ಚಾಮುಂಡಿ ಮಿಥ್ : ಮಹಿಷಾ ಟ್ರೂಥ್ – ಮಹಿಷಾ ಮಂಡಲದ ಆದಿ ದೊರೆ ಒಂದು ಚಾರಿತ್ರಿಕ ನೋಟ

ಚಾಮುಂಡಿ ಮಿಥ್ : ಮಹಿಷಾ ಟ್ರೂಥ್ – ಮಹಿಷಾ ಮಂಡಲದ ಆದಿ ದೊರೆ ಒಂದು ಚಾರಿತ್ರಿಕ ನೋಟ

ಹಾರೋಹಳ್ಳಿ ರವೀಂದ್ರ

ಮೈಸೂರು:  ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ವಂಶಸ್ಥರಾಗಿರುವ ನಾವು ಸಾಮರಸ್ಯ ಮಾಡುತ್ತೇವೆಯೊ ಹೊರತು. ಕದಡುವವರಲ್ಲ.  ಅನಾಚಾರ, ದುರಾಚಾರ ಕುರಿತು ಮಾತನಾಡುವವರು ಇದನ್ನು ಅರಿಯಬೇಕು ಎಂದು ಉರಿಲಿಂಗಿ ಪೆದ್ದಿ ಮಠದ  ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.

ಮಾನಸ ಗಂಗೋತ್ರಿಯ ಲಲಿತಕಲೆಗಳ ಕಾಲೇಜು ಸಭಾಂಗಣದಲ್ಲಿ  ಮಹಿಷಾ ದಸರಾ ಆಚರಣಾ ಸಮಿತಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಷಾ ಮಂಡಲದ ಆದಿ ದೊರೆ ಒಂದು ಚಾರಿತ್ರಿಕ ನೋಟ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

 

ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಜನರಿಗೆ ವಾಸ್ತವ ಇತಿಹಾಸ ತಿಳಿಸಬೇಕು. ಇತಿಹಾಸ ತಾಯಿಯ ಗರ್ಭ ಇದ್ದ ಹಾಗೆ, ಅದನ್ನು ತಿರುಚಿದರೆ ತಾಯಿಯ ಗರ್ಭವನ್ನು ತಿರುಚಿದಂತಾಗಲಿದೆ. ಮಹಿಷ ದಸರಾ ಆಚರಣೆ ಮಹಿಷ ಮಂಡಲದ ಬಗ್ಗೆ ನಿಜವಾದ ವಿಚಾರವನ್ನು ಹೇಳುವುದಾಗಿದೆಯೇ ಹೊರತು ಯಾರನ್ನು ಘಾಸಿಗೊಳಿಸುವ, ಧಕ್ಕೆ ತರುವ ಕೆಲಸ ಮಾಡುತ್ತಿಲ್ಲ. ನಿಮ್ಮ ನಂಬಿಕೆಯನ್ನು ನೀವು ಹೇಳುತ್ತಿದ್ದೀರಾ ಎಂದರು.

 

ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ನಂಬಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಕೆಲವರು ಹೇಳುವಂತೆ ಅನಾಚಾರ, ದುರಾಚಾರವೂ ಅಲ್ಲ. ದಾಖಲೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅದಕ್ಕೆ ತಕ್ಕಂತೆ ಉತ್ತರ ಕೊಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ತಿರುಗೇಟು ನೀಡಿದರು.

 

ನಾವು ಮಹಿಷಾಸುರನ ಮಕ್ಕಳು ಎನ್ನಲು ಹೆಮ್ಮೆ ಪಡುತ್ತೇವೆ. ನಾವು ಬೆಣ್ಣೆ ಕದ್ದಿಲ್ಲ. ಹೆಂಗಸರ ಮೂಗು ಕತ್ತರಿಸಿಲ್ಲ. ಹದಿನಾರು ಸಾವಿರ ಹೆಂಡತಿಯರನ್ನು ಹೊಂದಿಲ್ಲ. ನಾವು ಮಹಿಷಾಸುರನಂತೆ ಪ್ರಕೃತಿಯ ಮೇಲೆ ನಂಬಿಕೆ, ಹೆಣ್ಣಿನ ಮೇಲೆ ಗೌರವ ಹೊಂದಿದ್ದೇವೆ. ನಾಡ ಅಧಿದೇವತೆಯನ್ನು ಗೌರವಿಸುತ್ತೇವೆ. ಜೊತೆಗೆ ಮಹಿಷಾಸುರನನ್ನು ಪೂಜಿಸುತ್ತೇವೆ.

 

ಮಹಿಷಾಸುರನ್ನು ಪೂಜಿಸಿದರೆ ಅವರ ಭಾವನೆಗಳಿಗೆ ಧಕ್ಕೆ ಬರುವುದಾದರೆ ದೇವಸ್ಥಾನದ ಹೊರಗೆ ಇಟ್ಟಿರುವ ಮಹಿಷಾಸುರನ ಬಗ್ಗೆ ನಂಬಿಕೆ ಇಟ್ಟುಕೊಂಡಿರುವ ಕೋಟ್ಯಾಂತರ ಮನಸ್ಸುಗಳಿಗೆ ಧಕ್ಕೆ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು.

 

ಪ್ರೊ. ಕೆ.ಎಸ್.ಭಗವಾನ್ ಅವರು ಮಾತನಾಡಿ,

ಕ್ರಿ.ಶ. ೩ನೇ ಶತಮಾನದಲ್ಲಿ ಬೌದ್ಧ ಪರಂಪರೆ ಹರಡಲು ಮಹಿಷೂರಿಗೆ ಮಹಿಷಾ ಆಗಮಿಸಿದರು. ಚಾಮುಂಡಿ ಕ್ರಿ.ಶ. ೨ನೇ ಶತಮಾನದಲ್ಲಿ ಇದ್ದಳು ಎಂದು ಪುರಾಣ ಹೇಳುತ್ತವೆ. ಹಾಗಿದ್ದ ಮೇಲೆ ಮಹಿಷಾಸುರನ ಮೇಲೆ ಹೇಗೆ ಮರ್ಧನ ಮಾಡಲು ಸಾಧ್ಯ? ಮಹಿಷಾ ಸತ್ಯ, ಚಾಮುಂಡಿ ಮಿಥ್ಯ. ಚಾಮುಂಡೇಶ್ವರಿ ಯಾವಾಗ ಸೃಷ್ಠಿಯಾದಳು ಎಂಬುದರ ಬಗೆ ನಿಖರವಾದ ದಾಖಲೆ ಇಲ್ಲ. ಆದರೆ ಬೌದ್ಧರ ಬಗ್ಗೆ ದಾಖಲೆ ಇದೆ. ಇತಿಹಾಸ ಹಾಗೂ ಪುರಾಣ ಎರಡೂ ಚರ್ಚೆಯಾಗಬೇಕಿದೆ ಎಂದು ತಿಳಿಸಿದರು.

 

ಪ್ರೊ. ಮಹೇಶ್ ಚಂದ್ರಗುರು ಮಾತನಾಡಿ,

ಚಾಮುಂಡಿ ವಿರೋಧಿಸಲು ಮಹಿಷಾ ದಸರಾ ಆಚರಿಸುತ್ತಿಲ್ಲ. ಆದರೆ ಚಾಮುಂಡಿ ಮಿಥ್, ಮಹಿಷ ಟ್ರೂಥ್ ಎಂಬುದನ್ನು ತಿಳಿಸಲು ಈ ಕಾರ್ಯಕ್ರಮ. ಇನ್ನೆಷ್ಟು ವರ್ಷಗಳ ಕಾಲ ಸುಳ್ಳು ಹೇಳಿಕೊಂಡು ಅಧಿಕಾರವನ್ನು ಪಡೆಯುತ್ತೀರಿ. ಸಂಪತ್ತನ್ನು ನಿಯಂತ್ರಿಸುತ್ತೀರಿ. ಮೈ ಡಿಯರ್ ವೈದಿಕ್ ಫ್ರೆಂಡ್ಸ್ ಎಂದು ನಿವೃತ್ತ ಪ್ರಾಧ್ಯಾಪಕ ಪ್ರಿ. ಬಿ.ಪಿ. ಮಹೇಶ್ ಚಂದ್ರಗುರು ಪ್ರಶ್ನಿಸಿದರು. ಮಹಿಷಾ ದಸರಾ ಆಚರಣೆಗು ಮುನ್ನವೆ ಯಾಕೆ ಗದ್ದಲ ಮಾಡುತ್ತಿದ್ದೀರಿ? ನಾವೇನು ಬೇರೆ ದೇಶದವರಾ? ನಾವು ಹಿಂದೂಗಳಲ್ಲವೆ? ಅಂಬೇಡ್ಕರ್ ಅವರು ಪುರಾಣ ನಂಬಬೇಡಿ ಎಂದು ಹೇಳಿದ್ದಾರೆ. ಪುರಾಣ ಸುಳ್ಳು, ಇತಿಹಾಸ ಸತ್ಯ. ಮನುಸ್ಮೃತಿ ಸುಳ್ಳು, ಸಂವಿಧಾನವೇ ಸತ್ಯ. ಮಹಿಷ ಬುದ್ಧರೇ ನಮ್ಮ ಮಾರ್ಗದಾತರು ಎಂದು ಹೇಳಿದರು.

 

ಸಂಸದ ಪ್ರತಾಪ್ ಸಿಂಹ ಪೊಲಿಟಿಕಲ್ ಟೆರರಿಸ್ಟ್, ಮಹಿಷಾನಂತಹ ರಾಜಸ್ಮರಣೆ ಕಾರ್ಯಕ್ರಮದಲ್ಲಿ ಯಾಕೆ ಪಾಪಿಗಳನ್ನು ನೆನಪು ಮಾಡಿಕೊಳ್ಳಬೇಕು. ಜನಗಳೇ ಮುಂದಿನ ದಿನಗಳಲ್ಲಿ ಪ್ರತಾಪ್ ಸಿಂಹ ಅವರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ. ಇತಿಹಾಸ ಅರಿಯದವರ ಬಗ್ಗೆ ಮಾತನಾಡುವುದೇ ಸರಿಯಲ್ಲ. ನೂರು ಬಾರಿ ಸುಳ್ಳನ್ನು ಹೇಳುವುದು ಕೆಲವರ ಕಾಯಕವಾಗಿದೆ. ನಾವು ಸುಳ್ಳಿಗೆ ಸತ್ಯದ ಉತ್ತರ ಕೊಡಬೇಕು ಎಂದು ನುಡಿದರು.

ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ,

ಕಾನೂನು ಸುವ್ಯವಸ್ಥೆ ಹದಗೆಡದಿದ್ದರೂ, ಮಹಿಷ ದಸರಾಗೆ ತಡೆ ಹಾಕಿದ್ದು ಏಕೆ? ಧಾರ್ಮಿಕ ನಂಬಿಕೆಗೆ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಮೈಸೂರು ರಾಜಮನೆತನದವರು ಪತ್ರ ವ್ಯವಹಾರ ಮಾಡುವಾಗ ಈಗಲೂ ಮೈಸೂರು ಬದಲಿಗೆ ಮಹಿಷೂರು ಎಂದೆ ಬಳಸುತ್ತಾರೆ. ಮಹಿಷೂರಿನಿಂದಲೇ ಮೈಸೂರು ಎಂದು ಹೆಸರು ಬಂದಿದೆ ಎಂದರು.

ಪ್ರೊ. ನಂಜರಾಜೇ ಅರಸ್ ಮಾತನಾಡಿ,

ಚಾಮುಂಡಿ ಬೆಟ್ಟ ಎಂದು ಇರಲೇ ಇಲ್ಲ. ಅದನ್ನು ಬಹಳ ಹಿಂದೆ ಮಹಾಬಲಿ ಬೆಟ್ಟ ಎಂದು ಕರೆಯುತ್ತಿದ್ದರು. ಅಲ್ಲಿ ನರಬಲಿ ನಡೆಯುತ್ತಿತ್ತು. ಚಾಮುಂಡಿಗೆ ನರಬಲಿ ಕೊಡುತ್ತಿದ್ದರು. ಆಕೆ ವೈದಿಕಳಲ್ಲ. ಆಕೆ ನರಬಲಿ ಬೇಡುವ ಜೈನ ಯಕ್ಷಿಣಿ. ನರಬಲಿ ಪಡೆಯುವುದೆ ಆಕೆಯ ಕೆಲಸ. ಅದಕ್ಕೆ ಪೂರಕವಾಗಿದ್ದವರು ವೈದಿಕರು. ಅದನ್ನು ತಪ್ಪಿಸಿದ್ದು ಹೈದರ್ ಮತ್ತು ಟಿಪ್ಪು.

ಡಾ. ಕೃಷ್ಣಮೂರ್ತಿ ಚಮರಂ ಮಾತನಾಡಿ,

ಮಹಿಷಾಸುರನ ವಿಚಾರದಲ್ಲಿ ನಮ್ಮನ್ನು ವಿರೋಧಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಸುಮ್ಮನೆ ಪ್ರಚಾರ ಪಡೆಯುತ್ತಿದ್ದಾರೆ. ಸುಮ್ಮನೆ ಹೇಳಿ ಹೋಗುವುದಲ್ಲ. ತಮ್ಮ ವಿಚಾರಗಳನ್ನು ಮಂಡಿಸಬೇಕು. ಅಸಂವಿಧಾನಿಕ ಮಾತುಗಳನ್ನಾಡುವುದಲ್ಲ, ಇತಿಹಾಸವನ್ನು ಮೊದಲು ಓದಿಕೊಳ್ಳಬೇಕು ಎಂದು ಸಲಹೆ ನೀಡಿದರು.

 

ಹಿರಿಯ ಲೇಖಕ ಸಿದ್ಧಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಮಹಾಪೌರ ಪುರುಷೋತ್ತಮ್, ಸಂಶೋಧಕರ ಸಂಘದ ಅಧ್ಯಕ್ಷ ಸಿ. ಮಹೇಶ್, ಹಂಪಿ ವಿವಿ ಪ್ರಾಧ್ಯಾಪಕ ಡಾ. ಚಿನ್ನಸ್ವಾಮಿ ಸೋಸಲೆ, ಡಾ. ದಿಲೀಪ್ ನರಸಯ್ಯ  ಹಾಗೂ ಮುಂತಾದವರು ಹಾಜರಿದ್ದರು.