‘ದಲಿತ್ ಸಿನಿಮಾ, ದಲಿತ ರಂಗಭೂಮಿ’

‘ದಲಿತ್ ಸಿನಿಮಾ, ದಲಿತ ರಂಗಭೂಮಿ’

 ವಿಎಲ್ನರಸಿಂಹಮೂರ್ತಿ

ಕಳೆದ ಹತ್ತು ದಿನಗಳಿಂದ ಫೇಸ್‌ಬುಕ್‌ನ ನನ್ನ ಗೆಳೆಯ-ಗೆಳತಿಯರ ವಾಲುಗಳು ‘ತಂಗಲಾನ್’ ಮತ್ತು ‘ವಾಳೈ’ ಸಿನಿಮಾಗಳ ಕುರಿತು ಮೆಚ್ಚುಗೆ, ಪ್ರಶಂಸೆ, ಚರ್ಚೆಗಳಿಂದ ತುಂಬಿಹೋಗಿವೆ. ತಮಿಳಿನ ಪ. ರಂಜಿತ್ ಮತ್ತು ಮಾರಿ ಸೆಲ್ವರಾಜ್ ಸಿನಿಮಾಗಳ ಬಗ್ಗೆ ಯಾಕೆ ಈ ಮಟ್ಟದ ಚರ್ಚೆ ಆಗುತ್ತಿದೆ ಎನ್ನುವುದಕ್ಕೆ ಕಾರಣ ಅವರು ಕೇವಲ ‘ತಮಿಳು’ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಲ್ಲ. ಈ ಇಬ್ಬರೂ ಭಾರತೀಯ ಸಿನಿಮಾರಂಗ ನೂರು ವರ್ಷಗಳ ತನ್ನ ಇತಿಹಾಸದಲ್ಲಿ ‘ಜಾತಿ’ ಎನ್ನುವ ಭಾರತೀಯ ಸಮಾಜದ ವಾಸ್ತವವನ್ನು ಮರೆಮಾಚಿದ್ದರ ಹಿಂದಿನ ರಾಜಕಾರಣದ ಮೇಲೆ ಸೇಡು ತೀರಿಸಿಕೊಳ್ಳುವವರಂತೆ ಮಾಡುತ್ತಿರುವ ‘ಜಾತಿ ಪ್ರಶ್ನೆ’ಯ ಸಿನಿಮಾ ರಾಜಕಾರಣದ ಕಾರಣಕ್ಕೆ.

ಕಳೆದ ಹತ್ತು ವರ್ಷಗಳಲ್ಲಿ ಮರಾಠಿಯ ನಾಗರಾಜ್ ಮಂಜುಳೆ, ತಮಿಳಿನ ಪ. ರಂಜಿತ್ ಮತ್ತು ಮಾರಿಸೆಲ್ವರಾಜ್ ತರದ ನಿರ್ದೇಶಕರ ಸಿನಿಮಾಗಳು ಕೇವಲ ಕರ್ನಾಟಕದಲ್ಲಲ್ಲಷ್ಟೇ ಅಲ್ಲ ಇಡೀ ಭಾರತದ ಮಟ್ಟದಲ್ಲಿ, ಅಷ್ಟೇಕೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಗೆ ಒಳಗಾಗುತ್ತಿವೆ. ಅಕಡೆಮಿಕ್ ಮತ್ತು ಬೌದ್ಧಿಕ ವಲಯ ಕೂಡ ಇವರ ಸಿನಿಮಾಗಳನ್ನು ಜಾತಿ ಪದ್ಧತಿಯನ್ನು ಅರ್ಥಮಾಡಿಕೊಳ್ಳುವ ಪಠ್ಯಗಳಾಗಿ ನೋಡುತ್ತಿವೆ. ಈ ಮೂವರ ಸಿನಿಮಾಗಳು ಕಟ್ಟಿಕೊಡುತ್ತಿರುವ Anti-Caste aesthetics, ಮುರಿಯುತ್ತಿರುವ Upper caste gaze ನ ಅರಿವಿರುವ ಯಾರೂ ಇವರನ್ನು ಭಾಷೆಗೆ ಕಟ್ಟಿಹಾಕಲಾರರು. ‘ತಂಗಲಾನ್’, ‘ವಾಳೈ’ ತರದ ಸಿನಿಮಾಗಳನ್ನು ಕೇವಲ ತಮಿಳು ಭಾಷೆಯ ಚಿತ್ರಗಳು ಅಂತ ಸೀಮಿತಗೊಳಿಸಿ ಮಾತನಾಡುವುದು ಈ ಸಿನಿಮಾಗಳ Artistic value, ideology, political understanding ಅನ್ನು ನಗಣ್ಯಗೊಳಿಸಿದಂತೆ ಅಥವಾ ಈ ಸಿನಿಮಾಗಳು ಎತ್ತುತ್ತಿರುವ ಜಾತಿ ಅಸಮಾನತೆಯ ಪ್ರಶ್ನೆಗಳಿಗೆ ಕುರುಡಾದಂತೆ.

ಕನ್ನಡವನ್ನು ಕೇವಲ ‘ಭಾಷೆ’ ಅಷ್ಟೇ ಅಂತ ಸೀಮಿತಗೊಳಿಸಿ ಮಾತನಾಡುವುದು. ಕನ್ನಡ ಸಿನಿಮಾದ ಬಗ್ಗೆ ಅಭಿಮಾನ ಇದ್ದರೆ ಮಾತ್ರ ಕನ್ನಡಿಗರಾಗುವುದಕ್ಕೆ ಲಾಯಕ್ಕು ಎನ್ನುವ toxic ಚಿಂತನೆಗಳನ್ನು ಹರಿಬಿಡುವುದು ಕನ್ನಡ ಮಾತನಾಡುವ ಸಮುದಾಯಗಳಿಗೆ ಮಾಡುವ ಅವಮಾನ. ಕನ್ನಡ ಮಾತಾನಾಡುವ ಸಮುದಾಯಗಳು ಎದುರಿಸುವ ಎಷ್ಟೋ ಸಮಸ್ಯೆಗಳ ಬಗ್ಗೆ ಕುರುಡಾಗಿದ್ದುಕೊಂಡು ಕೇವಲ ಕನ್ನಡ ಸಿನಿಮಾ ಉಳಿಸುವ ಹೋರಾಟದ ಮಾತನಾಡುವವರನ್ನು ಕಂಡರೆ ಉರಿದು ಹೋಗುತ್ತದೆ.

‘ತಂಗಲಾನ್’, ‘ವಾಳೈ’ ತರದ ಸಿನಿಮಾಗಳು ಯಾವ ಭಾಷೆಯಲ್ಲಿ ಬಂದರೂ ಅವುಗಳಿಗೆ ಇಷ್ಟೇ ಮಹತ್ವ ಇದೆ. ಯಾಕೆಂದರೆ ಈ ಸಿನಿಮಾಗಳ ಮಹತ್ವ ಇರುವುದು ಅವು ಮೈದುಂಬಿಕೊಂಡಿರುವ ಅನುಭವಲೋಕ, ಸಂವೇದನೆ ಮತ್ತು ಸಾಮುದಾಯಿಕ ಪ್ರಜ್ಞೆಯಲ್ಲಿಯೇ ಹೊರತು ಈ ಸಿನಿಮಾಗಳನ್ನು ಜನರಿಗೆ ತಲುಪಿಸಲು ಬಳಸಿಕೊಂಡಿರುವ ಭಾಷೆಯೆನ್ನುವ toolನಲ್ಲಲ್ಲ.

ರಂಜಿತ್, ಮಾರಿಸೆಲ್ವರಾಜ್ ಸಿನಿಮಾಗಳನ್ನು ತಮಿಳು ಭಾಷೆಗೆ ಸೀಮಿತಗೊಳಿಸಿ ಮಾತನಾಡುವವರು ಸತ್ಯಜಿತ್ ರೇ, ಮಣಿರತ್ನಂ ಸಿನಿಮಾಗಳ ಬಗ್ಗೆ ಇದೇ ಪ್ರಶ್ನೆಗಳನ್ನು ಎತ್ತುತ್ತಾರೆಯೇ ?
ಬಹುಶಃ ಇಲ್ಲ!
ಯಾಕೆಂದರೆ ಮೇಲುಜಾತಿಯ ಸಿನಿಮಾ ನಿರ್ದೇಶಕರ ಸಿನಿಮಾಗಳ ‘ಕಲಾತ್ಮಕತೆ’.

ಸೂಕ್ಷ್ಮತೆ ಇರುವವರು, ಸಂವೇದನಾಶೀಲರೂ ಅಂದುಕೊಂಡವರು ಕೂಡ Linguistic Chauvinistಗಳ ರೀತಿ ರಂಜಿತ್, ಮಾರಿಸೆಲ್ವರಾಜ್ ಸಿನಿಮಾಗಳ ಬಗ್ಗೆ ಬಂದ ಮೆಚ್ಚುಗೆ ಸ್ವೀಕರಿಸಲು ಕಸಿವಿಸಿ ಪಡುತ್ತಾರೆ ಅಂದಾಗ ಇಲ್ಲಿ ಕೇವಲ ‘ಭಾಷೆ’ ನೆಪಮಾತ್ರ ಅನಿಸಿ ‘ಜಾತಿ’ ಎಷ್ಟು ಕೆಲಸ ಮಾಡುತ್ತದೆ ಅನಿಸುತ್ತದೆ.

#PaRanjith
#Mariselvaraj

……………………………………..

‘ಸತ್ಯಜಿತ್ ರೇ, ಮಣಿರತ್ನಂ, ಕಮಲಹಾಸನ್, ರಜನೀಕಾಂತ್ ಸೇರಿದಂತೆ ಬೇರೆ ಭಾಷೆಯ ಚಿತ್ರಗಳು, ಕಲಾವಿದರೂ, ತಂತ್ರಜ್ಞರು ಸಿನಿಮಾ, ನಾಟಕ‌ ಮಾಡಿದಾಗ ಅದು ಕೇವಲ ‘ಕಲೆ’ ಆಗುತ್ತದೆಯೇ ಹೊರತು ಅವರ ಜಾತಿ ಮುನ್ನೆಲೆಗೆ ಬರುವುದಿಲ್ಲ. ಆದರೆ ಪ. ರಂಜಿತ್, ಮಾರಿ ಸೆಲ್ವರಾಜ್ ಸಿನಿಮಾಗಳು ಬಂದಾಗ ಅವರ ಸಿನಿಮಾಗಳಿಗೆ ಇರುವ Artistic value ಮರೆತು ಹೋಗಿ ಧುತ್ತನೆ ಅವರ ಜಾತಿಯನ್ನು ಮುನ್ನಲೆಗೆ ತರುತ್ತದೆ. ಅವರ ಕಲಾಭಿವ್ಯಕ್ತಿಯನ್ನು ಇದು ‘ದಲಿತ ಸಿನಿಮಾ’, ಜಾತಿಯನ್ನು ಮುನ್ನಲೆಗೆ ತಂದು ಸಮಾಜದಲ್ಲಿ ಒಡಕುಂಟು ಮಾಡುವ ಸಿನಿಮಾ ಎಂದು ಕರೆಯಲಾಗುತ್ತದೆ. ಸಿನಿಮಾ‌ ನೋಡುವವರು ಸತ್ಯಜಿತ್ ರೇ, ಮಣಿರತ್ನಂ, ಗಿರೀಶ್ ಕಾಸರವಳ್ಳಿ, ಆಡೂರು ಗೋಪಾಲಕೃಷ್ಣನ್ ಅವರನ್ನು ಅವರ ಸಿನಿಮಾಗಳ ಕಾರಣಕ್ಕೆ ಶ್ರೇಷ್ಠ ನಿರ್ದೇಶಕರು ಅಂತ ಗುರುತಿಸುತ್ತಾರೆಯೇ ವಿನಃ ಇವರ ಜಾತಿ ಹಿನ್ನಲೆಯ ಕಾರಣಕ್ಕೆ ಇವರ ಸಿನಿಮಾಗಳು ‘ಬ್ರಾಹ್ಮಣ’ ಸಿನಿಮಾಗಳು, ಇವರು ‘ಬ್ರಾಹ್ಮಣ’ ನಿರ್ದೇಶಕರು ಅಂತ ಯಾರೂ ಕರೆಯುವುದಿಲ್ಲ. ಆದರೆ ರಂಜಿತ್, ಮಾರಿ ಸೆಲ್ವರಾಜ್ ಅವರನ್ನು ದಲಿತ ನಿರ್ದೇಶಕರು, ಇವರ ಸಿನಿಮಾಗಳನ್ನು ದಲಿತ ಸಿನಿಮಾಗಳು ಅಂತ ಬಹಳ ಸುಲಭವಾಗಿ ಕರೆದು ಬಿಡುತ್ತಾರೆ. ಇದು ಯಾಕೆ?


ಯಾಕೆಂದರೆ ದಲಿತರಿಗೆ ಒಟ್ಟು ಸಮಾಜಕ್ಕೆ ಮಾತನಾಡುವ ಯೋಗ್ಯತೆ ಇಲ್ಲ ಅಥವಾ ಕಲೆಯ ಮೂಲಕ ದಲಿತನೊಬ್ಬ ಕಟ್ಟಿಕೊಡುವ ಜೀವನದೃಷ್ಟಿಯನ್ನು ಒಪ್ಪಿಕೊಳ್ಳುವುದು ದಲಿತರಲ್ಲದವರಿವೆ ‘ಮೈಲಿಗೆ’ ಎನ್ನುವ ಕಾರಣಕ್ಕಾಗಿ.

ಸಮಾಜ ದಲಿತರಿಗೆ ಹೀಗೆ ಬದುಕು, ಹೀಗೆ ನೋಡು, ಹೀಗೆ ಮಾತಾಡು, ಹೀಗೆ ಅಭಿವ್ಯಕ್ತಿಸು ಅಂತ ಹೇಳಿಕೊಟ್ಟು ಅಭ್ಯಾಸವಾಗಿದೆಯೇ ಹೊರತು ನಾವು ಹೀಗೆ ಬದುಕುತ್ತಾ ಇದಿವಲ್ಲ ಇದು ಸರಿಯೇ ಎಂದು ಕೇಳಿಕೊಳ್ಳುವ ಆತ್ಮಸಾಕ್ಷಿಯೇ ಇಲ್ಲ.

ಕನ್ನಡ ರಂಗಭೂಮಿ ಎಷ್ಟು ಜಾತಿವಾದಿ ಅಂದರೆ ಇಲ್ಲಿ ಬಲಾಢ್ಯ ಜಾತಿಗಳವರು, ಸಾಂಸ್ಕೃತಿಕ ಯಜಮಾನಿಕೆ ಇರುವವರು ಮಾಡುವ ನಾಟಕಗಳು ‘ಕನ್ನಡ ನಾಟಕ’ಗಳಾದರೆ ಕೋಟಿಗಾನಹಳ್ಳಿ ರಾಮಯ್ಯ, ಕೆ.ಪಿ. ಲಕ್ಷ್ಮಣ್, ಚಂದ್ರು, ಶ್ವೇತಾ, ಡಿಂಗ್ರಿ ನರೇಶ್ ಸೇರಿದಂತೆ ಆದಿಮ, ಜಂಗಮ, ಸಾರಂಗರಂಗ ಸೇರಿದಂತೆ ತಳಸಮುದಾಯಗಳಿಂದ ಬಂದವರ ಪ್ರಯೋಗಗಳು ದಲಿತ ನಾಟಕಗಳು, ಇವು ಜಾತಿಯನ್ನು ಬಡಿದೆಬ್ಬಿಸುತ್ತವೆ, ಈ ವರೆಗೆ ‘ಇಲ್ಲದ’ ಜಾತಿಯನ್ನು ಮುನ್ನಲೆಗೆ ತಂದು ಒಂದು ‘ಕುಟುಂಬದ’ ತರ ಇರುವ ರಂಗಭೂಮಿಯನ್ನು ಒಡೆಯುತ್ತವೆ ಎನ್ನುವ ನರೇಟಿವ್ ಅನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ.

ರಂಜಿತ್, ಮಾರಿ ಸೆಲ್ವರಾಜ್, ಲಕ್ಷ್ಮಣ್ ದಲಿತರಾಗಿ ಸೀಮಿತವಾಗಬಲ್ಲವರಾದರೇ ಸತ್ಯಜಿತ್ ರೇ, ಮಣಿರತ್ನಂ, ಗಿರೀಶ್ ಕಾಸರವಳ್ಳಿ, ಪ್ರಸನ್ನ, ರಘುನಂದನ, ಶ್ರೀಪಾದಭಟ್, ನಟರಾಜ್ ಹೊನ್ನವಳ್ಳಿ ಸೇರಿದಂತೆ ಹಲವರನ್ನು ‘ಬ್ರಾಹ್ಮಣ ನಿರ್ದೇಶಕರು’, ಅವರ ನಾಟಕಗಳನ್ನು ‘ಬ್ರಾಹ್ಮಣ’ ನಾಟಕಗಳು ಅಂತ ಕರೆಯಬೇಕಲ್ಲವೇ.

ಇಲ್ಲಿ ಈ ವರಗಿನ ಸಿನಿಮಾ, ರಂಗಭೂಮಿ ಸೇರಿದಂತೆ ಎಲ್ಲಾ ಕಲಾಮಾಧ್ಯಮಗಳು ಸಮಾಜದ ಎಲ್ಲರನ್ನೂ ಒಳಗೊಂಡು ಅಭಿವ್ಯಕ್ತಿಸುವ Inclusive ಗುಣವನ್ನು ಅಲ್ಲ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದೊಡ್ಡ ಸಮುದಾಯಗಳನ್ನು, ಆ ಸಮುದಾಯಗಳ ಅನುಭವ, ಜೀವನದೃಷ್ಟಿ, ಕಲಾಮೀಮಾಂಸೆಯನ್ನು ಪ್ರಜ್ಞಾಪೂರ್ವಕವಾಗಿ ಹೊರಗಿಟ್ಟು ತಮ್ಮ ಸಂಕುಚಿತ ತಿಳುವಳಿಕೆ ಮತ್ತು ಜಾತಿ ಮೇಲರಿಮೆಯ ಕಾರಣಕ್ಕಾಗಿ ಒಟ್ಟು ಸಮುದಾಯದ ದನಿ ಆಗುವ ಅವಕಾಶವನ್ನೇ ಕಳೆದುಕೊಂಡಿವೆ. ಈಗ ತಳಸಮುದಾಯಗಳ ಕಲಾವಿದರು ತಮ್ಮ ಸಿನಿಮಾ‌, ನಾಟಕಗಳ ಮೂಲಕ ಇವರು ಮಾಡಿದ ತಪ್ಪುಗಳ‌ನ್ನು ತಿದ್ದಲು, ಇವರು ಎತ್ತಿಕೊಳ್ಳಲು ನಿರಾಕರಿಸಿದ ವಸ್ತುವನ್ನು ತಮ್ಮ ಮಾಧ್ಯಮಗಳಲ್ಲಿ ತಂದು ಆ ಮೂಲಕ ಒಟ್ಟು ಸಮಾಜವನ್ನು ಒಳಗೊಳ್ಳುವ, ನಿಜವಾದ ಅರ್ಥದಲ್ಲಿ ಮಾನವೀಯಗೊಳಿಸುವ ಕೆಲಸ ಮಾಡುತ್ತಿದ್ದಾರೆ.

ಅದನ್ನು ನೋಡುವ ಕಣ್ಣು, ಒಳಗಿಳಿಸಿಕೊಳ್ಳುವ ಅಂತಃಕರಣ ಬೇಕು ಅಷ್ಟೇ.

ನೂರಾರು ವರ್ಷಗಳ ಕಾಲ ಸಾಂಸ್ಕೃತಿಕ ಯಜಮಾನಿಕೆ ಮಾಡಿಕೊಂಡು ಬಂದಿರುವ ಬ್ರಾಹ್ಮಣರು, ಫ್ಯೂಡಲ್ ಜಾತಿಗಳು ತಳಸಮುದಾಯಗಳಿಂದ ಬಂದವರ ಹತ್ತಾರು ಸಿನಿಮಾಗಳು, ಐದಾರು ನಾಟಕಗಳಿಗೆ ತಮ್ಮ ಬುಡಕ್ಕೆ ಬಿಸಿನೀರು ಬಿಟ್ಟುಕೊಂಡರೆ ಇವರು ನಿಂತಿರುವ ನೆಲೆ ಎಷ್ಟು ಶಿಥಿಲ ಅನಿಸುತ್ತದೆ.

…………………………………..

ವಿಎಲ್ನರಸಿಂಹಮೂರ್ತಿ

ಚಿಂತಕರು ಮತ್ತು ಇಂಗ್ಲಿಷ್ ಅಧ್ಯಾಪಕರು