ಮಸೀದಿ ಧ್ವಂಸದ ಚಾರಿತ್ರಿಕ ನೋಟ

ಮಸೀದಿ ಧ್ವಂಸದ ಚಾರಿತ್ರಿಕ ನೋಟ
(ಎಲ್ಲರೂ ನಿರ್ದೊಷಿಗಳಾದರೆ ಧ್ವಂಸಗೈದವರಾರು)

ಹಾರೋಹಳ್ಳಿ ರವೀಂದ್ರ

ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲಿ ಒಂದು. ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಾಯು ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ 555 ಕಿಲೋಮೀಟರ್ ದೂರದಲ್ಲಿದೆ. ಮೊಘಲ್ ಸಾಮ್ರಾಜ್ಯವು ಭಾರತೀಯ ಉಪಖಂಡ ಉತ್ತರ ಭಾಗಗಳನ್ನು 16ನೇ ಶತಮಾನದಲ್ಲಿ ಆಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದು. ಮೊಘಲ್ ಸಾಮ್ರಾಜ್ಯ ಅಸ್ತಿತ್ವಕ್ಕೆ ಬರುವ ಮುನ್ನ ದೆಹಲಿ ಸುಲ್ತಾನರು ಅಧಿಕಾರ ನಡೆಸುತ್ತಿದ್ದರು. ದೆಹಲಿ ಸುಲ್ತಾನರ ಕೊನೆಯ ದೊರೆಯಾದ ಇಬ್ರಾಹಿಂ ಲೂದಿಯನ್ನು 1526ರ ಮೊದಲನೇ ಪಾಣಿಪತ್ ಕದನದಲ್ಲಿ ಸೋಲಿಸಿ ಮೊಘಲ್ ಸಾಮ್ರಾಜ್ಯದ ಅಸ್ತಿತ್ವಕ್ಕೆ ಬಾಬರ್ನು ಕಾರಣಕರ್ತನಾಗುತ್ತಾನೆ.

ಅಯೋಧ್ಯೆಯಲ್ಲಿ ಒಂದು ಐತಿಹಾಸಿಕ ಹಿನ್ನೆಲೆಯುಳ್ಳ ಮಸೀದಿಯಿತ್ತು ಎಂದರೆ ಅದು ಬಾಬ್ರೀ ಮಸೀದಿ. ಈ ಬಾಬ್ರೀ ಮಸೀದಿಯನ್ನು ಮಸ್ವಿದ್-ಇ-ಜನ್ಮಸ್ಥಾನ್, ಜಾಮೀಮಸೀದಿ ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಆ ಸ್ಥಳದಲ್ಲಿ ದೇವಸ್ಥಾನ ಇದ್ದಿದ್ದೆ ಹಿಂದೂ ಹಾಗೂ ಮುಸ್ಲಿಮರ ಮನಸ್ಥಾಪಕ್ಕೆ ಕಾರಣವಾಗಿದ್ದು, ಆ ಸ್ಥಳದಲ್ಲಿ ಹಿಂದೂ ಮತ್ತು ಮುಸ್ಲೀಮರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ದೇಗುಲ ನೆಪ ಮಾಡಿಕೊಂಡು ಹಿಂದೂ ಮತ್ತು ಮುಸಲ್ಮಾನರಿಗೆ ಮನಸ್ಥಾಪ ಉಂಟಾಗುವಂತೆ ಮಾಡಿದ್ದು ಹಿಂದೂಪರ ಸಂಘಟನೆಗಳು. ಕೋಮುವಾದದ ಬೆಂಕಿಯನ್ನು ಬಾಬ್ರೀ ಮಸೀದಿಯನ್ನು ಧ್ವಂಸಮಾಡುವ ಮೂಲಕ ಹಚ್ಚಿದರು. ಆ ಮೂಲಕ ಆತನಕವೂ ಇಲ್ಲದಿದ್ದ ಧರ್ಮ ಕಲಹ ಮೊಳಕೆಯೊಡೆಯಿತು. ಅದಕ್ಕೆ ಅವರು ನೆಪ ಮಾಡಿಕೊಂಡಿದ್ದು ರಾಮ ಮಂದಿರ ಘೋಷಾವಾಕ್ಯ.

ರಾಮಮಂದಿರ ಕಟ್ಟುವ ಘೋಷಣೆಯೊಂದಿಗೆ ಆಂದೋಲನ ಆರಂಭಿಸಿದ್ದು ವಿಶ್ವ ಹಿಂದೂ ಪರಿಷತ್ತೇ ಆದರು, ಆ ಹೋರಾಟದ ಹಿಂದಿನ ಶಕ್ತಿ ಹಾಗೂ ಅದನ್ನು ಉತ್ತುಂಗಕ್ಕೆ ಕೊಂಡೊಯ್ದದ್ದು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ, ರಾಮ ರಥಯಾತ್ರೆ ಅವರದೇ ಕಲ್ಪನೆ. ಅದು ರಾಮಭೂಮಿ ಹೋರಾಟಕ್ಕೂ ಆ ಮೂಲಕ ಹಿಂದುತ್ವ ಹೋರಾಟಕ್ಕೂ ಜೊತೆಗೆ ದೇಶದಾದ್ಯಂತ ಬಿಜೆಪಿಗೂ ಟಾನಿಕ್ ನೀಡಿತು. ಮುಂದೆ ಅದೇ ಮಸೀದಿ ಧ್ವಂಸಕ್ಕೂ ಕಾರಣವಾಯಿತು. ದೇಶದಾದ್ಯಂತ ಹಲವು ರಥಯಾತ್ರೆಗಳನ್ನು ನಡೆಸಿ ಪ್ರಸಿದ್ದಿಗಳಿಸಿರುವ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ಮೊದಲ ರಥಯಾತ್ರೆ ‘ರಾಮ ರಥಯಾತ್ರೆ’ ರಾಮ ಜನ್ಮ ಭೂಮಿಯನ್ನು ಸ್ವತಂತ್ರಗೊಳಿಸುವ ಉದ್ದೇಶಗೊಳೊಂದಿಗೆ ಬಿಜೆಪಿ 1990 ಸೆಪ್ಟೆಂಬರ್ 25 ರಂದು ಗುಜರಾತ್ನ ಸೋಮನಾಥದಲ್ಲಿ ರಥಯಾತ್ರೆಗೆ ಚಾಲನೆ ನೀಡಿದರು. 10 ಸಾವಿರ ಕಿ.ಮೀ ಕ್ರಮಿಸಿ ಅದು ಅಕ್ಟೋಬರ್ 30 ರಂದು ಅಯೋಧ್ಯೆಗೆ ತಲುಪುವುದು ಎಂದು ನಿಗದಿಯಾಗಿತ್ತು. ಬಿಜೆಪಿ ಕಾರ್ಯಕರ್ತರು ಹಿಂದೂಗಳ ಮನೆಮನೆಗೆ ತೆರಳಿ ರಾಮಮಂದಿರ ಕಟ್ಟಲು ಇಟ್ಟಿಗೆ ಸಂಗ್ರಹಿಸಿದರು ಆದರೆ ಯಾತ್ರೆ ಕೊನೆಗೊಳ್ಳಲಿಲ್ಲ.

1992, ಡಿಸೆಂಬರ್ 6, ದೇಶದ ಮೂಲೆ ಮೂಲೆಗಳಿದ ಉತ್ತರ ಪ್ರದೇಶದ ಅಯೋಧ್ಯೆಗೆ ಕರಸೇವಕರ ದಂಡು ತೆರಳಿತು. ವಿಎಚ್ಪಿ, ಶಿವಸೇನೆ, ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಅಲ್ಲಿ ನೆರೆದಿದ್ದರು. ನೋಡ ನೋಡುತ್ತಿದ್ದಂತೆಯೇ ಕರಸೇವಕರ ಸೇನೆ ರಾಮ್ಕೋರ್ಟ್ ಪರ್ವತ ಏರಿ ಸಂಜೆಯ ಸೂರ್ಯ ಬಾನಂಚು ಸೇರುವುದೊಳಗೆ ಬಾಬರಿ ಮಸೀದಿಯ ಮೂರು ಗುಮ್ಮಟಗಳನ್ನು ನೆಲಕ್ಕುರುಳಿಸಿದರು. ಅವಶೇಷಗಳಡಿ ಸಿಕ್ಕಿ ಕೆಲ ಕರಸೇವಕರು ಪ್ರಾಣಬಿಟ್ಟರು. ಕೇಂದ್ರ ಸರ್ಕಾರ ಸ್ಥಳಕ್ಕಟ್ಟಿದ್ದ ಸೇನಾಪಡೆಯ ಯೋಧರಿಗೆ ಮಸೀದಿಯ ಸಮೀಪಕ್ಕು ಹೋಗಲು ಸಾಧ್ಯವಾಗಲಿಲ್ಲ. ಅಂದು ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿದ್ದು, ಈ ದುರಂತವನ್ನು ತಡೆಯುವಲ್ಲಿ ವಿಫಲವಾಯಿತು. ತದನಂತರ ಪಿ.ವಿ.ನರಸಿಂಹರಾವ್ ನೇತೃತ್ವದ ಕೇಂದ್ರ ಸಕರ್ಾರ ಉತ್ತರ ಪ್ರದೇಶದ ಕಲ್ಯಾಣ್ಸಿಂಗ್ ಅವರ ಬಿ.ಜೆ.ಪಿ ಸರ್ಕಾರವನ್ನು ವಜಾಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಿತು. ಬಾಬ್ರಿ ಮಸೀದಿ ಬೆನ್ನಲ್ಲೆ ದೇಶದಾದ್ಯಂತ ಕೋಮುಗಲಭೆಗಳು ಆರಂಭವಾದವು. ಅಯೋಧ್ಯೆಗೆ ತೆರಳಿದ ಕರ ಸೇವಕರು ತವರಿಗೆ ಬಂದು ಸೇರುವುದಕ್ಕೂ ಮುನ್ನವೇ ಅವರ ಊರು ಹೊತ್ತಿ ಉರಿಯುತ್ತಿದ್ದವ್ತು. ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಸೇರಿದಂತೆ ದೇಶದ ಮೂಲೆ ಮೂಲೆಗಳಲ್ಲೂ ಎರಡು ಕೋಮುಗಳ ನಡುವೆ ಸಂಘರ್ಷ ನಡೆಯಿತು. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಗುಲ್ಬರ್ಗ, ಬೀದರ್, ಹುಬ್ಬಳ್ಳಿ, ಧಾರವಾಡ, ದ.ಕನ್ನಡ, ರಾಯಚೂರು, ಚಿತ್ರದುರ್ಗ, ಮಂಡ್ಯ ಮತ್ತು ತುಮಕೂರು ಸೇರಿದಂತೆ ಕೋಮು ಗಲಭೆಗಳು ನಡೆದವು ಡಿ.7 ರಂದು ಆರಂಭವಾದ ಕರ್ನಾಟಕದಲ್ಲಿನ ಹಿಂಸಾಚಾರವು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯಿತು. ಇದಕ್ಕೆ 78 ಮಂದಿ ಬಲಿಯಾಗಿದ್ದರು, ಅದರಲ್ಲಿ ಪೊಲೀಸರ ಗುಂಡಿಗೆ ಬಲಿಯಾದವರು 33 ಜನ. ಒಟ್ಟಾರೆ ದೇಶದಾಧ್ಯಂತ ಈ ಕೋಮುಗಲಭೆಯಿಂದ ಸುಮಾರು 2000ಕ್ಕು ಹೆಚ್ಚು ಜನರು ಪ್ರಾಣಬಿಟ್ಟರು. ಇದಾದ ನಂತರ 1996ರಲ್ಲಿ ಕೇಂದ್ರದಲ್ಲಿ ಮೊದಲಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂತು. ಅಟಲ್ಬಿಹಾರಿ ವಾಜಪೇಯಿ ಪ್ರಧಾನಿಯಾದರು.

ಲಿಬ್ಹರಾನ್ ಆಯೋಗ:

16 ಡಿಸೆಂಬರ್ 1992 ರಂದು ನ್ಯಾಯಮೂರ್ತಿ ಲಿಬ್ಹರಾನ್ ನೇತೃತ್ವದಲ್ಲಿ ಬಾಬ್ರಿ ಮಸೀದಿ ಧ್ವಂಸ ಕುರಿತು ತನಿಖೆಗಾಗಿ ಆಯೋಗವೊಂದನ್ನು ರಚಿಸಲಾಯಿತು. ಆಯೋಗಕ್ಕೆ ಮೊದಲ ಆದೇಶದಲ್ಲಿ ನೀಡಿದ್ದು ಮೂರೇ ತಿಂಗಳ ಅವಧಿ. ಆದರೆ ಪ್ರಧಾನಿಯ ಕೈಗೆ ನ್ಯಾಯಮೂರ್ತಿ ಲಿಬ್ಹರಾನ್ ವರದಿಯನ್ನು ಒಪ್ಪಿಸಿದ್ದು ಅದಾದ ಹದಿನೇಳು ವರ್ಷಗಳ ನಂತರ, 48 ಬಾರಿ ಕೇಂದ್ರ ಸರ್ಕಾರ ಆಯೋಗದ ಅವಧಿಯನ್ನು ವಿಸ್ತರಿಸಬೇಕಾಯಿತು. ವರದಿಯು 900 ಕ್ಕು ಹೆಚ್ಚು ಪುಟ್ಳನ್ನು ಒಳಗೊಂಡಿದ್ದು ಆಯೋಗದ ಕಾರ್ಯಕಲಾಪಕ್ಕೆ ಸುಮಾರು 8 ಕೋಟಿ ವೆಚ್ಚವಾಗಿದೆ. ಲಿಬ್ಹರಾನ್ ವರದಿಯಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಸಚಿವ ಮುರುಳಿ ಮನೋಹರ ಜೋಶಿ, ಉಮಾಭಾರತಿ ಇವರು ಧ್ವಂಸಕ್ಕೆ ನೇರ ಕಾರಣರು, ಇದಲ್ಲದೆ ಮಸೀದಿ ಧ್ವಂಸ ತಡೆಯಲು ಅಂದಿನ ಕಾಂಗ್ರೆಸ್ ಸರ್ಕಾರ ಪ್ರಧಾನಿಯಾದ ನರಸಿಂಹರಾವ್ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಅಡ್ವಾಣಿ ರಥಯಾತ್ರೆ ಮಾಡಿದ್ದು ತಪ್ಪು. ಇಡೀ ಘಟನೆಯಲ್ಲಿ ವಿ ಎಚ್ ಪಿ ನಾಯಕರ ಪಾತ್ರ ಪ್ರಮುಖ ಎಂದು ಹೇಳಿತು.

ಮಸೀದಿಯ 2010ರ ಸೆಪ್ಟೆಂಬರ್ ತೀರ್ಪು:

ಅಯೋಧ್ಯೆಯನ್ನು ಹೊಂದಿರುವ ಉತ್ತರಪ್ರದೇಶ ಭಯದ ಕಾರ್ಮೋಡ, ಇತರೆ ರಾಜ್ಯಗಳಲ್ಲಿಯೂ ಜನಮನದಲ್ಲೂ ಎಂಥದ್ದೊ ಒಂದು ರೀತಿಯ ಆತಂಕ ಮತ್ತು ಕಳವಳ, ಮುಂಜಾಗ್ರತ ಕ್ರಮವಾಗಿ ಉತ್ತರ ಪ್ರದೇಶದ ಅಂದಿನ ಮಾಯಾವತಿ ಸರ್ಕಾರವು ಅಯೋಧ್ಯೆಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನು ಆಗಸ್ಟ್ 30 ರಿಂದಲೇ ಜಾರಿಗೆ ತಂದಿತ್ತು. ಕೋಮು ಸಂಘರ್ಷ ಮರುಕಳಿಸದಂತೆ ತಡೆಯಲು ಅವಳಿ ನಗರಗಳಾದ ಅಯೋಧ್ಯೆ, ಫೈಜಾಬಾದ್ನಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಎಲ್ಲಿ ನೋಡಿದರೂ ಖಾಕಿಗಳ ದಂಡು ಸುಮಾರು 2 ಲಕ್ಷ ಭದ್ರತಾ ಸಿಬ್ಬಂದಿ, ಉತ್ತರ ಪ್ರದೇಶದ ಪ್ರಮುಖ ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದರು. 1500 ಪೊಲೀಸರು ಹೈಕೋರ್ಟ್ ಆವರಣದಲ್ಲಿ ನಿಯೋಜಿಸಲಾಗಿತ್ತು.

2010 ಸೆಪ್ಟೆಂಬರ್ 30 ರಂದು ಅಲಹಬಾದ್ ಹೈಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿತು. ನ್ಯಾಯಮೂರ್ತಿಗಳಾದ ಡಿ.ವಿ.ಶರ್ಮಾ, ಸುಧೀರ್ ಅಗರವಾಲ್ ಮತ್ತು ಎಸ್.ಯು ಖಾನ್ ಅವರಿದ್ದ ತ್ರಿಸದಸ್ಯ ಪೀಠ 2-1 ರ ಆಧಾರದ ಮೇಲೆ 2.77 ಎಕರೆ ಮಸೀದಿ ಜಾಗವನ್ನು ಮೂರು ಭಾಗವಾಗಿ ವಿಂಗಡಿಸಿತು. ಹಿಂದೂ ಮಹಾಸಭಾ ಪ್ರತಿನಿಧಿತ್ವದ ರಾಮಲಲ್ಲ, ಇಸ್ಲಾಂ ಪ್ರತಿನಿಧಿತ್ವದ ಸುನ್ನಿವಕ್ಫ್ ಮಂಡಳಿ ಹಾಗೂ ನಿರ್ಮೋಹಿ ಅಖಾಡಕ್ಕೆ ಸೇರಿದಂತೆ ಮೂರು ಭಾಗಮಾಡಿತು.

ಫಲಕಾರಿಯಾಗದ ಸಂಧಾನ:

ಮಸೀದಿ ವಿವಾದ ತೀರ್ಪನ್ನು ಎರಡೂ ಕಡೆಯ ಧಾರ್ಮಿಕ ಮುಖಂಡರು ಒಪ್ಪಲಿಲ್ಲ. ಆದರೆ ಇದನ್ನು ಮಾತುಕತೆ ಮೂಲಕ ಬಗೆಹರಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡರು. ಆದರೆ ಕಾಂಗ್ರೆಸ್ನ ಈ ಪ್ರಯತ್ನವನ್ನು ಬಿಜೆಪಿ ತಳ್ಳಿ ಹಾಕಿತು. ಸಂಪೂರ್ಣ ಜಾಗ ನಮ್ಮದೇ ಆಗಬೇಕೆಂದು ಹಿಂದೂ ಧಾರ್ಮಿಕ ಮುಖಂಡರು ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಂಧಾನಕ್ಕೆ ವಿರೋಧ ವ್ಯಕ್ತಪಡಿಸಿದರು. ಸಂಧಾನದ ಮೂಲಕ ಬಗೆಹರಿಯದ ಈ ಸಮಸ್ಯೆ ಅಂತಿಮವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.

2019 ರ ಸುಪ್ರೀಂಕೋರ್ಟ್ ತೀರ್ಪೀ:

2010 ರ ಅಲಹಬಾದ್ ಕೋರ್ಟ್ ನ ತೀರ್ಪನ್ನು ಒಪ್ಪದ ರಾಮಲಲ್ಲ ಮತ್ತು ಸುನ್ನಿವಕ್ಫ್ ಬೋರ್ಡ್ ಇಬ್ಬರೂ ಸೇರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು 8 ವರ್ಷಗಳ ಸುಧೀರ್ಘ ವಿಚಾರಣೆಯ ನಂತರ 2019ಕ್ಕೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ಎಸ್.ಎ.ಬೊಬ್ಬೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಎ.ನಝೀರ್ ಅವರನ್ನೊಳಗೊಂಡ ಪೀಠ ತನ್ನ ತೀರ್ಪನ್ನು ಪ್ರಕಟಿಸಿತು. ಈ ಹಿಂದೆ ಅಲಹಬಾದ್ ಹೈಕೋರ್ಟ್ ಮೂವರಿಗು ಸಮನಾಗಿ ಹಂಚಿದರೆ ಸುಪ್ರೀಂಕೋರ್ಟ್ 2.77 ಎಕರೆ ಮಸೀದಿಯ ಜಾಗವನ್ನು ಮಂದಿರ ಕಟ್ಟಲು ಹಸ್ತಾಂತರಿಸಿ ಮಸೀದಿ ಕಟ್ಟಲು ಬೇರೆ ಕಡೆ ಭೂಮಿಯನ್ನು ನೀಡಲು ತೀರ್ಪು ನೀಡಿತು.

2003 ಮತ್ತು 2020 ರ ಪುರಾವೆ:

2019 ರಲ್ಲಿ ಸುಪ್ರೀಂಕೋರ್ಟ್ ಮಂದಿರ ಕಟ್ಟಲು ಸಂಪೂರ್ಣ ಮಸೀದಿ ಜಾಗವನ್ನು ಹಸ್ತಾಂತರಿಸಿ ತೀರ್ಪು ನೀಡಿತು. ಈ ತೀರ್ಪಿಗೆ ಅದು ಆಧರಿಸಿಕೊಂಡಿದ್ದು 2003 ರ ಪುರಾತತ್ವ ಇಲಾಖೆ ವರದಿಯನ್ನು. ದೇವಾಲಯ ಮಾದರಿಯಲ್ಲಿ ಗೋಡೆ ಮತ್ತು ಗೋಪುರಗಳು ಇರುವುದರಿಂದ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಪುರಾವೆ ಹೇಳಿತು. ಇದನ್ನು ಸುಪ್ರೀಂಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸಿತು. ಮಂದಿರ ಕಟ್ಟಲು ಮಸೀದಿಯನ್ನು ಹಗೆಯುವಾಗ 24 ಮೇ 2020 ರಂದು ಬುದ್ಧನ ವಿಗ್ರಹ ಮಸೀದಿಯ ಕೆಳಗೆ ಸಿಕ್ಕಿತು. ಇದು ಆ ಸಂದರ್ಭದಲ್ಲಿ ಭಾರತದಾಧ್ಯಂತ ದೊಡ್ಡ ಚರ್ಚೆಯಾಯಿತು. ಅಯೋಧ್ಯೆಯು ಹಿಂದೆ ಸಾಕೇತ್ ನಗರವಾಗಿದ್ದು ಬೌದ್ಧರ ಕೇಂದ್ರವಾಗಿತ್ತು ಇದನ್ನು ನಮಗೆ ಹಸ್ತಾಂತರಿಸಿ ಎಂದು ಸಾಕಷ್ಟು ಪ್ರತಿಭಟನೆಗಳು ನಡೆದವು. 2003 ರ ಪುರಾವೆಯನ್ನು ಗಣನೆಗೆ ತೆಗೆದುಕೊಂಡ ಕೋರ್ಟ್ 2020 ರಲ್ಲಿ ಸಿಕ್ಕ ಬುದ್ಧನ ಉತ್ಖನನದ ಬಗೆ ವಿವರಣೆಯನ್ನೆ ಕೇಳಲಿಲ್ಲ.

05 ಆಗಸ್ಟ್ 2020 ಮಂದಿರ ಶಿಲಾನ್ಯಾಸ:

ಸುಪ್ರೀಂಕೋರ್ಟ್ 2019 ರಲ್ಲಿ ಸಂಪೂರ್ಣ ಜಾಗವನ್ನು ರಾಮಜನ್ಮಭೂಮಿಗೆ ಹಸ್ತಾಂತರಿಸಿದ ಮೇಲೆ ಅದನ್ನು ಕಟ್ಟಲು ಮೊದಲ ಶಿಲಾನ್ಯಾಸ ಆಗಸ್ಟ್ 5 ರಂದು ನಡೆಯಿತು. ಒಂದು ಖಾಸಗಿ ಟ್ರಸ್ಟ್ ನಿರ್ಮಿಸುತ್ತಿರುವ ರಾಮ ಮಂದಿರ ಶಿಲಾನ್ಯಾಸಕ್ಕೆ ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರೇ ನೆರವೇರಿಸಿದರು. ಅದರ ಉಪಸ್ಥಿತಿಯ ಭಾಗವಾಗಿ ಆರ್ ಎಸ್ ಎಸ್ ನ ರಾಷ್ಟ್ರೀಯ ಸಂಚಾಲಕರಾದ ಮೋಹನ್ ಭಾಗವತ್ ಕೂಡ ಇದ್ದರು. ಇಲ್ಲಿಗೆ ಮಸೀದಿ ಕತೆ ಮುಗಿಯಿತು.

ಅಂತಿಮ ತೀರ್ಪು 30 ಸೆಪ್ಟೆಂಬರ್ 2020;

ಮಸೀದಿ ಜಾಗದ ವಿವಾದ ಮುಗಿದ ನಂತರ ಮಸೀದಿ ಕೆಡವಿದ ಆರೋಪಿಗಳ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 49 ಆರೋಪಿಗಳಿದ್ದು ಈಗಾಗಲೇ 17 ಜನ ಮೃತಪಟ್ಟಿದ್ದರಿಂದ 32 ಆರೋಪಿಗಳು ಬದುಕುಳಿದಿದ್ದರು ಅವರಲ್ಲಿ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ ಜೋಷಿ, ಉಮಾಭಾರತಿ, ಕಲ್ಯಾಣ್ ಸಿಂಗ್, ರಾಮಜನ್ಮಭೂಮಿ ಟ್ರಸ್ಟ್ ನ ಗೋಪಾಲ್ ದಾಸ್, ವಿನಯ್ ಕಟಿಯಾರ್, ಧರ್ಮದಾಸ್, ವೇದಾಂತಿ, ಲಲ್ಲುಸಿಂಗ್, ಸಾಕ್ಷಿ ಮಹಾರಾಜ್, ಸಾಧ್ವಿ ರಿತಂಬರಾ, ಚಂಪತ್ ರಾಯ್ ಮತ್ತು ಪವನ್ ಪಾಂಡೆ ಮುಂತಾದವರು ಇದ್ದರು. ಆದರೆ ಸಿಬಿಐ ನ್ಯಾಯಾಲಯವು ಮಸೀದಿ ಕೆಡವಿದ್ದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿತು.

ಕಾಂಗ್ರೇಸ್ ನ ವೈಫಲ್ಯ:

ಲಿಬ್ಹರಾನ್ ವರದಿ ಸಲ್ಲಿಕೆಯ ನಂತರ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡಿಸುವುದಾಗಿ ಘೋಷಿಸಿದ ಅಂದಿನ ಕಾಂಗ್ರೇಸ್ ಸರ್ಕಾರ ಲಿಬ್ಹರಾನ್ ಆಯೋಗದ ವರದಿಯ ಕಡೆ ತಿರುಗಿಯೂ ನೋಡಲಿಲ್ಲ. ಇದು ಕಾಂಗ್ರೇಸ್ ನ ನಿರ್ಲಕ್ಷ್ಯವೂ ಹೌದು. ಲಿಬ್ಹರಾನ್ ಆಯೋಗದ ವರದಿಯನ್ನು ಅಂದು ಕಾಂಗ್ರೇಸ್ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿ ಸೂಕ್ತ ಕ್ರಮ ಕೈಗೊಂಡಿದ್ದರೆ ಬಿಜೆಪಿಯ ಬಹುತೇಕ ನಾಯಕರು ಜೈಲಿನಲ್ಲಿರುತ್ತಿದ್ದರು. ಕಾಂಗ್ರೇಸ್ ಕ್ರಮೇಣವಾಗಿ ಆಯೋಗದ ವರದಿಯನ್ನು ನಿರ್ಲಕ್ಷಿಸಿದ ಕಾರಣ ಇಂದು ಬಿಜೆಪಿ ಅಧಿಕಾರಕ್ಕೆ ಬಂದು ನ್ಯಾಯಾಂಗದ ದೃಷ್ಟಿಯಲ್ಲಿ ಎಲ್ಲರೂ ನಿರ್ದೋಷಿಗಳಾದರು. ಬಿಜೆಪಿ ನಾಯಕರ ರಕ್ಷಣೆಯ ಹಿಂದೆ ಕಾಂಗ್ರೇಸ್ ನ ಇಂತಹ ಆಷಾಢಭೂತಿತನವು ಕಾರಣವಾಗಿದೆ. ಕಾಂಗ್ರೆಸ್ ತನ್ನ ಹಳೆಯ ಸಾಂಪ್ರದಾಯಿಕ ನೆಲೆಯ ಸಂಧಾನಕ್ಕೆ ಮತ್ತು ಓಲೈಕೆ ರಾಜಕಾರಣಕ್ಕೆ ಮುಂದಾಹಿತೇ ವಿನಃ ಕೋಮು ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಂಪೂರ್ಣ ವಿಫಲವಾಯಿತು.

ಕೊನೆಯದಾಗಿ:

1992 ಡಿಸೆಂಬರ್ 6 ರಂದು ಅಡ್ವಾಣಿ ನೇತೃತ್ವದ ರಾಮರಥಯಾತ್ರೆಯ ಮೂಲಕ ಬಂದ ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸಿದರು ಎಂಬುದು ಇಂದಿಗೂ ಅಂತರಾಷ್ಟ್ರೀಯ ವಿಚಾರ. ಈ ಒಂದು ಘಟನೆಯಿಂದ ದೇಶದಾಧ್ಯಂತ ಗಲಭೆಗಳು ನಡೆದಿವೆ 2000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸುಧೀರ್ಘವಾಗಿ 28 ವರ್ಷಗಳ ವಿಚಾರಣೆ ನಡೆದಿದೆ ಎರಡು ಬಾರಿ ಕೋರ್ಟ್ ತೀರ್ಪು ನಿಡಿವೆ. ಈಗಿರುವಾಗ ಮಸೀದಿಯ ಧ್ವಂಸಕ್ಕೆ ಯಾರು ಕಾರಣ ಎಂಬುದು ತನಿಖೆಯಲ್ಲಿ ತಿಳಿಯಲೇ ಇಲ್ಲವೆ? ವಿಚಾರಣೆಯಲ್ಲಿದ್ದವರೆಲ್ಲಾ ನಿರ್ದೋಷಿಗಳು ಎಂದಾದ ಮೇಲೆ ಮಸೀದಿ ಧ್ವಂಸ ಮಾಡಿದವರು ಯಾರು? ಬಹುಶಃ ಕಣ್ಕಟ್ಟು ಎಂದರೆ ಇದೇ ಇರಬೇಕು.

ಹಾರೋಹಳ್ಳಿ ರವೀಂದ್ರ ( Harohalli Ravindra ) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರು ಹಾರೋಹಳ್ಳಿಯಲ್ಲಿ ಮುಗಿಸಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿ (ಎಂ.ಎ ಪತ್ರಿಕೋದ್ಯಮ) ಮಾಡಿದರು. ಇವರು ಮೂಲತಹ ಕವಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡವರು. ಇವರ ಇದುವರೆಗಿನ ಕೃತಿಗಳು, 2012ರಲ್ಲಿ ಮನದ ಚೆಲುವು ಮುದುಡಿದಾಗ(ಕವನ ಸಂಕಲನ). 2014ರಲ್ಲಿ ಹಿಂದುತ್ವದೊಳಗೆ ಭಯೋತ್ಪಾದನೆ(ವೈಚಾರಿಕ ಕೃತಿ). 2015ರಲ್ಲಿ ಹಿಂದೂಗಳಲ್ಲದ ಹಿಂದೂಗಳು(ಬಿಡಿ ಲೇಖನಗಳ ಕೃತಿ). 2016 ರಲ್ಲಿ ಎಬಿವಿಪಿ ಭಯೋತ್ಪಾದನೆ. ಇದಲ್ಲದೆ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಬರೆಯುತ್ತಿರುತ್ತಾರೆ.

Be the first to comment on "ಮಸೀದಿ ಧ್ವಂಸದ ಚಾರಿತ್ರಿಕ ನೋಟ"

Leave a comment

Your email address will not be published.


*