ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2

ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – 2

ವಿಎಲ್ನರಸಿಂಹಮೂರ್ತಿ

ಜಯಂತ್ ಕಾಯ್ಕಿಣಿಯವರ ಗುರುಗಳಾದ ಯು.ಆರ್. ಅನಂತಮೂರ್ತಿಯವರು ತಮ್ಮ ಆತ್ಮಕತೆ ‘ಸುರಗಿ’ಯಲ್ಲಿ ತಮ್ಮ ಸೃಜನಶೀಲ ಬದುಕಿನ ಉಬ್ಬು ತಗ್ಗುಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಅನಂತಮೂರ್ತಿಯವರೆ ಹೇಳಿಕೊಂಡಿರುವ ಪ್ರಕಾರ ಅವರು ತಮ್ಮ ‘ಭಾರತೀಪುರ’ ಕಾದಂಬರಿಯನ್ನು ಬರೆದಿದ್ದು ಹೋಮಿಬಾಬಾ ಫೇಲೋಶಿಪ್ ಸಿಕ್ಕಿದ್ದಕ್ಕೆ. ಫೇಲೊಶಿಪ್ ಸಿಕ್ಕಾಗ ತಮ್ಮ ಗೆಳೆಯ ಕೆ.ವಿ.ಸುಬ್ಬಣ್ಣನವರ ಮನೆಯಲ್ಲಿದ್ದುಕೊಂಡು ಏಕಾಂತದಲ್ಲಿ ಕೂತು ಆರಾಮಾಗಿ ‘ಭಾರತೀಪುರ’ ಕಾದಂಬರಿಯನ್ನು ಬರೆದರು.

‘ಭವ’ ಬರೆದು ಮುಗಿಸಿದ್ದು ‘ಕೊಯಿರಾಲ ಫೇಲೋಶಿಪ್’ ಸಿಕ್ಕಾಗ, ನೇಪಾಳದ ಕಠ್ಮಂಡುವಿನಲ್ಲಿ.

ತಮ್ಮ‌ ಇನ್ನೊಂದು ಕಾದಂಬರಿ ‘ದಿವ್ಯ’ ಬರೆದಿದ್ದು ಲಂಡನ್ನಿನ ತಮ್ಮ ಮಗಳ ಮನೆಯಲ್ಲಿ.

ಹೋಮಿಬಾಬಾ ಫೇಲೋಶಿಪ್, ಕೊಯಿರಾಲ ಫೆಲೋಶಿಪ್‌ಗಳಿಂದ ಸಿಕ್ಕ ದುಡ್ಡು, ಸಾಗರದ ಹತ್ತಿರದ ಜಮಿನುದಾರ ಕೆ.ವಿ. ಸುಬ್ಬಣ್ಣನವರ ಮನೆ, ಕಠ್ಮಂಡು ಪ್ರವಾಸ, ಲಂಡನ್ನಿನ ಮಗಳ ಮನೆಗಳು ಅನಂತಮೂರ್ತಿಯವರಿಗೆ ಬರೆಯುವುದಕ್ಕೆ ಬೇಕಾದ space ಕೊಟ್ಟವು. ಕನ್ನಡದ ಎಷ್ಟು ಜನ ಸೃಜನಶೀಲ ಲೇಖಕರಿಗೆ ಈ ರೀತಿ ಪುಸ್ತಕ ಬರೆಯುವುದಕ್ಕೆ ಬೇಕಾದ ಹಣಕಾಸಿನ ನೆರವು ಮತ್ತು ಆಶ್ರಯ ಸಿಗುವ privilege ಸಿಕ್ಕಿದೆ?

ಕಾಯ್ಕಿಣಿಯವರ ಪ್ರಕಾರ ಮೊಬೈಲ್ ನೆಟ್‌ವರ್ಕ್ ಸಿಗದೆ ಇರುವುದು ಅಂದರೆ ಜನಸಂಪರ್ಕದಿಂದ ದೂರವಿದ್ದು ಏಕಾಂತದಲ್ಲಿ ಬರೆಯುವುದು. ಸರಿ ಏಕಾಂತ ಸಿಕ್ಕರೆ ಅದ್ಭುತವಾದ ಸಾಹಿತ್ಯ ಸೃಷ್ಟಿ ಮಾಡಬಹದು ಅಂದ ಮೇಲೆ ಪ್ರಸ್ತಾಪಿಸಿರುವ ಅಷ್ಟು ಅನುಕೂಲಗಳಿದ್ದು ಅನಂತಮೂರ್ತಿಯವರು ಬರೆದ ಕಾದಂಬರಿಗಳ ಸಾಹಿತ್ಯಿಕ ಮೌಲ್ಯ ಏನು?

ಈ ಕಾದಂಬರಿಗಳು ನಿಜವಾಗಿಯೂ ಒಳ್ಳೆಯ ಕಾದಂಬರಿಗಳೇ?

ಖಂಡಿತವಾಗಿಯೂ ಅಲ್ಲ. ಭಾರತೀಪುರ, ಭವ ಮತ್ತು ದಿವ್ಯ ಕನ್ನಡದ ಕೆಟ್ಟ ಕಾದಂಬರಿಗಳು. ಈ ಮೂರೂ ಕಾದಂಬರಿಗಳ ವಸ್ತು ‘ಯಾರು ಯಾರಿಗೆ ಹುಟ್ಟಿದರು’, ‘ಯಾರು ಯಾರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದರು’ಎನ್ನುವ ಹುಡುಕಾಟ. ಕಾದಂಬರಿಗಳುದ್ದಕ್ಕೂ ಇದರ ಬಗ್ಗೆ ಹುಡುಕಾಟ ಮಾಡಿ ಕೊನೆಗೆ ಏನೂ ಸಿಕ್ಕದೆ ಮುಗಿಯುತ್ತವೆ.

ಯಾರು ಯಾರಿಗೆ ಹುಟ್ಟಿದರು? ಯಾರು ಯಾರ ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎನ್ನುವ ಮನುಷ್ಯನ basic instinctಗೆ ಸಂಬಂಧಿಸಿದ ಪ್ರಶ್ನೆಗಳನ್ನು ಶೂದ್ರ ಲೇಖಕರಾದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’, ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’, ದೇವನೂರರ ‘ಕುಸುಮಬಾಲೆ’ ಕಾದಂಬರಿಗಳು ಅಡ್ರೆಸ್ ಮಾಡಿರುವ ವಿಧಾನಕ್ಕೂ ಅನಂತಮೂರ್ತಿಯವರ ಕಾದಂಬರಿಗಳಲ್ಲಿ ಅದೊಂದು complex ಆಗಿ ಆ ಕಾದಂಬರಿಗಳ ಬ್ರೇಮಿನ್ ಪಾತ್ರಗಳನ್ನು ಕಾಡುವುದಕ್ಕೂ ಇರುವ ವ್ಯತ್ಯಾಸ ಅರ್ಥಮಾಡಿಕೊಂಡರೆ ಬ್ರಾಹ್ಮಣ ಲೇಖಕರಿಗೆ ಕಾಮದ ಬಗ್ಗೆ ಇರುವ ವಿಚಿತ್ರ ಆಸಕ್ತಿ(sexual obsession) ಏನು ಅಂತ ಅರ್ಥ ಆಗುತ್ತದೆ.

ಅರ್ಥಪೂರ್ಣ ಸಾಹಿತ್ಯ ಸೃಷ್ಟಿಗೆ ಬೇಕಿರುವುದು ಒಳ್ಳೆಯ ಮನಸ್ಸು, ಗ್ರಹಿಕೆ, ಸಮಷ್ಟಿಯನ್ನು ಒಳಗೊಳ್ಳುವ ಗ್ರಹಿಕೆಯೇ ಹೊರತು ಜನರಿಂದ ದೂರ ಇರುವುದಲ್ಲ.

ನಮ್ಮ ವಚನಕಾರರು ತಮ್ಮ‌ತಮ್ಮ‌ ಕಾಯಕಗಳನ್ನು ಮಾಡಿಕೊಂಡೆ ಅದ್ಭುತವಾದ ಕಾವ್ಯ ಸೃಷ್ಟಿ ಮಾಡಿದರು, ಮಲೆ ಮಾದೇಶ್ವರ, ಮಂಟೇಸ್ವಾಮಿ ಕಥನಗಳಂತಹ ಮಹಾಕಾವ್ಯಗಳನ್ನು ಹಾಡುವವರು ಜನರ ಮಧ್ಯೆಯೇ ಹಾಡುತ್ತಾ ನೂರಾರು ವರ್ಷಗಳಿಂದ ಕಾವ್ಯವನ್ನು ಜನರ ಸ್ಮೃತಿಯ ಭಾಗವಾಗಿಸಿದ್ದಾರೆ.

ಜನಪದರು ತಮ್ಮ ಹಾಡು- ಕಾವ್ಯ ರಚಿಸಿದ್ದು ಜನರ ಮಧ್ಯೆ. ತಮ್ಮ ಹುಟ್ಟು, ಸಾವು ಮತ್ತು ದೈನಂದಿನ ದಂದುಗಗಳ ಭಾಗವಾಗಿ.

ಇವರಿಗೆ ಕಾವ್ಯ ತಮ್ಮ ಬದುಕಿನ ಒಂದು ಭಾಗವಾಗಿರುತ್ತದೆಯೋ ಹೊರತು ಏಕಾಂತಕ್ಕೆ ಬೇಕಾದ ಸರಕಲ್ಲ.

Out of network ಅನ್ನುವುದು ಇವತ್ತಿನ ಕಾಲದಲ್ಲಿ ಜನರಿಂದ ದೂರವಿರುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಬ್ರಾಹ್ಮಣರು ಯಾವತ್ತೂ ತಮ್ಮನ್ನ ಉಳಿದ ಸಮುದಾಯಗಳಿಂದ out of network ಆಗಿಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆ ಮಾಡಿ ತಾವೇ ಮತ್ತೆ ತಾವೆಷ್ಟು alienated ಅಂತ ಕತೆ, ಕಾದಂಬರಿ, ಕಾವ್ಯ ಕೂಡ ಬರೆದು ಗೋಳಾಡುತ್ತಾರೆ.

ಏನು ಜನ ಸಾರ್, ಈ ಬ್ರಾಹ್ಮಣ ಲೇಖಕರು ಏನ್ ಜನ ಸಾರ್ ?

(ನಾನು ಈ ಟಿಪ್ಪಣಿ ಬರೆದಿದ್ದು ಕಿಕ್ಕಿರಿದು ತುಂಬಿದ್ದ ಮೂವತ್ತು ನಿಮಿಷದ ಮೆಟ್ರೋ ಪ್ರಯಾಣದಲ್ಲೇ.)

ಟೆಕ್ನಾಲಜಿ ಮತ್ತು ಕನ್ನಡದ ಬ್ರಾಹ್ಮಣಿಕೆ: ಭಾಗ – ೧

ವಿಎಲ್ನರಸಿಂಹಮೂರ್ತಿ

ಚಿಂತಕರು , ನ್ಯಾಷನಲ್ ಕಾಲೇಜು ಅಧ್ಯಾಪಕರು.