ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನ: ಕಾಂಗ್ರೆಸ್ ಸರ್ಕಾರಕ್ಕಿಲ್ಲ ಕಾಳಜಿ
ಹಾರೋಹಳ್ಳಿ ರವೀಂದ್ರ
ಮೈಸೂರು: ಎಸ್‌ಸಿ,ಎಸ್‌ಟಿ ಗೆ ಮೀಸಲಿಟ್ಟಿರುವ ಅನುದಾನವನ್ನು ಇತರೆ ಇಲಾಖೆಗಳಿಗೆ ಬಳಸಿ ದಲಿತರ ಪಾಲನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಮುಖಂಡ ಕೆ.ಎನ್. ಪ್ರಭುಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.
ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ ವತಿಯಿಂದ ಆಯೋಜಿಸಿದ್ದ ಎಸ್‌ಸಿ, ಎಸ್‌ಟಿ ಬಳಕೆಯಾಗಬೇಕಿದ್ದ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅನುದಾನದ ಸದ್ಭಳಕೆಗಾಗಿ ರಾಜ್ಯ ಮಟ್ಟದ ಜನಾಂದೋಲನ ವಿಚಾರ ಸಂಕಿರಣ ಕುರಿತು ಮಾತನಾಡಿದ ಅವರು, ೧೯೫೦ ರಿಂದಲೂ ದಲಿತ ಸಮುದಾಯಕ್ಕೆ ತುಪ್ಪ ಸವರುತ್ತಲೇ ಬಂದಿದೆ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಎಸ್‌ಸಿ-ಎಸ್‌ಟಿ ಜನಸಂಖ್ಯೆಗೆ ತಕ್ಕಂತೆ ೨.೫೪. ೯೧೩ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೩೭.೬೬೧ ಕೋಟಿ ರೂ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ೧೩.೨೮೨ ಕೋಟಿ ರೂ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಮೂಲಕ ಉಳಿದ ಹಣವನ್ನು ಬೇರೆ ಬೇರೆ ಇಲಾಖೆಗೆ ಖರ್ಚು ಮಾಡಿದೆ. ಆರೋಗ್ಯ ಇಲಾಖೆಯಲ್ಲಿ ೯.೦೩೫ ಕೋಟಿ ರೂ.ಅನುದಾನವನ್ನು ಆಸ್ಪತ್ರೆ , ಕಟ್ಟಡಗಳು ಮತ್ತು ಯಂತ್ರೋಪಕರಣಗಳ ಖರೀದಿಗೆ ಬಳಸಲಾಗಿದೆ. ಆದರೆ ಈ ವರ್ಗಕ್ಕೆ ಉಚಿತ ಚಿಕಿತ್ಸೆ ನೀಡುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮ, ಬಂಜಾರ, ಸಫಾಯಿ ಕರ್ಮಚಾರಿ, ಭೀವಿ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಸಾಕಷ್ಟು ಹಣ ಬಿಡುಗಡೆಯಾಗಿದ್ದರು ನಿರೀಕ್ಷಿತ ಪ್ರಮಾಣದಲ್ಲಿ ಬಳಕೆಯಾಗಿಲ್ಲೆಂದು ಹೇಳಿದರು.
ಹತ್ತು ವರ್ಷಗಳಲ್ಲಿ ೧೬.೭೦೬ ಕೋಟಿ ರೂ. ಹಣವನ್ನು ಅನ್ಯ ಇಲಾಖೆಗೆ ಬಳಸಿಕೊಂಡಿದ್ದು, ಈ ಅನುದಾನದಲ್ಲಿ ದಲಿತರಿಗೆ ೧೧ ಲಕ್ಷ ಮನೆ ನಿರ್ಮಾಣ ಮಾಡಿಕೊಡಬಹುದಿತ್ತು. ಕೇಂದ್ರ ಸರ್ಕಾರ ನೀಡಿರುವ ಅಂಕಿ ಅಂಶಗಳ ಪ್ರಕಾರ ಮೀಸಲು ಮತ್ತು ಮೀಸಲು ಬಡ್ತಿಯಲ್ಲಿ ೫ ಲಕ್ಷ ಹುದ್ದೆಗಳು ಖಾಲಿ ಇವೆ. ಮೇಲ್ದರ್ಜೆಯ ಹುದ್ದೆಗಳನ್ನು ನೇಮಕ ಮಾಡದೆ ಗ್ರೂಪ್ ಸಿಮತ್ತು ಡಿ ಹುದ್ದೆಗಳನ್ನು ತುಂಬಿ ಉನ್ನತ ಹುದ್ದೆಗಳಿಂದ ವಂಚಿಸುವ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭ ಉದ್ಘಾಟಿಸಿದ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ,
ರಾಜ್ಯ ಸರ್ಕಾರ ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಅನುದಾನವನ್ನು ಕಡಿಮೆ ಮಾಡಿರುವುದರಿಂದ ತುಂಬಾ ಅನ್ಯಾಯವಾಗಿದೆ. ಪ್ರಸ್ತುತ ಎಸ್‌ಸಿ, ಎಸ್‌ಟಿ ಜನಸಂಖ್ಯೆಗೆ ಹೋಲಿಸಿದರೆ ಈಗ ಮೀಸಲಿಟ್ಟಿರುವ ಅನುದಾನ ಸಾಕಾಗದು. ಹೀಗಿದ್ದರೂ ಕಡಿತ ಮಾಡಿರುವುದನ್ನು ನೋಡಿದರೆ ದಲಿತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇರುವುದರ ಬಗ್ಗೆ ಅನುಮಾನ ಮೂಡುತ್ತದೆ.
ವೇದಿಕೆ ಮುಖಂಡ ಭೀಮನಹಳ್ಳಿ ಸೋಮೇಶ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಸಂಶೋಧಕರ ಸಂಘದ ಉಪಾಧ್ಯಕ್ಷ ಎಂ. ಲೋಕೇಶ್, ಮುಖಂಡರಾದ ಡಿ.ಪ್ರತಾಪ್, ರಾಜೇಶ್, ಮಹೇಶ್ ಮಾರ್ಚಹಳ್ಳಿಎನ್. ಪ್ರದೀಪ್ ರಾಜ್, ಯೋಗೀಶ್, ನಾಗರಾಜು, ನರೇಂದ್ರ ಅನಿಲ್ ಗುಡ್ಡಣ್ಣ, ಹಾಜರಿದ್ದರು. ಸಾಗರ್ ಹಾಗೂ ಸಂಗಡಿಗರು ಪರಿವರ್ತನೆ ಗೀತೆಗಳನ್ನು ಹಾಡಿದರು.