ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ
ಅಡ್ವೊಕೇಟ್ ಜೆರಾಲ್ಡ್ ಡಿಸೋಜ
ಭಾರತದ ಸಂವಿಧಾನದ ಭಾಗ III ರಲ್ಲಿನ 21 ನೇ ಅನುಚ್ಛೇದವು “ಕಾನೂನಿನ ಮೂಲಕ ಸ್ಥಾಪಿತವಾಗಿರುವ ಪ್ರಕ್ರಿಯೆಗೆ ಅನುಸಾರವಾಗಿ ಹೊರತು, ಯಾರೇ ವ್ಯಕ್ತಿಯ ಜೀವವನ್ನು ಅಥವಾ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡತಕ್ಕದ್ದಲ್ಲ.” ಎಂದು ಹೇಳುತ್ತಾ ಜೀವದ ಹಕ್ಕೂ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಎರಡನ್ನೂ ರಕ್ಷಿಸಿದೆ. ಭಾರತದ ಸುಪ್ರೀಂ ಕೋರ್ಟ್‌ನಿಂದ ಮೂಲಭೂತ ಹಕ್ಕುಗಳ ಹೃದಯ ಎಂದು ಕರೆಸಿಕೊಂಡಿರುವ ಈ ಹಕ್ಕುಗಳು ದೇಶದ ನಾಗರೀಕರು ಹಾಗೂ ನಾಗರೀಕರಲ್ಲದವರಾದಿಯಾಗಿ ಎಲ್ಲರಿಗೂ ಲಭ್ಯವಿದೆ. ಈ ಹಕ್ಕುಗಳನ್ನು ʼತುರ್ತು ಪರಿಸ್ಥಿತಿʼಯಲ್ಲಿಯೂ ಅಮಾನತುಪಡಿಸಲಾಗುವುದಿಲ್ಲ ಮಾತ್ರವಲ್ಲದೆ ಇವುಗಳು ಘನತೆಯ ಅಸ್ಥಿತ್ವಕ್ಕೂ ಮಿಗಿಲಾಗಿವೆ.
ಮುಖ್ಯವಾಗಿ, ಅನುಚ್ಛೇಧ 21 ಉಚಿತ ಕಾನೂನು ನೆರವು, ತ್ವರಿತ ವಿಚಾರಣೆ, ನ್ಯಾಯೋಚಿತ ವಿಚಾರಣೆ, ಬಂಧಿಖಾನೆಯಲ್ಲಿ ಜೀವನಾವಶ್ಯಕ ವಸ್ತುಗಳನ್ನು ಹೊಂದುವುದು, ಹೆಣ್ಣುಮಕ್ಕಳನ್ನು ಕೈಗೆ ಬೇಡಿ ಹಾಕುವುದರ ವಿರುದ್ಧವಾಗಿ ಹಾಗೂ ಜೈಲಿನಲ್ಲಿ ಒಂಟಿಯಾಗಿ ಇಡುವುದರ ವಿರುದ್ಧವಾಗಿ ಘನತೆಯಿಂದ ಹಾಗೂ ಯೋಗ್ಯ ರೀತಿಯಲ್ಲಿ ನಡೆಸಿಕೊಳ್ಳುವುದು, ಅಮಾನವೀಯವಾಗಿ ನಡೆಸಿಕೊಳ್ಳುವುದರ ಹಾಗೂ ಕಸ್ಟಡಿಯಲ್ಲಿನ ದೌರ್ಜನ್ಯದ ವಿರುದ್ದವೂ ಸಹ ರಕ್ಷಣೆಯನ್ನು ಒದಗಿಸುತ್ತದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು “ಸಂವಿಧಾನದ ಹೃದಯ ಮತ್ತು ಆತ್ಮ” ಎಂದು ಕರೆದ ಅನುಚ್ಛೇದ 32 ಅಂದರೆ ಸಂವಿಧಾನಾತ್ಮಕ ಪರಿಹಾರೋಪಾಯಗಳ ಹಕ್ಕು ಯಾವುದೇ ನಾಗರೀಕನೂ ಸಹ ತನ್ನ ಮೂಲಭೂತ ಹಕ್ಕುಗಳನ್ನು ಬಳಸಿಕೊಳ್ಳುವುದರಿಂದ ವಂಚಿತನಾಗಬಾರದು ಹಾಗೂಂದು ವೇಳೆ ಯಾವುದೇ ವಂಚಿತನಾದರೆ ಅವುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ಮೊರೆ ಹೋಗಬಹುದು ಎಂದು ಹೇಳಿದೆ.
ಅಪರಾಧಿಕ ನ್ಯಾಯ ವ್ಯವಸ್ಥೆಯ ಪಾತ್ರ ಹಾಗೂ ಜವಾಬ್ದಾರಿಗಳು
ಅಪರಾಧ ತಡೆ ಮತ್ತು ನಿಯಂತ್ರಣ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಸಂತ್ರಸ್ಥರ ಹಾಗೂ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ವ್ಯಕ್ತಿಗಳ ಹಕ್ಕುಗಳ ರಕ್ಷಣೆ, ಅಪರಾಧಗಳನ್ನು ಮಾಡಿರುವವರಿಗೆ ಶಿಕ್ಷೆ ಹಾಗೂ ಅವರ ಪುನರ್ವಸತಿ ಹಾಗೂ ಸಾಮಾನ್ಯವಾಗಿ ಅಪರಾಧ ಹಾಗೂ ಅಪರಾಧತ್ವದ ವಿರುದ್ಧ ಜೀವ ಹಾಗೂ ಸ್ವತ್ತುಗಳ ರಕ್ಷಣೆಯ ವಿಷಯದಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಿಕ ಪ್ರಾಧಿಕಾರಗಳನ್ನು ಹೊಂದಿರುವ ಸರ್ಕಾರವು ನಾಗರೀಕರ ಮೂಲಭೂತ ಹಕ್ಕುಗಳ ಮೇಲೆ ಕೆಲವೊಂದು ಸಕಾರಣ ನಿರ್ಬಂಧಗಳನ್ನು ಹೇರಬಹುದು.
ತನಿಖೆ ಎನ್ನುವುದು ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು, ಸ್ಥಳ ಪರಿಶೀಲನೆ, ಅನುಮಾನಿತ ಅಪರಾಧಿಯನ್ನು ಹುಡುಕಿ ಆತನನ್ನು ಬಂಧಿಸುವುದು ಮತ್ತು ಪುರಾವೆಗಳ ಸಂಗ್ರಹವನ್ನು ಒಳಗೊಳ್ಳುತ್ತದೆ. ಕೊನೆಗೆ, ಆರೋಪಿಯ ಪರೀಕ್ಷೆ, ಆತನಿಂದ ಲಿಖಿತ ಹೇಳಿಕೆ ಪಡೆಯುವುದು, ತನಿಖೆಗೆ ಅವಶ್ಯವಾದರೆ ಸ್ಥಳವನ್ನು ಹುಡುಕಿ, ಸೀಜ್ ಮಾಡುವುದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸುವುದು ಹಾಗೂ ಸಂಗ್ರಹಿಸಲಾದ ಪುರಾವೆಗಳು ವಿಚಾರಣೆಗೆಗಾಗಿ ಹಾಗೂ ಚಾರ್ಜ್‌ಶೀಟ್ ಹಾಕುವುದಕ್ಕಾಗಿ ನ್ಯಾಯಾಧೀಶರ ಮುಂದೆ ಸಲ್ಲಿಸಲು ಯೋಗ್ಯವಾಗಿವೆಯೇ ಎಂಬ ಅನಿಸಿಕೆಯನ್ನು ಪಡೆದುಕೊಳ್ಳುವುದು ಈ ಪ್ರಕ್ರಿಯೆ ಒಳಗೊಳ್ಳುತ್ತದೆ. ಪೊಲೀಸರು ತಮ್ಮ ವರದಿಯನ್ನು ನ್ಯಾಯಾಧೀಶರಿಗೆ ಸಲ್ಲಿಸುವ ಮೂಲಕ ತನಿಖಾ ಪ್ರಕ್ರಿಯೆ ಕೊನೆಗೊಳ್ಳುತ್ತದೆ.
ಪೊಲೀಸರ ಉಲ್ಲಂಘನೆಗಳು
ಅದಾಗ್ಯೂ, ಇತ್ತೀಚಿಗೆ ನಡೆಯುತ್ತಿರುವ ಘಟನೆಗಳು ಪೊಲೀಸರು ಆಜ್ಞೆಯನ್ನು ಮೀರಿ ನಡೆದುಕೊಳ್ಳುತ್ತಿರುವುದನ್ನು ತೋರಿಸುತ್ತಿದೆ. ಸಾರ್ವಜನಿಕ ಥಳಿತ, ಪ್ರತಿಭಟನಾಕಾರರ ಮನೆಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸುವುದು, ಲಾಟಿ ಚಾರ್ಜ್‌ಗಳು ಹಾಗೂ ಮಕ್ಕಳ ವಿರುದ್ಧ ಹಿಂಸೆಯನ್ನು ಬಳಸುವುದನ್ನು ಸಮವಸ್ತ್ರಧಾರಿ ಪುರುಷ=ಮಹಿಳೆಯರು ಮಾಡುತ್ತಿದ್ದಾರೆ. ತಮ್ಮ ವಶದಲ್ಲಿರುವ ವ್ಯಕ್ತಿಗಳ ಮೂಲ ಹಕ್ಕುಗಳನ್ನು ಸಹ ಪೊಲೀಸರು ಉಲ್ಲಂಘಿಸುತ್ತಿದ್ದಾರೆ ಎಂಬ ಕಳವಳ ಸಹ ವ್ಯಕ್ತವಾಗಿದೆ. ದಲಿತ, ಮುಸ್ಲಿಂ ಹಾಗೂ ಆದಿವಾಸಿ ಸಮುದಾಯಗಳ ವ್ಯಕ್ತಿಗಳನ್ನು ಜೈಲಿನಲ್ಲಿ ಹಿಂಸಿಸುವುದು ಹಾಗೂ ಅವರನ್ನು ಕಾನೂನುಬಾಹಿರವಾಗಿ ಜೈಲಲ್ಲಿಡುವುದು ಇದಕ್ಕೆ ಉದಾಹರಣೆಯಾಗಿದೆ.
ಬೀದಿ ವ್ಯಾಪಾರಿಗಳು, ಲೈಂಗಿಕ ವೃತ್ತಿಯಲ್ಲಿ ತೊಡಗಿಕೊಂಡಿರುವ ಮಹಿಳೆಯರು, ಕಾನೂನಿನೊಂದಿಗೆ ಸಂಘರ್ಷಕ್ಕಿಳಿದಿರುವ ವ್ಯಕ್ತಿಗಳು, ನಿರಾಶ್ರಿತರು ಹಾಗೂ ವಲಸಿಗ ಕೆಲಸಗಾರರನ್ನು “ಮಾಮೂಲು” ನೀಡುವಂತೆ ಪೊಲೀಸರು ಸದಾ ಪೀಡಿಸಿ, ಕಾಡುತ್ತಿರುತ್ತಾರೆ ಮಾತ್ರವಲ್ಲದೆ, ಒಂದು ವೇಳೆ ಇವರಲ್ಲಿ ಯಾರಾದರೂ ಮಾಮೂಲು ಹಣವನ್ನು ನೀಡಲಿಲ್ಲ ಎಂದಾದರೆ ಅವರನ್ನು ಸಣ್ಣಪುಟ್ಟ ಕೇಸುಗಳಲ್ಲಿ ಫಿಟ್ ಮಾಡಲಾಗುತ್ತದೆ ಮಾತ್ರವಲ್ಲದೆ ಅವರನ್ನು ಅಪರಾಧ ಚಾಳಿಯುಳ್ಳವರೆಂದು (ಹ್ಯಾಬಿಚುವಲ್ ಅಫೆಂಡರ್) ಎಂದು ಪಟ್ಟಿಗೆ ಸೇರಿಸಲಾಗುತ್ತದೆ. ಎಷ್ಟರ ಮಟ್ಟಿಗೆ ಈ ಶೋಷಣೆ ಬೆಳೆದಿದೆ ಎಂದರೆ ಇದು ಸರ್ವೇ ಸಾಮಾನ್ಯವೇನೋ ಎಂಬಂತಾಗಿದೆ. ಹೀಗೆ ಇವರಿಂದ ಸಂಗ್ರಹಿಸಲಾಗುವ ಮಾಮೂಲು ಹಣವನ್ನು ಪೊಲೀಸ್ ರಚನೆಯ ಎಲ್ಲಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಪೊಲೀಸರು ತಮ್ಮ ಕರ್ತವ್ಯವನ್ನು ಮಾಡುವುದನ್ನು ನಿಧಾನಿಸುವುದು ಅಥವಾ ವಿಳಂಬಮಾಡುವುದು ಲಂಚ ಪಡೆಯುವ/ಭ್ರಷ್ಟಾಚಾರ ಮಾಡುವ ಉದ್ದೇಶದಿಂದಲೇ ಎಂದು ಹಲವು ವರದಿಗಳು ಹೇಳುತ್ತವೆ. ಹಲವು ನಗರಗಳಲ್ಲಿ ಪೊಲೀಸರು ಹಾಗೂ “ಗ್ಯಾಂಗ್”ಗಳ ನಡುವೆ ಅನಧಿಕೃತ ಸಂಬಂಧಗಳು ಇವೆ ಎಂಬುದು ಸುಳ್ಳಲ್ಲ.
ಪೊಲೀಸ್ ಕಸ್ಟಡಿಯಲ್ಲಿರುವವರಿಗೆ ಚಿತ್ರಹಿಂಸೆ
ಪೊಲೀಸರ ಕುರಿತು ಕೇಳಿಬರುವ ಗಂಭೀರವಾದ ವಿಷಯವೆಂದರೆ ಅದು ಕಸ್ಟಡಿಯಲ್ಲಿರುವವರಿಗೆ ನೀಡುವ ಚಿತ್ರಹಿಂಸೆ. ಪೊಲೀಸ್ ಕಸ್ಟಡಿಯಲ್ಲಿ ಹಿಂಸೆಗೆ ಒಳಗಾಗಿ ಲಾಕಪ್ ಡೆತ್ ಆಗಿ ಮಾಧ್ಯಮದ ಗಮನವನ್ನು ಸೆಳೆಯುವ ಪ್ರತಯೊಂದು ಪ್ರಕರಣದ ಹಿಂದೆ ಇದೇ ರೀತಿಯ ಹಲವು ಪ್ರಕರಣಗಳು ವರದಿಯಾಗದೇ ಹೋಗುತ್ತವೆ. ಒಂದು ವೇಳೆ ಕಸ್ಟೋಡಿಯಲ್ ಟಾರ್ಚರ್ ಅಥವಾ ಚಿತ್ರಹಿಂಸೆ ಎಂಬುದು ಸಾವಿಗೆ ಕಾರಣವಾಗದಿದ್ದರೂ ಸಹ ಅದು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಿಂಸೆ ಎನ್ನುವುದು ಒಬ್ಬ ವ್ಯಕ್ತಿಯನ್ನು ಹಿಯ್ಯಾಳಿಸುವುದು ಮಾತ್ರವಲ್ಲದೆ ಅವರ ಕುಟುಂಬಸ್ಥರಿಗೆ ಹಾಗೂ ಸಮುದಾಯಕ್ಕೆ ಒಡ್ಡುವ ಬೆದರಿಕೆಯಾಗಿದೆ.
ಚಿತ್ರಹಿಂಸೆಯನ್ನು “ಸಾರ್ವಜನಿಕ ಅಧಿಕಾರಿ ಅಥವಾ ಅಧಿಕೃತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಯು, ಸಮ್ಮತಿ ಅಥವಾ ಅಸಮ್ಮತಿಯೊಂದಿಗೆ ಅಥವಾ ಪ್ರಚೋದನೆಯಿಂದ ಒಬ್ಬ ವ್ಯಕ್ತಿಯ ಮೇಲೆ ಉದ್ದೇಶಪೂರ್ವಕವಾಗಿ ತೀವ್ರವಾದ ನೋವು ಮತ್ತು ಸಂಕಟವನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಉಂಟುಮಾಡುವ ಪ್ರಕ್ರಿಯೆ” ಎಂದು ವ್ಯಾಖ್ಯಾನಿಸಲಾಗಿದೆ.
ತಮ್ಮ ಆತ್ಮರಕ್ಷಣೆಯ ಹೊರತಾಗಿ ಪೊಲೀಸರು ಯಾರ ಮೇಲೆಯೂ ಸಹ ಕನಿಷ್ಟ ನೋವನ್ನೂ ಸಹ ಉಂಟುಮಾಡಬಾರದು ಎಂದು ಈ ದೇಶದ ಹಲವು ಹೈಕೋರ್ಟುಗಳು ಹಾಗೂ ಸುಪ್ರೀಂ ಕೋರ್ಟ್ ತಮ್ಮ ತೀರ್ಪುಗಳಲ್ಲಿ ಹೇಳಿವೆ. ಪೊಲೀಸ್ ವಶದಲ್ಲಿರುವ ವ್ಯಕ್ತಿಯನ್ನು ಕಾನೂನು ಇತರೆ ಸಾಮಾನ್ಯ ನಾಗರೀಕರಂತೆಯೇ ಕಾಣುತ್ತದೆ. ರಾಷ್ಟ್ರೀಯ ಹಾಗೂ ರಾಜ್ಯಗಳ ಮಾನವ ಹಕ್ಕು ಆಯೋಗಗಳು ಪೊಲೀಸ್ ಚಿತ್ರಹಿಂಸೆಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿವೆ.
ಸುನೀಲ್ ಬಾತ್ರಾ ವರ್ಸಸ್ ಡೆಲ್ಲಿ ಅಡ್ಮಿನಿಸ್ಟ್ರೇಷನ್ ಪ್ರಕರಣದಲ್ಲಿ (ಡಿಸೆಂಬರ್ 20, 1979), ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಗೀಡಾಗುತ್ತಿರುವ ಬಂಧಿತ ವ್ಯಕ್ತಿಯನ್ನು ನ್ಯಾಯಾಲಯ ಮಧ್ಯಪ್ರವೇಶಿಸಿ ಕಾಪಾಡಲು ಸಂವಿಧಾನದ 32ನೇ ವಿಧಿಯನ್ನು ಆವಾಹಿಸಲಾಯಿತು. ಈ ಕುರಿತು ಸರ್ವೋಚ್ಛ ನ್ಯಾಯಾಲಯವು ರಾಜ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟೀಸನ್ನು ಜಾರಿಗೊಳಿಸಿತು ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಲು, ಸಾಕ್ಷಿದಾರರನ್ನು ಸಂದರ್ಶಿಸಲು ಹಾಗೂ ಬಂಧಿತ ವ್ಯಕ್ತಿಯನ್ನು ಜೈಲಿನಲ್ಲಿ ಭೇಟಿಯಾಗಲು ʼಅಮಿಕಸ್ ಕ್ಯೂರಿʼ ಸಮಿತಿಯನ್ನು ರಚಿಸಿತು. ಈ ʼಅಮಿಕಸ್ ಕ್ಯೂರಿʼ ಸಮಿತಿ ವ್ಯತಿರಿಕ್ತ ವರದಿಯನ್ನು ನೀಡಿದಾಗ, ಪೊಲೀಸ್ ವಶದಲ್ಲಿದ್ದ ಬಂಧಿತ ವ್ಯಕ್ತಿಯನ್ನು ಚಿತ್ರಹಿಂಸೆಗೊಳಪಡಿಸಿದ ಕಾರಣಕ್ಕಾಗಿ ಪೊಲೀಸ್ ಅಧೀಕ್ಷಕನನ್ನು ಜವಾಬ್ದಾರಿಗೊಳಿಸಿ, ಪೊಲೀಸರ ವಿರುದ್ಧ ತನಿಖೆ ಆರಂಭಗೊಂಡಿತು. ಬಂಧಿತರು ಸಹ ವ್ಯಕ್ತಿಗಳೇ ಹಾಗೂ ಇದನ್ನು ನಿರಾಕರಿಸುವುದು ಇಡೀ ದೇಶವನ್ನೇ ಶಿಕ್ಷೆಗೆ ಒಳಪಡಿಸಿದಂತಾಗುವುದು ಮಾತ್ರವಲ್ಲದೆ, ಇದೊಂದು ರೀತಿಯ ಅಮಾನವೀಕರಣದ ಸಂವಿಧಾನವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಇದರ ಜೊತೆಗೆ, ಬಂಧಿತ ವ್ಯಕ್ತಿಯ ಹಕ್ಕುಗಳನ್ನು ನಿರಾಕರಿಸುವುದು ಭಾರತವು ಸಹಿ ಮಾಡಿರುವ, ಬಂಧಿತ ವ್ಯಕ್ತಿಗಳ ಹಕ್ಕುಗಳ ಅಂತರ್‌ರಾಷ್ಟ್ರೀಯ ಒಪ್ಪಂದದಲ್ಲಿ ನಮೂದಿಸಲಾಗಿರುವ ಅಂಶಗಳನ್ನು ಉಲ್ಲಂಘಿಸಲಾಗುತ್ತದೆ ಎಂದೂ ಸಹ ಹೇಳಿದೆ.
ಮುಂದುವರೆದು ಈ ಆದೇಶವು ಈ ಕೆಳಗಿನಂತೆ ಸಹ ಹೇಳಿದೆ:
“ಅವನ ಹಕ್ಕುಗಳ ಪರಿಧಿಯೊಳಗೆ ಬಂಧಿತ ವ್ಯಕ್ತಿಯನ್ನು ಕಾಪಾಡುವುದು ಅನುಚ್ಚೇಧ 32 (564 ಸಿ) ರ ವ್ಯಾಪ್ತಿಯ ಭಾಗವಾಗಿದೆ. ಇದು ಕಾನೂನಿನ ದೃಷ್ಟಿಯಲ್ಲಿ ಬಂಧಿತರೂ ಸಹ ವ್ಯಕ್ತಿಗಳೇ, ಪ್ರಾಣಿಗಳಲ್ಲ ಎಂಬುದನ್ನು ಪುನರುಚ್ಛರಿಸಿ, ಜೈಲು ವ್ಯವಸ್ಥೆಯ “ಭಿನ್ನʼ ರಕ್ಷಕರೂ (ಪೊಲೀಸರು) ಮಾನವ ಘನತೆಗೆ ಕುಂದು ಬರುವಂತೆ ನಡೆದುಕೊಂಡರೆ ಅವರನ್ನು ಶಿಕ್ಷಿಸುವ ಅಧಿಕಾರ ನ್ಯಾಯಾಲಯಗಳಿಗೆ ನೀಡುತ್ತದೆ.”
“ಸೆರೆಮನೆಗಳು ಭಾರತ ಭೂಮಿಯ ಭಾಗವಾಗಿದೆ ಹಾಗೂ ಕೊಂಚ ಅಧಿಕಾರಯುತವಾಗಿ ಸಮವಸ್ತ್ರವನ್ನು ಧರಿಸಿರುವ ಜೈಲು ಅಧಿಕಾರಿಗಳು ಈ ನೆಲದ ಸಂವಿಧಾನವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಕುರಿತು ಬಂಧಿತನೊಬ್ಬ ಸಂವಿಧಾನದ ಭಾಗ 3 ರನ್ನು ಆಹ್ವಾನಿಸಿದರೆ ಅಥವಾ ಹಿಂಸೆಗೆ ಒಳಗಾದ ಸಂಧರ್ಭದಲ್ಲಿ ಸಂವಿಧಾನವು ಅಘಾತಕ್ಕೀಡಾಗುತ್ತದೆ.”
ಬಹುಮುಖ್ಯವಾಗಿ ನ್ಯಾಯಾಲಯವು ಒಬ್ಬ ವ್ಯಕ್ತಿ ಸೆರೆಮನೆಯೊಳಗೆ ಹೋಗುತ್ತಿದ್ದಾನೆ ಎಂದರೆ ಅವನು ತಾತ್ಕಾಲಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆಯೇ ಹೊರತು ಇದರ ಅರ್ಥ ಆತ ತನ್ನ ಮೂಲಭೂತ ಹಕ್ಕುಗಳನ್ನೇ ಕಳೆದುಕೊಳ್ಳುತ್ತಿದ್ದಾನೆ ಎಂದಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ.
2021 ರಲ್ಲಿ ಒಟ್ಟು 4,36,732 ಜನ ಖೈದಿಗಳು ಜೈಲಿನಿಂದಾಚೆಗೆ ವೈದ್ಯಕೀಯ ಚಿಕಿತ್ಸೆಗಾಗಿ ತೆರಳಿದ್ದಾರೆ. ವೈದ್ಯಕೀಯ ಸಮಸ್ಯೆಗಾಗಿ ಜೈಲಿನಿಂದಾಚೆಗೆ ಚಿಕಿತ್ಸೆಗೆ ತೆರಳಿದ ಖೈದಿಗಳ ಸಂಖ್ಯೆಯಲ್ಲಿ ಛತ್ತೀಸ್‌ಗಡ (63,896) ಮೊದಲ ಸ್ಥಾನದಲ್ಲಿದ್ದರೆ ಅದರ ನಂತರ ಪಶ್ಚಿಮ ಬಂಗಾಳ (40,657), ತಮಿಳುನಾಡು (36,097) ಇದ್ದು, ಇವುಗಳ ಕ್ರಮವಾಗಿ 14.6%, 9.3% ಹಾಗೂ 8.3% ರಷ್ಟಿವೆ. ಪೊಲೀಸ್ ವಶದಲ್ಲಿರುವ ವ್ಯಕ್ತಿಗಳು ದೈಹಿಕ ಚಿತ್ರಹಿಂಸೆಗೆ ಒಳಗಾದರೆ ಅದು ಅವರ ಆರೋಗ್ಯದ ಮೇಲೆ ತಕ್ಷಣಕ್ಕೆ ಅಥವಾ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಹುತೇಕ ಪ್ರಕರಣಗಳಲ್ಲಿ ಇವರನ್ನು ಪರಿಶೀಲಿಸುವ ವೈದ್ಯರು, ಪರಿಶೀಲಿಸಿದ ನಂತರ ಅವರಿಗೆ ಚಿಕಿತ್ಸೆಯನ್ನು ನೀಡಿ, ಅವರ ವೈದ್ಯಕೀಯ ಪರೀಕ್ಷೆ ಹಾಗೂ ಇತಿಹಾಸದಿಂದ ಬೇಕಾಗುವ ಪುರಾವೆಗಳನ್ನು ಒಟ್ಟುಗೂಡಿಸಿ, ಸದರಿ ವ್ಯಕ್ತಿಯು ಚಿತ್ರಹಿಂಸೆಗೆ ಒಳಗಾಗುತ್ತಿದ್ದಾನೆ ಎಂಬ ಅಂಶವನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಎಚ್ಚರಿಸುವುದರ ಬದಲಿಗೆ ಬಂಧಿತರನ್ನು ಮತ್ತದೇ ಜೈಲಿನ ಕೋಣೆಗಳಿಗೆ ಕಳುಹಿಸುತ್ತಿದ್ದಾರೆ. ಈ ಕ್ರಿಯೆಯು ಆರೋಗ್ಯ ವ್ಯವಸ್ಥೆಯ ಪ್ರಮುಖ ಪಾತ್ರವಾಗಿದೆ ಮಾತ್ರವಲ್ಲದೆ ವೈದ್ಯಕೀಯ ಶಿಕ್ಷಣ ಹಾಗೂ ತರಭೇತಿಯನ್ನು ನೀಡುವಾಗ ಇದಕ್ಕೆ ಒತ್ತುನೀಡಬೇಕು.
ಡಿಸೆಂಬರ್ 31, 2021 ರಾಂತ್ಯಕ್ಕೆ ದೇಶದ ವಿವಿಧ ಜೈಲುಗಳಲ್ಲಿರುವ ಒಟ್ಟು 5,54,034 ಖೈದಿಗಳ ಪೈಕಿ ಒಟ್ಟು 9,180 ಖೈದಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಒಟ್ಟು ಖೈದಿಗಳ 1.7 ರಷ್ಟಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಈ 9,180 ಖೈದಿಗಳಲ್ಲಿ ಶೇ. 41.3% ರಷ್ಟು ಮಂದಿ (3,787) ಶಿಕ್ಷಿತ ಖೈದಿಗಳು, ಶೇ. 58.4% ರಷ್ಟು (5,365) ಜನರು ವಿಚಾರಣಾಧೀನ ಖೈದಿಗಳಾಗಿದ್ದಾರೆ ಹಾಗೂ 0.3% ರಷ್ಟು ಮಂದಿ (23) ಮಂದಿ ಬಂಧಿತರಾಗಿದ್ದಾರೆ. ಮಾನಸಿಕ ಅಸ್ವಸ್ಥತೆ ಎಂಬುದು ಹಲವಾರು ಸಮಸ್ಯೆಗಳ ಫಲಿತಾಂಶವಾಗಿರಬಹುದು. ಇದನ್ನು ಪರೀಕ್ಷಿಸಿ, ಪರಿಹಾರವನ್ನು ಕಂಡುಕೊಳ್ಳಬೇಕು. ಪೊಲೀಸ್ ವಶದಲ್ಲಿರುವ ಹಲವರು ಬೆಂಬಲದ ಕೊರತೆಯನ್ನು ಅನುಭವಿಸಿದರೆ, ಹಲವರು ಚಿತ್ರಹಿಂಸೆ, ನಿರ್ಲಕ್ಷ್ಯ, ಪೌಷ್ಟಿಕಾಂಶಗಳ ಕೊರತೆ ಹಾಗೂ ಅನಾರೋಗ್ಯದ ನಿಮಿತ್ತ ಮಾನಸಿಕ ಅಸ್ವಸ್ಥರಾಗುತ್ತಾರೆ.
2021 ರಲ್ಲಿ ನ್ಯಾಯಾಂಗ ಬಂಧನದಲ್ಲಿರುವಾಗಲೇ 2,116 ಮಂದಿ ಬಂಧಿತರು ಸಾವಿಗೀಡಾಗಿದ್ದಾರೆ. ಇದರಲ್ಲಿ 1,879 ಸಾವುಗಳು ಸಹಜ ಸಾವುಗಳಾದರೆ, 185 ಅಸ್ವಾಭಾವಿಕ ಕಾರಣಗಳಿಂದಾಗಿವೆ ಹಾಗೂ 52 ಪ್ರಕರಣಗಳಲ್ಲಿ ಸಾವಿಗೆ ನಿರ್ದಿಷ್ಟ ಕಾರಣಗಳನ್ನು ಇನ್ನೂ ಪತ್ತೆಮಾಡಲಾಗಿರುವುದಿಲ್ಲ. ಒಟ್ಟಾರೆ ಸಾವುಗಳಲ್ಲಿ 88.8% ರಷ್ಟು ಸಾವುಗಳು (2,116 ರಲ್ಲಿ 1,879) ಸಹಜ ಸಾವುಗಳಾದರೆ, 8.7% ಸಾವುಗಳು (2,116 ರಲ್ಲಿ 185) ಅಸ್ವಾಭಾವಿಕ ಸಾವುಗಳಾಗಿವೆ. 150 ಆತ್ಮಹತ್ಯೆ ಪ್ರಕರಣಗಳಲ್ಲಿ ಪ್ರಧಾನ ಆತ್ಮಹತ್ಯೆ ಶೈಲಿ ನೇಣುಬಿಗಿದುಕೊಳ್ಳುವುದಾಗಿದೆ (139), ಇದರ ನಂತರ ವಿಷ ಪ್ರಾಶನ (3), ಸ್ವತಃಮಾಡಿಕೊಂಡ ಗಾಯ (2), ಡ್ರಗ್ ಓವರ್‌ಡೋಸ್ (ಅತಿಯಾದ ಪ್ರಮಾಣದ ಮಾದಕ ವಸ್ತು ಸೇವನೆ) (1) ಹಾಗೂ ಇತರೆ (5) ಆಗಿದೆ.
ಜೈಲುಗಳಲ್ಲಿನ 185 ಅಸ್ವಾಭಾವಿಕ ಸಾವುಗಳಲ್ಲಿ 150 ಸಾವುಗಳು ಆತ್ಮಹತ್ಯೆಯಾದರೆ, 11 ಸಾವುಗಳು ಖೈದಿಗಳು ಮಾಡಿದ ಕೊಲೆಗಳಾಗಿವೆ, 6 ಸಾವುಗಳು ಅಪಘಾತದಿಂದಾದರೆ, 3 ಹೊರಗಿನ ಶಕ್ತಿಗಳಿಂದ ಹಾಗೂ 1 ಸಾವು ಬೆಂಕಿ ಅವಘಡ ಹಾಗೂ 1 ಸಾವು ನಿರ್ಲಕ್ಷ್ಯದಿಂದ ಸಂಭವಿಸಿದೆ. 52 ಖೈದಿಗಳ ಸಾವುಗಳ ಕಾರಣ ಈವರೆಗೂ ತಿಳಿದಿರುವುದಿಲ್ಲ. ಆತಂಕಕಾರಿಯಾದ ವಿಚಾರವೇನೆಂದರೆ ಪೊಲೀಸ್ ಚಿತ್ರಹಿಂಸೆಯಿಂದ ಆಗುವ ಸಾವುಗಳ ವಿಧ ಈ ದಾಖಲಾತಿಗೆ ಮಾನದಂಡವೇ ಆಗಿರುವುದಿಲ್ಲ. ಚಿತ್ರಹಿಂಸೆಯಿಂದಾಗುವ ಪ್ರತಿ ಸಾವಿನ ಹಿಂದೆ ಹಲವಾರು ಜನರು ಚಿತ್ರಹಿಂಸೆಗೆ ಒಳಗಾಗಿರುತ್ತಾರೆ ಎಂಬುದನ್ನು ಮರೆಯಬಾರದು. ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅಳೆಯಲು ಸಾವುಗಳು ಮಾನದಂಡವಾಗಬಾರದು.
2021 ರ ಭಾರತದ ಕಾರಾಗೃಹ ಅಂಕಿಅಂಶಗಳ ಪ್ರಕಾರ 2021 ರಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಒಟ್ಟು 376 ದೂರುಗಳು ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ 470 ದೂರುಗಳು ಸಲ್ಲಿಕೆಯಾಗಿವೆ. ಅದಾಗ್ಯೂ, ಈ ದೂರುಗಳಿಗೆ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಿರುವುದಿಲ್ಲ.
ಅಪಘಾತದಿಂದಾದ ಸಾವುಗಳು ಬಹುತೇಕ ಜಾರಿ ಬಿದ್ದು (2),ವಿದ್ಯುತ್ ಶಾಕ್, ರಸ್ತೆ/ರೈಲು ಅಪಘಾತ, ಮಾದಕವಸ್ತು/ಮಧ್ಯಸೇವನೆ ಅಧಿಕವಾಗಿ ಹಾಗೂ ಇನ್ನಿತರೆ (ಪ್ರತಿಯೊಂದಕ್ಕೂ 1 ಸಾವು) ಕಾರಣಗಳಿಂದಾಗಿ ಸಂಭವಿಸಿವೆ. (ಕೋಷ್ಟಕ 8.7). ಉತ್ತರ ಪ್ರದೇಶವು ಅತಿ ಹೆಚ್ಚು ಅಸ್ವಾಭಾವಿಕ ಸಾವುಗಳನ್ನು (42) ವರದಿ ಮಾಡಿದೆ. ಇದರ ನಂತರ ಹರಿಯಾಣ ಮತ್ತು ಪಶ್ಚಿಮ ಬಂಗಾಳ (ಕ್ರಮವಾಗಿ 16) ಹಾಗೂ ದೆಹಲಿ (12) ರಾಜ್ಯಗಳು ಇವೆ. 2021 ರಲ್ಲಿ ಉಂಟಾದ 150 ಆತ್ಮಹತ್ಯೆ ಪ್ರಕರಣಗಳಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು (34) ಆತ್ಮಹತ್ಯೆ ಪ್ರಕರಣಗಳನ್ನು ವರದಿ ಮಾಡಿದೆ. ಇದರ ನಂತರ ಹರಿಯಾಣ (14), ಕೇರಳ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ (ಕ್ರಮವಾಗಿ 10) ಹಾಗೂ ದೆಹಲಿ (8) ರಾಜ್ಯಗಳು ಸೇರಿವೆ. 2021 ರಲ್ಲಿ ಮೂರು ಸಾವುಗಳು ಹೊರಗಿನ ಅಂಶಗಳು ನಡೆಸಿದ ದಾಳಿಯಿಂದ ನಡೆದಿವೆ.
ಶೋಷಿತ ಸಮುದಾಯಗಳ ಅಸಮರ್ಪಕ ಬಂಧನ
ಭಾರತದ ಜೈಲುಗಳಲ್ಲಿ ಶೋಷಿತ ಹಾಗೂ ಅಂಚಿಗೆ ಸರಿಸಲ್ಪಟ್ಟ ಸಮುದಾಯಗಳ ವಿಶೇಷವಾಗಿ ದಲಿತ, ಆದಿವಾಸಿ ಹಾಗೂ ಮುಸ್ಲಿಂ ಸಮುದಾಯಗಳ ವ್ಯಕ್ತಿಗಳನ್ನು ಅಸಮಪರ್ಕ ಹಾಗೂ ಅಪ್ರಮಾಣಕರವಾಗಿ ಬಂಧಿಸಿಡುವುದರ ಕುರಿತು ಪದೇ ಪದೇ ಕಳವಳ ವ್ಯಕ್ತವಾಗುತ್ತಲೇ ಇವೆ. ಡಿಸೆಂಬರ್ 27, 2021 ರಾಂತ್ಯದ ಎನ್‌ಸಿಆರ್‌ಬಿ ದತ್ತಾಂಶವನ್ನು ವಿಶ್ಲೇಷಿಸಿದಾಗ ಕಂಡುಬಂದ ಅಂಶವೇನೆಂದರೇ, ಭಾರತದಲ್ಲಿ ಮುಸ್ಲೀಮರ ಜನಸಂಖ್ಯಾ ಪ್ರಮಾಣ ಶೇ. 14.2% ರಷ್ಟಿದ್ದರೆ, ಮುಸ್ಲಿಂ ಖೈದಿಗಳ ಸಂಖ್ಯೆ ಜನಸಂಖ್ಯೆಯ ಶೇ. 19.1 ರಷ್ಟಿತ್ತು. ಇದರಲ್ಲಿ 19.5% ವಿಚಾರಣಾಧೀನ ಖೈದಿಗಳು, 17.4% ಶಿಕ್ಷಿತ ಖೈದಿಗಳು, 30% ಬಂಧಿತರು, ಮತ್ತು 57.2% ಇತರೆ ಖೈದಿಗಳಿದ್ದಾರೆ. ಸಂಶೋಧಕರು ಇದನ್ನು ಸಮುದಾಯದ ಸಮಾಜೋ-ಆರ್ಥಿಕ ಸ್ಥಿತಿಗತಿಗಳು ಹಾಗೂ ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶಗಳಿಗೆ ಪ್ರವೇಶಿಕೆಯ ಹಿನ್ನೆಲೆಯಲ್ಲಿ ವೀಕ್ಷಿಸುತ್ತಾರೆ.
ಇದೇ ರೀತಿ 20.7% ಖೈದಿಗಳು ಅನುಸೂಚಿತ (ಪರಿಶಿಷ್ಟ) ಜಾತಿಗಳಿಗೆ ಸೇರಿದರೆ 11.2% ಖೈದಿಗಳು ಅನುಸೂಚಿತ (ಪರಿಶಿಷ್ಟ) ಪಂಗಡಗಳಿಗೆ ಸೇರಿದವರಾಗಿದ್ದಾರೆ. ಆದರೆ ಸಾಮಾನ್ಯ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಕ್ರಮವಾಗಿ 16.1% ಹಾಗೂ 8.2% ರಷ್ಟಿದೆ. 2020 ರಲ್ಲಿ ಉತ್ತರ ಪ್ರದೇಶದಲ್ಲಿ 20% ಶಿಕ್ಷಿತ ಖೈದಿಗಳು, 28.3% ವಿಚಾರಾಣಾಧೀನ ಖೈದಿಗಳು, ಹಾಗೂ 50% ಖೈದಿಗಳು ಮುಸ್ಲೀಮರಾಗಿದ್ದಾರೆ. ಮುಸ್ಲೀಂ ಸಮುದಾಯವನ್ನು ಗುರಿಯಾಗಿಸುವ ಇದೇ ರೀತಿಯ ವಿಧಾನವನ್ನು ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕಾಣಬಹುದು. ಇವುಗಳಲ್ಲಿ ಬಹುತೇಕ ಮುಸ್ಲೀಂ ಖೈದಿಗಳು (65.5%) 18-30 ವರ್ಷದೊಳಗಿನವರಾದರೆ ಇದರ ನಂತರ 26.3% ಖೈದಿಗಳು 31-40 ವರ್ಷದವರಾಗಿದ್ದಾರೆ. ಗುಜರಾತ್‌ನಲ್ಲಿ ಗಲ್ಲು ಶಿಕ್ಷೆಗೆ ಒಳಗಾದ 19 ಜನ ಖೈದಿಗಳಲ್ಲಿ 15 ಜನ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕರ್ನಾಟಕದಲ್ಲಿ ಗಲ್ಲು ಶಿಕ್ಷೆಗೆ ಒಳಗಾದ 45 ಜನ ಖೈದಿಗಳಲ್ಲಿ 10 ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿಪರ್ಯಾಸವೇನೆಂದರೆ ಪೊಲೀಸ್ ಪಡೆಗಳಲ್ಲಿ ಮುಸ್ಲಿಂ ಸಮುದಾಯದವರ ಅತ್ಯಂತ ಕಳಪೆ (6.4%) ಪ್ರಾತಿನಿಧಿತ್ವವಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಯನ್ನು ಹಾಕುವ ಬೆದರಿಕೆ ಹಾಗೂ ಕಸ್ಟಡಿಯಲ್ಲಿನ ಚಿತ್ರಹಿಂಸೆ ತಾವು ಅಪರಾಧ ಮಾಡದೆ ನಿರಪರಾಧಿಗಳಾಗಿದ್ದರೂ ಸಹ ಮಾಡದ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ.
ಇದಕ್ಕಿಂತಲೂ ನೋವಿನ ಸಂಗತಿಯೆಂದರೆ, ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸಹಯೋಗದಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಅಧಿಕಾರಿಗಳು ಪೊಲೀಸರ ತಾರತಮ್ಯವೂ ಸಹ ಜೈಲುಗಳಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚು ಇರಲು ಕಾರಣವಾಗಿರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ ಹಾಗೂ ಹಲವು ಪೊಲೀಸರು ಆಗಾಗ್ಗೆ ಹಲವು ಮುಸ್ಲಿಂ ವ್ಯಕ್ತಿಗಳನ್ನು ಆರಿಸಿಕೊಂಡು, ಅವರನ್ನು ಅಪರಾಧಿಗಳೆಂದು ದಾಖಲೆಗೆ ಸೇರಿಸುವುದು ಸಹ ಈ ಕಾರಣಗಳಲ್ಲೊಂದಾಗಿದೆ. ಮುಸ್ಲಿಂರ ಮೇಲೆ ಅನೇಕ ಸುಳ್ಳು ಪ್ರಕರಣಗಳನ್ನು ಹಾಕಿದ ಉದಾಹರಣೆಗಳೂ ಸಹ ನಮ್ಮ ಕಣ್ಣಮುಂದಿವೆ.
ಭಾರತದಲ್ಲಿ ಒಂದು ನಿರ್ದಿಷ್ಟ ವಿವರಣೆಗಳನ್ನು ಹೋಲುವ ವ್ಯಕ್ತಿಗಳನ್ನು ಪೊಲೀಸರು ಬಂಧಿಸುತ್ತಾರೆ ಎಂಬುದು ಜಗಜ್ಜಾಹೀರಾದ ಸಂಗತಿ. ಭಾರತದಲ್ಲಿ ಒಬ್ಬ ವ್ಯಕ್ತಿ ಎಸ್.ಸಿ/ಎಸ್.ಟಿ ಅಥವಾ ಮುಸ್ಲಿಂ ಸಮುದಾಯಕ್ಕೆ ಸೇರಿದವನಾದರೆ ಅವನನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಹಾಗೂ ಇದು ಈ ಸಮುದಾಯಗಳು ಸಾಮಾನ್ಯ ಚಟುವಟಿಕೆಗಳನ್ನೂ ಸಹ ಸ್ವತಂತ್ರವಾಗಿ ಕೈಗೊಳ್ಳಲು ಭಯಪಡುವ ಸ್ಥಿತಿಯನ್ನು ಉಂಟುಮಾಡಿದೆ. ರಾಜಕಾರಣಿಗಳು ಹಾಗೂ ಮಧ್ಯಮ ವರ್ಗದ ಜನರು ಪೊಲೀಸರ ಮೇಲೆ ಹೇರುವ ಬಂಧನದ ಒತ್ತಡವು ಪೊಲೀಸರು ಮೇಲ್ಜಾತಿಯ ಅಪರಾಧಿಗಳ ಬದಲಿಗೆ ಈ ಸಮುದಾಯಗಳ ನಿರಪರಾಧಿ ಯುವಕರನ್ನು ಬಂಧಿಸುವಂತೆ ಮಾಡುತ್ತದೆ. ಕಾರಾಗೃಹಗಳಲ್ಲಿ ಮಾಡಿರದ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಮಾಡುವ ಚಿತ್ರಹಿಂಸೆ ಹಾಗೂ ಕ್ರೌರ್ಯ ಇನ್ನು ಗುಟ್ಟಾಗಿ ಉಳಿದಿಲ್ಲ. ನೂರಾರು ವಿಚಾರಣಾಧೀನ ಖೈದಿಗಳ ಬಳಿ ಅವಶ್ಯಕವಾದ ಸಾಮಾಜಿಕ ಬಂಡವಾಳ, ಮಾಧ್ಯಮ ವರದಿಗಾರಿಕೆ, ನಾಗರೀಕ ಸಮಾಜ ಜಾಲಗಳು ಅಥವಾ ದುಡ್ಡಿನ ಶಕ್ತಿ ಇಲ್ಲದೆ ಇರುವುದು ಜಾಮೀನು ಪಡೆಯಬಹುದಾದಂತಹ ಪ್ರಕರಣಗಳಲ್ಲೂ ಸಹ ಅವರು ಜಾಮೀನು ಪಡೆಯಲಾರದೆ ಇನ್ನೂ ಜೈಲುಗಳಲ್ಲಿರುವುದು ಅವರ ಶೋಚನೀಯ ಪರಿಸ್ಥಿತಿಗೆ ಕಾರಣವಾಗಿದೆ.
ಖೈದಿಗಳನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸಲು ರಾಜ್ಯ ಸರ್ಕಾರಗಳು ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಪರಿಚಯಿಸಿದೆ. ಇದರ ಅರ್ಥ ಪೊಲೀಸರ ಕೈಯಿಂದ ಚಿತ್ರಹಿಂಸೆಗೆ ಒಳಗಾಗಿ, ತಾರತಮ್ಯವನ್ನು ಎದುರಿಸಿದ ವ್ಯಕ್ತಿಗಳು ಅನುಚ್ಛೇಧ 32 ರ ಅಡಿಯಲ್ಲಿ ನ್ಯಾಯಾಲಯದ ಮುಂದೆ ತಮ್ಮ ನೋವನ್ನು ಹೇಳಿಕೊಳ್ಳುವ ಅವಕಾಶವೂ ಸಹ ಇಲ್ಲವಾಗಿದೆ. ನ್ಯಾಯಾಧೀಶರು ಖೈದಿಗಳು ಚಿತ್ರಹಿಂಸೆಗೆ ಒಳಗಾಗಿದ್ದಾರೆಯೇ ಇಲ್ಲವೇ ಎಂಬುದಕ್ಕೆ ಪುರಾವೆಗಳನ್ನು ಹುಡುಕುವುದು “ಪರಿಣಾಮಕಾರಿ ಸಮಯ ನಿರ್ವಹಣೆ” ಯಲ್ಲಿ ಕಳೆದುಹೋಗಬಾರದು.
ಹಲವಾರು ಕಾರಾಗೃಹಗಳು ಹಾಗೂ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಆಳವಡಿಸಿದ್ದರೂ ಸಹ ಚಿತ್ರಹಿಂಸೆ ಹಾಗೂ ಕ್ರೌರ್ಯ ಎನ್ನುವುದು ಸಿಸಿಟಿವಿ ವ್ಯಾಪ್ತಿಯ ಹೊರಗಡೆಯೂ ಸಹ ನಡೆಯಬಹುದು. ಸಿಸಿಟಿವಿ ಕ್ಯಾಮಾರಾಗಳು ಈ ಹಿಂಸೆಯನ್ನು ಒಂದು ಮಟ್ಟಿಗೆ ನಿಯಂತ್ರಿಸಬಹುದಾದರೂ, ಕಸ್ಟಡಿಯಲ್ಲಿರುವ ವ್ಯಕ್ತಿಗಳ ಹಕ್ಕುಗಳನ್ನು ಪುನಸ್ಥಾಪಿಸುವುದರ ಮೂಲಕ ಹಾಗೂ ಸಮಾಜವು ಈ ವ್ಯವಸ್ಥೆಯನ್ನು ಜವಾಬ್ದಾರಿಯನ್ನಾಗಿಸುವ ಮೂಲಕ ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಮಾನವ ಹಕ್ಕನ್ನು ಉಲ್ಲಂಘಿಸುವಂತಹ ಸಣ್ಣಪುಟ್ಟ ಪ್ರಕರಣಗಳಿಗೂ ನಾವು ನೀಡುವ ಗಂಭಿರ ಪ್ರತಿಕ್ರಿಯೆಯು ಈ ವ್ಯವಸ್ಥೆಯನ್ನು ಜವಾಬ್ದಾರಿಯಾಗಿಸುವಲ್ಲಿ ಹಾಗೂ ಅದನ್ನು ಸಾರ್ವಜನಿಕ ಕಣ್ಗಾವಲಿನಲ್ಲಿರಿಸುವಲ್ಲಿ ಸಹಾಯಕವಾಗುತ್ತದೆ.
ವಿಚಾರಣಾಧೀನ ಮತ್ತು ಶಿಕ್ಷಿತ ಖೈದಿಗಳು
ಕಾರಾಗೃಹಗಳಲ್ಲಿ ಹೇಗೆ ತಾರತಮ್ಯ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಅದನ್ನು ಒಂದು ನಿರ್ದಿಷ್ಟ ಸಮುದಾಯದ ವಿಚಾರಣಾಧೀನ ಖೈದಿಗಳನ್ನು ಅದರ ಸಾಮಾನ್ಯ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿ ನೋಡಬೇಕು. ವಿಚಾರಣಾಧೀನ ಖೈದಿಗಳ ಪ್ರಮಾಣವು ಅದರ ಸಾಮಾನ್ಯ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚಾಗಿದ್ದರೆ ಆ ಸಮುದಾಯವನ್ನು ಬೇಕೆಂದಲೇ ಗುರಿಪಡಿಸಲಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ವಿಚಾರಣಾಧೀನ ಖೈದಿಗಳ ಪ್ರಮಾಣವನ್ನು ಶಿಕ್ಷಿತ ಖೈದಿಗಳ ಪ್ರಮಾಣಕ್ಕೆ ಹೋಲಿಕೆ ಮಾಡುವುದೂ ಸಹ ನಮ್ಮ ದೇಶದ ಜೈಲುಗಳಲ್ಲಿ ಬಂಧನ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಹಾಗೂ ನಮ್ಮ ದೇಶದ ನ್ಯಾಯಿಕ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿಯಬಹುದು. ಜನರನ್ನು ವಿಚಾರಣಾಧೀನ ಖೈದಿಗಳನ್ನಾಗಿಸುವುದು ಅವರ ಮೇಲೆ, ಅವರ ಕುಟುಂಬದ ಮೇಲೆ ಹಾಗೂ ಒಟ್ಟಾರೆಯಾಗಿ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇದು ಗಂಭೀರ ಆರ್ಥಿಕ, ಸಾಮಾಜಿಕ, ವೈದ್ಯಕೀಯ ಹಾಗೂ ಮಾನಸಿಕ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ಭಾರತದ ಸಂವಿಧಾನದ ಅನುಚ್ಚೇಧ 22 (2) ಯಾವುದೇ ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ, ಆತನನ್ನು 24 ಗಂಟೆಗಳ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಅಥವಾ ಬಿಡುಗಡೆ ಮಾಡಬೇಕು ಎಂದು ಹೇಳುತ್ತದೆ. ಸೆಪ್ಟೆಂಬರ್ 14, 2014 ರಂತೆ, ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಅವರ ಅಪರಾಧಗಳ ಶಿಕ್ಷೆಯ ಪ್ರಮಾಣದಲ್ಲಿ ಅರ್ಧಕ್ಕಿಂತ ಹೆಚ್ಚು ಸಮಯವನ್ನು ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿ ಕಳೆದಿರುವವರನ್ನು ಬಿಡುಗಡೆ ಮಾಡಬಹುದಾಗಿದೆ. ಈವರೆಗೂ ಇಂತಹ ಅನೇಕ ಬಂಧಿತರನ್ನು ಬಿಡುಗಡೆ ಮಾಡಲಾಗಿರುವುದಿಲ್ಲ ಎಂಬುದು ಗೋಚರಿಸುತ್ತದೆ.
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ನೀಡಿರುವ ಭಾರತದ ಕಾರಾಗೃಹ ಅಂಕಿಅಂಶಗಳು, 2021 ರ ಪ್ರಕಾರ ಭಾರತದಲ್ಲಿರುವ ಒಟ್ಟಾರೆ 5,54,034 ಖೈದಿಗಳ ಪೈಕಿ ವಿಚಾರಣಾಧೀನ ಖೈದಿಗಳು 77% (4,27,165) ರಷ್ಟಿದ್ದಾರೆ ಹಾಗೂ ಶಿಕ್ಷಿತ ಖೈದಿಗಳು 22% (1,22,852) ರಷ್ಟಿದ್ದಾರೆ. 2021 ರಾಂತ್ಯಕ್ಕೆ ಉತ್ತರ ಪ್ರದೇಶವು ಅತಿ ಹೆಚ್ಚು (21%, 90660) ವಿಚಾರಣಾಧೀನ ಖೈದಿಗಳನ್ನು, ಬಿಹಾರ 59,577, ಮಧ್ಯಪ್ರದೇಶ 29,094 ಹಾಗೂ ಕರ್ನಾಟಕ 11,689 ವಿಚಾರಣಾಧೀನ ಖೈದಿಗಳನ್ನು ಹೊಂದಿದೆ.
ಉತ್ತರ ಪ್ರದೇಶ ಅತಿ ಹೆಚ್ಚು ಶಿಕ್ಷಿತ ಖೈದಿಗಳನ್ನು (21.9%, 26,956) ಹೊಂದಿದ್ದರೆ, ಮಧ್ಯಪ್ರದೇಶ (15.7%, 19,266) ಹಾಗೂ ಛತ್ತೀಸ್‌ಗಡ (6.3%, 7,762) ಶಿಕ್ಷಿತ ಖೈದಿಗಳನ್ನು ಹೊಂದಿದೆ. ವಿಚಾರಣಾಧೀನ ಖೈದಿಗಳ ಕುರಿತು ಹೇಳುವುದಾದರೆ, ಉತ್ತರ ಪ್ರದೇಶವು ಮತ್ತೊಮ್ಮೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ (21%, 90660). ಇದರ ನಂತರ ಬಿಹಾರ (13.9%, 59,577) ಹಾಗೂ ಮಹಾರಾಷ್ಟ್ರ (7.4%, 31,752) ಇವೆ.
ಈ ಕಾರಾಗೃಹಗಳಲ್ಲಿ 1650 ಮಹಿಳಾ ಖೈದಿಗಳು 1867 ಮಕ್ಕಳೊಂದಿಗೆ ಇದ್ದಾರೆ. ಮಹಿಳಾ ಖೈದಿಗಳಲ್ಲಿ 1418 ಖೈದಿಗಳು 1601 ಮಕ್ಕಳನ್ನು ಹೊಂದಿರುವ ವಿಚಾರಣಾಧೀನ ಖೈದಿಗಳಾಗಿದ್ದಾರೆ ಹಾಗೂ 216 ಶಿಕ್ಷಿತ ಖೈದಿಗಳು 246 ಮಕ್ಕಳೊಂದಿಗೆ ಇದ್ದಾರೆ. ಉತ್ತರ ಪ್ರದೇಶವು ಮಕ್ಕಳನ್ನು ಹೊಂದಿರುವ ಹೆಚ್ಚು ಮಹಿಳಾ ಖೈದಿಗಳನ್ನು ಹೊಂದಿದೆ (379 ಮಹಿಳಾ ಖೈದಿಗಳು, 428 ಮಕ್ಕಳು). ಇದರ ನಂತರ ಬಿಹಾರ (304 ಮಹಿಳಾ ಖೈದಿಗಳು, 344 ಮಕ್ಕಳು) ಮತ್ತು ಪಶ್ಚಿಮ ಬಂಗಾಳ (165 ಮಹಿಳಾ ಖೈದಿಗಳು, 199 ಮಕ್ಕಳು) ಇದೆ.
ಕಳಪೆ ತನಿಖೆ ಮತ್ತು ಅಸ್ವಾಭಾವಿಕ ಸಾವುಗಳ ನಿರ್ಲಕ್ಷ್ಯ ಹಾಗೂ ಆರೋಗ್ಯ ಸಮಸ್ಯೆಗಳು
ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಜೈಲುಗಳಲ್ಲಿ ಆಕ್ರಮಿಸಿಕೊಳ್ಳುವ ಪ್ರಮಾಣ 185%, ಸಿಕ್ಕಿಂನಲ್ಲಿ 167%, ಮಧ್ಯಪ್ರದೇಶದಲ್ಲಿ 164%, ಮೇಘಾಲಯದಲ್ಲಿ 160%, ಮಹಾರಾಷ್ಟ್ರದಲ್ಲಿ 149% ಹಾಗೂ ದೆಹಲಿಯಲ್ಲಿ 182% ಇದೆ. ಜೈಲುಗಳಲ್ಲಿ ಈ ರೀತಿಯ ಜನದಟ್ಟಣೆ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಹಾಗೂ ಕೋವಿಡ್ ಸಾಂಕ್ರಮಿಕದ ಸಂದರ್ಭದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿತ್ತು.
ಈ ಸಮುದಾಯಗಳ ಪರಿಸ್ಥಿತಿಗಳನ್ನು ಜೈಲಿನ ಗೋಡೆಗಳಿಂದಾಚೆ ನೋಡುವುದು ಮುಖ್ಯವಾಗುತ್ತದೆ. ಈ ಸಮುದಾಯಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಬೇರೆಯದೇ ರೀತಿಯ ತಾರತಮ್ಯ ಹಾಗೂ ಶೋಷಣೆಯನ್ನು ಅನುಭವಿಸುತ್ತವೆ. ಇವರಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಕಡಿಮೆ ಪ್ರವೇಶಾತಿ, ಹೆಚ್ಚಿದ ಬಡತನ, ನಿರುದ್ಯೋಗ ಹಾಗೂ ಅತ್ಯಂತ ಕನಿಷ್ಟ ಜಮೀನನ್ನು ಹೊಂದಿರುತ್ತಾರೆ. ಈ ಸಮುದಾಯಗಳು ಜಾತಿ, ಲಿಂಗ ಹಾಗೂ ಧರ್ಮ ಆಧಾರಿತ ತಾರತಮ್ಯವನ್ನೂ ಸಹ ಅನುಭವಿಸುತ್ತವೆ.
ದಲಿತರು ಹಾಗೂ ಆದಿವಾಸಿಗಳು ಶತಮಾನಗಳಿಂದಲೂ ಸಹ ಜಾತಿ ತಾರತಮ್ಯವನ್ನು ಅನುಭವಿಸಿದ್ದರೆ, ಮುಸ್ಲಿಂ ಸಮುದಾಯವನ್ನು ಬಹಿರಂಗವಾಗಿಯೇ ಗುರಿಯಾಗಿಸಲಾಗುತ್ತಿದೆ. ಸಾರ್ವಜನಿಕವಾಗಿಯೇ ಇವರನ್ನು ಅಧಿಕಾರಶಾಹಿ, ಚುನಾಯಿತ ಜನ ಪ್ರತಿನಿಧಿಗಳು ಗುರಿಯಾಗಿಸಿ, ಇವರಿಗೆ ಬೆದರಿಕೆಯನ್ನು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ಸಮುದಾಯಗಳು ಅತ್ಯಂತ ದುರ್ಬಲವಾಗಿರುವ ಪೊಲೀಸ್ ಸ್ಟೇಷನ್‌ಗಳಲ್ಲಿ ಹಾಗೂ ಕಾರಾಗೃಹಗಳಂತಹ ಜಾಗಗಳಲ್ಲಿ ಇವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಾವು ಊಹಿಸಿಕೊಳ್ಳಬಹುದು.
ಸಮಾಜವಾಗಿ, ಈ ಸಮುದಾಯಗಳಿಂದ ಬಂಧಿತರಾಗಿ ಜೈಲುಗಳಲ್ಲಿರುವವರು ಈ ಕೆಳಗಿನವುಗಳನ್ನು ಅನುಭವಿಸುತ್ತಾರೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಿದೆ:
- ಕಾನೂನು ಸಲಹೆಗೆ ಅಸಮರ್ಪಕ ಪ್ರವೇಶಾತಿ
- ಪೊಲೀಸ್, ನ್ಯಾಯಾಂಗ, ಜೈಲು ವ್ಯವಸ್ಥೆಗಳು ಹಾಗೂ ಇತ್ಯಾದಿಗಳ ಕುರಿತಂತೆ ಕಡಿಮೆ ಜಾಗೃತಿ, ಇದು ದಾಖಲೆಗಳನ್ನು ಪಡೆದುಕೊಳ್ಳುವ, ಜಾಮೀನಿಗೆ ಅರ್ಜಿ ಸಲ್ಲಿಸುವ, ಅವರ ಮೇಲೆ ಹೊರಿಸಲಾಗಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಹಾಗೂ ಉನ್ನತ ಪ್ರಾಧಿಕಾರಗಳಿಗೆ ಮನವಿಯನ್ನು ಸಲ್ಲಿಸುವ ಅವರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.
- ಪೊಲೀಸ್, ನ್ಯಾಯಾಲಯಗಳು, ನಾಗರೀಕ ಸಮಾಜ ಹಾಗೂ ಮಾನವ ಹಕ್ಕುಗಳ ಸಂಸ್ಥೆಗಳಿಂದ ಪೂರ್ವಾಗ್ರಹ ಹಾಗೂ ತಾರತಮ್ಯ. ಪೊಲೀಸ್ ಸ್ಟೇಷನ್ ಹಾಗೂ ಕಾರಾಗೃಹಗಳಲ್ಲಿರುವ ಆಂತರಿಕ ಪೂರ್ವಾಗ್ರಹಗಳು ಹಾಗೂ ಬಹಿರಂಗ ದ್ವೇಷ ಈ ಸ್ಥಳಗಳಲ್ಲಿ ಹೆಚ್ಚಾಗಿ, ಈ ಸಮುದಾಯದ ವ್ಯಕ್ತಿಗಳನ್ನು ಹಿಂಸೆಗೆ ದುರ್ಬಲರನ್ನಾಗಿಸಬಹುದು, ಅವರಿಗೆ ನ್ಯಾಯ ನಿರಾಕರಿಬಹುದು, ಅವರ ಮೇಲೆ ದೌರ್ಜನ್ಯ ನಡೆಸಿ, ನಿರ್ಲಕ್ಷಿಸಿ, ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಬಹುದು.
ವಿದೇಶಿ ಖೈದಿಗಳಲ್ಲಿ 74.6% ರಷ್ಟು ಖೈದಿಗಳು ವಿಚಾರಣಾಧೀನ ಖೈದಿಗಳಾದರೆ, 19.4% ರಷ್ಟು ಖೈದಿಗಳು ಶಿಕ್ಷಿತ ಖೈದಿಗಳಾಗಿದ್ದಾರೆ. ಇವರಲ್ಲಿ ಹೆಚ್ಚು ಸಂಖ್ಯೆ ಬಾಂಗ್ಲಾದೇಶ (46.8%) ಹಾಗೂ ನೇಪಾಳ (26%) ದವರದ್ದಾಗಿದೆ. ಬಾಂಗ್ಲಾದೇಶಿಕರ ಬಗ್ಗೆ ಇರುವ ಸಾಮಾನ್ಯ ಅನುಮಾನವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೇ, ಜೈಲು ವ್ಯವಸ್ಥೆಯಲ್ಲಿ ಈ ಕುರಿತು ಇರುವ ತಾರತಮ್ಯ ಪ್ರಮಾಣವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ಸಂಭವನೀಯ ಕ್ರಮಗಳು
ಇವರು ಎದುರಿಸುತ್ತಿರುವ ದೊಡ್ಡ ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯದ ಗುರುತಾಗಿ, ಕಾರಾಗೃಹಗಳಲ್ಲಿರುವ ಈ ಅಂಚಿಗೆ ಸರಿಸಲ್ಪಟ್ಟ ಸಮುದಾಯಗಳ ಪ್ರಾಬಲ್ಯವನ್ನು ನಿರ್ಲಕ್ಷಿಸಬಾರದು. ಈ ಕುರಿತ ಅಂಕಿಅಂಶಗಳು ಸರ್ಕಾರಗಳು ಈ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಬೇಕೆಂದು ಸೂಚಿಸುತ್ತಿವೆ. ಸಮಾಜದಲ್ಲಿರುವ ಆಂತರಿಕ ಪೂರ್ವಾಗ್ರಹಗಳನ್ನು ಸರಿಪಡಿಸುವುದರ ಜೊತೆಗೆ ಪೊಲೀಸ್ ವ್ಯವಸ್ಥೆ ಹಾಗೂ ಕಾರಾಗೃಹ ವ್ಯವಸ್ಥೆಯನ್ನು ಜವಾಬ್ದಾರಿಯಾಗಿಸಿ, ಅವುಗಳು ಕೇವಲ ಪ್ರಸ್ತುತವಿರುವ ಸಾಮಾಜಿಕ ಪೂರ್ವಾಗ್ರಹಗಳ ಮುಂದುವರೆದ ಭಾಗಗಳಾಗದೆ, ನ್ಯಾಯ-ನೀತಿ, ಕಾನೂನು ಹಾಗೂ ಈ ನೆಲದ ಸಂವಿಧಾನವನ್ನು ಎತ್ತಿಹಿಡಿಯುವಂತವುಗಳಾಗಿಸಬೇಕು.
ಈ ಸಮುದಾಯಗಳೆಡೆಗೆ ಆಳವಾಗಿ ಬೇರೂರಿರುವ ಸಾಮಾಜಿಕ ಕಳಂಕ ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದಿರುವುದರ ಅರ್ಥ ಈ ಸಮಾಜ ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಕುರುಡಾಗುತ್ತದೆ ಎಂದು ತೋರಿಸುತ್ತದೆ. ಯಾರಾದರೂ ಒಬ್ಬ ʼಕ್ರಿಮಿನಲ್ʼ, ʼದೇಶಕ್ಕೆ ಅಪಾಯಕಾರಿʼ ಅಥವಾ ʼಸಮಾಜ ವಿರೋಧಿʼಯಾದರೆ ಅದರ ಅರ್ಥ ಆತ ಮೂಲಭೂತ ಮಾವ ಹಕ್ಕುಗಳನ್ನು ಹೊಂದುವ ಹಕ್ಕನ್ನು ಕಳೆದುಕೊಳ್ಳುತ್ತಾನೆ ಎಂಬ ನಂಬಿಕೆಯು ಈ ವ್ಯಕ್ತಿಗಳನ್ನು ಹಿಂಸೆಯ ವಾತಾವರಣಕ್ಕೆ ದೂಡುತ್ತದೆ ಹಾಗೂ ನ್ಯಾಯದ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ ಏಕೆಂದರೆ ಇಡೀ ವ್ಯವಸ್ಥೆ ಅಥವಾ ರಚನೆಯ ವಿರುದ್ಧ ಇದು ಒಂದು ಕುಟುಂಬದ, ಒಬ್ಬ ವ್ಯಕ್ತಿಯ ಹಾಗೂ ಒಂದು ಸಮುದಾಯದ ಪರಿಸ್ಥಿತಿಯಾಗಿರುತ್ತದೆ.
ನಾಗರೀಕ ಸಮಾಜ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಪೊಲೀಸ್ ಹಾಗೂ ನ್ಯಾಯಿಕ ವ್ಯವಸ್ಥೆಯ ಮೇಲಿನ ರಾಜಕೀಯ ಪ್ರಭಾವವನ್ನು ಖಂಡಿಸಬೇಕು. ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಅಣತಿಯ ಮೇರೆಗೆ ಪೊಲೀಸರು ಜನರ ಮೇಲೆ ದಬ್ಬಾಳಿಕೆಯನ್ನು ನಡೆಸುವುದನ್ನು ನಿಲ್ಲಿಸಬೇಕು. ಪೊಲೀಸರನ್ನು ಒಂದು ನಿರ್ದಿಷ್ಟ ಸಮುದಾಯಗಳು ತಮ್ಮ ಸಂವಿಧಾನದಲ್ಲಿ ತಮಗೆ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಸಹ ಕೇಳದಂತೆ ಮಾಡುವ ನಿಟ್ಟಿನಲ್ಲಿ ಇವರಿಗೆ ಪಾಠವನ್ನು ಕಲಿಸುವ ಸಾಧನಗಳನ್ನಾಗಿ ನಡೆಸಿಕೊಳ್ಳಲಾಗುತ್ತಿದೆ.
ಈ ಸಮುದಾಯಗಳಲ್ಲಿರುವ ದುರ್ಬಲ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಅಗತ್ಯವಾದ ಕಾನೂನಿನ ನೆರವು, ಜಾಮೀನು, ಪುನರ್ವಸತಿ ಹಾಗೂ ಪರಿಹಾರಗಳನ್ನು ನೀಡಿ, ಅವರಿಗೆ ಹೆಚ್ಚುವರಿ ನೆರವನ್ನು ನೀಡುವುದು ಈ ಸಮಯದ ತುರ್ತಾಗಿದೆ. ಇಂತಹ ದುರ್ಬಲ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಭೆಕಾದ ಅಗತ್ಯ ನೆರವನ್ನು ನೀಡದಿದ್ದ ಪಕ್ಷದಲ್ಲಿ ಇವರು ರಕ್ಷಣೆಯ ಬಲೆಯಿಂದ ಹೊರಬೀಳುತ್ತಾರೆ ಮಾತ್ರವಲ್ಲದೆ ಮಾನವ ಹಕ್ಕುಗಳ ಪರಿಧಿಯಿಂದಲೂ ಸಹ ಹೊರ ಬೀಳುತ್ತಾರೆ.
ಈ ಖೈದಿಗಳಲ್ಲಿ ಅನೇಕರನ್ನು ಸುಳ್ಳು ಪ್ರಕರಣಗಳನ್ನು ಹಾಕಿ ಬಂಧಿಸಲಾಗಿದೆ ಹಾಗೂ ಇವುಗಳಲ್ಲಿ ಬಹುತೇಕರನ್ನು ಇವರಿಗೆ ಯಾವುದೇ ಸಾಮಾಜಿಕ ರಕ್ಷಣೆ, ಬೆಂಬಲ ಇಲ್ಲದ ಕಾರಣ ಹಾಗೂ ಇವರು ತಮ್ಮ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಅಂದರೆ ಅವರ ಭೂಮಿಯನ್ನು ಕಾರ್ಪೊರೇಟ್‌ಗಳು ಕಸಿದುಕೊಂಡಾಗ, ಜಾತಿ ದೌರ್ಜನ್ಯ, ಮೂಲಸೌಕರ್ಯ ಕೊರತೆಯ ವಿರುದ್ಧ ಪ್ರತಿಭಟನೆ ಮಾಡಿದ ಕಾರಣಕ್ಕೆ ಇವರನ್ನು ಕಂಬಿಗಳ ಹಿಂದೆ ತಳ್ಳಲಾಗಿದೆ. ಇಂತಹ ಹಲವು ಪ್ರಕರಣಗಳನ್ನು ಮಾಧ್ಯಮಗಳು ಪ್ರಸಾರ ಮಾಡಿ, ಮಾನವ ಹಕ್ಕು ಸಂಘಟನೆಗಳು ಹಾಗೂ ಆಯೋಗಗಳು ಈ ಕುರಿತು ಕಾರ್ಯಪ್ರವೃತ್ತರಾದರೂ ಸಹ ಈ ಅನ್ಯಾಯಗಳ ವಿರುದ್ಧ ಹೋರಾಡಲು ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ಕೇಳಿದವರನ್ನು ಬಂಧಿಸುವುದರ ವಿರುದ್ಧ ಹೋರಾಡುವಂತಹ ವ್ಯವಸ್ಥೆಗಳನ್ನು ಸೃಷ್ಟಿಸಬೇಕು. ಭೀಮಾ ಕೋರೆಗಾಂವ್ ಬಂಧನಗಳು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಭಾರತದ ಜೈಲುಗಳಲ್ಲಿರುವ ಶೋಷಿತ ಸಮುದಾಯಗಳ ಖೈದಿಗಳ ಪ್ರತಿಶತವನ್ನು ಕಡಿಮೆ ಮಾಡಲು ಸಮರ್ಥ ವಕೀಲರ ವಿಕೇಂದ್ರಿತ ಕಾನೂನು ನೆರವು ಘಟಕಗಳ ಅವಶ್ಯಕವಾಗಿದೆ.
ಸರ್ಕಾರಗಳು ಚಿತ್ರಹಿಂಸೆಯ ಕುರಿತ ಅನುಮಾನಗಳು ಹಾಗೂ ಆರೋಪಗಳೆಲ್ಲವನ್ನು ತನಿಖೆಗೆ ಒಳಪಡಿಸಬೇಕು. ಪರಿಸ್ಥಿತಿಗಳು ಯಾವುದೇ ಆಗಲಿ, ಚಿತ್ರಹಿಂಸೆ ಎಂದಿಗೂ ನ್ಯಾಯಯುತವಲ್ಲ.
ಜೈಲಿನಲ್ಲಿರುವ ವೈದ್ಯಕೀಯ ಅಧಿಕಾರಿ ಯಾವುದೇ ಒಬ್ಬ ಖೈದಿಯ ಮನಸ್ಸಿನ ಮೇಲೆ ಜೈಲಿನ ಶಿಸ್ತು ಅಥವಾ ಅವನು ಒಳಗಾಗಿರುವ ಚಿತ್ರಹಿಂಸೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಗುರುತಿಸಿದರೆ, ಈ ವಿಷಯವನ್ನು ಜೈಲಿನ ಅಧೀಕ್ಷಕರಿಗೆ ತಿಳಿಸಬೇಕು ಹಾಗೂ ಆ ವರದಿಯನ್ನು ಪೊಲೀಸ್ ಪ್ರಧಾನ ನಿರೀಕ್ಷಕರಿಗೆ (ಇನ್ಸ್‌ಪೆಕ್ಟರ್ ಜನರಲ್) ಅವರಿಗೆ ರವಾನಿಸಬೇಕು. ಜೈಲಿನಲ್ಲಿ ಯಾವುದೇ ಒಬ್ಬ ಖೈದಿ ಮರಣ ಹೊಂದಿದರೆ, ಆತ ಮೊದಲು ಅನಾರೋಗ್ಯಕ್ಕೀಡಾದ ದಿನವನ್ನು, ಅಂದು ಆತ ಯಾವ ಕೆಲಸವನ್ನು ಮಾಡಿದ ಎಂಬುದನ್ನು, ಆತ ಸೇವಿಸಿದ ಆಹಾರ, ಆಸ್ಪತ್ರೆಗೆ ಸೇರಿದ ದಿನಾಂಕ, ವೈದ್ಯಾಧಿಕಾರಿಗೆ ಈ ಕುರಿತು ಮಾಹಿತಿ ನೀಡಿದ ದಿನಾಂಕ, ಖಾಯಿಲೆಯ ವಿಧ, ಸಾವಿಗೂ ಮುಂಚಿತವಾಗಿ ವೈದ್ಯಾಧಿಕಾರಿ ಕೊನೆಯ ಬಾರಿ ಆತನನ್ನು ಪರೀಕ್ಷಿಸಿದ ದಿನಾಂಕ, ಆತ ಮರಣ ಹೊಂದಿದ ದಿನಾಂಕ, ಹಾಗೂ ಮರಣೋತ್ತರ ಪರೀಕ್ಷೆಯ ರೂಪ ಇತ್ಯಾದಿ ವಿವರಗಳನ್ನು ವೈದ್ಯಾಧೀಕಾರಿ ದಾಖಲಿಸಬೇಕು.
1 ಚಿತ್ರಹಿಂಸೆ ಹಾಗೂ ಇನ್ನಿತರ ಕ್ರೂರ, ಅಮಾನವೀಯ ಹಾಗೂ ಘನತೆಗೆ ಕುಂದುಂಟುಮಾಡುವ ಶಿಕ್ಷೆಗಳ ವಿರುದ್ಧದ ವಿಶ್ವಸಂಸ್ಥೆಯ ಸಮಾವೇಶದ ಅನುಚ್ಛೇಧ 2, ಈ ರೀತಿ ಹೇಳುತ್ತದೆ:
“1. ಪ್ರತಿ ಸರ್ಕಾರಗಳು ತನ್ನ ವ್ಯಾಪ್ತಿಯೊಳಗೆ ನಡೆಯುವ ಚಿತ್ರಹಿಂಸೆ, ಅಮಾನವೀಯ ಶಿಕ್ಷೆ ಹಾಗೂ ಇನ್ನಿತರ ಕ್ರೌರ್ಯವನ್ನು ತಡೆಯಲು ಪರಿಣಾಮಕಾರಿ ಆಡಳಿತಾತ್ಮಕ, ಶಾಸನಾತ್ಮಕ, ನ್ಯಾಯಿಕ ಹಾಗೂ ಇತರೆ ಕ್ರಮಗಳನ್ನು ಕೈಗೊಳ್ಳಬೇಕು.”
“2. ಚಿತ್ರಹಿಂಸೆಯನ್ನು ಸಕಾರಣಗೊಳಿಸಲು ಯಾವುದೇ ಪರಿಸ್ಥಿತಿಗಳನ್ನು ಅಂದರೆ ಯುದ್ಧದ ಸ್ಥಿತಿ, ಯುದ್ಧದ ಬೆದರಿಕೆ, ಆಂತರಿಕ ರಾಜಕೀಯ ಅಸ್ಥಿರತೆ ಅಥವಾ ಯಾವುದೇ ನಾಗರೀಕ ತುರ್ತು ಪರಿಸ್ಥಿತಿಯನ್ನು ಕಾರಣವಾಗಿಸಿಕೊಳ್ಳಬಾರದು.”
“3. ಚಿತ್ರಹಿಂಸೆಯನ್ನು ಸಕಾರಣಗೊಳಿಸಲು ಮೇಲಾಧಿಕಾರಿಗಳ ಆದೇಶ ಅಥವಾ ಸಾರ್ವಜನಿಕ ಪ್ರಾಧಿಕಾರದ ಆದೇಶವನ್ನು ಕಾರಣವಾಗಿಸಬಾರದು.”
ಪ್ರತಿ ಅಪರಾಧಿಕ ಖೈದಿಯನ್ನು ಆತ ಜೈಲಿನೊಳಗೆ ದಾಖಲಾದ ಕೂಡಲೇ ವೈಧ್ಯಾಧಿಕಾರಿಯು ಆತನನ್ನು ಪರೀಕ್ಷಿಸಿ, ಆತನ ಆರೋಗ್ಯದ ಸ್ಥಿತಿಯನ್ನು ದಾಖಲಿಸಬೇಕು ಹಾಗೂ ಅವನ ಮೈಮೇಲೆ ಇರುವ ಗಾಯಗಳನ್ನು ಅಥವಾ ಗಾಯದ ಗುರುತಿಗಳನ್ನೂ ಸಹ ತಪ್ಪದೆ ದಾಖಲಿಸಬೇಕು. ಮಹಿಳಾ ಖೈದಿಗಳ ವಿಷಯದಲ್ಲಿ ಇದನ್ನು ಜೈಲಿನ ಮೇಟ್ರನ್ ಮಾಡಬೇಕು.
ಯಾವುದೇ ಜೈಲು ಕೋಣೆಯನ್ನು ಸಾಲಿಟರಿ ಕನ್ಫೈನ್‌ಮೆಂಟ್ ಅಂದರೆ ಆ ಕೊಠಡಿಯ ಮೂಲಕ ಖೈದಿಗಳು ಸಂವಹಿಸಲು ಸಾಧ್ಯವಾಗದ ಹೊರತು ಖೈದಿಗಳನ್ನು ಒಂಟಿಯಾಗಿಸಲು ಬಳಸಬಾರದು ಎಂದು ಕಾರಾಗೃಹ ಕಾಯಿದೆಯು ಸ್ಪಷ್ಟವಾಗಿ ಹೇಳುತ್ತದೆ. ಹೀಗೆ 24 ಗಂಟೆಗೂ ಅಧಿಕ ಸಮಯ ಒಂಟಿ ಕೋಣೆಗೆ ಹಾಕಿದ ಖೈದಿಗಳನ್ನುಉ ವೈದ್ಯಾಧಿಕಾರಿಯು ಪರೀಕ್ಷಿಸಬೇಕು.
ದತ್ತಾಂಶಗಳು ಸರ್ಕಾರವನ್ನು ಕೆಟ್ಟ ರೀತಿಯಲ್ಲಿ ಪ್ರತಿ ಬಿಂಬಿಸಿದಾಗ ಆ ಸರ್ಕಾರಗಳು ಸದರಿ ದತ್ತಾಂಶವನ್ನು ಸಿಗದ ಹಾಗೆ ಮಾಡುವುದು, ಅದರಲ್ಲಿ ಅಕ್ರಮ ಎಸಗುವುದು, ಈ ದತ್ತಾಂಶವನ್ನು ಸಂಗ್ರಹಿಸುವುದನ್ನೇ ನಿಲ್ಲಿಸುವುದು ಮಾಡುವ ಸಂಭವಗಳಿರುತ್ತವೆ. ವಾಸ್ತವದಲ್ಲಿ ಒಂದು ನೈಜ ವಿಶ್ಲೇಷಣೆಯನ್ನು ಮಾಡಬೇಕೆಂದರೆ, ಹಾಗೂ ಎಲ್ಲಿ ಯಾವ ರೀತಿಯ ಸಮಸ್ಯೆಗಳಿವೆ, ಅವುಗಳನ್ನು ಪರಿಹರಿಸುವುದ ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಹೆಚ್ಚು ಹೆಚ್ಚು ದತ್ತಾಂಶವು ಲಭ್ಯವಿರಬೇಕು. ಭಾರತವು ನಮ್ಮ ಮಾನವ ಹಕ್ಕುಗಳ ಕುರಿತು ಅಂತರ್‌ರಾಷ್ಟ್ರೀಯ ವರದಿಗಳಿಗೆ ಮುಕ್ತವಾಗಿರಬೇಕು ಹಾಗೂ ಈ ವರದಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದನ್ನು ನಿರಾಕರಿಸುವುದರಿಂದ ನಾವು ಸತ್ಯದಿಂದ ಬಹಳಷ್ಟು ದೂರ ಸಾಗುತ್ತಿದ್ದೇವೆ, ಮಾನವ ಹಕ್ಕುಗಳಿಂದ ಹಾಗೂ ಸಂವಿಧಾನದಿಂದ ದೂರ ಸಾಗುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಕೆಲವೊಮ್ಮೆ ಪೊಲೀಸರು ಹಾಗೂ ಕಾರಾಗೃಹ ವ್ಯವಸ್ಥೆಗಳು ಜನರನ್ನು ದಲಿತರು, ಆದಿವಾಸಿಗಳು ಹಾಗೂ ಮುಸ್ಲಿಂ ಸಮುದಾಯಳು ತಪ್ಪಿತಸ್ಥರು ಎಂಬಂತೆ ನೋಡುತ್ತಾರೆ ಹಾಗೂ ಇವರಿಂದ ತಪ್ಪೊಪ್ಪಿಗೆಯನ್ನು ಪಡೆಯಲು ಮುಂದಾಗುತ್ತಾರೆ.
ಚಿತ್ರಹಿಂಸೆಯ ನಂತರ ಪಡೆದುಕೊಂಡ ಯಾವುದೇ ಮಾಹಿತಿಯನ್ನು ಕಾನೂನಿನ ನ್ಯಾಯಾಲಯಗಳಲ್ಲಿ ಒಪ್ಪಿಕೊಳ್ಳಲಾಗುವುದಿಲ್ಲ ಹಾಗೂ ಈ ರೀತಿಯ ತಪ್ಪೊಪ್ಪಿಗೆ ಹೇಳಿಕೆಗಳಿಗೆ ನ್ಯಾಯಾಲಯದಲ್ಲಿ ಮಹತ್ವವಿರುವುದಿಲ್ಲ. ಈ ರೀತಿಯ “ಪುರಾವೆ”ಗಳನ್ನು ನ್ಯಾಯಾಲಯ ತಿರಸ್ಕರಿಸುತ್ತದೆ. ನ್ಯಾಯಾಲಯವು ಸೇಡಿನಿಂದ ಕಾರ್ಯನಿರ್ವಹಿಸುವುದಿಲ್ಲ ಹಾಗೂ ಆರೋಪಿಯ ಜೀವವನ್ನು, ಸ್ವತ್ತುಗಳನ್ನು, ಹಾಗೂ ಸಂತ್ರಸ್ಥರ ಘನತೆಯನ್ನು ಅಮೌಲ್ಯೀಕರಿಸುವ ಅಪರಾಧದೊಂದಿಗೆ ಸ್ಪರ್ಧೆ ಮಾಡುವುದಿಲ್ಲ. ಸಾಂವಿಧಾನಿಕ ಮಾರ್ಗದರ್ಶನಗಳೊಂದಿಗೆ ನ್ಯಾಯಾಲಯ ಹಾಗೂ ಸರ್ಕಾರಗಳು ಸ್ಪರ್ಧೆ ಅಥವಾ ವಾಕ್ಚಾತುರ್ಯಕ್ಕೂ ಮಿಗಿಲಾಗಿ ನ್ಯಾಯಯುತವಾಗಿ ಕಾರ್ಯನಿರ್ವಹಿಸಬೇಕು.
ಪೊಲೀಸ್ ಠಾಣೆಗಳು ಹಾಗೂ ಕಾರಾಗೃಹಗಳಲ್ಲಿ ಹೇಗೆ ಜಾತಿ, ಲಿಂಗ, ಧರ್ಮ, ದೈಹಿಕ ಸಾಮರ್ಥ್ಯ, ಬೌಗೋಲಿಕ ಪ್ರದೇಶ, ಲೈಂಗಿಕ ದೃಷ್ಟಿಕೋನ, ವಯಸ್ಸು ಇತ್ಯಾದಿ ಆಧಾರಿತ ತಾರತಮ್ಯ ನಡೆಯುತ್ತಿದೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಲಾಗುವುದಿಲ್ಲ. ಪೊಲೀಸರು ಹಾಗೂ ಬಂಧಿತ ವ್ಯಕ್ತಿಗಳ ನಡುವೆ ಇರುವ ಅಧಿಕಾರದ ವ್ಯತ್ಯಾಸದ ಹಿನ್ನೆಲೆಯಲ್ಲಿ ನೋಡುವುದಾದರೆ ಈ ರೀತಿಯ ಉಲ್ಲಂಘನೆಗಳನ್ನು ತಡೆಯಲು ತುರ್ತು ಹಾಗೂ ಗಂಭೀರ ಮೇಲ್ವಿಚಾರಣೆಯ ಅಗತ್ಯವಿದೆ. ಯಾವುದೇ ಒಂದು ತಾರತಮ್ಯದ ಪ್ರಕರಣ ನಡೆದರೆ ಕೂಡಲೇ ಅದರ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕು.
ಉಪಸಂಹಾರ
ಕಾರಾಗೃಹ ವ್ಯವಸ್ಥೆಯ ಕುರಿತಂತೆ ಯಾವುದೇ ರೀತಿಯ ಅನುಮಾನಗಳಾಗಲಿ ಅಥವಾ ಅಸ್ಪಷ್ಟತೆಯಾಗಲಿ ಇರಬಾರದು ಅಥವಾ ಅತ್ಯಂತ ಹೀನ ಅಪರಾಧಿಗಳಿಗೂ ಸಹ ಕಾರಾಗೃಹಗಳು ಚಿತ್ರಹಿಂಸೆಯ ತಾಣಗಳಾಗಿರ ಬಾರದು ಎಂದು ನಾಗರೀಕ ಸಮಾಜಕ್ಕೆ ಮನವರಿಕೆಯಾಗಬೇಕು. ಸಮಾಜದಲ್ಲಿ ದಲಿತ, ಆದಿವಾಸಿ ಹಾಗೂ ಮುಸ್ಲಿಂ ಸಮುದಾಯದ ವ್ಯಕ್ತಿಗಳಿಗೆ ಉಂಟಾದ ತಾರತಮ್ಯ ಹಾಗೂ ಹಿಂಸೆಯನ್ನು ಜೈಲಿನಲ್ಲಿ ಪುನರಾವರ್ತಿಸಬಾರದು. ಈ ಸಮುದಾಯಗಳು ಹಿಂಸೆ, ತಾರತಮ್ಯಕ್ಕೆ, ನಿರ್ಲಕ್ಷ್ಯ, ಜಾಮೀನು ನಿರಾಕರಣೆ ಅಥವಾ ವಕೀಲರನ್ನು ನೇಮಿಸಿಕೊಳ್ಳುವುದಕ್ಕಿರುವ ಅಶಕ್ತಿಯ ಅರ್ಥ ಇವರನ್ನು ರಕ್ಷಿಸಲು ಹಾಗೂ ವ್ಯವಸ್ಥೆಯನ್ನು ಜವಾಬ್ದಾರಿಯಾಗಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದನ್ನು ಸೂಚಿಸುತ್ತದೆ. ಈ ಕುರಿತು ಕಾನೂನು ಹಾಗೂ ಆರೋಗ್ಯ ವ್ಯವಸ್ಥೆಗಳು ಒಂದು ಉತ್ತಮ ಅಡಿಪಾಯವನ್ನು ಹಾಕಿ, ಅವುಗಳು ಯಾವುದೇ ರಾಜಕೀಯ, ಧಾರ್ಮಿಕ, ಜಾತಿ ಆಧಾರಿತ ಹಾಗೂ ಸೈದ್ಧಾಂತಿಕ ರಚನೆಗಳಿಗಿಂತ ಮಿಗಿಲಾಗಿ ಸಾಂವಿಧಾನಿಕ ತತ್ವಗಳನ್ನು ಹಾಗೂ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುತ್ತವೆ ಎಂಬುದನ್ನು ನಿರೂಪಿಸಬೇಕು.
ಒಂದು ನಾಗರೀಕ ಸಮಾಜವಾಗಿ, ಕೆಲವೊಂದು ನಿರ್ದಿಷ್ಟ ಸಮುದಾಯಗಳ ವ್ಯಕ್ತಿಗಳ ಅಸಮಾನ ಬಂಧನ ಹಾಗೂ ಅವರನ್ನು ಪೊಲೀಸ್ ಕಸ್ಟಡಿಯ ಹಿಂಸೆಯ ಭಾಗವಾಗಿಸುವುದು ನಾಗರೀಕ ಸಮಾಜದ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆಯೇ ಎಂಬುದನ್ನು ನಾವು ನಮ್ಮನ್ನೇ ಕೇಳಿಕೊಳ್ಳಬೇಕಿದೆ. ನಾವು ಈ ಉಲ್ಲಂಘನೆಗಳನ್ನು ಸಾಮಾನ್ಯೀಕರಿಸಬೇಕೇ? ಅಥವಾ ಇವುಗಳನ್ನು ವಿರೋಧಿಸುವ ಬಹುಮುಖ್ಯ ಪ್ರಶ್ನೆಗಳನ್ನು ಕೇಳಬೇಕೇ?
ಲೇಖಕರು ವಕೀಲರು ಹಾಗೂ ನಿರ್ದೇಶಕರು, ಸಂತ ಜೋಸೆಫರ ಕಾನೂನು ಕಾಲೇಜು, ಬೆಂಗಳೂರು
ಟ್ವಿಟ್ಟರ್: @JeraldSJCL