ಎಲುಬಿನ ಹಂದರದೊಳಗೆ: ಮೂಡ್ನಾಕೂಡು ಚಿನ್ನಸ್ವಾಮಿ

ಎಲುಬಿನ ಹಂದರದೊಳಗೆ: ಮೂಡ್ನಾಕೂಡು ಚಿನ್ನಸ್ವಾಮಿ

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಎಲುಬಿನ ಹಂದರದೊಳಗೆ ಕವನ ಸಂಕಲನದ ಮುನ್ನುಡಿಯ ಪೂರ್ಣಪಾಠ – ಸಬಿಹಾ ಭೂಮೀಗೌಡ

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಪರಿಚಯವು ಅವರ ‘ನಾನೊಂದು ಮರವಾಗಿದ್ದರೆ’ ಎಂಬ ಕವನದ ಮೂಲಕ ನನಗಾಯಿತು. ಈಗಾಗಲೇ ಹಲವರು ಈ ಕವನದ ಮಹತ್ವವನ್ನು ವಿಶ್ಲೇಷಿಸಿದ್ದಾರೆ. ಹೀಗಾಗಿ ಅದರ ವಿವರಕ್ಕೆ ಹೋಗುವುದಿಲ್ಲ. ಅಸ್ಪೃಶ್ಯತೆಯ ಆಚರಣೆಯು ಅದಕ್ಕೆ ತುತ್ತಾದ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಗೆಲ್ಲಾ ಕಾಡಬಹುದು, ಮುದುಡಿಸಬಹುದು ಮತ್ತು ಆ ವ್ಯಕ್ತಿ ತನ್ನ ಕೀಳರಿಮೆಯ ಸ್ವಮರುಕದ ಸ್ಥಿತಿಯಿಂದ ಹೊರಬರಲು ಹೇಗೆಲ್ಲ ಗುದ್ದಾಡಬೇಕಾಗುತ್ತದೆ ಎಂಬುದನ್ನು ಅಡಕವಾಗಿ ಮೇಲಿನ ಕವನವು ಹೇಳಿದೆ. ಇದನ್ನು ನಿರೂಪಿಸಲು ಕವಿ ರೋಷದ, ಅವೇಶದ ಅಥವಾ ತಿರಸ್ಕಾರದ ಭಾಷಾಮಾರ್ಗ ಹಿಡಿಯದೆ, ನಿರ್ದಿಷ್ಟ ಮಾನಸಿಕ ದೂರದಲ್ಲಿ ನಿಂತುಕೊಂಡು ಹೇಗೆ ಪರಿಣಾಮಕಾರಿಯಾಗಿ ಮನುಕುಲಕ್ಕೆ ದಾಟಿಸಲು ಸಾಧ್ಯ ಎಂಬ ಸಾಧ್ಯತೆಯ ಮಾರ್ಗ ಹಿಡಿದಿದ್ದಾರೆ. ಅವರ ‘ಎಲುಬಿನ ಹಂದರದೊಳಗೊಂದು’ ಎಂಬ ಕವಿತೆ ಕೂಡ ನನ್ನ ಗಮನ ಸೆಳೆದದ್ದು ವಿಜಯಪುರದಲ್ಲಿ ನಾದ ಮಣಿನಾಲ್ನೂರು ಅವರ ಹಾಡಿನಿಂದ(ಅನಂತರ ಒಕ್ಕೂಟದ ಗೆಳತಿಯರು ಹಾಡಿದ್ದನ್ನು ಕೇಳಿದೆ). ಕವಿತೆಯ ಕಲ್ಪನೆ ಮತ್ತು ವಿಷಯ ನಿರ್ವಹಣೆಯ ಕ್ರಮವು ನನ್ನಲ್ಲಿ ಅಚ್ಚರಿ ಮತ್ತು ಕುತೂಹಲವನ್ನು ಉಂಟುಮಾಡಿದವು. ಧರ್ಮ ಮತ್ತು ಅದರ ಆಚರಣೆಗಳು ಮನೆಮಟ್ಟಿಗೆ ಅಥವಾ ಮನೆಯ ಒಳಗೆ ಉಳಿಯುವಂತಾಗಬೇಕು. ಅವು ಮನೆಯ ಹೊರಗೆ ಬಂದಾಗ ಉಂಟುಮಾಡುವ ಅವಾಂತರಗಳು ಏನೇನು ಎಂಬುದನ್ನು ವರ್ತಮಾನದ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದೆ. ಇಲ್ಲಿ ಕವಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತನ್ನೊಳಗೇ ಸಕಲ ದೇವರನ್ನು ಹೊಂದುವ/ ಹೊಂದಿರುವ ಕಲ್ಪನೆಯನ್ನು ಬೆಳೆಸಿರುವುದು ವಿಶಿಷ್ಟವಾಗಿದೆ. ವಿಶ್ವಾತ್ಮಕತೆಯ ವಿನ್ಯಾಸವಾಗಿ ಇದನ್ನು ನೋಡಬೇಕು. ಈ ಉದಾತ್ತ ಕಲ್ಪನೆಯು ವರ್ತಮಾನದ ಪ್ರಕ್ಷುಬ್ಧ ಪರಿಸ್ಥಿತಿ ಮತ್ತು ಸಮಸ್ಯೆಗಳಿಗೆ ಆದರ್ಶೀಕೃತ ಪರಿಹಾರವಾಗಿ ಮೂಡಿದೆ. ಸೌಹಾರ್ದದ ಮೂಲ ಎಳೆಗಳು ಇಂಥ ಚಿಂತನೆಗಳಿಂದಲೇ ಬೆಳೆಯುತ್ತವೆ. ಈ ಕವಿತೆ ಹಾಡುಗಾರರ ವಲಯದಲ್ಲಿ ಇನ್ನಷ್ಟು ಬೆಳೆದುದನ್ನು ಕಂಡೆ. ಬಸವ, ಅಕ್ಕಮಹಾದೇವಿ, ಕಬೀರ, ಮೀರಾ, ಮಾರಿ, ಮೇರಿ ಹೀಗೆ ಹಲವರನ್ನು ಒಳಗೊಳಿಸಿಕೊಳ್ಳುತ್ತ, ಕವಿತೆಯ ಆಶಯವನ್ನು ವಿಸ್ತರಿಸುತ್ತ ಪಸರಿಸುತ್ತಿದೆ. ಆ ಮೂಲಕ ಕವಿತೆಯು ಜನಸಂಸ್ಕ್ರುತಿಯ ಭಾಗವಾಗಿ ವಿಕಸನ ಹೊಂದಿದೆ. ಇದು ಕವಿಯ ಮತ್ತು ಕವಿತೆಯ ಹೆಗ್ಗಳಿಕೆ.

ದಲಿತ ಕಾವ್ಯ ಎಂದೊಡನೆ ಓದುಗರಲ್ಲಿ ಮೂಡುವ ಸಿದ್ಧ ಪಡಿಯಚ್ಚುಗಳನ್ನು ಮೂಡ್ನಾಕೂಡು ಅವರ ಕವಿತೆಗಳು ಒಡೆಯುತ್ತವೆ. ಇವರ ಮೊದಲ ಕವನ ಸಂಕಲನ ಪ್ರಕಟವಾದುದು 1989(ಕೊಂಡಿಗಳು ಮತ್ತು ಮುಳ್ಳುಬೇಲಿಗಳು)ರಲ್ಲಿ. ಅಷ್ಟು ಹೊತ್ತಿಗೆ ದಲಿತ-ಬಂಡಾಯ ಸಾಹಿತ್ಯದ ಆರಂಭದ ರಭಸವು ತಹಬದಿಗೆ ಬಂದಿತ್ತು. ಅಬ್ಬರದ ಸಿಟ್ಟು- ಆವೇಶ- ಆಕ್ರೋಶಗಳು ಪ್ರಧಾನ ಧಾರೆಯ ಸಾಹಿತ್ಯಕ್ಕೆ ಚುರುಕು ಮುಟ್ಟಿಸಿ ಎಚ್ಚರಿಸಿದ್ದೇನೋ ನಿಜ. ಆದರೆ ಸಿಟ್ಟು-ಆವೇಶಗಳ ಸಾಧ್ಯತೆ ಮತ್ತು ಮಿತಿಗಳು ಬರಹಗಾರರ ಅರಿವಿಗೆ ಬರತೊಡಗಿದ್ದ ಕಾಲವದು. ಬಹುಶಃ ಅದಕ್ಕಾಗಿಯೇ ಮೂಡ್ನಾಕೂಡು ಚಿನ್ನಸ್ವಾಮಿ ಅವರು ತಮ್ಮ ಕಾವ್ಯ ಸ್ವರೂಪವನ್ನು ಸಿದ್ಧ ದಲಿತ ಕಾವ್ಯ ಮಾದರಿಗಿಂತ ಉದ್ದೇಶಪೂರ್ವಕವಾಗಿ ಭಿನ್ನವಾಗಿ ರೂಪಿಸಿಕೊಂಡಿರಬೇಕು. ಅಥವಾ ಈ ಸ್ವರೂಪವು ಅವರ ಸ್ವಭಾವಕ್ಕೆ ಸನಿಹದ್ದೂ ಆಗಿರಬಹುದು. ಏನೇ ಇರಲಿ ಈ ಪ್ರಯತ್ನದಲ್ಲಿ ಕವಿ ಯಶಸ್ಸನ್ನು ಕಂಡದ್ದು ಇಲ್ಲಿ ಉಲ್ಲೇಖನೀಯ.

ಕನ್ನಡ ಕಾವ್ಯದಲ್ಲಿ ಈಗಾಗಲೇ ಸುಪ್ರಸಿದ್ಧರಾಗಿರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ಪ್ರಸ್ತುತ ಸಂಕಲನಕ್ಕೆ ಮುನ್ನುಡಿಯ ಅಗತ್ಯ ಖಂಡಿತ ಇಲ್ಲ. ಅವರ ಈವರೆಗಿನ ಕವನ ಸಂಕಲನಗಳಿಂದ ಆಯ್ದ ಕವನಗಳಿಲ್ಲಿವೆ. ಇವುಗಳಿಗೆ ಕನ್ನಡದ ಪ್ರಸಿದ್ಧ ಚಿಂತಕರು, ಬರಹಗಾರರು ಅನೇಕರು ಮುನ್ನಡಿ ಬರೆದಿದ್ದಾರೆ. ಅವರೆಲ್ಲರ ವಿಚಾರಗಳಿಗಿಂತ ಹೊಸದಾಗಿ ನನಗೆ ಹೇಳಲು ಸಾಧ್ಯವೆಂದು ಭಾವಿಸಿಲ್ಲ. ಮಹಿಳೆಯರ ಪ್ರತಿಕ್ರಿಯೆ ತಿಳಿಯಲೆಂದೆ ನನಗೆ ಕೊಟ್ಟರೋ (ಎಂ ಎಸ್ ಆಶಾದೇವಿ ಒಬ್ಬರೇ ಮಹಿಳೆ ನನಗೆ ಗೊತ್ತಿರುವಂತೆ ಮುನ್ನುಡಿ ಬರೆದಿರುವುದು) ಎಂಬ ಸಣ್ಣ ಸಂದೇಹವೂ ಇದೆ. ಮುನ್ನುಡಿಯ ನೆಪದಲ್ಲಿ ಇವರ ಪ್ರಾತಿನಿಧಿಕ ಕವನಗಳನ್ನು ಒಟ್ಟಾಗಿ ಮತ್ತು ಒಂದೆಡೆ ಓದುವ ಅವಕಾಶ ಸಿಕ್ಕಿದ್ದು ನನಗೆ ಸಂತೋಷವನ್ನೂ ಓದಿನ ಲಾಭವನ್ನೂ ತಂದುಕೊಟ್ಟಿದೆ. ಅವರ ಎಲ್ಲ ಸಂಕಲನಗಳ ಪ್ರಾತಿನಿಧಿಕ ಕವಿತೆಗಳು ಇದರಲ್ಲಿ ಇವೆಯಾದರೂ ಕೊಂಡಿಗಳು ಮತ್ತು ಮುಳ್ಳುಬೇಲಿಗಳು, ಗೋಧೂಳಿ, ನಾನೊಂದು ಮರವಾಗಿದ್ದರೆ ಹಾಗೂ ಬುದ್ಧ ಬೆಳದಿಂಗಳು ಸಂಕಲನಗಳ ಕವಿತೆಗಳದು ಗರಿಷ್ಠ ಪಾಲು ಇದರಲ್ಲಿದೆ. 1989ರಿಂದ ಇದುವರೆಗಿನ ಕವಿಯ ಕಾವ್ಯದ ಹೆಜ್ಜೆ- ಗುರುತುಗಳನ್ನು ತಿಳಿಯಲು, ಅವರ ಕಾವ್ಯ ಸ್ವರೂಪದ ಮಜಲುಗಳನ್ನು ತೌಲನಿಕ ಅಭ್ಯಾಸಕ್ಕೆ ಒಳಪಡಿಸಲು ಪ್ರಸ್ತುತ ಕೃತಿಯು ಉಪಯುಕ್ತ ಆಕರವಾಗಿದೆ.

ಸಂಕಲನದ ಕವನಗಳನ್ನು ಸ್ಥೂಲವಾಗಿ ಎರಡು ಗುಂಪಾಗಿ ವಿಂಗಡಿಸಬಹುದು. ಮೊದಲನೆಯದು ಏಕಾಂತದ ಅಥವಾ ಸ್ವಗತದ ಮಾದರಿಯ ಕವನಗಳು. ಎರಡನೆಯದು ಲೋಕಾಂತದ ಅಥವಾ ಸಮಷ್ಟಿ ನೆಲೆಯ ಕವನಗಳು. ಈ ವಿಂಗಡನೆಯು ಕವನಗಳನ್ನು ವಿಶ್ಲೇಷಿಸಲು ಪೂರಕವಾಗಿ ಮಾಡಿದ್ದೇ ಹೊರತು, ಅವೇ ಅಂತಿಮವಲ್ಲ. ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಹಕ್ಕಿಯೊಂದು ಹಾರಿ ಬಂದು, ಪ್ರೀತಿಸುವುದೆಂದರೆ ಸುಟ್ಟುಕೊಳ್ಳುವುದು, ಕತ್ತಲನ್ನು ಕುರಿತು, ಯಾರು ನೀ ಕವಿತೆ, ನನ್ನ ಕವಿತೆಗೆ, ಕವಿತೆಯೆಂದರೆ, ರಮ್ಯ ಕವಿತೆಯೂ ಮತ್ತು ನಾನು ಮುಂದಾದುವು ಮೊದಲ ಮಾದರಿಯವು. ಇಲ್ಲಿ ಸ್ವ-ದ ಅನ್ವೇಷಣೆ, ವಿಶ್ಲೇಷಣೆ, ಸಮರ್ಥನೆಗಳು ಮುಖ್ಯವಾಗಿ ಸ್ವಗತದ ನೆಲೆಯಲ್ಲಿ ಕವಿತೆ ಸಾಗುತ್ತದೆ. ಇದನ್ನು ವಿವರಿಸುವುದಾದರೆ, ‘ಕಾವ್ಯ ಒಂದು ಅತ್ಯುತ್ತಮ ಬೌದ್ಧಿಕ ಚಟುವಟಿಕೆ, ಅದು ಎಲ್ಲ ಬರಹ ಪ್ರಕಾರಗಳ ತುತ್ತ ತುದಿ’ ಎಂಬುದು ಮೂಡ್ನಾಕೂಡು ಅವರ ನಂಬಿಕೆ. ಕವಿತೆ ಎಂದರೆ ಏನು, ಅದು ಹೇಗಿರಬೇಕು, ಏನನ್ನು ಒಳಗೊಂಡಿರಬೇಕು, ಅದರ ಉದ್ದೇಶ ಏನಾಗಿರಬೇಕು ಎಂಬುದರ ಹುಡುಕಾಟವು ಇವರ ಹಲವು ಕವನಗಳ ತಿರುಳಾಗಿದೆ.

ಕವಿತೆಯೆಂದರೆ ನಿರೀಕ್ಷೆಯ ಮುಂಜಾನೆ, ನಾಳಿನ ಒಳಗುದಿ, ಹಸುಳೆಯ ಮೊದಲ ಅಳು, ಅದರ ತುಟಿ ಅಂಚಲ್ಲಿ ಒಸರುವ ಕ್ಷೀರಧಾರೆ ಹೀಗೆ ಕವಿಯ ವಿಶ್ಲೇಷಣೆ ಸಾಗುತ್ತದೆ (ಕವಿತೆಯೆಂದರೆ). ಎಂದರೆ ನಿರೀಕ್ಷೆ, ಅನಿಶ್ಚಿತತೆ, ಉಸಿರು-ಜೀವ, ಅದಕ್ಕಾಧಾರವಾದ ಆಹಾರವಾಗಿ ಕಾವ್ಯವು ಕವಿಗೆ ಕಂಡಿದೆ. ‘ಇಂದು- ನಿನ್ನೆಗಳ ಮೆಟ್ಟಿನಿಂತು ಕವಿತೆಯು ನಾಳೆಯ ಸರದಾರ’ ಎಂದು ಕೊನೆಯಾಗುವ ಈ ಕವಿತೆಯು, ಭೂತ- ವರ್ತಮಾನಗಳಲ್ಲಿ ನಿಲ್ಲದೆ ಭವಿಷ್ಯಕ್ಕೆ ದಾರಿ ತೋರುವ, ಭರವಸೆ ನೀಡುವ ಶಕ್ತಿ ಹೊಂದಿದೆ ಎಂಬುದು ಸೂಚಿತವಾಗಿದೆ. ‘ಕವಿತೆ ಕತ್ತಲಾಳದ ಸೂರ್ಯೋದಯ’ ಮತ್ತು ‘ಬೆಳಕನಾವರಿಸಿದ ಕತ್ತಲೆ’ ಎಂಬ ಉಪಮೆಯೇ (ಯಾರು ನೀ ಕವಿತೆ) ವಿಶಿಷ್ಟವಾದುದು. ಕತ್ತಲೆ- ಬೆಳಕು ಒಂದು ನಾಣ್ಯದ ಎರಡು ಮಗ್ಗುಲುಗಳು ಎಂಬ ಅರಿವು ಮಾತ್ರ ದುಃಖದೊಳಗಿನ ಸುಖವನ್ನೂ ಸುಖದೊಳಗೂ ಉಸಿರಾಡುವ ನೋವನ್ನು ಗ್ರಹಿಸಬಲ್ಲದು. ಕಾವ್ಯಕ್ಕೆ ಆ ಶಕ್ತಿ ಇದೆ ಎಂಬುದು ಕವಿಯ ಆಶಯ.

ಸಾಮಾನ್ಯವಾಗಿ ಉಳ್ಳವರ, ಅಧಿಕಾರಸ್ಥರ, ಸುಖಭೋಗಿಗಳ, ರಮ್ಯ-ಪ್ರೇಮಿಗಳ, ವಲಯದಲ್ಲಿ ಮತ್ತು ಅನುಭವಗಳಲ್ಲಿ ವಿಹರಿಸುವ ಕಾವ್ಯದ ಜಾಡನ್ನು ಛೇಡಿಸುತ್ತ, ಅದು ಸಾಗಬೇಕಿರುವ ದಿಕ್ಕನ್ನು ‘ರಮ್ಯ ಕವಿತೆಯೂ ಮತ್ತು ನಾನು’ ಕವನವು ಸೂಚಿಸುತ್ತದೆ.

“….. ಈ ಬೇಡನ

ನನ್ನದೊಂದು ರಾಮಾಯಣವಿದೆ

ಮೈಯೆಲ್ಲಾ ರಣಗಾಯ

ಸಂತೈಸು ಬಾ ಪೊರೆ ನನ್ನನು”

ಎಂದು ಕಾವ್ಯದೇವಿಯನ್ನು ಕವಿ ಕರೆಯುತ್ತಾರೆ. ಉದ್ದಕ್ಕೂ ಹರಿತವಾದ ವ್ಯಂಗ್ಯ, ವಿಡಂಬನೆಗಳಿರುವ ಕವನವು ಬುದ್ಧ, ಬಸವ, ಗಾಂಧಿ, ಮದರ್ ತೆರೇಸಾ ಮುಂತಾದವರೆಲ್ಲ ಹೊಲಗೇರಿಗೆ ಮಿಡಿದುದಕ್ಕಾಗಿ ಮಾನ್ಯರಾದರು ಎಂಬ ಸತ್ಯವನ್ನು ಅನಾವರಣ ಮಾಡಿದೆ. ಹಾಗೂ ಕಾವ್ಯದ ವರ್ತಮಾನದ ಜವಾಬ್ದಾರಿ ಇರುವುದು ಅಲ್ಲಿ ಎಂದು ನಿರ್ದೇಶಿಸಿದೆ.

‘ಹಕ್ಕಿಯೊಂದು ಹಾರಿಬಂದು’ ಕವಿತೆಯಲ್ಲಿ ಹೊರಗಿನಿಂದ ಬಂದ ಹಕ್ಕಿಯು ಕವಿಯ ಕಣ್ಣ ರೆಪ್ಪೆಯ ಮೇಲೆ ಕುಳಿತು, ಹೊಸ ಕಾಣ್ಕೆಯನ್ನು ನೀಡುತ್ತದೆ. ಈ ಹಕ್ಕಿಯು ಕವಿಯಲ್ಲಿ ಭಾವತೀವ್ರತೆಯನ್ನು ಉಂಟು ಮಾಡಿ, ಬತ್ತಿದ ಭಾವಗಳಿಗೆ ಜೀವಜಲ ತುಂಬಿ, ಮಾನವೀಯಗೊಳಿಸುವ ಬಗೆ ಅನನ್ಯವಾಗಿದೆ. ‘ಪ್ರೀತಿಸುವುದೆಂದರೆ ಸುಟ್ಟುಕೊಳ್ಳುವುದು’ ಎಂಬುದು ಇನ್ನೊಂದು ಮುಖ್ಯ ಕವನ. ಪ್ರೀತಿಯ ಕುರಿತ ರಮ್ಯ ಕಲ್ಪನೆಗಳನ್ನು ನಿರಾಕರಿಸಿ ಅದು ವ್ಯಕ್ತಿ- ವ್ಯಕ್ತಿತ್ವವನ್ನು ಸುಟ್ಟುಕೊಂಡು, ಲಯವಾಗುವುದೂ ಆಗಿದೆ ಎನ್ನುತ್ತದೆ. ಪ್ರೀತಿಗೆ ಆದಿ ಅಂತ್ಯಗಳಿಲ್ಲ. ಸುಟ್ಟ ಬೂದಿಯಿಂದಲೇ ಮರುಹುಟ್ಟು ಪಡೆವ ಶಕ್ತಿ ಪ್ರೀತಿಗಿದೆ ಹಾಗೂ ಇದು ನಿರಂತರ ಆವರ್ತನಗೊಳ್ಳುತ್ತದೆ. ಇದೇ ಪ್ರೀತಿಯ ನಿಜವಾದ ಶಕ್ತಿ ಮತ್ತು ಗುಣವಿಶೇಷ ಎನ್ನುವ ಕವಿತೆ ಹೊಸ ಆಯಾಮವನ್ನು ಪ್ರೀತಿಗೆ ನೀಡಿದೆ.

‘ನಾನೊಂದು ಮರವಾಗಿದ್ದರೆ’ ‘ಚಪ್ಪಲಿ ಮತ್ತು ನಾನು’ ಕವಿತೆಗಳಲ್ಲಿ ದಲಿತ ಸ್ತರದ ಅವಮಾನ, ಹಿಂಸೆ, ವೈರಾಗ್ಯಗಳು ಆತ್ಮಘನತೆಯ ನೆಲೆಯಿಂದ, ಕೆಲವೊಮ್ಮೆ ತೀವ್ರವಾದ ವಿಷಾದದಿಂದ ನಿರೂಪಿತವಾಗಿವೆ. ಮೂಡ್ನಾಕೂಡು ಅವರ ಕಾವ್ಯಭಾಷೆಯ ವೈಶಿಷ್ಟವೇ ಇದು. ಭಾವಾವೇಶ, ಆಕ್ರೋಶ ಅವರ ಮಾದರಿಯಲ್ಲ. ಸಮಚಿತ್ತದ, ವ್ಯಕ್ತಿ ಗೌರವದ, ಎಲ್ಲೆಯೊಳಗೇ ಸುಳಿದಾಡುತ್ತದೆ. ವಿಡಂಬನೆ, ಸೂಕ್ಷ್ಮ ವ್ಯಂಗ್ಯದ ಮೂಲಕ ನಿಷ್ಠುರ ಸತ್ಯಗಳ ಅನಾವರಣ ಮಾಡುತ್ತದೆ.

ಊಳಿಗಮಾನ್ಯ ವ್ಯವಸ್ಥೆಯಲ್ಲಿ ದಲಿತರ ಬದುಕನ್ನು, ಅವರ ದುಡಿಮೆಯ ಅಪಮೌಲೀಕರಣವನ್ನು, ದಲಿತ ಸಮುದಾಯದ ಮೌಢ್ಯ, ಯಥಾಸ್ಥಿತಿವಾದಗಳನ್ನು ಇರುವಂತೆಯೇ ಚಿತ್ರಿಸುವ ಹಲವು ಕವನಗಳು ಸಂಕಲನದಲ್ಲಿ ಇವೆ. ‘ನಾ ಮೆಟ್ಟಿದ ಜೋಡು’ ಕವಿತೆಯು ಜೋಡನ್ನೂ ದಲಿತರ ಬದುಕನ್ನೂ ಸಮೀಕರಿಸುತ್ತ, ಜೋಡಿನಂತೆ ದಲಿತರ ಸ್ಥಿತಿ ಇರುವುದನ್ನು ವಿವರಿಸುತ್ತದೆ. ‘ನಾನೂ ಹಾಗೆ/ ನನ್ನ ಮೆಟ್ಟೂ ಹಾಗೆ’ ಎಂಬ ಕವನದ ಕೊನೆಯು ಯಥಾಸ್ಥಿತಿವಾದಕ್ಕೆ ಒತ್ತು ನೀಡಿದಂತೆ ಭಾಸವಾಗುತ್ತದೆ. ಆಗಿಹೋದ, ನಡೆಯುತ್ತಿರುವ ದಲಿತ ಚಳವಳಿಯ ಯಾವ ಪ್ರಭಾವವೂ ದಲಿತರ ಮೇಲೆ, ಅವರ ಸ್ವಭಾವ ಮತ್ತು ಅವರ ಚಿಂತನೆಗಳ ಮೇಲೆ ಆಗಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಇಂದಿನ ಓದುಗರಲ್ಲಿ ಏಳುತ್ತದೆ.  ‘ನಾನೊಂದು ಮರವಾಗಿದ್ದರೆ’ ಕವನದ ಕೊನೆಯು ಹೋಮಾಗ್ನಿಯಲಿ ಬೆಂದು ಪಾವನವಾಗುವ, ಸತ್ಪುರುಷನ ಹೆಣಕ್ಕೆ ಚಟ್ಟವಾಗುವ ಅವಕಾಶವಾದರೂ ತಾನು ಮರವಾಗಿದ್ದರೆ ಸಿಗುತ್ತಿತ್ತೇನೋ ಎಂದು ಕನಸುವ ರೀತಿಯಲ್ಲಿದೆ. ಯಾವ ವೈದಿಕ ಸಂಸ್ಕ್ರುತಿಯು ಅಸ್ಪೃಶ್ಯತೆಯ ಆಚರಣೆಯ ಮೂಲಕ ತನ್ನ ಸಕಲ ಸಂಕಟಕ್ಕೂ ಕಾರಣವಾಗಿದೆಯೋ ಅದರದೇ ಭಾಗವಾಗುವ ದಲಿತನ ಕನಸು ಪ್ರತಿಗಾಮಿ ಎಂಬ ಆಕ್ಷೇಪಕ್ಕೆ ಕಾರಣವಾಗಬಹುದು. ಇಲ್ಲಿ ಮುಟ್ಟಿಸಿಕೊಳ್ಳುವ ದಲಿತರ ತುರ್ತು ಅಥವಾ  ತೀರದ ಅಭೀಪ್ಸೆಯು ಅವರನ್ನು ಅದೇ ವರ್ತುಲದೊಳಗೆ ಸೇರಿಕೊಳ್ಳುವಂತೆ ಮಾಡುವುದು ಕೆಲವರಿಗೆ ಹತಾಶೆ ಮತ್ತು ವಿಷಾದವನ್ನು ತಂದರೆ, ಮುಟ್ಟಿಸಿಕೊಳ್ಳುವ ಹಂಬಲ ಅದಕ್ಕಿಂತಲೂ ಹಿರಿದಾಗಿದೆ ಎಂಬಂತೆ ಕವಿತೆ ಕೊನೆಯಾಗುತ್ತದೆ. ಹೀಗೆ ಕವನಗಳು ಯಥಾಸ್ಥಿತಿವಾದಕ್ಕೆ ಒತ್ತುಕೊಟ್ಟದ್ದು ಕಂಡಾಗ ಕವಿಯ ದಲಿತತ್ವದ ಕುರಿತು ಪ್ರಶ್ನೆಗಳು ಏಳುತ್ತವೆ. ಇವಕ್ಕೆ ಪ್ರತಿಯಾಗಿ ಜಾಗೃತ ದಲಿತ ಪ್ರಜ್ಞೆಯ ಪ್ರತಿಕ್ರಿಯೆಗಳು ಅಸ್ಪೃಶ್ಯರು, ಜೀತದಾಳಿನ ಗಾಥೆ, ಗೆದ್ದಲು ಹುಳುಗಳು, ಸಮಾನತೆಯ ಹಾಡು, ಪಲಾಯನ ಮುಂತಾದ ಕವನಗಳಲ್ಲಿ ಒಡಮೂಡಿದೆ.

ಆಧುನಿಕಪೂರ್ವ ಕಾಲದಿಂದ ಜಾರಿಗೆ ಬಂದ ಜೀತ ಪದ್ಧತಿಯು ಇಂದಿಗೂ ಮುಂದುವರಿದಿರುವುದನ್ನು ಹಂಗರಹಳ್ಳಿಯ ಜೀತ ಪ್ರಕರಣದ ಮೂಲಕ ಚರ್ಚೆಗೆ ಎತ್ತಿರುವ ‘ರೋಮನ್ ರಾಜ್ಯದ ಗುಲಾಮನೂ ಹಂಗಾರಹಳ್ಳಿಯ ಜೀತಗಾರನೂ’ ಕವಿತೆಯು, ಕಾಲ ಸರಿದಂತೆ ಜೀತವೂ  ಕ್ರೂರವಾಗಿರುವುದನ್ನು ವಿವರಿಸುತ್ತದೆ.

“ಕಮಕ್ ಗಿಮಕ್ ಎಂದರೆ

ಸರಪಳಿಯಿಂದ ಬಿಗಿದ

ಕೀವು ತುಂಬಿದ ಗಾಯದ ಕಾಲಿಗೆ

ಸಿಹಿ ನೀರು ಸುರಿದು

ಇರುವೆಗಳನ್ನು ಬಿಡುತ್ತಾರಂತೆ”

ಇಲ್ಲಿ ಶೋಷಣೆ ಕುರಿತಂತೆ ಆಕ್ರೋಶಕ್ಕಿಂತ ಅದರ ಕ್ರೌರ್ಯದ ಸ್ವರೂಪವನ್ನು ಹಿಡಿದಿಡುವುದು ಕವಿಯ ಆಸ್ಥೆಯಾಗಿದೆ. ಅಜ್ಜ, ಅಪ್ಪರನ್ನು ಸುಟ್ಟ ಸವರ್ಣೀಯ ಸಮಾಜವು ತನ್ನನ್ನೇನು ಮಾಡದು ಎನ್ನುವ ಹೊಸತಲೆಮಾರು,

“ಈಗ ನನ್ನನ್ನವರು ಸುಡಲಾರರು,

…….. .. ಯಾಕೆಂದರೆ ನಾನು

ಅಜ್ಞಾನವನ್ನು ಸುಡುವ ಅಕ್ಷರವಾಗಿದ್ದೇನೆ

ಸಾವಿಲ್ಲದ ಸತ್ಯಕ್ಕೆ ಸಾಕ್ಷಿಯಾಗಿದ್ದೇನೆ”

(ಬೂದಿ ಮಾತ್ರ ಬಲ್ಲದು ಬೇಯುವ ಬೇಗೆಯನ್ನು)

ಎನ್ನುತ್ತದೆ. ಎಳೆಯ ತಲೆಮಾರಿಗೆ ಅಕ್ಷರದ ಶಕ್ತಿಯು ಅರಿವಿಗೆ ಬಂದಿದೆ, ಅದೇ ಅವರ ಆತ್ಮಘನತೆಯ ಬದುಕಿಗೆ ಇಂಬಾಗಿದೆ. ಆನೆಯಂತಿದ್ದ ತನ್ನನ್ನು ಖೆಡ್ಡಾಗೆ ಕೆಡವಲಾಗಿದೆ, ತನ್ನ ದುಡಿಮೆಯ ಅಪಮೌಲೀಕರಣ ಮಾಡಲಾಗಿದೆ ಎಂಬ ಜಾಗೃತ ದಲಿತ ಪ್ರಜ್ಞೆಗೆ, ತನ್ನ ಶಕ್ತಿಯ ಅರಿವಿದೆ. ತಾನು ಸಿಡಿದೆದ್ದರೆ ಸವರ್ಣಿಯರ ಮೇಲೆ ಆಗುವ ಪರಿಣಾಮದ ಅರಿವೂ ಇದೆ.

“ಅಂಕುಶವಿಟ್ಟು

ನಿಯಂತ್ರಿಸುವ ಮಾವುತ

ನನ್ನ ಪಾದಕ್ಕೆ ಸಿಕ್ಕಿದರೆ

ನೀ ಹತ, ನಿನ್ನವರಿಗೆ ಅನಾಹುತ…..

ನೋಡುತಿವೆ ಈ ದಂತದ ಕೊಂಬುಗಳು

ಎಂದಾದರೊಂದು ದಿನ

ನಾನು ಘೀಳಿಟ್ಟರೆ- ಜೋಕೆ

ತಿರುಗಿ ತಿವಿದಾವು- ಇಲ್ಲ

ಇರಿದಾವು ”

(ಜೀತದಾಳಿನ ಗಾಥೆ)

ಹೀಗೆ ತನ್ನ ಸಹನಾಶಕ್ತಿಯ ಬಗ್ಗೆ ಎಚ್ಚರವೂ, ಮುಂದಿನ ಪರಿಣಾಮಗಳ ಅರಿವೂ ಇಟ್ಟುಕೊಂಡೇ, ಸಿಡಿದೇಳುವ ಸಾಧ್ಯತೆಯನ್ನು ಕವಿತೆ ಅರುಹುತ್ತದೆ. ಇಂತಹ ಕೆಚ್ಚು ವೈಯಕ್ತಿಕ ನೆಲೆಯಲ್ಲಿ ಪ್ರಕಟವಾಗಿದೆ, ಅದಕ್ಕೊಂದು ಸಾಂಘಿಕ ರೂಪ ದೊರಕಿಲ್ಲ.

“ಹಿಂದೂ ಧರ್ಮದಲ್ಲಿ ಇದ್ದರೆ ತನ್ನ ಮೇಲೆ ಯಾರೋ ಕೂತಿದ್ದಾರೆ ಎಂಬ ಅರಿವೇ ಅಸ್ವಸ್ಥಗೊಳಿಸುತ್ತದೆ” ಎಂದು ಸಂದರ್ಶನವೊಂದರÀಲ್ಲಿ ಹೇಳಿದ ಮೂಡ್ನಾಕೂಡರು ಆ ಭಾವಕ್ಕೆ  ಅಸ್ಪೃಶ್ಯರು ಎಂಬ ಕವನದಲ್ಲಿ ಅಭಿವ್ಯಕ್ತಿ ನೀಡಿದ್ದಾರೆ. ಅಸ್ಪೃಶ್ಯತಾ ಆಚರಣೆಯು ಕೀಳರಿಮೆಯ ಹೆಣಭಾರವನ್ನು ದಲಿತರ ಮೇಲೆ ಹೇರಿದೆ. ಮಬ್ಬು ಮುಸುಕಿದ ಭಾವ, ಜಡ್ಡು ಹಿಡಿದ ಚೇತನ, ಮುಟ್ಟಿದರೆ ಮುನಿ ಗಿಡದಂತೆ ಹುಟ್ಟು ರೋಗವು ಅವರನ್ನು ಆವರಿಸಿದೆ ಎನ್ನುತ್ತಾರೆ. ಇಷ್ಟಾದರೂ ಸವರ್ಣಿಯರ ವ್ಯಂಗ್ಯ, ಕುಹಕಗಳ ನಡುವೆಯೂ ‘ಸೊಲೊಪ್ಪದೆ ನಡೆದಾಡುವ ನಾವು ನಾಗರಿಕತೆಯ ಅಪವಾದಗಳು’ (ಅಸ್ಪೃಶ್ಯರು) ಎನ್ನುವಲ್ಲಿನ ವಿಷಾದವು ಪ್ರತಿರೋಧದ ಒಂದು ಮಾರ್ಗವೇ ಆಗಿದೆ. ಅಸ್ಪೃಶ್ಯತಾ ಆಚರಣೆಯ ಇಂಥ ಹೇಯ ಕೃತ್ಯವನ್ನು ಸವರ್ಣೀಯರ ‘ಅಂತಃಕರಣವೆಂಬ ಗಂಗಾಳ ತುಕ್ಕು ಹಿಡಿದಿತ್ತು’  ‘ವಿವೇಕವೆಂಬ ಆಕಳನ್ನು ಹೊರಗೆ ಗೂಟಕ್ಕೆ ಕಟ್ಟಿದ್ದರು’ ಎಂದು ಅತ್ಯಂತ ಸಂಯಮದಿಂದ ಮತ್ತು ವ್ಯಂಗ್ಯವಾಗಿ ವಿರೋಧಿಸಿದ್ದಾರೆ.

ದಲಿತ ಕವಿ ಸಿದ್ದಲಿಂಗಯ್ಯ ಅವರ ‘ನನ್ನ ಜನಗಳು’ ಕವಿತೆಯ ನೆರಳಂತೆ ಸಾಗುವ ಮೂಡ್ನಾಕೂಡು ಅವರ ‘ನನ್ನ ಹತ್ತಿರದ ಬಂಧುಗಳು’ ಕವನ ಗಮನಾರ್ಹವಾಗಿದೆ. ಇಲ್ಲಿಯೂ ಶ್ರಮದ ಮೂಲಕ ದಲಿತ ಜಗತ್ತು ತೆರೆದುಕೊಂಡಿದೆ; ದಲಿತರ ಇರುವಿಕೆಯು ಹೀಗೇ ಮುಂದುವರಿಯಬೇಕೇ ಎಂಬ ಪ್ರಶ್ನೆ ಮತ್ತು ಅದಕ್ಕುತ್ತರವನ್ನು ಓದುಗರಿಗೇ ಬಿಡುವುದರಲ್ಲಿ ಕವಿ ಆಸ್ಥೆ ಹೊಂದಿದ್ದಾರೆ. ಕವಿಯ ಸಂಯಮ ಮತ್ತು ಅಭಿವ್ಯಕ್ತಿ ಕ್ರಮದ ಅನನ್ಯತೆ ‘ಸಮಾನತೆಯ ಹಾಡು’ ‘ಪಲಾಯನ’ ಮುಂತಾದ ಕವಿತೆಗಳಲ್ಲಿ ಹರಳುಗಟ್ಟಿದೆ. ಸಮಾನತೆಯ ನಾಡನ್ನು ಕಟ್ಟುವುದು ಮೂಲಭೂತವಾಗಿ ದಲಿತರನ್ನು ಮುಟ್ಟಿ, ಅವರ ಮನವನ್ನು, ಅಂತರಂಗವನ್ನು ತಟ್ಟಿ, ಅವರೊಡನೆ ಒಡನಾಟವನ್ನು ಬೆಳೆಸಿಕೊಳ್ಳದೆ ಅಸಾಧ್ಯ ಎಂದು ಎಚ್ಚರಿಸುತ್ತಾರೆ. ತಾಯ್ನಾಡನ್ನು ಪ್ರೀತಿಸಬೇಕೆಂದು ಹೇಳುವ ನೀವು ನಮಗೆ ಕೊಟ್ಟ ಬದುಕಾದರೂ ಎಂಥದ್ದು ಎಂಬ ತಾರ್ಕಿಕ ಪ್ರಶ್ನೆಯನ್ನು ‘ಪಲಾಯನ’ ಕವಿತೆ ಎತ್ತುತ್ತದೆ. ಈ ವ್ಯವಸ್ಥೆಯಲ್ಲಿ ನಿಮ್ಮನ್ನು ನಾವು ಶಪಿಸದಿರುವುದೇ ನಮ್ಮ ಸಭ್ಯತೆಗೆ ಸಾಕ್ಷಿ ಎನ್ನುವ ಕವಿಗೆ ಆತ್ಮಘನತೆ ಮುಖ್ಯವಾಗಿದೆಯೇ ಹೊರತು ಆಕ್ರೋಶವಲ್ಲ.

ಕವಿಗೆ ಪುಟ್ಟ ವಿಷಯವನ್ನು ಅಡಕವಾಗಿ ಹಿಡಿದಾಡುವುದರಲ್ಲಿ ಇರುವ ಆಸಕ್ತಿಯು, ದೀರ್ಘ ಕವನ ಅಥವಾ ಕಥನಕವನಗಳ ರಚನೆಯಲ್ಲಿ ಇಲ್ಲ ಎನಿಸುತ್ತದೆ. ಆದಾಗ್ಯೂ ಅಜ್ಜಿ ಮತ್ತು ಮೊಮ್ಮಗಳು, ಚಿಂದಿ ಆಯುವ ಚಿಣ್ಣನಿಗೆ, ಚಪ್ಪಲಿ ಮತ್ತು ನಾನು, ರಸ್ತೆ ಬದಿಯ ಮರ, ರೈಲಿನ ಅಂತರಂಗ- ಬಹಿರಂಗ ಮುಂತಾದ ಕವಿತೆಗಳು ಕಥನ ಕವನಗಳ ಸ್ವರೂಪವನ್ನು ಒಳಗೊಂಡು ಭಿನ್ನ ನಿರೂಪಣಾ ಮಾದರಿಗೆ ನಿದರ್ಶನಗಳಾಗಿವೆ. ಮೂಡ್ನಾಕೂಡು ಅವರ ವಿಡಂಬನಾ ಗುಣವನ್ನು ಸಂಬಂಧಗಳು ಅಂದು-ಇಂದು, ಸರ್ವಾಂತರ್ಯಾಮಿಯ ಜನನ, ಚುನಾವಣೆಯ ಸಮಯದಲ್ಲಿ, ಚಲಾವಣೆಯ ನಾಣ್ಯಗಳು, ಆತ್ಮಸಾಕ್ಷಿಯ ಕರೆಗೆ, ಅಸ್ತಿತ್ವ, ರೈಲಿನ ಅಂತರಂಗ-ಬಹಿರಂಗ ಮುಂತಾದ ಕವನಗಳಲ್ಲಿ ಗುರುತಿಸಬಹುದು. ಎಲ್ಲೂ ಗಾಢವಾಗಿ ಯಾರನ್ನೂ ನೋಯಿಸಲು ಇಚ್ಛಿಸದ ಅವರ ಸ್ವಭಾವವೇ ವಿಡಂಬನೆಯ ಒಳಗೂ ಕೆಲಸಮಾಡಿದೆ. ಬಹುಶಃ ‘ಸೂಕ್ಷ್ಮತೆ ಬೆಳೆಸಿಕೊಳ್ಳುವುದಾದರೆ ಬೆಳೆಸಿಕೋ, ನಮ್ಮನ್ನು ಅರ್ಥಮಾಡಿಕೊಳ್ಳುವುದಾದರೆ ಅದಕ್ಕೆ ಸಿದ್ಧತೆ ಮಾಡಿಕೋ; ನಿನಗಾಗಿ ನಾನು ಒರಟಾಗಲಾರೆ; ಕಟುತ್ವದ ಸಂಗ ಮಾಡಲಾರೆ’ ಎಂಬಂತೆ ಅವರ ಕಾವ್ಯ ಜಗತ್ತು ಸಾಗಿದೆ. ಬುದ್ಧ, ಬೌದ್ಧ ತಾತ್ವಿಕತೆಯ ಒಲವು ಅವರ ಕಾವ್ಯ ಭಾಷೆಯ ಇಂಥ ಸಜ್ಜನಿಕೆಯಲ್ಲಿ ಕೆಲಸ ಮಾಡಿರಬಹುದೇ ಎಂಬ ಕುತೂಹಲ ನನ್ನದು.

ಕೊನೆಯ ಮಾತಾಗಿ ಹೇಳುವುದಾದರೆ, ದಲಿತ ಚಳವಳಿಯು ಆರಂಭವಾಗಿ ದಶಕದ ನಂತರ ಸಾಹಿತ್ಯ ಕೃಷಿಯಲ್ಲಿ ಹೆಚ್ಚು ಕೆಲಸ ಮಾಡಿರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ಕಾವ್ಯ ಜಗತ್ತು, ಬಾಹ್ಯದ ದಲಿತ ಚಳವಳಿಯ ಆಗುಹೋಗುಗಳತ್ತ, ದಲಿತ ಸಮುದಾಯದ ಒಗ್ಗೂಡುವಿಕೆ ಮತ್ತು ವರ್ತಮಾನದ ಕಠೋರ ವಾಸ್ತವಗಳ ವಿರುದ್ಧ ಗಟ್ಟಿ ದನಿ ಎತ್ತದಿರುವುದು ಅಚ್ಚರಿ ಎನಿಸುತ್ತದೆ. ಅದೇ ರೀತಿಯಲ್ಲಿ ದಲಿತ ಮಹಿಳಾ ಜಗತ್ತು ಮತ್ತು ಒಟ್ಟಾಗಿ ಮಹಿಳಾ ಜಗತ್ತು ಈ ಸಂಕಲನದ ಕವನಗಳಲ್ಲಿ ಅವಕಾಶ ಪಡೆದಿರುವುದು ಕಡಿಮೆ. ಹೀಗಾಗಲು ಕವನಗಳ ಆಯ್ಕೆಯ ಮಾನದಂಡವು ಕಾರಣವೋ ಗೊತ್ತಿಲ್ಲ. ಈಗಾಗಲೇ ದೇಶ-ವಿದೇಶಗಳ ಹಲವು ಭಾಷೆಗಳಲ್ಲಿ ಅನುವಾದಗೊಂಡಿರುವ ತಮ್ಮ ಕವಿತೆಗಳ ಮೂಲಕ ವಿಶಿಷ್ಟ ಮತ್ತು ಮಹತ್ವದ ಸ್ಥಾನವನ್ನು ಪಡೆದಿರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ಮುಂದಿನ ಕಾವ್ಯ ಜಗತ್ತು ಇನ್ನಿಷ್ಟು ವಿಸ್ತಾರಗೊಳ್ಳಲಿ.

 

ಸಬಿಹಾ ಭೂಮೀಗೌಡ  – ವಿಶ್ರಾಂತ ಕುಲಪತಿಗಳು, ಲೇಖಕಿ ಮತ್ತೆ ವಿಮರ್ಶಕಿ

ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಪೂರ್ಣ ಪರಿಚಯ

ಗಡಿನಾಡು ಚಾಮರಾಜನಗರ ಜಿಲ್ಲೆಯವರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ (1954) ಕನ್ನಡದ ಹಿರಿಯ ಕವಿ, ಲೇಖಕ ಹಾಗೂ ಚಿಂತಕರು. ಎಂ.ಕಾಂ., ಎಂ.ಎ. (ಕನ್ನಡ), ಡಿ.ಲಿಟ್. ಪದವೀಧರರಾದ ಇವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿರ್ದೇಶಕರು (ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರು ಹುದ್ದೆಯಿಂದ ಮಾರ್ಚ್ 2014 ರಲ್ಲಿ ನಿವೃತ್ತಿ ಹೊಂದಿರುತ್ತಾರೆ.

ಏಪ್ರಿಲ್ 2015 ರಿಂದ ಮಾರ್ಚ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಂಬೇಡ್ಕರ್ ಪೀಠದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಇವರ ಪ್ರವೃತ್ತಿ ಸಾಹಿತ್ಯ, ಸಂಸ್ಕøತಿ, ಸಮಾಜ ಸೇವೆ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಚಾಚಿಕೊಂಡಿದೆ. ಇವರ ಪ್ರಮುಖ ಆಸಕ್ತಿ ಕವಿತೆಯಾದರೂ ಕತೆ, ನಾಟಕ, ಅನುವಾದ, ಸಂಪಾದನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ದುಡಿದು ಇದುವರೆಗೆ 38 ಪುಸ್ತಕಗಳನ್ನು ಹೊರತಂದಿದ್ದಾರೆ.

ಮತ್ತೆ ಮಳೆ ಬರುವ ಮುನ್ನ, ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಬುದ್ಧ ಬೆಳದಿಂಗಳು ಪ್ರಮುಖ ಕವಿತಾ ಸಂಕಲನಗಳು. ಮೋಹದ ದೀಪ, ಪಾಪಪ್ರಜ್ಞೆ, ಕಥೆಗಳು. ಕೆಂಡ ಮಂಡಲ, ಬಹುರೂಪಿ – ನಾಟಕಗಳು ಹಾಗೂ ವೈಚಾರಿಕ ಬರಹಗಳಾದ, ಒಂದು ಕೊಡ ಹಾಲಿನ ಸಮರ, ಅಪರಿಮಿತದ ಕತ್ತಲೆ, ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಇವರ ಇತರ ಪ್ರಮುಖ ಗದ್ಯ ಕೃತಿಗಳು.

ಇವರ ಕವಿತೆಗಳು ಅನೇಕ ಭಾರತೀಯ ಭಾಷೆಗಳೂ ಸೇರಿದಂತೆ ಇಂಗ್ಲೀಷ್, ಸ್ಪ್ಯಾನಿಷ್, ಫ್ರೆಂಚ್ ಹಾಗೂ ಹೀಬ್ರೂ ಭಾಷೆಗಳಿಗೆ ಅನುವಾದಗೊಂಡು ಕೊಲಂಬಿಯಾ, ಇಸ್ರೇಲ್ ಹಾಗೂ ಆಸ್ಟ್ರಿಯಾ ದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ವೆನೆಜುಯೇಲಾ ದೇಶದ ಸರ್ಕಾರ 2005 ರಲ್ಲಿ ವಿಶ್ವ ಕಾವ್ಯ ಮಾಲೆ (ತಿoಡಿಟಜ ಠಿoeಣಡಿಥಿ seಡಿiesss) ಅಡಿಯಲ್ಲಿ ‘ಪೊಯೆಮಾಸ್ – ಮೂಡ್ನಾಕೂಡು’ ಎಂಬ ಇವರ ಸ್ಪ್ಯಾನಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದೆ. ಸ್ಪ್ಯಾನಿಷ್ ಭಾಷೆಗೆ ಗ್ರಂಥರೂಪದಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಕವಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಇದಲ್ಲದೆ, ಎರ್ಬಾಚೆ ಪಬ್ಲಿಷರ್ಸ್ ಲಿವರ್ಪೂಲ್, ಬ್ರಿಟನ್ ಮತ್ತು ಯೋಡಾ ಪ್ರೆಸ್, ದೆಹಲಿ ಇವರು ‘ಬಿಫೋರ್ ಇಟ್ ರೆಯಿನ್ಸ್ ಅಗೆಯ್ನ್’ ಎಂಬ ಇಂಗ್ಲಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದ್ದಾರೆ ಹಾಗೂ ಹಿಂದಿ, ಉರ್ದು, ತೆಲುಗು, ಮರಾಠಿ ಭಾಷಾಂತರಗೊಂಡ ಕವಿತಾ ಸಂಗ್ರಹಗಳೂ ಪ್ರಕಟಗೊಂಡಿವೆ.

ಇವರ ಕವಿತೆಗಳು ಶಾಲಾಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಕ ಪಠ್ಯಗಳಾಗಿವೆ. ಕನ್ನಡದ ಪ್ರತಿಷ್ಠಿತ ಕವಿಗೋಷ್ಠಿಗಳಲ್ಲದೆ ಹಲವಾರು ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿತಾವಾಚನ, ಪ್ರಬಂಧ ಮಂಡನೆ ಮಾಡಿರುತ್ತಾರೆ.

ಇವರು ರಂಗಾಯಣ ರೆಪರ್ಟರಿಗೆ ‘ಬಹುರೂಪಿ’ ಎಂಬ ಕಾವ್ಯನಾಟಕವನ್ನು ರಚಿಸಿ ನಿರ್ದೇಶಿಸಿರುತ್ತಾರೆ. ಪೂಚಂತೇ ಅವರ ಕುರಿತ ‘ಮಾಯಾಲೋಕ’ ಎಂಬ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದಾರೆ.

‘ಜರ್ನಲ್ ಆಫ್ ಕಾಮನ್‍ವೆಲ್ತ್ ಲಿಟರೇಚರ್’ ಎಂಬ ಬ್ರಿಟನ್ನಿನ ಪ್ರತಿಷ್ಟಿತ ಸಾಹಿತ್ಯ ಪತ್ರಿಕೆ 2019 ರ ವಿಶೇಷ ಸಂಚಿಕೆಯಲ್ಲಿ ಇವರ ಸಂದರ್ಶನವನ್ನು ಪ್ರಕಟಿಸಿದೆ.

ಇವರಿಗೆ ವಾರಂಬಳ್ಳಿ ಕಾವ್ಯ ಪ್ರಶಸ್ತಿ, ಶಿರಸಂಗಿ ಲಿಂಗರಾಜ ಸಾಹಿತ್ಯ ಪ್ರಶಸ್ತಿ ಹಾಗೂ ಬೇಂದ್ರೆ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳೂ ಸಂದಿವೆ. ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (2009) ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2014) ಗಳಿಗೂ ಭಾಜನರಾಗಿರುತ್ತಾರೆ.

ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು 2019 ರಲ್ಲಿ ಇವರ ಸಮಗ್ರ ಸಾಹಿತ್ಯವನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದೆ.

ಫೆ, 2010 ರಲ್ಲಿ 2ನೇ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ಏಪ್ರಿಲ್ 2011 ರಲ್ಲಿ ಭಾಲ್ಕಿಯಲ್ಲಿ ನಡೆದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಮತ್ತು ಜೂನ್ 2011 ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ.

“ಔಟ್‍ಲುಕ್” ಇಂಗ್ಲೀಷ್ ವಾರಪತ್ರಿಕೆ ತನ್ನ 26, ಏಪ್ರಿಲ್ 2021 ರ ಅಂಬೇಡ್ಕರ್ ವಿಶೇಷ ಸಂಚಿಕೆಗಾಗಿ ನಡೆಸಿದ ಸಮೀಕ್ಷೆಯಲ್ಲಿ ‘ಭಾರತವನ್ನು ಪುರ್ನನಿರ್ಮಾಣ ಮಾಡುವ 50 ದಲಿತ ಸಾಧಕರ ಪಟ್ಟಿ’ಯಲ್ಲಿ ಇವರನ್ನು ಹೆಸರಿಸಲಾಗಿದೆ.

 

 

 

Be the first to comment on "ಎಲುಬಿನ ಹಂದರದೊಳಗೆ: ಮೂಡ್ನಾಕೂಡು ಚಿನ್ನಸ್ವಾಮಿ"

Leave a comment

Your email address will not be published.


*