ನೀನಿರಬೇಕಿತ್ತು ಅಪ್ಪ – ಸಂಘಮಿತ್ರೆ ನಾಗರಘಟ್ಟ

ನೀನಿರಬೇಕಿತ್ತು ಅಪ್ಪ

– ಸಂಘಮಿತ್ರೆ ನಾಗರಘಟ್ಟ

 

ನೀನೇನೋ ಬಸವನಹುಳುವಿನಂತೆ

ಕಪ್ಪು ರಸ್ತೆಯ ಮೇಲೆ

ಹರಿದು, ಒಸಕಿಕೊಂಡ ಯಾವ

ಸುಳಿವೂ ಇಲ್ಲದೇ

ಕಾಣದಾದೆ

 

ನಿನ್ನ ರಕ್ತವನ್ನೇ ಹಂಚಿಕೊಂಡ

ನನ್ನ- ನೀನು ಹಿಡಿಯಲೊರಟ

ಬೇಲಿ ಮೇಲಿನ ಚಿಟ್ಟೆಯಂತೆ

ಮುಷ್ಟಿಯಲಿ ಇರಿಸಿಕೊಂಡಿರುವ

ಈತನಿಗೂ ನಿನ್ನೊಲವ

ಪರಿಮಳವ ಹೀರಿಸು

 

ನಾನು ಕಿಟಕಿಯ ಬಾಗಿಲಲಿ

ನನ್ನೊಡಲಲಿ ಅವನಿತ್ತ

ಕೊಡುಗೆಯ ಹೊತ್ತು

ಅವನ ಬರುವಿಕೆಗಾಗೇ

ಕಾದಿರುವಾಗ ನೀನೇ

ಕನಸಲಿ ನನ್ನ ಸಾಂತ್ವನಿಸುವೆ

 

ನಿನ್ನವಳೋ ನಿನ್ನ -ಅವನ

ಹೊಣೆಗಾರಿಕೆಯ ಎಂದಿನಂತೆ

ಒಂಟಿಯಾಗೇ ಹಿಡಿದು

ಮಿಂಚು ಗುಡುಗಿಗೆ ಅಂಜದೆ

ಎದೆ ಚಾಚಿ ನಿಂತಿದ್ದಾಳೆ

 

ಮತ್ತೀಗ ನಾಳೆ ಬರುವೆ

ಎಂಬ ಸಬೂಬು ಹೇಳದೆ

ನನ್ನ ಮಡಿಲಲ್ಲೇ ಮಗುವಾಗಿ

ಬಾ ನಿನಗಾಗಿ ನೊಂದ

ಕೇರಿಗಳು ಕಾಯುತ್ತಿವೆ…

~ ಸಂಘಮಿತ್ರೆ ನಾಗರಘಟ್ಟ

ಸಂಘಮಿತ್ರೆ ನಾಗರಘಟ್ಟ –  ತಂದೆ ಕವಿ ಎನ್ ಕೆ ಹನುಮಂತಯ್ಯ ತಾಯಿ ಬರಹಗಾರ್ತಿ ಶೈಲಜ ನಾಗರಘಟ್ಟ ಊರು ತಿಪಟೂರು . ಕವನ ಸಂಕಲನ- ಬೆನ್ನಿಗೆಲ್ಲಿಯ ಕಣ್ಣು ಹವ್ಯಾಸಿ ರೇಖಾಚಿತ್ರ ಕಲಾವಿದೆ