ಮುಂಬಯಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಜನಗಣತಿಯ ರಾಜಕಾರಣ -ಡಾ ಮುಜಾಫರ್ ಅಸ್ಸಾದಿ

ಮುಂಬಯಿ ಅಥವಾ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಇಂದಿನ ಕರ್ನಾಟಕದ ಹಲವು ಪ್ರದೇಶಗಳು ಹರಡಿದ್ದು ವಾಸ್ತವ. ಅದರಲ್ಲಿ ಇಂದಿನ ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ ಸೇರಿಕೊಂಡಿವೆ. ಆದಕಾರಣ ಇಲ್ಲಿ ಮುಸ್ಲಿಂ ಜಾತಿಗಳನ್ನು ಪಟ್ಟಿ ಮಾಡುವುದು ಅಷ್ಟು ಸುಲಭವಲ್ಲ. ವಾಸ್ತವವಾಗಿ ಪ್ರಥಮ ಜನಗಣತಿ (೧೮೭೧)  ಹತ್ತು ಹಲವು ಮುಸ್ಲಿಂ ಜಾತಿಗಳನ್ನು ಗುರುತಿಸಿದರೂ, ಅವುಗಳ ಅಂದಿನ ಪ್ರೆಸಿಡೆನ್ಸಿ ಮತ್ತು ಇಂದಿನ ಕರ್ನಾಟಕದ ಯಾವ ಪ್ರಾಂತ್ಯದಲ್ಲಿ ಕಂಡುಬರುತ್ತದೆ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ಮುಸಲ್ಮಾನರಲ್ಲಿ ಅದು ಗುರುತಿಸುವ ಪಂಥಗಳೆಂದರೆ  ವಹಾಬಿ, ಶಿಯಾ, ಸುನ್ನಿ, ಖೋಜಾಗಳು, ಮೆಮೊನ್‌ಗಳು.

೧೮೮೧ರ ಜನಗಣತಿ ಬಹಳ ಮುಖ್ಯವಾಗಿ ಎರಡು ಮೂರು ಕಾರಣಗಳಿಗೆ ಮಹತ್ವವೆನಿಸುತ್ತದೆ. ಮೊದಲನೆಯದಾಗಿ, ಇದು ಧರ್ಮವು ಕಾಲ ಕಳೆದಂತೆ ಸ್ಥಾನೀಯ ಸಂಸ್ಕೃತಿಯ ಅಂತರ್ಗತ ಭಾಗವಾಗುವುದನ್ನು ದಾಖಲಿಸುತ್ತದೆ. ಅದರ ಪ್ರಕಾರ ಧರ್ಮ ಈ ಪ್ರೆಸಿಡೆನ್ಸಿ ಪ್ರದೇಶದಲ್ಲಿ ಪ್ರಾಂತೀಯ ಗುಣ ಲಕ್ಷಣಗಳನ್ನು ತನ್ನದಾಗಿಸಿಕೊಂಡಿತ್ತು. ಎರಡನೆಯದಾಗಿ, ಪ್ರೆಸಿಡೆನ್ಸಿ ಪ್ರದೇಶದಲ್ಲಿರುವ ಮುಸಲ್ಮಾನರನ್ನು ಎರಡು ವರ್ಗಗಳಾಗಿ ಗುರುತಿಸಿತ್ತು–ಒಂದು ವಿದೇಶಿ ನೆಲದಿಂದ ಬಂದು ನೆಲೆನಿಂತವರು,. ಎರಡನೆಯದಾಗಿ, ಸ್ಥಾನೀಯವಾಗಿ  ಮತಾಂತರಗೊಂಡವರು  . ಜನಗಣತಿ ಪ್ರಕಾರ ಈ ಮತಾಂತರಗೊಂಡ ಮುಸ್ಲಿಂ ಜಾತಿಗಳಿಗೆ ಆಶ್ರಯದಾತರು ಇಲ್ಲದಿರುವ ಕಾರಣ, ಅವರ ಬದುಕಿನ ಪ್ರಶ್ನೆಯನ್ನು ಅವರೇ ಎದುರಿಸಬೇಕಾಗಿತ್ತು . ಇದರಿಂದ ಒಂದು ಸ್ಪಷ್ಟತೆ ಸಿಗುತ್ತದೆ. ಅದೇನೆಂದರೆ ಮತಾಂತರಿಗಳು ಕೆಳಜಾತಿಗಳಿಂದ ಬಂದವುಗಳು. ಅವುಗಳಿಗೆ ರಾಜಾಶ್ರಯಗಳಿರಲಿಲ್ಲ. ಅದೇ ಸಂದರ್ಭದಲ್ಲಿ ಮತಾಂತರಿಗಳಿಗೂ, ಹಿಂದೂ ಧರ್ಮದ ಜಾತಿಗಳ ನಡುವಿನ ಅಂತರವನ್ನು “ತೆಳ್ಳಗಿನ ಅಂತರ”ವೆದೂ ವಾದಿಸುತ್ತಾ ಅದಕ್ಕೆ ಒಂದೆರಡು ಉದಾಹರಣೆಯನ್ನು ಮುಂದಿಡುತ್ತದೆ. ಅವರ ಪ್ರಕಾರ ಹಿಂದೂಗಳು ಮತ್ತು ಮುಸುಲ್ಮಾನರು ಜೊತೆ ಜೊತೆಯಾಗಿ ಸಂತನಿಗೆ ಅಥವಾ ಪೀರ್‌ಗೆ ಅಕ್ಕಿ ಮತ್ತು ತೆಂಗಿನ ಕಾಯಿಯನ್ನು ಸಮರ್ಪಿಸುತ್ತಾ, ಇನ್ನೊಂದೆಡೆ ಮದುವೆ ಮತ್ತು ಕೌಟುಂಬಿಕ ಸಂದರ್ಭದಲ್ಲಿ ಹಿಂದೂ ಪದ್ಧತಿಯನ್ನು ಮತಾಂತರಿಗಳು ಅನುಸರಿಸುತ್ತಿದ್ದರು ಎಂದು “ತೆಳ್ಳಗಿನ” ಅಂತರವನ್ನು ಜನಗಣತಿ ದಾಖಲಿಸುತ್ತದೆ. ಇದರೊಂದಿಗೆ ಅದು ಮತಾಂತರಗೊಂಡ ಜಾತಿಗಳ ಪಟ್ಟಿಯನ್ನು ಮಾಡುತ್ತದೆ. ಕೆಲವು ಜಾತಿಗಳು ಸಂದೇಹಾತ್ಮಕವಾಗಿರುವುದನ್ನು ಅದು ಪರಿಗಣಿಸುತ್ತದೆ. ಅದರೊಟ್ಟಿಗೆ ಮತಾಂತರಗೊAಡು ಸ್ಪಷ್ಟವಾಗಿ ಗುರುತಿಸಲ್ಪಡುವ ಜಾತಿಗಳಾದ ಗಾಂಚಿ, ಚೊಹಾನ್, ಬೊಹ್ರಾಗಳು, ಮೆಮನ್‌ಗಳು, ಮೊಲೆಕ್ಸ್, ಮಲ್ಲೆಸಲಿಂ ಗಳನ್ನು ದಾಖಲಿಸುತ್ತಾ ಖುಡ್ಯಾ, ಕುರಡ್, ಖಲೀಫ, ಕಲ್ಹಾಪರ್. ಗಾಡೀಯ, ಜಕಾರಿಸ್, ನಾಗರ್ಚಿ, ಭಗವಾಗಿರಿ, ಮನೋಶಿ, ರುಜ ಇವುಗಳನ್ನು ಸಂದೇಹಾತ್ಮಕ ಜಾತಿಗಳೆಂದು ಗುರುತಿಸುತ್ತದೆ, ಈ ಸಂದರ್ಭದಲ್ಲಿ ಜನಗಣತಿ ಹಿಂದುಗಳಲ್ಲಿ ೭೧೬ ಜಾತಿಗಳನ್ನು, ಮುಸಲ್ಮಾನರಲ್ಲಿ ೨೩೩ ಜಾತಿಗಳನ್ನು/ವಿಭಾಗಳನ್ನು ಗುರುತಿಸಿತ್ತು. ಕರ್ನಾಟಕದಲ್ಲಿ ಗುರುತಿಸಿದ ಜಾತಿಗಳು ವಾಸ್ತವವಾಗಿ ಸೀಮಿತವಾಗಿದ್ದವು: ನಾವಿಕರಾದ ನವಾಯತ್ ಅಥವಾ ಭಾಪಿ, ವ್ಯಾಪಾರಸ್ಥರಾದ ಸುಲ್ತನ್ ಲಾಡ್, ಕಸುಬು ಅಥವಾ ಹಿನ್ನಲೆ ತಿಳಿದಿಲ್ಲದ ಕೋಸರ್, ಖಬೀಬ್, ಕಾಕರ್, ಗಾಯೇಬಿ ಮತ್ತು ದಮನ್. ದುರಂತವೆಂದರೆ  ಮುಂದಿನ ಜನಗಣತಿ ಈ ಪಟ್ಟಿಯಲ್ಲಿದ್ದ ಕೆಲವು ಜಾತಿಗಳನ್ನು ದಾಖಲು ಮಾಡುವುದಿಲ್ಲ. ಅವು ಇತಿಹಾಸದಲ್ಲಿ ಕಾಣೆಯಾಗಿ ಬಿಡುತ್ತವೆ. ಅದೇನೆ ಇದ್ದರೂ, ಈ ಜನಗಣತಿ ಪಂಗಡಗಳನ್ನು ಗುರುತಿಸುತ್ತದೆ- ಶಿಯಾ, ಸುನ್ನಿ, ಬೋಹ್ರಾ ಇತ್ಯಾದಿ.

ವಾಸ್ತವವಾಗಿ ೧೯೦೧ ರ ಜನಗಣತಿ ಜಾತಿ ಮತ್ತು ಹೆಚ್ಚಾಗಿ ಮುಸಲ್ಮಾನರಲ್ಲಿರುವ ವಿವಿಧ ಪಂಥಗಳ ಬಗ್ಗೆ ಗಮನ ಹರಿಸಿತ್ತು. ಪಂಥಗಳೇ ಜಾತಿಯ ಪಟ್ಟಿಗೆ ಸೇರಿದ್ದೂ ಇದೆ. ಅದರಲ್ಲಿ ಮುಖ್ಯವಾಗಿ ಅತ್ಯಧಿಕವಾಗಿರುವ ಸುನ್ನಿಗಳು (೯೭ ಶೇಕಡ), ಶಿಯಾ, ಅಹಮದೀಯ ಪಂಥ, ಖೋಜಾ ಅಥವಾ ಇಸ್ಮಾಲಿಯಾ, ಅದರೊಟ್ಟಿಗೆ ಪಿರಾನ, ಕಬೀರ್, ಮತ್ತು ಲೋಥಿ. ಪಿರಾಣರು ಸಿಂಧ್‌ನ ಪೀರ್‌ಗಳ ಅನುಯಾಯಿಗಳು, ಇಲ್ಲಿ ಲೋಥಿಗಳ ಕುರಿತು ಯಾವುದೇ ದಾಖಲೆಗಳಿಲ್ಲ.  ಒಟ್ಟು ೨೨೫ ಜಾತಿಗಳ ಬಗ್ಗೆ ಉಲ್ಲೇಖಿಸುವಾಗ, ವಿವರಿಸುವಾಗ ಜನಗಣತಿ ೪೪ ಮುಸ್ಲಿಂ ವರ್ಗಗಳನ್ನು ಜಾತಿಗಳ ಪಟ್ಟಿಯಲ್ಲಿ ದಾಖಲಿಸುತ್ತದೆ. ಈ ಜಾತಿಗಳು ಪ್ರೆಸಿಡೆನ್ಸಿಯ ವಿವಿಧ ಪ್ರಾಂತ್ಯಗಳಲ್ಲಿ ಹರಡಿದ್ದವು, ಅದರಲ್ಲಿ ಒಂದರೆಡು ಮಾತ್ರ ಪ್ರೆಸಿಡೆನ್ಸಿಯ ಹಳೆಯ ಪ್ರಾಂತ್ಯದಲ್ಲಿ ಕಂಡು ಬರುತ್ತದೆ- ಸಿದ್ಧಿ ಆದಿವಾಸಿಗಳು. ಚಪ್ಪರ್ ಬಂದ್, ಕಸ್ಬೆ, ಅತರ್. ಪ್ರೆಸಿಡೆನ್ಸಿಯಲ್ಲಿ ಕಂಡು ಬಂದ ಇನ್ನಿತರ ಮುಸ್ಲಿಂ ಜಾತಿಗಳೆಂದರೆ ಮೆಮನ್‌ಗಳು, ಮೀಯಾನಗಳು, ಖತ್ರಿಗಳು, ಮೊಲ್ವಿ, ಭಿಲ್ ಆದಿವಾಸಿಗಳು, ಪಿಂಜಾರಿಗಳು, ಖೋಜಾಗಳು, ಕುಂಬಾರ್, ನಾಹಿ ಅಥವಾ ಹಜ್ಜಾಮ್, ತೇಲಿ ಆತವಾ ಗಾಂಚಿ, ಸೈಯ್ಯದ್, ಕಸೈ ಅಥವಾ ಕಟಿಕ್, ಕಯಸ್ತ ಪ್ರಭು, ಬೊಹ್ರಾ, ಶೇಖ್, ಮಲೀಕ್, ಮೊಮಿನ್, ರಿಂಡ್, ಪಠಾಣ್, ಹಫ್ಶೀ ಅಥವಾ ಸಿಧ್ಧಿ. ಖುರೇಷಿ, ಮೊಘಲ್, ಬಾಬೆರ್, ರ‍್ವನ್, ಚಾಚರ್, ಮಗಜ, ಸಿಂಧಿ, ಸಮ, ಹಾಜಿ, ಮೊಹನ, ಬಾರ್ದಿ, ಜಾಠ್, ಮಹುರ್, ಕಸ್ಯೆ, ಜುಲಾಹ, ಹಸನಿ, ಚಾಂಡಿ ಹಾಜಿ, ಜಟೋಯಿ, ಡಾಬರ್, ಮುಲ್ತಾನಿ, ಜರ್ಕಾನಿ, ಬುಗ್ತಿ, ಸೋಮಾಲಿ ಕಾಕರ್, ಅರಬ್, ಅದೇ ಸಂದರ್ಭದಲ್ಲಿ ಜಾತಿಗಳಾದ ಚಪ್ಫರ್ ಬಂದ್, ಅತ್ತಾರಿ ಮತ್ತು ಕಸೈ ಇವುಗಳ ಹೆಸರನ್ನು ನಮೂದಿಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕೆಂದು ಜನಗಣತಿ ವಾದಿಸಿತ್ತು.

೧೯೩೧ರ ಜನಗಣತಿ ಜಾತಿಯ ಲೆಕ್ಕಾಚಾರದಲ್ಲಿ ಅತೀ ಮುಖ್ಯವೆನಿಸುತ್ತದೆ. ಇದು ಒಟ್ಟಾರೆಯಾಗಿ ೭೦ ಮುಸ್ಲಿಂ ಜಾತಿಗಳನ್ನು, ಮೇಲ್ಜಾತಿಯ ಪಂಗಡಗಳ ಹೊರತಾಗಿ, ಪಟ್ಟಿ ಮಾಡಿತ್ತು. ಹೆಚ್ಚಿನವುಗಳು ಕೆಳಜಾತಿಯಿಂದ ಮತಾಂತರಗೊAಡವು. ಕೆಲವು ಸಂಪೂರ್ಣವಾಗಿ ಮುಸ್ಲಿಂ ಧರ್ಮೀರಾಗಿರುವುದನ್ನು ಅದು ಒಪ್ಪಿಕೊಳ್ಳುತ್ತದೆ. ಕೆಲವು ಜಾತಿಗಳು ಹಿಂದೂ- ಮುಸಲ್ಮಾನರ ನಡುವೆ ಹಂಚಿ ಹೋಗಿರುವುದನ್ನು ಜನಗಣತಿ ದಾಖಲಿಸುತ್ತದೆ ವಾಸ್ತವವಾಗಿ ಈ ಜನಗಣತಿಯ ಕಾಲ ಅಸಹಕಾರ ಚಳವಳಿ ಕಾಲ. ಇದು ಜನಗಣತಿಯ ದಾಖಲಾತಿಯ ಮೇಲೆ ಸ್ವಾಭಾವಿಕವಾಗಿ ಪ್ರಭಾವ ಬೀರಿತ್ತು. ಹಿಂದೂಗಳು ಈ ಪ್ರಕ್ರಿಯನ್ನು ವಿರೋಧಿಸಿದರ ಪರಿಣಾಮವೆಂಬAತೆ ಹಿಂದೂ ಸಂಖ್ಯೆ ಗಣನೀಯವಾಗಿ ಕಡಿಮೆಯೆಂದು ದಾಖಲಾಯಿತು (ಮುಂಬಯಿ ಪ್ರೆಸಿಡೆನ್ಸಿ ಪ್ರದೇಶದಲ್ಲಿ ಮಾತ್ರ) ವಿರೋಧಾಭಾಸವೆಂದರೆ ಇದೇ ಸಂದರ್ಭದಲ್ಲಿ ಆದಿವಾಸಿಗಳು ಹಿಂದೂಗಳೆಂದು ಜನಗಣತಿಯಲ್ಲಿ ದಾಖಲಾದರೂ ಒಟ್ಟಾರೆಯಾಗಿ ಹಿಂದೂ ಸಂಖ್ಯೆ ಹೆಚ್ಚಾಗಲಿಲ್ಲ. ಮುಸಲ್ಮಾನರ ಸಂಖ್ಯೆ ತಕ್ಕ ಮಟ್ಟಿಗೆ ಹೆಚ್ಚಾಯಿತು. ಅದೇನೆ ಇದ್ದರೂ ಜನಗಣತಿ ಮತಾಂತರದ ವಿಷಯವನ್ನು ಉಲ್ಲೇಖಿಸಿತ್ತು- ಕೆಳಜಾತಿಗಳಿಗೆ ಸಾಮಾಜಿಕ ಸ್ಥಾನಮಾನದ ನಿರಾಕರಣೆ ಇದಕ್ಕೆ ಬಹುಮುಖ್ಯ ಕಾರಣವೆಂದು ಜನಗಣತಿ ಒಂದೆಡೆ ಒಪ್ಪಿತ್ತು, ಅದರೊಟ್ಟಿಗೆ ಹೊಸ ಧರ್ಮಕ್ಕೆ ಸೇರಿದ ಸಮುದಾಯಗಳು ಮತಾಂತರ ಪೂರ್ವದ ಸಂಪದ್ರಾಯವನ್ನು ಬಿಟ್ಟುಕೊಟ್ಟು ಸಂಪೂರ್ಣವಾಗಿ ಹೇಗೆ ಹೊಸ ಧರ್ಮದೊಂದಿಗೆ ವಿಲೀನವಾದವು ಎಂದು ವಾದಿಸಿತ್ತು. ವಿರೋಧಾಭಾಸವೇನೆಂದರೆ ಇದೇ ಜನಗಣತಿ ಮುಸ್ಲಿಮರಲ್ಲಿದ್ದ ಜಾತಿಗಳ ಹೆಸರುಗಳಿಗೆ ಅನುಗುಣವಾಗಿ ಪಟ್ಟಿಯನ್ನು ಮಾಡಿತ್ತು. ಅದರಲ್ಲಿ ಒಟ್ಟಾರೆಯಾಗಿ ೭೦ ಜಾತಿಗಳನ್ನು ಗುರುತಿಸಿತ್ತು.

ಈ ಸಂದರ್ಭದಲ್ಲಿ(೧೯೩೧) ಜನಗಣತಿಯ ಕಮೀಷನರಿಗೆ ಮುಸ್ಲಿಮರು ನೀಡಿದ ಮನವಿಯನ್ನು ಗಮನಿಸಬೇಕು. ಶೇಖ್ ಮೊಮಿನರನ್ನು ಜಲಾಹರೆಂದು ದಾಖಲಿಸಬೇಕೆಂದು ಕೇಳಿಕೊಳ್ಳಲಾಯಿತು. ಮತ್ತು ಮುಸಲ್ಮಾನರನ್ನು ಪ್ರತ್ಯೇಕವಾಗಿ ದಾಖಲಿಸಬೇಕೆಂಬ ಬೇಡಿಕೆಯೂ ಬಂತು. ಈ ಬೇಡಿಕೆಯನ್ನು ಸರ್ಕಾರ ಮನ್ನಿಸಿತ್ತು. ಇದನ್ನು ಅಸ್ಮಿತೆೆ ರಾಜಕಾರಣದ ಇನ್ನೊಂದು ಮುಖ ಎನ್ನಬಹುದು. ಇದೇ ರೀತಿಯ ಬೇಡಿಕೆಗಳು ಹಳೆಯ ಮೈಸೂರು ಸಂಸ್ಥಾನದಲ್ಲೂ ಬಂದರೂ, ಮುಸ್ಲಿಮರು ಅಲ್ಲಿ ಇಂತಹ ಬೇಡಿಕೆಗಳನ್ನು ಮುಂದಿಡಲಿಲ್ಲ. ಅದೇನೆ ಇದ್ದರೂ ಬಾಂಬೆ ಪ್ರೆಸಿಡೆನ್ಸಿಯಲ್ಲಿ ವಿವಿಧ ಜಾತಿಗಳಿಂದ ಬೇಡಿಕೆಗಳು ಬಂದ್ದದ್ದು ವಾಸ್ತವ: ಮೈಸೂರು ಪ್ರಾಂತ್ಯದ ಬೇಡರು ನಾಯಕರೆಂದು ದಾಖಲಿಸಲು ಬಯಸಿದ್ದರು, ಉಡಾಸಿ ಸಾಧುಗಳು ತಾವು ಸಿಖ್‌ಗಳಲ್ಲ ಹೊರತು ಹಿಂದುಗಳೆಂದು  ದಾಖಲಿಸಬೇಕೆಂದು ಒತ್ತಾಯಿಸಿದರು. ವಿಶ್ವ ಬ್ರಾಹ್ಮಣರು ತಾವು ಪಾಂಚಾಲರಲ್ಲ, ಆದಕಾರಣ ಪ್ರತ್ಯೇಕವಾಗಿ ದಾಖಲಿಸಲು ಬಯಸಿದ್ದರು. ಲಿಂಗಾಯತರು ಕೂಡ ಪ್ರತ್ಯೇಕ ದಾಖಲಾತಿಯನ್ನು ಕೇಳಿದ್ದರು. ಇದರ ನಡುವೆ ಇನ್ನೊಂದು ಆಸಕ್ತಿದಾಯಕ ಬೇಡಿಕೆ ಹುಬ್ಬಳ್ಳಿಯ ಲಿಂಗಾಯತರಿಂದ  ಬಂದಿತು. ತಮ್ಮನ್ನು ಲಿಂಗಿ ಬ್ರಾಹ್ಮಣರೆಂದು ದಾಖಲಿಸಬೇಕೆಂದು ಬೇಡಿಕೆಯನ್ನಿಟ್ಟಿದ್ದರು.

ಬಾಂಬೆ ಪ್ರೆಸಿಡೆನ್ಸಿಯ ೧೯೩೧ರ ಜಗಣತಿ ಬಹುಮುಖ್ಯವಾಗಿ ಆದಿವಾಸಿ ಮುಸಲ್ಮಾನರ ಮೇಲೂ ಬೆಳಕು ಚೆಲ್ಲುತ್ತದೆ. ಖಾಂದೇಶ್‌ನ ತಡ್ವಿ ಭಿಲ್ ಮುಸ್ಲಿಂ ಆದಿವಾಸಿಗಳು, ಸಿಂಧು ಪ್ರಾಂತ್ಯದ ಒಲ್ಹ ಮುಸ್ಲಿಂ ಆದಿವಾಸಿಗಳು,ಇದರಲ್ಲಿ ಬಹುಮುಖ್ಯವೆನಿಸುವುದು ಉತ್ತರಕನ್ನಡ ಜಿಲ್ಲೆಯಲ್ಲಿ ಪೋರ್ಚುಗೀಸರ ಗುಲಾಮರಾಗಿ ಬಂದ ಸಿದ್ದಿ ಆದಿವಾಸಿಗಳು. ಇವರು ಭಾರತಕ್ಕೆ ಬಂದು ನೆಲೆ ನಿಂತ ಕಾಲ ೧೭ನೇ ಶತಮಾನ. ಈ ಜನಾಂಗ ಪ್ರೆಸಿಡೆನ್ಸಿಯ ಡಿಯೂ, ಡಾಮಾನ್‌ನಲ್ಲೂ ಹರಡಿದ್ದರೂ, ಉತ್ತರಕನ್ನಡದಲ್ಲಿ ಅವರ ಸಂಖ್ಯೆ ಗಣನೀಯವಾಗಿರುವುದನ್ನು ಗಮನಿಸಬೇಕು. ಸಿದ್ದಿಗಳಲ್ಲಿ ಮೂರು ಪಂಗಡಗಳಿವೆ: ಹಿಂದೂ ಧರ್ಮಕ್ಕೆ ಮತಾಂತರಗೊಂಡವರು, ಕ್ರೈಸ್ತ  ಧರ್ಮೀಯರು ಮತ್ತು ಮುಸಲ್ಮಾನರು. ಜನಗಣತಿ ಪ್ರಕಾರ, “ಅವರು ತಮ್ಮ ಮೂಲಸಂಸ್ಕೃತಿಯನ್ನು ಉಳಿಸುವ ಯಾವುದೇ ಯತ್ನವನ್ನು ಮಾಡುತ್ತಿಲ್ಲ. ಇವುಗಳ ನಡುವೆ ಒಂದು ರೀತಿಯ ಐಕ್ಯತೆ ಇದೆ. ತಾವು ವಿವಿಧ ಗುಂಪುಗಳಿಗೆ ಸೇರಿದವರು ಎಂಬ ಕಲ್ಪನೆಯೂ ಇಲ್ಲ”.  ಬಹಳಷ್ಟು ವರುಷಗಳ ಕಾಲ ಈ ಜನಾಂಗ ಕಾನೂನುಬಾಹಿರ ಕೆಲಸದಲ್ಲಿ ತೊಡಗಿತ್ತು. ಕಳೆದ ಇಪ್ಪತ್ತು ವರುಷದಿಂದ ಶಾಂತವಾಗಿ ಜೀವನ ನಡೆಸುವಷ್ಟು ಬದಲಾಗಿದ್ದಾರೆ”. ಬಹುಸಂಖ್ಯಾತ ಈ ಸಿದ್ದಿಗಳು ಈಗ ಕೃಷಿ ಕಾರ್ಮಿಕರು/ಗೇಣಿದಾರರು.

ಎರಡನೆಯದಾಗಿ ಜನಗಣತಿ ಹತ್ತು ಹಲವು ಜಾತಿಗಳನ್ನು ಪಟ್ಟಿ ಮಾಡುತ್ತದೆ. ಅದರಲ್ಲಿ ಕೆಲವು ಕುಲ ಕಸುಬುಗಳ ಮೇಲೆ ಅವಲಂಭಿತವಾದ ಜಾತಿಗಳು. ಇವುಗಳಲ್ಲಿ ಅತರಿ ಅಥವಾ ಅತರ್- ಸುಗಂಧ ದ್ರವ್ಯವನ್ನು ಮಾರುವ ಜಾತಿಗಳು. ಇವುಗಳು ಡೆಕ್ಕನ್ ಮತ್ತು ಕೆನರಾ ಪ್ರಾಂತ್ಯದಲ್ಲಿ ಕಾಣಸಿಗುತ್ತವೆ. ಎರಡನೆಯ ಜಾತಿ ಕಲಾಲ್ ಅಥವಾ ಕಲಾನ್, ಮದ್ಯ ಮಾರಾಟಗಾರರು, ಅಗಸ, ಇವರ ಇರುವಿಕೆ ಇಡೀ ಪ್ರೆಸಿಡೆನ್ಸಿಯಲ್ಲಿ ಕಂಡು ಬರುತ್ತದೆ. ಇನ್ನೊಂದು ಜಾತಿ ಕಚ್ಚಿ. ಇಂದಿನ ಬೆಳಗಾವಿಯಲ್ಲಿ ಕಂಡು ಬರುವ ಇವರು ಹಣ್ಣು ವ್ಯಾಪಾರಿಗಳು. ನೃತ್ಯ ಮತ್ತು ಹಾಡುಗಾರರಾದ ಕಲಾವಂತ್‌ರ ಇರುವಿಕೆ ಬೆಳಗಾವಿಯಲ್ಲಿತ್ತು. ಕಟುಕರಾದ ಕಸ್ಬಿ ಅಥವಾ ಕಾಟಿಕ್ ಜಾತಿ, ಭಂಗಿ ಅಥವಾ ಹಲಾಲ್ಕೋರ್, ವೇಶ್ಯೆಯರಾದ ಸುಳೆರ್, ಬಡಗಿಗಳಾದ ಸುತಾರ್ ಅಥವಾ ಸುತರ್ ಇಡೀ ಪ್ರೆಸಿಡೆನ್ಸಿಯಲ್ಲಿ ಹರಡಿದ್ದವು. ಇದೇ ರೀತಿ ಕುಂಬಾರ್, ಧೋಬಿ, ಲೋಹಾರ್, ಪಿಂಜಾರ, ವಡ್ಡರ್ ಜಾತಿ. ವ್ಯಾಪಾರಸ್ಥರಾದ ಬಹೋರಿ, ಕ್ಷೌರಿಕರಾದ ಹಜಾಮ್, ಲೋಹಾರ್, ಜಮೀನದಾರರು ಮತ್ತು ಕೃಷಿಕರಾದ ಮೊಘಲರು, ಲೇವಾದೇವಿದಾರರಾದ ಪಠಾಣರು, ಪಟ್ವೆಕಾರಿ/ಪಟೆಗಾರ್. ಅದು ಕೂಡ ಎಲ್ಲಾ ಪ್ರೆಸಿಡೆನ್ಸಿಯಲ್ಲಿ, ಅದರೊಟ್ಟಿಗೆ ಇಂದಿನ ಕರ್ನಾಟಕದ ಜಿಲ್ಲೆ ತುಂಬೆಲ್ಲಾ ಹರಡಿದ್ದವು. ಹಲಾಲ್ ಕೋರರು, ವಾದ್ಯ ನುಡಿಸುವ ವಜ್ರಂತಿ, ಭಿಕ್ಷುಕರಾದ   ಕಂಜರ್ ಬಹುಮುಖ್ಯವಾಗಿ ಬೆಳಗಾವಿಯಲ್ಲೂ, ಕ್ರಿಮಿನಲ್/ಅಪರಾಧಿ ಬುಡಕಟ್ಟುಗಳೆಂದು ದಾಖಲಾದ ಚಪ್ಪರ್ ಬಂದ್ ಮತ್ತು ಹಲಾಲ್ ಕೋರ್, ದನದ ವ್ಯಾಪಾರಿಗಳಾದ ಜಾತಿಗರ್, ಬಹಳ ಮುಖ್ಯವಾಗಿ ಬಿಜಾಪುರ ಮತ್ತು ಬೆಳಗಾವಿಯಲ್ಲೂ. ಅಗಸ ಮತ್ತು ಮಡಿವಾಳ ಕೆನರಾ ಮತ್ತು ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲೂ, ಹಾವಾಡಿಗರಾದ, ಗಾರೂಡಿ, ಮೋಡಿಕಾರ್, ಮತ್ತು ಮಾದಾರ್ ಕೆನರಾ ಜಿಲ್ಲೆಯಲ್ಲೂ ಕಂಡುಬರುವುದನ್ನು ಜನಗಣತಿ ದಾಖಲಿಸಿತ್ತು. ಕಲಾವಿದರಾದ ಕಲಾವಂತ್ ಜಾತಿ ಬೆಳಗಾವಿ ಮತ್ತು ಕೆನರಾ ಜಿಲ್ಲೆಗಳಲ್ಲಿ, ಖಾರ್ವಿ ಕರಾವಳಿ ಜಿಲ್ಲೆಗಳಲ್ಲಿ, ಜಾಡಮಾಲಿಗಳಾದ ಕೊಟೆಗಾರ್, ಮೆತ್ರಿ ಕೊಟ್ಲಿವ ಕೆನರಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ, ಭಿಕ್ಷುಕರು ಮತ್ತು ಹರಿತಗೊಳಿಸುವ  ಶಿಕಲ್ಗಾರ್ ಬರೇ ಬೆಳಗಾವಿ ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಮದ್ರಾಸ್ ಪ್ರೆಸಿಡೆನ್ಸಿಯ ಪ್ರದೇಶಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಮಾಪಿಳ್ಳೆಗಳನ್ನು ಹೊರತು ಪಡಿಸಿದರೆ ಮುಸ್ಲಿಂ ಜಾತಿಗಳ ಕುರಿತು ಉಲ್ಲೇಖಗಳು ಜನಗಣತಿಯಲ್ಲಿ ದೊರೆಯುವುದಿಲ್ಲ. ಜನಗಣತಿ ಪ್ರಕಾರ ದಕ್ಷಿಣ ಕನ್ನಡದ ಬಹುಪಾಲು ಮಾಪಿಳ್ಳೆಗಳು ಮೂಲತಃವಾಗಿ ಹಿಂದೂ ಧರ್ಮದಿಂದ ಮತಾಂತರಗೊಂಡವರು. ಇದೇ ಸಂದರ್ಭದಲ್ಲಿ ಪ್ರಕಟಿಸಿದ ೧೮೭೧ರ “ಮೆಮೊರಾಂಡಮ್ ಆನ್ ದಿ ಸೆನ್ಸಸ್ ಆಫ್ ಬ್ರಿಟಿಷ್ ಇಂಡಿಯಾ” ಮಾಪಿಳ್ಳೆಗಳ ಕುರಿತು ಒಂದಿಷ್ಟು ಬೆಳಕು ಚೆಲ್ಲುತ್ತದೆ. “ಅವರು ಹೆಚ್ಚೂಕಡಿಮೆ ಮಲಬಾರ್ ಮತ್ತು ದಕ್ಷಿಣ ಕನ್ನಡಕ್ಕೆ ಸೀಮಿತಗೊಂಡವರು, ಕಷ್ಟಪಟ್ಟು ದುಡಿಯುವ ವರ್ಗ, ಆದರೆ ಅಶಿಕ್ಷಿತರು ಮತ್ತು ಮತಾಂಧರು, ಅವರ ಧಾರ್ಮಿಕ ಕುತೂಹಲ ಗಂಭೀರವಾದ ಘರ್ಷಣೆಗೆ ದಾರಿಮಾಡಿಕೊಟ್ಟಿದೆ ”.

೧೯೨೧ರ ಮದ್ರಾಸ್ ಪ್ರೆಸಿಡೆನ್ಸಿಯ  ಜನಗಣತಿ ಕೆಲವು ಜಾತಿಗಳನ್ನು – ಪಂಗಡಗಳನ್ನು ಕರಾವಳಿ ಭಾಗದಲ್ಲಿ ಗುರುತಿಸಿತ್ತು. ಅವುಗಳಲ್ಲಿ ಲಬ್ಬಯೆ, ಶೇಖ್, ಸೈಯ್ಯದ್, ಮತ್ತು ಪಠಾಣರು. ಇವುಗಳಲ್ಲಿ ಲಬ್ಬಯೆ ಜಾತಿಯೇ ಅಥವಾ ಪಂಗಡವೇ ಎಂಬುದರ ಕುರಿತು ಜನಗಣತಿ ಏನನ್ನೂ ಹೇಳುವುದಿಲ್ಲ. ಆದರೆ ಜಾತಿ ಸ್ಪಷ್ಟವಾಗಿ ಕಂಡುಬರುವುದು  ಬಳ್ಳಾರಿಯಲ್ಲಿ. ಇಲ್ಲಿ ಜನಗಣತಿ ದಲಿತ ಜಾತಿಗೆ ಸೇರಿದ ದುಡೆಕುಲ ಜಾತಿಯನ್ನು  ಮುಸಲ್ಮಾನರ ಜಾತಿಯಾಗಿ ಗುರುತಿಸಿತ್ತು.

ಅದೇನೆ ಇದ್ದರೂ ೧೯೩೧ರ ಮದ್ರಾಸ್ ಪ್ರೆಸಿಡೆನ್ಸಿಯ ಜನಗಣತಿಯಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿದ್ದ ಒಂದು ಜಾತಿಯ ಉಲ್ಲೇಖವಿದೆ. ಅದು ಲಬ್ಬಯೆ ಜಾತಿ. ಅವುಗಳ ಕುರಿತು ಉಲ್ಲೇಖಿಸುವಾಗ, ಅವುಗಳು “ಈಗಲೂ ಹಿಂದು ಸಂಪ್ರದಾಯವನ್ನು ಆಚರಿಸುತ್ತಾರೆ” ಎಂದು ಹೇಳುವಲ್ಲಿ ಮುಸ್ಲ್ಲಿಂ ಜಾತಿಯ ಉಲ್ಲೇಖ ಸಿಗುತ್ತದೆ. ಈ ಜಾತಿ ಮೈಸೂರು ಪ್ರಾಂತ್ಯದ ವಿವಿಧ ಜನಗಣತಿಯಲ್ಲೂ ಬರುವ ಕಾರಣ ಅದರ ಉಲ್ಲೇಖ ಇಲ್ಲಿ ಪ್ರಸ್ತುತವೆನಿಸುತ್ತದೆ.  ಎರಡನೆಯದಾಗಿ ಈ ಜನಗಣತಿ ಹಿಂದುಳಿದ ಜಾತಿಗಳು ಇಸ್ಲಾಂಗೆ ಸಾಕಷ್ಟು ಮತಾಂತರಗೊಂಡಿವೆ, ಅಲ್ಲದೇ ದಕ್ಷಿಣ ಭಾರತದ ಮುಸಲ್ಮಾನರಲ್ಲಿ ಹಿಂದೂ ಅಂಶ ಹೆಚ್ಚಿದೆ ಎಂದು ವಾದಿಸುತ್ತದೆ. ವಾಸ್ತವವಾಗಿ ಈ ವಾದದ ಎರಡನೆಯ ಭಾಗವನ್ನು ಯಥಾವತ್ತಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅತೀ ಹೆಚ್ಚು ಮತಾಂತರವಾದದ್ದು ಉತ್ತರಭಾರತದಲ್ಲಿ, ಪಂಜಾಬದಲ್ಲಿ, ಬಂಗಾಳ ಪ್ರಾಂತ್ಯದಲ್ಲಿ. ಆದಕಾರಣ ಅತ್ಯಧಿಕ ಮುಸ್ಲಿಂ ಜಾತಿಗಳು, ಹಿಂದೂ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬಿಟ್ಟುಕೊಡದೆ ಇರುವ ಜಾತಿಗಳು ಸಿಗುವುದು ಕೂಡ ಉತ್ತರ ಭಾರತದಲ್ಲಿ. ನೈಜವಾಗಿ ನೋಡುವುದಾದರೆ ಈ ಮತಾಂತರ ನಿರ್ಮಿಸಿದ್ದು ತೆಳು ಗೋಡೆಯ ಧರ್ಮ- ಅಸ್ಪಷ್ಟ, ಮತ್ತು ಸಮನ್ವಯವಾಗಿತ್ತು. ಅದರ ಸಂಖ್ಯೆ ಹೆಚ್ಚಾಗಿ ಕಂಡು ಬರುವುದು ಉತ್ತರ ಭಾರತದಲ್ಲಿ. ದಕ್ಷಿಣ ಭಾರತದಲ್ಲಿ ಕಡಿಮೆ ಇದ್ದಿರಬಹುದು,ಆದರೆ ಇದು ಕೋಮು ಧ್ರುವೀಕರಣಕ್ಕೆ ದಾರಿ ಮಾಡಿಕೊಡಲಿಲ್ಲ. ಕೋಮು ಧ್ರುವೀಕರಣವೆಂಬುದು ಇತ್ತೀಚಿನ ಪ್ರಕ್ರಿಯೆ. ಉತ್ತರ ಭಾರತದಲ್ಲಿ ವಸಾಹತು ಶಾಹಿಯ ರಾಜಕಾರಣದ ಭಾಗವಾಗಿ ಹುಟ್ಟಿತ್ತು. ಕರ್ನಾಟಕಕ್ಕೆ ಬಂದರೆ ಅತೀ ಹೆಚ್ಚು ಮುಸ್ಲಿಂ ಜಾತಿಗಳು ದೊರೆಯುವುದು ಬಾಂಬೆ ಪ್ರೆಸಿಡೆನ್ಸಿ ಪ್ರದೇಶದಲ್ಲಿ, ಮದ್ರಾಸ್ ಪ್ರಾಂತ್ಯದಲ್ಲಿ ಅತ್ಯಂತ ಕನಿಷ್ಠವೆನ್ನಬಹುದು. ಮೈಸೂರು ಪ್ರಾಂತ್ಯ ಮತ್ತು ಕೊಡಗು ಗೊಂದಲದ ಗೂಡಾಗಿತ್ತು.

ವಸಾಹತುಶಾಹಿಯ ದಾಖಲಾತಿ ಜನಗಣತಿಗೆ ಮಾತ್ರ ಸೀಮಿತಗೊಳ್ಳಲಿಲ್ಲ. ಪೊಲೀಸ್ ದಾಖಲೆಗಳು, ಅದರೊಟ್ಟಿಗೆ ಕಾನೂನುಗಳು ಹೊಸ ಜಾತಿಗಳನ್ನೇ ನಿರ್ಮಿಸಿದವು. ಜಾತಿಗಳಿಗೆ ಕಳಂಕವೆಂಬಂತೆ   ಹೆಸರನ್ನಿಟ್ಟಿತ್ತು. ಇದು ಜಾತಿಗಳಿಗೆ ಶಾಪಗಳಾಗಿ ಅಂಟಿಕೊAಡವು. ಇವತ್ತೂ ಕೂಡ ಜಾತಿಗಳು ತಮಗೆ ಅಂಟಿ ಕೊಂಡ  ಕಳಂಕದಿಂದ ಹೊರಬರಲು ಕಷ್ಟ ಪಡಬೇಕಾಗಿದೆ. ಇವುಗಳಲ್ಲಿ ಠಕ್ಕರು ಮತ್ತು ಅಪರಾಧಿ ಜಾತಿಗಳನ್ನು ನೋಡಬೇಕು.

219

Cenus of The Bombay Presidency, Detailed cenus Returns , Bombat Presidency Part III, Bombay 1875.

220

Census of Bombay Presidency, General Report 1872, Part II, Bombay 1875.

221

J.A Baines, Imperial  Census of 1881,Operations   and Results,in the Bombay Presidency including Sind, Vol.1 Text, Government Press, Madras, 1882.,p.48.

222

Ibid.

223

  1. E.Enthoven, Cenus of India, 1901, Bombay Part I, Volume IX,,Operations, , Government Printing Press, Bombay, 1902, pp 70

224

Ibid . p..202.

225

Op.cit, 1931 p.365.

226

Ibid. 1931,p.387.

227

Memorandum on the Cenus of British India,1871-72,London, 1875,p.28

228

B.A Baig,1921,Madras Census, Cenus of India,921, Vol XIII, Madras ,Part I, Madras ,1922.p.160

229

  1. W. M. Yeats, Cenus of India, 1931, Volume XIV, Madras Part I, Report, Madras , Calcutta, 1932, pp.341-320

 

ಬಹುರೂಪಿ’ ಪ್ರಕಟಿಸಿರುವ ಡಾ ಮುಜಾಫರ್ ಅಸ್ಸಾದಿ ಅವರ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ – ಅಸ್ಮಿತೆ, ವಸಾಹತುಶಾಹಿ ಮತ್ತು ಮೀಸಲಾತಿ’ ಕೃತಿಯ ‘ಕರ್ನಾಟಕದ ಸಂದರ್ಭದ ಜನಗಣತಿಯಲ್ಲಿ ಜಾತಿಗಳು’ ಅಧ್ಯಾಯದ ಆಯ್ದ ಭಾಗ.

ಮೈಸೂರು ವಿಶ್ವವಿದ್ಯಾನಿಲಯದ ಕಲಾನಿಕಾಯದ ಡೀನ್ ಹಾಗೂ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತದ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಮುಜಾಫರ್ ಅಸ್ಸಾದಿಯವರು ೧೨ ಕೃತಿಗಳು, ೨೦೦ ಕ್ಕೂ ಹೆಚ್ಚು ಲೇಖನಗಳು, ಐನೂರಕ್ಕೂ ಹೆಚ್ಚು ಭಾಷಣಗಳು,ಐನೂರಕ್ಕೂ ಮಿಕ್ಕಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ, ರಶ್ಯನ್ ಸ್ಟೇಟ್ ಯೂನಿವರ್ಸಿಟಿ,ಮಾಸ್ಕೋ,ಪಾಂಡಿಚೇರಿ, ಪಂಜಾಬ್ ,ಕೇರಳ ಇತ್ಯಾದಿ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರು. ಆದಿವಾಸಿ ಸಮುದಾಯದ ಸ್ಥಳಾಂತರ ಮತ್ತು ಪುನರ್ ವಸತಿ ಕುರಿತಂತೆ ಹೈಕೋರ್ಟ್ ನೇಮಿಸಿದ ಸಮಿತಿಯ ಅಧ್ಯಕ್ಷರಾಗಿ, ಹಲವು ಆಯ್ಕೆ ಮತ್ತು ನೇಮಕಾತಿ ಸಮಿತಿಗಳ ಸದಸ್ಯರಾಗಿ ಸೇವೆ. ಹತ್ತು ಹಲವು ದೇಶಗಳ ಸಂಚಾರ. ಇವರ ಮಾರ್ಗದರ್ಶನದಡಿಯಲ್ಲಿ ೨೧ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಇತ್ಯಾದಿ ಹೆಗ್ಗಳಿಕೆ. ಅವರ ಚೊಚ್ಚಲ ಕೃತಿ “ಕರ್ನಾಟಕದಲ್ಲಿ ಐಡೆಂಟಿಟಿ ರಾಜಕೀಯ”ಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ.ಕನ್ನಡದಲ್ಲಿ ಬರೆದ ಕೆಲವು ಲೇಖನಗಳು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕದ ಭಾಗಗಳಾಗಿವೆ.

ಪ್ರತಿಗಳಿಗಾಗಿ :

ಬಹುರೂಪಿ bahuroopi.in ದೂರವಾಣಿ: 70191 82729

 

Be the first to comment on "ಮುಂಬಯಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಜನಗಣತಿಯ ರಾಜಕಾರಣ -ಡಾ ಮುಜಾಫರ್ ಅಸ್ಸಾದಿ"

Leave a comment

Your email address will not be published.


*