ಪ್ರೊ. ಕೆ.ಎಸ್.ಭಗವಾನ್:  ಕಿರು ಪರಿಚಯ

ಲೇಖಕ ಮತ್ತು ವಿಮರ್ಶಕ ಪ್ರೊ. ಕೆ.ಎಸ್.ಭಗವಾನ್ ಅವರ ಕಿರು ಪರಿಚಯ

ಲೇಖಕ ಮತ್ತು ವಿಮರ್ಶಕ ಪ್ರೊ. ಕೆ.ಎಸ್.ಭಗವಾನ್ ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ  ಜುಲೈ 14, 1945 ರಂದು ಜನಿಸಿದರು.  ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ವಿಷಯದಲ್ಲಿ ಎಂ.ಎ. ಪದವಿಯನ್ನು ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್. ಪದವಿಯನ್ನೂ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಪ್ರೊ.ಭಗವಾನ್ ಅವರು ಬಂಡಾಯ ವಿಮರ್ಶೆಯ ಮೊದಲ ಮುಖ್ಯ ವಿಮರ್ಶಕರು. ಶೇಕ್ಸಪೀಯರ್ ನ ಒಂಭತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಮುಖ್ಯ ಕೃತಿ ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಈವರೆಗೆ 19 ಮುದ್ರಣವನ್ನು ಕಂಡಿದ್ದು ಅನ್ಯಭಾಷೆಗಳಿಗೂ ಅನುವಾದಗೊಂಡಿದೆ. ಅವರ ಅನುವಾದಿತ ನಾಟಕಗಳು ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಗಳಾಗಿವೆ. ಈವರೆವಿಗೂ ಅವರು 40 ಕೃತಿಗಳನ್ನು ಹೊರತಂದಿದ್ದಾರೆ.

ಬದಲಾವಣೆ, ಕುವೆಂಪು ಯುಗ, ಆಂತರ್ಯ, ಕಣಿಗಲೆ ಪ್ರಮುಖ ವಿಮರ್ಶಾ ಕೃತಿಗಳು. ಭಾಷೆ ಮತ್ತು ಸಂಸ್ಕೃತಿ, ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, ಬುದ್ಧ ಮತ್ತು ಕಾರ್ಲ್‍ಮಾಕ್ಸ್, ಗಾಂಧಿಯನ್ನು ಗೋಡ್ಸೆ ಯಾಕೆ ಕೊಂದ?, ಸುಖದ ಹಾದಿ, ಅನನ್ಯತೆ, ಹಿಂದೂ ಧರ್ಮದಲ್ಲಿ ಅಹಿಷ್ಣುತೆ, ರಾಮಂದಿರ ಏಕೆ ಬೇಡ? ಪ್ರಮುಖ ವಿಚಾರ ಕೃತಿಗಳು. ಜೂಲಿಯಸ್ ಸೀಸರ್, ವೆನಿಸಿನ ವರ್ತಕ, ಹ್ಯಾಮ್ಲೆಟ್ , ಆಂಟನಿ ಮತ್ತು ಕ್ಲಿಯೋಪಾತ್ರ, ಒಥೆಲೊ, ನಿಮ್ಮಿಷ್ಟ, ಮ್ಯಾಕ್‍ಬೆತ್, ಮಹಾರಾಜ ಲಿಯರ್, ರೋಮಿಯೋ ಮತ್ತು ಜೂಲಿಯಟ್, ವೃದ್ಧ ಮತ್ತು ಸಮುದ್ರ ಪ್ರಮುಖ ಸೃಜನಶೀಲ ಅನುವಾದ ಕೃತಿಗಳು. ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು (ಸಂ.3,7 ಮತ್ತು 11), ಇತಿಹಾಸದ ಪಾಠಗಳು, ಹಿಂದೂ ಸಾಮ್ರಾಜ್ಯಶಾಹಿ ಇತಿಹಾಸ ಪ್ರಮುಖ ಸೃಜನೇತರ ಅನುವಾದ ಕೃತಿಗಳು. ಇತಿಹಾಸ ಚಕ್ರ ಪ್ರಮುಖ ಚರಿತ್ರೆ ಕೃತಿ. ಗಂಗೋತ್ರಿ, ಚಂಪಾ ಆಯ್ದ ಕವನಗಳು, ಜಿಜ್ಞಾಸು, ಸಾಹಿತ್ಯ ವಿಮರ್ಶೆ 1985, ಕೆಂಗಲ್ಲರ ಭಾಷಣಗಳು, As you like it, Macbeth, Othello, The merchant of Venice ಪ್ರಮುಖ ಸಂಪಾದಿತ ಕೃತಿಗಳು. ಮಂತ್ರದ ಉಂಗುರ, ಶೇಕ್ಸಪೀಯರ್ ನ ಕತೆಗಳು, ನಲಿವಿನಾಟಗಳು, ನೋವಿನಾಟಗಳು, ಚರಿತ್ರಾಟಗಳು ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳು.

ಇವರು ಕಾವ್ಯಾನಂದ ಪ್ರಶಸ್ತಿ (1982), ಕುವೆಂಪು ಬಹುಮಾನ (1985), ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1999), ನಾಡ ಚೇತನ ಪ್ರಶಸ್ತಿ (2003), ಕುವೆಂಪು ಶತಮಾನೋತ್ಸವ ಪ್ರಶಸ್ತಿ (2004), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (2007), ಕುವೆಂಪು ಪ್ರಶಸ್ತಿ (2011), ಶೂನ್ಯಪೀಠ ಪ್ರಶಸ್ತಿ (2011), ಸಾಹಿತ್ಯ ಕಲಾರತ್ನ (2011), ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (2013), ದಾವಣಗೆರೆಯ ಪ್ರೊ.ಬಿ.ವಿ.ವೀರಭದ್ರಪ್ಪ ಪ್ರತಿಷ್ಠಾನ ನೀಡುವ ಲೋಕಾಯತ ಪ್ರಶಸ್ತಿ (2014), ಕರ್ನಾಟಕ ಕ್ರಾಂತಿರತ್ನ ಪ್ರಶಸ್ತಿ (2015) ಗಳಿಗೆ ಭಾಜನರಾಗಿದ್ದಾರೆ.

2011 ರಲ್ಲಿ ಹುಣಸೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ.

Pic Credit: Wikipedia