ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕದಲ್ಲಿ ಜಾತಿ ತಾರತಮ್ಯತೆ

*ನಾನೇಕೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತಿದ್ದೇನೆಂದರೇ….*
ಆತ್ಮೀಯರೇ,
ಇತ್ತೀಚೆಗೆ ನಾನು ಹಾಸನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತಿರುವ ಬಗ್ಗೆ ಒಂದು ವಿಚಾರದಲ್ಲಿ ಪ್ರಸ್ತಾಪಿಸಿದ್ದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತಗೊಳಿಸಿಕೊಳ್ಳಬೇಕೆಂಬ ಇರಾದೆ, ಜೊತೆಗೆ ನಾನೇಕೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುತ್ತೇನೆಂದು ಹೇಳುತ್ತಾ ನನ್ನ ಸ್ವ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ…
ಕಳೆದ ಕಸಾಪ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ನಮ್ಮ ಆತ್ಮೀಯರೊಬ್ಬರಿಗೆ ಪ್ರಚಾರ ಮಾಡುವಾಗ ಮುಂದಿನ ಬಾರಿ ನಮ್ಮಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲು ಹಾಗೂ ಅದಕ್ಕೆ ಸಹಕಾರ ನೀಡಲು ಒಂದು ಮಾತುಕತೆಯಾಗಿತ್ತು. ಅದರಲ್ಲಿ ನಾನು ಜಾವಗಲ್ ಪ್ರಸನ್ನ, ಕೊಟ್ರೇಶ್ ಎಸ್. ಉಪ್ಪಾರ್ ಹಾಗೂ ಗಂಜಲಗೂಡು ಗೋಪಾಲೇಗೌಡ ಸೇರಿದಂತೆ ಹಲವರು ಹಗಲಿರುಳು ದುದಿಡಿದ್ದೆವು. ಆದರೆ ಕಾರಣಾಂತರಗಳಿಂದ ಹೊರಬಂದೆವು. ಇಲ್ಲಿ ಯಾರನ್ನೂ ದೂರಲು ಹೋಗುವುದಿಲ್ಲ. ಆದರೆ ಜಿಲ್ಲೆಯಲ್ಲಿ ಸಾಹಿತ್ಯ ಕಟ್ಟುವ ಸಲುವಾಗಿ, ಕನ್ನಡಕ್ಕಾಗಿ, ಮೇಲಾಗಿ ಎಲ್ಲಾ ತಳ ಸಮುದಾಯ, ಎಲ್ಲಾ ವರ್ಗದ ಹಿತೈಷಿಗಳು, ಸ್ನೇಹಿತರ ಒತ್ತಾಸೆ ಮೇರೆಗೆ ಸ್ವಾಭಿಮಾನಕ್ಕಾಗಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.
ಇದರಾಚೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಸಂಘಟನೆ ದೃಷ್ಠಿಯಿಂದ ನೋಡುವುದಾದರೆ ನಾನು ಈವರೆಗೆ ನಡೆದುಕೊಂಡು ಬಂದಿರುವ ಹಾದಿಯಲ್ಲಿ ಒಬ್ಬ ದಲಿತ ಸಮುದಾಯದಿಂದ ಬಂದವನಾಗಿ ಈ ಬಾರಿ ನನ್ನ ಉಮೇದುವಾರಿಕೆಯನ್ನು ಅಧಿಕೃತವಾಗಿ ದೃಢೀಕರಿಸುತ್ತಿದ್ದೇನೆ. ಏಕೆಂದರೆ ಈವರೆಗೆ ಕಸಾಪದಲ್ಲಿ ದಲಿತ ಸಮುದಾಯದಿಂದ ಒಬ್ಬರೂ ಅಧ್ಯಕ್ಷರಾಗಿಲ್ಲ. ಯಾರೂ ಕೂಡ ಚುನಾವಣೆಗೂ ನಿಂತಿಲ್ಲ. ಈ ಹಿಂದೆ ಅವಕಾಶ ಮಾಡಿಕೊಡುವ ಬಗ್ಗೆ ಮಾತುಗಳಿತ್ತಾದರೂ ಯಾರೊಬ್ಬರೂ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ನಾನು ಈ ದೇಶದ ಸಂವಿಧಾನದ ಮೇಲೆ ನಂಬಿಕೆ ಇಟ್ಟವನು. ಬುದ್ದ, ಬಸವ, ಅಂಬೇಡ್ಕರ್, ಕುವೆಂಪು ನನ್ನ ಆದರ್ಶ. ಇವರ ಆದರ್ಶಗಳನ್ನು ಇಟ್ಟುಕೊಂಡೆ ಕಸಾಪ ಚುನಾವಣೆಯಲ್ಲಿ ನನ್ನ ಉಮೇದುವಾರಿಗೆ ಸಲ್ಲಿಸುವ ಮೂಲಕ ನಾನು ಆಕಾಂಕ್ಷಿ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ.
*ಇದರಾಚೆ ನಾನು ಯಾರು ನನ್ನ ಹಿನ್ನೆಲೆ ಏನು..? ನನ್ನ ಸಾಹಿತ್ಯ, ಸಂಘಟನೆ, ಹೋರಾಟ ಹೀಗೆ ಹಲವು ವಿಷಯಗಳ ಬಗ್ಗೆ ಒಂದು ಚಿಕ್ಕ ಸ್ವ-ವಿವರವನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತಿದ್ದೇನೆ…*
ಹೆಸರು: ನಾಗರಾಜ್ ಹೆತ್ತೂರು. ( ಹೆಚ್.ಎಸ್ . ನಾಗರಾಜು)
ಎಂ.ಎ. ಸಂವಹನ ಮತ್ತು ಪತ್ರಿಕೋದ್ಯಮ, ಮೈಸೂರು ವಿಶ್ವವಿದ್ಯಾಲಯ
ಹುಟ್ಟಿದ್ದು 07-07-1980 ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ. ತಂದೆ ಬ್ಯಾಂಕ್ ಸುಬ್ಬಯ್ಯ, ತಾಯಿ ಸುಶೀಲಮ್ಮ, ಹೆಸರಿನೊಂದಿಗೆ ಹೆತ್ತೂರು ಸೇರಿಕೊಂಡಿದೆ.
ಪ್ರಸ್ತುತ ಹಾಸನದಲ್ಲಿ ನೆಲೆ. ಪ್ರಥಮಿಕ ಪ್ರೌಢಶಾಲೆ ಮತ್ತು ಪಿಯುಸಿ ಯನ್ನು ಹೆತ್ತೂರಿನಲ್ಲಿ ಓದಿದ ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ಈ ಸಂದರ್ಭದಲ್ಲಿ ಬಹುಜನ ಚಳುವಳಿಯ ಸಕ್ರೀಯ ಕಾರ್ಯಕರ್ತನಾಗಿ ಕೆಲಸ. ನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದುಕೊಂಡಿರುತ್ತೇನೆ.
*ಪತ್ರಕರ್ತನಾಗಿ…*
ಮಾನಸ ಗಂಗೋತ್ರಿಯಲ್ಲಿ ಎಂ.ಎ. ಸಂವಹನ ಮತ್ತು ಪತ್ರಿಕೋದ್ಯಮ ಮುಗಿಸಿದ್ದು. ದಾವಣಗೆರೆ ಜಿಲ್ಲಾ ವರದಿಗಾರನಾಗಿ ಸೂರ್ಯೋದಯ ಪತ್ರಿಕೆಯಿಂದ ಪತ್ರಿಕೋದ್ಯಮ ಆರಂಭ, 5 ವರ್ಷ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ನಂತರ ರಾಜಿನಾಮೆ. ಕಳೆದ 3 ವರ್ಷಗಳಿಂದ ಹಾಸನದಲ್ಲಿ ಸಂಪಾದಕ ಹಾಗೂ ಮಾಲೀಕರಾಗಿ `ಭೀಮ ವಿಜಯ’ ಕನ್ನಡ ದಿನಪತ್ರಿಕೆ ನಡೆಸುತ್ತಿದ್ದೇನೆ.
*ಸಾಹಿತ್ಯ ಮತ್ತು ಕೃತಿಗಳು ಮತ್ತು ನಾಟಕ*
ಪ್ರಸ್ತುತ ಪೌರಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದು, ಅವರ ಬದುಕು ಬವಣೆ ಕುರಿತಂತೆ *ಜಾಡಮಾಲಿ ಜಗತ್ತು* ಅನುಭವ ಕಥನ, *ಬೆವರ ದನಿಗಳು*’ ಹಾಗೂ *ಜಲದ ಮಂಟಪ’* ಕವನ ಸಂಕಲನ ಬಿಡುಗಡೆಯಾಗಿವೆ. *ಪೌರ ಕಾರ್ಮಿಕರ ಆರ್ಥಿಕ ನೆಲೆಗಟ್ಟುಗಳು*’ ಹೆಸರಿನ ಸಂಶೋಧನಾ ಪ್ರಬಂಧವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಮಂಡಿಸಿದ್ದು ಕರ್ನಾಟಕ ವಾರ್ತಾ ಇಲಾಖೆಗೆ ಅಂಬೇಡ್ಕರ್ ಅಭಿವೃದ್ದಿ ನಿಗಮದ ಕುರಿತ ಸಂಶೋಧನ ಪ್ರಬಂಧ ಮಂಡಿಸಿರುತ್ತೇನೆ. ಅಲ್ಲದೇ ಕೆಲವು ಸಂಪಾದಿತ ಪುಸ್ತಕಗಳಿಗೆ ಸಂಪಾದಕನಾಗಿ ಕೆಲಸ ಮಾಡಿರುತ್ತೇನೆ. ಯುವ ಕವಿಗಳನ್ನು ಪ್ರೋತ್ಸಾಹಿಸಲು *ನಕ್ಷತ್ರ ಪ್ರಕಾಶನ* ವನ್ನು ತೆರೆದಿದ್ದು ಅದರ ಮೂಲಕ ಎರಡು ಕೃತಿಗಳನ್ನು ಹೊರತಂದಿರುತ್ತೇವೆ.
ಪೌರ ಕಾರ್ಮಿಕರ ಕುರಿತ “ಜಾಡಮಾಲಿ ಜಗತ್ತು’’ ಕೃತಿ ನಾಟಕವಾಗಿ 50 ಕ್ಕೂ ಹೆಚ್ಚು ಪ್ರದರ್ಶನ, ಬೆಂಗಳೂರಿನ ವಿಕಾಸ ಸೌಧದಲ್ಲಿ ವಿಶೇಷ ಪ್ರದರ್ಶನ ಕಂಡಿರುತ್ತದೆ.
ಕರ್ನಾಟಕದ ಪ್ರತಿನಿಧಿಯಾಗಿ ದೆಹಲಿ ಪ್ರತಿನಿಧಿ
2020 ರಲ್ಲಿ ಕೆಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ದೆಹಲಿಯಲ್ಲಿ ನಡೆದ ಅಖಿಲ ಭಾರತ ಸಾಹಿತಿಗಳ ಮಿಲನ ಕಾರ್ಯಕ್ರಮದಲ್ಲಿ ನಾನು ಮತ್ತು ನನ್ನ ಸಮಕಾಲೀನ ಸಾಹಿತ್ಯ ( ಯುವ ಬರಹಗಾರರ ಸಮಾವೇಶ ) ಇದರಲ್ಲಿ ದಕ್ಷಿಣ ಭಾರತದಿಂದ ಕರ್ನಾಟಕವನ್ನು ಪ್ರತಿನಿಧಿಸಿದ ಏಕೈಕ ಕನ್ನಡಿಗ ಆಗಿದ್ದು ಯಶಸ್ವಿಯಾಗಿ ಪ್ರತಿನಿಧಿಸಿರುತ್ತೇನೆ.
ಕವಿಗೋಷ್ಟಿ ಮತ್ತು ಬರವಣಿಗೆ
ಕೆಂಡಸಂಪಿಗೆ, ಅವಧಿ ಸೇರಿದಂತೆ ಬ್ಲಾಗ್ ಬರವಣಿಗೆ. ಸ್ಥಳೀಯ ಪತ್ರಿಕೆಗಳಿಗೆ ಅಂಕಣ ಬರಹ. ಮೈಸೂರು ದಸರಾ ಕವಿಗೋಷ್ಠಿ, ಕಸಾಪ ವತಿಯಿಂದ ಕೋಲಾರದಲ್ಲಿ ನಡೆದ ಮೊದಲ ದಲಿತ ಸಮ್ಮೇಳನದಲ್ಲಿ ಕವಿಗೋಷ್ಠಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಕವನ ವಾಚನ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ಪಲ್ಲಟ ರಂಗಪೋಷಕ ಪ್ರಶಸ್ತಿ ಸೇರಿದಂತೆ ಗೌರವ ಸನ್ಮಾನಗಳು ಸಂದಿವೆ.
*ಹೋರಾಟಗಾರನಾಗಿ*
ಪ್ರಸ್ತುತ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ದ ರಾಜ್ಯ ಸಂಘಟನಾ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದು, ನಮ್ಮ ನಾಗಭೂಮಿ ವಿವಿದೋದ್ದೇಶ ಅಭಿವೃದ್ದಿ ಸಂಸ್ಥೆಯಿಂದ ಹಾಸನ ಜಿಲ್ಲೆಯಲ್ಲಿ ಐದು ದಲಿತ ಸಾಹಿತ್ಯ ಜಿಲ್ಲಾ ಸಂಘಟನಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದೇನೆ.
ಈ ಮೂಲಕ ಜಿಲ್ಲೆಯ ದಲಿತ ಕವಿಗಳು, ಶೋಷಿತರ ಮತ್ತು ಅಲಕ್ಷ್ಯಕ್ಕೆ ಒಳಗಾದವರಿಗೆ ವೇದಿಕೆ ಕೊಡುವ ಮೂಲಕ ಜಾತ್ಯಾತೀತವಾಗಿ ಕೆಲಸ ಮಾಡಿರುತ್ತೇನೆ. ಈ ಮೂಲಕ ದುದ್ದ ಶ್ರೀನಿವಾಸ್, ಎಚ್.ಆರ್. ಸ್ವಾಮಿ, ಬಿ.ಪಿ ಜಯರಾಂ, ಹೆಚ್.ಕೆ. ಸಂದೇಶ್, ಬೆಳಗುಲಿ ಕೆಂಪಯ್ಯ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದೇವೆ. ಇದಲ್ಲದೇ ಎಲ್ಲಾ ಜಾತಿಯ ದಲಿತರ, ಶೋಷಿತರ, ಮಹಿಳೆಯರ, ಮಂಗಳಮುಖಿ ಅಥವಾ ತೃತಿಯ ಲಿಂಗಿಗಳ ಪರ ನಿರಂತರ ಹೋರಾಟ ನಡೆಸುತ್ತಿರುತ್ತೇನೆ.
ದೂರವಾಣಿ ಸಂಖ್ಯೆ: 9110228083 9663828929, ಮೇಲ್–nagarajhettur@gmail.com.
ಇದಿಷ್ಟು ನನ್ನ ಸ್ವ ವಿವರ ಕಸಾಪ ಸ್ಥಾನಕ್ಕೆ ಬೇರೆಲ್ಲಾ ದೊಡ್ಡಸ್ತಿಕೆಗಿಂತ ಕನ್ನಡಕ್ಕಾಗಿ, ಸಾಹಿತ್ಯಕ್ಕಾಗಿ ನಮ್ಮ ಕೆಲಸಗಳೇನು ನಮ್ಮ ಸಾಹಿತ್ಯಿಕ, ಸಂಘಟನೆಯ ಹಿನ್ನೆಲೆಗಳೇನು ಎಂಬುದು ಮುಖ್ಯವಾಗುವುದಾದರೆ ಇವುಗಳನ್ನು ಪರಿಗಣಿಸಬೇಕೆಂದು ನನ್ನ ವಿನಮ್ರ ಪೂರಕ ಮನವಿ.
ಸ್ವಾಭಿಮಾನಕ್ಕಾಗಿ ನಮ್ಮನ್ನು ಬೆಂಬಲಿಸುತ್ತೀರಿ ಎಂಬ ಸದಾಶಯಗಳೊಂದಿಗೆ
ನಿಮ್ಮ ಸೇವಾಕಾಂಕ್ಷಿ…
✍️ *ನಾಗರಾಜ್ ಹೆತ್ತೂರು*
—————————————————-

[ ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಿದ್ದು, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಯಾಗಿದೆ. ಅಧ್ಯಕ್ಷ ಮಾದರಿಯಲ್ಲಿ ರೂಪಿತವಾಗಿರುವ ಈ ಸಂಸ್ಥೆಯ ಮೇಲೆ ದುತ್ತನೆ ಚರ್ಚೆಯೊಂದನ್ನು ಬರಹಗಾರ ಹಾಗೂ ಪತ್ರಕರ್ತರಾದ ನಾಗರಾಜ್ ಹೆತ್ತೂರ್ ಅವರು ಹುಟ್ಟುಹಾಕಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಈವರೆವಿಗೂ ದಲಿತನೊಬ್ಬ ಕಸಾಪ ಚುನಾವಣೆಗೆ ಸ್ಪರ್ಧಿಸಿಲ್ಲ ಹಾಗೂ ಒಂದು ವೇಳೆ ಸ್ಪರ್ಧಿಸಿದರು ಅವರನ್ನು ಯಾರೂ ಬೆಂಬಲಿಸುವುದಿಲ್ಲ ಎಂಬುದನ್ನು ನಾಗರಾಜ್ ಹೆತ್ತೂರ್ ಕಸಾಪದೊಳಗಿನ ಜಾತಿ ರಾಜಕೀಯವನ್ನು ಹೊರಹಾಕಿದ್ದಾರೆ.

ಕಸಾಪದೊಳಗಿನ ಜಾತಿ ತಾರತಮ್ಯತೆ ಹಾಸನ ಜಿಲ್ಲೆಯ ಸಮಸ್ಯೆಯಲ್ಲ. ಇದು ರಾಜ್ಯ ಮಟ್ಟದ ಸಮಸ್ಯೆಯಾಗಿದೆ. ಈ ವರೆವಿಗೂ ಚಾಮರಾಜ ನಗರ ಜಿಲ್ಲೆಯನ್ನು ಹೊರತು ಪಡಿಸಿದರೆ ಉಳಿದ ಯಾವ ಜಿಲ್ಲೆಯಲ್ಲಿಯೂ ದಲಿತರು ಅಧ್ಯಕ್ಷರಾಗಿಲ್ಲ. ರಾಜ್ಯ ಕಮಿಟಿಯಲ್ಲಂತು ದಲಿತರದು ಕನಸಿನ ಮಾತು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಹೆಸರನ್ನು ಪಟಿಸುವ ಕಸಾಪದಲ್ಲಿ ಸಾಮಾಜಿಕ ನ್ಯಾಯವಿಲ್ಲದೆ ಜಾತಿ ರಾಜಕಾರಣದ ಚರಂಡಿಯಾಗಿದೆ. ಇನ್ನಾದರೂ ಕಸಾಪ ಸಾಮಾಜಿಕ ನ್ಯಾಯದ ಬೆಳಕು ಕಾಣಲಿ. – ರೌಂಡ್ ಟೇಬಲ್ ಇಂಡಿಯಾ ]

 

Be the first to comment on "ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕದಲ್ಲಿ ಜಾತಿ ತಾರತಮ್ಯತೆ"

Leave a comment

Your email address will not be published.


*