ಗಾಜಾದಿಂದ ಬಂದ ಪತ್ರ
ಘಾಸ್ಸನ್ ಕನಾಫನಿ
ಕನ್ನಡ ಅನುವಾದ: ಶ್ರೀಧರ ಅಘಲಯ
ಪ್ರೀತಿಯ ಮುಸ್ತಾಫ,
ನನಗೆ ನಿನ್ನ ಪತ್ರ ತಲುಪಿ ಸ್ಯಾಕ್ರಮೆಂಟೊನಲ್ಲಿ ನಿನ್ನೊಡನೆ ಉಳಿದುಕೊಳ್ಳಲು ಏನೆಲ್ಲಾ ಅವಶ್ಯಕತೆ ಇದೆಯೋ ಅದನ್ನು ನೀನು ಮಾಡಿರುವುದು ತಿಳಿದಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ನನಗೆ ಸೀಟನ್ನು ಕಾದಿರಿಸಲಾಗಿದೆ ಎನ್ನುವ ಸುದ್ದಿ ಕೂಡ ತಲುಪಿದೆ. ಗೆಳೆಯನೇ, ನೀನು ಮಾಡಿರುವ ಎಲ್ಲ ಸಹಾಯಕ್ಕೆ ನನ್ನ ಕೃತಜ್ಞತೆಗಳು. ನಿನಗೆ ನಾನು ಈಗ ಹೇಳುವ ಸುದ್ದಿ ವಿಚಿತ್ರ ಎನ್ನಿಸಬಹುದು– ಆದರೆ ಇದನ್ನು ಅನುಮಾನಿಸಬೇಡ. ನನಗೆ ಯಾವುದೇ ಅಳುಕು ಇಲ್ಲ, ಖಚಿತವಾಗಿ ಹೇಳಬೇಕೆಂದರೆ ನನ್ನ ಮುಂದಿರುವ ದಾರಿಯನ್ನು ಇಷ್ಟು ಸ್ಪಷ್ಟವಾಗಿ ಎಂದೂ ನೋಡೇ ಇರಲಿಲ್ಲ.ಗೆಳೆಯನೇ, ನನ್ನ ನಿರ್ಧಾರವನ್ನು ಬದಲಿಸಿದ್ದೇನೆ. ‘ಹಸಿರು , ನೀರು ಮತ್ತು ಸುಂದರ ಮುಖಗಳಿರುವ’ ಎಂದು ನೀನು ಬರೆದಿದ್ದ ಸ್ಥಳಕ್ಕೆ ನಾನು ನಿನ್ನನ್ನು ಹಿಂಬಾಲಿಸುವುದಿಲ್ಲ. ಇಲ್ಲ, ನಾನು ಇಲ್ಲೇ ಉಳಿಯುತ್ತೇನೆ, ಮತ್ತು ಎಂದೆಂದಿಗೂ ಈ ನೆಲವನ್ನು ಬಿಡುವುದಿಲ್ಲ.
ಮುಸ್ತಾಫ, ನಮ್ಮಿಬ್ಬರ ಬದುಕು ಒಂದೇ ದಾರಿಯಲ್ಲಿ ಹೋಗದಿರುವುದಕ್ಕೆ ನನಗೆ ಬಹಳ ನೋವಿದೆ. ನಾವಿಬ್ಬರು ಭಾಷೆ ಕೊಟ್ಟಿದ್ದನ್ನು ನೀನು ನೆನಪು ಮಾಡಿಕೊಳ್ಳುತ್ತಿರುವುದು ಮೆಲ್ಲಗೆ ಕೇಳುತ್ತಿದೆ, ಹಾಗು ‘’ನಾವು ಶ್ರೀಮಂತರಾಗುತ್ತೇವೆ’’ ಎಂದು ಅರಚುತ್ತಿದ್ದು. ಆದರೆ ನಾನೇನೂ ಮಾಡಲು ಸಾಧ್ಯವಿಲ್ಲ, ಗೆಳೆಯನೇ. ಹೌದು, ಕೈರೋ ವಿಮಾನ ನಿಲ್ದಾಣದ ಅಂಗಳದಲ್ಲಿ ಉನ್ಮಾದದ ಎಂಜಿನ್ ಅನ್ನು ದಿಟ್ಟಿಸುತ್ತಾ ನಿನ್ನ ಕೈಯನ್ನು ಅಮುಕಿದ ದಿನ ನನಗಿನ್ನೂ ನೆನಪಿದೆ. ಆ ಕ್ಷಣದಲ್ಲಿ ಕಿವಿಯನ್ನು ಸೀಳುತ್ತಿದ್ದ ಮೋಟಾರಿನ ಜೊತೆ ಪ್ರತಿಯೊಂದು ಸಮಯದೊಡನೆ ತಿರುಗುತ್ತಿತ್ತು, ನೀನು ನನ್ನ ಮುಂದೆ ನಿಂತಿದ್ದು, ನಿನ್ನ ದುಂಡನೆ ಮುಖ ಮೌನವಾಗಿತ್ತು.
ನಿನ್ನ ಮುಖ ಗಾಜಾದ ಶಾಜಿಯಾ ಭಾಗದಲ್ಲಿ ಬೆಳೆಯುತ್ತಿದ್ದಾಗ ಹೇಗಿತ್ತೋ ಹಾಗೆ ಬದಲಾಗದೆ ಇದ್ದು, ಒಂದೆರಡು ಸುಕ್ಕು ಇತ್ತು ಅಷ್ಟೇ. ನಾವು ಒಬ್ಬರನ್ನೊಬ್ಬರನ್ನು ಸಂಪೂರ್ಣ ಅರ್ಥ ಮಾಡಿಕೊಂಡು, ಕೊನೆಯವರೆಗೂ ಜೊತೆಯಲ್ಲಿರುತ್ತೇವೆಂದು ಭಾಷೆ ಕೊಟ್ಟಿದ್ದೆವು. ಆದರೆ ..
”ವಿಮಾನ ಹೊರಡಲು ಕಾಲು ಗಂಟೆ ಉಳಿದಿದೆ. ಈ ರೀತಿ ಶೂನ್ಯವನ್ನು ದಿಟ್ಟಿಸಬೇಡ. ಕೇಳು! ನೀನು ಮುಂದಿನ ವರ್ಷ ಕುವೈತ್ ಗೆ ಹೋಗುತ್ತೀಯ, ಅಲ್ಲಿ ಸಂಬಳದಿಂದ ಉಳಿಸಿದ ಹಣವನ್ನು ಗಾಜಾ ಬಿಟ್ಟು ಕ್ಯಾಲಿಫೋರ್ನಿಯಾಗೆ ಬರಲು ಉಪಯೋಗಿಸುತ್ತೀಯ, ನಾವಿಬ್ಬರು ಒಟ್ಟಿಗೆ ಬೆಳೆದದ್ದು, ಜೊತೆ ಜೊತೆಗೆ ಮುಂದುವರಿಯೋಣ..’’
ಆ ಗಳಿಗೆಯಲ್ಲಿ ನಾನು ವೇಗದಿಂದ ಚಲಿಸುತ್ತಿದ್ದ ನಿನ್ನ ತುಟಿಯನ್ನು ನೋಡುತ್ತಿದ್ದೆ, ಅದು ನಿನ್ನ ಅಡೆತಡೆಯಿಲ್ಲದ ವಾಚಾಳಿತನ. ಆದರೆ ಒಂದು ಅಸ್ಪಷ್ಟ ರೀತಿಯಲ್ಲಿ ಈ ಪ್ರಯಾಣ ನಿನಗೆ ಸಂಪೂರ್ಣ ತೃಪ್ತಿ ಕೊಟ್ಟಿಲ್ಲ ಅನಿಸಿತು. ನೀನು ಅದಕ್ಕೆ ಒಳ್ಳೆಯ ಮೂರು ಕಾರಣ ಕೊಡಲಾಗಲಿಲ್ಲ. ನಾನೂ ಈ ಸಂಕಟದಿಂದ ಭಾದೆಪಟ್ಟಿದ್ದೆ ಆದರೆ ನನ್ನ ಸ್ಪಷ್ಟ ತಿಳುವಳಿಕೆ ಇಷ್ಟು: ನಾವೇಕೆ ಗಾಜಾ ತ್ಯಜಿಸಿ ಪಲಾಯನ ಮಾಡಬಾರದು? ಇರಲಿ, ನಿನ್ನ ಪರಿಸ್ಥಿತಿ ಸುಧಾರಿಸತೊಡಗಿತ್ತು. ಕುವೈಟ್ ಸರ್ಕಾರದ ಶಿಕ್ಷಣ ಇಲಾಖೆ ನಿನಗೆ ಕೆಲಸಕ್ಕೆ ಒಪ್ಪಂದ ಪತ್ರ ಕೊಟ್ಟಿತ್ತು. ಆದರೆ ನನಗೆ ಕೊಟ್ಟಿರಲಿಲ್ಲ. ದಾರಿದ್ರ್ಯದ ಕಂದಕದಲ್ಲಿ ಉಳಿದಿದ್ದ ನನಗೆ ನೀನು ಒಂದಿಷ್ಟು ಹಣ ಕಳಿಸುತ್ತಿದ್ದೆ. ನಾನು ಅವಮಾನ ಪಡಬಹುದೆಂದು ಈ ಹಣವನ್ನು ಸಾಲದಂತೆ ಪರಿಗಣಿಸು ಎಂದು ನೀನೇಳುತ್ತಿದ್ದೆ. ನನ್ನ ಕುಟುಂಬದ ಪರಿಸ್ಥಿತಿ ನಿನಗೆ ಪೂರ್ಣ ಗೊತ್ತಿತ್ತು; UNRWA (ಯುನೈಟೆಡ್ ನೇಶನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಪ್ಯಾಲೆಸ್ಟೈನ್) ಶಾಲೆಯಲ್ಲಿನನಗೆ ಬರುತ್ತಿದ್ದ ಅಲ್ಪ ಪ್ರಮಾಣದ ಸಂಬಳದಿಂದ ನನ್ನ ತಾಯಿ, ವಿಧವೆಯಾಗಿದ್ದ ನನ್ನ ಅತ್ತಿಗೆ ಮತ್ತು ಅವರ ನಾಲ್ಕು ಮಕ್ಕಳಿಗೆ ಆಸರೆ ಕೊಡಲು ಸಾಕಾಗುವುದಿಲ್ಲ ಎನ್ನುವುದು ನಿನಗೆ ತಿಳಿದಿತ್ತು.
‘’ಗಮನವಿಟ್ಟು ಕೇಳು. ನನಗೆ ಪ್ರತಿ ದಿನ ಬರೆಯುತ್ತಿರು… ಪ್ರತಿ ಗಂಟೆ.. ಪ್ರತಿ ನಿಮಿಷ! ವಿಮಾನ ಇನ್ನೇನು ಹೊರಡಲಿದೆ. ವಿದಾಯ! ಮತ್ತೆ ಭೇಟಿ ಆಗುವ ತನಕ!”
ನಿನ್ನ ತಣ್ಣಗಿನ ತುಟಿ ನನ್ನ ಕೆನ್ನೆಯನ್ನು ಸವರಿತು, ನೀನು ಮುಖವನ್ನು ನನ್ನ ಕಡೆಯಿಂದ ವಿಮಾನದ ಕಡೆಗೆ ತಿರುಗಿಸಿದೆ, ಮತ್ತೆ ನನ್ನನ್ನು ನೋಡಿದಾಗ ನಿನ್ನ ಕಣ್ಣೀರು ಕಾಣಿಸಿತು.
ನನಗೆ ನಂತರ ಕುವೈಟ್ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಲು ಒಪ್ಪಂದ ಪತ್ರ ಬಂತು. ಅಲ್ಲಿ ಹೇಗೆ ನನ್ನ ಜೀವನ ಸಾಗಿತು ಎಂದು ಮತ್ತೆ ನಿನಗೆ ವಿವರವಾಗಿ ಹೇಳಬೇಕಿಲ್ಲ. ಯಾವಾಗಲೂ ಪ್ರತಿಯೊಂದರ ಬಗ್ಗೆ ನಿನಗೆ ಪತ್ರ ಬರೆದಿದ್ದೆ. ಅಲ್ಲಿನ ನನ್ನ ಜೀವನಕ್ಕೆ ನಾನೊಬ್ಬ ಚಿಕ್ಕ ಸಿಂಪಿ (ಆಯ್ಸ್ಟರ್)ಯಂತೆ ಅಂಟಿನ ಶೂನ್ಯದ ಗುಣವಿತ್ತು, ದಾರುಣ ಒಂಟಿತನಕ್ಕೆ ಕಳೆದುಹೋಗಿ, ಇರುಳು ಪ್ರಾರಂಭವಾಗುವ ಕತ್ತಲಿನಷ್ಟು ಅಂಧಕಾರವಿದ್ದ, ಮುಂದಿನ ಕಾಲದ ಕಡೆಗೆ ಮಂದಗತಿಯಲ್ಲಿ ಹೆಣಗಾಡುತ್ತಿರುವಂತೆ, ಕೊಳೆತ ನಿತ್ಯ ಕ್ರಮದಲ್ಲಿ ಸಿಕ್ಕಿಕೊಂಡು, ಸಮಯದೊಡನೆ ಹೋರಾಟ ಮಾಡುವ ಹಾಗಿತ್ತು. ಪ್ರತಿಯೊಂದೂ ಜಿಗುಟಿನ ವಾತಾವರಣದಲ್ಲಿ ಸುಡುತ್ತಿತ್ತು. ನನ್ನ ಪೂರ್ಣ ಜೀವನ ಜಾರುವಂತಿದ್ದು ತಿಂಗಳ ಕೊನೆಗೆ ಹಂಬಲಿಸುತ್ತಿತ್ತು.
ಆ ವರ್ಷದ ಮಧ್ಯದಲ್ಲಿ ಯೆಹೂದ್ಯರು ಸಾಬಾ ಡಿಸ್ಟ್ರಿಕ್ಟ್ ನ ಕೇಂದ್ರವನ್ನು ಸತತವಾಗಿ ದಾಳಿ ಮಾಡಿ, ನಮ್ಮ ಗಾಜಾ ಮೇಲೆ, ಬಾಂಬು ಮತ್ತು ಬೆಂಕಿಯನ್ನು ಎಸೆದರು. ಆ ಘಟನೆ ನನ್ನ ನಿಯತ ಕ್ರಮಗಳಿಗೆ ಕೆಲವು ಬದಲಾವಣೆ ತಂದಿತ್ತೇನೋ ಆದರೆ ನಾನು ಹೆಚ್ಚು ಗಮನಿಸುವ ಅಂಶವಿರಲಿಲ್ಲ. ನಾನು ಈ ಗಾಜಾವನ್ನು ಬಿಡುವವನಿದ್ದೆ ಮತ್ತು ಇಷ್ಟೊಂದು ಭಾದೆ ಪಟ್ಟಿದ್ದ ನಾನು ಕ್ಯಾಲಿಫೋರ್ನಿಯಾದಲ್ಲಿ ನನಗಾಗಿ ಬದುಕನ್ನು ಆರಂಭಿಸುವವನಿದ್ದೆ. ಗಾಜಾ ಮತ್ತು ಅಲ್ಲಿರುವವರ ಬಗ್ಗೆ ಜುಗುಪ್ಸೆ ಇತ್ತು. ಪ್ರತಿಯೊಂದು ವಿಕಲವಾಗಿರುವ ಈ ಪಟ್ಟಣ, ಒಬ್ಬ ರೋಗಗ್ರಸ್ಥ ಮನುಷ್ಯ ಬೂದಿ ಬಣ್ಣದಲ್ಲಿ ಸೋತ ಚಿತ್ರ ಬರೆದಂತಿತ್ತು.ಹೌದು ನನ್ನ ತಾಯಿ, ವಿಧವೆ ಅತ್ತಿಗೆ, ಅವರ ಮಕ್ಕಳಿಗೆ ಸ್ವಲ್ಪ ಹಣವನ್ನು ಅವರ ಬದುಕಿನ ಸಹಾಯಕ್ಕೆ ಕಳಿಸುತ್ತಿದ್ದೆ, ಆದರೆ ಏಳು ವರ್ಷ ಸೋತ ದುರ್ವಾಸನೆ ನನ್ನ ಮೂಗಿನ ಹೊಳ್ಳೆಯಲ್ಲಿ ತುಂಬಿದ್ದ ಈ ಜಾಗದಿಂದ ಬಹಳಷ್ಟು ದೂರವಿರುವ ಹಸಿರು ಕ್ಯಾಲಿಫೋರ್ನಿಯಾಗೆ ಹೋದಾಗ ಈ ಕಡೆಯ ಕೊಂಡಿಯಿಂದ ಕೂಡ ಕಳಚಿಕೊಳ್ಳುವವನಿದ್ದೆ. ನನ್ನ ಸಹೋದರನ ಮಕ್ಕಳು, ಅವರ ಮತ್ತು ನನ್ನ ತಾಯಿಯ ಬಗ್ಗೆ ಇದ್ದ ಮರುಕ, ಈ ಧುಮುಕುವಿಕೆಯನ್ನು ಸಮರ್ಥಿಸಲು ಎಂದೂ ಸಾಲುವುದಿಲ್ಲ. ಇದು ನನ್ನನ್ನು ಮತ್ತಷ್ಟು ಕೆಳಗೆ ಎಳೆಯುವುದು ಬೇಡ. ನಾನು ಮುಕ್ತನಾಗಬೇಕು!.
ಮುಸ್ತಾಫ, ನಿನಗೆ ಈ ಭಾವನೆಗಳು ಗೊತ್ತು ಏಕೆಂದರೆ ನೀನೂ ಇದನ್ನು ನಿಜಕ್ಕೂ ಅನುಭವಿಸಿದ್ದೀಯಾ. ನಮ್ಮ ವಿಮಾನಕ್ಕೇರುವ ಉತ್ಸಾಹಕ್ಕೆ ತಣ್ಣೀರೆರಚಿ ಗಾಜಾ ಜೊತೆಗೆ ಬಂಧಿಸಿದ ಯಾವ ಕೆಟ್ಟ ಸೂತ್ರವಿದು? ನಾವೇಕೆ ಸ್ಪಷ್ಟವಾದ ಅರ್ಥ ಸಿಗುವ ಹಾಗೆ ವಿಶ್ಲೇಷಿಸಲಿಲ್ಲ? ನಾವೇಕೆ ಈ ಹುಣ್ಣು ತುಂಬಿದ ಸೋಲನ್ನು ಹಿಂದೆ ಬಿಟ್ಟು ಆಳವಾದ ಸಾಂತ್ವನ ಸಿಗುವ ಉಜ್ವಲ ಭವಿಷ್ಯದ ಕಡೆಗೆ ಮುಂದೆಡೆಯಲಿಲ್ಲ? ಏಕೆ? ನಮಗೆ ಸರಿಯಾಗಿ ಗೊತ್ತೇ ಇರಲಿಲ್ಲ.
ಈ ಜೂನ್ ನಲ್ಲಿ ರಜೆಗೆ ಹೋಗಿದ್ದಾಗ ನನಗೆ ಸೇರಿದ್ದ ಎಲ್ಲ ವಸ್ತುಗಳನ್ನು ಒಟ್ಟುಗೂಡಿಸಿ, ಆಕರ್ಷಕ ನಿರ್ಗಮನಕ್ಕೆ ತವಕಿಸುತ್ತಿದ್ದಾಗ, ಜೀವನದ ಸಣ್ಣ ವಿಚಾರಗಳು ಹೊಳೆಯುವ ಅರ್ಥ ಕೊಡುವ ಆರಂಭದಂತೆ, ನಾನು ಗಾಜಾವನ್ನು ಹಿಂದೆ ಇದ್ದಂತಯೇ ಕಂಡೆ, ಸಮುದ್ರದ ಅಲೆಗಳಿಂದ ಅಂಟಿನ ಮರಳಿನ ದಡಕ್ಕೆ ಎಸೆಯಲ್ಪಟ್ಟ ಕಸಾಯಿಖಾನೆಯ ಶಂಖದ ಹುಳುವಿನ ಕಿಲುಬು ಹಿಡಿದ ಚಿಪ್ಪಿನ ಒಳಗಿನ ಮುಚ್ಚಿಕೊಂಡ ಅಂತರ್ಮುಖಿ ರೇಖೆಯಂತೆ.
ಕಿರಿದಾದ ದಾರಿ ಮತ್ತು ಮುಂದೆ ಬಂದ ಬಾಲ್ಕನಿಯ ಈ ಗಾಜಾ, ಭಯಾನಕ ದುಃಸ್ವಪ್ನದ ಸುಳಿಯಲ್ಲಿರುವವನ ಮನಸ್ಸಿಗಿಂತ ಹೆಚ್ಚಿನ ಇಕ್ಕಟ್ಟಿನಲ್ಲಿದೆ. ಗಾಜಾ! ಆದರೆ ನಮ್ಮನ್ನು ಕುಟುಂಬಕ್ಕೆ, ಮನೆಗೆ, ನೆನಪಿಗೆ ಯಾವ ಅಸ್ಪಷ್ಟ ಕಾರಣಗಳು ಬೆಟ್ಟದ ಆಡುಗಳನ್ನು ಚಿಲುಮೆಗಳು ಸೆಳೆದಂತೆ ಸೆಳೆಯುತ್ತವೆ? ನನಗೆ ಗೊತ್ತಿಲ್ಲ. ನಮ್ಮಮ್ಮನ ಮನೆಗೆ ಅಂದು ಬೆಳಗ್ಗೆ ಹೋಗಿದ್ದು ಮಾತ್ರ ಗೊತ್ತು. ನಾನು ಅಲ್ಲಿಗೆ ತಲುಪಿದಾಗ ನನ್ನ ವಿಧವೆ ಅತ್ತಿಗೆ ಆಸ್ಪತ್ರೆಯಲ್ಲಿ ಗಾಯಗೊಂಡು ಇದ್ದ ಅವರ ಮಗಳ ಆಸೆಯಂತೆ ಅಂದು ಸಾಯಂಕಾಲ ಗಾಜಾ ಆಸ್ಪತ್ರೆಯಲ್ಲಿ ಭೇಟಿ ಮಾಡಲು ಅಳುತ್ತಾ ಕೇಳಿದರು. ನನ್ನ ಅಣ್ಣನ ಹದಿಮೂರು ವರ್ಷದ ಮುದ್ದಾದ ಮಗಳು ನಾಡಿಯ ನಿನಗೆ ಗೊತ್ತೇ?
ಆ ಸಾಯಂಕಾಲ ನಾನು ಒಂದು ಪೌಂಡ್ ಆಪಲ್ ಖರೀದಿಸಿ ಆಸ್ಪತ್ರೆಯಲ್ಲಿ ನಾಡಿಯಳನ್ನು ಭೇಟಿ ಮಾಡಲು ಹೊರಟೆ. ನನ್ನ ತಾಯಿ ಮತ್ತು ಅತ್ತಿಗೆ ಅವರ ನಾಲಿಗೆ ಅಡಗಿಸಿದಂತ ಏನನ್ನೋ ಮುಚ್ಚಿಡುತ್ತಿದ್ದಾರೆಂದು ನನಗೆ ಅನಿಸಿತ್ತು, ನನಗೂ ವಿಚಿತ್ರವೆನ್ನಿಸಿದ್ದರೂ ಅದೇನೆಂದು ಊಹಿಸಲಾಗಿರಲಿಲ್ಲ.
ನಾನು ನಾಡಿಯಳನ್ನು ರೂಡಿಯಂತೆ ಪ್ರೀತಿಸಿದ್ದೆ. ಅದೇ ಅಭ್ಯಾಸ, ಸೋಲು ಮತ್ತು ಸ್ಥಳಾಂತರದ ಜೊತೆ ಜೊತೆಗೆ ಬೆಳೆದಿದ್ದ, ಸಂತೋಷದ ಜೀವನ ಒಂದು ಸಾಮಾಜಿಕ ಅಡ್ಡಧಾರಿ ಎನ್ನುವ ಆಲೋಚನೆಯಿದ್ದ, ಅವಳ ತಲೆಮಾರನ್ನು ಕೂಡ ಪ್ರೀತಿಸುವಂತೆ ಮಾಡಿತ್ತು.
ಆ ಕ್ಷಣದಲ್ಲಿ ಏನಾಯಿತು? ನನಗೆ ಗೊತ್ತಿಲ್ಲ. ನಾನು ಬಿಳಿಯ ಕೋಣೆಯನ್ನು ಪ್ರಶಾಂತತೆಯಿಂದ ಪ್ರವೇಶಿಸಿದೆ. ಅಸ್ವಸ್ಥ ಮಕ್ಕಳು ಕರುಣಾಮಯಿಗಳಂತೆ ಇರುತ್ತಾರೆ ಅಲ್ಲದೆ ಕ್ರೂರ, ಯಾತನಾಮಯ ಗಾಯವಿದ್ದರಂತೂ ಸಂತರ ಲಕ್ಷಣ ಇನ್ನಷ್ಟು ಹೆಚ್ಚು. ನಾಡಿಯ ಹಾಸಿಗೆ ಮೇಲಿದ್ದು ಅವಳ ಬೆನ್ನು ದೊಡ್ಡ ದಿಂಬಿನ ಮೇಲೆ ಆಸರೆ ಪಡೆದು ತಲೆ ಕೂದಲು ಕಚ್ಚಾ ತೊಗಲಿನಂತೆ ಹರಡಿತ್ತು. ವಿಶಾಲವಾದ ಕಣ್ಣುಗಳಲ್ಲಿ ಗಾಢವಾದ ಮೌನದ ಜೊತೆಗೆ ಅವಳ ಕಣ್ಣಿನ ಕಪ್ಪು ಪಾಪೆಯ ಆಳದಲ್ಲಿ ಕಣ್ಣೀರಿನ ಹನಿ ಮಿಂಚುತಿತ್ತು. ಅವಳ ಮುಖ ಶಾಂತ ಸ್ಥಿರವಾಗಿತ್ತು ಆದರೆ ಯಾತನೆಯಲ್ಲಿರುವ ಸಂತನ ಮುಖದ ರೀತಿ ಬಿಂಬಿಸುತಿತ್ತು. ನಾಡಿಯ ಇನ್ನು ಬಾಲ್ಯದಲ್ಲಿದ್ದಳು ಆದರೆ ಬಾಲ್ಯದಲ್ಲಿದ್ದವರಿಗಿಂತ ದೊಡ್ಡವಳ ಹಾಗೆ ಕಂಡಳು, ಬಹಳ ದೊಡ್ಡವಳು ಹುಡುಗಿಗಿಂತ ಬಹಳ ದೊಡ್ಡವಳ ಹಾಗೆ.
” ನಾಡಿಯ!”
ಇದು ನಾನು ಹೇಳಿದ್ದೆ ಅಥವಾ ನನ್ನ ಹಿಂದೆ ಇದ್ದ ಇನ್ನೊಬ್ಬರು ಹೇಳಿದ್ದೆ ಎಂದು ಗೊತ್ತೇ ಆಗಲಿಲ್ಲ. ಆದರೆ ಅವಳು ತನ್ನ ಕಣ್ಣುಗಳನ್ನು ನನ್ನೆಡೆಗೆ ದೃಷ್ಟಿಸಿ ಸಕ್ಕರೆಯ ಒಂದು ಅಚ್ಚು ಟೀ ಲೋಟದಲ್ಲಿ ಬಿದ್ದಾಗ ಕರಗಿ ಹೋಗುವಂತೆ ನನ್ನನ್ನು ಕರಗಿಸಿಬಿಟ್ಟಳು.
ಅವಳ ಸವಿ ನಗುವಿನ ಮೂಲಕ ಕೇಳಿದಳು ” ಚಿಕ್ಕಪ್ಪ, ನೀವು ಈಗಷ್ಟೇ ಕುವೈಟ್ ನಿಂದ ಬಂದಿರಾ ?”
ಅವಳ ಗಂಟಲ ಧ್ವನಿ ಒಡೆದಿತ್ತು ತನ್ನ ಅಂಗೈ ಸಹಾಯದಿಂದ ಮೇಲಕ್ಕೆದ್ದು ತನ್ನ ಕುತ್ತಿಗೆಯನ್ನು ನನ್ನೆಡೆಗೆ ತಂದಳು. ನಾನು ಅವಳ ಬೆನ್ನನ್ನು ಸವರಿ ಅವಳ ಪಕ್ಕದಲ್ಲೇ ಕುಳಿತೆ.
” ನಾಡಿಯ! ನಾನು ಕುವೈಟ್ ನಿಂದ ಉಡುಗೊರೆ ತಂದಿದ್ದೇನೆ, ಬಹಳಷ್ಟು. ನೀನು ಆಸ್ಪತ್ರೆ ಬಿಡುವ ತನಕ ಕಾಯುತ್ತೇನೆ, ಸಂಪೂರ್ಣ ಹುಷಾರಾಗಿ ವಾಸಿಯಾಗುವ ತನಕ, ನೀನು ನನ್ನ ಮನೆಗೆ ಬಂದಾಗ ಕೊಡುತ್ತೇನೆ. ನೀನು ಪತ್ರ ಬರೆದು ಕೇಳಿದ ಕೆಂಪು ಪ್ಯಾಂಟ್ನ್ನು ಖರೀದಿಸಿದ್ದೇನೆ. ಹೌದು ಖರೀದಿಸಿದೆ ಅಲ್ಲಿ.”
ಅದು ಸುಳ್ಳಾಗಿತ್ತು, ಉದ್ವಿಗ್ನ ಪರಿಸ್ಥಿತಿ ಹುಟ್ಟಿ ಹಾಕಿದ್ದು. ಆದರೆ ಅದನ್ನು ಹೇಳಿದಾಗ ನಾನು ಪ್ರಥಮ ಬಾರಿ ಸತ್ಯ ಹೇಳಿದಂತಿತ್ತು. ನಾಡಿಯ ಸಿಡಿಲು ಬಡಿದಂತೆ ತಲ್ಲಣಿಸಿ ತನ್ನ ತಲೆಯನ್ನು ಘೋರ ಮೌನದಲ್ಲಿ ಕೆಳ ಮಾಡಿದಳು. ಅವಳ ಕಣ್ಣೀರು ನನ್ನ ಅಂಗೈಯ ಹಿಂಬಾಗ ಒದ್ದೆ ಮಾಡಿತ್ತು.
”ನಾಡಿಯ! ಹೇಳು ಏನಾದರೂ, ಕೆಂಪು ಪ್ಯಾಂಟ್ ನಿನಗೆ ಬೇಡವೇ? ಅವಳು ತನ್ನ ನೋಟವನ್ನು ನನ್ನೆಡೆಗೆ ತಿರುಗಿಸಿ ಏನೋ ಮಾತಾಡಲು ಹೊರಟು, ಆದರೆ ನಿಲ್ಲಿಸಿ, ದವಡೆ ಕಚ್ಚಿದಾಗ, ಎಲ್ಲೋ ದೂರದಿಂದ ಬಂದಂತೆ ಅವಳ ಸ್ವರ ಕೇಳಿತು.
”ಚಿಕ್ಕಪ್ಪ!”
ಅವಳು ಕೈಯನ್ನು ಎಳೆದು, ಬಿಳಿಯ ಹೊದಿಕೆಯನ್ನು ತನ್ನ ಬೆರಳುಗಳಿಂದ ಸರಿಸಿ ತನ್ನ ಕಾಲಿನತ್ತ ತೋರಿಸಿದಳು, ತೊಡೆಯ ತನಕ ಕಡಿದು ಹಾಕಿತ್ತು.
ನನ್ನ ಸ್ನೇಹಿತನೆ… ನಾನೆಂದಿಗೂ ನಾಡಿಯಳ ಕಾಲನ್ನು ಮರೆಯುವುದಿಲ್ಲ, ತೊಡೆಯ ತನಕ ತುಂಡಾಗಿತ್ತು. ಇಲ್ಲ! ಅಲ್ಲದೆ ಅವಳ ವ್ಯಥೆ ಹೇಗೆ ಅವಳ ಮುಖದಲ್ಲಿ ಅಚ್ಚು ಹಾಕಿ ಮುಂದೆಂದಿಗೂ ಪ್ರತ್ಯೇಕ ಲಕ್ಷಣವಾಗಿ ಐಕ್ಯವಾಗಿದ್ದನ್ನು ಕೂಡ. ಅಂದು ನಾಡಿಯಾಗೆ ಕೊಡಲು ತಂದಿದ್ದ ಎರಡು ಪೌಂಡ್ ಹಣವನ್ನು ಮೌನದ ಜಿಗುಪ್ಸೆಯಿಂದ ಕೈಯಲ್ಲಿ ಹಿಡಿದು ಗಾಜಾ ಆಸ್ಪತ್ರೆಯಿಂದ ಹೊರಬಂದಿದ್ದೆ. ಸೂರ್ಯನ ಜ್ವಾಲೆ ರಸ್ತೆಯನ್ನು ರಕ್ತದ ಬಣ್ಣದಿಂದ ತುಂಬಿಸಿತ್ತು. ಗಾಜಾ ಸಂಪೂರ್ಣ ಹೊಸದಾಗಿತ್ತು ಮುಸ್ತಾಫ! ನೀನು ಮತ್ತು ನಾನು ಈ ರೀತಿ ಕಂಡಿರಲೇ ಇಲ್ಲ. ನಾವು ಇದ್ದ ಶಾಜಿಯಾ ಭಾಗದ ಆರಂಭದಲ್ಲಿ ಕಲ್ಲುಗಳನ್ನು ಗುಡ್ಡೆ ಹಾಕಿದ್ದಕ್ಕೆ ಅರ್ಥ ಇತ್ತು, ಅವು ಬೇರೆ ಯಾವುದೇ ಕಾರಣಕ್ಕಲ್ಲದೆ ವಿವರಣೆ ಕೊಡಲು ಅಲ್ಲಿ ಇಟ್ಟಿರುವಂತಿದೆ. ಏಳು ವರ್ಷದ ಸೋಲನ್ನು ಒಳ್ಳೆಯ ಜನದೊಟ್ಟಿಗೆ ನಾವು ಕಳೆದು ಜೀವಿಸಿದ್ದ ಈ ಗಾಜಾ ಒಂದು ರೀತಿ ಹೊಸದಿತ್ತು. ಇದೊಂದು ಹೊಸ ಆರಂಭ ಎನ್ನಿಸಿತ್ತು. ಏಕೆ ಇದು ಬರಿಯ ಆರಂಭ ಅಂದುಕೊಂಡೆನೋ ನನಗೆ ಗೊತ್ತಿಲ್ಲ. ಮನೆಗೆ ಹೋಗಲು ನಡೆಯುತ್ತಿದ್ದ ಮುಖ್ಯ ದಾರಿ, ಸಫಾದ್ಗೆ ತಲುಪಲು ಇರುವ ಬಹಳ ದೀರ್ಘವಾದ ದಾರಿ; ದಾರಿಯ ಆರಂಭ ಮಾತ್ರ ಎಂದು ಕಲ್ಪಿಸಿಕೊಂಡೆ.
ಗಾಜಾದಲ್ಲಿರುವ ಪ್ರತಿಯೊಂದು ಖಿನ್ನವಾಗಿ ತುಡಿಯುತ್ತಿದ್ದು ಕೇವಲ ರೋದಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದೊಂದು ಸವಾಲು. ಇದಕ್ಕಿಂತ ಹೆಚ್ಚಾಗಿ ತುಂಡರಿಸಿದ ಕಾಲಿನ ಸರಿಪಡಿಕೆ!
ನಾನು ಗಾಜಾದ ರಸ್ತೆಗಿಳಿದೆ, ಸೂರ್ಯನ ಕಣ್ಣು ಕುರಡಾಗಿಸುವ ಉರಿ ಬಿಸಿಲಿನಿಂದ ತುಂಬಿದ್ದ ರಸ್ತೆಗಳು. ನಾಡಿಯ, ಮನೆಯ ಮೇಲೆ ಬೀಳುತ್ತಿದ್ದ ಬಾಂಬು ಮತ್ತು ಜ್ವಾಲೆಯಿಂದ ತನ್ನ ಸಹೋದರ ಸಹೋದರಿಯರನ್ನು ಉಳಿಸಲು ಅವರ ಮೇಲೆ ಬಿದ್ದು ರಕ್ಷಿಸಿ ತನ್ನ ಕಾಲನ್ನು ಕಳೆದುಕೂಂಡಿದ್ದಳು. ನಾಡಿಯ ತನ್ನನ್ನು ಉಳಿಸಿಕೊಳ್ಳಬಹುದಿತ್ತು, ಅವಳು ಓಡಿ ಹೋಗಿ ತನ್ನ ಕಾಲನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಅವಳು ಅದು ಮಾಡಲಿಲ್ಲ.
ಏಕೆ?
ಇಲ್ಲ, ನನ್ನ ಸ್ನೇಹಿತನೇ, ನಾನು ಸ್ಯಾಕ್ರಮೆಂಟೊಗೆ ಬರುವುದಿಲ್ಲ. ನನಗೆ ಯಾವುದೇ ವಿಷಾದವಿಲ್ಲ. ಇಲ್ಲ, ಮತ್ತು ಯಾವುದನ್ನು ಬಾಲ್ಯದಲ್ಲಿ ನಾವು ಒಟ್ಟಿಗೆ ಪ್ರಾರಂಭಿಸಿದ್ದೆವೋ ಅದನ್ನು ನಾನು ಮುಗಿಸುವುದಿಲ್ಲ. ನೀನು ಗಾಜಾ ಬಿಟ್ಟಾಗ ಒಂದು ಅಸ್ಪಷ್ಟ ಭಾವನೆ ಇತ್ತು. ಅದು ನಿನ್ನೊಳಗೆ ದೊಡ್ಡದಾಗಿ ಬೆಳೆಯಬೇಕು. ಅದು ವಿಸ್ತರಿಸಬೇಕು, ಅದನ್ನು ನೀನು ಹುಡುಕಬೇಕು, ಇಲ್ಲಿನ ಸೋಲಿನ ವಿಕಾರವಾದ ಭಗ್ನಾವಶೇಷದಲ್ಲಿ ನಿನ್ನನ್ನು ಕಂಡುಕೊಳ್ಳಲು.
ನಾನು ನಿನ್ನಲ್ಲಿಗೆ ಬರುವುದಿಲ್ಲ. ಆದರೆ ನೀನು ನಮ್ಮೆಡೆಗೆ ಬಾ! ಹಿಂದಿರುಗು, ನಾಡಿಯಾಳ ಕಾಲಿನಿಂದ ಕಲಿತುಕೊಳ್ಳಲು, ತೊಡೆಯ ಕೆಳಗೆ ತುಂಡರಿಸಿದ ಕಾಲಿನಿಂದ, ಯಾವುದು ಬದುಕು ಹಾಗು ಯಾವ ಇರವು ಯೋಗ್ಯ ಎಂದು ತಿಳಿಯಲು.
ಹಿಂದಿರುಗು ನನ್ನ ಸ್ನೇಹಿತನೇ, ನಾವೆಲ್ಲಾ ನಿನಗಾಗಿ ಕಾಯುತ್ತಿರುವೆವು.
~~~~~~~~~~~~~~~~~~~~
ಘಾಸ್ಸನ್ ಕನಾಫನಿ: ಪ್ಯಾಲೆಸ್ಟೈನ್ ನ ಅಕ್ರ ದಲ್ಲಿ ೧೯೩೬ರಲ್ಲಿ ಜನಿಸಿದ ಘಾಸ್ಸನ್ ಕನಫನಿ ೧೯೪೮ ರಲ್ಲಿ ಲೆಬನಾನ್ ಗೆ ಅವರ ಕುಟುಂಬದ ಜೊತೆ ಪಲಾಯನ ಮಾಡಬೇಕಾಗುತ್ತದೆ. ಇಪ್ಪತ್ತಕ್ಕೂ ಹೆಚ್ಚು ಪುಸ್ತಕ ಬರೆದಿರುವ ಘಾಸ್ಸನ್ ಕನಾಫನಿ ಅರಬ್ ಸಾಹಿತ್ಯದಲ್ಲಿ ಬಹು ಮುಖ್ಯ ಲೇಖಕರು. ಇಪ್ಪತ್ತು ವರ್ಷದವರಾಗಿದ್ದಾಗ ಬರೆದ ‘ಗಾಜಾದಿಂದ ಬಂದ ಪತ್ರ’ ಪ್ರಕಟವಾದ ೧೬ ವರ್ಷದ ನಂತರ ೧೯೭೨ ರಲ್ಲಿ ಇಸ್ರೇಲಿನ ಗುಪ್ತಚರ ಏಜನ್ಸಿ ಮೊಸ್ಸಾದ್ ಕನಾಫನಿ ಕಾರ್ ನಲ್ಲಿ ಬಾಂಬ್ ಇಟ್ಟು ಹತ್ಯೆ ಮಾಡಿದರು. ಅದೇ ಕಾರ್ ನಲ್ಲಿ ಕನಾಫನಿ ಯ ಜೊತೆ ಕುಳಿತ್ತಿದ್ದ ಅಣ್ಣನ ಮಗಳು ಹದಿನಾರು ವರ್ಷದ ಲಾಮಿಸ್ ನಜೆಮ್ ಕೂಡ ಹತ್ಯೆಗೆ ಒಳಗಾದಳು. ಕನಾಫನಿ ತನ್ನ ಮೊದಲ ಪುಸ್ತಕವನ್ನು ಲಾಮಿಸ್ ನಜೆಮ್ ಗೆ ಅರ್ಪಿಸಿದ್ದರು. ಹತ್ಯೆಗೊಳಗಾದಾಗ ಕನಾಫನಿ ತನ್ನ ಹೆಂಡತಿ ಆನ್ನಿ ಕನಾಫನಿ ಮತ್ತು ಇಬ್ಬರು ಮಕ್ಕಳ ಜೊತೆಗೆ ಬೈರುತ್ ನಲ್ಲಿ ವಾಸವಾಗಿದ್ದರು.
ಅನುವಾದಕ : ಶ್ರೀಧರ ಅಘಲಯ : ಪುಸ್ತಕ, ಪ್ರಕಟಣೆ ಮತ್ತು ಅನುವಾದದಲ್ಲಿ ತೊಡಗಿಸಿಕೊಂಡಿರುವ ಶ್ರೀಧರ ಅಘಲಯ ಅವರು ಇಂಗ್ಲೆಂಡ್ ಮತ್ತು ಇಂಡಿಯಾದಲ್ಲಿ ಕೆಲಸ ಮಾಡಿದ್ದಾರೆ.
Picture Credit : electronicintifada
ಈ ಅನುವಾದವು ಪ್ರಜಾವಾಣಿ ಪತ್ರಿಕೆಯಲ್ಲಿ ೨೦೧೭ ರಲ್ಲಿ ಮೊದಲು ಪ್ರಕಟವಾಗಿತ್ತು.