ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ

ಹಾರೋಹಳ್ಳಿ ರವೀಂದ್ರ – ಕಿರು ಪರಿಚಯ

ಡಾ. ದಿಲೀಪ್ ನರಸಯ್ಯ ಎಂ.

ಕರ್ನಾಟಕದಲ್ಲಿ ಕೆಲವರು ನಿಗೂಢ ಬರಹಗಾರರಿದ್ದಾರೆ. ಯಾವ ವೇದಿಕೆಗಳಲ್ಲೂ ಕಾಣಿಸುವವರಲ್ಲ, ಹೆಚ್ಚು ಜನರೊಂದಿಗೆ ಸಂಪರ್ಕದಲ್ಲಿರುವುದಿಲ್ಲ ಆದರೆ ಅವರ ಬರವಣಿಗೆಗಳು ಮಾತ್ರ ಎಲ್ಲೆಡೆ ಚಲಿಸುತ್ತ ಸದ್ದು ಮಾಡುತ್ತಿರುತ್ತವೆ. ಕೇವಲ ಅಧ್ಯಯನ ಮತ್ತು ಗೀಚುವ ಅಮಲಿನಲ್ಲಿರುತ್ತಾರೆ. ಅಂತಹ ಕೆಲ ಅಪರೂಪದ ಲೇಖಕರಲ್ಲಿ ಹಾರೋಹಳ್ಳಿ ರವೀಂದ್ರ  ಕೂಡ ಒಬ್ಬರು. ತನ್ನದೇ ದಾಟಿಯಲ್ಲಿ ವಿಶ್ಲೇಷಿಸಿ ಬರೆದಿರುವ ಕೆಲ ಕೃತಿಗಳು ಕೇಸರಿ ಮೂಲಭೂತವಾದಿಗಳ ಸಿದ್ದಾಂತದ ಮಿದುಳಿಗೆ ಗುಂಡಿಕ್ಕಿವೆ. ಆದರೆ ಬಹುಜನರು ಅದೇ ಕೃತಿಗಳನ್ನು ಎದೆಗಪ್ಪಿಕೊಂಡಿರುವುದನ್ನು ನೋಡಿದ್ದೇವೆ. ಇವರ ಬರಹಗಳು ಬಹುತೇಕ ಯುವ ಹಾಗೂ ಮಾಗಿದ ಓದುಗರನ್ನು ತಲುಪಿವೆ. ನಾವಿಬ್ಬರೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಾಹಿತಿಕವಾಗಿ ಸಂಬಂಧಿಕರಾದವರು. ಬಹಳ ಹತ್ತಿರದಿಂದ ಅವರ ಸಾಹಿತ್ಯ ಕೃಷಿಯನ್ನು ಕಂಡವನು.

ಈ ವರ್ಷ ಸ್ನೇಹಿತರಾದ ಹಾರೋಹಳ್ಳಿ ರವೀಂದ್ರ ಅವರಿಗೆ ರಾಜ್ಯ ಮಟ್ಟದ ಬೆಳ್ಳಿ ಸಂಭ್ರಮ ಗೌರವ ಪುರಸ್ಕಾರ ದೊರೆತಿರುವುದು ಸಂತಸ ತಂದಿದೆ. ವಿಜಯಪುರದಲ್ಲಿ ನಡೆಯುವ ೧೦ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ರವೀಂದ್ರ ಸ್ವೀಕರಿಸಲಿದ್ದಾರೆ.

ಕವಿ, ಲೇಖಕ ಹಾಗೂ ವಿಮರ್ಶಕರಾದ ಹಾರೋಹಳ್ಳಿ ರವೀಂದ್ರ ಅವರ ಒಂದು ಕಿರು ಪರಿಚಯ ಇಲ್ಲಿ ಮಾಡಿದ್ದೇನೆ.

ರವೀಂದ್ರ ಹುಟ್ಟಿದ್ದು ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ. ದಿನಾಂಕ ೨೭ ಜನವರಿ ೧೯೮೬ ರಂದು ತಂದೆ ಅಂದಾನಿ ಹಾಗೂ ತಾಯಿ ಮಹದೇವಮ್ಮ ರವರ ಮಗನಾಗಿ ಜನಿಸಿದರು. ಶಾಲಾ ಶಿಕ್ಷಣವನ್ನು ತಮ್ಮದೇ ಗ್ರಾಮದಲ್ಲೇ ಪಡೆಯುತ್ತಾರೆ. ಮುಂದೆ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯಲ್ಲಿ ತೇರ್ಗಡೆಯಾದ ನಂತರ ಬಿ.ಎಡ್ ಮಾಡುತ್ತಾರೆ. ಚಿಕ್ಕವಯಸ್ಸಿನಿಂದಲೇ ಬರವಣಿಗೆಯಲ್ಲಿ ಆಸಕ್ತಿ ಇದ್ದ ಕಾರಣ ಉನ್ನತ ಶಿಕ್ಷಣವನ್ನು ಮಾಡಬೇಕೆಂದು ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿರುತ್ತಾರೆ.

ಮೊದಲ ವರ್ಷ ಎಂ.ಎ ಪದವಿ ಓದುವಾಗಲೇ ‘ಮನದ ಚೆಲುವು ಮುದುಡಿದಾಗ’ ಎಂಬ ಕವನ ಸಂಕಲನವೊಂದನ್ನು ಬರೆದು ಪ್ರಕಟಿಸುತ್ತಾರೆ. ಆ ಕವನ ಸಂಕಲವನ್ನು ಮೈಸೂರು ವಿ ವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಪ್ರೊ.ಅರವಿಂದ್ ಮಾಲಗತ್ತಿಯವರು ಬಿಡುಗಡೆಗೊಳಿಸಿ ರವೀಂದ್ರರವರ ಬೆನ್ನು ತಟ್ಟುತ್ತಾರೆ. ಕೇವಲ ಕವನ ಬರೆಯುತ್ತಾ ಕಾಲ ಕಳೆಯುವ ಬದಲು ಅಂತಿಮ ವರ್ಷ ಎಂ.ಎ ಗೆ ಬರುವಷ್ಟರಲ್ಲಿ ‘ಹಿಂದುತ್ವದೊಳಗೆ ಭಯೋತ್ವಪಾದನೆ’ ಎಂಬ ಕೃತಿಯನ್ನು ರಚಿಸಿ ಭಾರತದಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ನಡೆಸಿದ ದುಷ್ಟೃತ್ಯಗಳನ್ನು ದಾಖಲಾಯಿಸಿ ಇಡೀ ರಾಜ್ಯದ ಗಮನಸೆಳೆಯುತ್ತಾರೆ.

ವರ್ಷಗಳು ಕಳೆಯುತ್ತಿದ್ದಂತೆ ಇವರ ಆಸಕ್ತಿ ಕವಿತೆ, ಕತೆ, ಕಾದಂಬರಿ, ಗದ್ಯ, ವಿಮರ್ಶೆ, ಪ್ರಚಲಿತ ವಿದ್ಯಮಾನ, ಸಂಶೋಧನೆ, ಸಂಪಾದನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ದುಡಿದು ಇದುವರೆಗೆ ೫ ಪುಸ್ತಕಗಳನ್ನು ಹೊರತಂದಿದ್ದಾರೆ.

ಅವುಗಳಲ್ಲಿ “ಹಿಂದೂಗಳಲ್ಲದ ಹಿಂದೂಗಳು” (ಬಿಡಿ ಲೇಖನಗಳು), “ಎಬಿವಿಪಿ ಭಯೋತ್ಪಾದನೆ”, (ವರ್ತಮಾನ ಕುರಿತು), “ಪ್ರಭುತ್ವ ಮತ್ತು ದಬ್ಬಾಳಿಕೆ” ಪ್ರಮುಖ ಕೃತಿಗಳು. “ಸಾಂಸ್ಕೃತಿಕ ರಾಜಕಾರಣ” ಹಾಗೂ “ಬೆಳಕಿಗೆ ಮೈಲಿಗೆಯಂತೆ” ಎರಡು ಕೃತಿಗಳು ಹಚ್ಚಿನಲ್ಲಿವೆ. ಇವರ ಪ್ರವೃತ್ತಿ ಸಾಹಿತ್ಯ, ಸಂಸ್ಕೃತಿ, ಮತ್ತು ಜನಪರ ಹೋರಾಟ ಕ್ಷೇತ್ರಗಳಲ್ಲಿ ಚಾಚಿಕೊಳ್ಳುತ್ತದೆ.

ಮುಂದುವರಿದು, ಇವರ ಕೆಲ ಲೇಖನಗಳು ಕೂಡ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ. “ನೋ ರಾಮ್, ಜೈಭೀಮ್”, “ಭಾರತೀಯ ಸೇನೆ ಪ್ರಶ್ನಾತೀತವೆ” ಹಾಗೂ “ಎಬಿವಿಪಿ ಭಯೋತ್ಪಾದನೆ ಕೃತಿಯ ಮೊದಲ ಮಾತು”  ಲೇಖನಗಳು ಇಂಗ್ಲಿಷ್ ಗೆ ಅನುವಾದಗೊಂಡಿರುವುದು ಇವರ ಬರವಣಿಗೆಗೆ ಇರುವ ಶಕ್ತಿಯನ್ನು ಪ್ರದರ್ಶಿಸುತ್ತದೆ.

ಕನ್ನಡದ ಪ್ರತಿಷ್ಠಿತ ಕವಿಗೋಷ್ಠಿಗಳಲ್ಲದೆ ಮೈಸೂರಿನಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನ, ವಿಶ್ವ ಪ್ರಸಿದ್ಧ ಮೈಸೂರು ದಸರಾ ಯುವಕವಿ ಗೋಷ್ಠಿ, ಹಾವೇರಿಯಲ್ಲಿ ನಡೆದ ಮೇ ಸಾಹಿತ್ಯ ಮೇಳ, ಮಂಗಳೂರಿನಲ್ಲಿ ನಡೆದ ಜನನುಡಿ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ದಾವಣಗೆರೆ ಜಿಲ್ಲಾಡಳಿತದ ವತಿಯಿಂದ ದಲಿತ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ಮತ್ತು ಇತರೆ ಸಮ್ಮೇಳನಗಳಲ್ಲಿ ಕಾವ್ಯ ವಾಚನ ಮಾಡಿ ತಳಸಮದಾಯದ ಸಂವೇದನೆಗೆ ದನಿಗೂಡಿಸಿದ್ದಾರೆ.

ಹಾರೋಹಳ್ಳಿ ರವೀಂದ್ರರವರು ವಿಜಯ ಕರ್ನಾಟಕ, ಕನ್ನಡ ಪ್ರಭ, ವಾರ್ತಾಭಾರತಿ, ಆಂದೋಲನ, ಪ್ರಜಾವಾಣಿ, ಜನತಾ ಮಾಧ್ಯಮ, ಮೈಸೂರು ಮಿತ್ರ, ರಾಜ್ಯಧರ್ಮ, ಅಗ್ನಿ, ಹೊಸತು ಹಾಗೂ ರೌಂಡ್ ಟೇಬಲ್ ಇಂಡಿಯಾ, ಜನಶಕ್ತಿ ಮೀಡಿಯಾ, ವರ್ತಮಾನ, ಜಸ್ಟ್ಕನ್ನಡ, ಸಂಪದ ಸೇರಿದಂತೆ ವೃತ್ತ ಪತ್ರಿಕೆಗಳು ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ೧೫೦ ಕ್ಕೂ ಹೆಚ್ಚು ಲೇಖನಗಳು ಹಾಗೂ ಕವಿತೆಗಳು ಪ್ರಕಟಣೆ ಮಾಡಿದ್ದಾರೆ.

೨೦೧೬ ರಲ್ಲಿ “ದಿ ವೀಕ್” ನಲ್ಲಿ ಇವರು ಭಾಗವಹಿಸಿದ್ದ ದಲಿತ ಹೋರಾಟ ಹಾಗೂ ೨೦೨೩ರಲ್ಲಿ “ಔಟ್ ಲುಕ್” ನಂತಹ ಮ್ಯಾಗಝೀನ್ ಗಳು ಇವರ ಕುರಿತ ವರದಿ ಮತ್ತು ಲೇಖನ ಪ್ರಕಟಸಿ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ನೀಡಿವೆ.

ಈವರೆಗೂ ಹಾರೋಹಳ್ಳಿ ರವೀಂದ್ರ ರಾಜ್ಯ “ಸಾಹಿತ್ಯ ಸಿರಿ” ಹಾಗೂ ಕರ್ನಾಟಕ ಬೌದ್ಧ ಸಮಾಜ ಕೊಡ ಮಾಡುವ ರಾಜ್ಯಮಟ್ಟದ “ಭೀಮರತ್ನ” ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ಸದ್ಯಕ್ಕೆ ರವೀಂದ್ರ ರವರು ೨೦೨೨ರಿಂದ ರೌಂಡ್ ಟೇಬಲ್ ಇಂಡಿಯ ಎಂಬ ಆನ್ಲೈನ್ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಮ್ಮ ನಡುವೆ ಕನ್ನಡದ ಕವಿಯಾಗಿ, ಲೇಖಕನಾಗಿ ಹಾಗೂ ವಿಮರ್ಶಕನಾಗಿ ಗುರುತಿಸಿಕೊಂಡಿರುವ ಹಾರೋಹಳ್ಳಿ ರವೀಂದ್ರ ಅವರು ವಿಜಯಪುರದಲ್ಲಿ ನಡೆಯುವ ೧೦ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದಕ್ಕೆ ಅಭಿನಂದಿಸೋಣ.

——————————–

ಡಾ. ದಿಲೀಪ್ ನರಸಯ್ಯ ಎಂ.