ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್

ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್

-ಉತ್ಪಾಲ್ ಐಚ್ ( Utpal Aich)

ಕನ್ನಡಕ್ಕೆ: ಮಂಜುನಾಥ ನರಗುಂದ

ಜನವರಿ 1929 ರಲ್ಲಿ, ಮೀರತ್ ಕಾಲೇಜಿನಲ್ಲಿ ತತ್ವಶಾಸ್ತ್ರದ ಯುವ ಉಪನ್ಯಾಸಕರಾಗಿದ್ದ ಜಾದುನಾಥ್ ಸಿನ್ಹಾ ಶೈಕ್ಷಣಿಕವಾಗಿ ಉತ್ತಮ ಹೆಸರನ್ನು ಗಳಿಸಿದ್ದರು.  1922 ರ ಅಪೇಕ್ಷಿತ ಪ್ರೇಮ್‌ಚಂದ್ ರಾಯ್‌ಚಂದ್ ವಿದ್ಯಾರ್ಥಿವೇತನಕ್ಕಾಗಿ (ಪಿಆರ್‌ಎಸ್) ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾದ ‘ಇಂಡಿಯನ್ ಸೈಕಾಲಜಿ ಆಫ್ ಪರ್ಸೆಪ್ಷನ್, ಸಂಪುಟ I ಮತ್ತು ಸಂಪುಟ II’ಎನ್ನುವ ಪ್ರಬಂಧವನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ಕೃತಿ ಚೌರ್ಯಗೊಳಿಸಿದ್ದಾರೆ ಎಂದು ದೂರುವ ಮೂಲಕ ಸಾಹಿತ್ಯ ಜಗತ್ತಿನಲ್ಲಿ ಹೊಸ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿದ್ದರು. ತಮ್ಮ ಪ್ರಬಂಧದ ಮೊದಲ ಸಂಪುಟವನ್ನು 1922 ರಲ್ಲಿ ಸಲ್ಲಿಸಿದ್ದರೆ, 1923 ರಲ್ಲಿ ತಮ್ಮ ಪ್ರಬಂಧದ ಎರಡನೇ ಸಂಪುಟವನ್ನು ಸಲ್ಲಿಸಿದ್ದರು. ಅವರು ತಮ್ಮ ಎರಡು ಸಂಪುಟಗಳಿಂದಲೂ ಕೃತಿ ಚೌರ್ಯವನ್ನು ಮಾಡಲಾಗಿದೆ ಎಂದು ಆರೋಪಿಸಿದ್ದರು.

(ಪ್ರೊಫೆಸರ್. ಜಾದುನಾಥ್ ಸಿನ್ಹಾ )

ಜಾದುನಾಥ ಸಿನ್ಹಾ  ಅವರು ಬಿ.ಎ. (ಆನರ್ಸ್) ಪದವಿಯನ್ನು 1915 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪಡೆದರು , ಇದೇ ವೇಳೆ ಅವರು ಫಿಲಿಪ್ ಸ್ಯಾಮ್ಯುಯೆಲ್ ಸ್ಮಿತ್ ಪ್ರಶಸ್ತಿ ಮತ್ತು ಕ್ಲಿಂಟ್ ಸ್ಮಾರಕ ಬಹುಮಾನವನ್ನು ಪಡೆದರು. ಮುಂದೆ ಅವರು 1917 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ 1922 ಕ್ಕೆ ಪ್ರತಿಷ್ಠಿತ ಪ್ರೇಮ್‌ಚಂದ್ ರಾಯ್‌ಚಂದ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದರು.

ಜಾದುನಾಥ್ ಸಿನ್ಹಾ 1923 ರಲ್ಲಿ ಬಹುಮಾನ, ಮತ್ತು ಕಲ್ಕತಾ ವಿವಿನ ಮೌತ್ ಪದಕಗಳ ಮೂಲಕ ತಮ್ಮ ಉಳಿದ ಪ್ರಬಂಧಗಳನ್ನು 1925ರಲ್ಲಿ ಸಲ್ಲಿಸಿದರು. ಕಲ್ಕತ್ತಾ ವಿಶ್ವವಿದ್ಯಾಲಯವು ಸರ್ ಬ್ರಜೇಂದ್ರನಾಥ ಸೀಲ್ ಮತ್ತು ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರನ್ನು ಈ ಪ್ರಬಂಧದ ಪರಿಕ್ಷಕರನ್ನಾಗಿ ನೇಮಕ ಮಾಡಿತು.(ಪ್ರೊ. ಸೀಲ್ ಮೈಸೂರು ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯಾಗಿ ಸೇರಿದ ನಂತರ ಮಾರ್ಚ್ 1921 ರಲ್ಲಿ ಕಲ್ಕತ್ತಾ ವಿವಿಯ ಮಾನಸಿಕ ಮತ್ತು ನೈತಿಕ ತತ್ತ್ವಶಾಸ್ತ್ರದ ಮೊದಲ ಜಾರ್ಜ್ ವಿ ಪ್ರೊಫೆಸರ್ ಸರ್ ಬ್ರಜೇಂದ್ರನಾಥ್ ಸೀಲ್ ಅವರ ಸ್ಥಾನಕ್ಕೆ ರಾಧಾಕೃಷ್ಣನ್ ನೇಮಕವಾದರು) ಸಂಪುಟ II ಮತ್ತು ಇತರ ಪ್ರಬಂಧಗಳ ನಂತರದ ಭಾಗಗಳನ್ನು ಡಾ. ಎಸ್. ರಾಧಾಕೃಷ್ಣನ್ ಮತ್ತು ಕಲ್ಕತಾ ವಿವಿಯ ಪ್ರೊ.ಕೃಷ್ಣ ಚಂದ್ರ ಭಟ್ಟಾಚಾರ್ಜಿ ಅವರು ಮೌಲ್ಯಮಾಪನ ಮಾಡಿದರು. ಪ್ರೊ.ಜದುನಾಥ ಸಿನ್ಹಾ ಅವರ ಪ್ರಕಾರ,  ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪುಸ್ತಕ ‘ಇಂಡಿಯನ್ ಫಿಲಾಸಫಿ ಸಂಪುಟ II’ ಜಾದುನಾಥ್ ಸಿನ್ಹಾ ಅವರ ಪ್ರಬಂಧದಿಂದ (ಸಂಪುಟ I ಮತ್ತು II) ಹೇರಳವಾಗಿ ಕದ್ದ ಪ್ಯಾರಾಗ್ರಾಫ್‌ಗಳನ್ನು ಒಳಗೊಂಡ ಸಂಪುಟ  II ನ್ನು 1927 ರಲ್ಲಿ ಪ್ರಕಟಿಸಲಾಯಿತು, ಆದರೆ ಅವರಿಗೆ ಈ ಕೃತಿಸ್ವಾಮ್ಯದ ಉಲ್ಲಂಘನೆಯು ಅವರಿಗೆ ನವೆಂಬರ್ 1928 ರಲ್ಲಿ ಗಮನಕ್ಕೆ ಬಂತು. ತದನಂತರ ಪ್ರೊ. ಜದುನಾಥ್ ಸಿನ್ಹಾ ಅವರು ಕೃತಿಚೌರ್ಯದ ವಿಚಾರವಾಗಿ ಮಾಡರ್ನ್ ರಿವ್ಯೂ (ಎಮ್ಆರ್) ನಿಯತಕಾಲಿಕೆಗೆ ಡಿಸೆಂಬರ್ 20, 1928 ರಲ್ಲಿ ಪತ್ರದ ಮೂಲಕ ಗಂಭೀರ ದೂರು ದಾಖಲಿಸಿದರು, ಇದು ಮುಂದೆ ಜನವರಿ 1929 ರ ಸಂಚಿಕೆಯಲ್ಲಿ ಪ್ರಕಟವಾಯಿತು.

ಡಾ.ರಾಧಾಕೃಷ್ಣನ್ ಅವರು 1928 ರಲ್ಲಿ “ದಿ ವೇದಾಂತ ಅಕಾರ್ಡಿಂಗ್ ಟು ಶಂಕರ್ ಅಂಡ್ ರಾಮಾನುಜ'” ಎಂಬ ಮತ್ತೊಂದು ಪುಸ್ತಕವನ್ನು ಪ್ರಕಟಿಸಿದ್ದರು, ಇದು ವಾಸ್ತವವಾಗಿ ಅವರ ‘ಇಂಡಿಯನ್ ಫಿಲಾಸಫಿ ಸಂಪುಟ II’ ಪುಸ್ತಕದ 8 ಮತ್ತು 9 ಅಧ್ಯಾಯಗಳ ಮರು ಮುದ್ರಣವಾಗಿತ್ತು. ಆ ಪುಸ್ತಕದಲ್ಲಿ ಪ್ರೊ.ಜದುನಾಥ್ ಸಿನ್ಹಾ ಅವರ ಪ್ರೇಮ್‌ಚಂದ್ ರಾಯ್‌ಚಂದ್ ವಿದ್ಯಾರ್ಥಿವೇತನ ಪ್ರಬಂಧದಿಂದ ವ್ಯಾಪಕವಾದ ಕೃತಿ ಚೌರ್ಯದ ಪ್ಯಾರಾಗಳಿವೆ. ಆದರೆ 1924 ಮತ್ತು 1926 ರ ಮೀರತ್ ಕಾಲೇಜು ನಿಯತಕಾಲಿಕೆಯಲ್ಲಿ ಪ್ರೊ ಜಾದುನಾಥ್ ಸಿನ್ಹಾ ತಮ್ಮ ಪ್ರೇಮ್‌ಚಂದ್ ರಾಯ್‌ಚಂದ್ ಸ್ಟೂಡೆಂಟ್ ಶಿಪ್ ಪ್ರಬಂಧದ ಆ ಎರಡು ಭಾಗಗಳಿಂದ ಪ್ರಕಟಿಸಿದ್ದರು.

(ಪ್ರಕರಣಕ್ಕೆ ಸಂಬಂಧಿಸಿದ ಪತ್ರಿಕಾ ವರದಿಯ ಭಾಗ-1)

ಪ್ರೊ.ಜದುನಾಥ್ ಸಿನ್ಹಾ ಅವರು ಮಾಡರ್ನ್ ರಿವ್ಯೂ (ಎಮ್ಆರ್)ಗೆ ಬರೆದ ಮೊದಲ ಪತ್ರದ ಜೊತೆಗೆ ಇನ್ನೂ ಮೂರು ಪತ್ರಗಳನ್ನು  ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ 1929 ರ ಸಂಚಿಕೆಗಳಲ್ಲಿ ಪ್ರಕಟಿಸಿದ್ದರು. ಪ್ರೊ.ಸಿನ್ಹಾ ಅವರು ತಮ್ಮ ವಾದವನ್ನು ಸಾಬೀತುಪಡಿಸಲು ಇನ್ನೂ ಹಲವು ಬರಹಗಳನ್ನು ಉಲ್ಲೇಖಿಸಿದರು. ಇದಕ್ಕೆ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರು ಫೆಬ್ರವರಿ ಮತ್ತು ಮಾರ್ಚ್ 1929 ರ ಮಾಡರ್ನ್ ರಿವ್ಯೂ ಸಂಚಿಕೆಗಳಲ್ಲಿ ಎರಡು ಪತ್ರಗಳನ್ನು ಪ್ರಕಟಿಸುವ ಮೂಲಕ ಉತ್ತರಿಸಿದರು. ಆದರೆ ಡಾ. ರಾಧಾಕೃಷ್ಣನ್ ಅವರ ವಾದಗಳು ಬಹುತೇಕ ಅಸಂಬದ್ಧ ಮತ್ತು ಪ್ರೊ. ಜದುನಾಥ್ ಸಿನ್ಹಾ ಅವರನ್ನು ದೂಷಿಸುವ ಪ್ರಯತ್ನಗಳಾಗಿದ್ದವು. ಮಾಡರ್ನ್ ರಿವ್ಯೂ (ಎಮ್ಆರ್) ನ ಸಂಪಾದಕ ಮತ್ತು ಪ್ರಭಾಶಿ ಎಂದು ಕರೆಯಲ್ಪಡುವ ಸಹ-ನಿಯತಕಾಲಿಕದ (ಬಂಗಾಳಿ ಭಾಷೆಯಲ್ಲಿ ಪ್ರಕಟವಾಗಿರುವ) ಶ್ರೀ ರಾಮಾನಂದ ಚಟ್ಟೋಪಾಧ್ಯಾಯರು ರಾಧಾಕೃಷ್ಣರ ಸಂಪಾದಕರ ಕಿರುಕುಳ ಆರೋಪದ ವಿಚಾರವಾಗಿ ಸುದೀರ್ಘ ಸಂಪಾದಕೀಯದ ಮೂಲಕ ಪ್ರತಿಕ್ರಿಯೆ ನೀಡಿದರು, ಇದನ್ನು ಮಾಡರ್ನ್ ರಿವ್ಯೂ ನ ಫೆಬ್ರವರಿ 1929 ರ ಸಂಚಿಕೆಯಲ್ಲಿ ಪ್ರಕಟಿಸಲಾಯಿತು.

(ಪ್ರಕರಣಕ್ಕೆ ಸಂಬಂಧಿಸಿದ ಪತ್ರಿಕಾ ವರದಿಯ ಭಾಗ-2)

ತದನಂತರ 1929 ರ ಆಗಸ್ಟ್ ತಿಂಗಳದ ಮೊದಲಾರ್ಧದಲ್ಲಿ ಪ್ರೊ.ಜದುನಾಥ ಸಿನ್ಹಾ ಅವರು ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಮೇಲೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. ತಮ್ಮ ಮೂಲ ಸಾಹಿತ್ಯ ಕೃತಿಚೌರ್ಯದಿಂದ ತಮಗೆ 20,000 ರೂಪಾಯಿಗಳು ನಷ್ಟವಾಗಿದೆ ಎಂದು ದೂರು ನೀಡಿದರು. ಇದಕ್ಕೆ ಪ್ರತಿಯಾಗಿ ಸರ್ವಪಲ್ಲಿ ರಾಧಾಕೃಷ್ಣನ್ ತಮ್ಮ ಮೇಲಿನ ದಾಳಿಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ 1929 ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರೊ.ಜದುನಾಥ ಸಿನ್ಹಾ ಮತ್ತು ಶ್ರೀ ರಾಮಾನಂದ ಚಟ್ಟೋಪಾಧ್ಯಾಯರ ವಿರುದ್ಧ ರೂ .1,00,000 /  ರೂಗಳ ಕೌಂಟರ್ ಮಾನನಷ್ಟ ಮೊಕದ್ದಮೆ ಹೂಡಿದರು!

(ಪ್ರಕರಣಕ್ಕೆ ಸಂಬಂಧಿಸಿದ ಪತ್ರಿಕಾ ವರದಿಯ ಭಾಗ-3)

ಪ್ರೊ.ಡಾ.ಜದುನಾಥ ಸಿನ್ಹಾ ಅವರ ಬಗ್ಗೆ ಶಿಕ್ಷಕರು ಎಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆಂದರೆ ಅವರ ಎಂ.ಎ. ಫಲಿತಾಂಶ ಬರುವ ಮುನ್ನವೇ ಅವರನ್ನು ಕಲ್ಕತ್ತಾದ ರಿಪನ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ಅವರು 1934 ರಲ್ಲಿ ಕಲ್ಕತ್ತಾ ವಿವಿಯಿಂದ ಪಿಎಚ್‌ಡಿ ಪದವಿಯನ್ನು ಮುಗಿಸಿದರು. ಅವರು ತತ್ವಶಾಸ್ತ್ರ ಮನಶಾಸ್ತ್ರದ ಕುರಿತಾಗಿ ಅತ್ಯುತ್ತಮ ಕೃತಿಗಳನ್ನು ಪ್ರಕಟಿಸುವ ಮೂಲಕ ಬಹುಮುಖಿ ಬರಹಗಾರರು ಎನಿಸಿಕೊಂಡರು. ಪ್ರಸಿದ್ಧ ಪ್ರಕಾಶನ ಸಂಸ್ಥೆಗಳು ಅವರ ಕೃತಿಗಳನ್ನು ಪ್ರಕಟಿಸಿದವು, ಅವರ ಎರಡು ಕೃತಿಗಳನ್ನು ಲಂಡನ್‌ನ ಕೆಗಾನ್ ಪಾಲ್ ಮೂಲಕ ಪ್ರಕಟಿಸಲಾಯಿತು. ಡಾ. ಸಿನ್ಹಾ  ಅವರು ಹಿಂದೂ ಧರ್ಮದ ಅತ್ಯಂತ ಮೂಲ ತತ್ವಜ್ಞಾನಿ ಎನಿಸಿಕೊಂಡಿದ್ದಲ್ಲದೆ ಭಾರತೀಯ ತತ್ವಶಾಸ್ತ್ರ, ಮನಶಾಸ್ತ್ರದಂತಹ ಅವರ ವಿಚಾರಗಳಿಂದಾಗಿ ಇಂದಿಗೂ ತತ್ವಶಾಸ್ತ್ರದ ವಿದ್ಯಾರ್ಥಿಗಳಿಂದ ಗೌರವಿಸಲ್ಪಡುತ್ತಾರೆ. ಮುಂದೆ ಪ್ರೊ.ಡಾ.ಜದುನಾಥ ಸಿನ್ಹಾ ಅವರು ತಮ್ಮ ಜೀವನದ ಉತ್ತರಾರ್ಧದಲ್ಲಿ ಧಾರ್ಮಿಕ ವಿಚಾರಗಳತ್ತ ಒಲವು ತೋರಿದರು.

(ಡಾ.ಸರ್ವಪಲ್ಲಿ ರಾಧಾಕೃಷ್ಣನ್)

ಪ್ರೊ.ಜದುನಾಥ ಸಿನ್ಹಾ ಅವರ ಮೇಲೆ ಪ್ರಕರಣವನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸುವಂತೆ ಸಾಕಷ್ಟು ಒತ್ತಡವಿತ್ತು. ಪ್ರೊ.ಜದುನಾಥ್ ಸಿನ್ಹಾ ಅವರ ಬಗ್ಗೆ ಸಹಾನುಭೂತಿ ಹೊಂದಿದ್ದ ಮತ್ತು ಕೃತಿಚೌರ್ಯದ ಬಗ್ಗೆ ಮನವರಿಕೆಯಾದ ಎಲ್ಲ ಬಂಗಾಳಿ ಹಿರಿಯ ಪ್ರಾಧ್ಯಾಪಕರು ನ್ಯಾಯಾಲಯದಲ್ಲಿ ಅವರಿಗೆ ಸಾಕ್ಷಿಧಾರರಾಗಲು ನಿರಾಕರಿಸಿದರು. ಇದೇ ವೇಳೆ ಪ್ರೊ.ಜದುನಾಥ ಸಿನ್ಹಾ ಅವರಿಗೂ  ಕೂಡ ಹಣಕಾಸಿನ ಕೊರತೆ ಕಾಡುತ್ತಿತ್ತು. ಡಾ.ಎಸ್.ರಾಧಾಕೃಷ್ಣನ್ ಅವರು ಇದೆಲ್ಲವನ್ನು ನಿರ್ವಹಿಸಲು ಸಾಕಷ್ಟು ಸ್ನೇಹಿತರ ಪ್ರಭಾವವನ್ನು ಹೊಂದಿದ್ದರು.ವಿಶೇಷವಾಗಿ ಸರ್ ಅಶುತೋಷ್ ಮುಖರ್ಜಿ ಅವರ ಪುತ್ರ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಸಹಾಯವೆನ್ನಬಹುದು. ಅಂದಿನ ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿ ಸರ್ ಅಶುತೋಷ್ ಮುಖರ್ಜಿ ಅವರು ಪ್ರತಿಷ್ಠಿತ ಕಿಂಗ್ ಜಾರ್ಜ್ ವಿ ಪ್ರೊಫೆಸರ್ ಹುದ್ದೆಗಾಗಿ ಸರ್ವಪಲ್ಲಿ ರಾಧಾಕೃಷ್ಣ ಅವರನ್ನು ತಿಂಗಳಿಗೆ 1000 ರೂ.ನೀಡುವ ಮೂಲಕ ಬೆಂಗಳೂರಿನಿಂದ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಕರೆತಂದಿದ್ದರು. ತದನಂತರ ಡಾ. ರಾಧಾಕೃಷ್ಣನ್ ಅವರ ಆಪ್ತರಾಗಿದ್ದ ಮತ್ತು ಆಗ ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಅವರ ಪುತ್ರ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರು ಈ ವಿಷಯವನ್ನು ಮುಚ್ಚಿಡಲು ಬಯಸಿದ್ದರು.

(ರಮಾನಂದ್ ಚಟ್ಟೋಪಾಧ್ಯಾಯ)

ಅಂತಿಮವಾಗಿ ಪ್ರೊ.ಜದುನಾಥ್ ಸಿನ್ಹಾ ಅವರು ಈ ಎಲ್ಲ ಒತ್ತಡಗಳಿಗೆ ಬಲಿಯಾಗಬೇಕಾಯಿತು ಮತ್ತು ನ್ಯಾಯಾಲಯದ ಹೊರಗೆ ಈ ಪ್ರಕರಣದ ಇತ್ಯರ್ಥಕ್ಕೆ ಒಪ್ಪಿಕೊಳ್ಳಬೇಕಾಯಿತು. ಮತ್ತು ಎರಡು ಮೊಕದ್ದಮೆಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಮುಂದೆ  ಬಹುಶಃ ಮೇ 1933 ರ ಮೊದಲ ವಾರದಲ್ಲಿ ತೀರ್ಪಿನ ಮೂಲಕ ಇತ್ಯರ್ಥಪಡಿಸಲಾಯಿತು, ಆದರೆ ಇತ್ಯರ್ಥದ ನಿಯಮಗಳನ್ನು ಬಹಿರಂಗಪಡಿಸಲಾಗಿಲ್ಲ.

ಈ ಮೇಲಿನ ಎಲ್ಲ ಮಾಹಿತಿಯು ಪ್ರೊ. ಡಾ.ಜದುನಾಥ ಸಿನ್ಹಾ ಅವರ ಪ್ರಕರಣದ ವಿಚಾರದಲ್ಲ್ಲಿಆಗಿದ್ದೇನು ಎನ್ನುವುದನ್ನು ತಿಳಿಸುವ ಒಂದು ಸಣ್ಣ ಚಿತ್ರಣ. ಇದರ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ, ಆದರೆ ಅದನ್ನು ಫೇಸ್ ಬುಕ್ ಸ್ನೇಹಿತರ ಸಮಯವನ್ನು ಗಮನದಲ್ಲಿಟ್ಟುಕೊಂಡು ಅದನ್ನು ಸಂಕ್ಷಿಪ್ತಗೊಳಿಸಲಾಗಿದೆ. ಈ ಪ್ರಕರಣದ ಪೂರ್ಣ ವಿವರಗಳಲ್ಲಿ ತಿಳಿದುಕೊಳ್ಳಲು ಮತ್ತು ಕೃತಿಚೌರ್ಯದ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೊಂದುವ ಆಸಕ್ತರ ಜ್ಞಾನಕ್ಕಾಗಿ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಸಿದ್ದಪಡಿಸಲಾಗುವುದು.

(ಕೃತಿಚೌರ್ಯ ಪ್ರಕರಣದ ಕುರಿತಾಗಿ ಪ್ರಕಟವಾಗಿರುವ ಪತ್ರಿಕಾ ವರದಿಗಳ ಮುಖ್ಯಾಂಶ)

Acknowledgement:

1) ಈ ಬರಹವು ಹಲವು ವೆಬ್‌ಸೈಟ್‌ಗಳು, ಪುಸ್ತಕಗಳು ಇತ್ಯಾದಿಗಳಲ್ಲಿ ಪ್ರಕಟವಾದ ಲೇಖನಗಳನ್ನು ಆಧರಿಸಿದೆ. ಅವುಗಳೆಲ್ಲವನ್ನು ನಾನಿಲ್ಲಿ ಒಟ್ಟುಗೂಡಿಸುವ ಪ್ರಯತ್ನ ಮಾಡಿದ್ದೇನೆ.

2)  ನಾನು ಇಲ್ಲಿ ಜನವರಿ 1982ರಲ್ಲಿ ಪ್ರಕಟವಾದ ಬರಿನ್ ಡಿ ಅವರ ಕೃತಿಯನ್ನು ಹೈಲೈಟ್ ಮಾಡಲು ಇಚ್ಚಿಸುತ್ತೇನೆ; ಈ ಪುಸ್ತಕವು ನಿಜಕ್ಕೂ ಮೌಲ್ಯಯುಕ್ತವಾಗಿದೆ. ಈ ಪುಸ್ತಕದ ಶೀರ್ಷಿಕೆ ‘ A Reported Case of Radhakrishnan’s Literary Piracy’ ಇದು ಸಮಗ್ರ ಇತಿಹಾಸವನ್ನು ಹೊಂದಿದೆ.ಏಪ್ರಿಲ್ 27, 1975 ರ ಇಲ್ಲಸ್ಟ್ರೇಟೆಡ್ ವೀಕ್ಲಿ ಮ್ಯಾಗಜೀನ್ ಸಂಪಾದಕೀಯ, ಆಗಸ್ಟ್ 27, 2016 ರ ನನ್ನ ಫೇಸ್ಬುಕ್ ಲೇಖನದೊಂದಿಗೆ ನಾನು ಪೋಸ್ಟ್ ಮಾಡಿದ್ದೇನೆ, ಅದನ್ನು ಈ ಪುಸ್ತಕದಿಂದಲೇ ಆಯ್ದುಕೊಂಡಿದ್ದೇನೆ. ಈ ಬರಹಕ್ಕೆ ಲಗತ್ತಿಸಲಾದ ಕೃತಿಚೌರ್ಯ ಪ್ರಕರಣಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳು ಈ ಪುಸ್ತಕದಿಂದ ತೆಗೆದುಕೊಂಡಿರುವಂತವು. ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಈ ಪುಸ್ತಕದಿಂದ ಅನೇಕ ಪತ್ರಗಳು ಮತ್ತು ದಾಖಲೆಗಳನ್ನು ಪುನರುತ್ಪಾದಿಸಲು ಇಚ್ಚಿಸುತ್ತೇನೆ.

ಟಿಪ್ಪಣಿ: ಈ ಬರಹದ ಜೊತೆಗೆ ಇದಕ್ಕೆ ಸಂಬಂಧಿಸಿದ ಇತರ ಸರಣಿ ಮಾಹಿತಿಯನ್ನು ನನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.

https://www.facebook.com/utpal.aich.7

Link to original English Article  –  Dr. Sarvepalli Radhakrishnan: The teacher who stole from his student’s thesis

ಉತ್ಪಾಲ್ ಐಚ್ ( Utpal Aich) ಅವರು ಭಾರತದ ರಾಯಭಾರ ಕಚೇರಿಯ ಮೊದಲ ಕಾರ್ಯದರ್ಶಿಯಾಗಿ ಆಡಿಸ್ ಅಬಾಬಾ (ವಿದೇಶಾಂಗ ಸಚಿವಾಲಯ) ದಿಂದ ನಿವೃತ್ತರಾದರು. ಅವರು ಈಗ ಸ್ವತಂತ್ರ ಸಂಶೋಧಕರಾಗಿದ್ದಾರೆ.

ಮಂಜುನಾಥ್ ನರಗುಂದ್ ( Manjunath Naragund) ಗದಗ್(ಕರ್ನಾಟಕ)ನವರಾಗಿದ್ದು ಸ್ವತಂತ್ರ ಬರಹಗಾರರಾಗಿದ್ದಾರೆ ; ಅವರು 2014-16ರಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Be the first to comment on "ತಮ್ಮ ವಿದ್ಯಾರ್ಥಿಯ ಪ್ರಬಂಧವನ್ನೇ ಕೃತಿಚೌರ್ಯ ಮಾಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್"

Leave a comment

Your email address will not be published.


*