ಹಾರೋಹಳ್ಳಿ ರವೀಂದ್ರ ರ ‘ಸಾಂಸ್ಕೃತಿಕ ರಾಜಕಾರಣ’: ಅಪ್ಪಗೆರೆ ಸೋಮಶೇಖರ್ ಮುನ್ನುಡಿ
ವರ್ತಮಾನದ ಸಂಕಟಗಳಿಗೆ ಕನ್ನಡಿಯಾಗಬೇಕಾದ ಬರಹಗಾರರ ನೈತಿಕ ಹೊಣೆಗಾರಿಕೆ
-ಅಪ್ಪಗೆರೆ ಸೋಮಶೇಖರ್
ತಮ್ಮ ಕಾಲದ ಸಂಕಟಗಳಿಗೆ ಜವಾಬ್ದಾರಿಯಿಂದ ಪ್ರತಿಕ್ರಿಯಿಸಬೇಕಾಗಿರುವುದು ಬರಹಗಾರರ ಬಹುಮುಖ್ಯ ಕರ್ತವ್ಯವಾಗಿದೆ. ನೈತಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಗಟ್ಟಿಯಾಗಿದ್ದಾಗ ಮಾತ್ರ ತಮ್ಮ ಸುತ್ತಲ ಸಮಾಜ, ಸಮುದಾಯಗಳನ್ನು ಪ್ರಾಮಾಣಿಕವಾಗಿ ಗ್ರಹಿಸಲಿಕ್ಕೆ ಹಾಗೂ ನಿಷ್ಪಕ್ಷಪಾತವಾಗಿ ಒಳಿತು-ಕೆಡುಕುಗಳನ್ನು ಕಂಡುಕೊಳ್ಳುತ್ತ ಪ್ರಶ್ನಿಸಲಿಕ್ಕಾಗುವುದು. ಮಾನಸಿಕ ಗುಲಾಮಗಾರಿಕೆ ಹಾಗೂ ಬೌದ್ಧಿಕ ಅಧಃಪತನಗಳನ್ನು ಮೀರಲಿಕ್ಕೆ ಸಾಧ್ಯವಾಗದ ಯಾವುದೇ ಬರಹಗಾರರು ವರ್ತಮಾನದ ದುರಂತಗಳಿಗೆ ಕಣ್ಣಾಗುತ್ತ, ಸಂವಾದಿಸಲಿಕ್ಕೆ ಸಾಧ್ಯವಿಲ್ಲ. ಮನುಷ್ಯ ವಿರೋಧಿ ಧೋರಣೆಗಳನ್ನು ಪ್ರಶ್ನಿಸುವ, ಪ್ರತಿರೋಧಿಸುವ ನಡೆಗಳನ್ನೇ ಅಪರಾಧವನ್ನಾಗಿ ಬಿಂಬಿಸುತ್ತಿರುವ ಈ ಹೊತ್ತಿನಲ್ಲಿ ಬರಹಗಾರರು ಇನ್ನಷ್ಟು ತೀವ್ರವಾದ ಚಿಂತನೆಗಳ ಮೂಲಕ ಸಮಾಜಕ್ಕೆ ಮುಖಾಮುಖಿಯಾಗಬೇಕಿದೆ. ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಭಾರತ ಸಂವಿಧಾನ, ಮಾನವ ಹಕ್ಕುಗಳು ಗಂಡಾಂತರಕ್ಕೆ ಸಿಲುಕಿರುವ ಆತಂಕಕಾರಿಯಾದ ಈ ಹೊತ್ತಿನಲ್ಲಿ ನಿಷ್ಠೂರವಾದಿಯಾದ ಗೆಳೆಯ ಹಾರೋಹಳ್ಳಿ ರವೀಂದ್ರ ಅವರ “ಸಾಂಸ್ಕೃತಿಕ ರಾಜಕಾರಣ” ಕೃತಿ ಹೊರಬರುತ್ತಿರುವುದು ಮೆಚ್ಚತಕ್ಕ ಸಂಗತಿ. ಈ ಕೃತಿಯಲ್ಲಿನ ಬರಹಗಳು ಓದುಗರನ್ನು ಜಿಜ್ಞಾಸೆಗೆ ಹಚ್ಚಬಲ್ಲವಾಗಿವೆ. ‘ಧರ್ಮ, ಆಹಾರ, ಅಭಿವ್ಯಕ್ತಿ, ಅಧಿಕಾರ, ಜಾತಿ, ಕಾನೂನು, ರಾಜಕಾರಣ, ಸಂವಿಧಾನ, ಪ್ರಜಾಪ್ರಭುತ್ವ’ವನ್ನು ಮನುವಾದಿ ಜಾತಿ ರಾಜಕಾರಣವು ತನ್ನ ಸ್ವಾರ್ಥ ಸಾಧನೆಗಾಗಿ ದಮನಕಾರಿ ಅಸ್ತçಗಳನ್ನಾಗಿ ಬಳಸುತ್ತಿರುವ ಅದರ ಅನಾಹುತಕಾರಿಯಾದ ಒಳಹುನ್ನಾರಗಳನ್ನು ಪ್ರಖರವಾಗಿ ಮಂಡಿಸುವ ಇಲ್ಲಿನ ಬರಹಗಳು ಪ್ರತಿರೋಧವನ್ನು ತೀವ್ರವಾಗಿ ಉಸಿರಾಡುತ್ತವೆ. ಮನುವಾದಿ ಪರಂಪರೆಯ ಕ್ರೌರ್ಯ, ದುರಂತಗಳು ವರ್ತಮಾನದಲ್ಲಿ ಹೊಸ ಹೊಸ ರೂಪಾಂತರಗಳ ವೇಷ ತೊಟ್ಟು ಮರುಹುಟ್ಟು ಪಡೆದುಕೊಂಡು ಮಾನವ ಲೋಕಕ್ಕೆ ಹೇಗೆ ಕಂಟಕಪ್ರಾಯವಾಗಿವೆ ಎಂಬುದನ್ನು ಸಾಕ್ಷಿಪ್ರಜ್ಞೆಯ ಮೂಲಕ ತರ್ಕಕ್ಕೆ ಒಳಪಡಿಸಲಾಗಿದೆ.
ಪ್ರಶ್ನೆ, ಪ್ರತಿರೋಧ, ವಿಮರ್ಶಾ ದೃಷ್ಟಿಕೋನದ ಮೂಲಕ ಮಹತ್ವದ ಸಂಗತಿಗಳನ್ನು ತರ್ಕಕ್ಕೆ ಒಳಪಡಿಸುವ ಇಲ್ಲಿನ ಲೇಖನಗಳು ವರ್ತಮಾನದ ಪ್ರಜಾಪ್ರಭುತ್ವಾದಿ ಭಾರತಕ್ಕೆ ಹಾಗೂ ಭಾರತ ಸಂವಿಧಾನಕ್ಕೆ ಬಂದೊದಗಿರುವ ಯಾತನಾಮಯ ಸ್ಥಿತಿಯನ್ನು ಅನಾವರಣ ಮಾಡುತ್ತವೆ. ಯಾವುದೇ ಧರ್ಮ ಗ್ರಂಥವನ್ನು ಕೇವಲ ಭಾವನಾತ್ಮಕವಾಗಿ ಗ್ರಹಿಸುವ ಬದಲಾಗಿ, ವಸ್ತುನಿಷ್ಠವಾಗಿ ಜೀವಕೇಂದ್ರಿತವಾಗಿ ವೈಚಾರಿಕತೆಯ ವಿವೇಕದ ನೆಲೆಯಲ್ಲಿ ಅವಲೋಕಿಸಬೇಕಾಗಿರುವ ಅಗತ್ಯತೆಯನ್ನು ಎತ್ತಿಹಿಡಿಯಲಾಗಿದೆ. ಧರ್ಮಾಧಾರಿತ ಆಡಳಿತಾತ್ಮಕ ರಾಜಕಾರಣವು ನಿರ್ಮಿಸಬಹುದಾದ ಕೋಮುವಾದಿ, ಸರ್ವಾಧಿಕಾರಿ ಧೋರಣೆಯ ಅಪಾಯದ ಅರಿವಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು ‘ಧರ್ಮ ನಿರಪೇಕ್ಷತೆ’ಯ ಮಹತ್ವವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಜಗತ್ತಿನ ಯಾವುದೇ ಧರ್ಮವು ತಾನೊಂದು ಹಿಂಸಾ ಸ್ವರೂಪಿಯಾದ ಭಯೋತ್ಪಾದಕ ಧೋರಣೆಯ ಜೀವ ವಿರೋಧಿ ರೂಪಾಂತರವಾಗದAತೆ ಎಚ್ಚರವಹಿಸುತ್ತ, ಸಕಲ ಜೀವರಾಶಿಗಳ ಒಳಿತನ್ನು ಬಯಸುವ ಮನುಷ್ಯತ್ವದ ವಿವೇಕವಾಗಬೇಕೆಂಬುದನ್ನು ಇಲ್ಲಿನ ಬರಹಗಳು ಪ್ರತಿಪಾದಿಸುತ್ತವೆ. ಜಾತೀಯತೆ, ಅಸ್ಪೃಶ್ಯತೆ, ವರ್ಣ ವ್ಯವಸ್ಥೆ, ಅಸಮಾನತೆ, ಶೋಷಣೆ, ಲಿಂಗತಾರತಮ್ಯವನ್ನು ನಿವಾರಿಸಿಕೊಳ್ಳದ ಹಾಗೂ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ, ನಡೆಸಿಕೊಳ್ಳದ, ಘನತೆಯ ಬದುಕನ್ನು ಬದುಕವಂತೆ ತನ್ನ ಅನುಯಾಯಿಗಳಿಗೆ ಹೇಳಿಕೊಡದ ಯಾವುದೇ ಧರ್ಮ ನಿಜ ಅರ್ಥದಲ್ಲಿ ಮಾನವೀಯ ಧರ್ಮವಾಗಿ ಉಳಿಯಲಿಕ್ಕೆ ಸಾಧ್ಯವಿಲ್ಲ ಹಾಗೂ ಅಂತಹ ಧರ್ಮದ ಅನುಯಾಯಿಗಳು ಹಿಂಸಾ ಪ್ರವೃತ್ತಿಯ ಧರ್ಮಾಂಧರಾಗುವಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಈ ಕೃತಿ ಮನವರಿಕೆ ಮಾಡಿಕೊಡುತ್ತದೆ. ಕಾವ್ಯ, ಕಥೆ, ಪುರಾಣದ ಸಂಗತಿಗಳನ್ನು ಐತಿಹಾಸಿಕ ಸತ್ಯ ಘಟನೆಗಳೆಂಬಂತೆ ಬಿಂಬಿಸಲು ಹೊರಟರವ ಉದ್ದೇಶದ ಹಿಂದಿನ ಕುಟಿಲತನವನ್ನು ಇಲ್ಲಿ ಬಯಲಾಗಿಸಲಾಗಿದೆ.
ಭಾವನಾವಾದದ ಮನುವಾದ ಹಾಗೂ ಭೌತವಾದದ ಬೌದ್ಧವಾದದ ನಡುವಿನ ಪಾರಂಪರಿಕ ಸಂಘರ್ಷವನ್ನು ವಿನ್ಸೆಂಟ್ ಸ್ಮಿತ್, ಚಾಲ್ಸ್ ಹೆಲೆನ್, ಪ್ರತಾಪ್ ಚೆಟ್ಸೆ, ಆರ್. ಡಿ. ಬ್ಯಾನರ್ಜಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಅಧ್ಯಯನದ ಹಿನ್ನೆಲೆಯಲ್ಲಿ ಚರ್ಚಿಸಲ್ಪಟ್ಟಿರುವ ಇಲ್ಲಿನ ವಿವರಗಳು ಓದುಗರಲ್ಲಿ ಕುತೂಹಲವನ್ನು ನಿರ್ಮಿಸುವ ಮೂಲಕ ಹೆಚ್ಚಿನ ಅಧ್ಯಯನಕ್ಕೆ ಒತ್ತಾಯಿಸುತ್ತವೆ. ಆದಿಮ ದ್ರಾವಿಡ ಪರಂಪರೆಯವರಾದ ಕಶ್ಯಪ, ಪ್ರಹ್ಲಾದ, ವಿರೋಚನ, ಬಲಿ ಚಕ್ರವರ್ತಿ, ಮಹಿಷಾಸುರರಿಗೆ ಸಂಬಂ ಧಿಸಿದ ಮಹತ್ವದ ಚರ್ಚೆಗಳು ನಮ್ಮ ಪರಂಪರೆ, ಸಂಸ್ಕೃತಿ, ಚರಿತ್ರೆಗಳನ್ನು ಮರುಚಿಂತನೆ, ಅಧ್ಯಯನ, ಸಂಶೋಧನೆಗೆ ಒಳಪಡಿಸಬೇಕಾಗಿರುವ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುತ್ತವೆ. ಹನ್ನೆರಡನೆಯ ಶತಮಾನದ ಶರಣರು ಪ್ರತಿಪಾದಿಸಿದ ‘ಲಿಂಗಾಯತ ಧರ್ಮ’ವು ಹೇಗೆ ಹಿಂದೂ ಧರ್ಮಕ್ಕಿಂತ ಭಿನ್ನ ಎಂಬುದನ್ನು ವಿಶ್ಲೇಷಿಸಲಾಗಿದೆ. ಗೋವನ್ನು ಧಾರ್ಮಿಕ ನೆಲೆಯಲ್ಲಿ ಪವಿತ್ರೀಕರಿಸುತ್ತ, ಗೋ ಹತ್ಯೆ ನಿಷೇಧ ಕಾಯ್ದೆಯ ರಾಜಕಾರಣದ ಮೂಲಕ ಬಹುಸಂಖ್ಯಾತ ಸಮುದಾಯಗಳ ಆಹಾರ ಸಂಸ್ಕೃತಿಯನ್ನು ಅಪವ್ಯಾಖ್ಯಾನಿಸಲಾಗುತ್ತಿರುವ ಕೋಮುವಾದಿ ಆಹಾರ ರಾಜಕಾರಣದ ಹುನ್ನಾರವನ್ನು ಪ್ರಶ್ನಿಸಲಾಗಿದೆ. ಪ್ರಸ್ತುತ ಗೋವನ್ನು ಧಾರ್ಮಿಕ ನೆಲೆಯಲ್ಲಿ ಪವಿತ್ರೀಕರಿಸಿ ರಾಜಕಾರಣ ಮಾಡುತ್ತಿರುವ ಮನುವಾದಿ ಮನಸ್ಥಿತಿಗಳೆ ಈ ಹಿಂದೆ ಹೇಗೆ ಗೋವಿನ ಮಾಂಸದ ಭಕ್ಷಕರಾಗಿದ್ದರು ಎಂಬುದನ್ನು ಪುರಾಣ ಕಥನಗಳಲ್ಲಿನ್ನ ಉಲ್ಲೇಖದ ಮೂಲಕ ಸ್ಪಷ್ಟಪಡಿಸಲಾಗಿದೆ. ಗೋವಿನ ರಕ್ಷಣೆಯ ನೆಪದಲ್ಲಿ ಗೋ ರಕ್ಷಕ ದಳದವರು ದಲಿತ, ಮುಸ್ಲಿಂ ಸಮುದಾಯದ ಮೇಲೆ ಎಸಗಿರಬಹುದಾದ, ಎಸಗುತ್ತಿರುವ ಅಮಾನವೀಯ ಹಿಂಸಾತ್ಮಕ ಕೃತ್ಯಗಳನ್ನು ದಾಖಲೆ ಸಹಿತ ವಿಶ್ಲೇಷಿಸುತ್ತಲೇ, ಕೋಮುವಾದದ ಕ್ರೂರತನದ ಮುಖವಾಡವನ್ನು ಬೆತ್ತಲಾಗಿಸಿದ ಗುಜರಾತ್ನ ಸೋಮನಾಥಪುರ ಜಿಲ್ಲೆಯ ಊನಾ ಎಂಬಲ್ಲಿ ನಡೆದಂತಹ ಮಹತ್ವದ ಪ್ರತಿರೋಧಾತ್ಮಕ ಹೋರಾಟವನ್ನು ದಾಖಲಿಸಲಾಗಿದೆ. ಗೋವಿನ ಮಾಂಸವನ್ನು ಆಹಾರವನ್ನಾಗಿ ಬಳಸುವುದು ಅಪರಾಧ ಎಂದು ಹೇಳುವವರು, ಗೋವಿನ ಮಾಂಸವನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತ ಹಣಗಳಿಸುವ ವ್ಯವಹಾರದಲ್ಲಿ ತೊಡಗಿರುವವರನ್ನು ಪ್ರಶ್ನಿಸದಿರುವ ಅವರ ಕೋಮುವಾದಿ ರಾಜಕಾರಣದ ಹಿಂದಿನ ದ್ವಂದ್ವ ನಿಲುವನ್ನು ಪ್ರಶ್ನಿಸಲಾಗಿದೆ. ಗೋವಿನ ಮಾಂಸದ ಆಹಾರ ರಾಜಕಾರಣ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆಯ ನೆಪದಲ್ಲಿ ಈ ದೇಶದ ದಲಿತರು, ಮುಸಲ್ಮಾನರನ್ನು ಸಾಮಾಜಿಕವಾಗಿ, ರಾಜಕೀಯವಾಗಿ ದಮನಕ್ಕೆ ಒಳಪಡಿಸುವುದು ಜಾತಿವಾದಿ, ಕೋಮುವಾದಿ, ಮತಾಂಧರ ಬಹುಮುಖ್ಯ ಉದ್ದೇಶವಾಗಿರುವುದನ್ನು ಇಲ್ಲಿನ ಬರಹಗಳು ಖಚಿತಪಡಿಸುತ್ತವೆ.
ಕೋಮುವಾದೀಕರಣಗೊಂಡಿರುವ ಜಾತಿವಾದಿ ಪ್ರಭುತ್ವವು ಹೇಗೆ ಸಂವಿಧಾನಬದ್ಧ ಅಭಿವ್ಯಕ್ತಿ ಸ್ವಾತಂತ್ಯ್ರ ವನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂಬುದನ್ನು ಎಂ. ಎಂ. ಕಲಬುರಗಿ, ಗೌರಿ ಲಂಕೇಶ್, ಗೋವಿಂದ ಪನ್ಸಾರೆ, ದಾಬೋಲ್ಕರ್ ಅವರ ಹತ್ಯೆ ಹಾಗೂ ಪೆರುಮಾಳ್ ಮುರುಗನ್ ಮುಂತಾದ ಲೇಖಕರ ಮೇಲಿನ ಹಲ್ಲೆ, ಜೀವ ಬೆದರಿಕೆ, ಬಂಧನದ ವಿವರಗಳ ಮೂಲಕ ವಿಶ್ಲೇಷಿಸಲಾಗಿದೆ. ಇಂತಹ ಸಂಕಟದ ಸಂದಿಗ್ಧತೆಯನ್ನು ಬರಹಗಾರರು, ಚಿಂತಕರು, ಮಾನವೀಯ ಸಂವೇದನಾಶೀಲರು ತೀವ್ರವಾಗಿ ಪ್ರಶ್ನಿಸುವ ಅಗತ್ಯವಿದೆ ಎಂಬುದನ್ನು ಇಲ್ಲಿನ ಬರಹಗಳು ಒತ್ತಾಯಿಸುತ್ತವೆ. ಜಾತಿವಾದ, ಕೋಮುವಾದ, ಧರ್ಮಾಂಧತೆಯಿಂದಾಗಿ ಸಾಮಾಜಿಕ ವ್ಯವಸ್ಥೆ ಭ್ರಷ್ಟಗೊಂಡು ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡು ಜನಾಂಗೀಯ ದ್ವೇಷ ಬಿತ್ತುತ್ತಿರುವ ಅಪಾಯವನ್ನು ವಿವರಿಸುವ ಇಲ್ಲಿನ ಬರಹಗಳು, ಈ ಸಂಕಟಗಳಿಂದ ಸಮಾಜ, ಸಮುದಾಯಗಳನ್ನು ಪಾರು ಮಾಡುವ ನಿಟ್ಟಿನಲ್ಲಿ ನಾಗರಿಕರ ಹೊಣೆಗಾರಿಕೆಯನ್ನು ಎಚ್ಚರಿಸಬಲ್ಲವಾಗಿವೆ.
ಪ್ರಭುತ್ವವು ತನಗೆ ದಕ್ಕಿದ ಸಂವಿಧಾನಬದ್ಧ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು; ಸಂವಿಧಾನಬದ್ಧ ಕಾಯ್ದೆ, ಕಾನೂನುಗಳನ್ನು ಜನಪರವಾಗಿ, ಸಮಾಜದ ವಿಕಾಸಕ್ಕೆ ಬಳಸುವ ಬದಲಾಗಿ, ಅವುಗಳನ್ನು ದ್ವೇಷದ ಹಿನ್ನೆಲೆಯಲ್ಲಿ ಜನಾಂಗಗಳನ್ನು ತುಳಿಯುವ ಅಸ್ತçವನ್ನಾಗಿ ಬಳಸುವುದರಿಂದಾಗುವ ಅಪಾಯವನ್ನು ‘ಸಿ.ಎ.ಬಿ., ಎನ್.ಆರ್.ಸಿ., ಯು.ಎ.ಪಿ.ಎ.’ ಕಾಯ್ದೆಗಳಲ್ಲಿನ ಜನವಿರೋಧಿ ಧೋರಣೆಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಚರಿತ್ರೆಯನ್ನು ತಿರುಚುವುದು, ಅಪವ್ಯಾಖ್ಯಾನಿಸುವುದು ಎಷ್ಟು ಅಪಾಯಕಾರಿ ಹಾಗೂ ಅದು ಚರಿತ್ರೆಗೆ ಎಸಗುವ ಮಹಾ ದ್ರೋಹ ಎಂಬುದನ್ನು; ಸಮಾಜಕ್ಕೆ ಕಂಟಕವಾಗಿರುವ, ವಂಚನೆ ಎಸಗಿರುವವರನ್ನೇ ಆದರ್ಶ ಎಂಬುದಾಗಿ ಬಿಂಬಿಸುವುದರಿಂದಾಗುವ ಅನಾಹುತವನ್ನು ಇಲ್ಲಿನ ಲೇಖನಗಳು ವಿಮರ್ಶೆಗೆ ಒಳಪಡಿಸಿವೆ. ವ್ಯಕ್ತಿ ಮತ್ತು ಸಮುದಾಯಗಳ ಸಾಮಾಜಿಕ, ರಾಜಕೀಯ, ಚಾರಿತ್ರಿಕ, ಸಾಮುದಾಯಿಕ ಪ್ರಜ್ಞೆಯು ಭ್ರಷ್ಟಗೊಳ್ಳದಂತೆ ಸದಾ ಜಾಗೃತವಾಗಿಟ್ಟುಕೊಳ್ಳಬೇಕಾಗಿರುವ ಅಗತ್ಯತೆಯನ್ನು ಈ ಕೃತಿ ಎಚ್ಚರಿಸುತ್ತದೆ. ಕೆಲವು ವಿಚಾರಗಳನ್ನು ಕುರಿತು ವಿಮರ್ಶಿಸುವ ಸಂದರ್ಭದಲ್ಲಿ ಲೇಖಕರು ಸಂಯಮ ರಹಿತವಾಗಿ, ಪ್ರಚೋದನಾಕಾರಿಯಾಗಿ ಮಾತನಾಡುತ್ತಾರೆ ಎನಿಸುತ್ತದೆ. ಇದಕ್ಕೆ ಆ ವಿಚಾರಗಳಲ್ಲಿನ ಸಮಾಜ-ಸಮುದಾಯ ವಿರೋಧಿ ಧೋರಣೆಗಳು ಸಹ ಕಾರಣವಾಗಿವೆ. ಆದರೂ ಸಹ ಸಮಾಜಮುಖಿ ಚಿಂತನಾಶೀಲ ಬರಹಗಾರರ ಭಾಷೆ ಸಂಯಮವನ್ನು ಕಳೆದುಕೊಳ್ಳಬಾರದೆನಿಸುತ್ತದೆ. ನಿಷ್ಠೂರವಾದ ಬರಹಗಳನ್ನು ಒಳಗೊಂಡಿರುವ ಈ ಕೃತಿಯ ಆಳದಲ್ಲಿರುವ ಸಾಮಾಜಿಕ, ಸಾಮುದಾಯಿಕ ಬದ್ಧತೆಯ ಜೀವಪರ ಕಾಳಜಿಯನ್ನು ಅಲ್ಲಗಳೆಯಲಾಗದು. ಈ ಕೃತಿಯಲ್ಲಿನ ಬರಹಗಳನ್ನು ಓದುವ ಮೂಲಕ ಓದುಗರು, ನಮ್ಮ ನಿಜವಾದ ಚರಿತ್ರೆ, ಪರಂಪರೆ, ಸಂಸ್ಕೃತಿ ಯಾವುದು? ನಮ್ಮ ಸಮಾಜ ಯಾವ ದಿಕ್ಕಿಗೆ ಚಲಿಸುತ್ತಿದೆ? ಅದು ಸಾಗಬೇಕಾಗಿರುವ ಮಾರ್ಗ ಯಾವುದು? ಜಾತಿವಾದ, ಕೋಮುವಾದ, ಜನ ವಿರೋಧಿ ಧರ್ಮರಾಜಕಾರಣವನ್ನು ಬದಲಾಯಿಸುವ ಚಿಂತನೆಗಳಾವುವು? ಸಂವಿಧಾನಬದ್ಧ ಪ್ರಜಾಪ್ರಭುತ್ವವಾದಿ ಮಾನವೀಯ ಸಮಾಜವನ್ನು ಕಟ್ಟುವಲ್ಲಿ, ಉಳಿಸಿಕೊಳ್ಳುವಲ್ಲಿ ನಾಗರಿಕರಾದ ನಮ್ಮ ನೈತಿಕ ಹೊಣೆಗಾರಿಕೆ ಏನು? ಸ್ವಾತಂತ್ರತ್ಯ್ರ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯದಂತಹ ಮೌಲ್ಯಗಳನ್ನು ಒಳಗೊಂಡಿರುವ ಭಾರತ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವುದು ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿಯಲ್ಲವೆ? ಎಂಬಿತ್ಯಾದಿ ಆತ್ಮಾವಲೋಕನದ ಪ್ರಶ್ನೆಗಳನ್ನು ಕೇಳಿಕೊಳ್ಳುವಂತಾಗಲಿ ಎಂದು ಬಯಸುತ್ತೇನೆ. ಲೇಖಕರು ಉಲ್ಲೇಖಿಸಿರುವ “ನೀನು ಸಾಮಾಜಿಕ ಸ್ವರೂಪವನ್ನು ಬದಲು ಮಾಡದೆ ಹೋದರೆ ನೀವೇನೂ ಪ್ರಗತಿಯನ್ನೂ ಸಾಧಿಸಲಾರಿರಿ ಎಂದು ನಿಸ್ಸಂಶಯವಾಗಿ ಹೇಳುತ್ತೇನೆ. ರಕ್ಷಣೆಗಾಗಲಿ ದಾಳಿಗಾಗಲಿ ನೀವು ಜನಬಲವನ್ನು ಸಿದ್ಧಗೊಳಿಸಲಾರಿರಿ. ಜಾತಿಯ ಅಡಿಪಾಯದ ಮೇಲೆ ನೀವೇನನ್ನೂ ಕಟ್ಟಲಾರಿರಿ, ರಾಷ್ಟ್ರವನ್ನು ನಿರ್ಮಿಸಲಾರಿರಿ, ನೀತಿಯನ್ನು ಮೌಲೀಕರಣಗೊಳಿಸಲಾರಿರಿ. ಜಾತಿಯ ಆಧಾರದ ಮೇಲೆ ಕಟ್ಟಿದುದು ಏನೇ ಆಗಿರಲಿ ಅದು ಬಿರುಕು ಬಿಡುವುದು, ಅಖಂಡವಾಗಿ ಉಳಿಯಲಾರದು” ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತು ನಮ್ಮೆಲ್ಲರ ಅರಿವಿನ ಎಚ್ಚರವಾಗಲಿ. ಮಿತ್ರರಾದ ಹಾರೋಹಳ್ಳಿ ರವೀಂದ್ರ ಅವರು, ಓದುಗರನ್ನು ಚಿಂತನಾಶೀಲರನ್ನಾಗಿಸುವಂತಹ ಈ ಬಗೆಯ ಕೃತಿಗಳನ್ನು ಇನ್ನಷ್ಟು ಪ್ರಕಟಿಸುವಂತಾಗಲಿ. ಶುಭಾಶಯಗಳು.
-ಅಪ್ಪಗೆರೆ ಸೋಮಶೇಖರ್
ಸಹ ಪ್ರಾಧ್ಯಾಪಕರು
ಕನ್ನಡ ವಿಭಾಗ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ
ಕಲಬುರಗಿ