ಪೇಶ್ವೆ ಧಾಳಿ: ಶೃಂಗೇರಿ ಹಾಗು ಕರ್ನಾಟಕದ ಇತರ ದೇವಸ್ಥಾನಗಳ ಕೊಳ್ಳೆ, ಧ್ವಂಸ

ಪೇಶ್ವೆ ಧಾಳಿ: ಶೃಂಗೇರಿ ಹಾಗು ಕರ್ನಾಟಕದ ಇತರ ದೇವಸ್ಥಾನಗಳ ಕೊಳ್ಳೆ, ಧ್ವಂಸ

ಸಂಶೋಧನೆ ಮತ್ತು ಬರಹ: ಅಮೀನ್ ಅಹ್ಮದ್ ತುಮಕೂರು 

 

ಶೃಂಗೇರಿಯಲ್ಲಿರುವ ಶತಮಾನಗಳಷ್ಟು ಹಳೆಯ ಶ್ರೀ ವಿದ್ಯಾಶಂಕರ ದೇವಸ್ಥಾನ. ಹಿಂದೂ ಧರ್ಮದ ಪರಮಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶೃಂಗೇರಿಯನ್ನು ಪೇಶ್ವೆ ಸೈನಿಕರು 1791ರ ಮಧ್ಯಭಾಗದಲ್ಲಿ ದೋಚಿದ್ದರು.

By Irrigator at English Wikipedia, CC BY-SA 3.0,  https://commons.wikimedia.org/w/index.php?curid=57547533

ಹಿನ್ನೆಲೆ

ಕ್ರಿಶ 1791ರಲ್ಲಿ ಹಿಂದೂ ಸಮಾಜವು ಭೀಕರ ಘಟನೆಯೊಂದರಿಂದ ತಲ್ಲಣಿಸಿತ್ತು. ಕುದುರೆಗಳನ್ನೇರಿ ಬಂದ ಕೊಲೆಪಾತಕರ ಹಿಂಡೊಂದು ನೈರುತ್ಯ ಭಾರತದ ಶಾರದಾ ಪೀಠವನ್ನು ಕೊಳ್ಳೆ ಹೊಡೆದಿದ್ದರು. 8ನೆಯ ಶತಮಾನದಲ್ಲಿ ಆದಿಶಂಕರಾಚಾರ್ಯರು ಮತಪ್ರಚಾರಕ್ಕಾಗಿ ಸ್ಥಾಪಿಸಿದ ನಾಲ್ಕು ಪ್ರಮುಖ ವಿದ್ಯಾಕೇಂದ್ರಗಳಲ್ಲಿ ಒಂದಾಗಿದೆ(1).

ಒಬ್ಬ ಹಿಂದೂ ಸಹೋದರನಿಂದಲೇ ಹಿಂದೂ ಧರ್ಮಕ್ಕೆ ಉಂಟಾದ, ಮರಾಠ ಸ್ಮೃತಿಪಟಲದಲ್ಲಿ ಅಳಿಸಲಾಗದ ನಾಚಿಕೆಗೇಡಿನ ಸಂಗತಿ ಎಂದು ಶೃಂಗೇರಿಯ ಮೇಲೆ ಪೇಶ್ವೆ ಸೈನ್ಯ  ನಡೆಸಿದ ದಾಳಿಯನ್ನು 20ನೆಯ ಶತಮಾನದ ಹಿಂದೂ ರಾಷ್ಟ್ರೀಯವಾದಿ ಇತಿಹಾಸಕಾರೊಬ್ಬರು ವಿಮರ್ಶಿಸಿದ್ದಾರೆ(2). ಟಿಪ್ಪು ಸುಲ್ತಾನನು 1791ರ ಜುಲೈ 6ರಂದು ಮಠಾಧಿಪತಿ ಶ್ರಿ ಸಚ್ಚಿದಾನಂದ ಭಾರತಿ ಸ್ವಾಮಿಯವರಿಗೆ ಈ ಕೃತ್ಯಕ್ಕೆ ಕಾರಣರಾದ ಪೇಶ್ವೆ ಅಶ್ವದಳವನ್ನು ಖಂಡಿಸಿ ಪತ್ರ ಬರೆದಿದ್ದ. ಈ ಕಾಲಘಟ್ಟದಲ್ಲಿ ಶೃಂಗೇರಿಯ ಪವಿತ್ರಕ್ಷೇತ್ರವು ಟಿಪ್ಪುವಿನ ಆಳುತ್ತಿದ್ದ ಮೈಸೂರು ರಾಜ್ಯದ ಭಾಗವಾಗಿತ್ತು. ಶೃಂಗೇರಿ ಮಠದ ಐತಿಹಾಸಿಕ ದಾಖಲೆಗಳ ಅನುವಾದದಲ್ಲಿ ತೊಡಗಿಕೊಂಡಿದ್ದ ಇತಿಹಾಸಕಾರ ಏ.ಕೆ ಶಾಸ್ತ್ರಿಯವರ ಪ್ರಕಾರ ಪೇಶ್ವೆ ಸೈನ್ಯದ ಜೊತೆಗಿದ್ದ ಪಿಂಡಾರಿಗಳು ಮತ್ತು ಲೂಟಿಕೋರರು ಪವಿತ್ರ ಕ್ಷೇತ್ರವನ್ನು ಕೊಳ್ಳೆ ಹೊಡೆದಿದ್ದರು. ಹಿಂದೂ ಪುರಾಣಗಳ ಪ್ರಕಾರ ಜ್ಞಾನದ ಅಧಿದೇವತೆಯಾದ ಶಾರದಾಂಬೆಯ ಶತಮಾನಗಳಷ್ಟು ಹಳೆಯ ವಿಗ್ರಹವನ್ನು ಧ್ವಂಸಗೊಳಿಸಲಾಗಿತ್ತು. ಇದರೊಂದಿಗೆ ಬ್ರಾಹ್ಮಣ ಪುರೋಹಿತರನ್ನು ಹತ್ಯೆಗೈದು 60 ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ವಸ್ತುಗಳನ್ನು ದೋಚಲಾಗಿತ್ತು. ಪೇಶ್ವೆ ಸಾಮ್ರಾಜ್ಯದ ಮುಖ್ಯಸ್ಥ ಮಠದ ನಷ್ಟವನ್ನು ಭರಿಸಿ, ದೋಚಿದ ವಸ್ತುಗಳನ್ನು  ಹಿಂತಿರುಗಿಸುವಂತೆ ಸೇನಾಧಿಕಾರಿ ಪರಶುರಾಮ್ ಭಾವು ಪಟವರ್ಧನ್ ಗೆ ಆದೇಶಿಸಿದ್ದ. ಪೇಶ್ವೆಯ ಆದೇಶವನ್ನು ಪರಶುರಾಮ್ ಭಾವು ಪಟವರ್ಧನ್ ನಂತರದಲ್ಲಿ ಒಪ್ಪಿಕೊಂಡಿದ್ದ. ಶೃಂಗೇರಿ ಸ್ವಾಮಿಗೆ ಟಿಪ್ಪುವಿನ ಹಾಗೂ ಇತರೆ ಪತ್ರಗಳನ್ನೂ ಅನುವಾದ ಮಾಡಿಕೊಟ್ಟ ಶಾಸ್ತ್ರಿಯವರ ನಿರ್ಣಯ ಇದಾಗಿತ್ತು ಶೃಂಗೇರಿಯಲ್ಲಿ ಮೂರ್ಖತನದಿಂದ ಕೂಡಿದ ದರೋಡೆಯು ಉದ್ದೇಶಪೂರ್ವಕವಾಗಿ ನಡೆದುದಲ್ಲ, ಬದಲಾಗಿ ಆತನ ಸೈನ್ಯದಲ್ಲಿದ್ದ ಪಿಂಡಾರಿಗಳ ಕೊಳ್ಳೆಬಾಕ ಗುಣದಿಂದ ನಡೆದಿತ್ತು(3). ಇದರ ಸತ್ಯಾಸತ್ಯತೆ ಎಷ್ಟು?

ಶೃಂಗೇರಿಯ ಹತ್ಯಾಕಾಂಡಕ್ಕೂ ಮುನ್ನ, ಮೂರನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಪೇಶ್ವೆ ಸೇನೆಯು ನಡೆಸಿದ ಕೃತ್ಯಗಳನ್ನು ಹಾಗೂ ತದನಂತರದ ಘಟನೆಗಳನ್ನು ಒಮ್ಮೆ ಅವಲೋಕಿಸಬೇಕಾಗುತ್ತದೆ. ಹಾಗೆಯೇ ಕರ್ನಾಟಕದ ಮೇಲೆ ಶತಮಾನಗಳ ಕಾಲ ಅವ್ಯಾಹತವಾಗಿ ಪೇಶ್ವೆ ಸೈನ್ಯ ನಡೆಸಿದ ದಾಳಿಗಳನ್ನು ಸಂಪೂರ್ಣವಾಗಿ ತಿಳಿಯಬೇಕಾಗುತ್ತದೆ. ಇದಕ್ಕಾಗಿ ಈ ಸಂಶೋಧನೆಯಲ್ಲಿ ಈ ಯುದ್ಧದ ಸಂದರ್ಭದಲ್ಲಿ ಪೇಶ್ವೆ ಸೇನೆಯ ಜೊತೆಗೂಡಿ ಮೈಸೂರನ್ನು ಆಕ್ರಮಿಸಿದ ಬ್ರಿಟಿಷ್ ಸೈನಿಕರ ಪ್ರತ್ಯಕ್ಷದರ್ಶಿ ಸಾಕ್ಷ್ಯಗಳನ್ನು, ಇತರೆ ನಂಬಲರ್ಹ ಮೂಲಗಳನ್ನೂ ಆಶ್ರಯಿಸಲಾಗಿದೆ.

 

ಮೂರನೇ ಆಂಗ್ಲೋ ಮೈಸೂರು ಯುದ್ಧದಿಂದ ಮೊದಲ್ಗೊಂಡು ಶೃಂಗೇರಿಯ ಮೇಲಿನ ದಾಳಿಯವರೆಗೂ ಜರುಗಿದ ಘಟನೆಗಳು.

 

ಮೂರನೇ ಆಂಗ್ಲೋ ಮೈಸೂರು ಯುದ್ಧದ ಆರಂಭದಲ್ಲಿ, ಕ್ಯಾಪ್ಟನ್ ಲಿಟಲ್ ನೇತೃತ್ವದ ಬಾಂಬೆ ಸೈನ್ಯದ ತುಕಡಿಯು ಇಂದಿನ ಮಹಾರಾಷ್ಟ್ರದ ತಾಸ್ಗಾಂವ್ ಬಳಿ, 19 ಜೂನ್ 1790ರಂದು ಪರಶುರಾಮ್ ಭಾವು ಪಟವರ್ಧನ್ ನೇತೃತ್ವದ ಪೇಶ್ವೆ ಸೈನ್ಯವನ್ನು ಸೇರಿತು(4). ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಪೇಶ್ವೆ ಮತ್ತು ಬ್ರಿಟಿಷರ ಒಪ್ಪಂದದಂತೆ ಪರಶುರಾಮ್ ಭಾವು ಪಟವರ್ಧನ್ ಈ ಸಂಯೋಜಿತ ಪಡೆಯ ನೇತೃತ್ವ ವಹಿಸಿದ್ದ. ಮತ್ತೊಬ್ಬ ಪೇಶ್ವೆ ಸೇನಾನಾಯಕನಾದ  ಹರಿಪಂಥ ಫಡ್ಕೆಯು ಗೂಟಿ,ರಾಯದುರ್ಗ ಮತ್ತು ಸಿರಾ ಮೂಲಕ ಹಾದುಹೋಗುವ ದಾರಿಯಲ್ಲಿ ತನ್ನ 12,000 ಸೈನಿಕರ ಪಡೆಯನ್ನು ಶ್ರೀರಂಗಪಟ್ಟಣದಿಂದ ಪುಣೆಯವರೆಗೆ ಮುನ್ನಡೆಸಿದ್ದ.

 

ಸೆಪ್ಟೆಂಬರ್ 14ರಂದು ಈ ಸೇನೆಯು ಮೈಸೂರಿನ ಗಡಿಗಳನ್ನು ದಾಟಿ ಧಾರವಾಡ ಪಟ್ಟಣವನ್ನು ಹಾಗೂ ಅದಕ್ಕೆ ಹೊಂದಿಕೊಂಡಿದ್ದ ಕೋಟೆಯನ್ನು ಸಮೀಪಿಸುವ ಹೊತ್ತಿಗಾಗಲೇ 15,000 ಸಂಖ್ಯೆಯ ಅಶ್ವದಳ ಹಾಗೂ 3000 ಕಾಲಾಳುಗಳನ್ನು ಹೊಂದಿ ಬಲ ಹೆಚ್ಚಿಸಿಕೊಂಡಿತ್ತು. ಧಾರವಾಡದಿಂದ ಈಶಾನ್ಯ ದಿಕ್ಕಿಗೆ ಐದು ಮೈಲು ದೂರದ ನರೇಂದ್ರ ಹಳ್ಳಿಯಲ್ಲಿ ಪಡೆಗಳು ಬೀಡು ಬಿಟ್ಟವು. ಟಿಪ್ಪು ಸುಲ್ತಾನನ ನಂಬಿಕಸ್ಥ ಯೋಧನೂ, ಎಡ್ವರ್ಡ್ ಮೂರ್ ಹೇಳುವಂತೆ ವಿಜ್ಞಾನದಲ್ಲಿ ನಂಬಿಕೆಯುಳ್ಳವನೂ ಆಗಿದ್ದ ಕಿಲ್ಲೇದಾರ ಬದ್ರುಜ್ಜಮಾನ್ ಖಾನನು ಕೋಟೆ ಹಾಗೂ ಧಾರವಾಡ ಪಟ್ಟಣದಲ್ಲಿ ಬೀಡುಬಿಟ್ಟಿದ್ದ ಮೈಸೂರಿನ ಪಡೆಗಳ ಪಾರುಪತ್ಯ ವಹಿಸಿದ್ದ.ಎಡ್ವರ್ಡ್ ಮೂರ್ ಎಂಬಾತ ಈ ಯುದ್ಧದಲ್ಲಿ ಪಾಲ್ಗೊಂಡು ಘಟನಾವಳಿಗಳನ್ನು ಸವಿಸ್ತಾರವಾಗಿ ದಾಖಲಿಸಿದ ಒಬ್ಬ ಬ್ರಿಟಿಷ್ ಯೋಧ(5). ಕೋಟೆಯನ್ನೂ, ಪಟ್ಟಣವನ್ನೂ ರಕ್ಷಿಸುವ ಸಲುವಾಗಿ 10,000 ಸೈನಿಕರು ಬಂದೂಕು, ಫಿರಂಗಿ ಮತ್ತು ಮೈಸೂರಿನ ರಾಕೆಟ್ ಸೇರಿದಂತೆ ವಿವಿಧ ಬಗೆಯ ಆಯುಧಗಳನ್ನು ಹಿಡಿದು ಸಜ್ಜಾಗಿದ್ದರು. ಮುಂಬರಲಿರುವ ದಾಳಿಯ ಪ್ರಮಾಣವನ್ನು ಅರಿತೇ ಮೈಸೂರಿನ ಸೇನೆಯು ಶತ್ರುಗಳನ್ನು ರಾಜ್ಯದ ಗಡಿಯಲ್ಲಿ ಎದುರುಗೊಳ್ಳದೆ ಪಟ್ಟಣವನ್ನು ರಕ್ಷಿಸುವ ಕಡೆ ಗಮನ ಹರಿಸಿದಂತೆ ತೋರುತ್ತದೆ. ಅದೇ ದಿನವೇ ಹತ್ತಿರದ ಹುಬ್ಬಳ್ಳಿ ಪಟ್ಟಣವು ದಾಳಿಗೊಳಗಾಗಿತ್ತು. ಆರಂಭದಲ್ಲಿ ಹುಬ್ಬಳ್ಳಿಯ ನಿವಾಸಿಗಳು ಪ್ರತಿರೋಧ ತೋರಿದರೂ ಮಾರನೆಯ ದಿನ ಕಪ್ಪ ಸಲ್ಲಿಸುವ ಮೂಲಕ ಪರಶುರಾಮ್ ಭಾವು ಪಟವರ್ಧನ್ ಗೆ ಶರಣಾಗಿದ್ದರು. ಆದ್ದರಿಂದ ಹುಬ್ಬಳ್ಳಿ ಪಟ್ಟಣ ಮತ್ತು ಅಲ್ಲಿನ ಜನರಿಗೆ ಹಾನಿಮಾಡದೆ ಬಿಡಲಾಗಿತ್ತು. ಆದರೆ ಧಾರವಾಡದಲ್ಲಿ ದಾಳಿಕೋರರಿಗೂ ರಕ್ಷಣೆಯ ಹೊಣೆ ಹೊತ್ತವರಿಗೂ ನಡುವೆ ಚಕಮಕಿ ಆರಂಭವಾಯಿತು.

 

ರಕ್ತಸಿಕ್ತ ಸಂಘರ್ಷದ ಬಳಿಕ ಡಿಸೆಂಬರ್ 13ರಂದು ಮೈಸೂರಿನ ಪಡೆಗಳು ಪಟ್ಟಣವನ್ನು ತೊರೆದವು. ಪಟವರ್ಧನ್ ನ ಹಿರಿಯ ಮಗನಾದ ಅಪ್ಪಾ ಸಾಹೇಬನು ತನ್ನ ಸೇನೆಯನ್ನು ಪಟ್ಟಣದೊಳಗೆ ನುಗ್ಗಿಸಿ ಹಲವೆಡೆಗಳಲ್ಲಿ ಬೆಂಕಿ ಹಚ್ಚಿದ. ಕೆಲ ಹೊತ್ತಿನ ಕಾದಾಟದ ಬಳಿಕ, ಡಿಸೆಂಬರ್ 18ರಂದು ಪಟ್ಟಣವು ಭಾವು ಪಟವರ್ಧನ್ ನ  ಸೇನೆಯ ವಶವಾಗಿತ್ತು. ಒಂದೇ ಒಂದು ಮರದ ತುಂಡು ಸಹ ಉಳಿಯದಂತೆ ಸಂಪೂರ್ಣವಾಗಿ ಪಟ್ಟಣವನ್ನು ದೋಚಲಾಯಿತು. ತಮ್ಮನ್ನು ವಿರೋಧಿಸುವ ಯಾವುದೇ ಹಳ್ಳಿ ಪಟ್ಟಣವನ್ನು ಈ ಕೂಪಕ್ಕೆ ತಳ್ಳುವ ಪದ್ಧತಿ ಪೇಶ್ವೆ ಸೈನ್ಯದ್ದಾಗಿತ್ತು. ಪಕ್ಕದ ಧಾರವಾಡ ಕೋಟೆಯಲ್ಲಿ ಈ ಸಂಯೋಜಿತ ಶತ್ರುಪಡೆಯನ್ನು ತಡೆಯುವ ಪ್ರಯತ್ನ ಮುಂದುವರೆದಿತ್ತು. ಇತ್ತ ಯುದ್ಧಸಾಮಗ್ರಿಗಳು ಮುಗಿಯುತ್ತಿದ್ದಂತೆ ಅತ್ತ ಮಾರ್ಚ್ 21ರಂದು ಬೆಂಗಳೂರು ಕೋಟೆಯ ಕಾವಲು ಮುರಿದುಬಿದ್ದ ಆಘಾತಕಾರಿ ಸುದ್ದಿ ಕೇಳಿಬಂತು. ಸತತ 6 ತಿಂಗಳ ಕಾಲ ಬ್ರಿಟಿಷ ಪೇಶ್ವೆ ಸಂಯೋಜಿತ ಪಡೆಗಳನ್ನು ತಡೆಹಿಡಿದಿದ್ದ ಬದ್ರುಜ್ಜಮಾನ್ ಖಾನನು ಏಪ್ರಿಲ್ 4ರಂದು ಶರಣಾದ.ಕರ್ನಾಟಕದ ಹೃದಯಭಾಗವನ್ನು ಶತ್ರುಗಳಿಂದ ಕಾಪಾಡುವ ಪ್ರಯತ್ನಕ್ಕೆ ತೆರೆಬಿದ್ದಿತ್ತು.

 

ಏಪ್ರಿಲ್ 4 ಹಾಗೂ ಶೃಂಗೇರಿಯ ಸ್ವಾಮಿಗೆ ಟಿಪ್ಪು ಬರೆದ ಪತ್ರದಲ್ಲಿ ದಾಖಲಾಗಿರುವ ಜುಲೈ 6ರ ನಡುವೆ ಶೃಂಗೇರಿಯ ಮೇಲೆ ಆಕ್ರಮಣ ನಡೆದಿದೆಯೆಂದು ಪರಿಗಣಿಸಬಹುದು.ಈ ಸಮಕಾಲೀನರಿಬ್ಬರ ಪತ್ರವ್ಯವಹಾರದಲ್ಲಿ ದಾಳಿಯು ಉಲ್ಲೇಖವಾಗಿದೆ. ಪರಶುರಾಮ್ ಭಾವು ಪಟವರ್ಧನ್ ನ ಸಹೋದರನಾದ ರಘುನಾಥ್ ರಾವ್ ಪಟವರ್ಧನ್ ನೇತೃತ್ವದ ಅಶ್ವದಳದ ತುಕಡಿಯೊಂದು ಈ ದಾಳಿಗೆ ಕಾರಣವೆಂದು ತಿಳಿದುಬರುತ್ತದೆ(6).

 

ಈ ದಾಳಿಯ ಕುರಿತು ರಘುನಾಥ ರಾವ್ ಪಟವರ್ಧನ್ ನಿಗೆ ತಿಳಿದಿತ್ತೆಂಬುದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ.

 

1)    ಯುದ್ಧದ ಹಲವೆಡೆಗಳಲ್ಲಿ ಬ್ರಿಟಿಷ್ ಸೈನಿಕರು ತಮ್ಮ ಕಣ್ಣಾರೆ ಕಂಡಂತೆ ಪೇಶ್ವೆ ನಾಯಕರ ಆದೇಶದ ಮೇರೆಗೆ ಪಿಂಡರಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಯಾವುದಾದರೂ ಪಟ್ಟಣದ ನಿವಾಸಿಗಳು ಕಪ್ಪ ನೀಡದಿದ್ದಲ್ಲಿ ಅವರನ್ನು ಪಿಂಡಾರಿ ಗಳಿಗೆ ಬಿಟ್ಟುಬಿಡುತ್ತಿದ್ದರು.

2)    ಪೇಶ್ವೆ ಅಶ್ವದಳದ ನೇತೃತ್ವವನ್ನು ಅನೇಕ ಸೇನಾನಾಯಕರು ವಹಿಸಿದ್ದರು. ಅವರಲ್ಲಿ ಹೆಚ್ಚಿನವರು ಭಾವು ಪಟವರ್ಧನ್ ಆದೇಶ ಪಾಲಿಸಿದರೆ ಕೆಲವರು ಪಟವರ್ಧನ್ ನ ಅಪ್ಪಣೆಗಾಗಿ ಕಾಯದೆ ಪೇಶ್ವೆ ಮಂತ್ರಿಮಂಡಲದಲ್ಲಿ ತೆಗೆದುಕೊಂಡ ಯುದ್ಧೋಪಾಯಗಳನ್ನು ನೇರವಾಗಿ ಜಾರಿಗೊಳಿಸುತ್ತಿದ್ದರು.

 

ಒಟ್ಟಿನಲ್ಲಿ ಪಿಂಡಾರಿಗಳಾಗಲಿ, ಅಶ್ವದಳವಾಗಲಿ ತಮ್ಮ ಮುಖಂಡರಿಗೆ ತಿಳಿಯದಂತೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿರಲು ಸಾಧ್ಯವಿಲ್ಲ.

 

ಅಗತ್ಯತೆ, ಅತಿಯಾಸೆ ಮತ್ತು ಮರಾಠರ ಯುದ್ಧವೈಖರಿಯೇ ಶೃಂಗೇರಿಯ ಮೇಲಿನ ದಾಳಿಗೆ ಕಾರಣವಾಗಿದ್ದವು.

 

ಅಂದಿನ ಕಾಲದಲ್ಲಿ ಸೈನ್ಯಗಳು ಪ್ರಯಾಣಿಸುವಾಗ ಅವರನ್ನು ಹಿಂಬಾಲಿಸುತ್ತಿದ್ದ ಸೈನಿಕರಲ್ಲದ ಹೆಣ್ಣು ಗಂಡುಗಳಿರುತ್ತಿದ್ದರು. ಹಲವೊಮ್ಮೆ ಸೈನಿಕರಿಗಿಂತ ಇವರೇ ಸಂಖ್ಯೆಯೇ ಹೆಚ್ಚಿರುತ್ತಿತ್ತು. ಅವರಿಗೆ ಸಿಗುತ್ತಿದ್ದ ವೇತನದ ಪ್ರಮಾಣವೂ ಕೆಲಸಕ್ಕೆ ತಕ್ಕಂತೆ ಬದಲಾಗುತ್ತಿತ್ತು. 1790-92ರ ಯುದ್ಧಕಾಲದಲ್ಲಿ ಬ್ರಿಟಿಷರ ಅನಿಯಮಿತ ಪಡೆಗಳಿಗೆ ಸಾಮಾನ್ಯ ಸೈನಿಕನ ಅರ್ಧದರ್ಷ್ಟು ಸಂಬಳ ಮಾತ್ರವೇ ಸಿಗುತ್ತಿತ್ತು. ಸೈನಿಕರು ತಮಗೆ ಹಾಗೂ ತಮ್ಮ ಜೊತೆಯಿರುವ ಕುದುರೆ ಮುಂತಾದ ಪ್ರಾಣಿಗಳಿಗೆ ತಿನ್ನಲು ಬೇಕಾದ ಆಹಾರ ಸಾಮಗ್ರಿಗಳನ್ನು ಸಹ ತಮ್ಮದೇ ಹಣದಲ್ಲಿ ಕೊಂಡುಕೊಳ್ಳಬೇಕಿತ್ತು.

 

ಮುತ್ತಿಗೆ ಹಾಕಿದ ಪ್ರದೇಶವನ್ನು ಗೆಲ್ಲಲು ಹೆಚ್ಚು ದಿನ ತೆಗೆದುಕೊಂಡರೆ ಸೈನಿಕರು ಮತ್ತವರ ಪ್ರಾಣಿಗಳು ಹೊಟ್ಟೆಗಿಲ್ಲದೆ ನರಳಬೇಕಿತ್ತು. ಸೆಪ್ಟೆಂಬರ್ 1790ರಿಂದ ಏಪ್ರಿಲ್ 1791ರ ನಡುವೆ ಆರು ತಿಂಗಳ ಕಾಲ ಧಾರವಾಡವನ್ನು ಮುತ್ತಿಗೆ ಹಾಕಿದಾಗ ಪೇಶ್ವೆ ಪಾಳೆಯದಲ್ಲಿ ಈ ಸಂಕಷ್ಟ ಎದುರಾಗಿದ್ದನ್ನು ನಾವು ಕಾಣಬಹುದು. 1791ರ ಮೇ ತಿಂಗಳಿನಲ್ಲಿ ಪೇಶ್ವೆ, ನಿಜಾಮ ಮತ್ತು ಕಾರ್ನ್ವಾಲಿಸ್ ಒಟ್ಟಾಗಿ ಶ್ರೀರಂಗಪಟ್ಟಣದ ಮೇಲೆ ಮುತ್ತಿಗೆ ಹಾಕಿದಾಗಲೂ ಈ ಪರಿಸ್ಥಿತಿ ಉಂಟಾಗಿತ್ತು. ಶ್ರೀರಂಗಪಟ್ಟಣದಲ್ಲಿ ಟಿಪ್ಪುವನ್ನು ಮಣಿಸಲು ಸಾಧ್ಯವಾಗದೆ ಅಲ್ಲೇ ತಂಗಿದ್ದ ಮದ್ರಾಸ್ ಸೇನೆಯ ಆಹಾರ ಸಾಮಗ್ರಿಗಳು ಮುಗಿದುಹೋಗಿದ್ದವು. ಬ್ರಿಟಿಷ್ ಸೈನಿಕರು ಬೇರೆ ದಾರಿಯಿಲ್ಲದೆ ದುಬಾರಿ ಬೆಲೆಯನ್ನು ತೆತ್ತು ಪೇಶ್ವೆ ಸೇನೆಯಿಂದ ಸಾಮಗ್ರಿಗಳನ್ನು ಖರೀದಿಸಿದ್ದರು.

 

ಗಮನಿಸಬೇಕಾದ ಅಂಶವೇನೆಂದರೆ ತಮ್ಮ ಇತಿಹಾಸದುದ್ದಕ್ಕೂ, 1660ರಿಂದ 1670ರವರೆಗೂ ಕರ್ನಾಟಕದ ಪಟ್ಟಣಗಳನ್ನು, ವಾಣಿಜ್ಯ ಕೇಂದ್ರಗಳನ್ನು ಶಿವಾಜಿಯು ದಾಳಿ ಮಾಡಿದಾಗಿನಿಂದ (7) ಹಿಡಿದು 1740ರಲ್ಲಿ ಬಾರ್ಗಿಗಳು ಬಂಗಾಳದ ಹಳ್ಳಿಗಾಡನ್ನು ಹಾಳುಗೆಡವುವರೆಗೂ (8), ನಂತರದಲ್ಲಿ ಸಮೃದ್ಧ ಮೈಸೂರು ರಾಜ್ಯವನ್ನು ದುರ್ಗತಿಗೆ ತಳ್ಳುವವರೆಗೂ ಮರಾಠ ಸೈನಿಕರು ತಮ್ಮ ಅಶಿಸ್ತು ಹಾಗೂ ಮಿತಿಮೀರಿದ ಕೊಳ್ಳೆಹೊಡೆಯುವ ಪ್ರವೃತ್ತಿಯಿಂದಲೇ ಹೆಸರಾಗಿದ್ದರು.

 

ಪೇಶ್ವೆ ದಾಳಿಯ ಆರಂಭದಿಂದಲೇ ನಡೆದ ಹಲವು ಘಟನಾವಳಿಗಳು ಇದಕ್ಕೆ ಸಾಕ್ಷಿಯಾಗುತ್ತವೆ. ಪೇಶ್ವೆ ಸೈನ್ಯ ಮೈಸೂರು ರಾಜ್ಯದೊಳಗೆ ಕಾಲಿಟ್ಟ ಕೂಡಲೇ ಧಾರವಾಡ ಪಟ್ಟಣದ ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸುತ್ತಾರೆ. ಸೆಪ್ಟೆಂಬರ್ 10ರಂದು ಬೆಟಗೇರಿ ಗ್ರಾಮದಿಂದ ಹೊರಟ ಪೇಶ್ವೆ ಸೈನ್ಯ ಸೌಂದತ್ತಿ ಹಳ್ಳಿಯನ್ನು ತಲುಪಿದ ಕೂಡಲೇ ದಾಳಿಗಿಳಿಯುತ್ತಾರೆ.ಆದರೆ ಗ್ರಾಮಸ್ಥರು ದಿಟ್ಟತನದಿಂದ ಹೋರಾಡಿ ಅವರನ್ನು ಹಿಮ್ಮೆಟ್ಟಿಸುತ್ತಾರೆ.  ಇದರಿಂದ ಕೋಪಗೊಂಡ ಭಾವು ಪಟವರ್ಧನ್ ಆತನ ರೊಹಿಲ್ಲಾ ಗರ್ದಿ ಪಡೆಗಳನ್ನು ಕಣಕ್ಕಿಳಿಸುತ್ತಾನೆ. ಆತನ ಪಡೆಗಳು ಹಳ್ಳಿಯನ್ನು ಕೊಳ್ಳೆ ಹೊಡೆದಿದ್ದಷ್ಟೇ ಅಲ್ಲದೆ ಹಲವು ಮಂದಿ ಗ್ರಾಮಸ್ಥರನ್ನು ಸೆರೆಹಿಡಿಯುತ್ತಾರೆ. ನಾಲ್ಕು ದಿನಗಳ ನಂತರ ಹತ್ತಿರದ ಹಳ್ಳಿಯೊಂದನ್ನು ಪೇಶ್ವೆ ಸೈನ್ಯ ಸುಟ್ಟುಹಾಕುತ್ತಾರೆ. ಧಾರವಾಡದ ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದ ಡೇವಿಡ್ ಪ್ರೈಸ್ ಎಂಬ ಬ್ರಿಟಿಷ್ ಸೈನಿಕ ಸೆಪ್ಟೆಂಬರ್ 14ರ ಸಂಜೆ ಇದನ್ನು ದಾಖಲಿಸುತ್ತಾ, “ಈ ಘೋರ ದೃಶ್ಯವು ಹೇಗಿದೆಯೆಂದರೆ ಪೇಶ್ವೆ ಸೈನ್ಯ ಕ್ಕೆ ಸರ್ವೇಸಾಮಾನ್ಯ ಎನಿಸುವ ಈ ದುಷ್ಕೃತ್ಯದದಿಂದ ದುರದೃಷ್ಟಕರ ಹಳ್ಳಿಯೊಂದು ಬೆಂಕಿಯ ಕೆನ್ನಾಲಗೆಗೆ ಸಿಕ್ಕು ಧಗಧಗಿಸುತ್ತಿದೆ. ಆಗಸದಲ್ಲಿನ ತಾರೆಗಳ ನಡುವಿನ ಚಂದ್ರನಂತೆಯೇ ಹೊಳೆಯುತ್ತಿದೆ” ಎಂದು ಬರೆದಿದ್ದಾನೆ.

 

1791ರ ಡಿಸೆಂಬರಿನಲ್ಲಿ ಪೇಶ್ವೆ ಸೈನ್ಯ ಚನ್ನಗಿರಿಯಿಂದ ಹೊಳೆಹೊನ್ನೂರಿಗೆ ಸಾಗುತ್ತಿದ್ದಾಗ ಮೂರ್ ಇದೇ ಬಗೆಯ ಘಟನೆಯೊಂದನ್ನು ಗಮನಿಸಿದ್ದ.  ದೇಶದಲ್ಲಿ ಇಷ್ಟು ಶ್ರೀಮಂತ ಪ್ರದೇಶವೊಂದನ್ನು ನಾವು ಇದುವರೆಗೂ ಕಂಡಿಲ್ಲ. ಹಳ್ಳಿ ಮತ್ತು ಪಟ್ಟಣಗಳು ಎಷ್ಟು ಹೇರಳವಾಗಿವೆ ಎಂದರೆ ನಾವು ಪ್ರಾಂತ್ಯಕ್ಕೆ ಕಾಲಿರಿಸಿದ ಕೂಡಲೇ ಏಕಕಾಲಕ್ಕೆ ಬೆಂಕಿಯಲ್ಲಿ ಉರಿಯುತ್ತಿದ್ದ ಹತ್ತು ಹಳ್ಳಿಗಳನ್ನು ಕಂಡೆವು. ಇಂತಹ ಸಮೃದ್ಧ ನಾಡಿನಲ್ಲಿ ಆರರಿಂದ ಎಂಟು ಹಳ್ಳಿಗಳಿಗೆ ಒಮ್ಮೆಲೇ ಬೆಂಕಿ ಹೊತ್ತಿಸುವುದು ತೀರಾ ಸಾಮಾನ್ಯ ಎಂಬಂತಾಗಿದೆ. ಪೇಶ್ವೆ ಸೈನ್ಯ ಯುದ್ಧ ಮಾಡುವ ವೈಖರಿಯೇ ಬಗೆಯದ್ದು. ಶತ್ರುಗಳಲ್ಲಿ ದಿಗಿಲು ಹುಟ್ಟಿಸಲು ಪೇಶ್ವೆ ಗಳಿಗೆ ತಿಳಿದಿರುವ ದಾರಿ ಇದೊಂದೇ ಎಂಬಂತೆ ಕಾಣುತ್ತದೆ. ಲಕ್ಷ ಕುದುರೆಗಳನ್ನು ಒಮ್ಮೆಲೇ ತಮ್ಮ ಶತ್ರುದೇಶದ ಮೇಲೆ ಹರಿಬಿಡುತ್ತಾರೆ. ಮಿಡತೆಗಳ ಹಿಂಡಿನಂತೆ ತಾವು ಹೋದ ಪ್ರದೇಶಗಳನ್ನು ಹಾಳುಗೆಡವಿ ದೇಶಗಳಿಗೆ ದುರ್ಗತಿಯನ್ನು ತಂದೊಡ್ಡುತ್ತಾರೆ. ಈಜಿಪ್ಟಿನ ಮೇಲೆ ಬಂದೆರಗಿದ ದೇವರ ಶಾಪವೂ ಇಷ್ಟು ವಿನಾಶಕಾರಿ ಆಗಿರಲಿಕ್ಕಿಲ್ಲ ಎಂದೆನಿಸುತ್ತದೆ” ಎಂದು ಮೂರ್ ಬರೆದಿದ್ದಾನೆ.

 

ಹಳ್ಳಿಗರ ದಿಟ್ಟತನ ತೋರಿದಷ್ಟೂ ಆಕ್ರಮಣಕಾರರಿಗೆ ಮುತ್ತಿಗೆ ಹಾಕುವುದು ಕಷ್ಟದ ಕೆಲಸವಾಗಿತ್ತು. ಇದಕ್ಕಾಗಿ ಹೆಚ್ಚು ಸಮಯ, ಸಂಪನ್ಮೂಲ ಬೇಕಾಗುತ್ತಿತ್ತು. ಅಷ್ಟೇ ಅಲ್ಲದೆ ಆಕ್ರಮಣಕಾರರು ಸಾವಿಗೀಡಾಗುವ ಸಾಧ್ಯತೆಯೇ ಹೆಚ್ಚಿರುತ್ತಿತ್ತು. ಸುಲಭ ಮಾರ್ಗದಲ್ಲಿ ಯಾವುದೇ ರಕ್ಷಣೆಯಿಲ್ಲದ ದೇವಾಲಯಗಳನ್ನು ಲೂಟಿಗೈದು ಸಂಪತ್ತನ್ನು ಗಳಿಸಬಹುದಿತ್ತು. ಆದರೆ ಸುಭದ್ರ ಪಟ್ಟಣಗಳ ಮೇಲೇಕೆ ಪೇಶ್ವೆ ಸೈನಿಕರು ದಾಳಿ ಮಾಡುತ್ತಿದ್ದರು? ಅಷ್ಟೇ ಅಲ್ಲದೆ ಶೃಂಗೇರಿ ಮಠವು ಸ್ಮಾರ್ತ ಬ್ರಾಹ್ಮಣರ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಸ್ವತಃ ಪೇಶ್ವೆಗಳೇ ಬ್ರಾಹ್ಮಣರಾಗಿ ಮಠವನ್ನು ಕಾಪಾಡಲಿಲ್ಲ. ಹಣದ ಅಗತ್ಯತೆ, ಇಲ್ಲಿ ಅಗತ್ಯತೆಗಿಂತ ದುರಾಸೆಯೇ ಮಿತಿಮೀರಿತ್ತು.

 

ನೆನಪಿನಲ್ಲಿ ಇಡಬೇಕಾದ ವಿಷಯವೇನೆಂದರೆ ಪೇಶ್ವೆ ಮುಖಂಡರು ಯಾವಾಗಲೂ ಪಿಂಡಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟಿದ್ದರು. 1791ರಲ್ಲಿ ರಘುನಾಥ್ ರಾವ್ ಮತ್ತು ಬಾಳಾ ಸಾಹೇಬರು ರಾಯದುರ್ಗಂನ್ನು (ಇಂದಿನ ಆಂಧ್ರಪ್ರದೇಶ) ವಶಪಡಿಸಿಕೊಂಡಾಗ ಅಲ್ಲಿನ ಜನರಿಗೆ ಕರುಣೆ ತೋರಿಸಿದ್ದರು. ತಮ್ಮ ಜಾನುವಾರುಗಳಿಗೆ ಬೇಕಾದ ಮೇವಿಗಾಗಿ ಹಳ್ಳಿಗಾಡನ್ನು ಬಳಸಿಕೊಂಡರೇ ಹೊರತು ಇನ್ನಾವ ಹಾನಿಯನ್ನೂ ಮಾಡಲಿಲ್ಲ. ಸುತ್ತಮುತ್ತಲಿನ ಹಳ್ಳಿ ಪಟ್ಟಣಗಳನ್ನು ಲೂಟಿ ಮಾಡದಂತೆ, ಸುಡದಂತೆ ನೋಡಿಕೊಂಡಿದ್ದರು.

 

ಮರಾಠರು ಶೃಂಗೇರಿಯ ಮೇಲೆ ದಾಳಿ ನಡೆಸಿದ್ದು ಪೂರ್ವನಿಯೋಜಿತವೋ ಅಥವಾ ಆಕಸ್ಮಿಕವೋ

 

ವಿಪರ್ಯಾಸದ ಸಂಗತಿಯೆಂದರೆ ಈ ಯುದ್ಧದ ಸಮಯದಲ್ಲಿ ಬ್ರಾಹ್ಮಣರಿಗೆ ಸಂಬಂಧಪಟ್ಟ ಹಲವು ಆಚರಣೆಗಳು, ದೀಪಾವಳಿಯಂತಹ ಹಬ್ಬಗಳನ್ನು ನಡೆಯುತ್ತಿದ್ದುದನ್ನು ಗಮನಿಸಿದ್ದರು. ಯುದ್ಧಕ್ಕೆ ಹೊರಡುವ ಮೊದಲು ಶುಭಗಳಿಗೆಯೊಂದು ಕೂಡಿಬರಲೆಂದು ಕಾದಿದ್ದರು. 1791ರ ಅಕ್ಟೋಬರ್ ತಿಂಗಳಲ್ಲಿ ಭಾವು ಪಟವರ್ಧನ್ ನ ಪಾಳೆಯದಲ್ಲೇ ಸತಿ ಸಹಗಮನವೊಂದು ನಡೆದಿತ್ತೆಂದು ತಿಳಿಯುತ್ತದೆ.

ಅತ್ತಕಡೆ ದಂಡಯಾತ್ರೆಯುದ್ದಕ್ಕೂ ಬ್ರಿಟಿಷ್ ಸೈನಿಕರು ಮಾಂಸಕ್ಕಾಗಿ ದನಕರುಗಳನ್ನು ಕೊಲ್ಲುತ್ತಿದ್ದ ಬಗ್ಗೆ ಪೇಶ್ವೆಗಳಿಗೆ ಯಾವುದೇ ಆಕ್ಷೇಪಣೆ ಇರಲಿಲ್ಲ(9).ಬದಲಾಗಿ 1791ರ ಕ್ರಿಸ್ಮಸ್ ಹಬ್ಬದಂದು ಕ್ಯಾಪ್ಟನ್ ಲಿಟಲನ ಸೇನಾ ತುಕಡಿಯು ಎತ್ತೊಂದನ್ನು ಕಡಿದು ಪೇಶ್ವೆ ಬ್ರಾಹ್ಮಣರ ನಡುವೆಯೇ ಸೇವಿಸಿದ ಉದಾಹರಣೆಯನ್ನು ಕಾಣಬಹುದು.

 

ಇಲ್ಲಿ ನಮಗೆ ಕೆಳಗಿನ ಪ್ರಶ್ನೆಗಳು ಮೂಡುತ್ತವೆ.

 

1) ಶೃಂಗೇರಿಯ ಮೇಲಿನ ದಾಳಿಯು ಕೇವಲ ಆಕಸ್ಮಿಕವಾಗಿ ನಡೆದಿತ್ತೇ?

 

2) ಕರ್ನಾಟಕದ ಹಿಂದೂ ದೇವಾಲಯಗಳ ಮೇಲೆ ಇಂತಹುದೇ ರೀತಿಯ ದಾಳಿಗಳು ನಡೆದ ನಿದರ್ಶನಗಳು ಇರಲಿಲ್ಲವೇ ? ಈ ಬಗೆಯಲ್ಲಿ ಏನಾದರೊಂದು ಸಂಭವಿಸಲು ಕಾಯುತ್ತಿತ್ತೇ?

 

3) ಪೇಶ್ವೆಯು ಈ ದಾಳಿಯನ್ನು ಒಪ್ಪಿಕೊಂಡ ನಂತರ ಆತನ ಸೈನಿಕರಿಂದ ಹಿಂದೂಗಳ ಬೇರಾವುದೇ ಪವಿತ್ರ ಕ್ಷೇತ್ರದ ಮೇಲೆ ದಾಳಿಗಳು ನಡೆಯಲಿಲ್ಲವೇ?

 

4) ಈ ಬರ್ಬರ ದಾಳಿಯ ಬಳಿಕ ಪೇಶ್ವೆ ಸೇನಾನಾಯಕರು ಕರ್ನಾಟಕದ ಇತರೆಡೆಗಳಲ್ಲಿ ಹಿಂದೂಗಳಿಗೆ ಇತರರಿಂದ ಹಾನಿಯಾಗದಂತೆ ತಡೆಯುವ ಪ್ರಯತ್ನಗಳನ್ನು ಮಾಡಿದ್ದರೇ ? ತಾವು ಇಂತಹ ಹತ್ಯಾಕಾಂಡಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ನಿಲ್ಲಿಸಿದರೇ?

 

ಮೇಲಿನ ಎಲ್ಲಾ ಪ್ರಶ್ನೆಗಳಿಗೆ ‘ಇಲ್ಲ‘ ಎಂಬುದೊಂದೇ ಸರಿ ಉತ್ತರವಾಗಿದೆ.


ಶೃಂಗೇರಿಯ ಮೇಲಿನ ಆಕ್ರಮಣದ ನಂತರವೂ 1790-92ರ ಅವಧಿಯಲ್ಲಿ ಎರಡು ಹಿಂದೂ ಪವಿತ್ರಕ್ಷೇತ್ರಗಳನ್ನು, ಹಿಂದೂಗಳೇ ವಾಸವಿದ್ದ ಹತ್ತಾರು ಹಳ್ಳಿ ಪಟ್ಟಣಗಳನ್ನು ಪೇಶ್ವೆ ಸೈನ್ಯ  ಕೊಳ್ಳೆ ಹೊಡೆದು ಸುಟ್ಟು ಹಾಕಿದ್ದರು. ಇದರ ಜೊತೆಜೊತೆಗೆ ಹಲವಾರು ಹಳ್ಳಿಗಳನ್ನು ಲೂಟಿಗೈದು , ಬೆಂಕಿ ಹೊತ್ತಿಸಿ ಹೇಳಹೆಸರಿಲ್ಲದಂತೆ ಮಾಡಿದ್ದಾರೆ.

 

ಕ್ರಿಶ 17 ಮತ್ತು 18ನೆಯ ಶತಮಾನದಲ್ಲಿ ಮರಾಠ ದಾಳಿಗಳಿಗೆ ತುತ್ತಾದ ಕರ್ನಾಟಕದ ಸುಮಾರು 60 ಹಿಂದೂ ಪಟ್ಟಣಗಳು ಮತ್ತು ದೇವಾಲಯಗಳನ್ನು ತೋರಿಸುವ ನಕ್ಷೆ.

 

ಶೃಂಗೇರಿಯನ್ನು ಅಪವಿತ್ರಗೊಳಿಸಿದ್ದು ಒಂದು ಶತಮಾನಕ್ಕೂ ಹೆಚ್ಚು ಕಾಲ ಪೇಶ್ವೆ ಸಾಮ್ರಾಜ್ಯವು ಕನ್ನಡಿಗ ಹಿಂದೂಗಳ ಮೇಲೆ ನಡೆಸಿದ ಮಾರಣಹೋಮದ ಒಂದು ಅಧ್ಯಾಯ.

 

ಕರ್ನಾಟಕದಲ್ಲಿ ಪೇಶ್ವ ಮರಾಠ ಸೈನಿಕರಿಂದ ನಾಶವಾದ ದೇವಾಲಯಗಳಲ್ಲಿ ಶೃಂಗೇರಿಯು ಮೊದಲನೆಯದೂ ಅಲ್ಲ ಕೊನೆಯದೂ ಅಲ್ಲ. 1772ರಲ್ಲಿ ತ್ರಯಂಬಕ್ ಮಾಮನ ನೇತೃತ್ವದಲ್ಲಿ ಪೇಶ್ವೆ ಮಾಧವ ರಾವನ ಸೈನಿಕರು ಮೇಲುಕೋಟೆ ಪಟ್ಟಣದ ದೇವಾಲಯಗಳನ್ನು ಸುಟ್ಟುಹಾಕಿದ್ದರು. ಶೃಂಗೇರಿ ದಾಳಿಯ ಒಂದೋ ಎರಡೋ ತಿಂಗಳಲ್ಲೇ ದೇವರಾಯನದುರ್ಗದ ಹಿಂದೂ ದೇವಾಲಯವನ್ನು ಕೊಳ್ಳೆ ಹೊಡೆದು ಸುಟ್ಟು ಹಾಕಲಾಗಿತ್ತು. ಕೆಲವು ತಿಂಗಳುಗಳ ಬಳಿಕ ಕೂಡ್ಲಿ ಮಠಕ್ಕೂ ಇದೇ ಗತಿ ಒದಗಿಬಂದಿತ್ತು. ಶೃಂಗೇರಿಯ ಮೇಲಿನ ದಾಳಿಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ 17 ಮತ್ತು 18ನೆಯ ಶತಮಾನಗಳಲ್ಲಿ ಮರಾಠ ಸಾಮ್ರಾಜ್ಯವು ಕರ್ನಾಟಕದ ಮೇಲೆ ಹಾಗೂ ಭಾರತದಾದ್ಯಂತ ಮರಾಠೇತರ ಹಿಂದೂಗಳ ಮೇಲೆ ನಡೆಸಿದ ಬರ್ಬರ ದಾಳಿಗಳನ್ನು ಸವಿಸ್ತಾರವಾಗಿ ತಿಳಿಯಬೇಕಿದೆ.

 

ಜೆನಸೈಡ್/genocide (ಹತ್ಯಾಕಾಂಡ) ಎಂಬ ಪದವನ್ನು 1944ರಲ್ಲಿ ಮೊದಲ ಬಾರಿಗೆ ಬಳಸಿದವನು ಪೋಲ್ಯಾಂಡಿನ ವಕೀಲನಾದ ರಫೇಲ್ ಲೆಮ್ಕಿನ್. ವಿಶ್ವಸಂಸ್ಥೆಯು ಪ್ರಕಾರ “ಯಾವುದೇ ಒಂದು ರಾಷ್ಟ್ರ,ಜನಾಂಗ ಅಥವಾ ಧಾರ್ಮಿಕ ಗುಂಪನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಪಡಿಸುವ ಉದ್ದೇಶದಿಂದ ಕೈಗೊಳ್ಳುವ ಕೃತ್ಯಗಳನ್ನು ಜೆನಸೈಡ್/ಹತ್ಯಾಕಾಂಡ ಎಂದು ಪರಿಗಣಿಸಲಾಗುತ್ತದೆ”(10). ಕನ್ನಡಿಗರ ವಿರುದ್ಧ ಪೇಶ್ವೆ ಸಾಮ್ರಾಜ್ಯವು ನಡೆಸಿದ ವಿಧ್ವಂಸಕ ಕೃತ್ಯಗಳು ಈ ವ್ಯಾಖ್ಯಾನಕ್ಕೆ ಸರಿಹೊಂದುತ್ತದೆ. ಪೇಶ್ವೆ ಸಾಮ್ರಾಜ್ಯವು ಸ್ವಯಂಕೇಂದ್ರಿತ ಹಾಗೂ ಸ್ವಹಿತಾಸಕ್ತಿಗಾಗಿ ದುಡಿದ ಸಂಸ್ಥೆಯಾಗಿತ್ತೇ ಹೊರತು ಹಿಂದೂಗಳನ್ನು ಒಗ್ಗೂಡಿಸಿ, ಹಿಂದೂಗಳಲ್ಲಿ ಸಮಾನತೆ ತರುವ ಪರಿಕಲ್ಪನೆಯೇ ಅದಕ್ಕಿರಲಿಲ್ಲ. ಶೃಂಗೇರಿಯ ದಾಳಿಯು ಪ್ರಧಾನವಾಗಿ ಹಿಂದೂಗಳೇ ಇರುವ ನುಡಿಗುಂಪಾದ ಕನ್ನಡಿಗರ ಮೇಲೆ 17-18ನೆಯ ಶತಮಾನಗಳಲ್ಲಿ ಪೇಶ್ವೆ ನಡೆಸಿದ ಹತ್ಯಾಕಾಂಡದ ಒಂದು ಭಾಗವಾಗಿತ್ತಲ್ಲದೆ ಇಂದಿಗೂ ಆ ಘೋರ ಹತ್ಯಾಕಾಂಡದ ಒಂದು ಜ್ವಲಂತ ಸಾಕ್ಷಿಯಾಗಿದೆ.

ಪೇಶ್ವೆಗಳ ಬಗ್ಗೆ

ಪೇಶ್ವೆ ಎಂಬ ಪದವು ಪರ್ಷಿಯನ್ پیشوا pēshwā ನಿಂದ ಬಂದಿದೆ, ಇದರ ಅರ್ಥ “ಮುಂಚೂಣಿಯಲ್ಲಿರುವ, ನಾಯಕ”.

ಛತ್ರಪತಿ ಶಿವಾಜಿ ಮಹಾರಾಜ್ (1659-80 ರ ಆಳ್ವಿಕೆ) ಪ್ರಧಾನ ಮಂತ್ರಿ ಸ್ಥಾನಮಾನಕ್ಕೆ ಪೇಶ್ವೆ ಎಂದು ಕರೆದು,  ಮೊರೋಪಂತ್ ಪಿಂಗಳೆ ಅವರನ್ನು ಮೊದಲ ಪೇಶ್ವೆಯಾಗಿ ನೇಮಿಸಿದರು. ಶಿವಾಜಿ, ಸಂಭಾಜಿ ಮತ್ತು ರಾಜಾರಾಮ್ ಆಳ್ವಿಕೆಯಲ್ಲಿ ಎಲ್ಲಾ ಪೇಶ್ವೆಗಳು ದೇಶಸ್ಥ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರು .

ಶಿವಾಜಿಯ ಮೊಮ್ಮಗ ಶಾಹು 1713 ರಲ್ಲಿ , ಚಿತ್ಪಾವನ ಬ್ರಾಹ್ಮಣ ಭಟ್ ಕುಟುಂಬದ ಬಾಲಾಜಿ ವಿಶ್ವನಾಥ್ (ಭಟ್) ಅವರನ್ನು ಪೇಶ್ವೆಯಾಗಿ ನೇಮಿಸಿದರು.

1719 ರಲ್ಲಿ ಬಾಲಾಜಿಯ ಮಗ ಬಾಜಿ ರಾವ್ I ನನ್ನು ಶಾಹು ಪೇಶ್ವೆಯಾಗಿ ನೇಮಿಸಿದ ನಂತರ ಭಟ್ ಕುಟುಂಬಕ್ಕೆ ಆ ಸ್ಥಾನ ಆನುವಂಶಿಕವಾಯಿತು. ತದ ನಂತರ ಪೇಶ್ವೆ ಅವರ ಮನೆತನದ ಹೆಸರಾಯಿತು.
ಶಾಹು, 1749 ರಲ್ಲಿ ತೀರಿಕೊಂಡ ನಂತರ ಪೇಶ್ವೆ ಬಾಲಾಜಿ ಬಾಜಿ ರಾವ್ ಮಹಾರಾಷ್ಟ್ರದ ರಾಜ್ಯಭಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಕೊನೆಯ ಪೇಶ್ವೆ, ಬಾಜಿ ರಾವ್ II, 1818 ರಲ್ಲಿ ಭೀಮಾ ಕೋರೆಗಾಂವ್ ನಲ್ಲಿ ನಡೆದ ಮೂರನೇ ಆಂಗ್ಲೋ-ಮರಾಠಾ ಯುದ್ಧದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಸೋತ ನಂತರ ಪೇಶ್ವೆ ಸಾಮ್ರಾಜ್ಯ ಅಂತ್ಯ ಕಂಡಿತು.

 

 

ಉಲ್ಲೇಖಗಳು:

 

 1) Website of Dakshinamnaya Sri Sharada Peetham, Sringeri. Downloaded on Oct. 13, 2020 from this link https://www.sringeri.net/history.

 

2) Shastry, A.K., ‘The Records of the Sringeri Dharmasamsthana’, Sringeri Matha, Sringeri, 2009.

 

3) Sardesai, Govind Sakharam., ‘New History of The Marathas’, Vol. 1 of 3, Bombay, 1946.

 

4) Price, David., ‘Memoirs of the Early Life and Service of a Field Officer, on the Retired List of the Indian Army’, J. Loder, printer, Woodbridge, 1839.

 

5) Moor, Edward., ‘A narrative of the operations of Captain Little’s detachment, and of the Mahratta army, commanded by Purseram Bhow; during the late confederacy in India, against the Nawab Tippoo Sultan Bahadur’, J.Johnson, London, 1794.

 

6) Wellesley, Richard Colley., Notes relative to the late transactions in the Marhatta Empire, 1804.

 

7) Gazetteer of the Bombay Presidency, vol. XV, Part 2 – Kanara, 1883.

 

8) Sarkar, Jadunath., ‘Fall of Mughals’, vol. 1, 1964.

 

9) Dirom, Alexander., ‘A narrative of the campaign in India, which terminated the war with Tippoo Sultan in 1792’, published in 1793.

 

10) Website of United Nations. Accessed from this link https://www.un.org/en/genocideprevention/genocide.shtml on Oct. 12, 2020.

 

ಲೇಖನಕ್ಕೆ ಪೂರಕವಾದ ಮಾಹಿತಿಯನ್ನು ಸಂಶೋಧಿಸಿ ಬರೆಯಲು ನನಗೆ ನೆರವಾದ ಎಲ್ಲಾ ಮೂಲ ಕೃತಿಗಳ ಲೇಖಕರಿಗೆ ನನ್ನ ಧನ್ಯವಾದಗಳು. ವಿಶೇಷವಾಗಿ ಶಿವಮೊಗ್ಗದ ನಿಧಿನ್ ಜಾರ್ಜ್ ಓಲಿಕಾರ ಅವರಿಗೆ ನಾನು ಆಭಾರಿಯಾಗಿದ್ದೇನೆ.