ಅಮ್ಮಾ, ಅಂಬೇಡ್ಕರಾ….

ಅಮ್ಮಾ, ಅಂಬೇಡ್ಕರಾ….

ಕಾಗದಗಳ ಮೇಲೆ ಮಾತ್ರವಲ್ಲ
ಪುಸ್ತಕಗಳಲ್ಲಿ ಮಾತ್ರವಲ್ಲ
ಪಕ್ಕೆಲುಬಿನ ಕೆಳಗೆ ಪ್ರವಹಿಸುವ
ಜೀವನದಿಗಳ ಮೇಲೆ
ನಿನ್ನ ಹೆಸರನ್ನು ಬರೆದುಕೊಳ್ಳುತ್ತೇವೆ
ಕಣ್ಣರೆಪ್ಪೆಗಳ ಕೆಳಗೆ ಅರಳುವ
ಹೂವಿನಂತಹ ಆಕಾಂಕ್ಷೆಗಳ ಮೇಲೆ
ನಿನ್ನ ಹೆಸರನ್ನೆ ಬರೆದುಕೊಳ್ಳುತ್ತೇವೆ
ಸಜೀವ ದಹನವಾದ ದಲಿತಕೇರಿಗಳ
ಬೂದಿಯೊಳಗಿಂದ ಜಿಗಿದು ಬರುವ ಫಿನಿಕ್ಸ್
ಪಕ್ಷಿಯ ಕೊರಳಿನ ಮೇಲೆ ನಿನ್ನ ಹೆಸರನ್ನೇ ಬರೆದುಕೊಳ್ಳುತ್ತೇವೆ
ನಿನ್ನ ಪ್ರಸವ ವೇದನೆಯಲ್ಲಿ ಸಂವಿಧಾನವನ್ನಷ್ಟೇ ಅಲ್ಲ
ತಲೆಮಾರುಗಳ ಕನಸುಗಳನ್ನೇ ಹೆತ್ತುಬಿಟ್ಟೆ

ಜಾತಿಗೇನು ನೀನು ತಂದೆಯೋ! ತಾಯಿಯೋ
ಕೋಟ್ಯಾಂತರ ಜನರು
ಅವರು,
ಹಸಿದವರು,
ಅನ್ನಕ್ಕಾಗಿ ಅಂಗಲಾಚುವವರು,
ದಮನಕ್ಕೊಳಗಾದವರು, ದುರ್ಬಲರು,
ಆಕಾಶದಲ್ಲಿ ಹಾರುವ ಹಕ್ಕಿಗಳ ರೆಕ್ಕೆಗಳ ಮೇಲೂ
ಯಾವಾಗಲೂ ನಿನ್ನ ಹೆಸರನ್ನೇ ಓದಿಕೊಳ್ಳುತ್ತಿದ್ದಾರೆ
ನಿನ್ನಲ್ಲಿ ತಾಯ್ತನವನ್ನು ಕಾಣುತ್ತಿದ್ದಾರೆ
ತೆರೆದ ಕಿಟಕಿಯ ಕಂಬಿಗಳ ಸಂದಿಯಿಂದ ಬೀಳುತ್ತಿರುವ
ಬೆಳ್ಳನೆಯ ಸೂರ್ಯಕಿರಣಗಳು
ಹೊಡೆದುಹಾಕಿದ್ದು
ನೀರಗುಳ್ಳೆಯನ್ನೋ? ಮಂಜಿನಿಬ್ಬನಿಯನ್ನೋ?
ಆಕಾಶದಗಲ ಅರಳಿರುವ ಏಳು ಬಣ್ಣಗಳ ಕಾಮನಬಿಲ್ಲಿನ ಮೇಲೆ
ನಿನ್ನ ಮುಗುಳ್ನಗೆಯ ರೂಪ
ಹಕ್ಕುಗಳಿಗಾಗಿ ದನಿ ಎತ್ತುವುದಕ್ಕೆ ತುಟಿಗಳಿಗೆ ಶಕ್ತಿ ಕೊಟ್ಟ
ಆ ನಿನ್ನ ಮುಗುಳುನಗೆಯಂತಹ ಸಹಿ

ತಂದೆಯೇ! ತಾಯಿಯೇ! ದೇವರೇ
ದೇಶವೆಲ್ಲಾ ನಿದ್ರಿಸುತ್ತಿರುವಾಗ
ನೀನೇಕೆ ಕಣ್ಣು ತೆರೆದು ಕನಸನ್ನು ಕಂಡೆ
ತಲೆಮಾರಿನಿಂದ ತಲೆಮಾರಿಗೆ ದಕ್ಕುತ್ತಿರುವ
ಅವಮಾನವೆನ್ನುವ ದುಃಖದ ನದಿಗಳನ್ನು ನಿನ್ನೊಳಗೇ ಹರಿಸಿಕೊಂಡು ದೇಹವನ್ನೆಲ್ಲ ಸಣ್ಣ ದೊನ್ನೆಯಾಗಿಸಿಕೊಂಡು
ಒಳಗೊಳಗೇ ಏಕೆ ಉರಿದುಹೋದೆ?
ಕನಲಿಹೋದೆ ಯಾಕಷ್ಟು ಉಮ್ಮಳಿಸಿದೆ?
ಕಣ್ಣುಗಳೇಕೆ ಕೆಂಡದ ಮಳೆ ಸುರಿಸಿದವು?

ನಿನ್ನ ಅರೆತೆರದ ಕಣ್ಣುಗಳ ಮುಂದೆ ಅಡ್ಡಬಿದ್ದು
ಹಿಡಿಯಷ್ಟು ಹೃದಯದ ಬದುಕನ್ನು ಕೋರಿಕೊಂಡೆವು
ನಗರದ ನಡುಮಧ್ಯದಲ್ಲಿ ಮೊಳಕೆಯೊಡೆದು ಹುಟ್ಟಿದ ಮಹಾವೃಕ್ಷದಲ್ಲಿ ಅವತರಿಸಿ
ಒಂದು ತೋರುಬೆರಳನ್ನು ಕೊಟ್ಟೆ
ಅದು ತೋರಿಸುವ ಒಂದು ಸೂರ್ಯೋದಯವನ್ನು ಕೊಟ್ಟೆ
ಪಾರ್ಲಿಮೆಂಟು, ಅಸೆಂಬ್ಲಿಗಳಲ್ಲಿ ಮಾತ್ರವಲ್ಲ
ಮನುಷ್ಯರ ಹೃದಯಗಳನ್ನೇ ಗೆದ್ದು ಆಳುವ
ಒಂದು ಸಂದೇಶವನ್ನು ಕೊಟ್ಟೆ
ಒಂದು ಕಾಂತಿಖಡ್ಗವನ್ನು ಕೊಟ್ಟೆ

ಹೌದು!
ನಿನ್ನ ಹೆಸರೇನು
ಸ್ವಾತಂತ್ರ್ಯವೇ? ಸಮಾನತೆಯೇ? ಸಹೋದರತೆಯೇ?
ತಾಯಿ…!
ಈ ಭೂಮಿಯ ಗರ್ಭದ ಮೇಲೆ ನಿನ್ನ ಹೆಸರನ್ನೇ ಬರೆದುಕೊಳ್ಳುತ್ತೇವೆ
ಅದು ಜನ್ಮಕೊಡುವ ಮುಂದಿನ ತಲೆಮಾರು
ನಿನ್ನ ಹೆಸರನ್ನಿಟ್ಟುಕೊಂಡು ಎದೆಯೆತ್ತಿ ಬೆಳೆಯುತ್ತದೆ.

~ ಕಲೇಕೂರಿ ಪ್ರಸಾದ್
(2008)
ಕನ್ನಡಕ್ಕೆ : ವಿ‌.ಎಲ್.ನರಸಿಂಹಮೂರ್ತಿ