ತಾರತಮ್ಯದ ಸಾಧನವಾಗಿ ಆಹಾರ

ತಾರತಮ್ಯದ ಸಾಧನವಾಗಿ ಆಹಾರ

| ಡಾ. ಸಿಲ್ವಿಯಾ ಕರ್ಪಗಂ

ತಾರತಮ್ಯ ಎನ್ನುವುದು ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ ಸರ್ವೇಸಾಮಾನ್ಯ ಸಂಗತಿಯಾಗಿದೆ ಹಾಗೂ ಕರ್ನಾಟಕವಂತೂ “ಹಿಜಾಬ್ ಬ್ಯಾನ್”, “ಆಜಾನ್ ಬ್ಯಾನ್”, “ಮಾವಿನ ಹಣ್ಣು ಮಾರಾಟ ಬ್ಯಾನ್”, “ಲವ್ ಬ್ಯಾನ್”, ಹಾಗೂ “ಪ್ರೆಯರ್ ಬ್ಯಾನ್” ನಂತಹ ಅನೇಕ ನಿಷೇದಗಳ ಆಗರವಾಗಿ ರಾಷ್ಟ್ರದಲ್ಲಿಯೇ ಉನ್ನತ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ, ತಾರತಮ್ಯ ಸ್ವಭಾವವನ್ನು ಪಸರಿಸುತ್ತಿರುವ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ತಮ್ಮ ಗುರುತನ್ನು ಬಹಿರಂಗಪಡಿಸಿದರೆ, ನಾವು ಅದಕ್ಕೆ ತಕ್ಕಂತೆ ಈ ಕೆಳಗಿನ ಯಾವುದಾದರೂ ಒಂದು ರೀತಿಯಲ್ಲಿ ಪ್ರತಿಕ್ರಿಯಿಸಬಹುದು.

1. ತಾರತಮ್ಯ ಸ್ವಭಾವವನ್ನು ನಿರ್ಲಕ್ಷಿಸುವುದು: ಇದೊಂಥರಾ ಸರ್ವೇ ಸಾಮಾನ್ಯವಾಗಿರುವ “ಆಸ್ಟ್ರಿಚ್” ಸ್ವಭಾವವಾಗಿದ್ದು, ಅತ್ಯಂತ ಕಳವಳಕಾರಿಯಾಗಿದೆ. ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಒಬ್ಬ ವಿದ್ಯಾರ್ಥಿಯನ್ನು ಆತನ ಅಥವಾ ಆಕೆಯ ಧರ್ಮ/ಜಾತಿ/ಲಿಂಗ/ಪೋಷಕರ ವೃತ್ತಿ/ವಾಸಿಸುವ ಪ್ರದೇಶ/ಲೈಂಗಿಕ ದೃಷ್ಟಿಕೋನ/ದೈಹಿಕ ಸಾಮಥ್ರ್ಯ ಇತ್ಯಾದಿಗಳನ್ನು ಪ್ರಸ್ತಾಪಿಸಿ ಅವಮಾನಿಸಬಹುದು. ಇಂತಹ ಒಂದು ಘಟನೆ ನಡೆಯುವಾಗ ಇತರೆ ವಿದ್ಯಾರ್ಥಿಗಳು, ಅಷ್ಟೇ ಯಾಕೆ, ಇತರೆ ಶಿಕ್ಷಕರೂ ಸಹ ಈ ಘಟನೆ ನಡೆದೇ ಇಲ್ಲವೇನೋ ಎಂಬಂತೆ ಭಾವಿಸಿ, ಎಂದಿನಂತೆ ತಮ್ಮ ಪಾಡಿಗೆ ತಾವಿದ್ದುಬಿಡಬಹುದು.

2. ಅವಮಾನಿಸುವವನೊಂದಿಗೆ ಕೈಜೋಡಿಸುವುದು: ಬಲಹೀನ ಸಮುದಾಯಗಳ ಪುರುಷ ಹಾಗೂ ಮಹಿಳೆಯರ (ವಿಶೇಷವಾಗಿ ಬಡವರ) ಮೇಲೆ ನಡೆಯುವ ಭೀಕರ ಗುಂಪು ಥಳಿತಗಳು, ಲೈಂಗಿಕ ದೌರ್ಜನ್ಯ, ನಿಂದನೆ ಹಾಗೂ ಹಿಂಸೆಯ ಪ್ರಕರಣಗಳು ಹೆಚ್ಚುತ್ತಿದ್ದು, ಕಳವಳಕಾರಿಯಾಗಿವೆ. ಈ ಘಟನೆ ಅಥವಾ ಕೃತ್ಯಗಳನ್ನು ಮೊಬೈಲುಗಳಲ್ಲಿ ವಿಡಿಯೋ ಚಿತ್ರೀಕರಣವನ್ನು ಮಾಡಿ, ಯಾವುದೋ ಸಮುದಾಯದ ಹಬ್ಬದಾಚರಣೆಯಂತೆ ಹಂಚಿಕೊಳ್ಳಲಾಗುತ್ತದೆ.

3. ತಾರತಮ್ಯವನ್ನು ತರ್ಕಬದ್ಧಗೊಳಿಸುವುದು: ಒಂದು ಸಮುದಾಯದ ವ್ಯಕ್ತಿಯೋರ್ವ ದೌರ್ಜನ್ಯ, ಹಿಂಸೆ, ನಿಂದನೆ ಇತ್ಯಾದಿಗಳನ್ನು ಎದುರಿಸುತ್ತಿದ್ದರೆ, ಸಾಮಾಜಿಕ ಜಾಲತಾಣ ಪ್ರಭಾವಿಗಳು, ಮಾಧ್ಯಮಗಳು, ರಾಜಕಾರಣಿಗಳು ಹಾಗೂ ಸಮಾಜದ “ಗೌರವಾನ್ವಿತ ವ್ಯಕ್ತಿಗಳು” ಸಹ ಸಂತ್ರಸ್ಥ ವ್ಯಕ್ತಿಯ ಸ್ವಭಾವ, ಸಂಸ್ಕøತಿ ಅಥವಾ ಆಕೆ/ಆತನ ಇರುವಿಕೆಯೇ ಎದುರಿಸುತ್ತಿರುವ ಹಿಂಸೆಗೆ ಕಾರಣ ಎಂದು ಹೇಳುವುದನ್ನು ಪದೇ ಪದೇ ಕೇಳಬಹುದು. ಉದಾಹರಣೆಗೆ, ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತರು ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲುವ ಮನುಷ್ಯರನ್ನು ಕೊಲ್ಲುವುದನ್ನು ಸಮರ್ಥಿಸಿಕೊಳ್ಳಬಹುದು. “ಅನ್ಯ ದೇವರುಗಳಿಗೆ” ಪ್ರಾರ್ಥನೆಯನ್ನು ಸಲ್ಲಿಸುವವರ ಮಸೀದಿ ಅಥವಾ ಚರ್ಚುಗಳನ್ನು ಒಡೆಯುವುದು ಅಥವಾ ವಿರೂಪಗೊಳಿಸುವುದು ಸ್ವೀಕಾರಾರ್ಹವಾಗುವುದನ್ನು ಕಾಣಬಹುದು.

4. ಸಂತ್ರಸ್ಥ ವ್ಯಕ್ತಿಯ ಪಾತ್ರವನ್ನು ತೆಗೆದುಕೊಳ್ಳುವುದು: ಇದು ಮತ್ತೊಬ್ಬರ ಮೇಲೆ ಹಿಂಸೆ, ದೌರ್ಜನ್ಯ ಹಾಗೂ ತಾರತಮ್ಯವನ್ನು ಎಸಗುತ್ತಿರುವ ವ್ಯಕ್ತಿಯೇ ತಾನೇ ಸಂತ್ರಸ್ಥ ಎಂದು ಬಿಂಬಿಸಿಕೊಳ್ಳುವ ಕುತೂಹಲಕಾರಿ ಸನ್ನಿವೇಷ. ಇದನ್ನು ಉತ್ಪ್ರೇಕ್ಷೆಯ ತರ್ಕ ಎಂದು ಕರೆಯಬಹುದಾದರೂ, ನಿಜದಲ್ಲಿ ಇದೊಂದು ಅತಾರ್ಕಿಕ ವಾದ. ಆದರೂ ಇದನ್ನು ನಂಬುವ, ನಿಜವೆಂದು ಪ್ರತಿಪಾದಿಸುವವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಉದಾಹರಣೆಗೆ, ಸರ್ಕಾರಿ ಪ್ರಾಯೋಜಿತ ತಾರತಮ್ಯ ಹಾಗೂ ಆಕ್ರಮಶೀಲತೆ ದೈನಂದಿನ ಶಾಲಾ ಕಾಲೇಜುಗಳಿಗೆ ಹೋಗುವ ಹಿಜಾಬ್‍ಧಾರಿ ವಿದ್ಯಾರ್ಥಿಗಳು ಶಾಲೆಗೆ/ಕಾಲೇಜಿಗೆ ಹೋಗದಂತೆ ತಡೆದಾಗ, ಬಹುಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಈ ತಾರತಮ್ಯವನ್ನು ತಾರ್ಕಿಕಗೊಳಿಸಿ, ಯಾವುದೋ ನೆಪಗಳನ್ನು ಒಡ್ಡಿ, ತಾವೇ ಇದರ ಸಂತ್ರಸ್ಥರು ಎಂಬುದನ್ನು ಬಿಂಬಿಸಿಕೊಳ್ಳಬಹುದು.

5. ತಾರತಮ್ಯದ ವಿರುದ್ಧ ನಿಲ್ಲುವುದು: ಈ ಆಯ್ಕೆ ಸಾಮಾಜಿಕ ನ್ಯಾಯ, ಸಂವಿಧಾನ ಹಾಗೂ ಮಾನವ ಹಕ್ಕುಗಳನ್ನು ತನ್ನ ಪರವಾಗಿ ಹೊಂದಿದೆ. ಇದು ತಾರತಮ್ಯವನ್ನು ತಾರತಮ್ಯವನ್ನಾಗಿ ಮಾತ್ರ ನೋಡಿ, ಅದನ್ನು ಎದುರಿಸುತ್ತದೆ. ಇದು ಸಂತ್ರಸ್ಥರಿಂದ ಚಾರಿತ್ರ್ಯ ಪ್ರಮಾಣ ಪತ್ರವನ್ನು ಬಯಸುವುದಿಲ್ಲ. ಅದೇ ರೀತಿ ಅನವಶ್ಯಕ ವಿಷಯಗಳನ್ನು ಚರ್ಚಿಸುತ್ತಾ ಕಾಲಹರಣ ಮಾಡುವುದಿಲ್ಲ.

ಈ ಹಿನ್ನೆಲೆಯಲ್ಲಿ, ಪ್ರಸ್ತುತ ಹಲಾಲ್ ಮತ್ತು ಜಟ್ಕಾ ವಿವಾದವನ್ನು ಅವಲೋಕಿಸೋಣ. ಮುಸ್ಲಿಂ ಸಮುದಾಯದಲ್ಲಿ ಹಲಾಲ್ ಆಚರಣೆ ಎಂದರೆ ತಾವು ಸೇವಿಸಲಿರುವ ಪ್ರಾಣಿಯ ಕುತ್ತಿಗೆಯ ರಕ್ತನಾಳವನ್ನು, ಕರೋಟಿಡ್ ಅಪಧಮನಿ ಹಾಗೂ ಶ್ವಾಸನಾಳವನ್ನು ಒಂದು ಮೊನಚಾದ ಆಯುಧದಿಂದ ಕೊಯ್ಯುವುದಾಗಿದೆ. ಜಟ್ಕಾ ವಿಧ ಎಂದರೆ, ಸೇವಿಸಲಿರುವ ಪ್ರಾಣಿಯ ಕುತ್ತಿಗೆಯನ್ನು ಒಂದೇ ಏಟಿಗೆ ತುಂಡರಿಸುವುದರ ಮೂಲಕ, ಅದನ್ನು ಕೊಲ್ಲುವುದಾಗಿದೆ. ಯುಗಾದಿ ಹಬ್ಬಕ್ಕೂ ಮುಂಚಿತವಾಗಿ, ದೇವರಿಗೆ ಮಾಂಸವನ್ನು ನೈವೇದ್ಯವನ್ನಾಗಿ ಅರ್ಪಿಸುವ ವರ್ಷತೊಡಕಿನ ದಿನದಂದು, ಹಲವು ಬಲಪಂಥೀಯ ಹಿಂದೂ ಸಂಘಟನೆಗಳು ಹಾಗೂ ರಾಜಕಾರಣಿಗಳು ಹಲಾಲ್ ಮಾಂಸವನ್ನು ಬಹಿಷ್ಕರಿಸಬೇಕೆಂದು ಕರೆ ನೀಡುತ್ತಾರೆ. ಹಲಾಲ್ ಮಾಂಸವನ್ನು ತಾರತಮ್ಯದ ಆಚರಣೆ, ಒಂದು ರೀತಿಯ ಆಹಾರ ಹೇರಿಕೆ ಹಾಗೂ ‘ಮುಗ್ದ ಹಿಂದೂಗಳ’ ಮೇಲಿನ ಸಂಚು ಎಂಬಂತೆ ಬಿಂಬಿಸಲಾಗಿತ್ತು.

ಪರ ವಿರೋಧಗಳನ್ನು ಆರಂಭಿಸುವ ಮೊದಲು, ನಾವು ನಿರ್ದಿಷ್ಟವಾಗಿ ಆಹಾರ ಹೇರಿಕೆ ಎಂದರೇನು ಎಂದು ತಿಳಿದುಕೊಳ್ಳೋಣ.

ಒಬ್ಬ ಹಿಂದೂ ಗೋಮಾಂಸವನ್ನು ಅಥವಾ ಒಬ್ಬ ಮುಸಲ್ಮಾನ ಹಂದಿ ಮಾಂಸವನ್ನು ತಿನ್ನುವುದು ತನ್ನ ಧರ್ಮದ ನಂಬಿಕೆಗೆ ವಿರುದ್ಧ ಎಂದು ಭಾವಿಸಿ, ಗೋಮಾಂಸ ಅಥವಾ ಹಂದಿಯನ್ನು ತಿನ್ನಲು ನಿರಾಕರಿಸಿದರೆ, ಈ ನಿರಾಕರಣೆಯು ಆಹಾರ ಹೇರಿಕೆಯಾಗುವುದಿಲ್ಲ. ಏಕೆಂದರೆ, ನಮ್ಮ ಸಂವಿಧಾನ ನಮ್ಮ ಆರೋಗ್ಯ, ನಂಬಿಕೆ ಹಾಗೂ ಧಾರ್ಮಿಕ ಆಚರಣೆಯ ವಿರುದ್ಧ ಇರುವ ಆಹಾರವನ್ನು ಸೇವಿಸುವುದನ್ನು ನಿರಾಕರಿಸುವ ಹಕ್ಕನ್ನು ಎಲ್ಲರಿಗೂ ನೀಡಿದೆ.

ಇದೇ ವ್ಯಕ್ತಿಯು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ತನ್ನ ನಂಬಿಕೆಗಳನ್ನು ಇತರರ ಮೇಲೆ ಬಲವಂತವಾಗಿ ಹೇರಿದರೆ ಅದನ್ನು ನಾವು ಆಹಾರ ಹೇರಿಕೆ ಎಂದು ಕರೆಯಬಹುದು. ಒಬ್ಬ ಧಾರ್ಮಿಕ ನಾಯಕ ಸರ್ಕಾರವು ಬಡ ಹಾಗೂ ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿ, ಅದನ್ನು ನಿಲ್ಲಿಸುವ ಪ್ರಯತ್ನಗಳನ್ನು ಮಾಡಿದರೆ, ಅದನ್ನು ಆಹಾರ ಹೇರಿಕೆ ಎಂದು ಕರೆಯಬಹುದು. ಅಧಿಕಾರದಲ್ಲಿರುವ “ಗೋರಕ್ಷಕರ” ಗುಂಪೊಂದು ಸಾವಿರಾರು ಜನರ ಜೀವನೋಪಾಯ ಹಾಗೂ ಆಹಾರ ಕ್ರಮವನ್ನು ಒಮ್ಮೆಲೆಗೆ ಕಸಿದುಕೊಳ್ಳುವ “ಗೋಹತ್ಯಾ ನಿಷೇಧ” ಕಾಯ್ದೆಯನ್ನು ತರುವುದೂ ಸಹ ಆಹಾರದ ಹೇರಿಕೆಯಾಗುತ್ತದೆ.
ಹೋಟೇಲುಗಳು, ರೆಸ್ಟೋರೆಂಟುಗಳು ಹಾಗೂ ಬೀದಿ ಬದಿ ವ್ಯಾಪರಗಳ ವಿಷಯಕ್ಕೆ ಬರುವುದಾದರೆ, ಭಾರತ ಮನಸ್ಸಿಗೆ ಮುದ ನೀಡುವ, ಜನರಿಗೆ ಉದರ-ಮಾನಸಿಕ-ಸಾಮಾಜಿಕ ಅಗತ್ಯತೆಗಳನ್ನು ಪೂರೈಸುವ ನೂರಾರು ಬಗೆಯ ಪಾಕ ವೈವಿಧ್ಯತೆಯನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ. ಒಂದು ಹೋಟೇಲ್ ಹೆಮ್ಮೆಯಿಂದ ತಾನು “ಸಸ್ಯಹಾರಿ” ಮಾತ್ರ ಎಂಬ ಬೋರ್ಡು ಹಾಕಿಕೊಂಡರೆ, ಅದು ತನ್ನ ಹಕ್ಕುಗಳ ಪರಿಧಿಯಲ್ಲಿದೆ ಎಂತಲೇ ಅರ್ಥ. ಅದೇ ರೀತಿ, ಬೀದಿಯ ಮತ್ತೊಂದು ಕಡೆ ಯಾವುದೋ ಒಂದು ಹೊಟೇಲು “ಹಲಾಲ್ ಆಹಾರ” ಎಂದು ಬೋರ್ಡು ಹಾಕಿಕೊಳ್ಳುವ ಹಕ್ಕನ್ನು ಹೊಂದಿರುತ್ತದೆ. ಇದನ್ನು ಆಹಾರ ಹೇರಿಕೆ ಎಂದು ಕರೆಯಲಾಗುವುದಿಲ್ಲ ಏಕೆಂದರೆ ಇಲ್ಲಿ ಗ್ರಾಹಕರಿಗೆ ತಮಗೆ ಇಷ್ಟವಾದುದನ್ನು ತಿನ್ನುವ ಹಾಗೂ ಮುಖ್ಯವಾಗಿ ಇಷ್ಟವಾಗದೆ ಇರುವುದನ್ನು ತಿನ್ನದಿರುವ ಆಯ್ಕೆಯನ್ನು ನೀಡಲಾಗಿದೆ. ಈ ಹೋಟೆಲುಗಳ ಮಾಲೀಕರು ಗ್ರಾಹಕರನ್ನು ಬಲವಂತವಾಗಿ ಎಳೆದುಕೊಂಡು ಹೋಗಿ, ಅವರ ಕೈಕಾಲುಗಳನ್ನು ಕಟ್ಟಿ, ತಮ್ಮ ಹೋಟೇಲಿನ ಆಹಾರವನ್ನು ಇವರ ಗಂಟಲುಗಳಿಗೆ ಒತ್ತಾಯಪೂರ್ವಕವಾಗಿ ತುರುಕಿದರೆ, ಅದು ನಿಸ್ಸಂಶಯವಾಗಿ ಆಹಾರದ ಹೇರಿಕೆಯಾಗುತ್ತದೆ. ಉದಾಹರಣೆಗೆ, ಒಬ್ಬ ಸಸ್ಯಹಾರಿಗೆ ಗೋಬಿ ಮಂಚೂರಿ ಎಂಬ ಹೆಸರಿನಲ್ಲಿ ಚಿಕನ್ ಮಂಚೂರಿ ನೀಡಿದರೆ, ಅಥವಾ ಹಲಾಲ್ ಆಚರಿಸುವ ಒಬ್ಬ ಮುಸಲ್ಮಾನನಿಗೆ ಸುಳ್ಳು ಹೇಳಿ ಹಲಾಲ್ ಮಾಡದ ಮಾಂಸವನ್ನು ನೀಡಿದರೆ ಅದು ಆಹಾರದ ಹೇರಿಕೆಯಾಗುತ್ತದೆ.

ಜನರಿಗೆ ತಮಗೆ ಇಷ್ಟವಾಗದ ಆಹಾರವನ್ನು ಸೇವಿಸದಿರುವ ಆಯ್ಕೆ ಇರುವಂತೆ ತಮಗೆ ಇಷ್ಟವಾದ ಆಹಾರವನ್ನು ಸೇವಿಸುವ ಹಕ್ಕೂ ಸಹ ಇದೆ. (ಕಾನೂನಿನಿಂದ ರಕ್ಷಿತವಾಗಿರುವ ಆಹಾರ ಅಥವಾ ಕಾನೂನುಬಾಹಿರ ಆಹಾರವನ್ನು ಹೊರತುಪಡಿಸಿ). ಉದಾಹರಣೆಗೆ, ಹಂದಿ ಮಾಂಸವನ್ನು ತನ್ನದಿರುವ ಸಮುದಾಯವೊಂದು, ತಾವು ಹಂದಿ ಮಾಂಸವನ್ನು ಸೇವಿಸದಿರುವುದರಿಂದ, ಇಡೀ ದೇಶವೇ ಹಂದಿ ಮಾಂಸವನ್ನು ಸೇವಿಸಬಾರದು ಎಂದು ಫತ್ವಾ ಹೊರಡಿಸಿದರೆ, ಅಥವಾ ಕೋಳಿಮಾಂಸವನ್ನು ಸೇವಿಸದಿರುವ ಸಮುದಾಯವು ತಮಗೆ ಕೋಳಿಮಾಂಸ ಇಷ್ಟವಾಗದ ಕಾರಣ ಇಡೀ ದೇಶದಲ್ಲಿ ಕೋಳಿಮಾಂಸವನ್ನು ನಿಷೇಧಿಸುವುದು ಆಹಾರದ ಹೇರಿಕೆಯಾಗುತ್ತದೆ ಹಾಗೂ ಬೇರೆ ಜನರು ಕಾನೂನಾತ್ಮಕ ಹಾಗೂ ಸಾಂಸ್ಕøತಿಕವಾಗಿ ಆಹಾರವನ್ನು ಸೇವಿಸಲು ಹೊಂದಿರುವ ಹಕ್ಕನ್ನು ನಿಷೇದಿಸುವುದು ಅಧಿಕಾರದ ದುರ್ಬಳಕೆಯಾಗುತ್ತದೆ.

ಹಲಾಲ್ ಮಾಂಸವನ್ನು ಇಷ್ಟಪಡದಿರುವವರ ಅಗತ್ಯಗಳನ್ನು ಪೂರೈಸಲು ಏಕೆ ಸಾಕಷ್ಟು ಜಟ್ಕಾ ಮಾಂಸದಂಗಡಿಗಳಿಲ್ಲ ಎಂಬ ಪ್ರಶ್ನೆಯನ್ನು ಕೇಳಬೇಕಾದ ಅವಶ್ಯಕತೆ ಇದೆ. ಭಾರತದಲ್ಲಿ ಮಾಂಸದೊಂದಿಗೆ, ವಿಶೇಷವಾಗಿ ಗೋಮಾಂಸ ಅಥವಾ ಬೀಫ್‍ನೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಅಸ್ಪøಶ್ಯ ಹಾಗೂ ಜಾತಿವಾದದ ಬಣ್ಣವನ್ನು ಬಳಿಯಲಾಗಿದೆ. ಬಹುಮುಖ್ಯವಾಗಿ, ಗೋಮಾಂಶವನ್ನು ಸೇವಿಸುವ ಹಾಗೂ ಆ ಕುರಿತು ತೊಡಗಿಕೊಂಡಿರುವವರೂ ಸಹ ಈ ರೀತಿಯ ಅಸ್ಪಶ್ಯ ಹಾಗೂ ಜಾತಿವಾದದಿಂದ ನೊಂದಿದ್ದಾರೆ. ಆಸಕ್ತಿದಾಯಕ ವಿಚಾರವೆಂದರೆ, ಗೋಮಾಂಸವನ್ನು ದೊಡ್ಡ ಮಟ್ಟದಲ್ಲಿ ರಫ್ತು ಮಾಡುತ್ತಿರುವ ಹಾಗೂ ರಫ್ತು ಮಾಡುವ ವ್ಯವಹಾರವನ್ನು ಹೊಂದಿರುವವರು ಮಾತ್ರ ಈ ಹಣೆಪಟ್ಟಿಗಳಿಂದ ಹೊರತಾಗಿದ್ದಾರೆ.

ಕಾಂಪ್ರಹೆನ್ಸಿವ್ ನ್ಯಾಷನಲ್ ನ್ಯೂಟ್ರಿಷನ್ ಸಮೀಕ್ಷೆ (2018-19) ರ ಪ್ರಕಾರ, ಕರ್ನಾಟಕದಲ್ಲಿ 3.26% ಮಕ್ಕಳು (6-23 ವರ್ಷ) ಮಾತ್ರ ಕನಿಷ್ಟ ಸ್ವೀಕಾರಾರ್ಹ ಆಹಾರವನ್ನು ಪಡೆದುಕೊಂಡಿದ್ದಾರೆ, 18.3% ಕನಿಷ್ಟ ಆಹಾರ ವೈವಿಧ್ಯತೆಯನ್ನು, 31.6% ಕನಿಷ್ಟ ಊಟದ ಆವರ್ತನವನ್ನು, ಹಾಗೂ 8.7% ಮಾತ್ರ ಹಿಂದಿನ ದಿನ ಕಬ್ಬಿಣಾಂಶ ಸಮೃದ್ಧ ಆಹಾರವನ್ನು ಸೇವಿಸಿದ್ದಾರೆ ಎಂದು ವರದಿಮಾಡಿಕೊಂಡಿರುತ್ತಾರೆ. ಕಬ್ಬಿಣಾಂಶ ಸಮೃದ್ಧ ಆಹಾರ ಯಾವುದೇ ಆಹಾರಯೋಗ್ಯ ಪ್ರಾಣಿಯ “ಲಿವರ್, ಕಿಡ್ನಿ, ಹೃದಯ” ಅಥವಾ ದೇಹದ ಇತರೆ ಭಾಗದ ಮಾಂಸ; ಕೋಳಿ, ಬಾತುಕೋಳಿ ಅಥವಾ ಮೀನು, ಒಣಮೀನು, ಅಥವಾ ಚಿಪ್ಪುಮೀನು ಇತ್ಯಾದಿಗಳನ್ನು ಹಿಂದಿನ ದಿನ ಸೇವಿಸುವುದನ್ನು ಸಿಎನ್‍ಎನ್‍ಎಸ್ ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. 21.9% ಮತ್ತು 19.1% ಮಾತ್ರ ಮಕ್ಕಳು (2-4 ವರ್ಷ) ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕ್ರಮವಾಗಿ ಮಾಂಸ ಅಥವಾ ಮೊಟ್ಟೆಯನ್ನು ಸೇವಿಸಿರುತ್ತಾರೆ ಎಂಬುದನ್ನು ಗಮನಿಸಿದೆ. ಕರ್ನಾಟಕದಲ್ಲಿ 32.5% ಮಕ್ಕಳು ಸ್ಟಂಟಿಂಗ್ ಅಂದರೆ ವಯಸ್ಸಿಗೆ ತಕ್ಕುದಲ್ಲದ ಎತ್ತರವನ್ನು ಹೊಂದಿದ್ದಾರೆ. ಅನೇಕ ಪೌಷ್ಟಿಕಾಂಶ ಕೊರತೆಗಳು ಮಗುವಿನ ಆರೋಗ್ಯದ ಮೇಲೆ ಕ್ಷಣಿಕ ಹಾಗೂ ಧೀರ್ಘಕಾಲಿಕ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳು, ಉಸಿರಾಟ, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು, ಮಧುಮೇಹ, ಹೈಪರ್‍ಟೆನ್ಷನ್ ಹಾಗೂ ಬೆಳೆಯುತ್ತಾ ಹೋದಂತೆ ಹೃದಯಸಂಬಂಧಿ ಕಾಯಿಲೆಗಳನ್ನು ಉಂಟುಮಾಡುತ್ತವೆ.

ಈ ಪೌಷ್ಟಿಕಾಂಶ ಸೂಚಕಗಳನ್ನು ಗಮನಿಸಿ ಹೇಳುವುದಾದರೆ, ಈ ಕಾಯಿಲೆಗಳನ್ನು ಪ್ರಾಣಿ ಜನ್ಯ (ಎಎಸ್‍ಎಫ್) ಆಹಾರಗಳನ್ನು ಅಂದರೆ ಹಂದಿಮಾಂಸ, ಬೀಫ್, ಮೊಟ್ಟೆ, ಕೋಳಿಮಾಂಸ, ಮೀನು, ಹಾಲು ಹಾಗೂ ಮುಂತಾದ ಡೇರಿ ಉತ್ಪನ್ನಗಳ ಸೇವನೆಯನ್ನು ಹೆಚ್ಚಿಸುವುದರ (ಕಡಿಮೆಮಡುವುದಲ್ಲ) ಮೂಲಕ ತಡೆಗಟ್ಟಬಹುದು. (ಹೌದು, ಇಲ್ಲಿ ಹಾಲು ಹಾಗೂ ಡೇರಿ ಉತ್ಪನ್ನಗಳು ಪ್ರಾಣಿಜನ್ಯವಾದ ಕಾರಣ, ಅವುಗಳನ್ನು ಎಎಸ್‍ಎಫ್ ಎಂದು ಪರಿಗಣಿಸಬಹುದು). ಇವುಗಳನ್ನು ಮನಗಂಡರೆ, ಒಂದೇ ಒಂದು ಚೂರು ಕಾಳಜಿಯನ್ನು ಹೊಂದಿರುವ ಯಾವುದೇ ನಾಗರೀಕನೂ ಸಹ ಹಲಾಲೋ ಅಥವಾ ಜಟ್ಕಾವೋ, ಮಾಂಸ ಸೇವಿಸುವ ಜನರಿಗೆ ಕಡಿಮೆ ಬೆಲೆಯಲ್ಲಿ ಸಿಗುವ ಹೆಚ್ಚು ಮಾಂಸದಂಗಡಿಗಳನ್ನು ತೆರೆಯಲು ಬೇಡಿಕೆ ಇಡುತ್ತಾನೆ ಹಾಗೂ ನಮ್ಮ ದೇಶದಲ್ಲಿನ ಪೌಷ್ಟಿಕಾಂಶ ಅಗತ್ಯತೆಗಳು ಪೂರ್ಣವಾಗುವವರೆಗೂ, ಮಾಂಸವನ್ನು ಇತರೆ ದೇಶಗಳಿಗೆ ರಫ್ತು ಮಾಡುವುದನ್ನು ನಿಷೇದಿಸಲು ಕರೆ ನೀಡುತ್ತಾನೆ. ಜಾನುವಾರುಗಳನ್ನು ಹೊಂದಿರುವ ರೈತರ ಜೀವನೋಪಾಯವನ್ನು ಹಾಳುಮಾಡುವಂತಹ ಹಾಗೂ ಎಎಸ್‍ಎಫ್ ಅನ್ನು ಬಡವರಿಗೆ ದಕ್ಕದಂತೆ ಮಾಡುತ್ತಿರುವ ಕಾರ್ಪೊರೇಟ್‍ಗಳ ವಿರುದ್ಧ ದ್ವನಿಯೆತ್ತುತ್ತಾನೆ. ಅದೇ ರೀತಿ, ಇದು ದೇಶದ ಮೂಲೆ ಮೂಲೆಗೆ ತಲುಪಲು ಮಾಂಸವನ್ನು ಶೇಖರಿಸುವುದರ ಹಾಗೂ ಸಾಗಿಸುವುದರ ಕುರಿತು ಆಧುನಿಕ ಅವಿಷ್ಕಾರಗಳಿಗೆ ಇಂಬು ನೀಡುವ ಸಂಶೋಧನೆಗೆ ಹೂಡಿಕೆ ಮಾಡುವಂತೆ ಕರೆನೀಡುತ್ತಾನೆ. ಮೊಟ್ಟೆ ಹಾಗೂ ಮಾಂಸದ ಕುರಿತು ತಪ್ಪು ಮಾಹಿತಿಯನ್ನು ಹರಡುವ ಅಕ್ಷಯಪಾತ್ರೆ ಯಂತಹ ಸಂಸ್ಥೆಗಳ ವಿರುದ್ಧ ಧ್ವನಿಯೆತ್ತುತ್ತಾನೆ ಹಾಗೂ ಮಾಂಸದ ಹಾಗೂ ಮಾಂಸ ತಿನ್ನುವವರ ಕುರಿತು ಕಳಂಕವನ್ನು ಹೊರಿಸುವ ಅತಾರ್ಕಿಕತೆಯ ವಿರುದ್ಧ ಮಾತನಾಡಿ, ಈ ಎಎಸ್‍ಎಫ್‍ನಲ್ಲಿರುವ ಸಮೃದ್ಧ ಪೌಷ್ಟಿಕಾಂಶದ ಕುರಿತು ಜಾಗೃತಿ (ವಾಟ್ಸಾಪ್ ಮುಖಾಂತರ) ಮೂಡಿಸುತ್ತಾನೆ.

ಸಮುದಾಯದ ಹಂತದಲ್ಲಿ, ವಿವಿಧ ಧಾರ್ಮಿಕ ಪಂಗಡಗಳ ಜನರು ತಮ್ಮ ನಡುವೆ ವಿವಿಧ ಜೈವಿಕ, ಸಾಮಾಜಿಕ ಹಾಗೂ ಆರ್ಥಿಕ ಸಂಬಂಧಗಳನ್ನು ಹೊಂದಿರುತ್ತಾರೆ. ಇವುಗಳು ಒಮ್ಮೊಮ್ಮೆ ರಾಜಕೀಯ ಅಥವಾ ಸೈದ್ಧಾಂತಿಕ ಕಾರ್ಯಸೂಚಿಗಳ ಕಾರಣಗಳಿಂದ ಹಾಳಾಗುತ್ತವೆ. ಬಿಜೆಪಿ ಸರ್ಕಾರವು ಕರ್ನಾಟಕ ಜಾನುವಾರುಗಳ ಸಂರಕ್ಷಣೆ ಮತ್ತು ಹತ್ಯೆ ತಡೆಗಟ್ಟುವಿಕೆ ಕಾಯ್ದೆ, 2020 ಅನ್ನು ಬಹಳ ಅವಸರದಿಂದ ಹಾಗೂ ಪೂರ್ವಯೋಜನೆಯಿಲ್ಲದೆ ಜಾರಿಗೆ ತಂದಿತು. ಇದು ಧಾರ್ಮಿಕ ಗಡಿಗಳ ಹೊರತಾಗಿಯೂ ಸಮಾಜದ ಮೇಲೆ ಗಂಭೀರ ಆರ್ಥಿಕ ಹಾಗೂ ಪೌಷ್ಟಿಕಾಂಶಿಕ ಪರಿಣಾಮಗಳನ್ನು ಬೀರಿದೆ.

ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಅತಾರ್ಕಿಕ ಹಾಗೂ ಪ್ರತಿಗಾಮಿತ್ವ ಕರೆಗಳು ಇದೇ ರೀತಿಯ ಆರ್ಥಿಕ ಹಾಗೂ ಪೌಷ್ಟಿಕಾಂಶಿಕ ದುಷ್ಪರಿಣಾಮಗಳನ್ನು, ವಿಶೇಷವಾಗಿ ರಾಜ್ಯದ ಶಕ್ತಿಹೀನ ಸಮುದಾಯಗಳ ಮೇಲೆ ಬೀರುತ್ತದೆ.

ಬದಿಯಲ್ಲಿ ಸುಮ್ಮನೆ ನಿಂತು ನೋಡುತ್ತಿರುವ ಜನರಿಗೆ ನಿರ್ಲಕ್ಷಿಸುವ, ಗುಂಪನ್ನು ಸೇರಿಕೊಳ್ಳುವ, ಈ ಬಹಿಷ್ಕಾರಗಳನ್ನು ತಾರ್ಕಿಕಗೊಳಿಸುವ ಅಥವಾ ನೀವೆ ಇದರ ಸಂತ್ರಸ್ಥರು ಎಂದು ಬಿಂಬಿಸಿಕೊಳ್ಳುವ ಆಯ್ಕೆ ಇದೆ. ಪರ್ಯಾಯವಾಗಿ ನೀವು ಈ ತಾರತಮ್ಯದ ವಿರುದ್ಧ ದನಿಯೆತ್ತಬಹುದು. ಗಾದೆ ಮಾತಿನಂತೆ “ಸಂವಿಧಾನ ನಿಮ್ಮ ಪರವಾಗಿದ್ದರೆ, ಸಾಮಾಜಿಕ ನ್ಯಾಯ ನಿಮ್ಮಿಂದ ಹೆಚ್ಚು ದೂರವಿರಲು ಸಾಧ್ಯವಿಲ್ಲ. ಈಗಲೂ ಇದು ನಿಮ್ಮ ಆಯ್ಕೆ.
___________________________________________________
ಲೇಖಕರು ಸಾರ್ವಜನಿಕ ಆರೋಗ್ಯ ವೈದ್ಯರು ಮತ್ತು ಆಹಾರ ಹಕ್ಕು ಹಾಗೂ ಆರೋಗ್ಯ ಹಕ್ಕು ಚಳುವಳಿಯ ಭಾಗವಾಗಿರುವ ಸಂಶೋಧಕರು

ಕನ್ನಡ ಅನುವಾದ : ಅಜಯ್ ರಾಜ್