ಮೊದಲ ಆಯಿರಿ

ಮೊದಲ ಆಯಿರಿ

ಬಿಂದು ರಕ್ಷಿದಿ

ನನ್ನ ತಂದೆ ತಾಯಿ ಇಬ್ಬರೂ ಹವ್ಯಾಸಿ ರಂಗಭೂಮಿಯ ಕಲಾವಿದರು. ಹಾಗಾಗಿ ಚಿಕ್ಕಂದಿನಿಂದಲೂ ನನಗೆ ಅದರ ನಂಟಿದೆ. ಆದರೆ ನಟನೆಯನ್ನು ವೃತ್ತಿಯಾಗಿ ಆರಂಭಿಸಿ ಇತ್ತೀಚಿನ 10 ವರ್ಷ ಆಗ್ತಾ ಬಂತು ಅಷ್ಟೇ ಹೇಚೆನಲ್ಲ. ಕರ್ನಾಟಕದ ಸುಮಾರು ಎಲ್ಲಾ ಜಿಲ್ಲೆಗಳಲ್ಲೂ ನಾಟಕ ಮಾಡಿದ ನೆನಪು.. ಹೊರರಾಜ್ಯಗಳಲ್ಲೂ ಕೂಡ. ಸಿನೆಮಾದಲ್ಲಿ ನಟಿಸಲು ಶುರು ಮಾಡಿದ ಮೇಲೆ ನಾಟಕದ ಕೆಲಸಗಳಲ್ಲಿ ಭಾಗಿಯಾಗಿದ್ದು ತೀರಾ ಕಡಿಮೆಯೇ. ನಾಲ್ಕು ವರ್ಷಗಳ ನಂತರ ಈಗ ಮತ್ತೆ ರಂಗದ ಮೇಲೆ! .. ಅದೂ ಗೆಳೆಯ ಲಕ್ಷ್ಮಣ್ ನಿರ್ದೇಶನ ಮಾಡಿರುವ ದಕ್ಲಕಥಾ ದೇವಿಕಾವ್ಯ ನಾಟಕದಲ್ಲಿ..

ಒಂದು ದಿನ ಲಕ್ಷ್ಮಣ ನನಗೆ ಕಾಲ್ ಮಾಡಿ – “ಏನೇ ನಾಟಕದಲ್ಲಿ ಆಕ್ಟ್ ಮಾಡೋದನ್ನ ಬಿಟ್ಬಿಟಿದೀಯಾ. ಈಗೊಂದು ಅಪರೂಪದ ನಾಟಕ ಮಾಡೋದಿದೆ. ಅಭಿನಯಿಸ್ತೀಯಾ?” ಅಂತ ಕೇಳಿದಾಗ ಹಸಿದವನ ಎದುರು ಮೃಷ್ಟಾನ್ನ ಇತ್ತ ಹಾಗಾಯ್ತು..

ನಾನು ಮತ್ತು ನವೀನ್ ಎಷ್ಟೋ ಸಾರಿ ಯೋಚನೆ ಮಾಡಿದ್ದೆವು ನಾವೇ ಒಂದು ನಾಟಕ ಮಾಡೋಣ ಅಂತ. ಕಾರಣಾಂತರಗಳಿಂದ ಅದು ಸಾಧ್ಯ ಆಗಿರಲಿಲ್ಲ.. ಹೀಗಾಗಿ ಈ ಅವಕಾಶ ಬಂದಾಗ ಹಿಂದು ಮುಂದು ಯೋಚಿಸಲೇ ಇಲ್ಲ. “ಮಾಡ್ತೀನಿ ಕಣೋ” ಅಂದೆ..

ಹೀಗೆ ದಕ್ಲಕತೆಯದೇವಿ ಯನ್ನು ನಾನು ಭೇಟಿ ಮಾಡಿದ್ದು.

ಸರಿ . ನಾಟಕದ ರೀಡಿಂಗ್ ಗೆ ಅಂತ ಕೂತೆವು.

ದೇವರಾಣೆ ಹೇಳ್ತೀನಿ ಅರ್ಥ ಆಗ್ಲಿಲ್ಲ!!!.

“ಇದೇನು? ಪುರುಸೊತ್ತಲ್ಲಿ ಕೂತ್ಕೊಂಡು ಒಂದೂ ವಿರಾಮ ಇಲ್ಲದೆ ಮೂರು ಮೂರು ಪೇಜ್ ಬರ್ದಿದಾರೆ ಇದ್ಯಾರಿಗೆ ಅರ್ಥ ಆಗುತ್ತೆ ಮಾರಾಯ ಅಂದಿದ್ದೆ ಲಕ್ಷ್ಮಣನಲ್ಲಿ.” ಎಲ್ಲರೂ ನಕ್ಕಾಡಿದ್ದೆವು.. ಆಗ.

ನಿಧಾನಕ್ಕೆ ಪಠ್ಯವನ್ನು ಅರ್ಥಮಾಡಿಸುತ್ತ ಮುಂದುವರಿಯೋ ಕೆಲಸದಲ್ಲಿ ನಾಟಕವನ್ನು ಕಟ್ಟತೊಡಗಿದ ಲಕ್ಷ್ಮಣ. ಆರಂಭದಲ್ಲಂತೂ ರಂಗನಿರ್ಮಿತಿಯ ಬಹುಪಾಲು ಆತನದೇ.. ನಮ್ಮದೇನಿದ್ದರೂ ಕುತೂಹಲ ಮತ್ತು ಸಹಕಾರವಷ್ಟೇ.

ದಕ್ಕಲಿಗ ರ ಬಗ್ಗೆ ನನ್ನ ಜ್ಞಾನ ತೀರಾ ಕಡಿಮೆ.. ಕಡಿಮೆಯೇನು ಏನು ಇಲ್ಲವೇ ಇಲ್ಲ ಅನ್ನಿ. ಯಾರು ದಕ್ಕಲಿಗ ಅಂದ್ರೆ? ಆ ಪದದ ಅರ್ಥ ಏನು? ಈ ನಾಟಕದಲ್ಲಿ ಆ ಮನುಷ್ಯನ ಕತೆ ಏನು? ಯಾವುದೂ ಅರಿವಿಲ್ಲದೇ ರಂಗದಮೇಲಿನ ಪ್ರೀತಿಯಿಂದ ಒಳನಡೆದಿದ್ದೆ. ಆದರೆ ಅವರಬಗ್ಗೆ ತಿಳಿಯುತ್ತ ಹೋದಂತೆ ಮಾತು ಹೊರಡದೆ ಮೂಕಳಾದೆ!

ಅಬ್ಭಾ! ಎಷ್ಟು ಚಂದದ ಬದುಕು ನನ್ನದು. ತಾಯಿ ಊರಲ್ಲೊಂದು ಮನೆ, ಗಂಡನ ಊರಲ್ಲೊಂದು ಮನೆ ಬೆಂಗಳೂರಲ್ಲಿ ಇರೋಕೊಂದು ಮನೆ, ಹೊಟ್ಟೆ ತುಂಬಾ ಊಟ, ಕಣ್ತುಂಬ ನಿದ್ದೆ, ಓಡಾಡೋಕೆ ಗಾಡಿ, ಕೈ ತುಂಬಾ ಕೆಲಸ, ಒಳ್ಳೆಯ ಕುಟುಂಬ, ಸುತ್ತ ಬಂಗಾರದಂಥ ಸ್ನೇಹಿತರು. ಅಯ್ಯೋ ಇದಕ್ಕಿಂತ ಒಬ್ಬ ಮನುಷ್ಯನಿಗೆ ಏನು ಬೇಕು ಅಲ್ವಾ.? ಇದು ನನ್ನ ಈ ಕ್ಷಣದ ಬದುಕು.

ಆದ್ರೆ ಈ ದಕ್ಕಲಿಗ? ಏನೂ ಇಲ್ಲದ ಜಗತ್ತಿನವ.

ಅವನಿಗೆ ಒಂದು ಕಡೆ ನಿಲ್ಲೋಕೆ ನೆಲೆ ಇಲ್ಲ, ಒಂದೊತ್ತಿನ ಊಟಕ್ಕೆ ಗತಿ ಇಲ್ಲ, ನಾನೂ ಕೂಡ ನಿಮ್ಮಂತೆ ಭಾರತೀಯ ಪ್ರಜೆ ಅಂತ ಹೇಳಿ ಕೊಳ್ಳೋಕೆ ಗುರುತಿಲ್ಲ, ವಿದ್ಯಾಭ್ಯಾಸ ಇಲ್ಲ, ಕೆಲಸವೂ ಇಲ್ಲ. ಊರೂರು ತಿರುಗಾಟ, ಇವತ್ತು ಯಾವುದೋ ಒಂದು ಊರು, ಅಲ್ಲಿ ಯಾವುದೋ ಒಂದು ಕೇರಿ, ಯಾರದ್ದೋ ಮನೆಯ ಉಳಿದ ಊಟ. ನಾಳೆ ಇನ್ನೊಂದು ಊರು, ಅಲ್ಲಿ ಯಾವುದೋ ಬೀದಿ, ಅವತ್ತಿನ ಅದೃಷ್ಟಕ್ಕೆ ಸಿಕ್ಕರೆ ಹೊಟ್ಟೆಗೆ ಹಿಟ್ಟು!!

ಬಡತನ ಇದೆ ಗೊತ್ತಿದೆ ನನಗೆ. ಆದರೆ ಇಂತಹ ಗುರುತೇ ಇಲ್ಲದ ಜನ ಇದ್ದಾರೆ ಅಂತ ಗೊತ್ತಿರಲಿಲ್ಲ. ನಮ್ಮ ಜ್ಞಾನ ಎಷ್ಟೊಂದು ಅಲ್ಪ!

(ಇಲ್ಲಿ ದಕ್ಕಲಿಗರ ಬಗ್ಗೆ ನಾನು ಹೆಚ್ಚೇನೂ ಹೇಳಿಲ್ಲ, ನೀವು ನಾಟಕ ನೋಡಿ ಇನ್ನಷ್ಟು ವಿಷಯ ಗೊತ್ತಾಗುತ್ತೆ. ಕೆ ಬಿ.ಸಿದ್ದಯ್ಯನವರ ಕಾವ್ಯ ಓದಿ.)

ಅಂತಹ ಜೀವನವನ್ನು ನೋಡಿದವರು, ಅವರೊಡನೆ ಬೆರೆತವರು, ಹತ್ತಿರದಿಂದ ಅವರ ಎಲ್ಲ ಕಷ್ಟ ಸುಖಗಳನ್ನು ಕಂಡವರು ಸ್ಪಂದಿಸಿದವರಲ್ಲಿ ನಮ್ಮ ನಾಟಕದ ರಚನಕಾರ ಕೆ ಬಿ ಸಿದ್ದಯ್ಯನವರು ಮೊದಲಿಗರಾಗಿ ನಿಲ್ಲುತ್ತಾರೆ.

ಹಾಗೆ ನೋಡಿದರೆ ಇದು ನಾಟಕ ಅಲ್ಲ. ಇದೊಂದು ಖಂಡ ಕಾವ್ಯ. ಇದನ್ನು ಓದಿದವರು ಬೆರಳೆಣಿಕೆಯಷ್ಟು ಮಂದಿ. ಅದರಲ್ಲಿ ಅರ್ಥ ಮಾಡಿಕೊಂಡವರು ಕೆಲವೇಕೆಲವರು.

ಇಂತಹ ಕಾವ್ಯವನ್ನು ನಾಟಕ ಮಾಡಿಸಬೇಕು ಅಂತ ಆಸೆ ಪಟ್ಟವನು ಲಕ್ಷ್ಮಣ. ಅದಕ್ಕೆ ಅವನದೇ ಒಂದಷ್ಟು ಕಾರಣಗಳಿವೆ. ಅವನಿಗೆ ಜೊತೆಯಾಗಿ ನಿಂತವರು ಹಲವರು ಅದರಲ್ಲಿ ನಾವೊಂದಷ್ಟು ಜನ. ನಾಟಕ ನೋಡಿದ ಮೇಲೆ ಕಾವ್ಯ ಓದುವ ಮನಸು ಮಾಡಿದವರು ನೂರಾರು ಜನ.

ಬೆಂಗಳೂರಲ್ಲಿ, ಸಾಣೇಹಳ್ಳಿ ಯಲ್ಲಿ ಒಂದೊಂದು ಪ್ರದರ್ಶನ ಮುಗಿಸಿ ನಾಟಕದ ಕರ್ತೃ ಕೆ ಬಿ ಸಿದ್ದಯ್ಯ ಅವರ ತಾಯ್ನೆಲ ತುಮಕೂರಿನಲ್ಲಿ ಪ್ರದರ್ಶನಕ್ಕೆ ಹೋದೆವು. ಅಲ್ಲಿ ಕೆ. ಬಿ. ಬಳಗದ ಪ್ರೀತಿಯ ಬರಮಾಡಿಕೊಳ್ಳುವಿಕೆ ಇತ್ತು.. ವಿಶೇಷ ಊಟ ಉಪಚಾರ ಇತ್ತು… ಆಹಾ! ಅದೆಂತಾ ಬಳಗವನ್ನು ಬಿಟ್ಟು ಹೋದಿರಿ ಕೆ ಬಿ ನೀವು? ಅದೆಷ್ಟು ಜನರನ್ನು ಅನಾಥರನ್ನಾಗಿ ಮಾಡಿಬಿಟ್ಟಿತು ನಿಮ್ಮ ಅಗಲುವಿಕೆ. ಛೇ! ನೀವಿರಬೇಕಿತ್ತು.

ನೀವು ಬಿಟ್ಟು ಹೋದ ಪ್ರೀತಿ, ಆದರ್ಶ, ಕನಸು, ಕೆಲಸ, ಕಾಳಜಿಗಳನ್ನು ಕಾವ್ಯ, ಬರಹಗಳ ಮೂಲಕ ಸದಾ ಜೀವಂತವಾಗಿ ಇಟ್ಟುಕೊಂಡಿರುವ ಬಳಗ ಅದು. ಆ ಬಳಗಕ್ಕೊಂದು ನನ್ನ ಸಾಷ್ಟಾಂಗ ನಮಸ್ಕಾರ.

ಅವರೆಲ್ಲರೊಡನೆ ಕಳೆದಮೇಲೆ ಅನಿಸಿತು ಕೆ.ಬಿ… ಬದುಕಿದರೆ ನಿಮ್ಮ ಹಾಗೆ ಬದುಕಿ ಹೋಗಬೇಕು ಅಂತ.

ಸಂಜೆ ನಾಟಕ ಶುರು ಆಗುವವರೆಗೂ ಭಯವೂ ಇತ್ತು… ಯಾಕಂದ್ರೆ ಎಲ್ಲರೂ ಕೆಬಿ ಯವರ ಹತ್ತಿರದವರು. ತಪ್ಪಾಗಬಾರದಲ್ಲ. ಹಾಗಾಗಿ ಸಣ್ಣ ನಡುಕ ಇದ್ದೇ ಇತ್ತು. ನಾಟಕ ಶುರು ಮಾಡಿ ಯಶಸ್ವಿಯಾಗಿ ಮುಗಿಸಿಯೂ ಆಯ್ತು. ಎಲ್ಲರೂ ಮೆಚ್ಚಿದರು, ಹಾಡಿ ಹೊಗಳಿದರು, ಕೆ ಬಿ ಯವರನ್ನು ನೆನಪಿಸಿಕೊಂಡರು, ಕಣ್ಣೀರು ಸುರಿಸಿದರು. ಅಲ್ಲಿ ನನ್ನ ಆಪ್ತ ಸ್ನೇಹಿತರಿದ್ದರು, ಪಾಠ ಮಾಡಿದ ಗುರುಗಳಿದ್ದರು, ದೂರದೂರಿನ ಪರಿಚಯದವರು ಇದ್ದರು…. ಹೀಗೆ ಸುಮಾರು 700 ಕ್ಕಿಂತಲೂ ಹೆಚ್ಚು ಜನ ಬಂದಿದ್ದರು.. ಎಲ್ಲರೂ ಕೆ ಬಿ ಯವರನ್ನು ನೆನೆಯುವವರೆ!… ಕೆ.ಬಿ. ಎಂದರೆ ಮಕ್ಕಳ ಮನಸ್ಸಿನ ವ್ಯಕ್ತಿ, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದ ಮನುಷ್ಯ, ದೊಡ್ಡ ದೊಡ್ಡೋರು ಪರಿಚಯ ಇದ್ದರೂ ನಿಗರ್ವಿ. ಹೀಗೆ ಆಪ್ತರೆಲ್ಲರೂ ಕೆಬೀ ಯವರನ್ನು ನೆನೆಸಿಕೊಂಡು ಸಂಕಟಪಟ್ಟರು. ಈ ನಾಟಕ ಮಾಡುವ ವರೆಗೂ ನಮಗೆ, ಕೆ.ಬಿ. ಸಿದ್ದಯ್ಯ ಅನ್ನುವ ಒಬ್ಬ ವಿಶೇಷ ಮಾಂತ್ರಿಕ ಇದ್ದಾರೆ ಅನ್ನುವುದೂ ತಿಳಿದಿರಲಿಲ್ಲ.

ಅವರು ಬದುಕಿದ್ದ ಜಾಗದಲ್ಲೇ ಅವರದೇ ನಾಟಕ ಮಾಡುತ್ತಿರುವುದು.. ಆದರೆ ಅವರಿಲ್ಲದ ಕಾಲದಲ್ಲಿ ಅನ್ನುವ ಬೇಸರ ಒಡಲಲ್ಲಿ ಮೂಡಿತು. ಅವರನ್ನು ನೋಡಲಾಗಲಿಲ್ಲವಲ್ಲ? ನಮ್ಮ ಜೀವನದ ದೊಡ್ಡ ಕೊರತೆಯಿದು ಅನ್ನಿಸಿಬಿಡ್ತು.

ಇದೆಲ್ಲದರ ಜೊತೆಗೆ ನನ್ನ ಜೀವನದಲ್ಲಿ ಆ ದಿನ ಇನ್ನೊಂದು ವಿಶೇಷವೂ ನಡೆದು ಹೋಯ್ತು. ಆ ದಿನ ಕೆ .ಬಿ .ಸಿದ್ದಯ್ಯ ಅವರ ಧರ್ಮ ಪತ್ನಿ , ಮಕ್ಕಳು, ಅಳಿಯ, ಮೊಮ್ಮಕ್ಕಳು ಎಲ್ಲರೂ ನಾಟಕ ನೋಡಲು ಬಂದಿದ್ದರು. ಅದು ನಮ್ಮ ಪಾಲಿನ ಅದೃಷ್ಟ. ನಾಟಕ ಮುಗಿದ ಮೇಲೆ ನಟರೆಲ್ಲರಿಗೂ ಒಂದಷ್ಟು ಆಯಿರಿ ಕೊಟ್ಟರು.. ತಂಡದಲ್ಲಿ ಯಾರಿಗೆ ಮೊದಲೇ ಆಯಿರಿ ಸಿಕ್ಕಿತ್ತೋ ಏನೋ ಗೊತ್ತಿಲ್ಲಾ ನನಗಂತೂ ಜೀವನದಲ್ಲಿ ಮೊದಲ ಆಯಿರಿ ಅದು.. ನಾನು ಎಷ್ಟೋ ಸಂಪಾದನೆ ಮಾಡಿರಬಹುದು ಆದರೆ ಇದಕ್ಕೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲ. ಸ್ವತಃ ಕೆಬಿಯವರೆ ಬಂದು ಕೊಟ್ಟಷ್ಟು ಖುಷಿಯಾಯ್ತು ನನಗೆ.. ಇದನ್ನು ನನ್ನ ಬಳಿ ಕೊನೆಯವರೆಗೂ ಹಾಗೆ ಇಟ್ಟುಕೊಳ್ಳುತ್ತೇನೆ.. ಸವಿನೆನಪಿಗಾಗಿ!

ಇನ್ನು ನಮ್ಮ ನಾಟಕ ತಂಡದ ಕುರಿತು ಎರಡುಮಾತು ಹಂಚಿಕೊಳ್ಳಲೇ ಬೇಕು. ಒಂದೊಳ್ಳೆಯ ಕುಟುಂಬವಿದು. ಇಲ್ಲಿರುವವರಿಗೆಲ್ಲ ಅವರದೇ ಆದ ಕರ್ತವ್ಯಗಳು ಇದ್ದವು, ಕಷ್ಟಗಳಿದ್ದವು. ಎಲ್ಲರೂ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ದೂರದ ಊರಿಂದ ಬರುವವರಿದ್ದರು. ಹೀಗೆ ಏನೇನೋ. ಜೀವನದ ಗೋಜಲುಗಳ ನಡುವೆ ಒಟ್ಟಿಗೆ ಸೇರಿ ರಿಹರ್ಸಲ್ ಮಾಡಿದ್ದು ಸರಿ ಸುಮಾರು ಹನ್ನೆರಡು ದಿನ ಅಷ್ಟೇ. ಅಷ್ಟರಲ್ಲಿ ನಾಟಕದ ಜೊತೆಗೆ ನಮ್ಮೊಳಗೇ ಒಂದೊಳ್ಳೆಯ ಬಾಂಧವ್ಯವೂ ಬೆಳೆದಿದೆ. ತಂಡದಲ್ಲಿ ಒಳ್ಳೆಯ ಅಣ್ಣ, ತಮ್ಮ, ತಂಗಿಯರು, ಇಷ್ಟವಂತರೂ.. ಹೀಗೆ ಎಲ್ಲರೂ ಇದ್ದಾರೆ.. ಇನ್ನೊಂದಷ್ಟು ಜನ ಸೇರಿಕೊಳ್ಳುತ್ತಿದ್ದಾರೆ. ಬೆಳೆಯಲಿದೆ ಕುಟುಂಬ ಹೀಗೆ….

Thank you ಲಕ್ಯಾ… ಒಂದೊಳ್ಳೆ ಅವಕಾಶಕ್ಕಾಗಿ.

Thank you ನವೀನ್… ರಿಹರ್ಸಲ್ ಮುಗಿಸಿ ಅಪರಾತ್ರಿ ಬಂದರೂ ನನಗಾಗಿ ಕಾದು ಕುಳಿತು ಬೇಸರ ಮಾಡಿಕೊಳ್ಳದೆ ಸ್ಪಂದಿಸಿದ್ದಕ್ಕೆ.

ಒಂದೊಳ್ಳೆ ನಾಟಕ ಮಾಡುತ್ತಿರುವ ಖುಷಿ ಇದೆ.. ಮತ್ತೇನು ಬೇಕು… ಸಧ್ಯಕ್ಕೆ ಇಷ್ಟು ಸಾಕು.

ಬಿಂದು ರಕ್ಷಿದಿ

ರಂಗ ಭೂಮಿ ಮತ್ತು ಸಿನಿಮಾ ನಟಿ

ಚಿತ್ರIvan d Silva and  Manoj