಿಳೆಯ ರೂಪದಲ್ಲಿ ಚಿತ್ರಿಸಿದ್ದು, ಟಿಪ್ಪು, ನಾಲ್ವಡಿ ಅವರನ್ನು ಚರಿತ್ರೆಯಿಂದ ಮೂಲೆಗುಂಪಾಗಿಸಿದ್ದು, ಶತಶತಮಾನಗಳಿಂದಲೂ ಅಕ್ಷರಬಲ್ಲವರು ಚರಿತ್ರೆಗೆ ಮಾಡಿದ ದ್ರೋಹವೇ ಸರಿ. ಮೌರ್ಯ ಸಾಮ್ರಾಜ್ಯದ ಉದಯಕ್ಕೆ ಚಾಣಕ್ಯನ ಆಶೀರ್ವಾದವೆಂದು, ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ವಿದ್ಯಾರಣ್ಯರ ಆಶೀರ್ವಾದವೆಂದು, ಹೊಯ್ಸಳರ ಉದಯಕ್ಕೆ ಸುದತ್ತಮುನಿಗಳ ಆಶೀರ್ವಾದವೆಂದೂ, ಬ್ರಾಹ್ಮಣ ಮುನಿಯ ಚಲುಕ(ಕೈಚೆಂಬು) ದಿಂದ ಬಿದ್ದ ನೀರಿನಿಂದ ಹುಟ್ಟಿದವನೆ ಚಾಲುಕ್ಯನೆಂದೂ ಚರಿತ್ರೆ ಬರೆದು ವರ್ಣನಾತ್ಮಕ ವಾಗಿ ಪುರಾಣ ಮಿಶ್ರಿತ ಚರಿತ್ರೆಯನ್ನು ಬಿಂಬಿಸಿ ಚರಿತ್ರೆಯನ್ನು ಸಾಯಿಸಿದರು. ತಮಗೆ ಹೊನ್ನು, ಮಣ್ಣು ಹಾಗೂ ಅಧಿಕಾರ, ಅರಮನೆ, ಗುರುಮನೆ, ದೇವಸ್ಥಾನಗಳನ್ನು ದಾನ ನೀಡಿದ ಅರಸರನ್ನು ಹೊಗಳಿ, ಅವರಿಗೆ ಅರ್ಥವಾಗದ ಬಿರುದು-ಬಾವಲಿಗಳನ್ನು ನೀಡಿ, ಶಾಸನ ಬರೆಸಿ ವರ್ಣನಾತ್ಮಕ ಶೈಲಿಯ ಚರಿತ್ರೆ ಬರೆದು ಕೊನೆಗೆ ತಮ್ಮ ಜಾತಕ ನೋಡುವ ಸ್ವಾರ್ಥ ಕಲೆಯಿಂದ ಅರಸಮನೆತನಗಳವರ ವಂಶವೃಕ್ಷ ರಚಿಸಿ ಅವರಿಂದ ರಚಿತವಾದ ರಾಜ-ರಾಣಿ ಕೇಂದ್ರಿತ ವೈಭವದ ಚರಿತ್ರೆ ಇಂದು ಕನ್ನಡನಾಡಿನ ನಿಜ ಚರಿತ್ರೆಯಾಗುವಂತೆ ರಚಿಸಿ ಮುಗ್ದ ಜನರನ್ನು ಮೋಸ ಗೊಳಿಸಿದರು. ಇವರು ಕಾಲಾನುಕ್ರಮದಂತೆ ರಚಿಸಿರುವ, ಅವರೆ ಬರೆದ ಕೃತಿಗಳು ಹಾಗೂ ಅವರೇ ಬರೆಸಿದ ಶಾಸನಗಳ ಆಧಾರದ ಮೇಲಿನ ಚರಿತ್ರೆಯಲ್ಲಿ ರಾಜರ ಯುದ್ಧ, ದಂಡೆಯಾತ್ರೆ, ತೀರ್ಥಯಾತ್ರೆ, ರಾಣಿಯರ ವೈಭವ, ಅರಮನೆ, ದೇವಾಲಯಗಳ ನಿರ್ಮಾಣ, ಧನ-ದತ್ತಿಗಳೇ ಇವೆ ಹೊರತು, ಬಹುಸಂಖ್ಯೆಯ ಜನಸಾಮಾನ್ಯರ ಚರಿತ್ರೆ ಸಂಪುರ್ಣವಾಗಿ ಗೌಣವಾಯಿತು. ಏಕೆಂದರೆ ರಾಜಕೇಂದ್ರಿತ ವೈಭವದ ಚರಿತ್ರೆ ರಚಿಸುವಾಗ ಸಾಮಾನ್ಯ ಜನರ ಬದುಕು, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ, ಅಸ್ಪೃಶ್ಯತೆ ಹಾಗೂ ಶೋಷಣೆಯ ಕರಾಳ ಮುಖಗಳನ್ನು ಬರೆಯದಿರುವುದೂ ಅವರ ಅಜನ್ಮಸಿದ್ದ ಹಕ್ಕಾಗಿಸಿಕೊಂಡದ್ದು ಕೂಡ ಸತ್ಯ. ಇದನ್ನು ಪ್ರಶ್ನೆ ಮಾಡಿ ಜನಪರವಾದ ಚರಿತ್ರೆಯನ್ನು ಪ್ರಶ್ನೆಗಳ ದಾಖಲೆಗಳನ್ನು ಸಂಗ್ರಹಿಸಿ ವಸ್ತುನಿಷ್ಠವಾದ ದಾಖಲೆಗಳ ಮೂಲಕ ರಚಿಸಲು ಮುಂದಾದ ಪ್ರಥಮ ತಲೆಮಾರಿನ ದಲಿತರು ಬರೆದ ಚರಿತ್ರೆ ಮೂಲಭೂತ ವಾದಿಗಳಿಗೆ ಪುರ್ವಗ್ರಹ ಪೀಡಿತ ಚರಿತ್ರೆಯಾಗಿ ಕಾಣುತ್ತದೆ. ಇವರು ರಚಿಸಿರುವ ಚರಿತ್ರೆ ಯನ್ನೋ ಯಾರೋ ಪ್ರಶ್ನೆ ಮಾಡಬಾರದು. ಪ್ರಶ್ನೆ ಮಾಡುವುದು ರಾಷ್ಟ್ರದ್ರೋಹಿ ಕೆಲಸವಾಗುತ್ತದೆ. ಆದರೆ ಇವರಿಂದ ದಲಿತರು ಅನುಭವಿಸಿದ ಕಷ್ಟ-ನಷ್ಟಗಳು, ಇವರ ದೃಷ್ಟಿಯಲ್ಲಿ ರಾಷ್ಟ್ರಸೇವೆ ಆಗುತ್ತದೆ.

ಶತಶತಮಾನಗಳಿಂದ ಅಯ್ಯೋನೊರ(ಬ್ರಾಹ್ಮಣರ), ಪಟೇಲರ, ಶ್ಯಾನಭೋಗರ, ಊರಗೌಡರ ಮನೆಯ ತೋತುಗಳಾಗಿ, ಜೀತದಾಳುಗಳಾಗಿ, ಬಿಟ್ಟಿ ಚಾಕರಿ ಮಾಡಿ ಅವರ ಮನ- ಮನೆಗಳಲ್ಲಿ ವೈಭವದ ಶ್ರೀಮಂತಿಕೆಯನ್ನು ತುಂಬಿದವರು ದಲಿತರೆ ಹೊರತು ಲಿಂಗಾಯಿತ, ಒಕ್ಕಲಿಗ ಅಥವಾ ಇಂದು ಸ್ಪೃಶ್ಯರೆಂದು ಹೇಳಿಕೊಳ್ಳುವ ಯಾವುದೇ ವರ್ಗದವರಲ್ಲ.

ನಿಜಾರ್ಥದಲ್ಲಿ ದಲಿತರು ದುಡಿದು ಹಸಿವಿನಿಂದ ಸತ್ತರು, ಮೇಲಿನವರು(ಸವರ್ಣೀಯರು ಮತ್ತು ಬ್ರಾಹ್ಮಣರು)ಹೊಟ್ಟೆತುಂಬ ಉಂಡು ದರ್ಪದಿಂದ ಮೆರೆದು ಸತ್ತರು.

ಇದರರ್ಥ ಈ ರಾಷ್ಟ್ರವನ್ನು ಕಟ್ಟಿ ಈ ಹಂತಕ್ಕೆ ತಂದಿರುವವರು ದುಡಿದ ಶ್ರಮಜೀವಿಗಳೇ ಹೊರತು ಶಾಸ್ತ್ರ-ಪುರಾಣಗಳನ್ನು ಸೃಷ್ಟಿಮಾಡಿ ಮುಗ್ದ ಜನತೆಯನ್ನು ಇದರ ಮೂಲಕ ವಂಚಿಸಿ ಅವರ ಹೆಣದ ಮೇಲೆ ಮಹಲುಗಳನ್ನು ಕಟ್ಟಿದವರಲ್ಲ ಎಂಬುವುದೂ ಸತ್ಯವಾದದ್ದೆ. ಇದಕ್ಕೆ ಜ್ವಾಲಂತ ಉದಾಹರಣೆ ಎಂದರೆ ದಲಿತರು ಶತಶತಮಾನಗಳಿಂದ ಜೀತಗಾರರಾಗಿ ಸವರ್ಣೀಯರ ದೌರ್ಜನ್ಯಕ್ಕೆ ತಲೆಬಾಗಿ ದುಡಿಯುತ್ತಿದ್ದಾಗ ಅವರ ಮನ-ಮನೆ ಸಂಮೃದ್ಧಿಯಾಗಿತ್ತು. ಅದೇ ನಂತರದ ದಿನಗಳಲ್ಲಿ ಸಂವಿದಾನಾತ್ಮಕ ಸೌಲಭ್ಯಗಳು ದಲಿತರ ಬದುಕಿಗೆ ಆಶ್ರಯದಾತಕವಾಗಿ ಜಾರಿಗೆ ಬರಲು ಪ್ರಾರಂಭಿಸಿ ಸ್ವ-ಉದ್ಯೋಗ, ಸ್ವಾವಲಂಬಿಗಳಾಗುವತ್ತ ಮುಂದಾಗಲು ತೊಡಗಿದ್ದ ಸವರ್ಣೀಯರಿಗೆ ಕೆಲಸಗಾರರು ಸಿಗದೇ ಮನೆಗೆ ಸಂಗ್ರಹವಾಗುತ್ತಿದ್ದ ದವಸ-ಧಾನ್ಯಗಳ ಪ್ರಮಾಣ ಕಡೆಮೆಯಾಯಿತು.

ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ದಲಿತರ ದನಿಯಾಗಿ ಪ್ರಪಂಚಕ್ಕೆ ಮಾದರಿಯಾದ ಬೃಹತ್ ಲಿಖಿತ ಸಂವಿಧಾನ ರಚಿಸಿ ಅದರಲ್ಲಿ ಜನಪರವಾದ ಸಮಸಂಸ್ಕೃತಿಗೆ ನೀಡಿದ ಮಾನ್ಯತೆಯಿಂದ ಅಥವಾ ಮೀಸಲಾತಿ ಎಂಬ ಪ್ರಭಲ ಅಸ್ತ್ರದಿಂದ ಪ್ರಯೋಜನ ಪಡೆದು ದಲಿತ ಜೀತದಾಳುಗಳ ಮಕ್ಕಳು ಶಿಕ್ಷಣ ಪಡೆದು ಸರ್ಕಾರಿ ಹಾಗೂ ಸ್ವ ಉದ್ಯೋಗಗಳಲ್ಲಿ ತೊಡಗಿದಾಗ ಜೀತದಾಳುಗಳಿರಲಿ ಕೂಲಿಗಾರರೂ ಇವರಿಗೆ ದೊರಕದಾದರು. ಶತಶತಮಾನಗಳಿಂದ ಮೈ ಬಗ್ಗಿಸಿ ದುಡಿಯದಿದ್ದ ಈ ಸೊಂಬೇರಿ ಜಮೀನ್ದಾರರೆಂದು ತಲಾತಲಾಂತರದಿಂದಲೂ ಕರೆಸಿಕೊಂಡಿದ್ದಂತಹ ಜನ ಮನೆ ಆಸ್ತಿಯನ್ನು ಮಾರಿ ಊರು ಬಿಟ್ಟು ಪಟ್ಟಣ ಸೇರಿದರು. ತಾವು ತಮ್ಮ ಬದುಕಿಗಾಗಿ ಪಾರಂಪರಿಕವಾಗಿ ಪಡೆದಿರುವ ಶಾಸ್ತ್ರ-ಪುರಾಣ-ಜಾತಕಗಳ ಸೃಷ್ಟಿಸುವ ಕಲೆಯಿಂದ ಮುಗ್ದ ಜನರನ್ನು ಬಲಿಪಶುಗಳನ್ನಾಗಿಸಿ ಕೊಂಡು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಕಾಯಕದಲ್ಲಿ ತೊಡಗಿದರು. ಈ ಹಂತದಲ್ಲಿಯೇ ಸಾಮಾನ್ಯ ಜನತೆಯ ನಾಡುನುಡಿಯಾಗಿರುವ ‘ಪಾಪಿ ಸಮುದ್ರಕ್ಕೆ ಬಿದ್ದರೂ ಮೊಳಕಾಲುದ್ದ ನೀರು’ ಎಂಬ ಮಾತು ಹುಟ್ಟಿರುವುದು. ಇದು ಇಂದು ದೃಶ್ಯ ಮಾಧ್ಯಮ ಹಾಗೂ ಮುದ್ರಿತ ಮಾಧ್ಯಮಗಳಲ್ಲಿ ಇವರ ಮೋಡಿ ಮಾತುಗಳಿಗೆ ಬಲಿಯಾಗುತ್ತಿರುವ ದಲಿತರಿಗೆ ಅನ್ವಯವಾಗುತ್ತದೆ. ಆಧುನಿಕ ಮೈಸೂರು ಚರಿತ್ರೆಯನ್ನು ದಲಿತರು ರಚಿಸುವ ಸಂದರ್ಭದಲ್ಲಿ ಮೇಲಿನ ಅಂಶಗಳು ಕಾಡಲೇ ಬೇಕೇಂಬುವುದು ನಿಜ ಚರಿತ್ರೆಯ ಅಭಿಪ್ರಾಯ. ಈ ಹಂತದಲ್ಲಿ ದಲಿತ ಚರಿತ್ರೆ ರಚನೆ ಆಗಬೇಕಾಗಿದೆ ಎಂಬುವುದು ಪ್ರಮುಖ ಆಶಯವಾಗಿದೆ. ಇಷ್ಟೆಲ್ಲಾ ಹೇಳಿ ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ಅಂತು-ಇಂತು ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತ್ತು ಎನ್ನುವ ನಾಡ್ನುಡಿಯಂತೆ ಬ್ರಾಹ್ಮಣರ ಸ್ವಾರ್ಥದಿಂದಲೂ ಏನೊ ದಲಿತರಿಗೆ ಮೈಸೂರು ಸಂಸ್ಥಾನದಲ್ಲಿ ಶಿಕ್ಷಣ ಭಾಗ್ಯ ದೇಶಿಯ ಅರಸರಿಂದ ದೊರಕಿತು. ಅವರೂ ವಿದ್ಯಾವಂತರಾಗಿ ಕರ್ನಾಟಕದ ಇತರೆ ಭಾಗಗಳಿಗಿಂತ ಐವತ್ತು ವರ್ಷಗಳಷ್ಟು ಶೈಕ್ಷಣಿಕವಾಗಿ ಹಿರಿತನದಲ್ಲಿರುವಂತೆ ಮಾಡಿತು.

~~~

ಡಾ.ಎನ್. ಚಿನ್ನಸ್ವಾಮಿ ಸೋಸಲೆ
ಪ್ರಾಧ್ಯಾಪಕರು, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಹುಟ್ಟು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮ(1968).

ಶಿಕ್ಷಣ: ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ, ಪ್ರೌಢ ಶಿಕ್ಷಣದಿಂದ ಮುಂದಿನ ಓದು ಮೈಸೂರಿನಲ್ಲಿ. ಆಧುನಿಕ ಮೈಸೂರು ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ(1881-1940) ಎಂಬ ವಿಷಯದಲ್ಲಿ ಪಿಎಚ್.ಡಿ.(2001).

ವೃತ್ತಿ: ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕ.

ಅಧ್ಯಯನ ಕ್ಷೇತ್ರ: ಆಧುನಿಕ ಮೈಸೂರು ಒಡೆಯರ್ ಅವರ ಜನಮುಖಿ ಆಧಾರಿತ ಸಾಂಸ್ಕೃತಿಕ ಚರಿತ್ರೆ ಅಧ್ಯಯನ ಹಾಗೂ ಕರ್ನಾಟಕದ ದಲಿತ ಚರಿತ್ರೆ ಕುರಿತು ವಿಸ್ತೃತ ಅಧ್ಯಯನದ ಜೊತೆಗೆ ಅಂಬೇಡ್ಕರ್ ಚಿಂತನೆಗಳ ಪ್ರಸ್ತುತ ಸಂದರ್ಭದೊಂದಿಗೆ ಮುಖಾ-ಮುಖಿಗೊಳಿಸುವ ಕ್ಷೇತ್ರ ಅಧ್ಯಯನದ ಆಸಕ್ತಿಯಾಗಿರುತ್ತದೆ.

ಪ್ರಕಟಿತ ಕೃತಿಗಳು(ಸ್ವತಂತ್ರ ಕೃತಿಗಳು): ಏಕೀಕರಣೋತ್ತರ ಕರ್ನಾಟಕದಲ್ಲಿ ಗಡಿ ಚಳವಳಿ(1999), ನಮ್ಮ ಗ್ರಾಮಗಳು ಅಂದು-ಇಂದು(2001), ಸಾಮ್ರಾಜ್ಯ ಮತ್ತು ಸಂಸ್ಥಾನ(2003), ನಾಲ್ವಡಿ ಕೃಷ್ಣನ ಮೈಸೂರು(2004), ಭಾರತೀಯ ಸಮಾಜ ಮತ್ತು ದಲಿತರು(2006), ದಲಿತರು ಮತ್ತು ಮತಾಂತರ: ಒಂದು ಚಿಂತನೆ(2007), ದಲಿತರ ಮೇಲೆ ದೌರ್ಜನ್ಯ: ಒಂದು ನೋಟ(2007), ಪ್ರಭುತ್ವ ಮತ್ತು ದಲಿತರು(2006), ವಸಾಹತು ಕಾಲಘಟ್ಟದ ಮೈಸೂರು ಸಂಸ್ಥಾನ(2009), ಗಡಿಚಳವಳಿ: ಇತ್ತೀಚಿನ ಆಯಾಮಗಳು(2010), ದಲಿತರ ಬದುಕು-ಮೆಲುಕು(2012), ಕರ್ನಾಟಕ ಚರಿತ್ರೆ ಮತ್ತು ಸಾಹಿತ್ಯ(2012), ಅಂಬೇಡ್ಕರ್ ವಾದ ಮತ್ತು ಪ್ರಸ್ತುತ ದಲಿತರು(2012), ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ(2012), ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಮೈಸೂರು ಸಂಸ್ಥಾನದಲ್ಲಿ ದಲಿತರು(2013), ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು(2013), ದಲಿತ ಚರಿತ್ರೆ ರಚನೆಯಲ್ಲಿ ಕಾಡಲೇಬೇಕಾದ ಪ್ರಶ್ನೆಗಳು(2015), ಒನಕೆ ಓಬವ್ವೆ: ದಲಿತ ಸಂವೇದನೆಯೊಂದಿಗೆ ಮುಖಾ-ಮುಖಿ(2015). 

ಈ ಲೇಖನವನ್ನು ‘ಕರ್ನಾಟಕದ ಸಮಗ್ರ ದಲಿತ ಚರಿತ್ರೆ’ ಯಿಂದ ತೆಗೆದುಕೊಳ್ಳಲಾಗಿದೆ.

 

 

Be the first to comment on "ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು ಸಂಸ್ಥಾನಕ್ಕೆ ಅಂಬೇಡ್ಕರ್ ಅವರ ಪ್ರವೇಶವಾಗದ ಕುರಿತು ಕಾಡುವ ಪ್ರಶ್ನೆಗಳು"

Leave a comment

Your email address will not be published.


*