ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ

ದಲಿತ ಚಳುವಳಿ ಮತ್ತು ಉರಿಚಮ್ಮಾಳಿಗೆ

ವಿ‌.ಎಲ್.ನರಸಿಂಹಮೂರ್ತಿ

ಎಂಬತ್ತರ ದಶಕದ ಕಡೆಗೆ ಮತ್ತು ತೊಂಬತ್ತರ ದಶಕದ ಶುರುವಿನಲ್ಲಿ ಕಾನ್ಷಿರಾಂ ಬಹುಜನ ಚಳುವಳಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿದರು. ಹಿಂದೂ ಸುಧಾರಣಾವಾದಿ ನಾಯಕರಿಗೆ ಪ್ರತಿಯಾಗಿ ದಲಿತ-ಬಹುಜನ ಚಿಂತಕರನ್ನು ಮುಖ್ಯವಾಹಿನಿಗೆ ತಂದರು. ಮುಖ್ಯವಾಹಿನಿಯಲ್ಲಿ ಅಲ್ಲಿವರೆಗೆ ಅಷ್ಟು ಪ್ರಾಮುಖ್ಯತೆ ಪಡೆಯದಿದ್ದ ಫುಲೆ ದಂಪತಿಗಳು, ಪೆರಿಯಾರ್, ನಾರಾಯಣಗುರು, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಅಯೋತಿದಾಸ್, ಅಯ್ಯನ್ ಕಾಳಿ ತರದ ದಲಿತ-ಬಹುಜನ ನಾಯಕರನ್ನು ಉತ್ತರ ಭಾರತದಲ್ಲಿ ಮನೆಮಾತಾಗಿಸಿದರು. ಕಾಂಗ್ರೆಸಿನ ಓಟ್ ಬ್ಯಾಂಕ್ ಆಗಿಯೇ ಉಳಿದಿದ್ದ ದಲಿತರನ್ನು ಸೆಳೆಯತೊಡಗಿದರು. ಗಾಂಧಿಯ ಕುತಂತ್ರದಿಂದಾಗಿ ಪೂನಾ ಒಪ್ಪಂದಕ್ಕೆ ಅಂಬೇಡ್ಕರ್ ಅವರನ್ನು ಸಹಿ ಹಾಕುವ ಹಾಗೆ ಮಾಡಿದ್ದರಿಂದ ಹೇಗೆ ದಲಿತ ರಾಜಕಾರಣ ‘ಚಮಚಾ ಯುಗ’ವಾಗಿ ಬಲಿಯಾಯಿತು ಎನ್ನುವುದನ್ನು ಕಾನ್ಷಿರಾಂ ಎತ್ತಿ ತೋರಿಸಿದರು. ಗಾಂಧಿಯ ಸುಧಾರಣಾವಾದಿ ಮನಸ್ಸನ್ನು ಭಂಜನೆ ಮಾಡತೊಡಗಿದ್ದರು. ದಲಿತ-ಬಹುಜನರು ಹಿಂದೂ ಬ್ರಾಹ್ಮಣಶಾಹಿಯಿಂದ ಬಿಡಿಸಿಕೊಳ್ಳುವುದಕ್ಕೆ ಬೇಕಾದ ಬೌದ್ಧಿಕತೆಯನ್ನು ದಲಿತ ಬಹುಜನ ಚಿಂತಕರಿಂದ‌ ತುಂಬತೊಡಗಿದರು. ಹಿಂದೂ ಧರ್ಮದಿಂದ ಹೊರಬಂದು ಬೌದ್ಧ ಧರ್ಮದ ಕಡೆಗೆ ದಲಿತರು ಹೋಗುವುದಕ್ಕೆ ಶುರುಮಾಡತೊಡಗಿದರು.

ಆಗ ಕರ್ನಾಟಕದ ಸಮಾಜವಾದಿಗಳು, ಗಾಂಧಿವಾದಿಗಳು ಗಲಿಬಿಲಿಗೊಂಡು ಕಾನ್ಷಿರಾಂ ಮತ್ತು ಬಿಎಸ್‌ಪಿಯ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ನಕಾರಾತ್ಮಕವಾಗಿ ಬಿಂಬಿಸತೊಡಗಿದರು. ಕಾನ್ಷಿರಾಂ ಅವರನ್ನು ನಾಥೂರಾಂ ಅವರಿಗೆ ಹೋಲಿಸುವುದು, ಬಿಎಸ್‌ಪಿಯನ್ನು ಐಡೆಂಟಿಟಿ ರಾಜಕಾರಣದ ದುಷ್ಟ ಪರಿಣಾಮ ಎಂದು ಬಿಂಬಿಸುವುದು ನಡೆಯಿತು. ಮೇಲ್ಜಾತಿಯ ಬುದ್ದಿಜೀವಿಗಳು ಕಾನ್ಷಿರಾಂ ಮತ್ತು ಬಹುಜನ ಚಳುವಳಿಯ ಬಗ್ಗೆ ಕಟ್ಟಿದ ಈ ನೆಗೆಟಿವ್ ನೆರೆಟಿವ್‌ಗಳಿಂದ ಅಕ್ಷರ ಕಲಿತ ದೊಡ್ಡ ದಲಿತ ಸಮುದಾಯ ಬಿಎಸ್‌ಪಿಯಿಂದ ಅಂತರ ಕಾಪಾಡಿಕೊಂಡು ದೂರ ಉಳಿಯಿತು.

ದಲಿತ ಚಳುವಳಿ ಚುನಾವಣಾ ರಾಜಕಾರಣಕ್ಕೆ ಹೋಗಬೇಕೋ ಬೇಡವೋ ಅಂತ ದಶಕಗಟ್ಟಲೆ ಚರ್ಚೆಗಳಲ್ಲೆ ಕಾಲ ಕಳೆದ ದಸಂಸದಲ್ಲಿ ಒಡಕುಂಟಾಗಿ ಚಳುವಳಿಯ ಕಾವು ಕಡಿಮೆಯಾಗತೊಡಗಿತ್ತು. ಆಗ ಬಿ.ಕೃಷ್ಣಪ್ಪನವರು ತಮ್ಮ ಬಣವನ್ನು ಬಿಎಸ್‌ಪಿಯ ಜೊತೆ ವಿಲೀನ ಮಾಡಿದರು. ರಾಜಕೀಯ ನಡೆಯಾಗಿ ಕೃಷ್ಣಪ್ಪನವರ ಈ ನಡೆ ಸರಿಯಾಗಿಯೇ ಇತ್ತು. ದಸಂಸ ಎರಡೂವರೆ ದಶಕಗಳ ಕಾಲ ಹೋರಾಟ ನಡೆಸಿ ಎಲ್ಲ ರೀತಿಯಲ್ಲಿ ಸುಸ್ತಾಗಿತ್ತು. ಬಿಎಸ್‌ಪಿಯ ಜೊತೆ ಸೇರಿ ಚುನಾವಣಾ ರಾಜಕೀಯ ಮಾಡಿದ್ದಿದ್ದರೆ ಇವತ್ತಿನ ಕರ್ನಾಟಕದ ರಾಜಕಾರಣ ಬೇರೆ ರೀತಿಯೇ ಇರಬಹುದಿತ್ತು. ಬಿಕೆ ಬಿಎಸ್‌ಪಿ ಸೇರಿದ್ದನ್ನು ಒಪ್ಪದಿದ್ದವರು ‘ಸರ್ವೋದಯ ಕರ್ನಾಟಕ’ ಸ್ಥಾಪನೆಯಾಗುವ ಹೊತ್ತಿಗೆ ಚುನಾವಣಾ ರಾಜಕಾರಣದ ಅಗತ್ಯವನ್ನು ಮನಗಂಡಿದ್ದರು.

ತೊಂಬತ್ತರ ದಶಕದಲ್ಲಿ ಕಾನ್ಷಿರಾಂ ಗಾಂಧಿಯನ್ನು ತಮ್ಮ ತೀವ್ರ ವಿಮರ್ಶೆಯ ಮೂಲಕ ಛಿದ್ರ ಮಾಡುತ್ತಿದ್ದಾಗ ಗಾಂಧಿವಾದಿ ಚಿಂತಕರಿಗೆ ಗಾಂಧಿಯನ್ನು defend ಮಾಡಿಕೊಳ್ಳುವ ಮಾರ್ಗ ಗೊತ್ತಾಗಲಿಲ್ಲ. ಆಶೀಶ್ ನಂದಿ, ಯು‌ಆರ್. ಅನಂತಮೂರ್ತಿ, ಯೋಗೇಂದ್ರ ಯಾದವ್ ತರದ ಗಾಂಧಿವಾದಿಗಳಿಗೆ ಆಗ ಸಿಕ್ಕಿದ್ದು ಕರ್ನಾಟಕದ ಮಹಾ ಬುದ್ದಿವಂತ, ಮಹತ್ವಾಕಾಂಕ್ಷೆಯ ಹುಡುಗ ಡಾ.ಡಿ.ಆರ್.ನಾಗರಾಜ್.

ಡಿಆರ್ ಬಹುಜನ ಚಳುವಳಿಯ ನೆರೆಟಿವ್‌ಗೆ ವಿರುದ್ಧವಾಗಿ ಗಾಂಧಿ-ಅಂಬೇಡ್ಕರ್ ಇಬ್ಬರೂ ಒಂದೇ ಅಂತ‌ ಕತೆ ಕಟ್ಟಿ The Flaming Feet ಬರೆದರು. ದಲಿತರು ಗಾಂಧಿಯ ಸುಧಾರಣಾವಾದವನ್ನು ನಿರಾಕರಿಸುತ್ತಿದ್ದಾಗ ಬಂದ ಈ ಕೃತಿಯಿಂದ ಗಾಂಧಿಯನ್ನು ಬಿಡಲೂ ಆಗದೆ ಕಟ್ಟಿಕೊಳ್ಳಲೂ ಆಗದೆ ಒದ್ದಾಡುತ್ತಿದ್ದ ದಲಿತ ಚಳುವಳಿಯ ಕೆಲವು‌ ನಾಯಕರು, ಲೇಖಕರಿಗೆ ಗಾಂಧಿಯನ್ನು ಒಪ್ಪಿಕೊಳ್ಳಲು ದೊಡ್ಡ ಅಸ್ತ್ರ ಸಿಕ್ಕಿತು. ದಲಿತ ಚಳುವಳಿ ಗಾಂಧಿವಾದಿ ಚಳುವಳಿಯೂ ಹೌದು ಅಂತ ದಲಿತ ಚಳುವಳಿಯ ಚರಿತ್ರೆಯನ್ನು ಬರೆಯುವ ಮೂಲಕ ಕರ್ನಾಟಕದ ದಲಿತ ಚಳುವಳಿ ಮತ್ತು ದಲಿತ ಸಾಹಿತ್ಯಕ್ಕೆ ಡಿ.ಆರ್. ನಾಗರಾಜ್ ದೊಡ್ಡ ದ್ರೋಹ ಮಾಡಿದರು.

ದೇಶದೆಲ್ಲೆಡೆ ಬಹುಜನ ಚಿಂತನೆ ಬೆಳೆಯಲು ಶುರುವಾದಾಗ ಕರ್ನಾಟಕದ ನೀನಾಸಂ ಮೂಲಕ ಗಾಂಧಿವಾದಿ ಹಿಡೆನ್ ಅಜೆಂಡಾ ಇಟ್ಟುಕೊಂಡು ಬಂದ ‘ವಿಸ್ತೃತಿ’ ಪರಿಕಲ್ಪನೆಯೊಂದಿಗೆ ದಲಿತರು, ಹಿಂದುಳಿದವರು ಹಿಂದೂಗಳು, ಹಿಂದೂ ಧರ್ಮದಲ್ಲಿಯೇ ದಲಿತ-ಬಹುಜನರಿಗೆ ಸಾಂಸ್ಕೃತಿಕ ಇತಿಹಾಸ ಇದೆ ಎನ್ನುವ ಭ್ರಮೆ ಮೂಡಿಸಿ ಹಿಂದೂ ಧರ್ಮದ ಆಚೆಗೆ ಯೋಚನೆ ಮಾಡದಂತೆ ಮಾಡಲಾಯಿತು. ಇದು ದಲಿತರು ಹಿಂದೂ ಧರ್ಮದಲ್ಲೆ ಇದ್ದು ವರ್ಣಾಶ್ರಮ ಧರ್ಮವನ್ನು ಅನುಸರಿಸಿಕೊಂಡು ಹೋಗಬೇಕು, ಜಾತಿ ಪದ್ಧತಿ ಉಳಿಯಬೇಕು ಎನ್ನುವ ಗಾಂಧಿವಾದಕ್ಕೆ ಹತ್ತಿರವಾದುದು. ಗಾಂಧಿ-ಅಂಬೇಡ್ಕರ್ ಚರ್ಚೆಯ ಮೂಲಕ ಡಿಆರ್ ಅಂಬೇಡ್ಕರ್ ಅವರಿಗೆ ದೊಡ್ಡ ಅನ್ಯಾಯ ಮಾಡಿದರು. ದಲಿತ ಚಳುವಳಿಯನ್ನು ಸೈದ್ಧಾಂತಿಕವಾಗಿ ದಿಕ್ಕುತಪ್ಪಿಸಿದರು.

ಇತ್ತ ಕರ್ನಾಟಕದ ಜಾಣ-ಜಾಣೆಯರ ಕಣ್ಮಣಿ ಲಂಕೇಶರು ಮಂಡಲ್ ವರದಿ ಜಾರಿಯಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ಕಿ ರಾಜಕೀಯವಾಗಿ ಬಲಗೊಳ್ಳಲು ಶುರುವಾದಾಗ, ಉತ್ತರಭಾರತದಲ್ಲಿ ಕಾನ್ಷಿರಾಂ ಪ್ರಬಲಗೊಳ್ಳುತ್ತಿದ್ದಾಗ ತಮ್ಮ ಟೀಕೆ ಟಿಪ್ಪಣಿಗಳಲ್ಲಿ ಗಾಂಧಿ ಭಜನೆ ಮಾಡಿಕೊಂಡು ಗಾಂಧಿವಾದವನ್ನು ಪುನರ್‌ಸ್ಥಾಪಿಸಲು ಪ್ರಯತ್ನ ಮಾಡಿದ್ದರು.

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ತಿರುಗಿ ನೋಡಿದರೆ ಬರಿ ಇಂತ ಎಡವಟ್ಟುಗಳೇ ಕಾಣಿಸುತ್ತವೆ.

ವಿ‌.ಎಲ್.ನರಸಿಂಹಮೂರ್ತಿ

ಇಂಗ್ಲಿಷ್ ಅಧ್ಯಾಪಕರು ಮತ್ತು ಸಾಂಸ್ಕೃತಿಕ ಚಿಂತಕರು