ಬಡ ಬ್ರಾಹ್ಮಣನೊಬ್ಬನ ಹೊರೆ: ಇತಿಹಾಸದಿಂದ ಕೆಲವು ಟಿಪ್ಪಣಿಗಳು
– ನಿಧಿನ್ ಶೋಭನ, ಕಲಾವಿದ ಮತ್ತು ಬರಹಗಾರ
ಕನ್ನಡಾನುವಾದ: ಶಶಾಂಕ್ ಎಸ್ ಅರ್,
ಇ.ಎ.ಹೆಚ್ ಬ್ಲಂಟ್ ತಮ್ಮ‘ದಿಕಾಸ್ಟ್ ಸಿಸ್ಟಮ್ ಆಫ್ ನಾರ್ಥರನ್ ಇಂಡಿಯಾ’ ಪುಸ್ತಕದಲ್ಲಿ ಒಂದಿಡೀ ಅಧ್ಯಾಯವನ್ನು ಜಾತಿಯು ದಿನ ನಿತ್ಯ ಜೀವನದಲ್ಲಿ ಹೇಗೆ ಅಧಿಕಾರ ನಿರ್ವಹಿಸುತ್ತವೆ ಎಂಬುದನ್ನು ವಿವರಿಸುವುದಕ್ಕೇ ಮೀಸಲಿಡುತ್ತಾರೆ. ೧೯೯೧ ರ ಉತ್ತರ ಪ್ರದೇಶದ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು, ಜಾತಿ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿದ್ದ ರೀತಿ ಮತ್ತು ಅದು ವಿಧಿಸುತ್ತಿದ್ದ ಶಿಕ್ಷೆಗಳನ್ನು ವಿವರಿಸುತ್ತಾರೆ. ಬ್ರಾಹ್ಮಣರಿಗೆ ಭೋಜನ ಹಾಕಿಸುವುದು ಅಥವಾ ಅವರಿಗೆ ತಪ್ಪು ಕಾಣಿಕೆಗಳನ್ನು ಒಪ್ಪಿಸುವುದು ಅಥವಾ ಅವರಿಗೆ ಕರುಗಳನ್ನು ಕಾಣ್ಕೆಯಾಗಿ ನೀಡುವ ಶಿಕ್ಷಾ ಪಧ್ಧತಿಯು ಬ್ರಾಹ್ಮಣೇತರರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿತ್ತು ಎಂಬುದನ್ನು ಬ್ಲಂಟರು ವಿವರಿಸುತ್ತಾರೆ. ಉದಾಹರಣೆಗೆ, ನಿಮ್ಮ ಹೆಂಡತಿಯು ಬೇರೊಬ್ಬರೊಂದಿಗೆ ಸಂಬಂಧ ಇರಿಸಿದ್ದರೆ – ಬ್ರಾಹ್ಮಣನೊಬ್ಬನಿಗೆ ಭೋಜನ ಹಾಕಿಸುವುದು; ನೀವು ಗೋಹತ್ಯೆ ಮಾಡಿದರೆ – ಆಕಳೊಂದನ್ನು ಬ್ರಾಹ್ಮಣನಿಗೆ ನೀಡಬೇಕು; ನೀವು ಭಿಕ್ಷಾಟಣೆಯಲ್ಲಿ ತೊಡಗಿ ನಿಮ್ಮ ಜಾತಿಗೆ ಕಳಂಕವನ್ನು ತಂದರೆ – ಬ್ರಾಹ್ಮಣರಿಗೆ ದಂಡ ಪಾವತಿಸಬೇಕು; ನೀವು ನಾಯಿಯನ್ನೋ ಬೆಕ್ಕನ್ನೋ ಸಾಯಿಸಿದ್ದರೆ – ಗಂಗೆಯಲ್ಲಿ ಜಳಕಮಾಡಿ, ಒಂದಷ್ಟು ಬ್ರಾಹ್ಮಣರಿಗೆ ಊಟ ನೀಡಬೇಕು;ಸಮಾಜದ ಕಟ್ಟಪ್ಪಣೆಗಳನ್ನು ಮುರಿದರೆ ಸ್ವಜಾತಿಯವರನ್ನೂ, ಬ್ರಾಹ್ಮಣರನ್ನೂ ಕರೆಸಿ ಭೋಜನ ಹಾಕಿಸಬೇಕು.೧ ದಿನನಿತ್ಯದ ಜಾತಿಯಾಚರಣೆಗೆ ಮತ್ತು ಹಿಂದೂ ಧರ್ಮಾಚರಣೆಯಲ್ಲಿ, ಅರ್ಚಕ-ಆಡಳಿತಾರೂಢ ಬ್ರಾಹ್ಮಣವರ್ಗವು ಹೊಂದಿದ್ದ ಕೇಂದ್ರೀಯ ಸ್ಥಾನವನ್ನು ಗಮನಿಸಿದಾಗ ಮಾತ್ರವೇ ಇಲ್ಲಿನ ʼಅಪರಾಧʼ ಮತ್ತುʼಶಿಕ್ಷೆʼಯ ನಡುವಿನ ಅಂತರವನ್ನು ನಾವು ಅರ್ಥೈಸಬಹುದಾಗಿದೆ.
ಆಚರಣೆಯ ಬಗೆಯ ಪ್ರಶ್ನೆಗಳು ನಾವು ʼಬ್ರಾಹ್ಮಣʼರನ್ನು ದೈನಂದಿನ ಜೀವನದಿಂದ ಬೇರ್ಪಡಿಸಿದ ಬರಿಯ ಅಮೂರ್ತ ಪರಿಕಲ್ಪನೆಯಾಗಿ ಅರ್ಥೈಸುವುದರಿಂದ ಬಚಾವಾಗಿಸುವುದರಿಂದ ಬಹಳ ಮುಖ್ಯವೆನಿಸುತ್ತದೆ. ʼಬ್ರಾಹ್ಮಣʼರೆಂಬ ಮೂರ್ತವರ್ಗವೊಂದರ ಪೋಷಣೆ ಮತ್ತು ಮರು ಉತ್ಪಾದನೆಯು ʼಬ್ರಾಹ್ಮಣ್ಯʼದ ಸೈದ್ಧಾಂತಿಕ ಮುಂದುವರಿಕೆಗೆ ಮತ್ತದರ ಕ್ರಿಯಾಶೀಲತೆಗೆ ಅತ್ಯಗತ್ಯವಾಗಿದೆ. ಆದಕಾರಣ, ಬ್ರಾಹ್ಮಣ ಮತ್ತು ಬ್ರಾಹ್ಮಣ್ಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅನುರಾಮ್ ದಾಸರು ತಮ್ಮ ಲೇಖನದಲ್ಲಿ ಹೇಗೆ ಬ್ರಾಹ್ಮಣರು ಮತ್ತವರ ʼಸ್ವ-ಜನಾಂಗೀಕರಣʼ ಮತ್ತು ಇತರರನ್ನೂ ಜನಾಂಗೀಕರಿಸುವ ಕಟ್ಟುಕಥೆಗಳ ಮೂಲಕವೇ ಹೇಗೆ ಜಾತಿ ವ್ಯವಸ್ಥೆಯನ್ನು ಮುಂದುವರೆಸುತ್ತದೆ ಎಂಬುದನ್ನು ವಿವರಿಸಿದ್ದಾರೆ. ಒಂದು ಸಮುದಾಯದ ಪರಮಾಧಿಕಾರಿತ್ವವನ್ನು ಮುಂದು ಮಾಡುವ ಎಲ್ಲಾ ಸಿದ್ದಾಂತಗಳಿಗೂ ಈ ರೀತ್ಯ ಜನಾಂಗೀಕರಣವನ್ನು ಮುಂದುಮಾಡುವ ಕಟ್ಟುಕಥೆಗಳು ಅತ್ಯಗತ್ಯ ಎಂಬ ವಾದವನ್ನು ಮಂಡಿಸುತ್ತಾರೆ. ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣ ಸಮುದಾಯವುʼ ಶಿಕ್ಷೆಗಳಿಗೆ ಒಳಗಾಗದʼ ಮತ್ತು ʼಅತೀಯಾದ ರಕ್ಷಣೆಗೆ ಒಳಲ್ಪಟ್ಟʼಸಮುದಾಯವಾಗಿ ಹೊರಹೊಮ್ಮುತ್ತದೆ. ಒಂದು ಉದಾಹರಣೆಯನ್ನು ನೀಡಬೇಕಾದರೆ, ಬ್ರಿಟಿಷ್ ಗವರ್ನರರು ತಮ್ಮ ಸೇನೆಗೆ ೧೭ನೇ ಜನವರಿ ೧೮೦೯ ರಂದು ಬರೆದ ಪತ್ರವನ್ನು ಗಮನಿಸಬಹುದಾಗಿದೆ. ಅದರಲ್ಲಿ ಅವರು ಯುದ್ಧದ ಸಂದರ್ಭದಲ್ಲೂ ಕೂಡ ಬ್ರಾಹ್ಮಣರ ಕೇರಿಗಳನ್ನು ಮತ್ತು ಅವರ ಧಾರ್ಮಿಕಸ್ಥಳಗಳ ಮೇಲೆ ದಾಳಿ ಮಾಡಬಾರದೆಂದು ತಾಕೀತು ಮಾಡಿದ್ದರು. ಅತ್ಯಂತ ಬಲಶಾಲಿಗಳನ್ನು (ಅದು ರಾಜರಾಗಲಿ ಅಥವಾ ಬ್ರಾಹ್ಮಣರಾಗಲಿ) ರಕ್ಷಿಸುವುದು ಯಾವುದೇ ವ್ಯವಸ್ಥಯ ಮುಂದುವರಿಕೆಗೆ ಅತ್ಯಗತ್ಯ ಎಂದು ರಾಮದಾಸರು ವಿವರಿಸುತ್ತಾರೆ.೨ ಧಾರ್ಮಿಕ ಕಟ್ಟಲೆಗಳು ಮತ್ತು ಆಧುನಿಕ ಪ್ರಭುತ್ವವು ನೀಡುವ ಮನ್ನಣೆಗಳ ಮೂಲಕ ಬ್ರಾಹ್ಮಣರಿಗೆ ವ್ಯವಸ್ಥಿತ ರಕ್ಷಣೆಯನ್ನು ಒದಗಿಸುವಲು ಜಾತೀಯ ಸಮಾಜವು ಸಕ್ರಿಯವಾಗಿ ಸಾಮಾಜಿಕರಣಗೊಂಡಿರುತ್ತದೆ. ಆದಕಾರಣ, ದಿನನಿತ್ಯದಲ್ಲಿ ʼಬ್ರಾಹ್ಮಣʼ ಎಂಬ ಪದದ ಬಳಕೆಯು,ʼಸಾರ್ವಜನಿಕವಾಗಿಯೂ ಮತ್ತು ಸಂಪೂರ್ಣವಾಗಿಯೂ ಪರಮಾಧಿಕಾರದ ಜ್ಞಾನಸಾರವನ್ನು ಒಪ್ಪಿಕೊಳ್ಳುತ್ತದೆʼ.೩
ಒಂದು ಕಲ್ಪನೆಯಾಗಿ ಮತ್ತು ಆಡಳಿತಾರೂಢ ವರ್ಗವಾಗಿ ʼಬ್ರಾಹ್ಮಣʼರನ್ನು ಸೃಷ್ಟಿಸಲು ಮತ್ತು ಮರು-ಸೃಷ್ಟಿಸಲು ನಮ್ಮ ಸಮಾಜವು ಆಳವಾಗಿ ತೊಡಗಿಸಿಕೊಂಡಿದೆ. ವಾಸ್ತವಿಕವಾಗಿ, ಹಿಂದುಳಿದ ಜಾತಿಗಳನ್ನು ಒಳಗೊಂಡ ಉತ್ಪಾದಕವರ್ಗವು, ಅನುತ್ಪಾದಕ ಆಡಳಿತ ವರ್ಗವನ್ನೂ ಸೇರಿದಂತೆ ಎಲ್ಲರ ಪರವಾಗಿ ಸಾಮಾಜಿಕ ಉತ್ಪಾದನೆ ಮತ್ತು ಮರು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಲ್ಲದೇ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿನ ʼಬ್ರಾಹ್ಮಣʼನನ್ನು ರಕ್ಷಿಸುತ್ತಾರೆ. ಈ ಬ್ರಾಹ್ಮಣ್ಯದ ʼಮಾನಸಿಕ ಕೂಲಿʼಯನ್ನು ಜಾತಿಯಾಧಾರಿತ ಉತ್ಪಾದನೆಯೆಂಬ ವಾಸ್ತವದಿಂದ ಬೇರ್ಪಡಿಸಲಾಗುವುದಿಲ್ಲ. ಗ್ರಾಂಸ್ಕಿಯು ಹೇಳುವಂತೆ, ಇವೆರಡೂ ಕೂಡ ಚರ್ಮ ಮತ್ತು ಮೂಳೆಯಂತೆಯೇ ಪರಸ್ಪರ ಹೊಂದಿಕೊಂಡಿರುತ್ತವೆ. ಆದ್ದರಿಂದ, ʼಬ್ರಾಹ್ಮಣʼ ಅಥವಾ ʼಸವರ್ಣʼ ಎಂಬ ಪದಗಳ ಮೊದಲು ಬಡ ಅಥವಾ ಯೋಗ್ಯ ಎಂಬ ವಿಶೇಷಣಗಳನ್ನು ಸೇರಿಸುವುದು ಅಸಹ್ಯಕರ. ಈ ವೈರುಧ್ಯ ಮತ್ತು ಹೇಸಿಗೆಯನ್ನು ಸರಿಪಡಿಸಲು ಎಲ್ಲರೂ ಕೂಡಿ ಶ್ರಮಿಸಬೇಕು. ಬಡ ದಲಿತ, ಬಡ ರೈತ ಅಥವಾ ಅನಕ್ಷರಸ್ಥ ಮಹಿಳೆ ಎಂಬಂತಹ ಪದಬಳಕೆಗಳನ್ನು ನಾವು ಕೇಳಿದಾಗ, ಅವು ನಮ್ಮ ಭಾವನೆಗಳನ್ನು ಕೆರಳಿಸುವುದೂ ಇಲ್ಲ; ಅವು ನಮ್ಮನ್ನು ಬಾಧಿಸುವುದೂ ಇಲ್ಲ. ʼಒಬ್ಬ ಬಡ ದಲಿತನು ಕೂಲಿ-ನಾಲಿ ಮಾಡಿಯಾದರೂ ಬದುಕುವನು, ಆದರೆ, ಬಡ ಬ್ರಾಹ್ಮಣನೊಬ್ಬ ಏನು ಮಾಡಲಾದೀತು?́ಎಂಬ ರಾಮ್ ವಿಲಾಸ್ ಪಾಸ್ವಾನರ ಹೇಳಿಕೆಯನ್ನು ನಾವು ಈ ಹಿನ್ನಲೆಯಲ್ಲಿ ಅರ್ಥೈಸಬೇಕು.ಒಬ್ಬ ಬಡ ಬ್ರಾಹ್ಮಣನಿಗೆ ವಿದ್ಯಾರ್ಥಿವೇತನವನ್ನೂ, ನವಜಾತ ಕರುಗಳನ್ನೂ, ಮೀಸಲಾತಿಗಳನ್ನೂ, ಆಹಾರವನ್ನೂ, ತುಪ್ಪವನ್ನೂ, ನಗರದಲ್ಲಿನ ಆಸ್ತಿ-ಸಂಪತ್ತುಗಳನ್ನೂ, ಸರ್ಕಾರಿ ಕೆಲಸಗಳನ್ನೂ, ಜಿ.ಎಸ್.ಟಿ ಫ್ರೀ ಜನಿವಾರವನ್ನೂ, ಮುಂತಾದವುಗಳನ್ನು ನೀಡಬೇಕು. ಸಚಿವರ ಹೇಳಿಕೆಯು ಹೊಸತೂ ಅಲ್ಲ, ಅಪರೂಪವೂ ಅಲ್ಲ. ಅರ್ನೆಸ್ಟ್ ವುಡ್ ತನ್ನ ʼಯ್ಯಾನ್ ಇಂಗ್ಲಿಷ್ ಮ್ಯಾನ್ ಡಿಫೆಂಡ್ಸ್ ಮದರ್ ಇಂಡಿಯಾʼ ಪುಸ್ತಕದಲ್ಲಿಯೂ ಕೂಡ ಇದೇ ರೀತಿಯಾಗಿ ʼ ನೂರಾರು ಮಿಲಿಯನ್ ಜನರು ಈಗಾಗಲೇ ದೈಹಿಕ-ಶ್ರಮ ಬೇಡುವ ಕೆಲಸಗಳಿಗೆ ಅರ್ಹರಾಗಿರುವಾಗ ಮತ್ತು ಸಾಮಾನ್ಯವಾಗಿ ಹೇಳುವುದಾದರೆ ಅವರಲ್ಲಿ ಅರ್ಧದಷ್ಟು ಜನರು ಹಸಿವಿನ ಅಂಚಿನಲ್ಲಿರುವಾಗ ಬ್ರಾಹ್ಮಣ ವಿದ್ಯಾರ್ಥಿಗಳೂ ಕೂಡ ಅವೇ ಕೆಲಸಗಳನ್ನು ಕೈಗೊಳ್ಳುವುದು ಖಂಡಿತವಾಗಿಯೂ ಮೂರ್ಖತನವಾಗುತ್ತದೆʼ ಎಂದು ಅಭಿಪ್ರಾಯ ಪಡುತ್ತಾರೆ.೪
ಬ್ರಾಹ್ಮಣರ ಮತ್ತವರ ಸಂಗಡಿಗರ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಡೆದ ಸಾಮೂಹಿಕ ಪ್ರಯತ್ನಗಳಿಗೆ ಅತೀ ದೊಡ್ಡ ಇತಿಹಾಸವೇ ಇದೆ. ಈ ಲೇಖನವು ಉನ್ನತ ಶಿಕ್ಷಣ ಕ್ಷೇತ್ರದಿಂದ ಆಯ್ದುಕೊಂಡ ಉದಾಹರಣೆಗಳೊಂದಿಗೆ ಇದನ್ನು ಸ್ಪಷ್ಟಪಡಿಸುತ್ತದೆ.
ದಕ್ಷಿಣ ವಿದ್ಯಾರ್ಥಿವೇತನದ ಕಥನ
ಬ್ರಾಹ್ಮಣರಿಗಾಗಿಯೇ ಪಶ್ಚಿಮ ಭಾರತದಲ್ಲಿ ದಕ್ಷಿಣ ಎಂಬ ಸರ್ಕಾರಿ ದತ್ತಿಯನ್ನು ಪೇಶ್ವೆಯರ ಆಳ್ವಿಕೆಯಲ್ಲಿ ಸ್ಥಾಪಿಸಲಾಯಿತು ಎಂಬುದನ್ನು ನರೇಂದ್ರ ಕುಮಾರರು ತಮ್ಮ ಪುಸ್ತಕದಲ್ಲಿ ತಿಳಿಸುತ್ತಾರೆ೫. ಈ ವಿದ್ಯಾರ್ಥಿವೇತನದ ಮಾಹಿತಿಗಳನ್ನು ಅವರು ತಮ್ಮ ಪುಸ್ತಕದ ಒಂದು ಅಧ್ಯಾಯದಲ್ಲಿ ನೀಡುತ್ತಾ, ೧೯೫೭ರ ಸ್ಯನ್ಸ್ಕ್ರಿಟ್ ಕಮಿಷನ್ನಿನ ವರದಿಯನ್ನು ಉಲ್ಲೇಖಿಸುತ್ತಾ ಇದನ್ನು ಶಿವಾಜಿಯು ತನ್ನ ಬ್ರಾಹ್ಮಣ ಗುರು ರಾಮದಾಸರ ಸಲಹೆಯ ಮೇರೆಗೆ ಸ್ಥಾಪಿಸಿದನು ಎಂದು ಕುಮಾರರು ತಿಳಿಸುತ್ತಾರೆ. ಬ್ರಾಹ್ಮಣರಿಗೆ ಶ್ರಾವಣ ಮಾಸದಲ್ಲಿ ಭಾರೀ ಭೋಜನ ಮತ್ತು ವಿದ್ಯಾರ್ಥಿವೇತನವನ್ನೂ ಒಳಗೊಂಡಂತೆ ರಾಮದಾಸನು ಶಿವಾಜಿಯಿಂದ ಮೂರು ʼವರʼಗಳನ್ನು ಪಡೆದನು ಎಂದು ಹೇಳಲಾಗಿದೆ.ಸರ್ಕಾರಿ ದಕ್ಷಿಣ ವಿದ್ಯಾರ್ಥಿವೇತನ ಎಂಬ ಹೆಸರಿನ ವಿದ್ಯಾರ್ಥಿವೇತನ ಯೋಜನೆಯನ್ನು ಇಂದಿನ ಮಹಾರಾಷ್ಟ್ರದಲ್ಲೂ ಕಾಣಬಹುದಾಗಿದೆ ಮತ್ತಿದು ಬ್ರಾಹ್ಮಣರೊಂದಿಗೆ ಬೇರ್ಪಡಿಸಲಾಗದ ಸಂಬಂಧವನ್ನು ಹೊಂದಿದೆ. ಮುಂದುವರೆದು, ಶಿಕ್ಷಣಕ್ಕೆ ಸಂಬಂಧಿಸಿದ ಬಾಂಬೆ ಸರ್ಕಾರದ ದಾಖಲೆಗಳನ್ನು ಉಲ್ಲೇಖಿಸುತ್ತಾ ಕುಮಾರರು ಬ್ರಾಹ್ಮಣರಿಗೆ ತಮ್ಮ ಪಾಂಡಿತ್ಯದ ಆಧಾರದ ಮೇಲೆ ನಗದು ಮತ್ತು ಇನ್ನಿತರೇ ರೂಪದಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು ಎಂದೂ ಲೇಖಕರು ಬರೆಯುತ್ತಾರೆ. ಉದಾಹರಣೆಗೆ, ಹತ್ತು ಪಠ್ಯಗಳನ್ನು ಅರಿತಿದ್ದ ಬ್ರಾಹ್ಮಣರಿಗೆ ʼಹತ್ತು ದಿಬ್ಬ ಜೋಳ ಮತ್ತು ನೂರು ರೂಪಾಯಿಗಳನ್ನು ನೀಡಲಾಗುತ್ತಿತ್ತುʼ. ೧೭ನೇ ಶತಮಾನದ ದ್ವಿತೀಯಾರ್ಧದಲ್ಲಿ ಸ್ಥಾಪಿಸಲಾದ ವಿದ್ಯಾರ್ಥಿವೇತನದ ವಾರ್ಷಿಕ ಖರ್ಚು ಪ್ರಾರಂಭದ ದಿನಗಳಲ್ಲಿ ಐದು ಲಕ್ಷ ರೂಪಾಯಿಗಳಷ್ಟಿತ್ತು. ಇದು ಪೇಶ್ವೆಯರ ಆಡಳಿತದಲ್ಲಿ ಇನ್ನಷ್ಟೂ ಹೆಚ್ಚಿತು ಮಾತ್ರವಲ್ಲ, ಅದು ಸರ್ಕಾರದ ಜವಾಬ್ದಾರಿಯಾಯಿತು.
ʼಕಾಶಿ, ರಾಮೇಶ್ವರ, ತೆಲಂಗಾಣ, ದ್ರಾವಿಡದೇಶ, ಕೊಂಕಣ್, ಕನ್ಯಕುಬ್ಜ, ಶ್ರೀರಂಗಪಟ್ಟ,ಮಥುರ, ಗಧ್ವಾಲ, ಗುರ್ಜರ ಮುಂತಾದʼ ಉಪಖಂಡದ ವಿವಿಧ ಸ್ಥಳಗಳಿಂದ ಬ್ರಾಹ್ಮಣ ವಿದ್ವಾಂಸರನ್ನು ಆಹ್ವಾನಿಸಿ ತಜ್ಞರ ಸಮಿತಿಯನ್ನು ರಚಿಸಲಾಯಿತು.ಈ ತಜ್ಞರ ಸಮಿತಿಯು ಪುಣೆಯಲ್ಲಿ ಹಲವು ದಿನಗಳ ಕಾಲ ಉಳಿದುಕೊಂಡು ವಿದ್ಯಾರ್ಥಿವೇತನವನ್ನು ಪಡೆಯುವ ಬ್ರಾಹ್ಮಣರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದರು. ಇವೆಲ್ಲದರ ಕೇಂದ್ರಬಿಂದು ಆಗಿದ್ದರಿಂದ ಪುಣೆಯ ಮತ್ತದರ ಸುತ್ತ-ಮುತ್ತ ಬಹಳಷ್ಟು ಶಾಶ್ವತ ʼಸಂಸ್ಕೃತ ಪಾಠಶಾಲೆʼಗಳು ತಲೆಯೆತ್ತಿದವು. ಪೇಶ್ವೆಯರ ಮಾದರಿಯನ್ನು ಶ್ರಾವಣ-ದಕ್ಷಿಣ ವಿದ್ಯಾರ್ಥಿವೇತನವನ್ನು ನೀಡಿದ ಬರೋಡವನ್ನೂ ಸೇರಿದಂತೆ ವಿವಿಧ ಊಳಿಗಮಾನ್ಯ ಧಣಿಗಳು ಅನುಸರಿಸಿದರು ಎಂದು ಕುಮಾರರು ಬರೆಯುತ್ತಾರೆ. ಪೇಶ್ವೆಯರ ಆಳ್ವಿಕೆಯಲ್ಲಿ ದಕ್ಷಿಣ ವಿದ್ಯಾರ್ಥಿವೇತನದ ಮೇಲಿನ ಖರ್ಚು ಹತ್ತು ಲಕ್ಷದ ಕಡಿಮೆಯಿರಲಿಲ್ಲ. ೧೭೫೮ರಲ್ಲಿ ಪೇಶ್ವ ಬಾಜಿರಾವರ ಆಳ್ವಿಕೆಯಲ್ಲಿ ಈ ಮೊತ್ತವು ಹದಿನೆಂಟು ಲಕ್ಷದ ಗರಿಷ್ಠ ಮಟ್ಟವನ್ನು ತಲುಪಿತ್ತು. ಕೆಲವೊಮ್ಮೆ, ವರ್ಷವೊಂದರಲ್ಲಿ೬೦,೦೦೦ ಕ್ಕೂ ಹೆಚ್ಚು ಬ್ರಾಹ್ಮಣರು ವಿದ್ಯಾರ್ಥಿವೇತನ ಪಡೆಯುತ್ತಿದ್ದರು ಎಂಬುದನ್ನು ನಮ್ಮ ಗಮನಕ್ಕೆ ತರುತ್ತಾರೆ. ೧೭೭೦ ರಲ್ಲಿ, ೪೦,೦೦೦ ಬ್ರಾಹ್ಮಣರು ಉತ್ತರ ಮತ್ತು ದಕ್ಷಿಣದ ಬ್ರಾಹ್ಮಣರ ಕೇಂದ್ರಗಳಿಂದ ಪರೀಕ್ಷೆಗೆ ಹಾಜರಾಗಿದ್ದರು. ಇಲ್ಲಿ ಒತ್ತಿಹೇಳಬೇಕಾದದ್ದು, ಒಂದು ದೇಶವಾಗಿ,ಪೇಶ್ವೆಯರು ಮಾತ್ರವಲ್ಲದೇ ಬರೋಡ, ದರ್ಭಂಗ, ಮೈಸೂರು, ವಿಜಯನಗರ, ಜೈಪುರ, ಪಾಟಿಯಾಲ, ಜಮ್ಮು ಮುಂತಾದ ಊಳಿಗಮಾನ್ಯ ಧಣಿಗಳ ಆಡಳಿತದಲ್ಲಿ ಪ್ರಭುತ್ವ ಪ್ರಾಯೊಜಿತ ಯೋಜನೆಗಳ ಆಶ್ರಯದಲ್ಲಿ ಒಂದೇ ಭಾಷೆ (ಸಂಸ್ಕೃತ) ಮಾತನಾಡುವ, ಒಂದೇ ತರನಾದ (ದಕ್ಷಿಣದಂತಹ) ಹಿತಾಸಕ್ತಿಯನ್ನು ಹೊಂದಿದ್ದ ಬ್ರಾಹ್ಮಣರೆಂಬ ಕಲ್ಪಿತ ಸಮುದಾಯವು ಸೃಷ್ಟಿಯಾಗುತ್ತಿತ್ತು. ಸ್ವತಂತ್ರ ಭಾರತವು ಕೂಡ ವರ್ಷವೊಂದಕ್ಕೆ ಕೇವಲ ೩೦೦ ರಾಷ್ಟ್ರೀಯ ಓ.ಬಿ.ಸಿ ವಿದ್ಯಾರ್ಥಿವೇತನವನ್ನೂ; ೬೬೭ ಮತ್ತು ೨೦೦೦ ಎಸ್.ಟಿ ಮತ್ತು ಎಸ್.ಸಿ ವಿದ್ಯಾರ್ಥಿವೇತನವನ್ನು ನೀಡುತ್ತದೆಯೆಂಬುದು ಆಶ್ಚರ್ಯಕರ ವಿಚಾರವಾಗಿದೆ.
ಬ್ರಿಟಿಷರ ಆಳ್ವಿಕೆಯಲ್ಲಿ ಇದನ್ನು ನಿಲ್ಲಿಸಲಾಗಿತ್ತು. ಆದರೆ, ಅದಕ್ಕೆಂದು ಮೀಸಲಿಡಲಾಗಿದ್ದ ಮೊತ್ತವನ್ನು ಐದು ಲಕ್ಷದಿಂದ ಐವತ್ತು ಸಾವಿರ ರೂಪಾಯಿಗಳಿಗೆ ಇಳಿಸಲಾಯಿತಾದರೂ ʼಒತ್ತಾಯದ ಮೇರೆಗೆʼಅದನ್ನು ಪುನರ್ ಸ್ಥಾಪಿಸಲಾಯಿತು. ೧೮೧೮ರಲ್ಲಿ ಡೆಕ್ಕನ್ನಿನ ಆಕ್ರಮಿಸಿಕೊಂಡ ನಂತರ ದಕ್ಷಿಣ ಫಂಡನ್ನು ಬ್ರಾಹ್ಮಣರಿಗೆ ನೀಡುವ ಪರಿಹಾರವನ್ನಾಗಿಭಾವಿಸಲಾಯಿತು೬.. ಅಭ್ಯರ್ಥಿಗಳು ಹೊಸ ಜ್ಞಾನಶಾಖೆಗಳ ಅರಿವನ್ನೂ ಹೊಂದಿರಬೇಕೆಂದು ಬ್ರಿಟಿ಼ಷರು ಬಯಸುತ್ತಿದ್ದರು. ಈ ರೀತಿಯಾಗಿ ಬ್ರಾಹ್ಮಣರಿಗೆ ನೀಡಲಾದ ಮೊತ್ತದ ವಿವರಗಳನ್ನು ನೀಡಿದ್ದಾರೆ.
ವರ್ಷ | ಮೊತ್ತ | ಬ್ರಾಹ್ಮಣರಸಂಖ್ಯೆ |
1839 | 28,172 | 1991 |
1840 | 27,134 | 1938 |
1841 | 26,255 | 1860 |
1842 | 24,585 | 1763 |
1843 | 22,989 | 1710 |
1844 | 23,101 | 1630 |
1845 | 22,284 | 1579 |
1846 | 21,730 | 1536 |
1847 | 20,313 | 1435 |
1848 | 19,638 | 1385 |
1849 | 18,749 | 1337*2 |
(ಮೂಲ: ಕುಮಾರ್, ೧೯೬೭: ಪುಟ ೪೪)
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದಕ್ಷಿಣ ವಿದ್ಯಾರ್ಥಿವೇತನವನ್ನು ಬಹಳಷ್ಟು ಬ್ರಾಹ್ಮಣರಿಗೆ ಶಾಶ್ವತವಾಗಿ ನೀಡಲಾಗಿತ್ತು. ೧೮೨೯ರ ನಂತರದಲ್ಲಿ, ವಿದ್ಯಾರ್ಥಿವೇತನದಲ್ಲಿ ಒಂದು ಭಾಗವನ್ನು ಪುಣೆಯ ಸಂಸ್ಕೃತ ಕಾಲೇಜಿನ ದುರಸ್ತಿಗಾಗಿ ವರ್ಗಾಯಿಸಲಾಯಿತು. ಸ್ಥಳೀಯವಾದ ಎಲ್ಲಾ ಕಲಿಕೆಯು ಸಂಸ್ಕೃತದಲ್ಲೇ ಬ್ರಾಹ್ಮಣರ ಅಥವಾ ಸಾಹಿತ್ಯಿಕ ವಲಯದಿಂದಲೇ ನಡೆಯುತ್ತದೆ ಎಂದು ಭಾವಿಸಲಾಗಿತ್ತು. ಸನ್ನಿವೇಶವು ೧೯ ನೇಯ ಶತಮಾನದ ದ್ವಿತೀಯಾರ್ಧದಲ್ಲಿ ಮಾತ್ರವೇ ಬದಲಾಗತೊಡಗಿದ್ದು. ೧೮೪೯ರ ನಂತರದಲ್ಲಿ ದಕ್ಷಿಣದ ಗಣನೀಯ ಪಾಲನ್ನು ದೇಸೀಯ ಭಾಷೆ ಮರಾಠಿಯೆಡೆಗೆ ವರ್ಗಾಯಿಸಲಾಯಿತು ಮತ್ತು ಎಲ್ಲಾ ಜಾತಿ ಮತ್ತು ನಂಬಿಕೆಗಳ ಹಿನ್ನಲೆಯ ಜನರಿಗೆ ಮುಕ್ತ ಅವಕಾಶವನ್ನು ಅಧಿಕೃತವಾಗಿಯಾದರೂ ಕಲ್ಪಿಸಲಾಯಿತು. ಮೂಲ ಉದ್ದೇಶ ಮತ್ತು ಪರಿಕಲ್ಪನೆಯನ್ನು ಹೊಂದಿದ್ದ ದಕ್ಷಿಣವು ೧೯ನೇಯ ಶತಮಾನದ ಕೊನೆಯಲ್ಲಿ ನಿಂತಿತು. ಬಾಂಬೆ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಜೂನಿಯರ್ / ಸೀನಿಯರ್ ದಕ್ಷಿಣ ವಿದ್ಯಾರ್ಥಿವೇತನದ (ಮಾಸಕ್ಕೆ ೫೦ / ೧೦೦ ರೂಪಾಯಿಗಳು)೭ ಹೆಸರಿನಲ್ಲಿ ಇದನ್ನು ಪುನರ್ ಸ್ಥಾಪಿಸಲಾಯಿತು. ಇಂತಹ ಕಾಲೇಜುಗಳಿಗೆ ಇಂತಿಷ್ಟು – ಎಲ್ಫಿನ್ ಸ್ಟೋನ್ ಕಾಲೇಜಿಗೆ ಆರು; ಸೇಂಟ್ ವಿಲ್ಸನ್ ಕಾಲೇಜಿಗೆ ಮೂರು; ಫರ್ಗುಸನ್ ಕಾಲೇಜಿಗೆ ಮೂರುಸೀಟುಗಳನ್ನು ಮೀಸಲಿಡಲಾಗುತ್ತಿತ್ತು. ದಕ್ಷಿಣ ಎಂಬ ಹಳೇ ಭೂತವೇ ವಿಕಸನಗೊಂಡು, ʼಮೆರಿಟ್ʼ ಹೊಂದಿರುವ ಮತ್ತು ಬೇರಾವ ವಿದ್ಯಾರ್ಥಿವೇತನವನ್ನು ಪಡೆಯದ ವಿದ್ಯಾರ್ಥಿಗಳಿಗೆ ʼಗವರ್ನಮೆಂಟ್ದಕ್ಷಿಣ ವಿದ್ಯಾರ್ಥಿವೇತನʼದ ಹೆಸರಿನಲ್ಲಿ ಮುಂದುವರೆಯುತ್ತಿರುವುದು೮.
ವಿಶ್ವವಿದ್ಯಾಲಯಗಳ ವಾರ್ಷಿಕ ಕ್ಯಾಲೆಂಡರುಗಳಲ್ಲಿ ಮತ್ತು ಪ್ರತಿಷ್ಟಿತ ಮೇಲ್ಜಾತಿ ಗಂಡಸರು ಮತ್ತು ಮಹಿಳೆಯರ ಜೀವನ ವೃತ್ತಾಂತಗಳಲ್ಲಿ ಮತ್ತು ಕಥೆಗಳಲ್ಲಿ, ಈ ಹಿಂದೆ ಅವರು ʼದಕ್ಷಿಣ ಫೆಲೋʼಗಳಾಗಿದ್ದ ಬಗ್ಗೆ ವಿವರಗಳು ಸಿಗುತ್ತವೆಬಾಂಬೆ ವಿಶ್ವವಿದ್ಯಾಲಯದ ೧೯ನೇಯ ಶತಮಾನದ ಕ್ಯಾಲೆಂಡರುಗಳು, ʼದಕ್ಷಿಣ ಫೆಲೋʼ ಗಳ ಪಟ್ಟಿಯನ್ನು ನೀಡುತ್ತದೆ. ಅದರಲ್ಲಿ ಬಹುತೇಕರು ಬ್ರಾಹ್ಮಣರೇ ಇದ್ದು, ಅವರ ನಂತರದ ಸ್ಥಾನವನ್ನು ಹೊಂದಿದ್ದ ಗುಜುರಾತಿ ವೈಶ್ಯರು ಮತ್ತು ಪಾರ್ಸಿಗಳು ಹೊಂದಿದ್ದರು. ಉದಾಹರಣೆಗೆ, ನಂದಿನಿ ಸುಂದರರ ʼಇನ್ ದಿ ಕಾಸ್ ಆಫ್ ಆಂತ್ರೋಪಾಲಜಿ; ಲೈಫ್ ಅಂಡ್ ವರ್ಕ್ ಅಫ್ ಇರಾವತಿ ಕಾರ್ವೆʼ ಪುಸ್ತಕವು ಇರಾವತಿ ಕಾರ್ವೆಯವರು ೨೦ನೇಯ ಶತಮಾನದ ಆರಂಭದಲ್ಲಿ ದಕ್ಷಿಣ ಫೆಲೋ ಅಗಿದ್ದರು ಎಂಬುದನ್ನು ತಿಳಿಸುತ್ತದೆ೯. ಪುಣೆಯ ಭಂಡಾರ್‌ಕರ್ ಓರಿಯಂಟಲ್ ಇನ್ಸ್ಟಿಟ್ಯೂಟನ್ನು ರಾಮಕೃಷ್ಣ ಭಂಡಾರ್ಕರ್ ಅವರ ನೆನಪಿನಲ್ಲಿ ಹೆಸರಿಸಲಾಗಿದ್ದು ಅವರು ೧೮೫೯ರಲ್ಲಿ ದಕ್ಷಿಣ ಫೆಲೋ ಆಗಿದ್ದರು೧೦. ಫಿರೋಜೆಶಾಹ ಮೆಹ್ತಾ ಮತ್ತು ಬೈರಾಮ್ಜೀ ನರೋಜಿ ಕಾಮರು ಕೂಡ ದಕ್ಷಿಣ ಫೆಲೋಗಳಾಗಿದ್ದರು೧೧. ಗೋವಂದಗ ಅಗರ್ಕರರು ೧೯ನೇಯ ಶತಮಾನದಲ್ಲಿ ಕೊನೆಯಲ್ಲಿ ದಕ್ಷಿಣ ವಿದ್ಯಾರ್ಥಿ ವೇತನದ ಅಧೀಕ್ಷಕರಾಗಿದ್ದರು೧೨.
೨೦ನೇಯ ಶತಮಾನದ ಬ್ರಾಹ್ಮಣ–ಸವರ್ಣಫಂಡು
೧೯೪೫-೪೬ ನೇಸಾಲಿನ ಆಗ್ರವಿಶ್ವವಿದ್ಯಾಲಯದ ಕ್ಯಾಲೆಂಡರ್ ವಿದ್ಯಾರ್ಥಿನಿಲಯಗಳ ಬಗ್ಗೆ ಒಂದುಕತೂಹಲಕಾರಿಭಾ ಗವನ್ನು ಹೊಂದಿದೆ೧೩.ಇದ್ದ ಐದು ವಿದ್ಯಾರ್ಥಿನಿಲಯಗಳಲ್ಲಿ ನಾಲ್ಕರಲ್ಲಿ ಮೇಲ್ಜಾತಿ ಹಿಂದೂ ವಿದ್ಯಾರ್ಥಿಗಳೇ ವಾಸವಾಗಿದ್ದರು ಮತ್ತು ಅವನ್ನು ನೋಡಿಕೊಳ್ಳುತ್ತಿದ್ದರು. ಆಶ್ಚರ್ಯಕರ ಸಂಗತಿಯೆಂದರೆ, ವಿದ್ಯಾರ್ಥಿನಿಲಯಗಳನ್ನು ಬೇರೆ ಬೇರೆ ಜಾತಿಗಳ ಹೆಸರಿನ ಆಧಾರದಲ್ಲಿ ಕಾಯಸ್ತ, ಚೌಬೆ, ಭಾರ್ಗವ ಮತ್ತು ವೈಷ್ ಎಂದು ಹೆಸರಿಸಲಾಗಿತ್ತು.ಇದರಲ್ಲಿ ಚೌಬೆ ಮತ್ತು ಭಾರ್ಗವ ವಿದ್ಯಾರ್ಥಿ ನಿಲಯದಲ್ಲಿ ಚತುರ್ವೇದಿ ಬ್ರಾಹ್ಮಣರಿಗೆ ಮತ್ತು ಭಾರ್ಗವರಿಗೆ ಆದ್ಯತೆ ನೀಡಲಾಗುತ್ತಿತ್ತು ಮತ್ತು ಕಾಯಸ್ತ ವಿದ್ಯಾರ್ಥಿನಿಲಯವು ಅಧಿಕೃತವಾಗಿಯಾದರೂ ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೆ ಮುಕ್ತವಾಗಿತ್ತು. ಈ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ ಜಾತಿಗಳೇ ಅದರ ಆಡಳಿತವನ್ನೂ ನೋಡಿಕೊಳ್ಳುತ್ತಿದ್ದರು. ೨೦ನೇಯ ಶತಮಾನದ ಆರಂಭದಲ್ಲಿ, ಕಾಯಸ್ತ ವಿದ್ಯಾರ್ಥಿನಿಲಯದ ನಿರ್ಮಾಣದ ಸಂದರ್ಭದಲ್ಲಿ ಉತ್ತರಪ್ರದೇಶದ ಸರ್ಕಾರವು ಭಾರಿ ಮೊತ್ತದ ಸಹಾಯಧನವನ್ನು ನೀಡಿತ್ತು. ೧೯೪೫ ರಲ್ಲಿದ್ದ ವಿದ್ಯಾರ್ಥಿನಿಲಯದ ವಾರ್ಡನ್ನು ಆಗಿನ ಆಗ್ರದಕಾಯಸ್ತ ಅಸೋಸಿಯೇಷನ್ನಿನ ಕಾರ್ಯದರ್ಶಿಯಾಗಿದ್ದರು. ಅಂದರೆ, ಜಾತಿಯಾಧಾರಿತ ವಿದ್ಯಾರ್ಥಿನಿಲಯಗಳನ್ನು ಸಮರ್ಥಿಸಲಾಗುತ್ತಿತ್ತು ಮಾತ್ರವಲ್ಲ ಅವುಗಳನ್ನು ವಿಶ್ವವಿದ್ಯಾಲಯಗಳಿಂದ ಮತ್ತು ಸರ್ಕಾರಗಳಿಂದ ಆರ್ಥಿಕ ಸಹಾಯಧನವನ್ನೂ ಪಡೆದುಕೊಳ್ಳುತ್ತಿದ್ದವು. ಈ ಮಾಹಿತಿಗಳು ಕುತೂಹಲಕಾರಿಯೂ ಮಹತ್ವವುಳ್ಳದ್ದಾಗಿತ್ತು. ಕಾರಣ, ಈ ಕ್ಯಾಲೆಂಡರಿನ ಪ್ರಕಟಣೆಯಾಗಿ ಒಂದು ವರ್ಷ ಕಳೆಯುವಷ್ಟರಲ್ಲೇ, ಮೇಲ್ಜಾತಿ ಸದಸ್ಯರೇ ತುಂಬಿಕೊಂಡು ಕೊಳೆತುನಾರುತ್ತಿದ್ದ ಸಂವಿಧಾನ ರಚನಾಸಭೆಯು ಜಾತೀಯ ಪ್ರಾತಿನಿಧ್ಯವನ್ನು ಅಲ್ಲಗೆಳೆದು; ತಮ್ಮನ್ನು ತಾವು ಜಾತಿಯಿಲ್ಲದವರಂತೆ, ಪ್ರತಿಭಾವಂತ ವ್ಯಕ್ತಿಗಳಂತೆ ಬಿಂಬಿಸಿಕೊಂಡರು. ಏನಿಲ್ಲವೆಂದರೂ, ವಿಶ್ವವಿದ್ಯಾಲಯಗಳ ಕ್ಯಾಲೆಂಡರುಗಳು ಅವರು ಜಾತಿಯಿಲ್ಲದ ʼಮೆರಿಟ್ʼನ್ನು ತಲುಪಲಿಕ್ಕೆ ಹಾದು ಹೋದ ಜಾತೀಯ ಹಾದಿಯನ್ನು ಗುರುತಿಸುವುದಕ್ಕೆ ಸಹಾಯಕವಾಗಿದೆ.
ಮದರಾಸು ವಿಶ್ವವಿದ್ಯಾಲಯದ ಕ್ಯಾಲೆಂಡರಿನಲ್ಲಿ ದೊರೆತ ವಿದ್ಯಾರ್ಥಿ ಭೋಜನಾಲಯಗಳ ಮಾಹಿತಿ:
ಮುಂದಿನ ನಾಲ್ಕು ವರ್ಷಗಳಲ್ಲಿ ಐದು ಭೋಜನಾಶಾಲೆಗಳನ್ನು ನಿರ್ಮಿಸಲಾಯಿತು. ಒಂದು ಬೋಜನಾಶಾಲೆ ಬ್ರಾಹ್ಮಣರ ಭೋಜನಾಶಾಲೆಗಾಗಿ ನಿರ್ಮಿಸಿದ್ದರೆ; ಮತ್ತೊಂದನ್ನು ನಾಯರರ ಭೋಜನಶಾಲೆಗಾಗಿ; ಮೂರನೆಯದನ್ನು ಎಲ್ಲರಿಗಾಗಿ ಸಸ್ಯಹಾರಿ ಭೋಜನಾಶಾಲೆಯಾಗಿ ನಿರ್ಮಿಸಲಾಗಿತ್ತು.ಮತ್ತೆರಡನ್ನು ಎಲ್ಲರಿಗಾಗಿ ಮಾಂಸಾಹಾರಿ ಭೋಜನಾಶಾಲೆಗಾಗಿ ನಿರ್ಮಿಸಲಾಗಿತ್ತು. ೧೯೨೫ ರ ಜೂನಿನಲ್ಲಿ ನಿರ್ಮಿಸಲಾದ ಕಟ್ಟಡವೊಂದರಲ್ಲಿ ಕ್ಯಾಂಟೀನನ್ನೂ ತೆರೆಯಲಾಯಿತು
ಲಖನೌ ವಿಶ್ವವಿದ್ಯಾಲಯದ ವಾರ್ಷಿಕ ಕ್ಯಾಲೆಂಡರು ಜಾತಿಯಾಧಾರಿ ತಮಾಸಿಕದತ್ತಿಗಳ ಮಾಹಿತಿಗಳನ್ನುಒದಗಿಸುತ್ತದೆ. ಉದಾಹರಣೆಗೆ, ಪಂಡಿತ್ ಸೂರಜ್ ನರೈನ್ ವಿದ್ಯಾರ್ಥಿವೇತನವನ್ನು ಕಾಶ್ಮೀರಿ ಬ್ರಾಹ್ಮಣರಿಗೆ ಮಾತ್ರ ನೀಡಲಾಗುತ್ತಿತ್ತು. ಭಿಂಗರಾಜ್ ಕ್ಷತ್ರಿಯ ವಿದ್ಯಾರ್ಥಿ ವೇತನವನ್ನು ಅಸಲಿ ಕ್ಷತ್ರಿಯಮನೆತನದ ವಿದ್ಯಾರ್ಥಿಗಳಿಗಾಗಿ ಮಾತ್ರ ನೀಡಲಾಗುತ್ತಿತ್ತು. ಇದರ ಬಗೆಗಿನ ಮಾಹಿತಿ ನೀಡುವ ಭಾಗವು ಕೊನೆಯಲ್ಲಿ ʼಟಿಪ್ಪಣಿʼ ಕೊನೆಗೊಳ್ಳುತ್ತದೆ. ಅದರಲ್ಲಿ ಈ ವಿದ್ಯಾರ್ಥಿವೇತನಕ್ಕೆ ತಮ್ಮನ್ನು ತಾವು ಕ್ಷತ್ರಿಯರೆಂದು ಘೋಷಿಸಿಕೊಂಡ ಜಾತಿಗಳಾದ ಜಾಟರು, ಕಾಯಸ್ತರು ಮತ್ತು ಖತ್ರಿಗಳಿನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಲಖನೌ ವಿಶ್ವವಿದ್ಯಾಲಯದಲ್ಲಿ ರಾಜಬಹದ್ದೂರ್ ದಯಾಳ್ ವಿದ್ಯಾರ್ಥಿವೇತನಕ್ಕೆ ಮೊದಲ ಆದ್ಯತೆಯನ್ನು ಖತ್ರಿಗಳಿಗೆ ನೀಡಲಾಗಿದ್ದರೆ, ಖತ್ರಿಯೇತರ ಹಿಂದೂಗಳು ತದನಂತರದ ಆದ್ಯತೆಯನ್ನು ಪಡೆಯುತ್ತಿದ್ದರು ಮತ್ತು ಕೊನೆಯಲ್ಲಿ ಪರಿಗಣಿಸಲಾಗುತ್ತಿತ್ತು. ಈ ರೀತಿಯಲ್ಲಿ, ವಿದ್ಯಾರ್ಥಿವೇತನಕ್ಕೆ ಯಾರನ್ನು ಪರಿಗಣಿಸಲಾಗುವುದು ಮತ್ತು ಅವರಿಗೆ ನೀಡುವ ಆದ್ಯತೆಯನ್ನು ಶ್ರೇಣೀಕೃತವಾಗಿರಿಸಲಾಗಿತ್ತು. ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರವೇ ನೀಡಲಾಗುತ್ತಿದ್ದ ವಿವಿಧ ವಿದ್ಯಾರ್ಥಿವೇತನಗಳಿದ್ದವು. ಇವನ್ನು ದೇವಸ್ಥಾನ ಸಮಿತಿಗಳು (ಶ್ರೀನಾಗೇಶ್ವರನಾಥ ದೇವಾಲಯ ವಿದ್ಯಾರ್ಥಿವೇತನ, ಶ್ರೀಮಹಾವೀರ್ ಜೀ ದೇವಾಲಯ ಸಮಿತಿ ವಿದ್ಯಾರ್ಥಿವೇತನ ಮತ್ತು ಮುಂತಾದವುಗಳು) ಮತ್ತು ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿದ್ದ ಪ್ರಮುಖ ಮೇಲ್ಜಾತಿ ಅಧಿಕಾರಿಗಳು ಮತ್ತು ಜಮೀನುದಾರರು ನೀಡುತ್ತಿದ್ದರು೧೪.
೧೯೩೬–೩೭ರ ನಾಗಪುರ ವಿಶ್ವವಿದ್ಯಾಲಯದ ಕ್ಯಾಲೆಂಡರಿನಲ್ಲಿ ದೊರೆತ ಜಾತೀಯ ವಿದ್ಯಾರ್ಥಿವೇತನದ ಮಾಹಿತಿ:೫.
ನಾಗಪುರ ವಿಶ್ವವಿದ್ಯಾಲಯದ ವಿಜ್ಞಾನ ವಿಷಯಗಳ ಸಹಿತ ಇಂಟರ್-ಮೀಡಿಯೇಟ್ ಪರೀಕ್ಷೆಯನ್ನು ತೇರ್ಗಡೆಯಾದ ಮಹಿಳಾ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ:
ಅರ್ಜಿ ಸಲ್ಲಿಸಿದ ಪ್ರತಿ ವಿದ್ಯಾರ್ಥಿಯು ಆಯ್ಕೆ ಸಮಿತಿಯ ಮೂಲಕ ಆಯ್ಕೆಯಾಗಿದ್ದು, ಸಮುದಾಯಗಳನ್ನು ಈ ಕೆಳಗೆ ನಮೂದಿಸಲಾಗಿರುವ ಕ್ರಮದಲ್ಲಿಆಯ್ಕೆಯಾಗಿರಬೇಕು:
ಅ) ಮಹಾರಾಷ್ಟ್ರದ ಬ್ರಾಹ್ಮಣರು
ಆ) ಇತರೆ ಬ್ರಾಹ್ಮಣರು
ಇ) ಡಿಪ್ರೆಸಡ್ ಕ್ಲಾಸುಗಳನ್ನೂಒಳಗೊಂಡಂತೆ ಹಿಂದೂಗಳು
ಈ) ಭಾರತೀಯ ನಾಗರೀಕರಾದ ಇತರ ಸಮುದಾಯಗಳ ಸದಸ್ಯರು
೧೯೩೦ರ ಕೊನೆಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕ್ಯಾಲೆಂಡರುಗಳು೧೫ಕೂಡ, ಮತ್ತೊಮ್ಮೆ, ಜಾತಿಯಾಧಾರಿತ ವಿದ್ಯಾರ್ಥಿವೇತನಗಳ, ಪ್ರಶಸ್ತಿಗಳ ಮತ್ತು ಪದಕಗಳ ಬಗೆಗಿನ ವಿವರಗಳನ್ನು ನೀಡುತ್ತದೆ. ಆ ಪಟ್ಟಿಗಳನ್ನು ಗಮನಿಸಿದಾ̧ಗ, ರೀತಿಯ ಸಾಮುದಾಯದ ಉದಾರತೆಯುʼ ಬಡ ಮತ್ತು ಅರ್ಹತೆ ಹೊಂದಿದ್ದ ಬ್ರಾಹ್ಮಣವಿದ್ಯಾರ್ಥಿಗಳನ್ನೇʼ ಗುರಿಯಾಗಿಸಿಕೊಂಡಿತ್ತು ಎಂಬುದು ಸ್ಪಷ್ಟವಾಗುತ್ತದೆ .ಬ್ರಾಹ್ಮಣೇತರ ದ್ವಿಜರೂ ಕೂಡ ಬ್ರಾಹ್ಮಣರ ವಿದ್ಯಾರ್ಥಿವೇತನದ ಬೆಂಬಲಕ್ಕೆ ನಿಂತಿದ್ದರು ಎಂಬುದನ್ನು ನೆನಪಿನಲ್ಲಿಡಬೇಕು. ವಿದ್ಯಾರ್ಥಿವೇತನಗಳನ್ನು ನೀಡುತ್ತಿದ್ದ ದಾನಿಗಳು ನಿರ್ದಿಷ್ಟ ಉಪಜಾತಿಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುತ್ತಿದ್ದರು. ಪಂಡಿತ್ ಅಮರನಾಥ ಟ್ರಸ್ಟು, ರಾಯ್ ಪಂಡಿತ್ ಕಿಷನ್ ನರೈನ್ ಗುರ್ತು ಮತ್ತು ಪಂಡಿತ್ಹರಿ ಕೃಷ್ಣ ವಿದ್ಯಾರ್ಥಿವೇತನಗಳು ಕಾಶ್ಮೀರಿಪಂಡಿತರಿಗೇ ಮೀಸಲಾಗಿತ್ತು. ರಾಯ್ ಸಾಹೇಬ್ ಚಾಂದಿಪ್ರಸಾದ್, ಲಾಲರತನ್ಚಂದ್, ಲಾಲಮುರಳಿಧರ್ ಕಪೂರ್ ಟೆಕ್ನಿಕಲ್ ಮತ್ತುರಾಯ್ ಬಹದ್ದೂರ್ ಬಾಬುಗೋಕುಲ್ ಚಾಂದ್ ವಿದ್ಯಾರ್ಥಿವೇತನಗಳನ್ನು ಬಡ ಮತ್ತು ಅರ್ಹ ಖತ್ರಿ ವಿದ್ಯಾರ್ಥಿಗಳಿಗೆ ಮಾತ್ರವೇ ನೀಡಲಾಗುತ್ತಿತ್ತು. ಪಾರ್ವತಿಭಾಯಿಜೈನ್ ಮತ್ತು ಕುಮರ್ಸಿಂಗ್ ವಿದ್ಯಾರ್ಥಿವೇತನಗಳನ್ನು ಸಂಸ್ಕೃತವನ್ನು ಭಾಷೆಯನ್ನಾಗಿ ಆಯ್ದುಕೊಂಡಿದ್ದ ಜೈನ ವಿದ್ಯಾರ್ಥಿಗಳಿಗೆ ಮೀಸಲಾಗಿತ್ತು. ರತನ್ಚಾಂದ್ದಲ್ಪತರಾಮ್ ಶಾ ವಿದ್ಯಾರ್ಥಿವೇತನವು ಈ ಕೆಳಗೆ ನಮೂದಿಸಲಾಗಿರುವ ಕ್ರಮಾಂಕದ ಮೇರೆಗೆ ವಿದ್ಯಾರ್ಥಿಗಳಿಗೆ ಆದ್ಯತೆಯನ್ನುನೀಡುತ್ತಿದ್ದವು: ಜೈನಶ್ಚೇತಾಂಬರಮೂರ್ತಿ ಪೂಜಕರು, ದಿಗಂಬರ್ ಜೈನರು ಮತ್ತು ನಂತರದಲ್ಲಿ ಸಂಸ್ಕೃತವನ್ನು ಭಾಷೆಯಾಗಿ ಆಯ್ದುಕೊಂಡಿದ್ದ ವಿದ್ಯಾರ್ಥಿಗಳು. ಪಂಡಿತ್ ಲಲ್ತಾಪ್ರಾಸಾದ್ ಚರ್ತುವೇದಿ, ಪಂಡಿತ್ ತುಳಸಿರಾಮ್ ಪಾಥಕ್, ಪಂಡಿತ್ ಭನ್ವಾರಿಲಾಲ್ ಶರ್ಮಾ, ಹರಿಪ್ರಸಾದ್ ದುಬೆ, ರಾಯ್ ಬಹದ್ದೂರ್ ಪಂಡಿತ್ ಕನ್ಹಯ್ಯಲಾಲ್ ವಿದ್ಯಾರ್ಥಿವೇತನವು ಬೇರೆ ಬೇರೆ (ಕನ್ಯಕುಬ್ಜ, ಗೌರ್, ನಗರ್, ಕರದ್ ಮತ್ತು ಮುಂತಾದ) ಬ್ರಾಹ್ಮಣರಿಗೆ ಆದ್ಯತೆ ನೀಡುತ್ತಿತ್ತು.
ಕೆಲವು ವಿದ್ಯಾರ್ಥಿವೇತನಗಳು ನಿರ್ದಿಷ್ಟ ಸಮುದಾಯಗಳನ್ನು ಸೂಕ್ಷ್ಮವಾಗಿ ಹೊರಗಿಡುವ ವ್ಯವಸ್ಥೆಯನ್ನು ಹೊಂದಿದ್ದವು. ಉದಾಹರಣೆಗೆ, ಚತುರ್ವೇದಿ ಹರಿಭಜನ್ ವಿದ್ಯಾರ್ಥಿವೇತನವು ಕಲ್ಪಿಯ ಕನ್ಯಕುಬ್ಜ ಬ್ರಾಹ್ಮಣರಿಗೆ ಪ್ರಥಮ ಆದ್ಯತೆ ನೀಡಿದರೆ, ನಂತರದ ಆದ್ಯತೆಯನ್ನು ಜಲೌನಿನ ಮತ್ತು ಕೊನೆಯ ಆದ್ಯತೆಯನ್ನು ಆಗ್ರದ ಮತ್ತುಅವಧ್ ನಕನ್ಯಕುಬ್ಜಬ್ರಾಹ್ಮಣರಿಗೆ ನೀಡುತ್ತಿತ್ತು. ಅದನ್ನು ಪಡೆಯಲಿಕ್ಕೆ ವಿದ್ಯಾರ್ಥಿಯು ಕಡ್ಡಾಯವಾಗಿ ಬನಾರಸಿನ ಸಂಸ್ಕೃತ ಕಾಲೇಜಿನ ಪ್ರಥಮ ಅಥವಾ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡಿರಬೇಕು. ಈ ಮೇಲಿನ ಪ್ರಾಂತ್ಯಗಳಲ್ಲಿ ಸೂಕ್ತ ಕನ್ಯಕುಬ್ಜ ವಿದ್ಯಾರ್ಥಿಗಳಿಲ್ಲದಿದ್ದಲ್ಲಿ ಬೇರೆ ಪ್ರಾಂತ್ಯಗಳ ಕನ್ಯಕುಬ್ಜರನ್ನು ಪರಿಗಣಿಸಲಾಗುತ್ತಿತ್ತು. ಇವೆಲ್ಲಾ ಅಯ್ಕೆಗಳು ಮುಗಿದ ನಂತರವಷ್ಟೇ ಅನ್ಯ ಬ್ರಾಹ್ಮಣರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿತ್ತು. ಮಹಾಬಿರ್ ಪ್ರಸಾದ್ ದ್ವಿವೇದಿ ವಿದ್ಯಾರ್ಥಿವೇತನ (ಕನ್ಯಕುಬ್ಜರಿಗೆ) ಮತ್ತು ಝಾಲಾ ರಾಜಪೂತರಿಗೆ ನೀಡಲಾಗುತ್ತಿದ್ದಮಹಾರಾಜ್ ಸರ್ ಘನಶ್ಯಾಮ ಸಿಂಗ್ ಜೀ ವಿದ್ಯಾರ್ಥಿವೇತನವೂ ಕೂಡ ಅದೇ ರೀತಿಯ ಅಯ್ಕೆ ಪ್ರಕ್ರಿಯೆಯನ್ನು ಹೊಂದಿತ್ತು. ಮಾರ್ವಾಡಿ ಅಗರ್‌ವಾಲರಿಗೆ ನೀಡಲಾಗುತ್ತಿದ್ದ ಥನ್ಮಾಲ್ ಸಿಗ್ತಿಯಾ ವಿದ್ಯಾರ್ಥಿವೇತನವನ್ನು ಪಡೆಯುವ ವಿದ್ಯಾರ್ಥಿಯು ಆ ಅವಧಿಯಲ್ಲಿ ಬ್ರಹ್ಮಚಾರಿಯಾಗಿರಬೇಕು ಮತ್ತು ಭಗವದ್ಗೀತೆಯ ಪಠಣ ಮಾಡಬೇಕು ಎಂಬ ಷರತ್ತನ್ನೂ ಹೊಂದಿತ್ತು. ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಬ್ರಾಹ್ಮಣ, ಅಗರ್ವಾಲ್, ಮಹೇಶ್ವರಿ ಮತ್ತು ಖತ್ರಿ ಮಹಿಳೆಯರಿಗೆ ಮಾತ್ರವೆಂದೆ ಒಂದು ವಿದ್ಯಾರ್ಥಿವೇತನವನ್ನು ಹೊಂದಿತ್ತು. ಅಂದರೆ, ಸಾಮೂಹಿಕ ಪ್ರಯತ್ನಗಳಿಗೆ ಮೇಲ್ಜಾತಿ ಮಹಿಳೆಯರು ಕೂಡ ಒಂದು ಪ್ರತ್ಯೇಕ ಕೆಟಗರಿಯಾಗಿದ್ದರು. ಬಡ ಮತ್ತು ಯೋಗ್ಯ ಬೆಂಗಾಲಿ ಹುಡುಗರಿಗೆ (ರಾಮಚಂದ್ರ ಮುಖರ್ಜಿ ವಿದ್ಯಾರ್ಥಿವೇತನ), ಒಡಿಯ ಬ್ರಾಹ್ಮಣ ಹುಡುಗರಿಗೆ, ಕಾಯಸ್ತ ಪದವಿಧರರಿಗೆ (ಶಂಕರ ಲಕ್ಷ್ಮಿ ವಿದ್ಯಾರ್ಥಿವೇತನ), ಬಿಸ ಅಗರ್ವಾಲ್ ವಿದ್ಯಾರ್ಥಿಗಳಿಗೆ (ಬಸುದೇವ್ ಸಹಾಯ್ ಪದಕ) ಮುಂತಾದವರಿಗೂ ವಿದ್ಯಾರ್ಥಿವೇತನವನ್ನು ವಿವಿಧ ವಿದ್ಯಾರ್ಥಿವೇತನಗಳು ದೊರೆಯುತ್ತಿದ್ದವು. ವಿದ್ಯಾರ್ಥಿಗಳ ಉಪಜಾತಿಗಳನ್ನು ಮತ್ತು ಪ್ರಾಂತ್ಯವನ್ನು ಪರಿಗಣಿಸದೆಯೆ, ಬಡ ಮತ್ತು ಯೋಗ್ಯಬ್ರಾಹ್ಮಣರಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿವೇತನಗಳು, ದತ್ತಿ ಪುರಸ್ಕಾರಗಳು ಬಹಳಷ್ಟಿದ್ದವು ಮತ್ತು ಇವನ್ನು ಬಹಳ ಬಾರಿ ಸಂಸ್ಕೃತ, ಓರಿಯಂಟಲ್ ಕಲಿಕೆ, ಥಿಯೋಲಜಿ, ಅದ್ವೈತ ತತ್ವಶಾಸ್ತ್ರ ಮುಂತಾದ ವಿಷಯಗಳ ಸೋಗಿನಲ್ಲಿ ನೀಡಲಾಗುತ್ತಿತ್ತು. ಇವುಗಳ ಪಟ್ಟಿಯಲ್ಲಿ, ದೇವಿ ಬಸ್ಮತೋಖೊಯೆರ್ ವಿದ್ಯಾರ್ಥಿವೇತನ ಮಾತ್ರವೇ ಇಂದು ಒ.ಬಿ.ಸಿ ಪಟ್ಟಿಯಲ್ಲಿ ಸೇರುವ ಕಲ್ವರ್ಜಾತಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಗಿರಿಧರ್ ಲಾಲ್ ಬಾತ್ರ ದತ್ತಿಯು ಡಿಪ್ರೆಸ್ಡ್ಕ್ಲಾಸಿಗೆಸೇರಿದ್ದ ʼಡಾಯಿಸ್ʼರನ್ನು ತರಬೇತಿಗೊಳಿಸಲು ನೀಡಲಾಗುತ್ತಿತ್ತು.
ಅಂತೆಯೇ, ಜಾತಿಯಾಧಾರಿತ ದತ್ತಿಗಳನ್ನು ಬಾಂಬೆ ವಿಶ್ವವಿದ್ಯಾಲಯ, ನಾಗಪುರ ವಿಶ್ವವಿದ್ಯಾಲಯ, ಮದ್ರಾಸ್ ವಿಶ್ವವಿದ್ಯಾಲಯ ಮುಂತಾದ ಕಡೆಗಳಲ್ಲಿಯೂ ಕಾಣಬಹುದಾಗಿದೆ. ಪರಮಾಧಿಕಾರದ ಕಟ್ಟುಕಥೆಯನ್ನು ಆರ್ಥಿಕವಾಗಿ ಕಾಪಾಡಲು ಮತ್ತು ಮುಂದುವರೆಸಲು ಪಾರಂಪರ್ಯವಾಗಿ ಪಡೆದ ಆಸ್ತಿಯನ್ನು ಅಥವಾʼ ಮೂರ್ತಲಾಭ (tangible gains)ʼವು ಅತ್ಯಗತ್ಯವೆನ್ನುತ್ತಾರೆ ಅನು ರಾಮದಾಸ್. ಬ್ರಾಹ್ಮಣರಿಗೆ ನೀಡಲಾಗುವ ವಿದ್ಯಾರ್ಥಿವೇತನವನ್ನು ʼಜಾತಿಸವಲತ್ತುʼ ಎಂದುತಿ ಳಿಯಬಾರದು. ಮತ್ತೊಮ್ಮೆ ರಾಮದಾಸರ ಅರ್ಥೈಸುವಿಕೆಯನ್ನೇ ಎರವಲು ಪಡೆಯುವುದಾದರೆ, ಇದು ಜಾತಿವ್ಯವಸ್ಥೆಯಲ್ಲಿ ಬೇರ್ಪಡಿಸಲಾಗದ ಕಾನೂನು ಬದ್ಧ ಹಕ್ಕುಗಳಾಗಿವೆ. ದ್ವಿಜಜಮೀನುದಾರರು ಅಥವಾ ಸರ್ಕಾರಿ ಹುದ್ದೆಗಳಲ್ಲಿರುವವರು ಸಂಸ್ಕೃತದ ಮೇಲೆ ಅಥವಾ ಬ್ರಾಹ್ಮಣರ ಮೇಲೆ ಮಾಡುವ ಹೂಡಿಕೆಯನ್ನು ಪ್ರಾಯಶ್ಚಿತ್ತಾತ್ಮಕ ಆಧ್ಯಾತ್ಮಿಕ ಕಾರ್ಯವೆಂದೂ, ಬ್ರಾಹ್ಮಣ್ಯದಲ್ಲಿನ ಮೋಕ್ಷದ ಹಾದಿಯೆಂದೂ ಅರಿಯಬೇಕು. ಇದು ಕಿತ್ತುಕೊಳ್ಳಬಹುದಾದ ಸವಲತ್ತು ಮಾತ್ರವಾಗಿರದೆ, ಜಾತಿವ್ಯವಸ್ಥೆಯ ಭಾಗವೇ ಆಗಿದೆ.
ಬ್ರಾಹ್ಮಣರು ಮತ್ತವರ ಸಂಗಡಿಗರು ಶೇಖರಿಸಿಟ್ಟುಕೊಂಡ ಆಸ್ತಿ-ಸಂಪತ್ತು ಮತ್ತದನ್ನು ವಸಾಹತುಕಾಲೀನ ಆಧುನಿಕತೆಯ ಅಗತ್ಯತೆಗೆ ಅನುಗುಣವಾಗಿ; ಸಂಘಟಿತರಾಗಿ, ಜಾತಿಯಾಧಾರದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದು ವಸಾಹತೋತ್ತರ ಭಾರತದಲ್ಲಿಯೂ ಕೂಡ ಬ್ರಾಹ್ಮಣರ ಮತ್ತವರ ಸಂಗಡಿಗರ ರಾಷ್ಟ್ರೀಯವರ್ಗವೊಂದರ ಅಧಿಪತ್ಯವನ್ನು ಖಚಿತಪಡಿಸಿತು. ತಮ್ಮ ಮಕ್ಕಳನ್ನು.ದೈಹಿಕ ಶ್ರಮ ಬೇಡುವ ಕೆಲಸಗಳಿಂದ ನಿರಂತರವಾಗಿ ಮುಕ್ತವಾಗಿರಿಸಿ, ಈ ಮೂಲಕ ಅವರ ಉನ್ನತ ಶಿಕ್ಷಣಕ್ಕೆ ಅನುವು ಮಾಡಿಕೊಡುವುದು ಈಗಲೂ ಸಣ್ಣ ಸಮುದಾಯಕ್ಕೇ ಇರಿಸಿದ ಮೀಸಲಾಗಿದೆ. ಜಾತಿ ವ್ಯವಸ್ಥೆಯ ಮೇಲ್ಪದರಲ್ಲಿದ್ದ, ಸ್ವತಂತ್ರೋತ್ತರದ ಕೆಲವು ದಶಕಗಳಲ್ಲಿ ನೆಮ್ಮದಿಯ ಸರ್ಕಾರಿ ಕೆಲಸಗಳ ಏಕಸ್ವಾಮ್ಯತೆಯನ್ನು ಸಾಧಿಸಿದವರು ತಮ್ಮ ಮಕ್ಕಳನ್ನು ಹೊಸರೀತಿಯಲ್ಲಿ ಆಸ್ತಿ-ಸಂಪತ್ತಿನ ಶೇಖರಣೆಗಳಲ್ಲಿ ತೊಡಗಿಸಿಕೊಳ್ಳಲು ಅನುವುಮಾಡಿಕೊಟ್ಟರು. ಕೈಯಿಂದ ಕೈಗೆ ವರ್ಗವಾಗಿದ ಭೂಮಿಯು ನಗರದಲ್ಲಿನಸ್ವತ್ತಾಗಿ. ಕಾಲೇಜುಡಿಗ್ರಿಗಳಾಗಿ, ಪಿ.ಹೆಚ್.ಡಿ ಮತ್ತು ಇನ್ನಿತರೇ ಬಂಡವಾಳಗಳಾಗಿ ಮಾರ್ಪಟ್ಟಿತು. ಸರ್ಕಾರಿಹುದ್ದೆಗಳಲ್ಲಿರುವ ವಿದ್ವಾಂಸರುಗಳು ಬಹಳಷ್ಟು ಬಾರಿʼಇಂಡಿಯನ್ ಮಿಡಲ್ ಕ್ಲಾಸ್ʼಎಂದೇ ಕರೆಯಲಾಗುವ ವರ್ಗಕ್ಕೇ ಸೇರುತ್ತಾರೆ ಎಂಬುದು ಆಶ್ಚರ್ಯಕರವೇನಲ್ಲ.
೧೯೩೧ ರ ಜನಗಣತಿಯ ವರದಿ (ವಾಲ್ಯೂಮ್ ೧. ಸಾಕ್ಷರತೆಯ ಬಗೆಗಿನ ಅಧ್ಯಾಯ) ಯಿಂದ ಆಯ್ದುಕೊಂಡ ವಿವಿಧಜಾತಿಗಳ ಜನಸಂಖ್ಯೆಯನ್ನುಇಲ್ಲಿ ಕಾಣಬಹುದಾಗಿದೆ:
೧೦೦೦೦ ಜನರಲ್ಲಿಆಂಗ್ಲಭಾಷಾ ಸಾಕ್ಷರರ ಸಂಖ್ಯೆ:
ಜಾತಿ | ಗಂಡಸರು | ಮಹಿಳೆಯರು | ||
ಬೈದ್ಯ | – | – | 5,279 | 1,373 |
ಕಾಯಸ್ತ | – | – | 2,418 | 293 |
ಖತ್ರಿ | – | – | 1,320 | 109 |
ಬ್ರಾಹ್ಮಣ | – | – | 1,073 | 86 |
ನಾಯರ್ | – | – | 693 | 137 |
ಲುಶೈ | – | – | 160 | 9 |
ರಜಪೂತ್ | – | – | 135 | 5 |
ವಿಶ್ವಬ್ರಾಹ್ಮಣ | – | – | 86 | 4 |
ಜಾಟ್ | – | – | 70 | 3 |
ಕುಂಬಿ | – | – | 69 | 2 |
ಮಾಲಿ | – | – | 53 | 2 |
ಒರಾವುನ್ | – | – | 46 | 9 |
ಟೇಲಿ | – | – | 48 | 0.5 |
ಮೋಮಿನ್ | – | – | 43 | 6 |
ಪಾರಾಯಣ್ | – | – | 25 | 3 |
ಯಾದವ | – | – | 23 | 1 |
ಮಹರ್ | – | – | 15 | 0.8 |
ಕುಮ್ಹಾರ್ | – | – | 16 | 0.5 |
ಬಲೋಚ್ | – | – | 17 | 0.4 |
ದೊಮ್ | – | – | 9 | 0.9 |
ಭಂಗಿ | – | – | 6 | 2 |
ಗೊಂಡ್ | – | – | 4 | 0.4 |
ಚಮಾರ್ | – | – | 3 | 0.3 |
ಭಿಲ್ | – | – | 1 |
ಒಂದು ಮಿಲಿಯನ್ ಜನರಲ್ಲಿಅಕ್ಷರಸ್ಥರ ಸಂಖ್ಯೆ
ಜಾತಿಅಥವಾಬುಡಕಟ್ಟು | ಗಂಡಸರು | ಹೆಂಗಸರು | ||
ಬೈದ್ಯ | – | – | 782 | 486 |
ನಾಯರ್ | – | – | 603 | 276 |
ಕಾಯಸ್ತ | – | – | 607 | 191 |
ಖತ್ರಿ | – | – | 451 | 126 |
ಬ್ರಾಹ್ಮಣ | – | – | 437 | 96 |
ಲುಶೈ | – | – | 260 | 31 |
ವಿಶ್ವಬ್ರಾಹ್ಮಣ | – | – | 197 | 21 |
ರಜಪೂತ್ | – | – | 153 | 13 |
ಕುರ್ಮಿ | – | – | 126 | 12 |
ಟೇಲಿ | – | – | 114 | 6 |
ಮಾಲಿ | – | – | 80 | 4 |
ಮೋಮಿನ್ | – | – | 59 | 8 |
ಪಾರಾಯಣ್ | – | – | 56 | 6 |
ಜಾಟ್ | – | – | 53 | 6 |
ಮಹರ್ | – | – | 44 | 4 |
ಒರಾವುನ್ | – | – | 35 | 11 |
ಯಾದವ | – | – | 39 | 2 |
ಕುಂಬಾರ | – | – | 35 | 4 |
ಭಂಗಿ | – | – | 19 | 2 |
ಬಲೋಚ್ | – | – | 19 | 1 |
ದೊಮ್ | – | – | 16 | 2 |
ಗೊಂಡ್ | – | – | 16 | 1 |
ಭಿಲ್ | – | – | 11 | 1 |
ಚಮಾರ್ | – | – | 10 | 1 |
ಬೈದ್ಯರು, ಕಾಯಸ್ತರು, ನಾಯರುಗಳು, ಖತ್ರಿಗಳು ಮತ್ತು ಬ್ರಾಹ್ಮಣರು ೧೯೩೧ ರ ಸಾಕ್ಷರತೆ ಮತ್ತು ಆಂಗ್ಲ ಭಾಷಾ ಸಾಕ್ಷರತೆಗಳ ಪಟ್ಟಿಗಳಲ್ಲಿ ಅಗ್ರಸ್ಥಾನವನ್ನು ಪಡೆದಿರುವುದನ್ನು ಇಲ್ಲಿ ಕಾಣಬಹುದಾಗಿದೆ. ವಸಾಹತೋತ್ತರ ಕಾಲದಲ್ಲಿ ಇದೇ ಜಾತಿಗಳಿಗೆ ಸೇರಿದ, ನಿರ್ಣಾಯಕ ಪಾತ್ರವಹಿಸಿದ ಅಧಿಕಾರಿಗಳ ಕೃಪಾಕಟಾಕ್ಷದಿಂದಾಗಿ ನಾವು ಇಂದು ಇಂತಹ ಯಾವುದೇಪಟ್ಟಿಯನ್ನು ನೋಡಲಿಕ್ಕೆ ಸಾಧ್ಯವೇ ಇಲ್ಲ! ಯಾವುದೇ ಕಾರಣಕ್ಕಾದರೂ ಆಗಲಿ, ಬ್ರಿಟಿಷರಿಗೆ, ಜಾತಿ ಮತ್ತು ಸಮುದಾಯಗಳು ಜಾತಿಗಳ ಶ್ರೇಯಾಂಕದಲ್ಲಿ ಯಾವುದೇ ಸ್ಥಾನವನ್ನು ಹೊಂದಿದ್ದರೂ ಕೂಡ, ಅವನ್ನು ತುಲನೆ ಮಾಡುವ ಧೈರ್ಯವಿತ್ತು. ಈ ಟೇಬಲ್ಲುಗಳನ್ನು ನಾವು ಇಂದಿನ ದಿನಮಾನಕ್ಕೆ ಹೊಂದುವಂತೆ ಮತ್ತೊಮ್ಮೆ ಹೊಸದಾಗಿ ಕಲ್ಪಿಸಿಕೊಂಡರೆ ಓ.ಬಿ.ಸಿ.ಗಳು, ಎಸ್.ಸಿಗಳು, ಎಸ್.ಟಿಗಳು ಮತ್ತಿತರರಿಗೆ ಪ್ರತ್ಯೇಕಪಟ್ಟಿಗಳಿರುತ್ತಿದ್ದವು! ಸ್ಪಷ್ಟವಾಗಿ, ಓ.ಬಿ.ಸಿ. ಗಳಲ್ಲಿ ಆಂಗ್ಲಭಾ಼ಷೆ ಮಾತಾಡುವ ಪ್ರಾಬಲ್ಯವನ್ನು ಹೊಂದಿದ್ದ ವಿಶ್ವಬ್ರಾಹ್ಮಣ ಅಥವಾ ವಿಶ್ವಕರ್ಮಜಾತಿಗಳು (೦.೮೬%); ಅಂತೆಯೇ, ಎಸ್.ಸಿಗಳಲ್ಲಿ ಮಹರರು (೦.೧೫%); ಮತ್ತು ಎಸ್.ಟಿಗಳಲ್ಲಿ ಒರಾವುನ್ನರ (೦.೪೬%) ಹೆಸರುಗಳಿರುತ್ತಿದ್ದವು ಮತ್ತು ಮುಂಚೂಣಿಯಲ್ಲಿದ್ದ ಇತರರಿಗೆ ಹೆಸರಿಲ್ಲದಂತಾಗುತ್ತಿತ್ತು.
ಆಧುನಿಕ ಉನ್ನತ ಶಿಕ್ಷಣವು ಬಡ ಮತ್ತು ಯೋಗ್ಯ ಬ್ರಾಹ್ಮಣನನ್ನು ಯಾವಾಗಲೂ ತನ್ನ ಕೇಂದ್ರ ಬಿಂದು ಆಗಿರಿಸಿಕೊಂಡಿರುವದನ್ನು ನಾವು ಇಲ್ಲಿ ಗಮನಿಸಬೇಕು. ಮೇಲೆ ನೀಡಲಾದ ದಾಖಲೆಗಳನ್ನು ಮತ್ತು ಕ್ರಿಶ್ಚಿಯನ್ ಮಿಷನ್ನಿನ ಪತ್ರಗಾರವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಕೆಳಗೆ ನೀಡಲಾಗಿರುವ ವಸಾಹತೋತ್ತರ ಮಿಷನ್ನಾದ ಕ್ರಿಶ್ಚಿಯನ್ ಇಂಡಿಯಾ ದ ದಾಖಲೆಯೊಂದರ ಪಠ್ಯವನ್ನು ಗಮನಿಸಿ:
ನಾವು ಇಂದೇ ಶಿವನ ಶ್ರೀಕ್ಷೇತ್ರಕ್ಕೆ ಹಿಂತಿರುಗಬೇಕು. ಸಾವಿರಾರು ಮನೆಗಳ ಅಸಮಾನಸಾಗರವನ್ನು ಬಂಡೆಯೊಂದರ ಮೇಲಿರುವ ದೇವಾಲಯವು ನಿಯಂತ್ರಿಸುತ್ತದೆ. ಆ ದೇವಾಲಯವಿರುವ ಬಂಡೆಯ ಬುಡದಲ್ಲಿ ಮತ್ತದರ, ಸುತ್ತ-ಮುತ್ತವಿರುವ ಬ್ರಾಹ್ಮಣರ ಅಗ್ರಹಾರದ ನಡುವೆ ಸಂತ. ಜೋಸೆಫರ ಕಾಲೇಜು ತಲೆಯೆತ್ತಿ ನಿಂತಿದೆ. ಇದರ ಕಾಂಪೌಂಡಿನಲ್ಲಿ ಶಾಲಾಕಟ್ಟಡಗಳು, ಲ್ಯಾಬೊರೇಟರಿಗಳು, ವಿದ್ಯಾರ್ಥಿನಿಲಯಗಳು, ತಲಾ ಒಂದಿರುವ ಚರ್ಚು ಮತ್ತು ಮೊನ್ಯಾಸ್ಟರಿಗಳೊಂದಿಗೆಯೇ ಆಟದ ಮೈದಾನಗಳೂ ಸೇರಿವೆ. ೧೮೪೪ ರಲ್ಲಿ ನೆಗಪಟಂನಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯವನ್ನು ೧೮೮೩ ರಲ್ಲಿ, ಇಂದು ಅದು ಕಾರ್ಯನಿ ರ್ವಹಿಸುತ್ತಿರುವ ಸ್ಥಳಕ್ಕೆ ವರ್ಗಾಯಿಸಲಾಯಿತು. ಫಾದರ್ ಡಿನೊಬಿಲಿ ಅವರ ಕನಸು ನನಸಾಯಿತು; ಇಂದು, ಕ್ರಿಶ್ಚಿಯನ್ನರು ನಡೆಸುವ ಶಾಲೆಯೊಂದು ಹಿಂದೂ ಬ್ರಾಹ್ಮಣ್ಯದ ಹೃದಯಭಾಗದಲ್ಲೇ ನೆಲೆಸಿದೆ. ಕ್ಯಾಥೊಲಿಕ್ ಪಾದ್ರಿಗಳು ಮತ್ತು ದೈವೀಪುತ್ರರು (ಬ್ರಾಹ್ಮಣರ) ನಡುವೆ ಸಂಪರ್ಕಗಳು ಮತ್ತು ಸ್ನೇಹಸಂಬಂಧಗಳು ಹುಟ್ಟಿಕೊಂಡಿವೆ. ಇಂದು, ಸಂತ. ಜೋಸೆಫರಶಾಲೆಯಲ್ಲಿ ೧೫೦೦ ವಿದ್ಯಾರ್ಥಿಗಳಿದ್ದು, ವಿಶ್ವವಿದ್ಯಾಲಯದಲ್ಲಿ ೧೯೦೦ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ, ೧೩೦೦ ಕ್ರಿಶ್ಚಿಯನ್ನರಿದ್ದರೆ, ಉಳಿದವರೆಲ್ಲರೂ ಹಿಂದೂಗಳು, ಅದರಲ್ಲೂ ಬ್ರಾಹ್ಮಣರೇ ಹೆಚ್ಚು […]
ಭಾರತದಲ್ಲಿಆಧುನಿಕ ಶಿಕ್ಷಣವು ʼಬ್ರಾಹ್ಮಣರ ಸಾಮಿಪ್ಯವನ್ನುʼ ತ್ಯಜಿಸಲೇ ಇಲ್ಲ. ಕ್ರಿಶ್ಚಿಯನ್ ಮಿಷ ನರಿಗಳನ್ನು ಬ್ರಾಹ್ಮಣರು ಮತ್ತವರ ಸಂಗಡಿಗರನ್ನು ಬದಲಾಗುತ್ತಿದ್ದ ಕಾಲಮಾನಕ್ಕೆ ಹೊಂದಿಸಲು ಶ್ರದ್ದಾಪೂರ್ವಕವಾಗಿ ದುಡಿದ, ಬಿಟ್ಟುಕೊಡದ ಕಥನವಾಗಿಯೂ ನಾವು ಅರ್ಥೈಸಬಹುದು. ಬಾಬಾಸಾಹೇಬರು ಇದೇ ವಿಷಯವನ್ನೇ ತಮ್ಮ ಪ್ರಬಂಧವಾದʼಕ್ರಿಶ್ಚಿಯನೈಸಿಂಗ್ ಇಂಡಿಯಾʼ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ಮಂಡಿಸಿದ್ದಾರೆ. ಮೇಲಿನ ಪಠ್ಯದಲ್ಲಿ ಕಂಡಂತೆ, ಬ್ರಾಹ್ಮಣರೊಂದಿಗೆ ಸನಿಹವಾಗಿದ್ದು ಮತ್ತವರ ಜೊತೆ ಸಾಧಿಸಿದ ಸಂಪರ್ಕದಿಂದಾಗಿ ವಿಶ್ವವಿದ್ಯಾಲಯವು ಕೂಡ ಬ್ರಾಹ್ಮಣರಕೇರಿಯ ಬಳಿಯೇ ಸ್ಥಾಪಿತವಾಯಿತು. ಬ್ರಾಹ್ಮಣರು ಮತ್ತವರ ಸಂಗಡಿಗರೇ ಭಾರತದ ಶಾಶ್ವತ ಬುದ್ಧಿಜೀವಿಗಳ ವರ್ಗವೆಂಬುದಕ್ಕೆ ಕ್ರಿಶ್ಚಿಯನ್ಮಿಷನರಿಗಳು ಇನ್ನಷ್ಟೂ ಇಂಬುಕೊಟ್ಟರು. ಈ ಸಂರಚನೆಯನ್ನು ಪ್ರಶ್ನಿಸುವ ಅಥವಾ ಕೆಡವುವ ಯಾವ ಪ್ರಯತ್ನಗಳೂ ನಡೆಯಲಿಲ್ಲ. ಈ ಶಾಶ್ವತತೆಯನ್ನು ಸ್ವತಂತ್ರಭಾರತದ ಸಂವಿಧಾನವೂ ಪ್ರಶ್ನಿಸುವುದಿಲ್ಲ.
ಉಪಸಂಹಾರದ ಬದಲಿಗೆ:
ಭಾರತದಲ್ಲಿ ಬೇರಾರಿಂದಲೂ ಸಾಧ್ಯವಾಗದಂತೆ ಬ್ರಾಹ್ಮಣರು ಮತ್ತವರ ಸಂಗಡಿಗರು ಸೇರಿ, ಸುಗಮವಾಗಿ ಕಾರ್ಯ ನಿರ್ವಹಿಸುವ ಸಂಪರ್ಕಜಾಲ ಮತ್ತು ಅವರದ್ದೇ ಆದ ಭಾಷೆಯೊಂದಿಗೆ ಒಂದು ರಾಷ್ಟ್ರೀಯವರ್ಗವಾಗಿ ಮಾರ್ಪಟ್ಟರು, ಪಶ್ಚಿಮಭಾರತದ ದಕ್ಷಿಣವಿದ್ಯಾರ್ಥಿವೇತನದ ಪ್ರಕರಣವು ಈ ರಾಷ್ಟ್ರೀಯವರ್ಗದ ರಚನೆಯ ಬಗ್ಗೆ ಬೆಳಕು ಚೆಲ್ಲಿದೆ. ಈ ಸಣ್ಣಲೇಖನವು ೧೯ನೇಯ ಮತ್ತು ೨೦ನೇಯ ಶತಮಾನದಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಿರ್ದಿಷ್ಟ ಬ್ರಾಹ್ಮಣಸಮುದಾಯಗಳ ವಿದ್ಯಾರ್ಥಿಗಳಿಗೆ (ಇತರೆ ದ್ವಿಜರನ್ನೂ ಸೇರಿದಂತೆ) ನೀಡಲಾಗುತ್ತಿದ್ದ ವಿದ್ಯಾರ್ಥಿವೇತನಗಳ ಒಂದುಝಲಕ್ಕನ್ನಷ್ಟೇ ನೀಡಿತು. ಈ ನಿಟ್ಟಿನಲ್ಲಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಒಂದು ಮಾದರಿಯಾಗಿ ನಿಲ್ಲುತ್ತದೆ. ಉನ್ನತ ಶಿಕ್ಷಣ ಮತ್ತು ಕಲಿಕೆಯು ಕೂಡ ಬ್ರಾಹ್ಮಣರ ಪಾಲಿಗೆ ನ್ಯಾಯಾಂಗ ಮತ್ತು ಬ್ಯೂರೋಕ್ರಸಿಎಂತೆಯೇ ರಾಷ್ಟ್ರೀಕರಣ (nationalisation) ಕ್ಕೆ ಒಳಗಾಗಲೇಬೇಕಾದ ಕ್ಷೇತ್ರವಾಯಿತು. ʼಬಡಸವರ್ಣʼರಿಗೆ ನೀಡಲಾಗುತ್ತಿರುವ ಹೊಸ ಮೀಸಲಾತಿಯನ್ನೂ ಕೂಡ ಈ ಜಾತೀಯ ಪ್ರಯತ್ನಗಳ ಹಿನ್ನಲೆಯಲ್ಲಿಯೇ ಅರ್ಥೈಸಬೇಕು. ಬಡಬ್ರಾಹ್ಮಣನ ಹೊರೆಯನ್ನು ಜಾತಿಯ ವ್ಯವಸ್ಥೆಯಲ್ಲಿರುವ ಎಲ್ಲರೂ; ಅದರಲ್ಲೂ ಪ್ರಮುಖವಾಗಿ ಬಹುಜನರೇ ಹೊತ್ತಿದ್ದಾರೆ.
Notes
- E.A.H. Blunt, ‘The System of Caste Government’. The Caste System of Northern India, Isha Books: Delhi, pp.104-131.
- Travancore State Manual, 1906, p.436.
- Ramdas, Anu. Mythicizing Materiality: Self-racialization of the Brahmin. Prabuddha: Journal of Social Equality, [S.l.], v. 2, n. 1, p. 75-86, Nov. 2018. ISSN 2576-2079. Date accessed: 24 Jan. 2019.
- Ernest Wood. An Englishman Defends Mother India, A Complete Constructive Reply to “Mother India”, by Ernest Wood, Publishers: Ganesh Co., Madras, 1929, p. 247.
- Narender Kumar Sharma, ‘Institution of Dakshina and its Impact on Sanskrit Education’ Linguistic and Educational Aspirations under a Colonial System: A Study of Sanskrit Education during British Rule in India, Concept Publishing House: Delhi, 1976. pp.38-62.
- Bombay University Calendar, 1865-66, Bombay: Thacker, Vining & Co. pp. 130-132.
- Ibid
- See for details of Dakshina Fellowship in Pune University.
- Nandini Sundar, ‘In the Cause of Anthropology: Life and Work of IrawatiKarve’, Anthropology in the East, pp.367-368.
- Lucia Turn Bull, ‘Sri Ramakrishna Bhandarkar’, Some Great Lives of Modern India, Longmans Green and Co. Ltd: Calcutta, 1936, pp.89-90
- Mody, H.P., Sir Pherozeshah Mehta: A Political Biography-Vol 1, The Times Press: Bombay, 1921, p.7; The Eagle: A Magazine, Vol XXIII, Metcalfe and Co. Ltd., Rose Crescent, 1902, p.132.
- Mohammad Shabir Khan, Tilak and Gokhale: A Comparative Study, Ashish Publishing House: New Delhi, 1992, p.10.
- Agra University Calendar 1945-46, Newul Kishor Press: Lucknow, pp.473-476.
- University of Lucknow Calendar 1933-34, Newul Kishor Press: Lucknow, pp. 260-262.
- Benaras Hindu University Calendar 1938-39, pp.407-461
- F.A. Plattner & B. Moosbrugger, Christian India, Thames and Hudson: London, 1957, pp.99-100
– ನಿಧಿನ್ ಶೋಭನ, ಕಲಾವಿದ ಮತ್ತು ಬರಹಗಾರ
ಕನ್ನಡಾನುವಾದ: ಶಶಾಂಕ್ ಎಸ್ ಅರ್,
ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ, ಬೆಂಗಳೂರಿನಲ್ಲಿ
ಪಿ.ಹೆಚ್.ಡಿ ಸಂಶೋಧನಾರ್ಥಿ. ಜನಪರ ಚಳುವಳಿಗಳಲ್ಲಿಆಸಕ್ತಿ.