ಮಕ್ಕಳ ಉಲ್ಲಂಘಿಸಲಾಗದಂತಹ ಪೌಷ್ಟಿಕಾಂಶದ ಹಕ್ಕುಗಳನ್ನು ಯಾರು ಎತ್ತಿಹಿಡಿಯುತ್ತಾರೆ?
ಅಡ್ವೊಕೇಟ್ ಜೆರಾಲ್ಡ್ ಡಿಸೋಜ & ಡಾ. ಸಿಲ್ವಿಯಾ ಕರ್ಪಗಂ
೨೦೧೩ ರಿಂದಲೇ ಅಸ್ಥಿತ್ವದಲ್ಲಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಯು ಆಹಾರ ಭದ್ರತೆಯೆಡೆಗಿನ ಕಲ್ಯಾಣ ವಿಧಾನದಿಂದ ಹಕ್ಕು ಆಧಾರಿತ ವಿಧಾನಕ್ಕೆ ಗುರುತರ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅದಾಗ್ಯೂ, ದೇಶದ ಪೌಷ್ಟಿಕಾಂಶ ಸೂಚಕಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಏಕೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು ದೇಶದಲ್ಲಿನ ಅಪೌಷ್ಟಿಕಾಂಶತೆ ಸಮಸ್ಯೆಗಳನ್ನು ನೀಗಿಸಲು ಸಾಧ್ಯವಾಗಲಿಲ್ಲ, ಇದರಲ್ಲಿರುವ ಲೋಪಗಳೇನು? ಹೇಗೆ ಈ ಸಮಸ್ಯೆಗಳನ್ನು ಪರಿಹರಿಸಬಹುದು ಎನ್ನುವಂತಹ ಹಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ದುರಾದೃಷ್ಟಕರವೆಂಬಂತೆ, ಈ ಕಾಯ್ದೆಯು ಜನರಿಗೆ ಅನಾರೋಗ್ಯಮುಕ್ತ ಹಾಗೂ ಅಪೌಷ್ಟಿಕಾಂಶ ಮುಕ್ತ ಜೀವನವನ್ನು ನೀಡುವ ಬದಲು, ಅತ್ಯಂತ ಕನಿಷ್ಟದಲ್ಲಿ ಬದುಕುವ ಹಕ್ಕಿಗೆ ಮಾತ್ರ ಸೀಮಿತವಾಗಿದೆ. ಕೇವಲ ಆಹಾರದ ಹಕ್ಕು ಮಾತ್ರವಲ್ಲದೆ, ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಪೌಷ್ಟಿಕಾಂಶತೆಯ ಹಕ್ಕು ಎಲ್ಲಾ ನೀತಿ-ನಿರ್ಧಾರಗಳು ಹಾಗೂ ಮಧ್ಯಸ್ಥಿಕೆಗಳ ಪ್ರಧಾನ ವಿಷಯವಾಗಬೇಕು.
ಕರ್ನಾಟಕದ ಮಕ್ಕಳಲ್ಲಿ ವಿನಾಶಕಾರಿ ಅಪೌಷ್ಟಿಕತೆ
ಕರ್ನಾಟಕದ ಪ್ರಸ್ತುತ ಪೌಷ್ಟಿಕಾಂಶ ಸೂಚಕಗಳು ಅತ್ಯಂತ ಕೆಟ್ಟ ಚಿತ್ರಣವನ್ನು ನೀಡುತ್ತಿವೆ ಎಂಬುದನ್ನು ಹೇಳಲು ಹಾವರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬೇಕಿಲ್ಲ. ಕಾಂಪ್ರಹೆನ್ಸಿವ್ ನ್ಯಾಷನಲ್ ನ್ಯೂಟ್ರಿಷನ್ ಸಮೀಕ್ಷೆ ಸಿಎನ್‌ಎಸ್‌ಎಸ್, ೨೦೧೮-೧೯)೧ ರ ಪ್ರಕಾರ ಕರ್ನಾಟಕದಲ್ಲಿ ೬-೨೩ ವಯೋಮಾನದ ಮಕ್ಕಳಲ್ಲಿ ಕೇವಲ ಶೇ. ೩.೬% ರಷ್ಟು ಮಕ್ಕಳು ಮಾತ್ರ ಕನಿಷ್ಟ ಒಪ್ಪಿತ ಆಹಾರವನ್ನು ಸೇವಿಸಿದ್ದಾರೆ. ೧೮.೩% ಮಕ್ಕಳು ಕನಿಷ್ಟ ವೈವಿಧ್ಯಮಯ ಆಹಾರವನ್ನು ಸೇವಿಸಿದ್ದಾರೆ, ೩೧.೬% ಜನರು ಕನಿಷ್ಟ ಊಟದ ಆವರ್ತನವನ್ನು ಮತ್ತು ಕೇವಲ ೮.೭% ಮಕ್ಕಳು ಮಾತ್ರ ಕಬ್ಬಿಣಾಂಶಯುಕ್ತ ಆಹಾರವನ್ನು ಸೇವಿಸಿದ್ದಾರೆ.
ಆಹಾರ ಸೇವನೆಯ ಮಾನದಂಡಗಳ ಪ್ರಕಾರ, ಕರ್ನಾಟಕದಲ್ಲಿನ ೨-೪ ವರ್ಷದೊಳಗಿನ ಮಕ್ಕಳಲ್ಲಿ, ಕೇರಳದ ೬೯% ಗೆ ಹೋಲಿಸಿದರೆ, ಕೇವಲ ೨೧.೯% ಮಕ್ಕಳು ಮಾತ್ರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಾಂಸಾಹಾರವನ್ನು ಸೇವಿಸಿದ್ದಾರೆ. ೫೭.೭% ಮಕ್ಕಳು ಡೈರಿ ಉತ್ಪನ್ನಗಳನ್ನು ಹಾಗೂ ೧೯.೧% ಮಕ್ಕಳು ಮೊಟ್ಟೆಯನ್ನು ಸೇವಿಸಿದ್ದಾರೆ. ೫-೯ ವರ್ಷದೊಳಗಿನ ಮಕ್ಕಳಲ್ಲಿ, ೮೪% ಮಕ್ಕಳು ಕರ್ನಾಟಕದಲ್ಲಿ ಹಾಲು ಅಥವಾ ಮೊಸರನ್ನು ಸೇವಿಸಿದ್ದಾರೆ ಹಾಗೂ ಇದಕ್ಕೆ ಕಾರಣ ಕ್ಷೀರಭಾಗ್ಯ ಯೋಜನೆಯಾಗಿದೆ. ೧-೪, ೫-೯ ಮತ್ತು ೧೦-೧೯ ವರ್ಷದೊಳಗಿನವರಲ್ಲಿ ಕಬ್ಬಿಣಾಂಶದ ಕೊರತೆಯು ಕ್ರಮವಾಗಿ ೫೦.೧%, ೩೧.೨% ಹಾಗೂ ೩೦.೫% ರಷ್ಟಿದೆ. ಪರಿಶಿಷ್ಟ ಜಾತಿಗಳ ಸಮುದಾಯಗಳ ೧೦-೧೯ ವರ್ಷದೊಳಗಿನ ಮಕ್ಕಳಲ್ಲಿ ಫೋಲೆಟ್‌ನ ಕೊರತೆಯು ೩೦.೧%, ಪರಿಶಿಷ್ಟ ಪಂಗಡ ಸಮುದಾಯಗಳ ಮಕ್ಕಳಲ್ಲಿ ೨೯.೯%. ಇತರೆ ಹಿಂದುಳಿದ ಸಮುದಾಯಗಳ (ಒಬಿಸಿ) ಮಕ್ಕಳಲ್ಲಿ ೩೩.೭% ಹಾಗೂ ಇತರರಲ್ಲಿ ೨೭.೬% ರಷ್ಟಿದೆ. ಕಡು ಬಡವರಲ್ಲಿ ಇದರ ಪ್ರಮಾಣ ೨೮.೨% ಇದ್ದು, ೪೨.೭% ಶ್ರೀಮಂತ ಗುಂಪುಗಳಲ್ಲಿದೆ.
೧-೪ ವಯೋಮಾನದ ಮಕ್ಕಳಲ್ಲಿ, ಕರ್ನಾಟಕವು ೧೫.೪% ರಷ್ಟು ಬಿ೧೨ ಪೋಷಕಾಂಶದ ಕೊರತೆ ಹಾಗೂ ೩೬% ಫೋಲೆಟ್ ಕೊರತೆಯನ್ನು ಹೊಂದಿದೆ. ೫-೯ ವಯೋಮಾನದ ಮಕ್ಕಳಲ್ಲಿ ಕ್ರಮವಾಗಿ ಇದರ ಇವುಗಳ ಪ್ರಮಾಣವು ೧೫.೪% ಹಾಗೂ ೫೦.೫% ರಷ್ಟಿದೆ. ೧೦-೧೯ ವಯೋಮಾನದವರಲ್ಲಿ ಇವುಗಳ ಪ್ರಮಾಣವು ಕ್ರಮವಾಗಿ ೪೫.೫% ಹಾಗೂ ೭೦.೪% ರಷ್ಟಿದೆ.
೭,೨೫೯ ಮಕ್ಕಳು ಗಂಭೀರ, ತೀವ್ರ ತೆರನಾದ ಅಪೌಷ್ಟಿಕತೆಗೆ ತುತ್ತಾಗಲಿದ್ದಾರೆ ಹಾಗೂ ಈ ಕುರಿತು ಪರೀಕ್ಷಿಸಿದ ೫೩.೮೨ ಲಕ್ಷ ಮಕ್ಕಳಲ್ಲಿ ೧,೦೫,೧೫೦ ಕ್ಕೂ ಹೆಚ್ಚು ಮಕ್ಕಳು ಮಧ್ಯಮ ತೀವ್ರ ಅಪೌಷ್ಟಿಕತೆಗೆ ತುತ್ತಾಗಲಿದ್ದಾರೆ ಎಂದು ರಾಜ್ಯದ ಆರೋಗ್ಯ ನಂದನ ಕಾರ್ಯಕ್ರಮವು ಅಂಕಿ ಅಂಶ ಗಳನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಪ್ರಸ್ತುತ ೧.೫ ಕೋಟಿ ಮಕ್ಕಳಿದ್ದಾರೆ.
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ,
೫ ವರ್ಷಕ್ಕಿಂತ ಕಡಿಮೆ ವಯೋಮಾನದ ಬೆಳವಣಿಗೆ ಕುಂಠಿತ ಮಕ್ಕಳ ಪ್ರಮಾಣ – ೩೫.೪%
೫ ವರ್ಷಕ್ಕಿಂತ ಕಡಿಮೆ ವಯೋಮಾನದ ನಿಗಧಿತ ತೂಕಕ್ಕಿಂತ ಕಡಿಮೆ ತೂಕ ಹೊಂದಿರುವ ಮಕ್ಕಳ ಪ್ರಮಾಣ – ೩೨.೯%
ರಕ್ತಹೀನತೆ (ಅನೀಮಿಯ) ದಿಂದ ಬಳಲುತ್ತಿರುವ ೬-೫೯ ತಿಂಗಳುಗಳ ವಯೋಮಾನದ ಮಕ್ಕಳ ಪ್ರಮಾಣ – ೬೫.೫%
ಮೂಲ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ರಾಷ್ಟಿçÃಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-೫
ಅಪೌಷ್ಟಿಕತೆಯ ಅಲ್ಪಾವಧಿ ಹಾಗೂ ಧೀರ್ಘಾವಧಿ ಪರಿಣಾಮಗಳು
ಅಪೌಷ್ಟಿಕತೆ ಎಂಬುದು ಸವಿಸ್ತಾರ ಹಾಗೂ ಎಲ್ಲವನ್ನೂ ಒಳಗೊಳ್ಳುವ ಪರಿಭಾಷೆಯಾಗಿದ್ದು, ಮಗುವಿನಲ್ಲಿ ನಿರ್ದಿಷ್ಟವಾಗಿ ಏನು ನಡೆಯುತ್ತಿದೆ ಎಂಬುದರ ಸಂಪೂರ್ಣ ಚಿತ್ರಣವನ್ನು ಇದು ನೀಡುವುದಿಲ್ಲ. ಹಸಿವು ತೀವ್ರವಾಗಿದ್ದು, ಸಾಂಧರ್ಭಿಕವಾಗಿದ್ದರೆ, ಮಗು ನಿರಂತರವಾಗಿ ಅಳಬಹುದು, ರೇಗಬಹುದು ಅಥವಾ ವಿಚಿತ್ರವಾಗಿ ಆಡಬಹುದು. ಬಹುತೇಕ ಕುಟುಂಬಗಳಲ್ಲಿ ಮಕ್ಕಳು ಹೀಗೆ ಹಸಿವಿನಿಂದ ವರ್ತಿಸಿದರೆ, ಅವಕ್ಕೆ ಊಟ ನೀಡಿದ ನಂತರ ಹೊಟ್ಟೆ ತುಂಬಿದ ಮೇಲೆ ಮತ್ತೆ ಹಸಿವಾಗುವವರೆಗೂ ಸಾಮಾನ್ಯ ಸ್ಥಿತಿಗೆ ಮರಳಬಹುದು. ಅದೇ ಮಗುವಿಗೆ, ಹೊಟ್ಟೆ ತುಂಬ ಊಟ ದೊರಕದಿದ್ದಾಗ, ಅದು ಮತ್ತೆ ಮತ್ತೆ ಹಸಿವಿನ ಕಾರಣ ಅತ್ತು, ವಿಚಿತ್ರವಾಗಿ ಆಡಬಹುದು. ಅದಾಗ್ಯೂ, ಈ ಹಸಿವು ಎನ್ನುವುದು ನಿರಂತರವಾಗಿದ್ದರೆ, ಮಗುವಿನಲ್ಲಿ ಹಲವು ಬದಲಾವಣೆಗಳು ಆಗುವುದನ್ನು ನಾವು ಕಾಣಬಹುದು. ಹೀಗೆ ಆದಾಗ, ಆ ಮಗುವು ಎಂದಿಗಿಂತ ಕಡಿಮೆ ಕ್ರಿಯಾಶೀಲವಾಗಬಹುದು. ದೈಹಿಕ ಕಾರ್ಯಗಳು ಕಡಿಮೆ ಮಾಡಬಹುದು, ಮಗುವಿಗೆ ಚಳಿಯಾಗಿ, ಅದು ಬಹಳಷ್ಟು ಕಾಲ ಮೂಲೆಗಳಲ್ಲಿ ಇರಲು ಬಯಸಬಹುದು. ಹಸಿವಿನ ಜೊತೆಯಲ್ಲಿ ಮಗುವಿನ ದೇಹದಲ್ಲಿ ಸಾಕಷ್ಟು ನೀರಿನ ಪ್ರಮಾಣ ಇಲ್ಲದೆ ನಿರ್ಜಲೀಕರಣಗೊಂಡಾಗ, ಮಗುವಿನ ಚರ್ಮವು ಸೆಟೆದುಕೊಳ್ಳಬಹುದು. ಇದು ಇದೇ ರೀತಿ ಮುಂದುವರೆಯುತ್ತಾ ಹೋದಂತೆ, ಒಂದಷ್ಟು ಸಮಯದ ನಂತರ ಮಗುವಿನ ಮುಖ ಕೋತಿಯ ಮುಖಂತೆ ಅಥವಾ ಮರಾಸ್ಮಿಕ್ ಗುಣಲಕ್ಷಣಗಳು ಮಗುವಿನಲ್ಲಿ ಕಂಡುಬರಬಹುದು. ಇದು ದೈಹಿಕ ಹಾಗೂ ಬಹಿರಂಗ ಗುಣಲಕ್ಷಣಗಳಾದರೆ, ಆರೋಗ್ಯ ಕಾರ್ಯಕರ್ತರು ಗುರುತಿಸುವಂತಹ ಮತ್ತಷ್ಟು ಬದಲಾವಣೆಗಳು ಮಗುವಿನಲ್ಲಿ ಕಂಡು ಬರುತ್ತವೆ. ಕಣ್ಣಿನಲ್ಲಿ ಹಳದಿ ಮಚ್ಚೆಗಳು, ಇರುಳು ಕುರುಡುತನ, ಒಣ ಚರ್ಮ ಅಥವಾ ಫ್ರಯ್ನೊಡೆರ್ಮ ಮುಂತಾವುಗಳು ಪೋಷಕಾಂಶ ಎ ಕೊರತೆಯ ಪ್ರಾಥಮಿಕ ಗುಣಲಕ್ಷಣಗಳಾಗಿವೆ. ಸಂಜೆಯಾಗುತ್ತಿದ್ದಂತೆ ಮಕ್ಕಳು ಎಡವುವ ಅಥವಾ ವಸ್ತುಗಳಿಗೆ ಡಿಕ್ಕಿ ಹೊಡೆಯಬಹುದಾಂತಹ ಇರುಳು ಕುರುಡುತನವೂ ಸಹ ಆವರಿಸಬಹುದು. ಒಣ ಚರ್ಮ ಸ್ಥಿತಿಯು ದೇಹದಲ್ಲಿ ಕೊಬ್ಬಿನಾಂಶ ಕಡಿಮೆ ಆಗುವುದರಿಂದ ಉಂಟಾಗುವ ಸ್ಥಿತಿಯಾಗಿದೆ. ಮಗುವಿನ ಮೂಳೆಗಳು ಬಿಲ್ಲಿನ ಆಕಾರಕ್ಕೆ ತಿರುಗಬಹುದು ಅಥವಾ ರಿಕೆಟ್ಸ್ ಖಾಯಿಲೆಯಂತಾಗಬಹುದಲ್ಲದೆ. ಕ್ರಮೇಣ ಕೂಲು ಉದುರಿ, ನಾಲಿಗೆ ಕೆಂಪಾಗಿ, ಬಾಯಿಯ ಮೂಲೆಗಳಲ್ಲಿ ಅಲ್ಸರ್ ಹುಣ್ಣುಗಳಾಗಬಹುದು. ಇದರ ಹೊರತಾಗಿ ಮಗುವು ಉಸಿರಾಟ ಹಾಗೂ ಹೊಟ್ಟೆಗೆ ಸಂಬAಧಿಸಿದ ಗಂಭೀರ ಖಾಯಿಲೆಗಳಿಗೆ ತುತ್ತಾಗಬಹುದು. ಆರೋಗ್ಯವಾಗಿ, ದಷ್ಟಪುಷ್ಟವಾಗಿ ಬೆಳೆದ ಮಗುವೊಂಉ ವರ್ಷಕ್ಕೆ ೨-೩ ಬಾರಿ ಸಾಧಾರಣ ಖಾಯಿಲೆಯನ್ನು ಅನುಭವಿಸಿದರೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವು ವರ್ಷಕ್ಕೆ ೭-೮ ಬಾರಿ ಖಾಯಿಲೆಗೆ ತುತ್ತಾಗುತ್ತೆಯಲ್ಲದೆ, ಈ ಖಾಯಿಲೆಯ ತೀವ್ರತೆ ಮತ್ತು ಅವಧಿಯೂ ಸಹ ಹೆಚ್ಚಿರುತ್ತದೆ. ಇದು ಮಗುವನ್ನು ಸೋಂಕಿನ ಕೆಟ್ಟ ಪರಿಣಾಮಕ್ಕೆ ಈಡುಮಾಡಿ, ಅಪೌಷ್ಟಿಕತೆಯು ಮತ್ತಷ್ಟು ಗಂಭೀರವಾಗುವ ಸಂಭವಗಳು ಹೆಚ್ಚಿರುತ್ತದೆ. ಮಗುವಿಗೆ ಇದರಿಂದ ಹೊರಗೆ ಬರುವುದು ಕಷ್ಡವಾಗುತ್ತದೆ. ಈ ಪೌಷ್ಟಿಕತೆಗೆ ಪ್ರತಿಕ್ರಿಯೆ ಎನ್ನುವಂತೆ, ಮಗುವಿನ ಕ್ರಿಯಾಶೀಲತೆ ಕುಂದಿಹೋಗಿ, ಅದು ಹಾಸಿಗೆಯನ್ನು ಹಿಡಿಯಬಹುದು ಹಾಗೂ ಕ್ರಮೇಣ ಸಾಯಲೂ ಬಹುದು. ಅವರು ಈ ಜಗತ್ತಿಗೆ ಬಂದಷ್ಟೇ ಮೌನವಾಗಿ ಸಾರ್ವಜನಿಕ ನೆನಪುಗಳಿಂದಲೂ ಸಹ ಮರೆಯಾಗಿ ಹೋಗುತ್ತಾರೆ. ಕೊನೆಗೆ ಅವರು ಕೇವಲ ಅಂಕಿಅAಶಗಳಾಗಿ ಉಳಿಯುತ್ತಾರೆ. ಒಮ್ಮೊಮ್ಮೆ ಅದೂ ಸಹ ದಾಖಲಾಗುವುದಿಲ್ಲ.
ಇದರ ಹೊರತಾಗಿ, ಧೀರ್ಘಕಾಲದ ಅಪೌಷ್ಟಿಕತೆ ಧೀರ್ಘಕಾಲದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದರಿಂದಾಗಿ ಬಾಲ್ಯ ಮತ್ತು ಹರೆಯಲ್ಲಿ ಮಾನಸಿಕ ಹಾಗೂ ವರ್ತನೆಯ ದುಷ್ಪರಿಣಾಮಗಳು ಉಂಟಾಗಬಹುದು. ಇದಕ್ಕೂ ಮುಂಚಿತವಾಗಿ, ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಹೆಚ್ಚು ಆತಂಕ, ನಾಚಿಕೆ ಸ್ವಭಾವ, ಕಡಿಮೆ ಭೌದ್ಧಿಕ ಕುತೂಹಲ, ಹೆಚ್ಚು ಅನುಮಾನಿಸುವಿಕೆ, ಹಾಗೂ ಕಡಿಮೆ ಪ್ರಮಾಣದ ದಕ್ಷತೆಯಂತಹ ಗುಣಲಕ್ಷಣಗಳನ್ನು ಪ್ರದರ್ಶಿಸಬಹುದು.೨ ಪೌಷ್ಟಿಕಾಂಶ ಕೊರತೆಯು ನೀಗಿದ ನಂತರವೂ ಸಹ ಇವರಲ್ಲಿ ಏಕಾಗ್ರತೆಯ ಕೊರತೆ ಮುಂದುವರೆಯಬಹುದು.೩ ಬಾಲ್ಯದಲ್ಲಿ ಪೌಷ್ಟಿಕಾಂಶ ಕೊರತೆಯನ್ನು ಅನುಭವಿಸಿದ ಹರೆಯದ ಮಕ್ಕಳ ಸ್ವಭಾವದಲ್ಲಿ ಸಮಸ್ಯೆಗಳು ಉಂಟಾಗಬಹುದು.
ಭಾರತದಲ್ಲಿ ಸಂಶೋಧನೆ ಮತ್ತು ದತ್ತಾಂಶಗಳು ಸ್ವಭಾವತಃ ಹಿಮ್ಮುಖವಾಗಿರುವ ಕಾರಣ, ಅಂತರ್ ಪೀಳಿಗೆಯ ಅಪೌಷ್ಟಿಕತೆಯ ಫಲಿತಾಂಶಗಳೂ ಸಹ ಅವುಗಳು ಬಂದ ಮೇಲೆಯ ಗೋಚರವಾಗುತ್ತವೆ. ಆದ್ದರಿಂದ ಇವುಗಳನ್ನು ಬಹುತೇಕ ಬದಲಾಯಿಸಲಾಗುವುದಿಲ್ಲ. ಉದಾಹರಣೆಗೆ, ಒಬ್ಬ ಹೆಣ್ಣು ಬಾಲ್ಯದಲ್ಲಿ ಅಪೌಷ್ಟಿಕತೆಯಿಂದ ಹಾಗೂ ಬೆಳವಣಿಗೆ ಕುಂಠಿತದಿಂದ ಬಳಲಿದ್ದರೆ, ಅದು ಈಕೆಯು ಗರ್ಭವತಿಯಾಗಿರುವಾಗ ಪರಿಣಾಮವನ್ನು ಬೀರಬಹುದು ಅಥವಾ ಆಕೆಯ ಗರ್ಭದಲ್ಲಿರುವ ಮಗುವಿನ ತೂಕವನ್ನೂ ಸಹ ಕಡಿಮೆ ಮಾಡುವ ಸಾಧ್ಯತೆಗಳಿರುತ್ತದೆ. ಮಗುವಿನ ತೂಕ ಕಡಿಮೆ ಇದ್ದರೆ, ಅರ ಅಂಗಾಗಳು ಕಡಿಮೆ ಬೆಳವಣಿಗೆ ಹೊಂದಿವೆ ಎಂದರ್ಥ. ಇದು ಕಡಿಮೆ ಕ್ರಿಯಾಶೀಲತೆಯನ್ನು ಸೂಚಿಸುತ್ತದೆ. ಮತ್ತೆ, ಇದು ಮಧುಮೇಹ, ಹೈಪರ್‌ಟೆನ್ಷನ್ ಹಾಗೂ ಹೃದಯ ಸಂಬಂದಿ ಕಾಯಿಲೆಗಳೂ ಸೇರಿದಂತೆ ದೇಹದ ಇನ್ನಿತರ ಅಂಗಗಳ ನಿಷ್ಕಿçಯತೆಗೆ ಕಾರಣವಾಗಬಹುದು. ಇದು ಹೊಸ ಖಾಯಿಲೆಗಳನ್ನು ಹೊರತುಪಡಿಸಿ, ಈಗಾಗಲೇ ಇರುವ ರೋಗಗಳನ್ನು ವಾಸಿಮಾಡುವುಕ್ಕೆ ಹರಸಾಹಸ ಪಡುತ್ತಿರುವ ಆರೋಗ್ಯ ಕ್ಷೇತ್ರದ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಅಪೌಷ್ಟಿಕತೆ ಎನ್ನುವುದು ರಾತ್ರೋರಾತ್ರಿ ಒಂದು ವಿಮಾನ ದುರಂತದ ರೀತಿಯಲ್ಲಿ ಮಕ್ಕಳನ್ನು ಸಾಯಿಸುವುದಿಲ್ಲ. ಆದ್ದರಿಂದ ಅಪೌಷ್ಟಿಕತೆಗೆ ವಿಮಾನ ದುರಂತಕ್ಕೆ ನೀಡುವ ಗಮನವನ್ನು ನೀಡಲಾಗುತ್ತಿಲ್ಲ. ಆದರೆ ಈ ಎರಡೂ ಸಹ ಮಕ್ಕಳನ್ನು ಕೊಲ್ಲುತ್ತದೆ. ಒಂದು ತಕ್ಷಣ ಕೊಂದರೆ, ಮತ್ತೊಂದು ನಿಧಾನವಾಗಿ ಅಂದರೆ ಹಲವು ಪೀಳಿಗೆಗಳವರೆಗೂ ನಿಧಾನಿಸಿ, ಮಕ್ಕಳನ್ನು ಕೊಲ್ಲುತ್ತದೆ. ಅಪೌಷ್ಟಿಕತೆ ಮತ್ತು ಅದರ ದುಷ್ಪರಿಣಾಮಗಳು ನಿಧಾನವಾಗಿ, ಆಳವಾಗಿ ಪ್ರಗತಿಯನ್ನು ಹೊಂದುವ ಕಾರಣ ಅವುಗಳು ಇತರರ ಸಂವೇದನೆಯನ್ನು ತಕ್ಷಣವೇ ಸೆಳೆಯುವುದಿಲ್ಲ. ಪತ್ರಿಕೆ ಅಥವಾ ಮಾಧ್ಯಮಗಳಲ್ಲಿ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ, ಅವರ ಬೆಳವಣಿಗೆ ಕುಂಠಿತವಾಗಿದೆ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ತಲೆಬರಹಗಳು ಪ್ರತ್ಯಕ್ಷವಾದರೆ ಆಡಳಿತಗಾರರು, ಮಾಧ್ಯಮಗಳು, ನಾಗರೀಕ ಸಮಾಜ, ಪೌಷ್ಟಿಕಾಂಶತಜ್ಞರು ಮತ್ತು ವೈದ್ಯರು ಸಾಮಾನ್ಯವೆಂಬಂತೆ ಪ್ರತಿಕ್ರಿಯಿಸುತ್ತಾರೆ. ಇದು ದೂರದೃಷ್ಟಿಯೂ ಅಲ್ಲ ಅಥವಾ ಸುಸ್ಥಿರತೆಯೂ ಅಲ್ಲ. ಆದ್ದರಿಂದ, ಅಪೌಷ್ಟಿಕತೆ ಬರುವ ಮುಂಚಿತವಾಗಿ ಅದನ್ನು ತಡೆಯಲು ಇದು ಏನನ್ನೂ ಮಾಡುವುದಿಲ್ಲ. ಈಗಾಗಲೇ ಅಪೌಷ್ಟಿಕತೆ, ಬಡತನ ಮತ್ತು ಸೋಂಕು ಎಂಬ ಅಪಾಯಕಾರಿ ವೃತ್ತದೊಳಗೆ ಬಿದ್ದಿರುವ ಮಕ್ಕಳಿಗೆ ನೆರವು ನೀಡುವ ನಿಟ್ಟಿನಲ್ಲಿ ಹಿಮ್ಮುಖ ಮಧ್ಯಸ್ಥಿಕೆಗಳು ಯಾವ ರೀತಿಯ ಸಹಾಯವನ್ನೂ ಮಾಡುವುದಿಲ್ಲ.
ಪೌಷ್ಟಿಕಾಂಶಯುಕ್ತ ಆಹಾರ ಎಂದರೇನು?
ಈ ಪ್ರಶ್ನೇ ಸರ್ವೇಸಾಮಾನ್ಯವೆನಿಸಬಹುದು ಅಥವಾ ಈ ಪ್ರಶ್ನೆಯನ್ನು ಕೇಳುವ ಅವಶ್ಯಕತೆ ಇದೆಯೇ ಎಂದೂ ಸಹ ಅನಿಸಬಹುದು. ನಮ್ಮಲ್ಲಿ ಹಲವಾರು ಜನ ಸ್ವ-ಘೋಷಿತ ಪೌಷ್ಟಿಕಾಂಶ ಭಿಪ್ರಾತವನುತಜ್ಞರುಗಳಿದ್ದೇವೆ. ಅದು ಸರಿಯಿರಲಿ ಅಥವಾ ತಪ್ಪಿರಲಿ, ಅವಕಾಶ ಸಿಕ್ಕಾಗಲೆಲ್ಲ ನಮ್ಮ ಅಭಿಪ್ರಾಯವನ್ನು ಮಂಡಿಸಲು ಕಾದಿರುತ್ತೇವೆ. ಭಾರತದಂತಹ ಜಾತಿವಾದಿ, ಈಗ ಕೋಮುವಾದಿಯಾಗುತ್ತಿರುವ ದೇಶದಲ್ಲಿ ಆಹಾರ ಕೇವಲ ಆಹಾರವಾಗಿ ಮಾತ್ರ ಉಳಿಯದೆ ಅದೊಂದು ರಾಜಕೀಯ ಅಸ್ತೃವಾಗಿದೆ. ಭೀಫ್ ತಿನ್ನುವವರನ್ನು ಥಳಿಸುವುದರಿಂದ ಹಿಡಿದು, ಮಾಂಸ ತಿನ್ನುವ ಸಮುದಾಯಗಳನ್ನು ಗಲೀಜು, ಮಲೀನ ಹಾಗೂ ಹಾನಿಕಾರಕ ಎನ್ನುವವರೆಗೂ, ವೈಜ್ಞಾನಿಕ ಆಧಾರಕ್ಕಿಂತ ಸೈದ್ಧಾಂತಿಕವಾಗಿ ಆಹಾರ ಹೇರಿಕೆ ಮಾಡುವವರೆಗೂ, ಸಸ್ಯಹಾರಿತನವನ್ನು ಉದಾತ್ತ ಬದುಕಿನ ರೀತಿ ಎಂದು ಬಿಂಬಿಸುವವರೆಗೂ, ಭಾರತವನ್ನು ಸಸ್ಯಾಹಾರಿ ದೇಶ ಎಂದು ಬಿಂಬಿಸುವುದರಿಂದ ಹಿಡಿದು ಭೀಫ್ ಹಬ್ಬಗಳನ್ನು ಮಾಡುವವರೆಗೂ, ಆಹಾರದ ಸುತ್ತಲಿನ ಭಾವನೆಗಳು ಈಗ ಎಲ್ಲೆಡೆ ಸ್ಥಾಪಿತವಾಗಿವೆ.
ಭಾರತದಲ್ಲಿ ಒಂದು ರೀತಿಯ ಸೈದ್ಧಾಂತಿಕ ಅಭಿಪ್ರಾಯವಿದೆ. ಮಾಧ್ಯಮಗಳು, ಸಂಶೋಧಕರು, ಶಿಕ್ಷಣತಜ್ಞರು, ವೈದ್ಯರು ಹಾಗೂ ಸಮಾಜದ ಮೇಲೆ ಪ್ರಭಾವವನ್ನು ಬೀರುವ ಸ್ಥಾನಮಾನವನ್ನು ಹೊಂದಿರುವವರು ಭಾರತ ಸಸ್ಯಹಾರಿಗಳ ದೇಶವೆಂದು ಹಾಗೂ ಅದು ಬಡ ದೇಶವಾಗಿದೆ ಎಂದು ಬಿಂಬಿಸುವಲ್ಲಿ ಮಗ್ನರಾಗಿದ್ದಾರೆ. ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆ, ೨೦೧೨ ಸಹ ಸಸ್ಯಹಾರವನ್ನು ಭಾರತದ ಬಹುಸಂಖ್ಯಾತ ಮಾಂಸ ಸೇವಿಸುವ ಸಮುದಾಯಗಳ ಮೇಲೆ ಮಾಡುವ ಹೇರಿಕೆಯ ಪ್ರಯತ್ನದ ಭಾಗವಾಗಿದೆ.
ಸಾಕಷ್ಟು ಸಂಶೋಧನಾ ಪುರಾವೆಗಳು ಹೇಳುವ ಪ್ರಕಾರ, ಪೌಷ್ಟಿಕಾಂಶ ಕೊರತೆಯನ್ನು ಹೋಗಲಾಡಿಸಲು ರಾಗಿ ಮತ್ತು ಧಾನ್ಯಗಳ ಹೊರತಾಗಿ ಸಾಕಷ್ಟು ಪ್ರಮಾಣದಲ್ಲಿ ವೈವಿಧ್ಯಮಯ ಆಹಾರಗಳಾದ ಕಾಳುಗಳು, ಬೀಜಗಳು, ಮೊಟ್ಟೆ, ಮಾಂಸ, ಹಾಲು, ಮೀನು, ತರಕಾರಿಗಳು, ಕೊಬ್ಬಿನಾಂಶ, ಎಣ್ಣೆ, ಚಿಕನ್, ಎಲೆ ತರಕಾರಿಗಳು ಮುಂತಾದವುಗಳನ್ನು ಸೇವಿಸಬೇಕು.
ಯುನಿಸೆಫ್ ೧೩೫ ದೇಶಗಳಿಂದ ಮಕ್ಕಳ ಪೌಷ್ಟಿಕಾಂಶ ವರದಿ ೨೦೨೧ ಅನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ವೈವಿಧ್ಯಮಯ, ಪ್ರಾಣಿಮೂಲ ಆಹಾರ, ತರಕಾರಿಗಳು, ಹಣ್ಣುಗಳು, ಎದೆ ಹಾಲು ಇತ್ಯಾದಿಗಳನ್ನು ಈ ದೇಶಗಳ ಮಕ್ಕಳಿಗೆ ನೀಡುವ ಅಗತ್ಯವಿದೆ ಎಂದು ಯುನಿಸೆಫ್ ಉಲ್ಲೇಖಿಸಿದೆ. ಜನಸಂಖ್ಯೆಯ ಬಹುತೇಕ ಭಾಗವು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ಅವರಿಗೆ ಅನೇಕ ವಿಧದ ಪೋಷಕಾಂಶಗಳ ಕೊರತೆ ಇದೆ ಎಂದು ಹೇಳಬಹುದು. ಕೇವಲ ಒಂದೆರಡು ಪೌಷ್ಟಿಕಾಂಶ ಕೊರತೆಗಳು ಮಾತ್ರ ಮೇಲ್ನೋಟಕ್ಕೆ ಕಂಡುಬAದರೆ ಅದರ ಅರ್ಥ ಅವರಿಗೆ ಈ ಪೋಷಕಾಂಶಗಳನ್ನು ಮಾತ್ರವೇ ನೀಡುವುದು ಸಮಂಜಸವಾಗಿರುವುದಿಲ್ಲ. ಜನರಿಗೆ ಎಲ್ಲವನ್ನೂ ಒಳಗೊಳ್ಳುವ ವೈವಿಧ್ಯಮಯ ಆಹಾರಗಳಾದ ಕಾಳುಗಳು, ಬೀಜಗಳು, ಮೊಟ್ಟೆ, ಮಾಂಸ, ಹಾಲು, ಮೀನು, ತರಕಾರಿಗಳು, ಕೊಬ್ಬಿನಾಂಶ, ಎಣ್ಣೆ, ಚಿಕನ್, ಎಲೆ ತರಕಾರಿಗಳ ಅವಶ್ಯಕತೆಯಿದೆ.
ಸಣ್ಣ ಪ್ರಮಾಣದ ಪೌಷ್ಟಿಕಾಂಶ ಕೊರತೆಗಳಿಗೆ (ಕಬ್ಬಿಣಾಂಶ, ಜಿಂಕ್, ಪೋಷಕಾಂಶ ಎ, ಬಿ೧೨, ಫೋಲೆಟ್ ಮತ್ತು ಕ್ಯಾಲ್ಷಿಯಂ) ಪ್ರಾದೇಶಿಕವಾಗಿ ದೊರೆಯುವಂತಹ ಪೌಷ್ಟಿಕಾಂಶಯುಕ್ತ ಆಹಾರಗಳೆಂದರೆ ಚಿಕನ್ ಲಿವರ್ (ಈಲಿ), ಕುರಿ, ಆಡುಗಳ ಲಿವರ್, ಚಿಕ್ಕ ಮೀನುಗಳು (ಪೋಷಕಾಂಶ ಡಿ ಹಾಗೂ ಲಾಂಗ್‌ಚೈನ್ ಒಮೆಗಾ ೩ ಕೊಬ್ಬಿನಾಂಶಗಳು). ಮೊಟ್ಟೆ, ಮಾಂಸ, ಹಚ್ಚ ಹಸಿರೆಲೆ ತರಕಾರಿಗಳು ಉಪಯುಕ್ತವಾಗುತ್ತವೆ. ಸಿಎನ್‌ಎನ್‌ಎಸ್ ವರದಿ ನಿರ್ದಿಷ್ಟವಾಗಿ ಕಬ್ಬಿಣಾಂಶ ಆಹಾರಗಳು “ಯಾವುದೇ ಲಿವರ್, ಕಿಡ್ನಿ, ಹೃದಯ ಹಾಗೂ ಯಾವುದೇ ದೇಹದ ಯಾವುದೇ ಭಾಗದ ಮಾಂಸ, ಯಾವುದೇ ಕೋಳಿ, ಬಾತುಕೋಳಿ ಅಥವಾ ಇನ್ನಿತರ ಕೋಳಿ ಮಾಂಸಗಳು, ಯಾವುದೇ ತಾಜಾ ಅಥವಾ ಒಣಮೀನು, ಚಿಪ್ಪುಮೀನು, ಅಥವಾ ದಿನದಲ್ಲಿ ಯಾವುದೇ ರೀತಿಯ ಮಾಂಸ ಸೇವನೆಯನ್ನು ಒಳಗೊಳ್ಳುತ್ತದೆ.
ಇತ್ತೀಚೆಗಿನ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಓ) ವರದಿಯಲ್ಲಿ ದಕ್ಷಿಣ ಏಷಿಯಾವು ಮಾಂಸ ಲಭ್ಯತೆಯ (ದಿನಕ್ಕೆ ೧೯ ಗ್ರಾಂ) ಅತಿ ಕಡಿಮೆ ತಲಾವಾರು ಹೊಂದಿದೆ ಎಂಬುದನ್ನು ಬಹಿರಂಗಪಡಿಸಿದೆ. ಕಳವಳಕಾರಿ ಅಂಶವೆಂದರೆ, ದಕ್ಷಿಣ ಏಷಿಯಾ ದೇಶಗಳಲ್ಲೇ ಭಾರತವೇ ಅತಿ ಕಡಿಮೆ ಮಾಂಸ ಲಭ್ಯತೆ (ದಿನಕ್ಕೆ ೧೦ ಗ್ರಾಂ) ಯನ್ನು ಹೊಂದಿದೆ. ೬ ರಿಂದ ೨೩ ತಿಂಗಳುಗಳ ವಯೋಮಾನದಲ್ಲಿನ ಮಕ್ಕಳಿಗೆ ನೀಡುವ ಚಿಕನ್ ಲಿವರ್, ಕುರಿ-ಆಡುಗಳ ಲಿವರ್ ಹಾಗೂ ಮಾಂಸವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಹೋರಾಟಗಳು ನಡೆಯಬೇಕು ಎಂಬುದನ್ನು ಈ ವರದಿಯು ಉಲ್ಲೇಖಿಸುತ್ತದೆ. ಹಸಿರು ತರಕಾರಿಗಳು ಮಿತವಾಗಿ ಲಭ್ಯವಿದ್ದು, ಮೀನುಗಳನ್ನು ನಿರ್ದಿಷ್ಟ ಪ್ರದೇಶದ ಜನರು ಮಾತ್ರ ಸೇವಿಸುತ್ತಾರೆ ಎಂಬುದನ್ನು ಹೇಳುತ್ತದೆಯಲ್ಲದೆ, ಮೊಟ್ಟೆಯ ಸೇವನೆಯನ್ನು ಮತ್ತಷ್ಟು ಅಧಿಕರಿಸಬೇಕು ಎಂದೂ ಅಹ ಅಭಿಪ್ರಾಯಪಡುತ್ತದೆ.
ಕಾಂಪ್ರಹೆನ್ಸಿವ್ ನ್ಯಾಷನಲ್ ನ್ಯೂಟ್ರಿಷನ್ ಸರ್ವೇ (ಸಿಎನ್‌ಎನ್‌ಎಸ್) (೨೦೧೮-೧೯) ರ ಪ್ರಕಾರ, ಭಾರತದಲ್ಲಿ ಕಬ್ಬಿಣಾಂಶಯುಕ್ತ ಆಹಾರವು “ಯಾವುದೇ ಲಿವರ್, ಕಿಡ್ನಿ, ಹೃದಯ ಹಾಗೂ ಯಾವುದೇ ದೇಹದ ಯಾವುದೇ ಭಾಗದ ಮಾಂಸ, ಯಾವುದೇ ಕೋಳಿ, ಬಾತುಕೋಳಿ ಅಥವಾ ಇನ್ನಿತರ ಕೋಳಿ ಮಾಂಸಗಳು, ಯಾವುದೇ ತಾಜಾ ಅಥವಾ ಒಣಮೀನು, ಚಿಪ್ಪುಮೀನು, ಅಥವಾ ದಿನದಲ್ಲಿ ಯಾವುದೇ ರೀತಿಯ ಮಾಂಸ ಸೇವನೆಯನ್ನು ಒಳಗೊಳ್ಳುತ್ತದೆ.”
ಯಾರದರೂ ಕರ್ನಾಟಕದಲ್ಲಿನ ಎಂಡಿಎ ಅನ್ನು ಪರಿಗಣಿಸಿದರೆ, ಪ್ರಾಥಮಿಕ ಶಾಲಾ ಮಗುವೊಂದಕ್ಕೆ ದಿನಕ್ಕೆ ೪೫೦ ಕ್ಯಾಲರಿ ಹಾಗೂ ೧೨ ಗ್ರಾಂ ಪ್ರೋಟೀನ್ ಅವಶ್ಯಕತೆಯಿರುತ್ತದೆ. ಅದೇ ಒಬ್ಬ ಪ್ರೌಢ ಶಾಲಾ ಮಗುವಿಗೆ ದಿನವೊಂದಕ್ಕೆ ೭೦೦ ಕ್ಯಾಲರಿಗಳು ೨೦ ಗ್ರಾಂ ಪ್ರೊಟೀನ್ ಅಗತ್ಯವಿರುತ್ತದೆ. ಪ್ರಾಥಮಿಕ ಹಂತದಲ್ಲಿ ಪ್ರತಿ ಊಟವು ೧೦೦ ಗ್ರಾಂ ನಷ್ಟು ಬೇಳೆ, ೨೦ ಗ್ರಾಂ ನಷ್ಟು ಕಾಳುಗಳು, ೫೦ ಗ್ರಾಂ ನಷ್ಟು ತರಕಾರಿಗಳು, ೫ ಗ್ರಾಂ ನಷ್ಟು ಎಣ್ಣೆ ಮತ್ತು ಕೊಬ್ಬಿನಾಂಶವನ್ನು ಹೊಂದುವAತೆ ನಿರೀಕ್ಷಿಸಲಾಗಿದೆ. ಇದರ ಮೇಲಿನ ಹಂತದಲ್ಲಿ, (೬ ರಿಂದ ೮ ನೇ ತರಗತಿವರೆಗೆ) ಒಂದು ಮಗುವಿಗೆ ೧೫೦ ಗ್ರಾಂ ನಷ್ಟು ಬೇಳೆ, ೩೦ ಗ್ರಾಂನಷ್ಟು ಕಾಳುಗಳು, ೭೫ ಗ್ರಾಂನಷ್ಟು ತರಕಾರಿಗಳು, ಹಾಗೂ ೭.೫ ಗ್ರಾಂನಷ್ಟು ಎಣ್ಣೆ ಮತ್ತು ಕೊಬ್ಬಿನಾಂಶವನ್ನು ನಿರೀಕ್ಷಿಸಲಾಗಿದೆ. ಈ ಆಹಾರಕ್ರಮವು ಮಗುವಿನ ಮೂರನೇ ಒಂದು ಭಾಗದಷ್ಟು ಪ್ರೊಟೀನ್, ಮಿನರಲ್‌ಗಳು ಮತ್ತು ಪೋಷಕಾಂಶ ಅಗತ್ಯತೆಗಳನ್ನು ಸರಿದೂಗಿಸಲು ಅಸಮಂಜಸವಾಗಿದೆ ಹಾಗೂ ಇದನ್ನು ಖಂಡಿತವಾಗಿಯೂ ವೈವಿಧ್ಯಮಯ ಎಂದು ಹೇಳಲಾಗುವುದಿಲ್ಲ. ಮೊಟ್ಟೆಗಳು ಅತ್ಯಧಿಕ ಪೋಷಕಾಂಶವನ್ನು ಹೊಂದಿರುವ ಆಹಾರವಾದರೂ ಮಕ್ಕಳಿಗೆ ಅದನ್ನು ನಿರಾಕರಿಸಲಾಗುತ್ತಿದೆ. ಇದಕ್ಕೆ ಜಾತಿ ಆಧಾರಿತ, ಸೈಧ್ದಾಂತಿಕ ಮತ್ತು ರಾಜಕೀಯ ಕಾರಣಗಳನ್ನು ನೀಡಲಾಗುತ್ತಿದೆ. ಎನ್‌ಎಫ್‌ಎಸ್‌ಎ ಅಂದರೆ ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆಯು ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತಿದೆಯೇ ಹೊರತು ಪೋಷಕಾಂಶಯುಕ್ತ ಆಹಾರವನ್ನು ಖಾತ್ರಿಪಡಿಸುತ್ತಿಲ್ಲ. ಆದ್ದರಿಂದ, ನೀತಿ ರೂಪಿಸುವಿಕೆಯು ದೇಶದಲ್ಲಿನ ಅಪೌಷ್ಟಿಕತೆಯನ್ನು ನೀಗಿಸುವ ಗಂಭೀರ ಇಚ್ಛೆಯನ್ನು ಹೊಂದಿದ್ದರೆ, ಅದು ಆಹಾರ ಭದ್ರತೆಯ ಕಾಯ್ದೆಯಾಚೆಗೂ ತನ್ನ ಕಾರ್ಯವನ್ನು ವಿಸ್ತರಿಸಿಕೊಳ್ಳಬೇಕು.
ಮಕ್ಕಳ ಆಹಾರದ ಕಾನೂನಾತ್ಮಕ ಹಕ್ಕುಗಳು
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಹಾಗೂ ಇಂಡಿಯನ್ ಯೂನಿಯನ್ ಆಂಡ್ ಅದರ್ಸ್ ಪ್ರಕರಣದಲ್ಲಿ, ಭಾರತದ ಸರ್ವೋಚ್ಛ ನ್ಯಾಯಾಲಯವು ತನ್ನ ಮೈಲಿಗಲ್ಲು ತೀರ್ಪಿನಲ್ಲಿ ಆಹಾರದ ಹಕ್ಕನ್ನು ಸಾಂವಿಧಾನಿಕ ಹಕ್ಕು ಎಂದು ಹೇಳಿದೆ.೪ ಗರ್ಭಿಣಿಯರು, ದಾದಿ ಕೆಲಸವನ್ನು ಮಾಡುತ್ತಿರುವ ಮಹಿಳೆಯರು ಹಾಗೂ ೬ ತಿಂಗಳಿAದ ೧೪ ವರ್ಷದ ವಯೋಮಾನದ ಮಕ್ಕಳಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸುವುದರ ಮೂಲಕ, ಸಂಯೋಜಿತ ಮಕ್ಕಳ ಅಭಿವೃದ್ಧಿ ಸೇವೆ (ಐಸಿಡಿಎಸ್), ಮಧ್ಯಾಹ್ನದ ಬಿಸಿಯೂಟ (ಎಂಡಿಎಂ) ಗಳನ್ನು ಬಳಸಿಕೊಳ್ಳುತ್ತಾ, ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳನ್ನೂ ಸೇರಿದಂತೆ, ಸರ್ಕಾರದ ಹಲವು ಆಹಾರ ಭದ್ರತಾ ಯೋಜನೆಗಳನ್ನು ಕಾನೂನಾತ್ಮಕಗೊಳಿಸಲಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚುವರಿ ಆಹಾರವನ್ನು ನೀಡಲಾಗುತ್ತದೆ. ಈ ಕಾಯ್ದೆಯು ಗ್ರಾಮಾಂತರ ಪ್ರದೇಶದ ೭೫% ಜನರಿಗೆ ಹಾಗೂ ನಗರ ಪ್ರದೇಶ ೫೦% ಜನರಿಗೆ ರಿಯಾಯಿತಿ ದರದಲ್ಲಿ ನಿರ್ದಿಷ್ಟ ಸಾರ್ವಜನಿಕ ಹಂಚಿಕೆ ವ್ಯವಸ್ಥೆಯ ಮೂಲಕ ದಿನಸಿಯನ್ನು ಪಡೆಯುವ ಹಕ್ಕನ್ನು ನೀಡಿದೆ. ಒಂದು ವೇಳೆ ಅವರಿಗೆ ಕಾನೂನಾತ್ಮಕವಾಗಿ ಸೇರಬೇಕಾಗಿರುವ ದಿನಸಿ ಅಥವಾ ಆಹಾರವು ಸಿಗದ ಸಂಧರ್ಭದಲ್ಲಿ (ಕೋವಿಡ್ ಸಂದರ್ಭದಲ್ಲಿ ಆದಂತೆ), ಆಗ ಸರ್ಕಾರವು ಅವರಿಗೆ ಆಹಾರ ಭದ್ರತಾ ಭತ್ಯೆಗಳನ್ನು ಕಾಯ್ದೆಯಲ್ಲಿ ನಿರ್ದಿಷ್ಟ ಪಡಿಸಿದಂತೆ ಸರ್ಕಾರಗಳೇ ನೀಡಬೇಕಾಗಿರುತ್ತದೆ.
ಫೆಬ್ರವರಿ ೨೦೧೩ ರಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು೫ ಆಹಾರದ ಹಕ್ಕು ಎಂಬುದು ಘನತೆಯ ಬದುಕಿನ ಹಕ್ಕಿನೊಂದಿಗೆ ಅಂತರ್ಗತವಾಗಿದೆ ಹಾಗೂ ಸಂವಿಧಾನದ ಅನುಚ್ಛೇದ ೨೧ (ಮೂಲಭೂತ ಹಕ್ಕುಗಳಾದ ಬದುಕಿನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರö್ಯದ ಹಕ್ಕನ್ನು ನೀಡುವ ಅನುಚ್ಛೇದ) ಅನ್ನು ಸಂವಿಧಾನದ ಅನುಚ್ಚೇಧ ೩೯ (ಎ) ಹಾಗೂ ೪೭ ರೊಂದಿಗೆ, ಈ ಹಕ್ಕನ್ನು ಸಾಕಾರಗೊಳಿಸುವಲ್ಲಿ ಇರುವ ರಾಜ್ಯದ ಕರ್ತವ್ಯಗಳ ಕುರಿತು ಅರ್ಥಮಾಡಿಕೊಳ್ಳಲು, ಓದಿಕೊಳ್ಳಬೇಕು ಎಂಬ ನಿಲುವನ್ನು ತೆಗೆದುಕೊಂಡಿತು. ನಿರ್ದೇಶಕ ತತ್ವಗಳಲ್ಲೊಂದಾದ ಅನುಚ್ಚೇಧ ೩೯ (ಎ) ಎಲ್ಲಾ ನಾಗರೀಕರು ಸರಿಯಾದ ಜೀವನೋಪಾಯಕ್ಕೆ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ತನ್ನ ನೀತಿಗಳನ್ನು ಅದೆರೆಡೆಗೆ ತಿರುಗಿಸಬೇಕು ಎಂಬುದನ್ನು ಹೇಳಿದರೆ, ಅನುಚ್ಛೇದ ೪೭ ಪ್ರಾಥಮಿಕ ಜವಾಬ್ದಾರಿಯಾಗಿ, ಪೌಷ್ಟಿಕತೆಯ ಹಂತಗಳನ್ನು ಹಾಗೂ ಬದುಕುವ ರೀತಿಯನ್ನು ಮೇಲ್ದರ್ಜೆಗೇರಿಸಲು ಸರ್ಕಾರವು ಹೇಗೆ ಉತ್ತರದಾಯಿತ್ವವನ್ನು ಹೊಂದಿದೆ ಎಂಬುದರ ಕುರಿತು ಮಾತನಾಡುತ್ತದೆ. ಆಹಾರದ ಹಕ್ಕು ಎಂದರೆ ಸರಿಯಾದ ಪೌಷ್ಟಿಕಾಂಶವುಳ್ಳ ಆಹಾರದ ಹಕ್ಕು ಎಂದೇ ಪರಿಗಣಿಸಬೇಕು, ಒತ್ತಡದಲ್ಲಿರುವವರಿಗೆ ಅವರ ಒತ್ತಡವನ್ನು ನೀಗುವಲ್ಲಿ ಈ ಆಹಾರವು ನೆರವಾಗುವಂತಿರಬೇಕು ಹಾಗೂ ಈ ಹಕ್ಕು ಕೇವಲ ಕಾಗದದ ಮೇಲಿನ ಬರಹವಾಗದೆ, ಅದು ನಿಜ ಬದುಕಿನಲ್ಲೂ ಸಾಕಾರಗೊಳ್ಳಬೇಕು ಎಂಬ ಧೃಡ ನಿಲುವನ್ನು ಆಯೋಗವು ತಾಳಿತು.
ಈ ನಿಯಮವು ಅತಿ ಮುಖ್ಯವಾಗಿದೆ ಏಕೆಂದರೆ ಇದು ಸರಿಯಾದ ಪೌಷ್ಟಿಕಾಂಶ ಅಂಶಗಳಲ್ಲಿ ಆಹಾರವು ಇರಬೇಕು ಎಂಬ ಅಂಶವನ್ನು ಒತ್ತಿ ಹೇಳುತ್ತದೆ. ಇನ್ನು ಸರಳ ಪದಗಳಲ್ಲಿ ಹೇಳಬೇಕಾದರೆ, ಒಬ್ಬ ವ್ಯಕ್ತಿ ಎಷ್ಟು ಆಹಾರ ಸೇವಿಸುತ್ತಾನೆ ಎನ್ನುವುದಕ್ಕಿಂತ ಯಾವ ಗುಣಮಟ್ಟದ ಆಹಾರವನ್ನು ಸೇವಿಸುತ್ತಾನೆ ಎಂಬುದು ಪ್ರಮುಖವಾಗಿದೆ. ಅಪೌಷ್ಟಿಕತೆ ಸಮಸ್ಯೆಯನ್ನು ಎದುರಿಸಲು ಹಾಗೂ ಇನ್ನಿತರ ಪೋಷಕಾಂಶ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಗುಣಮಟ್ಟದ ಆಹಾರ ಯಾವ ರೀತಿಯಲ್ಲಿ ಪ್ರವೇಶಾತಿಯನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ.
ಮುಂದಿನ ಮಾರ್ಗ ಯಾವುದು?
ಮಕ್ಕಳು ಅನನ್ಯವಾಗಿರುವುದರಿಂದ ಅವರು ತಮ್ಮ ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯ ಕುರಿತು ಮಾತನಾಡಲಾಗುವದಿಲ್ಲ. ದೌರ್ಜನ್ಯಕ್ಕೊಳಪಡುವ ಒಂದು ಮಗುವು ಹೇಗೆ ಅದು ಹೇಗೆ ಆಕೆಯ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಲಾಗುವುದಿಲ್ಲವೋ ಅದೇ ರೀತಿ, ಹಸಿವು, ಉಪವಾಸ ಹಾಗೂ ಅಪೌಷ್ಟಿಕತೆಯಿಂದ ನರಳುತ್ತಿರುವ ಮಗುವೂ ಸಹ ತನಗೆ ಆಗುತ್ತಿರುವ ಅನ್ಯಾಯದ ಕುರಿತು ಮಾತಿನಲ್ಲಿ, ಪದಗಳಲ್ಲಿ, ಪ್ರತಿಭಟನೆಯನ್ನು ನಡೆಸುವ ಮೂಲಕ ಅಥವಾ ಮನವಿಯನ್ನು ಸಲ್ಲಿಸಲಾಗುವುದಿಲ್ಲ. ಆದ್ದರಿಂದ ಅವರ ಪರವಾಗಿ ಮಾತನಾಡಲು ಮಕ್ಕಳಿಗೆ ವ್ಯಕ್ತಿಗಳು ಬೇಕಾಗಿದ್ದಾರೆ. ಯಾರು ಈ ವ್ಯಕ್ತಿಗಳು? ಕೆಲವೊಮ್ಮೆ ಪೋಷಕರು ಅಥವಾ ಕುಟುಂಬಸ್ಥರಾಗಿರಬಹುದು. ಅವರು ಮಗುವು ಅನುಭವಿಸಿದ ದೌರ್ಜನ್ಯವನ್ನು ಕುಟುಂಬಸ್ಥರೊಂದಿಗೆ ಅಥವಾ ಸಮಾಜ ಅಥವಾ ಸಮುದಾಯದೊಂದಿಗೆ ಹಂಚಿಕೊಂಡು ಸಾಂತ್ವನವನ್ನು ಪಡೆಯುತ್ತಾರೆ. ಈ ದೊಡ್ಡ ಮಟ್ಟದ ಸಮುದಾಯವು ಅವರ ಈ ಸಹಾಯದ ಕರೆಗೆ ಕಿವಿಗೊಡಬಹುದು ಇಲ್ಲವೇ ನಿರ್ಲಕ್ಷಿಸಬಹುದು. ಮಗು ಅಥವಾ ಕುಟುಂಬದ ಸಂಪರ್ಕಕ್ಕೆ ಬರುವ ಮೊದಲ ವ್ಯಕ್ತಿಗಳು ಮೊದಲು ಸಂಪರ್ಕ ವ್ಯಕ್ತಿಗಳಾಗಿ ಆಗುತ್ತಿರುವ ಮಗುವಿನ ಹಕ್ಕುಗಳ ಉಲ್ಲಂಘನೆಯ ಕುರಿತು ದನಿಯೆತ್ತಬಹುದು. ಒಬ್ಬ ವೈದ್ಯ, ಒಬ್ಬ ಆಶಾ ಕಾರ್ಯಕರ್ತೆ, ಅಂಗನವಾಡಿ ಶಿಕ್ಷಕಿ, ಒಬ್ಬ ಎಎನ್‌ಎಂ ಮಕ್ಕಳ ಅಭಿವೃದ್ಧಿಯಲ್ಲಿನ ಲೋಪಗಳನ್ನು ಗುರುತಿಸಿ, ಆ ಕುರಿತು ಸಹಾಯವಾಣಿಗೆ ಅಥವಾ ಮೇಲಾಧಿಕಾರಿಗಳಿಗೆ ತಿಳಿಸಬಹುದು. ಆ ವ್ಯವಸ್ಥೆ ಆಶಾದಾಯಕ ಅಥವಾ ಬೆಂಬಲಿಸುವಂತ ದ್ದಾದರೆ, ಮಗುವಿಗೆ ಹೆಚ್ಚುವರಿ ಪೋಷಕಾಂಶಗಳು ಅಥವಾ ಆರೋಗ್ಯ ಸಹಾಯವು ದೊರೆಯುತ್ತದೆ ಹಾಗೂ ಇನ್ನು ಮುಂದೆ ಈ ಮಗುವಿಗೆ ವಿಶೇಷ ರಕ್ಷಣೆಯನ್ನು ನೀಡಲಾಗುತ್ತದೆ ಎಂಬುದು ಖಾತ್ರಿಯಾಗುತ್ತದೆ.
ಈ ಕುರಿತು ವಿಶ್ವಾಸಾರ್ಹ ದತ್ತಾಂಶವು ಸಾರ್ವಜನಿಕವಾಗಿ ದೊರಕುವಂತೆ ಮಾಡಲು ನಾಗರೀಕ ಸಮಾಜವು ದಾಖಲೀಕರಣ, ಸಂಶೋಧನೆ ಹಾಗೂ ವಕೀಲಿಕೆಯಲ್ಲಿ ಪಾತ್ರವನ್ನು ನಿಭಾಯಿಸಬೇಕು. ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಯನ್ನು ಹೋಗಲಾಡಿಸಲು ಮಾಧ್ಯಮಗಳು ಸ್ಥಳೀಯ ಹಾಗೂ ಆಡಳಿತಾತ್ಮಕ ಅಡೆತಡೆಗಳ ಕುರಿತು ಮುಕ್ತವಾಗಿ ವರದಿಮಾಡಬೇಕು ಹಾಗೂ ಆ ಮೂಲಕ ಸಂಬAಧಪಟ್ಟ ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿಸಬೇಕು.
ಆಹಾರ ವೈವಿಧ್ಯತೆ
ಪ್ರಾರಂಭದಲ್ಲೇ ನಾವು ಪೌಷ್ಟಿಕಾಂಶತೆ ಎನ್ನುವುದು ಆಹಾರ ಭದ್ರತೆಗಿಂತ ಮಿಗಿಲಾದುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ರಾಗಿ ಮತ್ತು ಧಾನ್ಯಗಳನ್ನೇ ದಿನದ ಎಲ್ಲಾ ವೇಳೆಯಲ್ಲಿ, ೩ ಅಥವಾ ೮ ಬಾರಿ ಊಟದಲ್ಲಿ ನೀಡಿದರೂ ಸಹ ಇವುಗಳು ಪೌಷ್ಟಿಕಾಂಶ ಅಗತ್ಯತೆಗಳನ್ನು ಪೂರ್ಣಗೊಳಿಸುವುದಿಲ್ಲ. ವೈವಿಧ್ಯತೆ ಎನ್ನುವುದು ಬಹಳ ಮುಖ್ಯ. ವೈವಿಧ್ಯತೆ ಎಂದರೆ ಆಹಾರವು ಸುಮಾರು ೪ ಅಥವಾ ಹೆಚ್ಚು ಗುಂಪುಗಳಿAದ ಅಂದರೆ ರಾಗಿ, ಧಾನ್ಯಗಳು, ಕಾಳುಗಳು, ಹಾಲು, ಡೈರಿ, ಮೀನು, ಮಾಂಸ, ಕೋಳಿ, ತರಕಾರಿಗಳು, ಹಣ್ಣುಗಳು, ಎಣ್ಣೆ ಮತ್ತು ಕೊಬ್ಬಿನಾಂಶ ಬಂದಿರಬೇಕು ಹಾಗೂ ಇವುಗಳೆಲ್ಲವೂ ಸೇರಿ ಆಹಾರ ಕ್ರಮವನ್ನು ಪೂರ್ಣಗೊಳಿಸಬೇಕು. ಆರ್‌ಡಿಎ ಅನ್ನು ವ್ಯಕ್ತಿಗೆ ಕೊರತೆ ಇಲ್ಲ ಎಂದು ಭಾವಿಸಿ, ಲೆಕ್ಕಿಸಲಾಗಿರುತ್ತದೆ. ಒಂದು ವೇಳೆ ಕೊರತೆ ಇದ್ದರೆ, ಆರ್‌ಡಿಎ ದ ಪೋಷಕಾಂಶಗಳು ಇತರೆ ಪೋಷಕಾಂಶಗಳ ದೊರಕುವಿಕೆಯ ಆಧಾರದ ಮೇಲೆ ವ್ಯತ್ಯಾಸವಾಗುತ್ತವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯಲ್ಲಿ ಅನೀಮಿಯ ಇದ್ದರೆ, ಕಬ್ಬಿಣಾಂಶದ ಆರ್‌ಡಿಎ ಅನ್ನು ಬದಲಾಯಿಸುವುದರಿಂದ ಮಾತ್ರ ಅನೀಮಿಯವನ್ನು ಪರಿಹರಿಸಲು ಸಾಧ್ಯವಿಲ್ಲ. ಏಕೆಂದರೆ ಬದಲಾಯಿಸಬೇಕಾದಂತಹ ಇನ್ನಿತರ ಪೋಷಕಾಂಶಗಳು ಮತ್ತು ಪ್ರೋಟೀನುಗಳೂ ಸಹ ಇವೆ.
ಹೊಣೆಗಾರಿಕೆ
ಒಬ್ಬ ಮಗುವಿಗೆ ತನ್ನ ಅಗತ್ಯತೆಗಳ ಕುರಿತು ವಿವರಿಸಲು ಆಗುವುದಿಲ್ಲ. ಹಾಗಾಗಿ, ಮಕ್ಕಳ ಪೌಷ್ಟಿಕಾಂಶವನ್ನು ನಿರಾಕರಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಸರ್ಕಾರಗಳನ್ನು ಪ್ರಶ್ನಿಸುವುದು ಆಡಳಿತಗಾರರ, ರಾಜಕಾರಣಿಗಳ, ಶಿಕ್ಷಣತಜ್ಞರ, ಶಿಕ್ಷಕರ, ಪೋಷಕರ, ಹಾಗೂ ಇಡೀ ನಾಗರೀಕ ಸಮಾಜದ ನೈತಿಕ ಕರ್ತವ್ಯವಾಗಿದೆ.
ರಾಜ್ಯದಲ್ಲಿನ ಅಪೌಷ್ಟಿಕತೆಯ ಕಾರಣದಿಂದ ಎಲ್ಲಾ ಪಾಲುದಾರರು ಸರ್ಕಾರವನ್ನು ಹೊಣೆಯಾಗಿಸಬೇಕು. ಯಾವುದೇ ಸಂದರ್ಭದಲ್ಲಿ ಸರ್ಕಾರವು ತನ್ನ ಜವಾಬ್ದಾರಿಗಳಿಂದ ನುಣುಚಿಕೊಂಡು ಹೋಗದಂತೆ ತಡೆಯಬೇಕು. ಪ್ರಾಮಾಣಿಕ ಮಾಧ್ಯಮಗಳು ಹಾಗೂ ನಾಗರೀಕ ಸಮಾಜವು ಒಂದಾಗಿ ಕಾರ್ಯನಿರ್ವಹಿಸಿದರೆ ರಾಜ್ಯದಲ್ಲಿನ ಅಪೌಷ್ಟಿಕತೆಯನ್ನು ತೊಡೆದುಹಾಕಿ, ಆರೋಗ್ಯವಾಗಿ ಮಕ್ಕಳು ಬದುಕುವ ಸಮಾಜವನ್ನು ನಿರ್ಮಾಣ ಮಾಡಬಹುದು. ಈ ರೀತಿಯ ನಾಗರೀಕ ಸಮಾಜವನ್ನು ನಿರ್ಮಿಸಬೇಕಾದರೆ, ಮಾಧ್ಯಮಗಳು ಮತ್ತು ಶಿಕ್ಷಣತಜ್ಞರು ಆಹಾರ ಭದ್ರತೆ ಪೌಷ್ಟಿಕಾಂಶ ಭದ್ರತೆ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮಕ್ಕಳು ಉಪವಾಸ ಬೀಳುವುದನ್ನು ತಪ್ಪಿಸುವುದು ಒಂದು ರೀತಿಯ ಕ್ರಮವಾದರೆ, ಅವರು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶಗಳು ಇಲ್ಲ ಎಂಬುದನ್ನು ಕಂಡುಹಿಡಿಯಲು ಈಗಾಗಲೇ ಹಲವಾರು ವ್ಯವಸ್ಥೆಗಳಿವೆ ಎಂಬುದನ್ನು ಮನಗಾಣಬೇಕಿರುವುದು ಅತಿ ಮುಖ್ಯವಾಗಿದೆ.
ಇತರೆ ಇಲಾಖೆಗಳು ಮತ್ತು ವ್ಯವಸ್ಥೆಗಳೊಂದಿಗೆ ಸಹಯೋಗ
ಅಪೌಷ್ಟಿಕತೆಯ ಕಾರಣದಿಂದ ಉಂಟಾದ ಆರೋಗ್ಯ ಸಮಸ್ಯೆಗಳನ್ನು ಗುರುತಿಸುವಲ್ಲಿ ಆರೋಗ್ಯ ವ್ಯವಸ್ಥೆಯು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಈ ವ್ಯವಸ್ಥೆಗಳು ಮತ್ತು ಇಲಾಖೆಗಳ ನಡುವೆ ಸಮನ್ವಯವಿರುವುದು ಅತ್ಯಂತ ಮುಖ್ಯವಾಗುತ್ತದೆ ಏಕೆಂದರೆ ಹೊಣೆಗಾರಿಕೆಯನ್ನು ಹೊಂದುವಲ್ಲಿ ಇಲಾಖೆಗಳು ಪರಸ್ಪರ ಕೈತೊಳೆದುಕೊಂಡರೆ, ಮಧ್ಯದಲ್ಲಿ ಮಕ್ಕಳು ಮಾತ್ರ ಅನಾಥರಾಗುತ್ತಾರೆ.
ಮಕ್ಕಳ ಕುರಿತು ಮಾತಾನಡುವಲ್ಲಿ, ಒಂದು ವೇಳೆ ಸರ್ಕಾರವನ್ನೂ ಹಾಗೂ ಈಗಾಗಲೇ ಸ್ಥಾಪಿತವಾಗಿರುವ ನಿಯಮಗಳನ್ನು ಪ್ರಶ್ನಿಸುವ ಸಂದರ್ಭ ಬಂದರೂ ಸಹ, ಮಕ್ಕಳ ಹಕ್ಕು ಆಯೋಗಗಳು, ಅರೆ-ಸರ್ಕಾರಿ ಸಂಸ್ಥೆಗಳು ಮಕ್ಕಳ ಹಕ್ಕುಗಳ ಕುರಿತು ಮಾತನಾಡಬೇಕಾಗುತ್ತದೆ.
ಶಿಕ್ಷಣ ಇಲಾಖೆಯನ್ನು ಪೌಷ್ಟಿಕತೆಯನ್ನು ಕುರಿತಂತೆ ಸೈದ್ಧಾಂತಿಕವಾಗಿ ತರಭೇತಿಗೊಳಿಸುವುದರ ಬದಲು ವೈಜ್ಞಾನಿಕವಾಗಿ ತರಭೇತಿಗೊಳಸಬೇಕು. ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಸ್ಥಳೀಯವಾಗಿ ಸಿದ್ಧಪಡಿಸಿದ, ಪೌಷ್ಟಿಕಾಂಶಯುಕ್ತ ಬಿಸಿಯೂಟವನ್ನು ನೀಡುವಲ್ಲಿ ಪ್ರಯತ್ನಿಸಬೇಕು. ಪುರಾವೆ ಆಧಾರಿತ ಪೌಷ್ಟಿಕ ಆಹಾರ ಶಿಕ್ಷಣವನ್ನು ಜೀವನ ಕೌಶಲ್ಯವಾಗಿ ಮಕ್ಕಳಿಗೆ ಭೋದಿಸಬೇಕು.
ಸಂಬಂಧಪಟ್ಟ ಆಡಳಿತಗಾರರು ಸರಿಯಾದ, ಸಮಯೋಚಿತ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಚಿತ್ರಣವನ್ನೇ ಬದಲಾಯಿಸಬಹುದು. ಅಪೌಷ್ಟಿಕತೆಯು ಕಾಣಿಸಿಕೊಂಡಾಗ ಹಠಾತ್ತನೆ ಅಭಿಪ್ರಾಯಗಳನ್ನು ಅಥವಾ ಮೇಲ್ನೋಟಕ್ಕೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಬದಲು, ಈಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಈ ರಾಜ್ಯದಲ್ಲಿ ತಲೆದೋರುವ ಅಪೌಷ್ಟಿಕತೆ ಸಮಸ್ಯೆಯನ್ನು ತಡೆಗಟ್ಟಬಹುದು. ಕರ್ನಾಟಕದ ೭ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಬಾಳೆಹಣ್ಣು ಮತ್ತು ಮೊಟ್ಟೆಯನ್ನು ನೀಡುವ ನಿರ್ಧಾರವು ಸರಿಯಾದ ದಿಕ್ಕಿನಲ್ಲಿ ಇದೆಯಾದರೂ, ಅದು ಬಹಳ ಮಕ್ಕಳನ್ನು ತಲುಪುವುದಿಲ್ಲ ಎಂಬುದು ವಾಸ್ತವ. ಅಪೌಷ್ಟಿಕತೆಯನ್ನು ತಡೆಗಟ್ಟಬೇಕೆ ವಿನಃ ಅದನ್ನು ಸರಿದೂಗಿಸಬಾರದು. ಕೇವಲ ಹಿಂದುಳಿದ ವರ್ಗಗಳು ಹೆಚ್ಚು ಇರುವ ಜಿಲ್ಲೆಗಳ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಮಾತ್ರ ಮೊಟ್ಟೆಯನ್ನು ನೀಡಿದರೆ ಸಾಕಾಗುವುದಿಲ್ಲ. ಬದಲಿಗೆ, ವಾರದ ೪-೫ ದಿನಗಳಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮೊಟ್ಟೆಯನ್ನು ನೀಡಬೇಕು.
ವೈಜ್ಞಾನಿಕ ಮನೋಭಾವ
ಸಾರ್ವಜನಿಕ ಹಂಚಿಕೆ ವ್ಯವಸ್ಥೆ (ಪಿಡಿಎಸ್), ಐಸಿಡಿಎಸ್, ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗಳು ಸೈದ್ಧಾಂತಿಕ ಹಾಗೂ ರಾಜಕೀಯ ಪರಿಧಿಗಳನ್ನು ದಾಟಿ ವೈಜ್ಞಾನಿಕ ಪರಿಧಿಯತ್ತ ಸಾಗಬೇಕು. ಪ್ರತಿದಿನ ನೀಡುವ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರಗಳಾದ ಪ್ರಾಣಿಮೂಲ ಆಹಾರ (ಎಎಸ್‌ಎಫ್) ಗಳನ್ನು ಅಂದರೆ ಹಾಲು, ಮೊಟ್ಟೆ, ಮೀನು, ಮಾಂಸ ಇತ್ಯಾದಿಗಳನ್ನು ಒಳಗೊಳ್ಳಬೇಕು ಹಾಗೂ ಇವುಗಳು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಮತ್ತು ವಿನಾಯಿತಿ ದರದಲ್ಲಿ ದೊರಕುವಂತೆ ಮಾಡಬೇಕು. ಹಲಾಲ್ ಮಾಂಸ ನಿಷೇಧ, ಮುಸ್ಲಿಂ ವ್ಯಾಪಾರಿಗಳ ನಿಷೇಧ, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮೊಟ್ಟೆಯನ್ನು ನೀಡಲು ವಿರೋಧ, ಗೋಹತ್ಯೆ ನಿಷೇಧ ಇತ್ಯಾದಿಗಳನ್ನು ಒಳಗೊಂಡAತೆ ಎಲ್ಲಾ ವಿಧವಾದ ಪ್ರಾಣಿಮೂಲ ಆಹಾರಗಳ ಸೈದ್ಧಾಂತಿಕ ವಿರೋಧವು ಕರ್ನಾಟಕದ ಜನಸಂಖ್ಯೆಗೆ ಅನುಗುಣವಾಗಿ ವೈಜ್ಞಾನಿಕ ಮತ್ತು ಪೌಷ್ಟಿಕಾಂಶಿಕ ಆಧಾರದ ಮೇಲೆ ಮರುಚಿಂತಿಸುವ ಅಗತ್ಯವಿದೆ. ಸರ್ಕಾರದ ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಗಳಲ್ಲಿ ಪರಿಚಯಿಸಲಾಗಿರುವ “ಕ್ಷೀರಭಾಗ್ಯ” ಯೋಜನೆಯು ಸರಿಯಾದ ನಿರ್ದೇಶನದಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಮಕ್ಕಳು ಮತ್ತು ಆಹಾರದ ವಿಷಯದಲ್ಲಿ ನಿರ್ಧಾರವನ್ನು ಕೈಗೊಳ್ಳಬೇಕಾದ ಸಂಧರ್ಭದಲ್ಲಿ ವೈಜ್ಞಾನಿಕ ಮನೋಭಾವವನ್ನು ಹೊಂದಬೇಕೆ ಹೊರತು, ಸಾಂಸ್ಕೃತಿಕ ಅಥವಾ ಸೈದ್ಧಾಂತಿಕ ನಿಲುವುಗಳನ್ನು ಹೊಂದಬಾರದು.
ಸುಸ್ಥಿರ ಪೌಷ್ಟಿಕಾಂಶದ ಕುರಿತು ಆರೋಗ್ಯ ಶಿಕ್ಷಣ
ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳ ಮೂಲಕ ಪೌಷ್ಟಿಕತೆಯ ಕುರಿತ ಮಾಹಿತಿಯನ್ನು ವೈಜ್ಞಾನಿಕ ಆಧಾರದ ಮೇಲೆ ಹೊರತರಲು ಸಾಮೂಹಿಕ ಪರಿಶ್ರಮವನ್ನು ಹಾಕಬೇಕು. ಹಿತ್ತಲ ಕೈದೋಟಗಳು, ಕೋಳಿ ಸಾಕಣೆ, ಜಾನುವಾರುಗಳ ಪಾಲನೆ, ಹಾಗೂ ಸುಸ್ಥಿರ ಕೃಷಿಗೆ ಒತ್ತುನೀಡಬೇಕು. ಜನರಿಗೆ ಹಿತ್ತಲ ಕೈದೋಟಗಳು, ಕೋಳಿ ಸಾಕಣೆ, ಜಾನುವಾರುಗಳ ಪಾಲನೆ ಮಾಡುವಂತೆ ಪ್ರೋತ್ಸಾಹಿಸುವುದು ಅವರು ಸ್ವಾವಲಂಬಿಗಳಾಗುವAತೆ ಮಾಡುತ್ತದೆ. ಕಾಳುಗಳು, ಧಾನ್ಯಗಳು, ಬೀಜಗಳು ಹಾಗೂ ತರಕಾರಿಗಳು ಕಾರ್ಪೊರೇಟ್ ಬೆಳೆಗಳ ಬದಲಿಗೆ ನಾವೇ ಬೆಳೆದಿರುವುದರಿಂದ ಒಳ್ಳೆಯ ಆರೋಗ್ಯವನ್ನು ನೀಡುವುದು ಮಾತ್ರವಲ್ಲದೆ, ನಮ್ಮ ಬದುಕನ್ನು ಮತ್ತಷ್ಟು ಆರೋಗ್ಯಮಯವಾಗಿಸುತ್ತದೆ. ಇದು ಪ್ರಾಕೃತಿಕವಾಗಿ ಹಾಗೂ ನೈಸರ್ಗಿಕವಾಗಿ ಹೆಚ್ಚು ಸುಸ್ಥಿರವಾಗಿದ್ದು, ಆಹಾರ ಸ್ವಾತಂತ್ರö್ಯವನ್ನು ಕಾಪಾಡುತ್ತದೆ.
ಇವೆಲ್ಲವೂ ಸಾಮಾಜಿಕ ಸಮಸ್ಯೆಯಾದ ಅಪೌಷ್ಟಿಕತೆಯನ್ನು ನಾವು ಹಾಗೆಯೇ ಬಿಡಬಹುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಮಾಡುತ್ತದೆ. ಒಟ್ಟಾರೆ ಸಮಾಜದ ಕುರಿತು ಇದು ಏನನ್ನು ಹೇಳುತ್ತದೆ? ಮಕ್ಕಳ ಪೌಷ್ಟಿಕತೆಯ ಅಧಿಕಾರವನ್ನು ಹೊಂದಿರುವ ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದೇ? ಸಂವಿಧಾನದ ೧೫ ನೇ ಅನುಚ್ಛೇದವು ಮಕ್ಕಳು ಹಾಗೂ ಮಹಿಳೆಯರಿಗೆ ವಿಶೇಷ ಸವಲತ್ತನ್ನು ನೀಡಿದೆ. ಇದು ಮಕ್ಕಳ ಉಲ್ಲಂಘಿಸಲಾಗದ ಪೌಷ್ಟಿಕಾಂಶ ಕುರಿತ ಕಾನೂನನ್ನು ತರಲು ಆಧಾರವಾಗಬಲ್ಲದು. ಮಕ್ಕಳು ನಾವು ಇದನ್ನು ಪರಿಹರಿಸುವವರೆಗೂ ಕಾಯಲಾಗುವುದಿಲ್ಲ ಅಥವಾ ತಮ್ಮಷ್ಟಕ್ಕೆ ತಾವೇ ನ್ಯಾಯವನ್ನು ಪಡೆಯಲಾಗುವುದಿಲ್ಲ. ಅವರು ಹಾಗೇ ಕಣ್ಮರೆಯಾಗುತ್ತಾರೆ ಅಥವಾ ಸರಾಸರಿಗಿಂತಲೂ ಕಡಿಮೆ ನಾಗರೀಕರಾಗಿ ಉಳಿದುಬಿಡುತ್ತಾರೆ. ಅದಕ್ಕೆ ನಾವೆಲ್ಲರೂ ಜವಾಬ್ದಾರರಾಗಿರುತ್ತೇವೆ.
ಅಡ್ವೊಕೇಟ್ ಜೆರಾಲ್ಡ್ ಡಿಸೋಜ, ನಿರ್ದೇಶಕರು ಸಂತ ಜೋಸೆಫರ ಕಾನೂನು ಕಾಲೇಜು (ಎಸ್‌ಜೆಸಿಎಲ್), ಬೆಂಗಳೂರು.
ಡಾ. ಸಿಲ್ವಿಯಾ ಕರ್ಪಗಂ, ಸಾರ್ವಜನಿಕ ಆರೋಗ್ಯ ವೈದ್ಯರು ಹಾಗೂ ಸಂಶೋಧಕರು.
ಕನ್ನಡ ಅನುವಾದ – ಅಜಯ್ ರಾಜ್
ಉಲ್ಲೇಖಗಳು:
೧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ಯುನಿಸೆಫ್ ಹಾಗೂ ಜನಸಂಖ್ಯಾ ಸಮಿತಿ, ೨೦೧೯. ಕಾಂಪ್ರಹೆನ್ಸಿವ್ ನ್ಯಾಷನಲ್ ನ್ಯೂಟ್ರಿಷನ್ ಸರ್ವೇ (ಸಿಎನ್‌ಎನ್‌ಎಸ್), ಕರ್ನಾಟಕ ವರದಿ, ನವ ದೆಹಲಿ.
2 Galler JR et al., “Malnutrition in the first year of life and personality at age 40.” J Child Psychol Psychiatry. 2013 Aug;54(8):911-9.
3 Galler JR et al., “Infant malnutrition is associated with persisting attention deficits in middle adulthood”. J Nutr. 2012
4 Birchfield L., & Corsi J., “The Right to Life Is the Right to Food: People’s Union for Civil Liberties v. Union of India & Others’
5 National Human Rights Commission “ RIght to food – a fundamental right” 28th February 2003
- https://www.thehindu.com/news/national/karnataka/Malnourishment-continues-to-be-high-among-children-in-Kalaburagi/article14430906.ece
- https://issuu.com/nsr08/docs/n_k_patil_report_sam_children
- https://www.deccanherald.com/state/top-karnataka-stories/hc-raps-govt-failing-to-control-malnutrition-deaths-777437.html
- https://www.prajavani.net/district/kalaburagi/dont-stop-giving-egg-students-protest-893184.html
- https://www.prajavani.net/karnataka-news/halappa-achar-says-will-not-stop-eggs-in-midday-meal-scheme-distribute-milk-who-do-not-eat-eggs-893748.html
- https://www.prajavani.net/district/kalaburagi/request-for-eggs-892913.html
- https://www.prajavani.net/district/kalaburagi/request-for-eggs-892913.html
- https://www.prajavani.net/district/kalaburagi/eggs-for-school-students-891920.html
- https://www.prajavani.net/karnataka-news/sfi-urges-government-should-not-bow-to-swamijis-opposition-on-egg-891706.html
- https://www.prajavani.net/karnataka-news/sfi-urges-government-should-not-bow-to-swamijis-opposition-on-egg-891706.html
- https://www.prajavani.net/district/mysore/ks-shivaram-urged-to-stop-politics-on-eggs-in-midday-meal-scheme-891146.html
- https://thelogicalindian.com/health/hunger-and-malnutrition-in-india-34296