“ಒಂದು ಹಿಡಿ ಆತ್ಮಗೌರವಕ್ಕಾಗಿ” – ಕಲೇಕೂರಿ ಪ್ರಸಾದ್

ತೆಲುಗು ಕವಿ ಕಲೇಕೂರಿ ಪ್ರಸಾದ್(1962- 2013) ಅವರ ಜನ್ಮದಿನದ ನೆನಪಿನಲ್ಲಿ (ಅಕ್ಟೋಬರ್ ೨೫ ). ಕವಿ, ಚಿಂತಕ, ಅನುವಾದಕ, ಭಾಷಣಕಾರ ಆಗಿದ್ದ ಪ್ರಸಾದ್ ಆಂಧ್ರದ ದಲಿತ ಚಳುವಳಿ ಮತ್ತು ಸಾಹಿತ್ಯದ ಪ್ರಮುಖ ದನಿಯಾಗಿದ್ದರು. ಅವರ ಹುಟ್ಟುಹಬ್ಬದ ನೆಪದಲ್ಲಿ ಅವರ ಒಂದು ಪದ್ಯದ‌ ಕನ್ನಡ ಅನುವಾದ.

“ಒಂದು ಹಿಡಿ ಆತ್ಮಗೌರವಕ್ಕಾಗಿ”

ನಾನು ಯಾವಾಗ ಹುಟ್ಟಿದೆ ಎನ್ನುವುದು ಗೊತ್ತಿಲ್ಲವಾದರೂ
ಶತಮಾನದ ಹಿಂದೆ ಈ ನೆಲದಲ್ಲೇ ಕೊಲ್ಲಲ್ಪಟ್ಟೆ
‘ಪುನರಪಿ ಮರಣಂ ಪುನರಪಿ ಜನನಂ’
ಕರ್ಮಸಿದ್ಧಾಂತ ನನಗೆ ತಿಳಿದಿಲ್ಲವಾದರೂ
ಸತ್ತ ಜಾಗದಲ್ಲೇ ಮತ್ತೆ ಮತ್ತೆ ನಾನು
ಹುಟ್ಟುತ್ತಾ ಇದ್ದೇನೆ

ಈ ನಾಡಿನಲ್ಲಿ ಲೀನವಾಗಿರುವ
ಗಂಗಾ ಸಿಂಧೂ ನದಿಗಳ ಬಯಲು ನನ್ನೀ ದೇಹ
ನನ್ನ ಕಣ್ಣಗುಡ್ಡೆಗಳು ಕಣ್ಣೀರಾಗಿ ಹರಿದಾಗ
ಇಲ್ಲಿ ಜೀವನದಿ ಉಕ್ಕಿದವು
ನನ್ನ ಜೀವನಾಡಿಗಳಿಂದ ಜೀವಧಾತುಗಳು ಸ್ರವಿಸಿದಾಗ
ಈ ದೇಶ ಸಸ್ಯಶಾಮಲವಾಯಿತು

ನಾನು ತ್ರೇತಾಯುಗದಲ್ಲಿ ಶಂಭೂಕ
ಇಪ್ಪತ್ತೆರಡು ವರ್ಷಗಳ ಹಿಂದೆ ನನ್ನ ಹೆಸರು
ಕಂಚಿಕಚೆರ್ಲ ಕೋಟೇಶನೆಂದು
ಕಿಲವೆನ್ಮೇಣಿ, ಕಾರಂಚೇಡು, ನೀರುಕೊಂಡ ನನ್ನ ಹುಟ್ಟೂರು
ಮತ್ತೀಗ ಕೊಬ್ಬಿದ ಜಮೀನ್ದಾರರ ಕ್ರೌರ್ಯ
ನನ್ನೆದೆಯ ಮೇಲೆ ಹರಿತ ಭರ್ಜಿಗಳಿಂದ ತಿವಿದು
ಮೂಡಿಸಿದ ಹೆಸರೇ ಚುಂಡೂರು

ನಾನು ಜನ ಸಮೂಹಗಳ ಗಾಯ, ಗಾಯಗಳ ಸಮೂಹ
ಶತಶತಮಾನಗಳಿಂದ ಸ್ವತಂತ್ರ ದೇಶದಲ್ಲಿ ಪರಕೀಯ
ಅವಮಾನ, ಅತ್ಯಾಚಾರ, ಹಿಂಸೆಗೆ ಗುರಿಯಾದವನು
ಒಂದು ಹಿಡಿ ಆತ್ಮಗೌರವಕ್ಕಾಗಿ ತಲೆ ಎತ್ತಿರುವವನು
ಸಿರಿಯ ಗರ ಬಡಿದ ಈ ಜಾತ್ಯೋನ್ಮಾದ ನಾಡಿನಲ್ಲಿ
ಬದುಕುವುದೇ ಒಂದು ಹೋರಾಟವಾಗಿ
ಹೋರಾಟವನ್ನೇ ಬದುಕಾಗಿಸಿಕೊಂಡು
ಉಳಿದಿರುವವನು

ನನ್ನನ್ನು ಶೋಷಿತನೆಂದು ಕರೆಯಬೇಡಿ
ನಾನು ಅಮರ, ಅಜರಾಮರ!

ಲೋಕದ ಆಸ್ತಿ ಮಿಗಿಸಲು
ಬರಗಾಲವ ನುಂಗಿದ ವಿಷಕಂಠ ನಾನು
ಶೀರ್ಷಾಸನ ಹಾಕಿ ನಿಂತ ಸೂರ್ಯನ
ನೆಟ್ಟಗೆ ನಿಲ್ಲಿಸಲು ಅವನ
ನೆತ್ತಿಗೆ ಜಾಡಿಸಿ ಒದ್ದವನು
ಉರಿವ ಎದೆ ಕುಲುಮೆಯಲ್ಲಿ
ನಾದ ಹೊಮ್ಮಿಸುತ್ತಿರುವವನು

ನಿಮ್ಮ ದಯೆ ದಾಕ್ಷಿಣ್ಯದ ಮಾತುಗಳು ನನಗೆ ಬೇಡ
ಕನಿಕರ ಸಂತಾಪ ಕೂಡ
ಶೋಷಿತನಲ್ಲ ನಾನು ಸಲ್ಲುವೆನು ಶಾಶ್ವತಕೆ
ಗಾಳಿಯಲ್ಲಿ ಪಟಪಟಿಸುವ ಧಿಕ್ಕಾರ ಪತಾಕೆ

ನನಗಾಗಿ ಕಣ್ಣೀರ ಸುರಿಸಬೇಡಿ
ನಿಮ್ಮ ಕೈಲಾದರೆ ಈ ನಗರದ ನಡುಭಾಗದಲ್ಲೇ
ನನ್ನನ್ನ ಹೂತುಬಿಡಿ

ಈ ದೇಶದ ಮುಖಚಿತ್ರವನ್ನಾಗಿಸಿ
ಮುದ್ರಿಸಿ ನನ್ನ ಹೆಣವನ್ನು
ಚರಿತ್ರೆಯ ಪುಟಗಳಲ್ಲಿ ಉಜ್ವಲ ಭವಿಷ್ಯವಾಗಿ
ಹರಡಿಕೊಳ್ಳುವೆನು

ಆವಾಹಿಸಿಕೊಳ್ಳಿ ನಿಮ್ಮೆದೆಯೊಳಗೆ
ಸೆಣೆಸಾಡುವ ಉರಿಜ್ವಾಲೆಯಾಗಿ ಮತ್ತೆ ಮತ್ತೆ ನಾನು
ಈ ನಾಡಿನಲ್ಲಿ ಜ್ವಲಿಸುವೆನು

~ ಕಲೆಕೂರಿ ಪ್ರಸಾದ್

( 1991ರಲ್ಲಿ ಆಂಧ್ರದ ಗುಂಟೂರು ಜಿಲ್ಲೆಯಲ್ಲಿ 22 ಜನ ದಲಿತರ ಹತ್ಯಾಕಾಂಡ ನಡೆದಾಗ ಬರೆದಿದ್ದು)

*ಕಂಚಿಕಚೆರ್ಲ ಕೋಟೇಶ್- ಕಲೆಕೂರಿ ಪ್ರಸಾದ್ ಅವರ ಊರಿನಲ್ಲಿ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ಸಾರ್ವಜನಿಕವಾಗಿ ಭೀಕರವಾಗಿ ಹತ್ಯೆಯಾದ ದಲಿತ ಯುವಕ

* ಕಿಲವೆನ್ಮೇಣಿ, ಕಾರಂಚೇಡು, ನೀರುಕೊಂಡ ದಲಿತರ ಹತ್ಯಾಕಾಂಡ ನಡೆದ ಸ್ಥಳಗಳು

ಅನುವಾದ – ನರಸಿಂಹ ಮೂರ್ತಿ ವಿ ಎಲ್

Be the first to comment on "“ಒಂದು ಹಿಡಿ ಆತ್ಮಗೌರವಕ್ಕಾಗಿ” – ಕಲೇಕೂರಿ ಪ್ರಸಾದ್"

Leave a comment

Your email address will not be published.


*