ಕುರುಬನಕಟ್ಟೆಯ ಕಂಡಾಯ

ಕುರುಬನಕಟ್ಟೆಯ ಕಂಡಾಯ

ಡಾ.ವಡ್ಡಗೆರೆ ನಾಗರಾಜಯ್ಯ

 

ಕುರುಬನಕಟ್ಟೆಯ ಚೆನ್ನಯ್ಯ- ಹೊನ್ನಯ್ಯನ ಕಂಡಾಯಗಳನ್ನು ದಲಿತರು ಮುಟ್ಟುವಂತಿಲ್ಲ, ಹೊರುವಂತಿಲ್ಲ, ಮೇಲ್ಜಾತಿಗಳವರು ಮಾತ್ರ ಮುಟ್ಟಲು ಮತ್ತು ಹೊರಲು ಅರ್ಹರೆಂಬುದು ಈಗಿನ ತಲೆಮಾರಿನ ಅಜ್ಞಾನಿಗಳ ತಿಳಿವಳಿಕೆ. ದಲಿತರಿಂದ ಕಂಡಾಯ ಮುಟ್ಟಿಸಗೊಡದೆ ಮೇಲ್ಜಾತಿಗಳ ಜನರು ಮಾತ್ರ ಕಂಡಾಯ ಹೊರುತ್ತಿರುವುದು ನಿಜವಾಗಿಯೂ ಅಸ್ಪೃಶ್ಯತೆಯ ಆಚರಣೆ. ಮಂಟೇಸ್ವಾಮಿ ಒಬ್ಬ ದಲಿತ ನಾಯಕ. ಕಂಡಾಯಗಳು ಕೂಡಾ ದಲಿತ ನಾಯಕರ ಪ್ರತೀಕ. ಚೆನ್ನಯ್ಯನ ಕಂಡಾಯ ಮಾದಾರ ಚೆನ್ನಯ್ಯ. ಹೊನ್ನಯ್ಯನ ಕಂಡಾಯ ಹೊಲೆಯರ ಹೊನ್ನಯ್ಯ. ಇದರಲ್ಲಿ ಯಾವ ಭೇದ?

 

ಹನ್ನೆರಡನೇ ಶತಮಾನದ ವಚನ ಚಳವಳಿಯ ಬಸವಾದಿ ಪ್ರಮಥ ಶರಣರ ಆಶಯಗಳನ್ನು ಈಡೇರಿಸಲು ಮತ್ತು ಅಮರಕಲ್ಯಾಣ ನಿರ್ಮಿಸಲು ಬಯಸಿದ ಮಂಟೇಸ್ವಾಮಿ, ಉತ್ತರ ದೇಶದಿಂದ ಕತ್ತಲರಾಜ್ಯಕ್ಕೆ ಬರುವಾಗ ಮೈಮೇಲೆ ಸತ್ತಎಮ್ಮೆಯ ಚರ್ಮ ಹೊದ್ದುಕೊಂಡು ಕೊರಳಿಗೆ ಹೆಂಡದ ಗಡಿಗೆ ಕಟ್ಟಿಕೊಂಡು, ಮೈಯಲ್ಲಿ ಕೀವು ರಸಕು ತುಂಬಿದ ರಣಗಾಯಗಳು, ತಲೆಯಲ್ಲಿ ಪಿತಿಪಿತಿ ಹೇನುಗಳನ್ನು ತುಂಬಿಕೊಂಡು, ಭಂಗಿ ಚಿಲುಮೆ ಸೇದಿಕೊಂಡು ತಿಪ್ಪೆಯಿಂದ ಎದ್ದು ಬಂದವನಂತೆ ಬರುತ್ತಾನೆ. ಮಂಟೇಸ್ವಾಮಿಯ ಪರಂಪರೆಯ ಕುರುಬನಕಟ್ಟೆಯ ಚೆನ್ನಯ್ಯ- ಹೊನ್ನಯ್ಯ ಕೂಡಾ ಇಂತಹ ಲಕ್ಷಣಗಳೇ ಇರುವ ದಲಿತ ಸಾಂಸ್ಕೃತಿಕ ವೀರರು. ಮೇಲ್ಜಾತಿಗಳ ಜನರಿಗೆ ಅಜ್ಞಾನ ಕವಿದಿದೆ. ಕೆಳಜಾತಿಗಳ ಜನರಿಗೆ ವಿಸ್ಮರಣೆ ಕವಿದಿದೆ.

 

ಕಂಡಾಯ ಎಂದರೆ ಆಯುಧ ಎಂದರ್ಥ. ಕಾಡಿನ ಜನರನ್ನು ಸಂಘಟಿಸಿದ ಮಂಟೇಸ್ವಾಮಿ ಮತ್ತು ಅವನ ಸಿಸುಮಕ್ಕಳು ಬೇಸಾಯದ ವಿದ್ಯೆಯನ್ನು ಕಲಿಸಿಕೊಡುತ್ತಾರೆ. ಕಾಡಿನ ಹಿಂಸ್ರ ಪ್ರಾಣಿಗಳನ್ನು ಕೊಲ್ಲಲು ಮತ್ತು ಜೀವ ರಕ್ಷಣೆಗೆ ಕಿರಿಕಂಡಾಯಗಳು – ಉರಿಕಂಡಾಯಗಳು ಅಗತ್ಯವಾಗಿದ್ದವು. ಹಲಗೂರು ಪಾಂಚಾಳರ ಕುಲುಮೆಯಲ್ಲಿ ತುಕ್ಕುಹಿಡಿಯದ ಕಬ್ಬಿಣದ ಲೋಹದಿಂದ ಕಂಡಾಯಗಳನ್ನು ತಯಾರಿಸಿ ‘ಹೆಚ್ಚಿಮೀರಿದ’ ಜನರ ಕೊಬ್ಬು ಕರಗಿಸಿ, ಬರಗ (ಹುಲಿ)ಗಳನ್ನು ಪಳಗಿಸಿ, ಹುಲಿಗಳನ್ನೇ ತಮ್ಮ ಸವಾರಿ ವಾಹನ ಮಾಡಿಕೊಂಡು ನೀಲಗಾರರ ಬೃಹತ್ ಸೇನೆಯನ್ನು ಕಟ್ಟುತ್ತಾರೆ. ನೀಲಗಾರರ ವೀರರಿಗೆ ಕುಂತ ಪಟ್ಟದ ಗುರುಸ್ಥಾನದಲ್ಲಿದ್ದ ಮಂಟೇಸ್ವಾಮಿಯು ಬೊಪ್ಪೇಗೌಡನಪುರ ಎಂಬಲ್ಲಿ ಜೀವಸಮಾಧಿಯಾಗುತ್ತಾನೆ. ಮೆರೆಯೋ ಪಟ್ಟದ ಸಿಸುಮಗನ ಸ್ಥಾನದಲ್ಲಿದ್ದ ಘನನೀಲಿ ಸಿದ್ದಪ್ಪಾಜಿ ಕೂಡಾ ಚಿಕ್ಕಲ್ಲೂರು ಎಂಬಲ್ಲಿ ಜೀವಸಮಾಧಿಯಾಗುತ್ತಾನೆ. ಚೆನ್ನಯ್ಯ- ಹೊನ್ನಯ್ಯ ಎಂಬ ವೀರರು ಕುರುಬನಕಟ್ಟೆ ಎಂಬಲ್ಲಿ ಜೀವಸಮಾಧಿಯಾಗುತ್ತಾರೆ. ರಾಚಪ್ಪಾಜಿ‌ ಮತ್ತು ಆತನ ತಂಗಿ ಚೆನ್ನಾಜಮ್ಮ ಕಪ್ಪಡಿ ಎಂಬಲ್ಲಿ ಜೀವ ಸಮಾಧಿಯಾಗುತ್ತಾರೆ. ದೊಡ್ಡಮ್ಮತಾಯಿ ಮುಟ್ಟನಹಳ್ಳಿ ತೋಪಿನಲ್ಲಿ ಜೀವ ಸಮಾಧಿಯಾಗುತ್ತಾಳೆ.

 

ಸಮಾಧಿ ಸ್ಥಳಗಳಲ್ಲಿ ಅವರು ಬಳಸುತ್ತಿದ್ದ ಏಕದಾರಿ, ನಾಗತಂಬೂರಿ, ನಾಗಬೆತ್ತ, ಚಮ್ಮಾವುಗೆ, ಢಿಕ್ಕಿ ಗಗ್ಗರ, ತಾಳ, ಕಂಸಾಳೆ ತಾಳ, ಅಮರಗನ್ನಡದ ವಚನ ಕಟ್ಟುಗಳು, ಸತ್ತೆಮ್ಮೆ ಚಕ್ಕಳ ಇವೆಲ್ಲವನ್ನೂ ಇರಿಸಿ ಭಂಗಿ-ಬಾಡಿಟ್ಟಿನ ಎಡೆಯನ್ನು ಅರ್ಪಿಸಿ ಪೂಜಿಸತೊಡಗುತ್ತಾರೆ. ಸಮಾಧಿ ಗುಡ್ಡೆಗಳಿಗೆ ಮತ್ತು ತೋರು ಗದ್ದಿಗೆಗಳಿಗೆ ಶರಣುಹೋಗಿ ಜಾತ್ರೆ ನಡೆಸಿ ಆರಾಧಿಸತೊಡಗುತ್ತಾರೆ. ಕ್ರಮೇಣವಾಗಿ ಗುರುಗಳ ಕಂಡಾಯಗಳನ್ನು ಅನುಯಾಯಿಗಳ ಮನೆಗೆ ಹೊತ್ತೊಯ್ದು ಪೂಜಿಸುವ ಪದ್ದತಿಯನ್ನು ಅನುಸರಿಸತೊಡಗಿದರು. ಜೀವ ಸಮಾಧಿಯಾಗಿರುವ ಇವರಾರೂ ದೇವರುಗಳಲ್ಲ. ದೇವರುಗಳನ್ನೆಲ್ಲಾ ನಿರಾಕರಿಸಿದ ದಂಗೆಕೋರರು.‌ ಬಸವಣ್ಣನ ವಚನ ಚಳವಳಿಯ ನಂತರದ ದಲಿತರ ದಂಗೆ ಇದು. ಇವರೆಲ್ಲರೂ ಪೂರ್ವದ ಬೌದ್ಧ ವಜ್ರಯಾನ ಪರಂಪರೆಯ ಬೌದ್ಧರೇ ಆಗಿದ್ದಾರೆ.

 

ಮಂಟೇಸ್ವಾಮಿ ತನ್ನ ಸಿಸುಮಗನಾದ ಸಿದ್ಧಪ್ಪಾಜಿಯನ್ನು ಕಬ್ಬಿಣದ ‘ತಳಭಿಕ್ಷೆ’ ಬೇಡಲು ಹಲಗೂರಿನ ಪಾಂಚಾಳರ ಕೇರಿಗೆ ಕಳಿಸುತ್ತಾನೆ. ಸಿದ್ಧಪ್ಪಾಜಿಯಲ್ಲಿದ್ದ ಜಾತಿ ವ್ಯಸನ ಮತ್ತು ತಾನೊಬ್ಬ ವಿಶ್ವಬ್ರಾಹ್ಮಣನೆಂಬ ಅಹಂಕಾರವನ್ನು ನೀಗಲು ಮಂಟೇಸ್ವಾಮಿಯು ಸಿದ್ಧಪ್ಪಾಜಿಯನ್ನು ಅವನ ಹುಟ್ಟಿದ ಮೂಲದ ಪಾಂಚಾಳರ ಬಳಿಗೆ ಅತ್ಯಂತ ಪ್ರಜ್ಞಾತ್ಮಕವಾಗಿಯೇ ಕಳಿಸಿಕೊಡುತ್ತಾನೆ. ಜಾತಿಯನ್ನು ಪ್ರಜ್ಞೆಯಿಂದ ನಾವು ಮೀರಬೇಕು.

ಸಿದ್ಧಪ್ಪಾಜಿಯ ಜಾತಿ ಅಹಂಕಾರವನ್ನು ಪ್ರಜ್ಞೆಯ ಆಳಕ್ಕಿಳಿದು ಭಂಜಿಸುತ್ತಾನೆ ಮಂಟೇಸ್ವಾಮಿ. ಕಬ್ಬಿಣದ ಭಿಕ್ಷೆ ಎಂಬುದು ಇಲ್ಲಿ ಒಂದು ರೂಪಕವಾಗಿ ಬಳಕೆಯಾಗಿದೆ. ಮಾತ್ರವಲ್ಲದೆ ಪಾಂಚಾಳರು ಕಬ್ಬಿಣದ ಮೇಲೆ ಅರ್ಥಾತ್ ಸಂಪತ್ತಿನ ಉತ್ಪಾದನೆಯ ಮೇಲೆ ಹಿಡಿತ ಸಾಧಿಸಿರುತ್ತಾರೆ. ಯುದ್ಧಕ್ಕೆ ಬೇಕಾದ ಕಬ್ಬಿಣದ ಶಸ್ತ್ರಾಸ್ತ್ರ ಮುಂತಾದ ಸಲಕರಣೆಗಳನ್ನು ಯುದ್ಧ ಪಿಪಾಸುಗಳಾದ ರಾಜರಿಗೆ ಪೂರೈಸುವ ಮೂಲಕ ಸಂಪತ್ತು ಮತ್ತು ಉತ್ಪಾದನಾ ಜ್ಞಾನದ ಮೇಲೆ ಹಕ್ಕು ಸಾಧಿಸಿದ್ದರು. ಇಂತಹ ಸ್ಥಾಪಿತ ಸಾಮಾಜಿಕ ಅಧಿಕಾರದ ನಿರಚನೆ, ಸಂಪತ್ತಿನ ಸಮಾನ ಹಂಚಿಕೆ ಮತ್ತು ಉತ್ಪಾದನಾ ಜ್ಞಾನದ ಬಳಕೆಯ ವಿಧಾನವನ್ನು ಮರುರೂಪಿಸುವುದು ಮುಖ್ಯವಾಗಿತ್ತು. ಹಾಗಾಗಿಯೇ ಶಸ್ತ್ರಾಸ್ತ್ರ ತಯಾರಿಕೆಗೆ ಮಾತ್ರ ಬಳಸಲಾಗುತ್ತಿದ್ದ ಕಬ್ಬಿಣವನ್ನು ರೈತಾಪಿಗಳ ಬೇಸಾಯಕ್ಕೆ ಬೇಕಾದ ಪರಿಕರಗಳನ್ನು ತಯಾರಿಸಲು ಸಿದ್ದಪ್ಪಾಜಿ ಮೂಲಕ ಭಿಕ್ಷೆಯಾಗಿ ಪಡೆಯುತ್ತಾನೆ ಮಂಟೇಸ್ವಾಮಿ. ಸಿದ್ದಪ್ಪಾಜಿಯ ಜಾತಿಯ ಸೊಕ್ಕನ್ನು ಕರಗಿಸಲು ಮಂಟೇಸ್ವಾಮಿಯು ಸಿದ್ದಪ್ಪಾಜಿಯನ್ನು ತಿರುಕನನ್ನಾಗಿಸುತ್ತಾನೆ.

 

ಮಂಡೆ ಬೋಳು ಮಾಡಿಸಿಕೊಂಡು, ಕಾವಿ ಚೀವರ ಧರಿಸಿ, ಬಗಲಿಗೆ ಜೋಳಿಗೆ ಕೈನಲ್ಲಿ ಊರುಗೋಲು, ಭಿಕ್ಷಾ ಬೋಗುಣಿ ಹಿಡಿದು ಲೋಕ ಪರ್ಯಟನೆ ಮಾಡುತ್ತಾ ತಿರುಪೆ ಬೇಡುವುದು ಅಥವಾ ಭಿಕ್ಷಾಟನೆ‌ ಮಾಡುವುದು ಬೌದ್ಧ ಭಿಕ್ಖುಗಳ ಲಕ್ಷಣ. ಇದೇ ಲಕ್ಷಣಗಳು ಮಂಟೇಸ್ವಾಮಿ ಪರಂಪರೆಯ ನೀಲಗಾರರಲ್ಲಿಯೂ ಮತ್ತು ಮಲೆಮಹದೇಶ್ವರನ ಪರಂಪರೆಯ ದೇವರಗುಡ್ಡರಲ್ಲಿಯೂ ಇವೆ. ಬೌದ್ಧ- ತಾವೋ ತಾಂತ್ರಿಕ ಗುರುಗಳು ಹುಲಿಗಳನ್ನು ಪಳಗಿಸಿಕೊಂಡು ಸವಾರಿ ಮಾಡುತ್ತಿದ್ದರು. ಹೀಗೆಯೇ ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರ ಬರಗ(ಹುಲಿ)ಗಳನ್ನು ಪಳಗಿಸಿ ಹುಲಿವಾನದಯ್ಯಗಳಾಗಿ ಸಂಚಾರ ಮಾಡಿದವರು. ಇವರು ನಿರ್ವಾಣ ಹೊಂದಿದ ನಂತರದಲ್ಲಿ ಹುಲಿಗಳನ್ನು ಪಳಗಿಸಲಾಗದ ಅನುಯಾಯಿಗಳು ಹುಲಿಗಳ ಬದಲಿಗೆ ಪವಿತ್ರ ಹೋರಿಗಳನ್ನು ಹುಲಿಯ ಸಂಕೇತವಾಗಿ ಉಪಾದಾನಗಳಿಗೆ ಹೋಗುವಾಗ ಕರೆದೊಯ್ಯುವುದನ್ನು ರೂಢಿಸಿಕೊಂಡರು. ಜಾತಿಯ ಅಹಂಕಾರದ ವಿರುದ್ಧ ಕನ್ನಡ ನೆಲದಲ್ಲಿ ನಡೆದಿರುವ ಮಹಾವಿಪ್ಲವ ಇದು.

 

ಡಾ.ವಡ್ಡಗೆರೆ ನಾಗರಾಜಯ್ಯ