ಕರೆಯಬಹುದೇ ಪಿತೃಪ್ರಭುತ್ವವೆಂದು…?

ಕರೆಯಬಹುದೇ ಪಿತೃಪ್ರಭುತ್ವವೆಂದು…?

ಜೂಪಕ ಸುಬದ್ರ

ಭರತ ನಾಸ್ತಿಕ ಸಮಾಜ ಮತ್ತು ವೈಜ್ಞಾನಿಕ ವಿದ್ಯಾರ್ಥಿಗಳ ಒಕ್ಕೂಟವು ಇತ್ತೀಚೆಗೆ ಆಯೋಜಿಸಿದ್ದ ಅಂತರ್ಜಾಲ ಮಾತುಕತೆಯ ಎರಡನೇ ಆಯ್ದ ಭಾಗ ಇದು. ಹಿಂದಿನದನ್ನು ಇಲ್ಲಿ ಓದಿ.

ಸವರ್ಣ ಮಹಿಳೆಯರು ತಮ್ಮ ಮಕ್ಕಳ ಮಲವನ್ನು   ತಮ್ಮ ಮನೆಗಳಲ್ಲಿ ಸ್ವಚ್ಛ ಮಾಡುತ್ತೇವೆ  ಎಂದು ಹೇಳುತ್ತಾರೆ. ಹಾಗಾದರೆ ಎಲ್ಲಾ ಸಾರ್ವಜನಿಕರ, ಮನೆ ಹೊರಗಡೆ  ಮಲ ಸ್ವಚ್ಛ ಮಾಡುವ ಮಹಿಳೆಯರ ಪರಿಸ್ಥಿತಿ? ಅವರು ಈ ಮಹಿಳೆಯರ ಬಗ್ಗೆ ಏಕೆ ಮಾತನಾಡಬಾರದು?

ನೀವು ಹೇಳಿದಂತೆ ಎಲ್ಲಾ ಮಹಿಳೆಯರು ಸಮಾನರಾಗಿದ್ದರೆ , ನೀವು ಎಲ್ಲ ಮಹಿಳೆಯರ ಬಗ್ಗೆ, ಮೇಲಿನಿಂದ ಕೆಳಕ್ಕೆ, ಪಾತಾಳದವರೆಗೆ, ಮಾತನಾಡಬೇಕು, ಅಲ್ಲವೇ? ನೀವು ಜಾತಿ ವ್ಯವಸ್ಥೆಯ ಎಲ್ಲಾ ಶ್ರೇಣಿಗಳಿಗೂ  ಕೆಳಗಿಳಿಯಬೇಕು , ಪ್ರತಿ ಮೆಟ್ಟಲಿನಲ್ಲಿರುವ  ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು  ಬ್ರಾಹ್ಮಣರ ಮೆಟ್ಟಿಲಿನಲ್ಲಿ ಬ್ರಾಹ್ಮಣ ಮಹಿಳೆಯರ ಸಮಸ್ಯೆಗಳು ಯಾವುವು, ಶೂದ್ರ ಮೆಟ್ಟಿಲಿನಲ್ಲಿ ಶೂದ್ರ ಮಹಿಳೆಯರ ಸಮಸ್ಯೆಗಳು ಯಾವುವು, ದಲಿತ ಮೆಟ್ಟಿಲಿನಲ್ಲಿ ದಲಿತ ಮಹಿಳೆಯರ ಸಮಸ್ಯೆಗಳು ಯಾವುವು, ಆದಿವಾಸಿ ಮೆಟ್ಟಿಲಿನಲ್ಲಿ ಆದಿವಾಸಿ ಮಹಿಳೆಯರ ಸಮಸ್ಯೆಗಳು ಯಾವುವು? ಅವರು ಈ ಎಲ್ಲ ಮಹಿಳೆಯರ ಬಗ್ಗೆ ಏಕೆ ಮಾತನಾಡಬಾರದು? ಈ ಎಲ್ಲ ಸಮಸ್ಯೆಗಳನ್ನು ಅವರು ಏಕೆ ಅಳಿಸುತ್ತಿದ್ದಾರೆ?

ಅವರ ಇತಿಹಾಸಗಳು, ಅನುಭವಗಳು, ಭಾಷೆಗಳು ಮತ್ತು ಧ್ವನಿಗಳು – ನೀವೇಕೆ   ಅವು ಹೊರಗೆ ಬರಲು ಅವಕಾಶ ಕೊಡುತ್ತಿಲ್ಲ? ಅವು  ಹೊರಗೆ ಬಂದರೂ, (ನೀವು ನಿರ್ಧರಿಸುತ್ತೀರಿ) ಅವರು ಏನು ಮಾತನಾಡಬೇಕೆಂಬುದನ್ನು ನೀವು ನಿರ್ಧರಿಸುತ್ತೀರಿ. ಅವರು ಪಿತೃಪ್ರಭುತ್ವದ ಮಟ್ಟಿಗೆ ಮಾತ್ರ ಮಾತನಾಡಬೇಕು. ಅವರು ನೀವು ನಿರ್ದೇಶಿಸಿದ, ಸಂಘಟಿಸಿದ, ನಿರ್ಮಿಸಿದ ಚೌಕಟ್ಟಿನೊಳಗೆ ಮಾತ್ರ ಮಾತನಾಡಬೇಕು. ನಿಮ್ಮ ಚೌಕಟ್ಟಿನಿಂದ ನಿರ್ಧರಿಸಲ್ಪಟ್ಟಂತೆ ಮಾತ್ರ ನಾವು ಪಿತೃಪ್ರಭುತ್ವದ ಬಗ್ಗೆ  ಮಾತನಾಡಬೇಕು.

ಆದರೆ ನಮ್ಮ ಜಾತಿಗಳಲ್ಲಿ, ಪಿತೃಪ್ರಭುತ್ವವು ಮನೆಗೆ ಮಾತ್ರ ಸೀಮಿತವಾಗಿದೆ. ಅವರು ವ್ಯವಸ್ಥೆ, ಸಂಸ್ಥೆಗಳ  ಮೇಲಿನ  ಅಧಿಕಾರವನ್ನು,  ಪಿತೃಪ್ರಭುತ್ವ ಎಂದು ಕರೆಯುತ್ತಾರೆ, ಅಲ್ಲದೆ  ಮನೆಗೆ ಸೀಮಿತವಾದ ಅಧಿಕಾರವನ್ನೂ  ಪಿತೃಪ್ರಭುತ್ವ ಎಂದು ಕರೆಯುತ್ತಾರೆ. ಎಷ್ಟು ಅನ್ಯಾಯ! ಈ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ಅವರು ಇತಿಹಾಸವನ್ನು ಪುರುಷರ ಇತಿಹಾಸ ಎಂದೇಳುತ್ತಾರೆ. ಯಾವ ಪುರುಷರ ಸಾಹಿತ್ಯ? ಅವರು ಅದರ ಬಗ್ಗೆ ಮಾತನಾಡುವುದಿಲ್ಲ.

ಅವು ಬ್ರಾಹ್ಮಣ ಪುರುಷರ ಸಾಹಿತ್ಯ, ಇತಿಹಾಸಗಳು. ಕ್ಷತ್ರಿಯ ಪುರುಷರ ಇತಿಹಾಸಗಳು, ಪ್ರಬಲ ಜಾತಿ ಪುರುಷರ ಇತಿಹಾಸಗಳು. ನಮ್ಮ ಜಾತಿಯ ಪುರುಷರು ಮತ್ತು ಮಹಿಳೆಯರ ಬಗ್ಗೆ ಏಲ್ಲಿದೆ? ಇಲ್ಲ, ಅಲ್ಲಿ ಅವರ ಬಗ್ಗೆ ಏನೂ ಇರುವುದಿಲ್ಲ. ನಿಮ್ಮ ಅನುಭವಗಳಿಂದ ಪಡೆದ ಜ್ಞಾನ, ಇತಿಹಾಸಗಳನ್ನು ನೋಡುವ ವಿಧಾನಗಳು, ನಿಮ್ಮ ವಿಧಾನಗಳು ಮತ್ತು ನಿಮ್ಮ ಸಾಹಿತ್ಯಿಕ ರೂಢಿಗಳು , ನಿಮ್ಮ ರಾಜಕೀಯ ಸಿದ್ಧಾಂತಗಳು-ಇವೆಲ್ಲವೂ ನಿಮ್ಮ ತಿಳುವಳಿಕೆ, ಆಲೋಚನೆಯ ವ್ಯಾಪ್ತಿಯಲ್ಲಿವೆ. ನೀವು ಅದನ್ನು ಮೀರಿ, ತಳ ಸಮಾಜಕ್ಕೆ ತಲುಪಿಲ್ಲ .

ನಮ್ಮ ಪಿತೃಪ್ರಭುತ್ವಗಳು, ನೀವು ಹಳ್ಳಿಯನ್ನು ಒಂದು ಘಟಕವಾಗಿ ತೆಗೆದುಕೊಂಡರೆ:  ಹಳ್ಳಿಯ ಪ್ರತಿಯೊಬ್ಬರಿಗೂ ಚಪ್ಪಲಿ ಗಳನ್ನು ಒದಗಿಸುತ್ತದೆ. ಇದು ಹಳ್ಳಿಯಲ್ಲಿರುವ ಪುರುಷರು, ಮಹಿಳೆಯರು, ಮಕ್ಕಳು-ಎಲ್ಲರ ಬಟ್ಟೆಗಳನ್ನು ತೊಳೆಯುತ್ತದೆ. ಇದು ಹಳ್ಳಿಯಲ್ಲಿ ಎಲ್ಲರ ಕೂದಲನ್ನು ಬೋಳಿಸುತ್ತದೆ. ಅದು ಅವರ ಹುಣ್ಣು ಮತ್ತು ಕೀವು ತುಂಬಿದ ಗಾಯಗಳನ್ನು ತೊಳೆಯುತ್ತದೆ. ಇದೆಲ್ಲವೂ ಪಿತೃಪ್ರಭುತ್ವವೇ? ಕೃಷಿಯ ಎಲ್ಲಾ ಸಾಧನಗಳು ಮತ್ತು ಉಪಕರಣಗಳು- ನಮ್ಮ ಪಿತೃಪ್ರಭುತ್ವಗಳು ಅವೆಲ್ಲವನ್ನೂ ಉತ್ಪಾದಿಸುತ್ತವೆ.

ನಿಮ್ಮ ಪಿತೃಪ್ರಭುತ್ವಗಳು ಏನು ಮಾಡುತ್ತವೆ ಎಂದು ನಮಗೆ ತಿಳಿಸಿ. ನಿಮ್ಮ ಪಿತೃಪ್ರಭುತ್ವಗಳು ತಮ್ಮ ಸ್ವಂತ ಮಹಿಳೆಯರು ಸೇರಿದಂತೆ ಸಮಾಜ, ಸಾಮಾಜಿಕ ಸಂಸ್ಥೆಗಳು, ಪುರುಷರು ಮತ್ತು ಮಹಿಳೆಯರ ಮೇಲೆ ಹಿಡಿತ ಸಾಧಿಸಿವೆ ಮತ್ತು ಅವರ ಅಧಿಕಾರವನ್ನು ಸಾಂಸ್ಥೀಕರಣಗೊಳಿಸಿವೆ. ನಿಮ್ಮ ಪಿತೃಪ್ರಭುತ್ವವು ನಾನು ಸತ್ತರೆ ಅವಳಿಗೆ ಬದುಕುವ ಹಕ್ಕಿಲ್ಲ ಎಂದು ಹೇಳುತ್ತದೆ. ಅವಳನ್ನು ನನ್ನೊಂದಿಗೆ ಸುಡಬೇಕೆಂದು ಹೇಳುತ್ತದೆ, ನಾನು ಸತ್ತರೆ, ನಿಮಗೆ ಮರುಮದುವೆಯಾಗುವ ಹಕ್ಕಿಲ್ಲ. ವಿಚ್ಛೇದನಕ್ಕೂ  ನಿಮಗೆ ಹಕ್ಕಿಲ್ಲ (ನಾನು ಜೀವಂತವಾಗಿರುವಾಗ).

ಅದರ ವಿರುದ್ಧ ಹೋರಾಡಲು, ನೀವು ಅನೇಕ ಹೋರಾಟಗಳನ್ನು, ರಾಷ್ಟ್ರೀಯ ಹೋರಾಟವನ್ನು ಕೈಗೊಂಡಿದ್ದೀರಿ. ಮತ್ತು ಅದರಿಂದ, ಸತಿಯಿಂದ ಮುಕ್ತರಾದಿರಿ

ಆದರೆ ನಮ್ಮ ಜಾತಿಗಳಲ್ಲಿ ಅಂತಹ ಯಾವುದೇ ಕಟ್ಟುಪಾಡುಗಳಿಲ್ಲ. ಪುರುಷ ಸತ್ತರೆ, ಮಹಿಳೆಗೆ ಬದುಕುವ ಹಕ್ಕಿದೆ. ಇಲ್ಲಿ ಪ್ರಜಾಪ್ರಭುತ್ವ ಸ್ವಾತಂತ್ರ್ಯಗಳಿವೆ. ನೀವು ಈ ಬಗ್ಗೆ ಮಾತನಾಡುವುದಿಲ್ಲ. ನನಗೆ ವಿಚ್ಛೇದನ   ಅಗತ್ಯವಿದ್ದರೆ, ನಾನು ಇದನ್ನು ಇಷ್ಟಪಡುವುದಿಲ್ಲ ಎಂದು ಹೇಳಿದರೆ, ನಾವು ಬೇರ್ಪಡೆ ಯಾಗಬಹುದು  ಮತ್ತು ನಮ್ಮದೇ ಆದ ದಾರಿಯಲ್ಲಿ ಹೋಗಬಹುದು.

ಆ ಹಕ್ಕುಗಳನ್ನು ನಿಮಗೆ ನೀಡಲು, ಅಂಬೇಡ್ಕರ್ ಹಿಂದೂ ಸಂಹಿತೆ ಮಸೂದೆಯನ್ನು ತರುವ ಮೂಲಕ ದೊಡ್ಡ ಯುದ್ಧವನ್ನು ನಡೆಸಿದರು. ನೀವಲ್ಲವೇ?  – ಸರೋಜಿನಿ ನಾಯ್ಡು ಮತ್ತು ಇತರ ದೊಡ್ಡ ವ್ಯಕ್ತಿಗಳು ಇದನ್ನು ವಿರೋಧಿಸಿದ್ದು ? ಬಿಲ್ ಅಂಗೀಕಾರವಾಗದ ಹಾಗೆ ಖಚಿತಪಡಿಸಿಕೊಂಡಿದ್ದು? ನಿಮ್ಮ ಆಲೋಚನೆ, ಒಬ್ಬ ಎಸ್‌ಸಿ  ವ್ಯಕ್ತಿ, ಅಸ್ಪೃಶ್ಯ ವ್ಯಕ್ತಿ, ನಿಮ್ಮ ಪರವಾಗಿ ಮಸೂದೆಯನ್ನು ಪ್ರಸ್ತಾ  ಪಿಸಬಾರದು ಎಂಬುದು . ನಿಮ್ಮ ಪುರುಷರಿಗೆ  ಮುಖಭಂಗವಾಗುತ್ತದೆಂದು , ಅವರ ಗೌರವವು ಕಡಿಮೆಯಾಗುವುದೆಂದು.

ನಿಮಗೆ ಮರುಮದುವೆಯಾಗುವ ಹಕ್ಕಿರಲಿಲ್ಲ. ನಮ್ಮ ಜಾತಿಗಳಲ್ಲಿ, ಗಂಡ ಸತ್ತರೆ, ಹೆಂಡತಿ ಮರುಮದುವೆಯಾಗಬಹುದು. ವಿಚ್ಛೇದನವಾದರೆ ,  ಮರುಮದುವೆಯಾಗಬಹುದು. ಪುನರ್ವಿವಾಹಗಳು ನಮ್ಮಲ್ಲಿ ಬಹಳ ಸಾಮಾನ್ಯವಾಗಿದೆ.

ನಿಮ್ಮ ಪಿತೃಪ್ರಭುತ್ವಗಳು ನಿಮ್ಮನ್ನು ಅಂತಹ ಅನ್ಯಾಯಗಳಿಗೆ, ಅಂತಹ ಅನ್ಯಾಯದ ಪದ್ಧತಿಗಳಿಗೆ ಒಳಪಡಿಸಿದ್ದವು . ಅದು ಪಿತೃಪ್ರಭುತ್ವ. ಯಾವುದು ಮನೆ ದಾಟುವುದಿಲ್ಲವೋ , ಮತ್ತು ಮನೆಯ ಹೊರಗೆ ಯಾವುದೇ ಅಧಿಕಾರವಿಲ್ಲವೋ, ಮನೆಯೊಳಗಿನ ನಿಯಂತ್ರಣ, ಪ್ರಾಬಲ್ಯವಾಗಿ ಉಳಿದಿದೆಯೋ  ಅದನ್ನು ನಾವು ಪಿತೃಪ್ರಭುತ್ವವೆಂದು  ಸಹ ಕರೆಯಬೇಕೇ? ಈ ಪ್ರಶ್ನೆಯನ್ನು ಬಹಳ ಗಂಭೀರವಾಗಿ ಕೇಳಬೇಕಾಗಿದೆ.

ನಾವು ಮಾತನಾಡುತ್ತಿದ್ದೇವೆ. ಇವು ಪಿತೃಪ್ರಭುತ್ವವಲ್ಲ ಎಂದು. ಸ್ತ್ರೀವಾದವು ದಲಿತ ಸ್ತ್ರೀವಾದ ಎಂಬ ಹೊಸ ವಿಷಯವನ್ನು ತಂದಿದೆ. ಅದನ್ನೂ ಅವರು ನಿರ್ಧರಿಸಿದ್ದಾರೆ. ಮಹಾರಾಷ್ಟ್ರದ ಶರ್ಮಿಳಾ ರೆಗೆ.

ಎಂಬಿಸಿ ಮಹಿಳೆಯರು ಇದ್ದಾರೆ, ಅವರು (ಸವರ್ಣ ಸ್ತ್ರೀವಾದಿಗಳು) ಎಂಬಿಸಿ ಸ್ತ್ರೀವಾದವನ್ನು ತಂದಿದ್ದಾರೆಯೇ? ಆದಿವಾಸಿ ಮಹಿಳೆಯರು ಇದ್ದಾರೆ, ಅವರು ಆದಿವಾಸಿ ಸ್ತ್ರೀವಾದವನ್ನು ತಂದಿದ್ದಾರೆಯೇ? ನಾವು (ದಲಿತ ಮಹಿಳೆಯರು) ಮಾತನಾಡುತ್ತಿರುವುದರಿಂದ ನಮ್ಮ ದನಿಗಳು ಪ್ರಬಲವಾಗಿವೆ, ಅವರು ದಲಿತ ಸ್ತ್ರೀವಾದವನ್ನು ತಂದರು (ನಮ್ಮನ್ನು ಒಳಗೆ  ಸೇರಿಸಲು). ನಾವು ಅದನ್ನು ಇಷ್ಟಪಡುವುದಿಲ್ಲ. ನಾವು ‘ದಲಿತ ಸ್ತ್ರೀವಾದ’ ಎಂದು ಹೇಳಲು ಇಷ್ಟಪಡುವುದಿಲ್ಲ. ‘ಸ್ತ್ರೀವಾದ’ ಎಂಬ ಪದವನ್ನು ನಾವು ಇಷ್ಟಪಡುವುದಿಲ್ಲ.

‘ಸ್ತ್ರೀವಾದ’ ಎಂಬ ಪದವನ್ನು ನೀವು ಎಲ್ಲಿಂದ ತಂದಿದ್ದೀರಿ? ಪಾಶ್ಚಿಮಾತ್ಯ ದೇಶಗಳಿಂದ, ಅಲ್ಲಿನ ಪ್ರಬಲ (ಬಿಳಿ) ಗುಂಪುಗಳಿಂದ. ಯಾವ ವರ್ಗಗಳ ಮೇಲೆ ನಿಮ್ಮ ಪ್ರಾಬಲ್ಯವನ್ನು ಹೇರಲು ನೀವು ಅದನ್ನು ಇಲ್ಲಿಗೆ ತರುತ್ತೀರಿ? ನಮ್ಮ ಪದವಿಗಳನ್ನು ಪಡೆಯಲು ನಾವು ವಿಶ್ವವಿದ್ಯಾಲಯಗಳಿಗೆ, ಶಿಕ್ಷಣ ಕೇಂದ್ರಗಳಿಗೆ ಹೋಗುತ್ತೇವೆ. ಅಲ್ಲಿ,  ನಮ್ಮ ಮೂಲಗಳು ಯಾವುವು, ನಮ್ಮ ಇತಿಹಾಸಗಳು ಯಾವುವು, ನಾವು ಎಲ್ಲಿಂದ ಬಂದಿದ್ದೇವೆ, ನಾವು ಯಾವ ಮಣ್ಣಿನಿಂದ ಬಂದಿದ್ದೇವೆ, ನಾವು ಯಾವ ಅಸ್ಪೃಶ್ಯತೆಯಿಂದ ಬಂದಿದ್ದೇವೆ, ನಾವು ಯಾವ ಅವಮಾನಗಳಿಂದ ಬಂದಿದ್ದೇವೆ .. ನಾವು ಈ ಸ್ಥಳಗಳಲ್ಲಿ ಆ ಪ್ರಶ್ನೆಗಳಿಗೆ ಯಾವುದೇ ಉತ್ತರಗಳನ್ನು ಪಡೆಯಬಹುದೇ ಎಂದು  ಹುಡುಕುತ್ತೇವೆ . ನಾವು ಇಲ್ಲಿ ಯಾವುದೇ ಸಾಂತ್ವನವನ್ನು ಕಂಡುಕೊಳ್ಳಬಹುದೇ ಎಂದು ನೋಡಲು.

ಆದರೆ ನಾವು ವಿಶ್ವವಿದ್ಯಾಲಯದಲ್ಲಿ ಸ್ತ್ರೀವಾದಿಗಳಾಗಬೇಕಿದೆ. ಭಾರತದ ಎಲ್ಲಾ ವಿಶ್ವವಿದ್ಯಾಲಯಗಳನ್ನು ನೋಡಿ. ನೀವು ಮಹಿಳೆಯರ ಅಧ್ಯಯನ ಕೇಂದ್ರಗಳನ್ನು ಕಾಣುತ್ತೀರಿ. ಒಂದು ಅಥವಾ ಎರಡು ಹೊರತುಪಡಿಸಿ ಇವರೆಲ್ಲರೂ ಸಾವರ್ಣ ಮಹಿಳೆಯರ ನಿಯಂತ್ರಣದಲ್ಲಿದೆ. ಅವೆಲ್ಲವನ್ನೂ ನೋಡಿ. ನನ್ನದಲ್ಲದ ಪಿತೃಪ್ರಭುತ್ವದ ಬಗ್ಗೆ ನಾನು ಕಲಿಯಬೇಕಾಗಿದೆ. ಮತ್ತು ಪಿತೃಪ್ರಭುತ್ವವು ಪುರುಷರ ವಿರುದ್ಧದ ಯುದ್ಧವಾಗಿದೆ.

ನಮ್ಮ ಮುಂದೆ ಜಾತಿ ಯುದ್ಧಗಳಿವೆ, ನಮ್ಮ ತಕ್ಷಣದ ದೈನಂದಿನ ಕಾಳಜಿ. ನಾನು ಅದನ್ನು ಬಿಟ್ಟು ಗುಲಾಮರಾಗಿರುವ ನಮ್ಮ ಪುರುಷರ ವಿರುದ್ಧ ಯುದ್ಧ ಮಾಡಬೇಕೇ? ಮನೆಯಲ್ಲಿ ಹೊರತುಪಡಿಸಿ, ಅವನಿಗೆ ಹೊರಗೆ ಎಲ್ಲಿಯೂ ಅಧಿಕಾರವಿಲ್ಲ  . ಅದನ್ನು  ಪಿತೃಪ್ರಭುತ್ವ ಎಂದು ನೀವು ಹೇಗೆ ಕರೆಯಬಹುದು…?

ಜೂಪಕ ಸುಬದ್ರ (Joopaka Subadra),  ಕವಿ, ಬರಹಗಾರ್ತಿ , ವಿಮರ್ಶಕಿ  ಮತ್ತು ತೆಲುಗು ಸಾಹಿತ್ಯ ಮತ್ತು ಜಾತಿ ವಿರೋಧಿ ಹೋರಾಟಗಳಲ್ಲಿ ಗಮನಾರ್ಹ ವ್ಯಕ್ತಿ.

ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya)

How can you call even that patriarchy…?  ಮೂಲ ತೆಲುಗಿನಿಂದ ಇಂಗ್ಲಿಷ್ ಗೆ ನರೇನ್ ಬೆಡಿದ್  (ಕುಫೀರ್) Naren Bedide (Kuffir) ಅನುವಾದಿಸಿದ್ದಾರೆ

ನೀವು ಇವರ  ಸಂದರ್ಶನವನ್ನು  Prauddha: Journal of Social Equality ನಲ್ಲಿ ಓದಬಹುದು

ಪಿತೃಪ್ರಭುತ್ವ, ಸ್ತ್ರೀವಾದ ಮತ್ತು ಬಹುಜನ ಮಹಿಳೆಯರು –  ಮೊದಲ ಬಾಗ

Be the first to comment on "ಕರೆಯಬಹುದೇ ಪಿತೃಪ್ರಭುತ್ವವೆಂದು…?"

Leave a comment

Your email address will not be published.


*