ಮೋದಿಯ ನಾಡಲ್ಲಿ ಸಫಾಯಿ ಕರ್ಮಕಾಂಡಗಳ ಜಾಡು ಹಿಡಿದು….

 

ಮಂಜುನಾಥ ನರಗುಂದ (Manjunath Naragund)

manjunath nargundಭಿನಾ ಸುಮಾರು 55 ವರ್ಷದ ದಲಿತ ಸಮುದಾಯದ ಡೋಮ ಜಾತಿಗೆ ಸೇರಿದ ವಿಧವೆ, ಕಳೆದ 30 ವರ್ಷಗಳಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹತ್ತಿರವಿರುವ ಸುಂದರಪುರ್ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.ಭಿನಾಳಂತೆ ಈ ಪ್ರದೇಶದಲ್ಲಿ ಇದೆ ಜಾತಿಗೆ ಸೇರಿದ ಸುಮಾರು 200ಕ್ಕೂ ಹೆಚ್ಚು ದಲಿತ ಸಮುದಾಯದ ಜನರು ನೆಲೆಸಿದ್ದಾರೆ.ಭಿನಾ ಪ್ರತಿದಿನ ಒಂದೊಂದು ಪ್ರದೇಶವೆಂಬಂತೆ ಬೆಳಗಿನ 6ಗಂಟೆಯಿಂದ ಮದ್ಯಾಹ್ನ 2 ಅಥವಾ 4ಗಂಟೆಯವರೆಗೆ ವಾರಣಾಸಿಯನ್ನು ಚೊಕ್ಕವಾಗಿಡುವಲ್ಲಿ ದಿನವಿಡಿ ಶ್ರಮವಹಿಸಿ ದುಡಿಯುತ್ತಾಳೆ.ಇವಳ ಈ ಕಾರ್ಯಕ್ಕೆ ಪ್ರತಿ ತಿಂಗಳಿಗೆ ಸಿಗುವ ಸಂಬಳ 4000 ರೂಪಾಯಿಗಳಿಗೆ ಕಡಿಮೆ,ಅದು ಕೂಡಾ ಪ್ರತಿ ತಿಂಗಳು ಬರದೆ ಇರುವಂತಹ ಸಂಗತಿ.ಈಗಾಗಲೇ ಹಲವಾರು ಉಸಿರಾಟದ ಸಂಬಂಧಿಸಿದ ಕಾಯಿಲೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ಭಿನಾ, ಸಫಾಯಿ ಕರ್ಮಚಾರಿಯಾಗಿ ತೇಕೆದಾರರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ .ಸರ್ಕಾರದ ವಿಮಾ ಯೋಜನೆ ಅಥವಾ ವೈದ್ಯಕೀಯಂತಹ ಯಾವುದೇ ಸೌಲಭ್ಯಗಳಂತೂ ಈಕೆಯ ಬಳಿಗೆ ಸುಳಿದಿಲ್ಲ.ಇನ್ನು ಆಶ್ರಯವಂತು ಸುಂದರಪುರ್ ನ ಅರೆಕಾಲಿಕ ಜೋಪಡಿಯಲ್ಲಿಯಲ್ಲಿಯೇ ಸದ್ಯದ ವಾಸಸ್ಥಾನ.ಇಂತಹ ನಿಷ್ಕೃಷ್ಟ ಜೀವನ ಸ್ಥಿತಿಯ ಮದ್ಯದಲ್ಲಿಯೂ ಕೂಡ ಈ ಕ್ಷೇತ್ರದ ಸಂಸದರು ಮತ್ತು ಪ್ರಧಾನಮಂತ್ರಿಗಳೂ ಆದ ಶ್ರೀ ನರೇಂದ್ರ ಮೋದಿ ಮೋದಿಯವರ ಕನಸಿನ ಕೂಸಾದ ಸ್ವಚ್ಚ ಭಾರತ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಭಿನಾ ನೈಜರ್ಥ ದಲ್ಲಿ ಈ ಕಾರ್ಯಕ್ರಮದ ರಾಯಭಾರಿ.ಇಂತಹ ಎಲ್ಲ ಸಫಾಯಿ ಕರ್ಮಚಾರಿಗಳ ಬದುಕಿನ ಪ್ರಾತಿನಿಧಿಕವಾಗಿರುವ ಈಕೆಯ ಜೀವನ ಒಂದರ್ಥದಲ್ಲಿ ಅಯೋಮಯ ಎನ್ನುವಂತಿದೆ.ಕಾರಣವಿಷ್ಟೇ ಪ್ರತಿ ಸಾರಿ ಪ್ರಧಾನಮಂತ್ರಿಗಳು ಈ ಕ್ಷೇತ್ರದ ಸಂಸದರೂ ಆಗಿರುವುದರಿಂದ ಅವರಿಗೆ ಈ ಪ್ರದೇಶದಲ್ಲಿ ಹಾದು ಹೋಗಲು ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿನ ಮಹಾನಗರ ಪಾಲಿಕೆ ಭಿನಾ ಳಂತಹ ಇಲ್ಲಿನ ಎಲ್ಲ ಕುಟುಂಬಗಳನ್ನು ಪ್ರತಿ ವಿವಿಐಪಿ ಭೇಟಿಯ ಸಂದರ್ಭದಲ್ಲಿ ಒಕ್ಕೆಲೆಬ್ಬಿಸಲಾಗುತ್ತಿದೆ. ಇದು ಒಂದರ್ಥದಲ್ಲಿ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಿರುವ ಭಿನಾಳ ಕಥೆಯಾದರೆ.

ಇನ್ನೊಂದೆಡೆಗೆ ಇದೆ ವಾರಣಾಸಿಯ ವ್ಯಾಪ್ತಿಯಲ್ಲಿ ಬರುವ ಸಾರನಾಥ ಕೇವಲ 15 ಕೀ ಮಿ ದೂರದಲ್ಲಿದೆ.ಇಲ್ಲಿನ ನಿವಾಸಿಯಾಗಿರುವ ಮುನ್ನಿ ನಾಲ್ಕು ಮಕ್ಕಳ ತಾಯಿ, ಮುಸ್ಲಿಂ ಸಮುದಾಯದ ಹಲಾಲ್ ಕೋರ್ ಜಾತಿಗೆ ಸೇರಿದ ಈಕೆ 2007ರಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಉಂಟಾದ ಮಿಥೇನ್ ಗ್ಯಾಸ್ ನ ಪರಿಣಾಮದಿಂದಾಗಿ ಗಂಡ ಮೊಹಮದ್ ಅಸ್ಲಾಮ್ ಉಸಿರುಗಟ್ಟಿ ಸಾವನ್ನಪ್ಪಿದ.ಅಂದಿನಿಂದ ಈಕೆ ಅರೆಕಾಲಿಕ ಸಫಾಯಿ ಕರ್ಮಚಾರಿಯಾಗಿ ಕಳೆದ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾಳೆ.ಪತಿಯ ಮರಣದ ನಂತರ ವಾರಣಾಸಿಯ ನಗರಾಯುಕ್ತರು ಪೂರ್ಣ ಪ್ರಮಾಣದ ನೌಕರಿಯನ್ನು ನೀಡುವ ಭರವಸೆಯನ್ನು ನೀಡಿದ್ದರು ಆದರೆ ಕಾಲಾಂತರದಲ್ಲಿ 25 ಸಾವಿರ ರೂಪಾಯಿಗಳ ಪರಿಹಾರವನ್ನು ನೀಡಿದ್ದನ್ನು ಬಿಟ್ಟರೆ ಯಾವ ಪೂರ್ಣಕಾಲಿಕ ನೌಕರಿಯ ಆದೇಶವು ವಾಸ್ತವವಾಗಿ ಜಾರಿಗೆ ಬರದ ಮೌಖಿಕ ಅದೇಶವಾಗಿಯೇ ಉಳಿಯಿತು.ಅಂದಿನಿಂದ ಇಂದಿನವರೆಗೂ ಮುನ್ನಿ ಬೆಳಗ್ಗೆ 6 ಗಂಟೆಯಿಂದ ಸ್ವಂತ ಊರು ಸಾರನಾಥದಿಂದ ಕೆಲಸಕ್ಕಾಗಿ ವಾರಣಾಸಿಗೆ ಸುಮಾರು 15 ಕೀ ಮಿ ದೂರದ ಪ್ರಯಾಣವನ್ನು ಸ್ವಂತ ಹಣದಲ್ಲಿಯೇ ನಿಭಾಯಿಸಬೇಕಾಗಿದೆ.ಈಗಾಗಲೇ ಸುಪ್ರೀಂಕೋರ್ಟ್ ‘ಸಫಾಯಿ ಕರ್ಮಚಾರಿ ಆಂದೋಲನ v/s ಭಾರತ ಸರ್ಕಾರ’ ದ ವಿರುದ್ದದ ಪ್ರಕರಣದಲ್ಲಿನ ತೀರ್ಪಿನಂತೆ 1993ರ ನಂತರ ಸಫಾಯಿ ಕಾರ್ಯಾಚರಣೆಯಲ್ಲಿ ಮರಣ ಹೊಂದಿದವರಿಗೆ 10 ಲಕ್ಷದವರಿಗೆ ಪರಿಹಾರ ಮತ್ತು ಸರ್ಕಾರದ ವತಿಯಿಂದ ಕೌಶಲ್ಯ ತರಬೇತಿ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕೆಂಬ ಯಾವ ಆದೇಶಗಳು ಈಕೆಗೆ ಆಶ್ರಯದಾಯಕವಾಗಿಲ್ಲ ಅಲ್ಲದೆ ಇಂದಿಗೂ ನಿರಂತವಲ್ಲದ ಕನಿಷ್ಠ ಕೂಲಿಗೆ ದುಡಿಯುತ್ತಿರುವ ಬದುಕು ಮುನ್ನಿಯದು.ಇಲ್ಲಿ ಭಿನಾ ಮತ್ತು ಮುನ್ನಿಯಂತಹ ಚಿತ್ರಣವನ್ನು ವಾರಣಾಸಿಯ ಸಫಾಯಿ ಕರ್ಮಚಾರಿಗಳ ಬಸ್ತಿಗಳ ಬೀದಿಯುದ್ದಕ್ಕೂ ಕಾಣಯುತ್ತಿರುವ ಸಂದರ್ಭದಲ್ಲಿ ನಮಗೆದುರಾದ ಇನ್ನೊಂದು ಚಿತ್ರಣ ಖಂಡಿತಾ ಸರ್ಕಾರದ permutation ಮತ್ತು combination ನ ರಾಜಕೀಯ ಲೆಕ್ಕಾಚಾರದ ಮುಸುಕು ಧರಿಸಿರುವ ಅಂಶ ಈ ಸಂದರ್ಭದಲ್ಲಿ ಸ್ಪಷ್ಟವಾಯಿತು ಕಾರಣವಿಷ್ಟೇ ಅದು ಜೂನ್ 21 ಅಖಿಲೇಶ್ ಕುಮಾರ್ 26 ರ ಹರೆಯದ ಯುವಕ ವಾರಣಾಸಿಯ ಚಿತ್ತೈಪುರದ ಅಖರೀ ಬೈಪಾಸ್ ಹತ್ತಿರವಿರುವ ಗೋಲ್ಡನ್ ಹಾಸ್ಪಿಟಲ್ ನಲ್ಲಿ ಅಲ್ಲಿನ ಸೆಪ್ಟಿಕ್ ಟ್ಯಾಂಕಗಳನ್ನು ಶುಚಿಗೊಳಿಸಲು ಕೆಲಸಕ್ಕೆ ನಿಯುಕ್ತಗೊಂಡಿದ್ದ. ಆದರೆ ಮುಂಗಡವಾಗಿ 2000 ರೂಪಾಯಿಗಳನ್ನು ಕೊಟ್ಟಿದ್ದ ದವಾಖಾನೆಯ ಮಾಲೀಕ ರಾಮಲಖಾನ್ ಅಖಿಲೇಶ್ ನಿಗೆ ಸಾಯಂಕಾಲ 4 ಗಂಟೆಯವರೆಗೆ ಮಾಡಬೇಕಾದ ಕೆಲಸವನ್ನು ಮಾಲೀಕನ ದಬ್ಬಾಳಿಕೆಗೆ ಬಾಗಿ ರಾತ್ರಿ 12 ಗಂಟೆಯವರೆಗೆ ಕೆಲಸ ಮಾಡಲು ಕೊನೆಗೂ ಒಪ್ಪಿ 25 ಅಡಿ ಆಳದ ಸೆಪ್ಟಿಕ್ ಟ್ಯಾಂಕನಲ್ಲಿ ಇಳಿದ ಅಖಿಲೇಶ್ ಮಿಥೇನ್ ಅನಿಲದ ಪರಿಣಾಮವಾಗಿ ಉಸಿರುಗಟ್ಟಿ ಸಾವನ್ನಪ್ಪಿದ.ಈತನ ತಂದೆ ತಾಯಿಯರು ಸಹಿತ ಇದೇ ಕಾಯಕವನ್ನು ವಾರಣಾಸಿಯ ನಗರ ನಿಗಮದಲ್ಲಿ ಮಾಡುತ್ತಿದ್ದಾರೆ, ನಾಲ್ಕು ಮಕ್ಕಳ ತಂದೆ, ಪತ್ನಿ ಸಂಜುದೇವಿ ಕುಟುಂಬದಲ್ಲಿನ ಸದಸ್ಯರು.

ಈ ಮೇಲಿನ ಮೂರು ಘಟನಾವಳಿಗಳ ಚಿತ್ರಣಕ್ಕೆ ನಾವು ಸಾಕ್ಷಿಯಾದದ್ದು ಮ್ಯಾಗಸಸ್ಸೇ ಪ್ರಶಸ್ತಿ ಪುರಸ್ಕೃತರಾದ ವಿಲ್ಸನ್ ಬೇಜವಾಡ್ ರ ‘ಸಫಾಯಿ ಕರ್ಮಚಾರಿ ಆಂದೋಲನ’ ಹಾಗೂ ಅರುಣಾ ರಾಯ್ ರವರ ‘ಸ್ಕೂಲ್ ಫಾರ್ ಡೆಮೊಕ್ರಸಿ’ ಹಾಗೂ ದೆಹಲಿಯ ‘ಪರಸ್ಪರ್’ ಎನ್ನುವ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಒಂದು ತಿಂಗಳ ‘ಮ್ಯಾನ್ ವಲ್ ಸ್ಕ್ಯಾವಂಜಿಂಗ್’ ಕುರಿತಾದ ಪ್ರೊಜೆಕ್ಟ್ ವರ್ಕ್ ನ ಮೂಲಕ ಇಂತಹ ಸಮಾಜದ ಅನಿಷ್ಟ ಪದ್ಧತಿಗಳ ಜಾಡು ಹಿಡಿದು ಹೊರಟ ನಮಗೆ ವಾರಣಾಸಿಯಲ್ಲಿ ಭಿನಾ, ಮುನ್ನಿ,ಹಾಗೂ ಅಖಿಲೇಶ್ ನಂತಹ ಬದುಕಿನ ಕಠೋರ ವಾಸ್ತವಗಳು ಇಂದಿಗೂ ಕೂಡಾ ಸರ್ಕಾರ ಇಂತಹ ಸಂಗತಿಗಳನ್ನು ಮರೆಮಾಚುವಲ್ಲಿ ದಿನವಿಡಿ ಶ್ರಮಿಸುತ್ತಿವೆ.ಕಾರಣವಿಷ್ಟೇ ಒಂದು ಕಡೆ ಸಧಾ ಡೆವಲಪಮೆಂಟ್ ನ ಭ್ರಮಾಲೋಕದಲ್ಲಿಯೇ ಮುಳುಗಿ ದೇಶದಿಂದ ದೇಶಕ್ಕೆ ಹಾರುತ್ತಿರುವ ಗೌರವಾನ್ವಿತ ಪ್ರಧಾನ ಮಂತ್ರಿಗಳು ತಮ್ಮ ಕ್ಷೇತ್ರ ವಾರಣಾಸಿಯ ಬದುಕನ್ನು ಎಷ್ಟು ಹಸನಗೊಳಿಸಿದ್ದಾರೆ ಈ ಮೂರು ವರ್ಷದಲ್ಲಿ ಎನ್ನುವುದನ್ನು ಈ ಮೇಲಿನ ಮೂರು ಘಟನಾವಳಿಗಳು ಬಹಳ ಸ್ಪಷ್ಟವಾಗಿ ಸಾರುತ್ತವೆ.ಇಂತಹ ಕಟು ಸತ್ಯಗಳನ್ನು ನಾವು ವಾರಣಾಸಿಯ ಸುಮಾರು 28 ಸಫಾಯಿ ಕರ್ಮಚಾರಿಗಳ ಬಸ್ತಿಗಳಲ್ಲಿ ಸಾಗುವಾಗ ಇವೆಲ್ಲ ಸಾಮಾನ್ಯ ಎನ್ನುವಷ್ಟು ದಟ್ಟವಾಗಿ ಹರಡಿವೆ.ಇಂತಹ ಹಿನ್ನಲೆಗಳೊಂದಿಗೆ ವಾರಣಾಸಿಯಲ್ಲಿ ನೆಲೆಗೊಂಡ ನಮ್ಮ ತಂಡ ಮತ್ತು ಇಲ್ಲಿನ ಸಫಾಯಿ ಕರ್ಮಚಾರಿ ಆಂದೋಲನದ ಉತ್ತರ ಪ್ರದೇಶದ ರಾಜ್ಯ ಸಹ ಸಂಚಾಲಕರಾದ ಅಬ್ದುಲ್ ಜಬ್ಬಾರ್ ಹೇಳುವಂತೆ ಇಲ್ಲಿ ಶೇಕ್ ಹಲಾಲ್ ಕೋರ್, ವಾಲ್ಮೀಕಿ, ಭಾರ್ತಿ, ಡೋಮ, ಹೇನು, ರಾವತ್, ಲಾಲ್ ಭೇಗಿ, ಹೇಲಾ ಎನ್ನುವ ವಿವಿಧ ರೀತಿಯ ಪಂಗಡಗಳು ಇಲ್ಲಿ ಮಲ ಹೊರುವ ಪದ್ದತಿಯನ್ನು ಆಚರಿಸುತ್ತಿವೆ.ಇಲ್ಲಿ ಬಹುತೇಕರು ಅರೆಕಾಲಿಕ ಸಫಾಯಿ ಕರ್ಮಚಾರಿಗಳು ಸರ್ಕಾರದ ಯಾವುದೇ ಸೌಲಭ್ಯವೂ ಕೂಡ ಇಲ್ಲದವರು.ಈಗಾಗಲೇ ವಾರಣಾಸಿ ಪ್ರಧಾನಮಂತ್ರಿಗಳ ಕ್ಷೇತ್ರವಾಗಿರುವ ಕಾರಣ ಇಲ್ಲಿ ಮಲಹೊರುವ ಪದ್ದತಿ ಇಲ್ಲ ಶೂನ್ಯ ಎಂದು ಸರ್ಕಾರಿ ಅಂಕಿ ಅಂಶಗಳು ಸಾರಿವೆ. ಈ ಅಂಕಿ ಅಂಶಗಳತ್ತ ನೋಡಿದಾಗ ಕೆಲವು ಸಂಗತಿಗಳು ನಮಗೇ ಅಚ್ಚರಿ ಮೂಡಿಸುತ್ತವೆ.ಇಡೀ ದೇಶದಲ್ಲಿ ಉತ್ತರಪ್ರದೇಶ ಅತಿ ಹೆಚ್ಚು ಮಲಹೊರುವ ಸಫಾಯಿ ಕರ್ಮಚಾರಿಗಳನ್ನು ಹೊಂದಿದೆ ಇಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಒಟ್ಟು 10,980 ಪೌರಕಾರ್ಮಿಕರು ಈ ಮಲಹೊರುವ ಕಾರ್ಯವನ್ನು ನಿರವಹಿಸುತ್ತಿದ್ದಾರೆ.ಇನ್ನು ನಾವು ವಾರಣಾಸಿಯ ಕ್ಷೇತ್ರಕ್ಕೆ ಬರುವುದಾದರೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು 29ರ ಜನವರಿ 2017 ರವರೆಗೂ ಕಂಡುಕೊಂಡ ಸಮೀಕ್ಷೆಯ ವರದಿಯಂತೆ ಇಲ್ಲಿನ ಸಂಖ್ಯೆ ಶೂನ್ಯ.ಈ ವಿಚಾರವಾಗಿ ನಮ್ಮ ಈ ಎಲ್ಲ ಸಫಾಯಿ ಕರ್ಮಚಾರಿಗಳ ಬಸ್ತಿಗಳ ಕ್ಷೇತ್ರ ಕಾರ್ಯ ಅಧ್ಯಯನದ ನಂತರ ಸರ್ಕಾರಿ ಅಂಕಿ ಅಂಶಗಳು ಹಾಗೂ ವಾರಣಾಸಿಯ ಇಲ್ಲಿನ ವಾಸ್ತವಿಕ ಚಿತ್ರಣಗಳು ಒಂದಕ್ಕೊಂದು ತಾಳೆ ಹೊಂದಿರುವ ಬಗ್ಗೆ ಇಲ್ಲಿನ ವಾರಣಾಸಿಯ ಮಹಾನಗರ ಪಾಲಿಕೆಯ ಆಯುಕ್ತರ ಗಮನ ಸೆಳೆದಾಗ ಹೇಳುವ ಸಂಗತಿ ಇಷ್ಟೇ, ಇಲ್ಲಿ ಯಾವುದೇ ರೀತಿಯ ಮಲಹೊರುವ ಸಫಾಯಿ ಕರ್ಮಚಾರಿಗಳು ಇಲ್ಲ ಎನ್ನುವುದು ಮತ್ತು ಅಂಥವರನ್ನು ಈಗಾಗಲೇ ಮಲಹೊರುವ ಪದ್ಧತಿಯಿಂದ ಮುಕ್ತಗೊಳಿಸಿ ಪುನರವಾಸನಗೊಳಿಸಲಾಗಿದೆ ಎನ್ನುವುದು ಅವರ ವಾದವಾಗಿತ್ತು.ಇನ್ನು ಈ ಸಂಗತಿಯನ್ನು ವಾರಣಾಸಿಯಲ್ಲಿ ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿನ ಸಫಾಯಿ ಕರ್ಮಚಾರಿಗಳಿಗಾಗಿ ಹೋರಾಟ ಮಾಡುತ್ತಿರುವ ದಲಿತ ಫೌಂಡೇಶನ್ ನ ಕಿರಣ್ ಗುಪ್ತಾ ಹೇಳುವಂತೆ

” ಸರ್ಕಾರವೇನೋ ದಾಖಲೆಯಲ್ಲಿ ಶೂನ್ಯವೆಂದು ತೋರಿಸುತ್ತೆ ಆದರೆ ನಾವು ಈಗಾಗಲೇ ಮಲಹೊರುವ ಸಫಾಯಿ ಕರ್ಮಚಾರಿಗಳನ್ನು ಅವರು ಕೆಲಸ ನಿರ್ವಹಿಸುವ ವೇಳೆಯಲ್ಲಿ ಭೇಟಿ ಮಾಡಿ ಸುಮಾರು 80 ಜನರನ್ನು ಪಟ್ಟಿ ಮಾಡಿದ್ದೇವೆ ಅದು ಇನ್ನು ಹೆಚ್ಚು ಆಗಬಹುದು ಆದರೆ ಸರ್ಕಾರಕ್ಕೆ ನಮ್ಮ ಮಾತನ್ನು ಕೇಳಿಸಿಕೊಳ್ಳುವ ವ್ಯವದಾನವಿಲ್ಲ.ಆದ್ದರಿಂದ ಈ ಪಟ್ಟಿಯನ್ನು ತೋರಿಸಿದಾಗ ಅದಕ್ಕೆ ಸಾಕ್ಷಿ ನೀಡಿ ಎನ್ನುವುದು ಸರ್ಕಾರದ ತರ್ಕವಾಗಿದೆ.ಮಲಹೊರುವುದಕ್ಕೆ ಸಾಕ್ಷಿಯನ್ನು ಫೋಟೋಗಳನ್ನು ತೋರಿಸಿದಾಗ ಅದನ್ನು ಅಲ್ಲಗಳೆದು ಇದೆಲ್ಲ ಹಳೆಯದು ಎನ್ನುವ ದುರಂಹಕಾರಿ ಧೋರಣೆ ಈ ಸರ್ಕಾರದ್ದು” ಎನ್ನುತ್ತಾರೆ.

ಇನ್ನೊಂದೆಡೆಗೆ ವಾರಣಾಸಿಯಲ್ಲಿ ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಟವೆಂದರೂ 10,000 ಸಾವಿರ ಪೂರ್ಣಕಾಲಿಕ ಸಫಾಯಿ ಕರ್ಮಚಾರಿಗಳನ್ನು ನೇಮಕಮಾಡಿಕೊಳ್ಳುವ ಅವಶ್ಯಕತೆ ಇದೆ ಆದರೆ ಇಷ್ಟು ಸಂಖ್ಯೆಯ ಜನರು ಮಾಡುವ ಕೆಲಸವನ್ನು ಇಂದು 2.500 ಸಾವಿರ ಸಫಾಯಿ ಕರ್ಮಚಾರಿಗಳ ಮೂಲಕ ಮಾಡಿಸಲಾಗುತ್ತಿದೆ ಉಳಿದೆಲ್ಲ ಕೆಲಸವನ್ನು ತೇಕೆದಾರ ಅಥವಾ ಖಾಸಗಿ ವಲಯದಿಂದ ಮಾಡಿಸಲಾಗುತ್ತಿದೆ ಇಂತಹ ಮಧ್ಯವರ್ತಿ ಗಳ ಮೂಲಕ ಜರುಗುವ ಬಹುತೇಕ ಕಾರ್ಯಗಳು ಯಾವುದೇ ಯಂತ್ರೋಪಕರಣ ಅಥವಾ ರಕ್ಷಣಾ ಸಾಮಗ್ರಿಗಳಿಲ್ಲದೆ ಸೆಪ್ಟಿಕ್ ಟ್ಯಾಂಕ್ ಹಾಗೂ ಒಳ ಚರಂಡಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ ಈ ಕಾರಣದಿಂದಾಗಿ ಬಹುತೇಕ ಸಾವುಗಳು ಸಂಭವಿಸುತ್ತವೆ ಅಲ್ಲದೆ ಇನ್ನಿತರ ಆರೋಗ್ಯ ಸಂಬಂಧಿತ ಕಾಯಿಲೆಗಳು ಕೂಡಾ ಅಂಟಿಕೊಂಡಿರುವಂತದ್ದು.ಈಗಾಗಲೇ ಈ ಸಫಾಯಿ ಕರ್ಮಚಾರಿ ಸಮುದಾಯಗಳಿಗೆ ಕಾನೂನಾತ್ಮಕ ದೃಷ್ಟಿಕೋನದಲ್ಲಿ ನ್ಯಾಯ ಸಿಗಬೇಕಾಗಿತ್ತು ಆದರೆ ವಾಸ್ತವವಾಗಿ 1993 ರಲ್ಲಿ ಬಂದಂತಹ ‘ಮಲ ಹೊರುವ ಪೌರಕಾರ್ಮಿಕರ ಉದ್ಯೋಗ ಮತ್ತು ಶುಷ್ಕ ಶೌಚಾಲಯಗಳ ನಿರ್ಮಾಣ ನಿಷೇದ ಕಾಯ್ದೆ-1993′(The Employment of Manual Scavengers and construction of Dry Latrines (Prohibition) Act) ಯು ಕಳೆದ 20 ವರ್ಷಗಳಲ್ಲಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯು ಮಲಹೊರುವ ಪದ್ದತಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನೆರವಾಗುವವರನ್ನು ಶಿಕ್ಷೆಗೆ ಒಳಪಡಿಸಿರುವ ಒಂದೇ ಒಂದು ಪ್ರಕರಣ ನಮ್ಮ ಮುಂದೆ ಕಂಡು ಬರುವುದಿಲ್ಲ, ಮಧ್ಯ ಪ್ರದೇಶದಲ್ಲಿ ಸರ್ಕಾರವೇ ಸಾಮುದಾಯಿಕ ಶುಷ್ಕ ಶೌಚಾಲಯ(community Dry Latrines) ನಿರ್ಮಿಸಿರುವದನ್ನು ನೋಡಿದರೆ ಈ ಸಂಗತಿ ಸ್ಪಷ್ಟ ವಾಗುತ್ತದೆ.ಇನ್ನು 2013 ರಲ್ಲಿ ಬಂದಂತಹ ‘ಮಲಹೊರುವ ಪೌರಕಾರ್ಮಿಕರ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಸಂಬಂಧಿತ ಕಾಯ್ದೆ-2013(The Prohibition of employment of Manual Scavenger and their Rehabilitation Act) ಯು ಅಪಾಯಕಾರಿ ಸ್ಥಳಗಳಲ್ಲಿ ಅಂದರೆ ಸೆಪ್ಟಿಕ್ ಟ್ಯಾಂಕ್ ಮತ್ತು ಒಳಚರಂಡಿಯ ಮ್ಯಾನ್ ಹೋಲ್ ಗಳಲ್ಲಿ ಸುರಕ್ಷಿತ ರಕ್ಷಣಾ ಕವಚಗಳ ಬಳಕೆ ಒತ್ತು ಕೊಟ್ಟಿದ್ದಲ್ಲದೆ ಆ ಮೂಲಕ ಅಂತ ಸ್ಥಳಗಳಲ್ಲಿ ಈ ರೀತಿಯ ಸುರಕ್ಷಾ ಕವಚಗಳ ಮೂಲಕ ಮಾಡುವ ಕೆಲಸವು ಮ್ಯಾನುಅಲ್ ಸ್ಕ್ಯಾವಂಜಿಂಗ್ ನಲ್ಲಿ ಬರುವುದಿಲ್ಲ ಎನ್ನುವ ಮೂಲಕ ಈ ಮಲ ಹೊರುವ ಪದ್ದತಿಯನ್ನು ಇನ್ನು ಕಾನೂನು ಬದ್ಧಗೊಳಿಸುವ ಸಂಶಯ ಇಲ್ಲಿ ಕಂಡು ಬರುತ್ತದೆ ಇದರ ಭಾಗವಾಗಿಯೇ ಇಂತಹ ದ್ವಂದ್ವಾ ತ್ಮಕ ಕಾನೂನುಗಳ ಭಾಗವಾಗಿಯೇ ಇಂದು ಭಾರತೀಯ ರೈಲ್ವೆ ಯಲ್ಲಿ ಅತಿ ಹೆಚ್ಚು ಈ ರೀತಿಯ ಕರ್ಮಚಾರಿಗಳು ಇರುವುದನ್ನು ಕಾಣುತ್ತೇವೆ.ಈ ಎಲ್ಲ ಸಂಗತಿಗಳನ್ನು ಗಮನಿಸಿದಾಗ ಸರ್ಕಾರಕ್ಕೂ ಕೂಡ ಸಂಪೂರ್ಣವಾಗಿ ಈ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಗುರಿ ಮತ್ತು ಉದ್ದೇಶ ಎರಡು ಇಲ್ಲ ಎನ್ನುವುದು ಇಲ್ಲಿಯವರೆಗಿನ ಬೆಳವಣಿಗೆಗಳನ್ನು ಕಂಡಾಗ ಈ ಅಂಶ ಸ್ಪಷ್ಟವಾಗುತ್ತದೆ.ಆದ್ದರಿಂದ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ನಿಟ್ಟಿನಲ್ಲಿ ಮ್ಯಾಗಸಸ್ಸೇ ಪುರಸ್ಕೃತರಾದ ವಿಲ್ಸನ್ ಬೇಜವಾಡ್ ರ ಸಫಾಯಿ ಕರ್ಮಚಾರಿ ಆಂದೋಲನದ ನಿರಂತರ ಹೋರಾಟದ ಪ್ರತಿಫಲವಾಗಿ ಸುಪ್ರೀಂಕೋರ್ಟ್ ಗೆ ವಿಧಿ 32ರ ಅಡಿಯಲ್ಲಿ ಮೂಲಭೂತ ಹಕ್ಕುಗಳಾದ ವಿಧಿ 14,17,21,23,46 ಇವೆಲ್ಲವೂ ಕೂಡಾ ಸರ್ಕಾರದಿಂದಲೇ ನಿರಂತರವಾಗಿ ಉಲ್ಲಂಘಿಸಲ್ಪಟ್ಟಿವೆ.ಅಲ್ಲದೆ 1993ರ ಕಾಯ್ದೆ ಸಫಾಯಿ ಕರ್ಮಚಾರಿಗಳಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾದ ಹಿನ್ನಲೇ ಮತ್ತು ಮಲಹೊರುವ ಪದ್ದತಿಯನ್ನು ಸಂಪೂರ್ಣವಾಗಿ ನಿಷೇದಿಸಿ ಅದಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಮಾರು 15,000 ಸಾವಿರ ಭಾವಚಿತ್ರಗಳ ಸಾಕ್ಷಿಯ ಮೂಲಕ ಸುಪ್ರೀಂಕೋರ್ಟ್ ಗೆ ಮೇಲ್ಮನವಿಯ ಸಂದರ್ಭದಲ್ಲಿ ಸಲ್ಲಿಸಲಾಯಿತು.ಇದರನ್ವಯ ‘ಸಫಾಯಿ ಕರ್ಮಚಾರಿ ಆಂದೋಲನ v/s ಭಾರತ ಸರ್ಕಾರ’ದ ವಿರುದ್ದದ ಪ್ರಕರಣದಲ್ಲಿ ಕೇಂದ್ರ ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳಿಗೆ ಸಫಾಯಿ ಕರ್ಮಚಾರಿಗಳ ವಿಕಸನಕ್ಕಾಗಿ ಹಲವಾರು ನಿರ್ದೇಶನ ಗಳನ್ನು ಕೊಟ್ಟಿತು. ಅದರಲ್ಲಿ ಪ್ರಮುಖವಾಗಿ ಸಫಾಯಿ ಕಾರ್ಯಾಚರಣೆಯಲ್ಲಿ ಮೃತರಾದರೆ 10 ಲಕ್ಷದವರಿಗೆ ಪರಿಹಾರ ಮತ್ತು ಆಶ್ರಯಮನೆ,ಸ್ವಯಂ ಉದ್ಯೋಗಕ್ಕಾಗಿ ತರಬೇತಿ ಮತ್ತು ಸಹಾಯಧನ ಇವು ಪ್ರಮುಖ ಆದೇಶಗಳು.ಆದರೆ ವಾಸ್ತವದಲ್ಲಿ ವಾರಣಾಸಿಯಲ್ಲಿ ನಾವು ಭೇಟಿ ನೀಡಿದ ಬಸ್ತಿಗಳಲ್ಲಿ ಬಹುತೇಕ ಸಫಾಯಿ ಕರ್ಮಚಾರಿಗಳಿಗೆ ರೇಷನ್ ಕಾರ್ಡ್ ಗಿಂತ ಹೆಚ್ಚಾಗಿ ಆಧಾರ ಕಾರ್ಡ್ ಎಂಬ ಐಡೆಂಟಿಟಿ ಭೂತ ಹೆಚ್ಚಿರುವ ಸಂಗತಿ ಗಮನಾರ್ಹವಾದದ್ದು.

ಸಾಂವಿಧಾನಿಕ ಚೌಕಟ್ಟಿನಲ್ಲಿರುವ ಹಲವಾರು ಕಾನೂನುಗಳು ಹಾಗೂ ಸಂಸ್ಥೆಗಳು ಸಫಾಯಿ ಕರ್ಮಚಾರಿಗಳ ಪುನರ್ವಸನ ಹಾಗೂ ಅವರ ವಿಕಾಸಕ್ಕಾಗಿ ಕೈಜೋಡಿಸಬೇಕಾಗಿತ್ತು. ಆದರೆ ದುರಾದೃಷ್ಟವಶಾತ್ ಇಂದು ಕೃತಕ ಅಂಕಿ ಅಂಶಗಳ ಮೂಲಕ ಬಹುಶಃ ಅವರ ಎಲ್ಲ ವಾಸ್ತವಿಕ ಕಟುಸತ್ಯಗಳನ್ನು ಮುಚ್ಚಿಡುವ ಸರ್ಕಾರದ ಪ್ರಯತ್ನ ಇಂದು ಗುಟ್ಟಾಗಿಏನೋ ಉಳಿದಿಲ್ಲ ಎನ್ನುವುದಂತೂ ಸತ್ಯ.

ಇನ್ನು ಇಂದು ಪ್ರಸ್ತುತ ಕೇಂದ್ರ ಸರ್ಕಾರ ಬಯೋತ್ಪಾದನೆ ತಡೆಯಲು ದೇಶದ ಗಡಿರಕ್ಷಣೆಗೆ 2017 ರ ಸಾಲಿನ ಬಜೆಟ್ ನಲ್ಲಿ ಒಟ್ಟು 33,59,854 ಕೋಟಿ ರೂಪಾಯಿಗಳನ್ನು ಮಿಸಲಿಟ್ಟಿದೆ.ಆದರೆ ಈ ದೇಶದ ಗಡಿಯಲ್ಲಿನ ಸಂಖ್ಯೆಗಿಂತ ಹೆಚ್ಚು ಜನರು ಸಾಯುತ್ತಿರುವುದು ಈ ಮಲ ಹೊರುವ ಸಫಾಯಿ ಕರ್ಮಚಾರಿಗಳು ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ವರ್ಷ ಸುಮಾರು 300ಕ್ಕೂ ಹೆಚ್ಚು ಜನರು ಇಂತಹ ಅನಿಷ್ಟ ಪದ್ಧತಿಗಾಗಿ ಸಾವನ್ನಪ್ಪುತ್ತಾರೆ ಆದರೆ ಇಡೀ ದೇಶದ ಸಫಾಯಿ ಕರ್ಮಚಾರಿಗಳ ಪುನರ್ವಸನಕ್ಕಾಗಿ ಮೀಸಲಿಟ್ಟ ಒಟ್ಟು ಹಣ 5 ಕೋಟಿ ರೂಪಾಯಿಗಳು…..!!!

ಸರ್ಕಾರದ ಅಂಕಿ ಅಂಶಗಳೇ ಹೇಳುವಂತೆ

ವರ್ಷ. ಮಲಹೊರುವ ಪೌರಕಾರ್ಮಿಕರ ಪುನರ್ವಸತಿಗಾಗಿ ಮೀಸಲಿಟ್ಟ ಹಣ (ಕೋಟಿಗಳಲ್ಲಿ)

2013-14 557

2014-15 439.04

2015-16 470.19

2016-17 10

2017-18 5

ಆಧಾರ : ಭಾರತ ಸರ್ಕಾರದ ಬಜೆಟ್ 2013 ರಿಂದ 2017ರವರೆಗಿನ

ಈ ಮೇಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ನಿಜಕ್ಕೂ ಸಪಾಯಿ ಕರ್ಮಚಾರಿಗಳ ಬದುಕನ್ನು ಹಸನು ಮಾಡುವ ಯಾವ ಚಿಂತನೆಯೂ ಸರ್ಕಾರಕ್ಕೆ ಇಲ್ಲ ಎನ್ನುವುದು ಈ ಮೂಲಕ ಸ್ಪಷ್ಟವಾಗುತ್ತದೆ.ಇಲ್ಲಿನ 5 ಕೋಟಿ ರೂಪಾಯಿಗಳ ಮೊತ್ತ ಈಡಿ ದೇಶದ ಮಲಹೊರುವ ಪೌರ ಕಾರ್ಮಿಕರನ್ನು ಯಾವ ಅರ್ಥದಲ್ಲಿ ಅಭಿವೃದ್ಧಿಪಡಿಸುತ್ತೋ ಎನ್ನುವುದನ್ನು ಈ ದೇಶದ ಆರ್ಥಿಕ ತಜ್ಞರೇ ತಿಳಿಸಬೇಕು.

ಹಾಗಾದರೆ ಈ ಎಲ್ಲ ವೈವಿಧ್ಯಮಯ ಅಂಕಿ ಅಂಶಗಳ ಚಿತ್ರಣದ ಮಧ್ಯದಲ್ಲಿ ಇತ್ತೀಚೆಗಿನ ಪ್ರಸ್ತುತ ಸರ್ಕಾರದ ವರ್ಣರಂಜಿತ ಕಾರ್ಯಕ್ರಮ ‘ಸ್ವಚ್ಛ ಭಾರತ ಅಭಿಯಾನ’ವನ್ನು ಮತ್ತು ಅದರ ಒಟ್ಟು ಗುರಿ ಉದ್ದೇಶಗಳನ್ನು ವಿಶ್ಲೇಷಿಸುತ್ತಾ ಹೊರಟಾಗ 2019 ರ ವೇಳೆಗೆ ಈ ದೇಶದೆಲ್ಲೆಡೆ 10 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಿ ಆ ಮೂಲಕ ಬಯಲು ಮುಕ್ತ ಶೌಚವನ್ನು ತಡೆಗಟ್ಟಬೇಕೆಂಬ ಉದ್ದೇಶ ಅದ್ಭುತವೆನಿಸಿದರು ಕೂಡಾ ಇದರ ಆಂತರಿಕ ಒಳನೋಟಗಳನ್ನು ನಾವು ಪರಿಶೀಲಿಸಬೇಕಾಗಿದೆ.ಆದ್ದರಿಂದ ಇಂತಹ ಈ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಈ ಸಂದರ್ಭದಲ್ಲಿ ನಾವು ಐತಿಹಾಸಿಕವಾದ ಹಿನ್ನೆಲೆಯಿಂದ ನೋಡಬೇಕಾಗಿದೆ. ಈ ದೇಶದ ಸಾಮಾಜಿಕ ಶ್ರೇಣಿ ವ್ಯವಸ್ಥೆಯಲ್ಲಿ ಸ್ವಚ್ಛ ಮತ್ತು ಮಲಿನ ಎನ್ನುವುದು ಸ್ಪೃಶ್ಯ ಮತ್ತು ಅಸ್ಪೃಶ್ಯ ಎನ್ನುವ ಸಮಾನರ್ಥದಲ್ಲಿ ಇಂದಿಗೂ ಬಿಂಬಿತವಾಗುತ್ತಿರುವುದು ವಾಸ್ತವಿಕ ಸಂಗತಿ. ಈ ಶ್ರೇಷ್ಠ ಕನಿಷ್ಟ ಗಳ ಲೆಕ್ಕಾಚಾರವು ಸಹಿತ ಇದಕ್ಕೆ ತಳುಕು ಹಾಕಿಕೊಂಡಿರುವುದು ಇಂತಹ ತಾರತಮ್ಯದ ಪರಿಕಲ್ಪನೆಯು ಪರಂಪರಾಗತವಾಗಿ ಸಮಾಜದಲ್ಲಿ ಮೇಳೈಸಿಕೊಂಡಿದೆ.ಈ ಹಿನ್ನಲೆಯಲ್ಲಿ ಇಂದು ಸರ್ಕಾರಕ್ಕೆ ಕನಿಷ್ಟ ಕೂಲಿಗೂ ಸಹಿತ ಕೆಲಸ ಮಾಡಲು ಸಿದ್ದವಿರುವ ಹಾಗೂ ಸಮಾಜದ ಆರ್ಥಿಕ ಸಾಮಾಜಿಕ, ಸ್ತರ ವಿನ್ಯಾಸದಲ್ಲೂ ಹೀನಾಯಮಾನ ಜೀವನ ನಡೆಸುತ್ತಿರುವ ದಲಿತರಿಗೆ ಮತ್ತೆ ಈ ದೇಶದ ಶೇಕಡ 80 ರಷ್ಟು ಸವರ್ಣೀಯ ಕೊಳಕನ್ನು ಬಳಿಯುವಂತ ಪ್ರಕ್ರಿಯೆಗೆ ಸ್ವಚ್ಚ ಭಾರತ ಅಭಿಯಾನ ಬಹಳ ಸ್ಪಷ್ಟವಾದ ಗುರಿಯೊಂದಿಗೆ ಮುನ್ನಡಿ ಇಟ್ಟಿದೆ ಮತ್ತು ಇದರ ನೇತೃತ್ವ ವಹಿಸಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಯವರು ಈ ಹಿಂದೆ ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಂತ ಸಂಧರ್ಭದಲ್ಲಿ ಮಲಹೊರುವ ವಾಲ್ಮೀಕಿ ಅಥವಾ ಬಂಗಿ ದಲಿತ ಸಮುದಾಯದ ಕುರಿತಾಗಿ ಈ ಕೆಳಗಿನಂತೆ ವಿವರಿಸುತ್ತಾರೆ.

“ಅವರು ಈ ಕೆಲಸವನ್ನು ತಮ್ಮ ಜೀವನವನ್ನು ನಿರ್ವಹಿಸಲು ಮಾಡುತ್ತಾರೆ ಅಂತ ನನಗೆ ಅನಿಸುವುದಿಲ್ಲ ಒಂದುವೇಳೆ ಅದು ಜೀವನವನ್ನೇ ಸಾಗಿಸಲು ಮಾಡುವುದಾಗಿದ್ದರೆ ಅವರು ಖಂಡಿತ ಈ ರೀತಿಯ ಕಾರ್ಯವನ್ನು ವಂಶ ಪಾರಂಪರಿಕವಾಗಿ ಮುಂದುವರೆಸುತ್ತಿರಲ್ಲಿಲ್ಲ.ಯಾವುದೋ ಒಂದು ಸಂದರ್ಭದಲ್ಲಿ ಅವರಿಗೆ ಜ್ಞಾನೋದಯವಾಗಿ ದಲಿತರ ಕರ್ತವ್ಯ ಇಡಿ ಸಮಾಜದ ಏಳಿಗೆಗಾಗಿ ದೇವರೇ ಅವರಿಗೆ ನೀಡಿದಂತಹ ಕಾಯಕ ಆದ್ದರಿಂದ ಈ ಶುಚಿಗೊಳಿಸುವ (ಮಲ ಹೊರುವ) ಕಾರ್ಯ ಆಂತರಿಕ ಆಧ್ಯಾತ್ಮಿಕದ ಕಾರ್ಯ (Internal Spiritual Activity) ದ ಭಾಗವಾಗಿ ಶತಮಾನಗಳಿಂದಲೂ ಉಳಿದಿರುವಂತದ್ದು ಅಲ್ಲದೆ ಅದು ಇಂದಿಗೂ ಕೂಡ ವಂಶ ಪಾರಂಪರಿಕವಾಗಿ ಮುಂದುವರಿದಿದೆ. ಇನ್ನು ಅವರ ಪೂರ್ವಜರಿಗೆ ಈ ಕೆಲಸವಿಲ್ಲದೆ ಬೇರೆ ಯಾವುದೇ ಆಯ್ಕೆ ಇಲ್ಲವೆನ್ನುವುದು ನಂಬರ್ಲಹ ಸಂಗತಿಯಾಗಿದೆ.”

(ಕರ್ಮಯೋಗ.ಪುಟ 48-49 ಗುಜರಾತ ಸರ್ಕಾರ 2007)

ಈ ಹೇಳಿಕೆ ಒಂದು ರೀತಿಯಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸಂವಿಧಾನದ ಪ್ರಸ್ತಾವನೆಯಲ್ಲಿ ಬರುವ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ,ಮತ್ತು ಸಾಮಾಜಿಕ ನ್ಯಾಯದ ಎಲ್ಲ ಆಶಯಗಳನ್ನು ತೂರಿ ಆ ಮೂಲಕ ಪುರೋಹಿ ತ ಪಾಳೆಗಾರಿಕೆಯ ಮೂಲ ಆಶಯವಾದ ಶ್ರೇಣೀಕೃತ ವ್ಯವಸ್ಥೆಯನ್ನು ಭಿನ್ನ ಮಾದರಿಯಲ್ಲಿ ಅನುಸರಿಸುವ ಪರ್ಯಾಯ ವಿಧಾನವನ್ನು ಗೌರವಾನ್ವಿತ ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಪ್ರಧಾನಮಂತ್ರಿಗಳು ತಿಳಿಸಿಕೊಟ್ಟಿದ್ದಾರೆ. ಅಲ್ಲದೆ ಈ ಸ್ವಚ್ಚ ಭಾರತದ ಅಭಿಯಾನ ಕಾರ್ಯಕ್ರಮ ಇಂದು ಮಹಾತ್ಮಾ ಗಾಂಧೀಜಿಯವರ ಕನ್ನಡಕದ ಮೂಲಕ ಸ್ವಚ್ಛತೆಯನ್ನು ಕಾಣ ಹೊರಟಿರುವ ಈ ಸರ್ಕಾರದ ವಿಧಾನದ ಬಗ್ಗೆ ಹಿರಿಯ ಪತ್ರಕರ್ತ ಸುಭಾಷ್ ಗಟದೆ ಹೀಗೆ ಬರಿಯುತ್ತಾರೆ.

“The launch of this top-down initiative had witnessed erasure /cleaning of totally different kind, when even the legacy of Mahatma Gandhi was reduced to cleanliness obliterating his life long struggle against colonialism and communalism of any kind and for on inclusive polity.It was very oblique way of appropriating his image by the Sang Parivaar,, who had never felt comfortable with his politics and wanted him as an icon albeit a sanitized form”

(Silencing Caste, Sanitising Oppression.-EPW October 31 2015 Volume, 44 page 29)

ಹೀಗೆ ಒಂದು ರೀತಿಯಲ್ಲಿ ಗಾಂಧೀಜಿಯ ತತ್ವ ಚಿಂತನೆಗಳನ್ನು ಕೇವಲ ಸ್ವಚ್ಛತಾ ಅಭಿಯಾನಕ್ಕೆ ಸೀಮಿತಗೊಳಿಸಿ ಆ ಮೂಲಕ ಪೋರಕೆಗೆ ಮತ್ತಷ್ಟು ಗ್ಲಾಮರ್ ರೂಪವನ್ನು ತುಂಬುವ ಈ ಯೋಜನೆ ಮೂಲ ಅರ್ಥದಲ್ಲಿ ಜಾತಿ ಪ್ರತಿಬಿಂಬಿತವಾದಂತಹ ಹಾಗೂ ಒಟ್ಟಿನಲ್ಲಿ ದಲಿತರಿಗೆ ಈ ಕೊಳಕು ತೊಳೆಯುವ ಹುದ್ದೆ ಈ ಸಮಾಜದಲ್ಲಿ ಖಾಯಂ ಎನ್ನುವಂತೆ ಭಾಸವಾಗುತ್ತಿದೆ.ಮತ್ತೆ ಇಂತಹ ಕಾರ್ಯಕ್ಕೆ ಹುರಿದುಂಬಿಸುವ ಆ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಹೊರಟಿರುವುದು ಪ್ರಧಾನಮಂತ್ರಿಗಳ ಒಟ್ಟು ಆಶಯವಾಗಿದೆ.

References

1) Subhash Gatade-Silencing Caste, Sanitising Oppression.-EPW October 3i, 2015, Volume, 44 page 29

2) Narendra Modi- Karmayog, 48-49 pages Government of Gujarat-2007

3) Union Budget of India 2017-18

4) Cleaning Human Waste-”Manual Scavenging” Caste and Discrimination in India-: Human Rights Watch 2014

5)Safai Karmachari Andolana & Ors V/s Union of India –Supreme Court Judgement 2014

~~~

Manjunath Naragund is a freelance writer from Gadag (Karnataka); He is interested  in the Rural, Tribal and Dalit issues. He has completed MA in Political Science from the University of Hyderabad in 2014-16.

 

Be the first to comment on "ಮೋದಿಯ ನಾಡಲ್ಲಿ ಸಫಾಯಿ ಕರ್ಮಕಾಂಡಗಳ ಜಾಡು ಹಿಡಿದು…."

Leave a comment

Your email address will not be published.


*