ಹಿಂದಿ ಭಾರತದ ಬಹುಜನರ ಭಾಷೆಯಲ್ಲ
ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು
ಚಿಂತಕರು
ತ್ರಿಭಾಷಾ ಸೂತ್ರ ವಾಸ್ತವವಾಗಿ ಭಾರತದಲ್ಲಿ ‘ಹಿಂದಿ ಸಾಮ್ರಾಜ್ಯಶಾಹಿ’ಯ ಬೆಳವಣಿಗೆಗೆ ಪೂರಕವಾಗಿದ್ದು ಭಾರತದ ಸಾಂವಿಧಾನಿಕ ಹಾಗೂ ಬಹುತ್ವದ ಆಶಯಗಳಿಗೆ ತದ್ವಿರುದ್ಧವಾಗಿದೆ. ಭಾಷೆ ಮತ್ತು ಸಂಸ್ಕೃತಿ ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಒಂದು ಭಾಷೆಯನ್ನು ಕೊಲ್ಲುವುದೆಂದರೆ ನೆಲಮೂಲ ಸಂಸ್ಕೃತಿಯೊಂದನ್ನು ನಾಶಪಡಿಸುವುದೆಂದೇ ಅರ್ಥ. ಭಾರತೀಯ ಸಂವಿಧಾನದ 8ನೇ ಷೆಡ್ಯೂಲಿನಲ್ಲಿ ಸೇರಿರುವ ಎಲ್ಲ 22 ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಆಗಿವೆ. ಹಿಂದಿ ಭಾಷೆ ಶ್ರೇಷ್ಟವಲ್ಲ, ಪ್ರಾದೇಶಿಕ ಭಾಷೆಗಳು ಕನಿಷ್ಟವಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತೀಯ ಸಂವಿಧಾನ ನಮ್ಮನ್ನು ಆಳುವವರಿಗೆ ನೀಡಿದೆ. ಉತ್ತರ ಭಾರತ, ದಕ್ಷಿಣ ಭಾರತ, ಮಧ್ಯಭಾರತ, ಈಶಾನ್ಯ ಭಾರತ ಮತ್ತು ವಾಯುವ್ಯ ಭಾರತಗಳಲ್ಲಿ ಬಹುತೇಕ ಜನರು ಪ್ರಾದೇಶಿಕ ಭಾಷೆಯನ್ನು ತಮ್ಮ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಹಿಂದಿ ಭಾರತದ ಬಹುಜನರ ಮಾತೃಭಾಷೆಯಲ್ಲವೆಂಬುದು ಪರಮಸತ್ಯ.
ಇತ್ತೀಚಿನ ದಿನಗಳಲ್ಲಿ ಸಂಘಪರಿವಾರಿಗಳ ಕಪಿಮುಷ್ಟಿಗೆ ಒಳಪಟ್ಟಿರುವ ಮೋದಿ ನೇತೃತ್ವದ ಭಾರತ ಸರ್ಕಾರ ಹಿಂದಿ ಭಾಷೆಯನ್ನು ಬಹುಜನರು ಮತ್ತು ಪ್ರಾದೇಶಿಕ ಭಾಷೆಗಳ ಮೇಲೆ ಹೇರುತ್ತಿರುವುದು ತರವಲ್ಲ. ಮಾತೃಭಾಷೆ ವಾಸ್ತವವಾಗಿ ತಾಯಿಯ ಎದೆಯ ಹಾಲಿನಷ್ಟೆ ಶ್ರೇಷ್ಟ ಹಾಗೂ ಮಕ್ಕಳ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಸನಗಳಿಗೆ ಪೂರಕವಾದ ಭಾಷೆಯಾಗಿದೆ. ಬಹುತ್ವ ಭಾರತದಲ್ಲಿ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದು ಸಾಮ್ರಾಜ್ಯಶಾಹಿ ಧೋರಣೆಗೆ ಸಾಕ್ಷಿಯಾಗಿದೆ. ವಾಸ್ತವವಾಗಿ ಪ್ರಭುತ್ವದ ಕೃಪಾಕಟಾಕ್ಷ ಹೊಂದಿರುವ ಹಿಂದಿ ಭಾಷೆ ಹೇರಿಕೆಯಿಂದ ಭಾರತದ ಹಲವಾರು ಪ್ರಾದೇಶಿಕ ಭಾಷೆಗಳು ವಿನಾಶದ ಹಾದಿ ಹಿಡಿದಿವೆ. ಭಾರತದಲ್ಲಿ ಶೇ.57ರಷ್ಟು ಮಂದಿ ಇಂದಿಗೂ ಕೂಡ ಪ್ರಾದೇಶಿಕ ಮಾತೃಭಾಷೆಗಳನ್ನು ಹೊಂದಿದ್ದಾರೆ. ಇಂತಹ ಬಹುಸಂಖ್ಯಾತರ ಮಾತೃಭಾಷೆ, ಮಾತೃಸಂಸ್ಕೃತಿ ಮತ್ತು ಬದುಕುವ ಮೂಲಭೂತ ಹಕ್ಕುಗಳನ್ನು ಹಿಂದಿ ಭಾಷಾಂಧತೆ ದಮನಗೊಳಿಸುವ ಅಪಾಯವನ್ನು ಎಲ್ಲರೂ ಮನಗಾಣಬೇಕು. ಪ್ರಜ್ಞಾವಂತರು ಹಿಂದಿ ಹೇರಿಕೆಯನ್ನು ಒಕ್ಕೊರಲಿನಿಂದ ಪ್ರತಿರೋಧಿಸುವ ಅನಿವಾರ್ಯತೆ ಎಂದಿಗಿಂತ ಇಂದು ಹೆಚ್ಚಾಗಿದೆ.
ಪ್ರೊಫೆಸರ್ ಬಿ. ಪಿ ಮಹೇಶ್ ಚಂದ್ರ ಗುರು ಮೈಸೂರು ವಿಶ್ವವಿದ್ಯಾಲಯದ
ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ.
Be the first to comment on "ಹಿಂದಿ ಭಾರತದ ಬಹುಜನರ ಭಾಷೆಯಲ್ಲ"